ಬೆಂಬಲಿಗರು

ಶುಕ್ರವಾರ, ಮಾರ್ಚ್ 8, 2013

ಅರಣ್ಯೀಕರಣಕ್ಕೆ ಅಳಿಲ ಸೇವೆ :


ಏನಾದರು ಮಾಡುತಿರು ತಮ್ಮ; ಸುಮ್ಮನೆ ಕೂತು
ನೆಲಕೆ ಬರಿಭಾರವಾಗಬೇಡವೋ;ನೆಲದ
ಭಾರ ಕಳೆಯಲು ಹೀಗೆ ಮಾಡು ನೀ ಸರಿ, ಸಹಜ   
                        -   ಅಡಿಗ

ಅಂದಂದಿಗಾದನಿತು ಬುಡ ಕಟ್ಟಿ ಕಳೆ ತೆಗೆದು
ಚೆಂದಳಿರು ದಿನಮುಮೊಗೆಯೆ ನೀರೆರೆದು
ಸಂದ ಬಲದಿಂದ ಜಗzಶ್ವತ್ಥ ಸೇವೆಯಲಿ
ನಿಂದಿರುವುದೆ ಧರ್ಮ - ಮಂಕುತಿಮ್ಮ   
                          -ಡಿ.ವಿ.ಜಿ.


    ರೈಲ್ವೆ ಇಲಾಖೆಯಲ್ಲಿ ವೈದ್ಯಾಧಿಕಾರಿಯಾಗಿದ್ದ ನನಗೆ ಮೈಸೂರಿನಿಂದ ಸಕಲೇಶಪುರಕ್ಕೆ ವರ್ಗವಾಗಿತ್ತು.  ಮೈಸೂರಿನ ಮಿತ್ರರನ್ನು ಬಿಟ್ಟು ಒಂಟಿಯಾಗಿ ಮಲೆನಾಡ ಪಟ್ಟಣಕ್ಕೆ ಬಂದ ನನಗೆ ಮಿಶ್ರ ಅನುಭವ.  ರೈಲ್ವೆ ಕಾಲನಿ ನಿಲ್ದಾಣದ ಹಿಂದಿನ ಗುಡ್ಡದಲ್ಲಿ ನಿರ್ಮಿಸಲ್ಪಟ್ಟಿತ್ತು.  ಎತ್ತರದಲ್ಲಿದ್ದ ಆರೋಗ್ಯ ಕೇಂದ್ರದಿಂದ ನೋಡಿದರೆ ಹೇಮಾವತಿ ನದಿಯ ಬಳಕು ನಡೆ ನಯನ ಮನೋಹರ.  ಆದರೆ, ಎಷ್ಟು ಹೊತ್ತು ಪ್ರಕೃತಿಯನ್ನು ಆಸ್ವಾದಿಸಿಕೊಂಡು ಕೂರುವುದು?  ಆರೋಗ್ಯ ಕೇಂದ್ರದ ಕೆಲಸ ನನ್ನಂತಹ ತರುಣನಿಗೆ ಬಹಳ ಕಡಿಮೆಯೆನಿಸುತ್ತಿತ್ತು.  ಸಾರ್ವಜನಿಕ ವಾಚನಾಲಯದಿಂದ ಪುಸ್ತಕಗಳನ್ನು ತಂದು ಓದುವುದು, ಸಂಜೆ ವೇಳೆ ಒಂದೊಂದು ರಸ್ತೆ ಗುಂಟ ನಡೆದು ಸಮಯ ಕಳೆಯುತ್ತಿದ್ದೆ.
    ರೈಲ್ವೆ ನಿಲ್ದಾಣದಿಂದ ಪಟ್ಟಣಕ್ಕೆ ಹೋಗುವ ರಸ್ತೆ ಕಡಿದಾದ ಏರು ಮಾರ್ಗ.  ವಯಸ್ಸಾದವರಿಗೂ ಹೃದ್ರೋಗಿಗಳಿಗೂ ನಡೆದು ಹೋಗುವ ದಾರಿಯಲ್ಲ.  ಈ ಗುಡ್ಡದಲ್ಲಿಯೇ ರೈಲ್ವೆ ನೌಕರರ ವಸತಿ ಗೃಹಗಳನ್ನು ನಿರ್ಮಿಸಲಾಗಿತ್ತು.  ನಿರ್ಮಾಣ ಕಾಲದಲ್ಲಿ ಅಲ್ಲಿದ್ದ ಗಿಡಮರಗಳೆಲ್ಲಾ ಮಾಯವಾಗಿ ಪಾರ್ಥೇನಿಯಂ ಮತ್ತು ಇತರ ಕಳೆಗಿಡಗಳು ಹುಲುಸಾಗಿ ಬೆಳೆದಿದ್ದವು.  ಬೇಸಿಗೆಯಲ್ಲಿ ರೈಲ್ವೇ ನಿಲ್ದಾಣದಿಂದ ನಗರಕ್ಕೆ ನಡೆದು ಹೋಗುವವರಿಗೆ ಕಿಂಚಿತ್ ನೆರಳೂ ಇಲ್ಲ.  ವಿಷಪೂರಿತ ಹಾವುಗಳ ಕಾಟ ಬೇರೆ.
    1985 ಜುಲೈ ವನಮೋತ್ಸವ ಮಾಸ.  ನನಗೊಂದು ಯೋಚನೆ ಹೊಳೆಯಿತು.  ನಿಲ್ದಾಣದ ಸಂಪರ್ಕದಾರಿಗುÀಂಟ ನೆರಳು ಕೊಡುವ ಮರಗಳ ಸಸಿ ನೆಡುವುದು.  ರೈಲ್ವೇ ಇಲಾಖೆಯಲ್ಲಿಯೂ  ಅರಣ್ಯೀಕರಣ ಯೋಜನೆ ಇಂಜಿನಿಯರಿಂಗ್ ವಿಭಾಗದಲ್ಲಿ ಇತ್ತು.  ಆದರೆ ಅವರ ಚಟುವಟಿಕೆ ರೈಲ್ವೇ ಹಳಿಗಳ ಪಕ್ಕದಲ್ಲಿರುವ ಇಲಾಖೆಯ ಖಾಲಿ ಜಾಗದಲ್ಲಿ ನೀಲಗಿರಿ ತೋಪು ನೆಡುವುದು.  ಅದು ನಮಗೆ ಬೇಡ.
    ನಾನು ಸಕಲೇಶಪುರ ಅರಣ್ಯ ಇಲಾಖೆಯನ್ನು ವೈಯಕ್ತಿಕವಾಗಿ ಸಂಪರ್ಕಿಸಿ ಐವತ್ತು ಗಿಡಗಳಿಗೆ ಬೇಡಿಕೆಯಿಟ್ಟೆ.  ಅವರೋ ಯಾಂತ್ರಿಕವಾಗಿ ಅಷ್ಟೆಲ್ಲಾ ಒಬ್ಬರಿಗೇ ಕೊಡುವುದಕ್ಕೆ ಆಗದು, ಬೇಕಾದರೆ ಐದೋ ಹತ್ತೋ ತೆಗೆದುಕೊಳ್ಳಿ ಎನ್ನಬೇಕೇ?
    ಎದೆಗುಂದದೆ ದಕ್ಷಿಣ ಕನ್ನಡದ ನೆಟ್ಟಣದಲ್ಲಿರುವ ಅರಣ್ಯ ಇಲಾಖೆಯ ನರ್ಸರಿಯನ್ನು ಸಂಪರ್ಕಿಸಿದೆ.  ಅವರು ಉದಾರಿಗಳಾಗಿ ಬೇಕಾದಷ್ಟು ಸಸಿಗಳ ಪೂರೈಕೆ ಮಾಡಿದರು.  ಅವನ್ನೆಲ್ಲಾ ರೈಲಿನಲ್ಲಿ ಹಾಕಿ ಸಕಲೇಶಪುರಕ್ಕೆ ತಂದಾಯಿತು.
    ಆದರೆ, ಗಿಡಗಳನ್ನು ನೆಡುವುದಕ್ಕೆ ಮೊದಲು ಕಾಲನಿಯಲ್ಲಿದ್ದ ಕಳೆಗಿಡಗಳನ್ನು ತೆಗೆದು ನಾಶ ಮಾಡಬೇಕಲ್ಲಾ.  ಇದು ಇಲಾಖೆಯ ಕೆಲಸವಲ್ಲ.  ಒಂದು ವೇಳೆ ಆದರೂ ವೈದ್ಯಕೀಯ ವಿಭಾಗದವರು ಮಾಡುವ ಕಾರ್ಯ ಅಲ್ಲವೇ ಅಲ್ಲ.  ಅದಕ್ಕಾಗಿ ನಾನೇ ನಮ್ಮ ಆರೋಗ್ಯ ನಿರೀಕ್ಷರೊಡನೆ ಸೇರಿ ಶ್ರಮದಾನದಲ್ಲಿ ಪಾರ್ಥೇನಿಯಂ, ಲಂಟಾನ ಇತ್ಯಾದಿಗಳನ್ನು ಕಡಿಯುವ ಕಾರ್ಯ ಆರಂಭಿಸಿದೆ.  ಎಲ್ಲರಿಗೂ ಮೈಯಲ್ಲಿ ಸಹಿಸಲಾರದ ತುರಿಕೆ.
    ಕಾಲನಿಯಲ್ಲಿ ಅನಧಿಕೃತವಾಗಿ ವಾಸಿಸುತ್ತಿದ್ದ, ಮುಖ್ಯವಾಗಿ ಮಹಿಳೆಯರು ಈ ಗಿಡಕಂಟಿಗಳ ಮರೆಯನ್ನು ತಮ್ಮ ಬಹಿರ್ದೆಶೆಗೆ ಬಳಸಿಕೊಳ್ಳುತ್ತಿದ್ದುದರಿಂದ ಅವರಲ್ಲಿ ಅನೇಕರು ಬಂದು ನನ್ನಲ್ಲಿ ವಿರೋಧ ವ್ಯಕ್ತಪಡಿಸಿದರು.  ಅವರನ್ನು ಸಮಾಧಾನಪಡಿಸಿ, ಬದಲಿ ವ್ಯವಸ್ಥೆ ಮಾಡಿಕೊಡಲಾಯಿತು.  ನನ್ನ ಅಧಿಕಪ್ರಸಂಗಕ್ಕೆ ಅನೇಕರ ಟೀಕೆಗಳನ್ನು ಕೇಳಬೇಕಾಯಿತು.
    ಒಂದು ಭಾನುವಾರ ಮಚ್ಚು ಹಿಡದು ಕಳೆ ಕೊಯ್ಯುತ್ತಿದ್ದೆ.  ಶ್ಯೂ ಶ್ಯೂ ಎಂಬ ರೈಲ್ವೇ ಇಂಜಿನ್‍ನಿಂದ ಹೊರಡುವ ಹೊಗೆ ಶಬ್ದದಂತೆ ಪೊದೆಯಿಂದ ಸದ್ದಾಗಿ ಹಿಂದೆ ಸರಿದೆ.  ಪಕ್ಕದಲ್ಲಿದ್ದ ರೈಲ್ವೇ ಇಂಜಿನಿಯರ್ ಮನೆಯಲ್ಲಿ ಸಹಾಯಕ್ಕಿದ್ದ ಒಬ್ಬನನ್ನು ಕರೆದು ಅದೇನೆಂದು ನೋಡ ಹೇಳಿದೆ.  ಬಗ್ಗಿ ನೋಡಿದವನೇ ಭಯದಿಂದ ಹಿಂದೆ ನೆಗೆದ.  ಅದು ವಿಷಪೂರಿತ ಕೊಳಕು ಮಂಡಲ ಹಾವು.  ಶರೀರದಲ್ಲಿಯೂ ಆಜಾನುಬಾಹು.  ಅದನ್ನು ಹಲವರ ಸಹಾಯದಿಂದ ಮರ್ದಿಸಿ ದಹಿಸಲಾಯಿತು.  ಇಂತಹ ಹತ್ತು ಹನ್ನೊಂದು ಸರೀಸೃಪಗಳು ನಮ್ಮ ಯಜ್ಞಕ್ಕೆ ಬಲಿಯಾದವು.
    ಒಂದು ಒಳ್ಳೆಯ ದಿನ ಭಾನುವಾರ ನಮ್ಮ ವನಮಹೋತ್ಸವ ಕಾರ್ಯಕ್ರಮ ರೈಲ್ವೇ ಸ್ಟೇಶನ್ ರಸ್ತೆಯ ಇಬ್ಬದಿಯಲ್ಲಿ ಗಿಡ ನೆಡುವ ಮೂಲಕ ಆರಂಭಿಸಿದೆವು.  ರೈಲ್ವೆ ನಿಲ್ದಾಣಾಧಿಕಾರಿ ಸಮುದ್ರಯ್ಯ, ಆರೋಗ್ಯ ನಿರೀಕ್ಷಕ ಮುರುಗೇಶನ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.  ನಮ್ಮ ಸಿಬ್ಬಂದಿಯಲ್ಲಿ ಮಹಿಳೆಯರೇ ಅಧಿಕವಿದ್ದು, ನಿಮಯಗಳ ಪ್ರಕಾರ ನಮ್ಮ ವಿಭಾಗ[ವೈದ್ಯಕೀಯ]ದ ಕೆಲಸವಲ್ಲದಿದ್ದರೂ ಗಿಡಗಳಿಗೆ ಶ್ರದ್ಧೆಯಿಂದ ನೀರುಣಿಸಿದರು.  ನೀರನ್ನು ಕೊಡದಲ್ಲಿ ಹೊತ್ತು ಗುಡ್ಡ ಹತ್ತಿ ಹೊಯ್ಯುವುದು ಅಂತಹ ಸುಲಭದ ಮಾತೇನಲ್ಲ.  ನನ್ನ ಮೇಲಿನ ವಿಶ್ವಾಸದಿಂದ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾದ ಅವರನ್ನೆಲ್ಲ ನೆನೆದು ನನ್ನ ಹೃದಯ ಭಾರವಾಗುತ್ತಿದೆ.
    ಆ ಮೇಲೆ ನಾನು ವರ್ಗಾವಣೆಗೊಂಡು ಕೇರಳ, ತಮಿಳುನಾಡುಗಳಲ್ಲಿ ಕೆಲಸ ಮಾಡಿ, ಕೆಲಸಕ್ಕೆ ರಾಜೀನಾಮೆ ಕೊಟ್ಟು ಊರಿಗೆ ಬಂದು ಈಗ ಪುತ್ತೂರಿನಲ್ಲಿ ನೆಲಸಿದ್ದೇನೆ.  ಮೊನ್ನೆ ನನ್ನ ಪತ್ನಿ ಮತ್ತು ಮಗ ಹಗಲು ರೈಲಿನಲ್ಲಿ ಘಾಟಿ ಪ್ರದೇಶದ ಸೌಂದರ್ಯಾಸ್ವಾದನೆ ಪ್ರಯುಕ್ತ ಸಕಲೇಶಪುರಕ್ಕೆ ತೆರಳಿದ್ದಾಗ ನಾವು ನೆಟ್ಟ ಸಸಿಗಳು ಈಗ ಸದಾಕಾಲ ನೆರಳು ನೀಡುವ ಮರಗಳ ಫೋಟೋಗಳನ್ನು ಇಂದು ಕಾಣುತ್ತಿರುವಾಗ ಆದ ಸಂತೋಷವನ್ನು ನಿಮ್ಮಲ್ಲಿ ನಾನು ಹಂಚಿಕೊಳ್ಳುತ್ತಿದ್ದೇನೆ.

ಹಸಿರಿನಿಂದ ನಳನಳಿಸುತ್ತಿರುವ ರಸ್ತೆ ಬದಿಯಲ್ಲಿ ಇಂದು ಬೆಳೆದು ನಿಂತ ಮರಗಳು.





                                                                                                                                                                                          







* * *

4 ಕಾಮೆಂಟ್‌ಗಳು:

  1. Kudos to you on your good work....
    ಈ blogನ ಬೇರೆ posts ಕೂಡ ಓದಿದೆ. Interesting... ಶುಭ ಹಾರೈಕೆಗಳು.

    ಪ್ರತ್ಯುತ್ತರಅಳಿಸಿ
  2. parisara kaaLaji olleyadE. aadare, haavugaLa kollisiddu eshTu sari? manushyaru praaNigaLa vaasa sthaanavannu aakramisuvaaga avugaLige paryaaya vaasasthaanavannu kalpisikoDabEkallavE?

    -Veena Angri

    ಪ್ರತ್ಯುತ್ತರಅಳಿಸಿ
  3. ನಮಸ್ತೆ, ಮರಗಳನ್ನು ನೆಟ್ಟು ಬೆಳೆಸಿದ್ದು ಒಳ್ಳೆಯ ಕೆಲಸ. ಆದರೆ ಆಗ ಸರೀಸೃಪಗಳನ್ನು ಸಾಯಿಸಬಾರದಿತ್ತು. !

    ಪ್ರತ್ಯುತ್ತರಅಳಿಸಿ