ಬೆಂಬಲಿಗರು

ಶನಿವಾರ, ಫೆಬ್ರವರಿ 28, 2015

ರೋಗಿ ಮತ್ತು ನೆಂಟರನ್ನು ಸಂಭಾಳಿಸುವುದು

ವೈದ್ಯರನ್ನು ದೇವರೆಂದು ನಂಬುವ ಕಾಲ ಇತ್ತು.ಈಗ  ವೈದ್ಯರೂ  ಹಣಕ್ಕಾಗಿ  ಸೇವೆ ಒದಗಿಸುವ ವ್ಯಕ್ತಿ ಎಂಬ ಭಾವನೆ ಬಂದಿದೆ

ಇದಕ್ಕೆ ಕಾರಣ ಏನು ಎಂಬುದನ್ನು ಚರ್ಚಿಸಲು ನಾನು ಹೋಗುವುದಿಲ್ಲ .ಒಬ್ಬ ಜ್ವರದ ವ್ಯಕ್ತಿ  ಡಾಕ್ಟರ್ ನೋಡಿದ ಕೂಡಲೇ ತನಗೆ ಯಾವ ಜ್ವರ ಎಂದು ತಿಳಿಯ ಬಯಸುತ್ತಾನೆ .ಅದೂ ವಾಡಿಕೆಯಲ್ಲಿ ಇರುವ ಹಂದಿ ಜ್ವರ ,ಇಲಿ ಜ್ವರ , ಡೆಂಗು 

,ಟೈಫಾಯಿಡ್  ಇತ್ಯಾದಿ ಇಲ್ಲಾ ಎಂದು ನಮ್ಮ ಬಾಯಿಯಿಂದ ಹೇಳಿಸ ಬಯಸುತ್ತಾನೆ .ವೈದ್ಯ ಶಾಸ್ತ್ರ ಓದಿದವನಿಗೆ  ಯಾವುದೇಜ್ವರ ದ  ಕಾರಣ ನಿಖರವಾಗಿ ಹೇಳುವುದು ಎಷ್ಟು ಕಷ್ಟದ ಕೆಲಸ ಎಂದು ತಿಳಿದಿದೆ .ಪ್ರಚಲಿತ ವಿರುವ ಎಲ್ಲ ಜ್ವರಗಳ ಕಾರಣ

ತಿಳಿಸುವ ಪರೀಕ್ಷೆಗಳನ್ನು ನಡೆಸುವುದು ಆರ್ಥಿಕವಾಗಿ ರೋಗಿಗೆ ಭಾರವಾಗುವುದಲ್ಲದೆ ಅನವಶ್ಯಕ ವೂ  ಹೌದು .

ಇನ್ನು ಗಂಬೀರ ಕಾಯಿಲೆಗಳಾದ ಹೃದಯಾಘಾತ ,ಸ್ಟ್ರೋಕ್ ಇತ್ಯಾದಿ ಆದ ರೋಗಿಗಳ ಬಂಧುಗಳಲ್ಲಿ  ಅದನ್ನು ತಿಳಿಸಿದಾಗಬಹಳಷ್ಟು ಮಂದಿ ಸಂಭಂದಿಗಳು  ಅಷ್ಟೇ ಅಲ್ಲವಾ ಡಾಕ್ಟ್ರೆ ಬೇರೇನೂ ಇಲ್ಲವಲ್ಲ ಎನ್ನುತ್ತಾರೆ !ಆಗ ನಾನು ಬೇರೇನು ಬೇಕು

ಇದುವೇ ಸಾಕು ರೋಗಿಯ ಪ್ರಾಣ ತೆಗೆಯಲು ಎನ್ನುತ್ತೇನೆ .                                     ಇನ್ನು ಅಂತಹ ಸಂದರ್ಭದಲ್ಲಿ  ಚಿಂತಿಸಬೇಡಿ ಎಲ್ಲಾ ಸರಿ

ಹೋಗುವುದು ಎಂದು ಸಾಂತ್ವನ ಹೇಳಿದಿರೋ ಜೋಕೆ ! ರೋಗಿಗೆ ದುರದೃಷ್ಟವ್ಶಾತ್  ಏನಾದರು ಸಂಭವಿಸಿದರೆ  ನೀವೇಹೇಳಿದ್ರಲ್ಲ ಸರಿಹೋಗುತ್ತೆ ಎಂದು ಈಗ ಹೀಗೇಕೆ ಆಯಿತು ಎಂದು ಜಗಳ ಕಾಯಿವುವರು ಇದ್ದಾರೆ.


ಒಮ್ಮೆ ಹೃದಯಾಘಾತವಾದ ವ್ಯಕ್ತಿಯೋರ್ವರ  ಪತ್ನಿಗೆ ನಾನು ಚಿಂತಿಸ ಬೇಡಿ  ಎಲ್ಲಾ ಸರಿ ಹೋಗುವುದು ಎಂದುದಕ್ಕೆ

ಆಕೆ  ನನ್ನ ಗಂಡನಿಗೆ  ಹಾರ್ಟ್ ಅಟ್ಯಾಕ್ ಆದಾಗ ನಾನು ಚಿಂತೆ ಮಾಡದೆ ಮತ್ತಾರು ಮಾಡುವುದು ,ಏನು ಮಾತೂಂತ

ಹೇಳುತ್ತಿರ  ಎಂದು ನನ್ನ ಮೇಲೆ ಹರಿ ಹಾಯ್ದರು .

ವಿದೇಶದಲ್ಲಿ ಶಸ್ತ್ರ ಚಿಕಿತ್ಸೆಗಿಂತ ಮೊದಲು ವೈದ್ಯರು ಅದನ್ನು ಮಾಡುವ ವಿಧಾನ ಸಾಧಕ ಭಾಧಕ ಗಳನ್ನ ರೋಗಿಗೆ ವಿಶದ

ವಾಗಿ  ವಿವರಿಸಿ ಒಪ್ಪಿಗೆ ಸಹಿ ತೆಗೆದುಕೊಳ್ಳುವರು .ಅದಕ್ಕೆ ಇನ್ಫಾರ್ಮ್ದ್ ಕನ್ಸೆಂಟ್ ಎನ್ನುವರು .ನಮ್ಮಲ್ಲಿ ಶಸ್ತ್ರ ಚಿಕಿತ್ಸೆಯ ಚಿತ್ರಣ

ಪೂರ್ಣ ವಿವರಿಸಿದರೆ ಹೆದರಿ  ಓಡಿ ಹೋದಾರು .ಅಂತೆಯೇ ಗರ್ಭಿಣಿ ಸ್ತ್ರೀಯರಿಗೆ ಎಕ್ಲ೦ಪ್ಸಿಯ  ,ಎಂಬೋಲಿಸಂ  ,ಹೆರಿಗೆಯ ಸಮಯದಲ್ಲಿ ಬರಬಹುದಾಗ  ಸಮಸ್ಯೆಗಳನ್ನು ವಿವರಿಸಿ ಹೇಳುವುದೂ ಕಷ್ಟ

ಇತ್ತೀಚಿಗೆ ವಯಸ್ಸಾದ ರೋಗಿಗಳ ನ್ನು ನೋಡಲು ಮುಸುಂಬಿ ಆರೆಂಜ್ ತೆಗೆದು ಕೊಂದು ಅಸ್ಪತ್ರೆಗೆ ಬರುವ ನೆಂಟರ ಸಂಖ್ಯೆ

ಕಡಿಮೆ ಆಗಿದೆ .ಅಷ್ಟೇಕೆ  ಐ ಸಿ ಯು ನಲ್ಲಿ ವೃದ್ದರು ಅಡ್ಮಿಟ್ ಆದರೆ  ಡಾಕ್ಟರ್ ಹೊರಗೆ ಬರುವಾಗ ಹಿಂದೆ ಎಲ್ಲಾ ಕೊರಳುದ್ದಮಾಡಿ ಕಾಯುತ್ತಿದ್ದಂತೆ   ಇರುವ ನೆಂಟರು ಈಗ ನಾಪತ್ತೆ .ಎಷ್ಟೋ ವೇಳೆ ನಮ್ಮ ಎಲ್ಲ ಪ್ರಯತ್ನ ಗಳ ಹೊರತಾಗಿತೂ ರೋಗಿಬದುಕಿ ಉಳಿದರು ಎಂದು ಹೇಳಬೇಕಾಗುತ್ತದೆ .

ಇನ್ನು ಕೆಲವು ಪತ್ನಿಯರು ತಮ್ಮ ಗಂಡನಿಗೆ ಕುಡಿಯ ಬೇಡಿ ಎಂದು ಹೇಳಿರಿ ಡಾಕ್ಟ್ರೆ ,ನಾನು ಹೇಳಿದ್ದು ಎಂದು ಬೇಡ ,

ತಾಯಂದಿರು  ಮಕ್ಕಳಿಗೆ ಚಾಕಲೇಟ್ ತಿನ್ನಬೇಡಿ ಎಂದು ಹೇಳಿ ,ಟಿ ವಿ ನೋಡ ಬೇಡಿ ಎಂದು ಹೇಳಿ  ಎಂದು ನಮ್ಮ ಭುಜದಮೇಲಿಂದ ಶೂಟ್  ಮಾಡಲು ಯತ್ನಿಸುತ್ತಾರೆ.

ಈಗ ಮತ್ತೊಂದು ರೋಗ ಸುರುವಾಗಿದೆ .ಮೊಬೈಲ್ ಹಾವಳಿ .ಕ್ಲಿನಿಕ್ ನ  ಒಳಗೆ ಬಂದಾಗ ನಿಮಗೆ ಏನು ತೊಂದರೆ ಎಂದು

   ಕೇಳುವಷ್ಟರಲ್ಲಿ ಮೊಬೈಲ್ ರಿಂಗಿಸುತ್ತದೆ.ನಮ್ಮ ತ್ತ   ಕೈ  ಭಾಷೆ ಮಾಡಿ ನಿಮಿಷ ಗಟ್ಟಲೆ ಗಟ್ಟಿಯಾಗಿ  ಸಂಬಾಷಣೆ


ಮುಂದುವರಿಸ್ತ್ತಾರೆ .ಅವರ ಮಾತು ಮುಗಿದ ಮೇಲೆ ನಮ್ಮ ಪ್ರಶ್ನೆಗೆ ಉತ್ತರ .ಹಲವು ಬಾರಿ ದೂರದಲ್ಲಿರುವ  ಅವರ ಸಂಬಂದಿಮಿತ್ರರಿಗೆ  ಮೊಬೈಲ್ ನಲ್ಲಿ ಕನೆಕ್ಟ್ ಮಾಡಿ  ಮೊಬೈಲ್ ನ್ನು  ಕ್ರಿಕೆಟ್ ಆಟಗಾರರರು  ಪ್ಯಾಂಟಿನಲ್ಲಿ  ಉಜ್ಜುವಂತೆ ಉಜ್ಜಿ

ನೀವೊಮ್ಮೆ  ಇವರ  ಬಳಿ ನಮ್ಮ ಕಾಯಿಲೆ ಬಗ್ಗೆ ಹೇಳಿ ದಾಕ್ತ್ರೆ ಎಂದು ಆರ್ಡರ್ ಮಾಡುತ್ತಾರೆ .

ಅಂತೂ ರೋಗಿಯನ್ನು ಸಂಬಾಳಿಸಿದರೂ ಅವರ ನೆಂಟರನ್ನು ಸಂಬಾಳಿಸುವುದು ಕಷ್ಟ ಎಂಬಂತಾಗಿದೆ


ಅರಬಿ ನಾಡಿನಲ್ಲಿ ಮೊದಲ ದಿನ

ಮುಂಬೈ ನಿಂದ ರಿಯಾದ್ ಗೆ ತೆರಳುವ ಸೌದಿ ಏರ್ವೇಸ್ ವಿಮಾನ .ವಿಮಾನ ತುಂಬಾ ಲುಂಗಿ ಉಟ್ಟ ಕೂಲಿ ಕಾರ್ಮಿಕರು .ಮಲಯಾಳಿಗಳು ಮತ್ತು ಉತ್ತರ ಭಾರತದವರು .ವೈಭವೇತ ವಿಮಾನದಲ್ಲಿ ಇದು ಒಂದು ವಿಚಿತ್ರ ಸಂಯೋಗ ವಾಗಿ ಕಾಣುತ್ತಿತ್ತು.ಹೆಚ್ಚಿನವರು ಅನಕ್ಷರಸ್ಥರು.ಬಹಳ ಮಂದಿಯ ಫಾರಂ ನಾನೇ ತುಂಬಿಸಿ ಕೊಟ್ಟೆ .ವಿಮಾನದ ನಡಾವಳಿಕೆಗಳನ್ನ ಅಕ್ಕ ಪಕ್ಕದವರನ್ನು ನೋಡಿ ಮಾಡುತ್ತಿದ್ದರು .ವಿಮಾನ ತುಂಬಾ ನಿಟ್ಟುಸಿರು ಮತ್ತು ಕನಸುಗಳು ಹೆಪ್ಪುಗಟ್ಟಿದ ವಾತಾವರಣ .
ಮನೆ ಮತ್ತು ಮನೆಯವರನ್ನು ಬಿಟ್ಟು  ಅರಿಯದ ದೂರದ ನಾಡಿಗೆ ಹೋಗುವ ವ್ಯಾಕುಲ ವಾದರೆ ,ಅಲ್ಲಿ ಸಂಪಾದನೆ ಮಾಡಿ
ತಾವು ವೀಸಾ ಕ್ಕೆ ಮಾಡಿದ ಸಾಲ ತೀರಿಸಿ ,ಮಡದಿ ,ತಾಯಿ ತಂಗಿಯರಿಗೆ ಚಿನ್ನ ,ಒಂದು ಪುಟ್ಟ ಮನೆ ಯ ಕನಸು ,ಅಪರಿಚಿತ ಊರಿನ ಅವ್ಯಕ್ತ ಭಯ ಗಳು ಅಮೂರ್ತ ರೂಪದಲ್ಲಿ ಕಾಣಿಸುತ್ತಿದ್ದವು . ವಿಮಾನ ಮೇಲೆ ಹಾರುತ್ತಿದ್ದರೂ ಎಲ್ಲರೂ  ಅದೃಶ್ಯ ಹೊಕ್ಕುಳ ಬಳ್ಳಿಯಿಂದ  ಜನ್ಮ  ನಾಡಿಗೆ  ಬಂಧಿಸಲ್ಪಟ್ಟಿದ್ದರು .                                                                                            ರಮ್ಜಾನ್ ಮಾಸ ಆದುದರಿಂದ ಉಪವಾಸ ಮಾಡದವರಿಗೆ ಮಾತ್ರ ಆಹಾರ ಸರಬರಾಜು ಆಗುತ್ತಿತ್ತು .ರಿಯಾದ್ ವಿಮಾನ ನಿಲ್ದಾಣದಲ್ಲಿ ನಮ್ಮಂಥವರಿಗೆ ಬೇರೆ ಸಾಲು .ಅಮೇರಿಕಾ ಇಂಗ್ಲೆಂಡ್ ಇತ್ಯಾದಿಯವರಿಗೆ ಬೇರೆ ,ಗಲ್ಫ್ ನಾಡಿನವರಿಗೆ ಬೇರೆ ಸಾಲು .ಅಲ್ಲಿಯ ಪೊಲೀಸರು ನಯ ವಿನಯ ಶಿಷ್ಟಾಚಾರಗಳನ್ನು ನಮ್ಮಂತಹ ಹುಲು ಮಾನವರಿಗೆ ತೋರಿ  ಪೋಲು ಮಾಡುವುದು ಏಕೆ ಎಂಬ ಮನೋಭಾವದವರು .(ನಮ್ಮ ದೇಶದ ಸರಕಾರೀ ನೌಕರರು ಬಹಳ ಮಂದಿ ಇದಕ್ಕೆ ಹೊರತಲ್ಲ )
ಬಡ ಜೀವಿಗಳ ಚೀಲ ಗಳನ್ನು ಜಾಲಾಡಿ ನೋಡಿ ದಬಾಯಿಸುತ್ತಿದ್ದರು .ಏನು ಮಾಡುವುದು ?ದ್ರೌಪದಿಯ ವಸ್ತ್ರಾಪಹರಣ ನೋಡಿ ಹಲ್ಲು ಕಡಿಯುತ್ತಿದ್ದ ಪಾಂಡವರ ಪರಿಸ್ಥಿತಿ ಎಲ್ಲರದ್ದು .ನಾನು ಡಾಕ್ಟರ ಎಂದು ತಿಳಿದು ಅಲ್ಪ ಸ್ವಲ್ಪ ವಿನಾಯಿತಿ .

ಅಂತೂ ವಿಮಾನ ನಿಲ್ದಾಣ ದಲ್ಲಿ ಸ್ವಲ್ಪ ನಡೆದು ತಾಯಿಫ್ಫ್ ನಗರಕ್ಕೆ ಹೋಗುವ ವಿಮಾನಕ್ಕೆ ಹತ್ತಿದೆ .ಸಂಜೆ ಆರೂವರೆ ಗೆ ತಾಯಿಫ್ ನಗರದಲ್ಲಿ ಇಳಿಯಿತು .ತುಂತುರು ಮಳೆ ಟರ್ಮಕ್ ನಿಂದ ನಿಲ್ದಾಣ ಸೇರುವಾಗ ಒದ್ದೆ .ಹೊರಗೆ ಶೀತ ಗಾಳಿ .
ಮುಂಬೈಯಲ್ಲಿ ಏಜೆಂಟ್ ಹೇಳಿದ್ದ ,ನಿಲ್ದಾಣಕ್ಕೆ ಅರೋಗ್ಯ ಇಲಾಖೆಯವರು ಬಂದು ಸ್ವಾಗತಿಸುವರು ಎಂದು .ಹಾಗೇ ಅರ್ಧ ಗಂಟೆ ಯಾರಾದರೂ ಪ್ಲೇ ಕಾರ್ಡ್ ಹೊತ್ತು ಕಾಯುತ್ತಿದ್ದರೆಯೇ ಎಂದು ಕೊರಳುದ್ದ ಮಾಡಿ ನಿರೀಕ್ಷಿದೆ .ಸ್ವಲ್ಪ ಭಯವಾಯಿತು.ನನಗೆ ಭಾಷೆ ಬರುವುದಿಲ್ಲ .ಯಾರನ್ನು ಕೇಳುವುದು ?ರಂಜಾನ್ ಮಾಸ ಬೇರೆ ,ಎಲ್ಲರೂ ಉಪವಾಸ ಬಿಡುವ ತರಾತುರಿಯಲ್ಲಿ ಇದ್ದಾರೆ.ಕೊನೆಗೆ ಅಲ್ಲಿಯ ಟ್ರಾವೆಲ್ ಏಜೆಂಟ್ ಕೌಂಟರ್ ನಲ್ಲಿ ಮಲಯಾಳಂ ಭಾಷೆ ಕೇಳಿ ಬಂತು .ಕೂಡಲೇ ಅಲ್ಲಿ ಹೋಗಿ ನನ್ನ ಸಮಸ್ಯೆ ಹೇಳಿಕೊಂಡೆ .ಅವರು ನೀವು ಚಿಂತೆ ಮಾಡ ಬೇಡಿ ,ಅರೋಗ್ಯ ಇಲಾಖೆಯ ವಾಹನ ವಿಮಾನದಲ್ಲಿ ಬಂದಿಳಿದ ನರ್ಸ್ ನವರನ್ನು ಕೊಂಡು ಹೋಗಲು ಬರುತ್ತಿರುತ್ತದೆ .ಅವರನ್ನು ಕೇಳುವಾ ಎಂದನು .ಸ್ವಲ್ಪ ಹೊತ್ತಿನಲ್ಲಿ  ಆ ವಾಹನ ಬಂದು ಸಿಸ್ಟರ್ ಗಣ ಅದನ್ನು ಏರಿತು .ಹೆಚ್ಚಿನವರು ಮಲಯಾಳಿಗಳು .ಟ್ರಾವೆಲ್ ಏಜೆಂಟ್ ಅದರ ಡ್ರೈವರ್ ಅರಬ್ಬಿಯಲ್ಲಿ ನನ್ನನ್ನು ತೋರಿಸಿ ಅರೇಬಿಕ್ ಭಾಷೆಯಲ್ಲಿ ಏನೋ ಹೇಳಿದ .ಡ್ರೈವರ್ ಲಾ ಲಾ (ಇಲ್ಲಾ ಇಲ್ಲ ) ಎಂದು ನಿರಾಕರಿಸಿದ .ಅವನ ಕೆಲಸ ಸಿಸ್ಟರ್ ಗಳನ್ನು ಕೊಂಡೊಯ್ಯುವುದು ,ನನ್ನ ಬಗ್ಗೆ ಗೊತ್ತಿಲ್ಲ ಎಂದ .ನಮ್ಮ ಮಲಯಾಳಿ ಮಿತ್ರ ಬಿಡದೆ ವ್ಯಾನ್ ನ ಒಳಗೆ ನನ್ನನ್ನೂನನ್ನ ಬ್ಯಾಗೇಜ್ ನನ್ನು ತೂರಿ ಸಿಸ್ಟರ್ ಗಳ ಬಳಿ ಮಲಯಾಳಂ ನಲ್ಲಿ  ನನ್ನ ಬಗ್ಗೆ ಹೇಳಿದ . ಅಂತೂ ಡ್ರೈವರ್ ಅಸಹನೆಯಿಂದ ವಾಹನ ಚಾಲನೆ ಮಾಡಿದ .ಒಳಗಿದ್ದ ಸಿಸ್ಟರ್ ಗಣ (ಅವರೆಲ್ಲ್ಲ ಅನುಭವಿಗಳು ,ರಜೆ ಮುಗಿಸಿ ಮರಳುತ್ತಿದ್ದವರು )ನನ್ನನ್ನು ಬಲಿ ಕಂಬಕ್ಕೆ ಒಯ್ಯಲ್ಪಡುತ್ತಿರುವ ಕೈದಿಯನ್ನು ನೋಡುವಂತೆ ಕನಿಕರದಿಂದ ನೋಡುತ್ತಿದ್ದರು .ಒಬ್ಬಳು ಬಾಯಿ ಬಿಟ್ಟು ಕೇಳಿದಳು ಊರಿನಲ್ಲಿರುವ ಪ್ರಾಕ್ಟೀಸ್ ಬಿಟ್ಟು ಈ ನರಕಕ್ಕೆ ಏಕೆ ಬಂದಿರಿ ?ಮತ್ತೊಬ್ಬಳು ,ಸುಮ್ಮನಿರೆ, ಪಾಪ ಹೊಸದಾಗಿ ಬರುತ್ತಿದ್ದಾರೆ .ಹೆದರಿಸ ಬೇಡ ಎಂದು ಗದರಿ ನನಗೆ ಸಮಾಧಾನ ಮಾಡಿದಳು .
ಅಸ್ಟರಲ್ಲಿ ಮಾಲಿಕ್ ಫೈಸಲ್ ಆಸ್ಪತ್ರೆ ಬಂತು .ಸಿಸ್ಟರ್ ನವರು ನನ್ನನ್ನು ಅಲ್ಲಿ ಇಳಿಸುವಂತೆ  ಡ್ರೈವರ್ ಗೆ ಹೇಳಿದರು .ಈ ಆಸ್ಪತ್ರೆಯಲ್ಲಿ ಯಾರಾದರೂ ನಮ್ಮ ದೇಶದ ಡಾಕ್ಟರ ಸಿಗ ಬಹುದು .ಅವರು ನಿಮ್ಮ ಸಹಾಯಕ್ಕೆ ಬಂದಾರು ಎಂದು ಗುಡ್ ಬೈ ಹೇಳಿದರು .ಮನಸಾರೆ ಆ ದೇವತೆಗಳಿಗೆ ವಂದಿಸಿ ಆಸ್ಪತ್ರೆಯ ಕ್ಯಾಶು ವಾಲಿಟಿ ಬಳಿ ಹೋದೆ.ಮಯ್ಯಿ ಒದ್ದೆ ,ಹೊಟ್ಟೆ ಚುರು ಚುರು ಹೇಳುತ್ತಿತ್ತು .ಪಾಕಿಸ್ತಾನಿ ಡಾಕ್ಟರ್ ಒಬ್ಬರು ನನ್ನನ್ನು ಕಂಡು ಮಾತನಾಡಿಸಿ ಅವರಿಗೆ ಬಂದ ಊಟ ಮತ್ತು ಪಾನೀಯ ನನಗೆ ಸ್ವಲ್ಪ ಕೊಟ್ಟರು .ರಾತ್ರಿಗೆ ಅಲ್ಲೇ ಪಕ್ಕದಲ್ಲಿ ಒಂದು ಹೋಟೆಲ್ ಇದೆಯೆಂದೂ  ,ಅಲ್ಲಿ ವಿಶ್ರಮಿಸಿ ಬೆಳಿಗ್ಗೆ  ಅರೋಗ್ಯ ಇಲಾಖೆಯ ಕಚೇರಿ (ಮುದಿರಿಯಾ)ಕ್ಕೆ ತೆರಳ ಬಹುದು ಎಂದು ಸಲಹೆ ಮಾಡಿದರು .ಅಸ್ಟರಲ್ಲಿ ಆಂಧ್ರ ಪ್ರದೇಶ ದ ಒಬ್ಬರು ತರುಣ ವೈದ್ಯ ನಿಮಗೆ ಅಡ್ಡಿಯಿಲ್ಲ ದಿದ್ದರೆ ನನ್ನ ಮನೆಗೆ ಬಂದು ವಿಶ್ರಮಿಸಿ ಎಂದು ನನ್ನನ್ನು ಅಲ್ಪ ದೂರದಲ್ಲಿ ಇದ್ದ ಅವರ ನಿವಾಸಕ್ಕೆ ಕೊಂಡೊಯ್ದರು .ಮುಸ್ಲಿಂ ಆದ ಅವರು ಈಗ ಉಪವಾಸ ಆದುದರಿಂದ ತಾನು ಬೆಳಕು ಹರಿಯುವ ಮೊದಲೇ ಊಟ ಮಾಡುವೆನೆಂದು ,ನೀವು ಸಾವಕಾಶ ಎದ್ದು ಇಲ್ಲಿ ಇತ್ತ ಆಹಾರ ದಲ್ಲಿ ಬೇಕಿದ್ದು ತಿನ್ನಿರಿ ಎಂದರು .ಎಂತಹ ಒಳ್ಳೆಯ ಮನಸ್ಸು .ಇವರಿಗೆ  ನಾನು ಚಿರ ಋಣಿ .

ಅರಬರ ರಾಣಿ

ಸೌದಿ ಅರೇಬಿಯಾ ದಲ್ಲಿ  ಅಲ್ಲಿನ ಜನರನ್ನು ಸರಕಾರ ಸಾಕುವುದು .ಪೆಟ್ರೋಲಿಯಂ ಹಣ ಬಂದ ಮೇಲೆ ಶ್ರಮ ಜೀವನ  ಬಿಟ್ಟು ಸುಖ ಜೀವನ. ಅವರಿಗೆ  ಮನೋರಂಜನೆ ಎಂದರೆ  ಮದುವೆ ಆಗುವುದು ಮತ್ತು ಮಕ್ಕಳನ್ನು ಮಾಡುವುದು .ಸಿನಿಮಾ ,ಸಂಗೀತ,ಸ್ನೇಹ ಕೂಟಗಳಿಗೆ  ಅಲ್ಲಿ ಅವಕಾಶ ಇಲ್ಲ .ಆಫ್ಘಾನರು ರೋಟಿ (ಕುಬೂ್ಸ್) ಮಾಡಿ ಕೊಡುವರು , ಅಮೇರಿಕಾ ಕುಡಿಯಲು  ಪೆಪ್ಸಿ ಕೊಡುವುದು   .ಇದರಿಂದ ಸಕ್ಕರೆ ಕಾಯಿಲೆ ಹೃದಯ ಕಾಯಿಲೆ ಮತ್ತು ಉದರ್ ಶೂಲೆ ಸಾಮಾನ್ಯ .ಇದು ೨೦೦೪ ರ ವಿಚಾರ . ಸರಕಾರೀ
ಆಸ್ಪತ್ರೆ ಗಳಲ್ಲಿ  ಅಸಿಡಿಟಿ ಗೆ  ( Cimetidine H2 blocker) ಸಿಮೆಟಿಡಿನ್ ಮತ್ತ್ತು ರಾಣಿ ಟಿಡಿನ್ ಕೊಡುತ್ತಿದ್ದರು . ಸಿಮೆಟಿಡಿನ್  ಸರಬರಾಜು ಹೆಚ್ಚು ಇದ್ದುದರಿದ ಹೊಟ್ಟೆ ನೋವು ಇದ್ದವರಿಗೆ  ಅದನ್ನೇ ಬರೆಯುತ್ತಿದ್ದೆವು .ಈ ಔಷಧಿಗೆ  ಗಂಡು ಹಾರ್ಮೋನ್ ಪ್ರಭಾವ ತಗ್ಗಿಸುವ ಗುಣವಿದೆ. ಹೆಚ್ಚಿನ ಅರಬರು ಈ ಮಾತ್ರೆ ತಿಂದ ಮರುದಿನವೇ ಓಡಿ ಬಂದು ನಮಗೆ ಈ ಮಾತ್ರೆ ಬೇಡ ನಮಗೆ  ರಾಣಿ ಯನ್ನೇ ಕೊಡಿ ಎನ್ನುತ್ತಿದ್ದರು . ರಾಣಿ ಟಿಡಿನ್ ಗೆ ಅವರು ರಾಣಿ ಎಂದು ಕರೆಯುತ್ತಿದ್ದರು .ಅದಾ ಸಿಮೆತಿದೀನ್ ಮಾಫಿ ಕೊಯಿಸ್ ,ಲಾಜಿಮ್ ಇಬ್ಗಾ  ಹಬುಬ್ ರಾಣಿ   ದಕ್ತುರ್ ಎಂದು ಅಂಗಲಾಚುತ್ತಿದ್ದರು . ಯಾಕೆ ಎಂದು ಕೇಳಿದರೆ  ಗುದ್ ಗುದ್ ಮಾಫಿ ಎನ್ನ್ನುತ್ತಿದ್ದರು .ನಾನು ಸಿಸ್ಟರ್ ನ್ನು  ಈ ಗುದ್ ಗುದ್ ಏನಮ್ಮ ಎಂದು ಕೇಳಿದೆ .ಅದಕ್ಕೆ ಆಕೆ ಮುಸುನಗುತ್ತಾ   ಅದು  ಲೈಂಗಿಕ ದೌರ್ಬಲ್ಯ (ಲೋಸ್ ಆಫ್ ಲಿಬಿಡೋ).ಎಂದರು.  ನಾನು ಅಂದು ಕೊಂಡೆ ಸೌದಿಯ ಮಹಾರಾಜ ಬೇಕೆಂದೇ  ಪ್ರಜೆಗಳಿಗೆ ಈ ಔಷಧಿ  ನೀಡುತ್ತಿದ್ದಾನೆ .ಅದಲ್ಲದೆ  ಈ ಸಿಮೆಟಿಡಿನ್  ಮಾತ್ರೆಯ ಗುಣ ಪರೀಕ್ಷೆಗೆ ಅರಬರಿಗೆ ತಿನಿಸಿ ನೋಡಿದರೆ ಸಾಕು .
  ಅಲ್ಲದಿದ್ದರೂ ಅಲ್ಲಿಯವರಿಗೆ ಸ್ವಲ್ಪ ಗುದ್ ಗುದ್ ಜಾಸ್ತಿ ಅನ್ನಿ. ಒಬ್ಬ ಅರಬಣ್ಣ  ವಿಮಾನ ನಿಲ್ದಾಣ ದಲ್ಲಿ  ಉದ್ಯೋಗಿ. ಅವನ ಹೆಂಡತಿ ನಮ್ಮಲ್ಲಿ  ಹೆರಿಗೆಗಾಗಿ ದಾಖಲಾಗಿದ್ದರು .ಇಲ್ಲಿ  ಆಕೆ ಪ್ರಸವ ವೇದನೆ ಅನುಭವಿಸುತ್ತಿದ್ದರೆ ಆ ಕಡೆ ಆತ ಇನ್ನೊಂದು ಮದು ವೆ  ತಯಾರಿಯಲ್ಲಿ ಇದ್ದ .ನಾನು ಆರಂಭದಲ್ಲಿ ಹೋದಾಗ ಡಾಕ್ಟ್ರೆ ಹೇಗಿದ್ದೀರಿ ,ನಿಮಗೆ ಎಷ್ಟು ಹೆಂಡತಿಯರು ಎಂದು ವಿಚಾರಿಸುವುದು ಸಾಮಾನ್ಯವಾಗಿತ್ತು .ಕಂ ಹೂರ್ಮ (ಎಷ್ಟು ಪತ್ನಿಯರು).ನಾನು ಒಬ್ಬಳೇ ಎಂದರೆ ಹುಬ್ಬೆರಿಸುತ್ತಿದ್ದರು .
   ಈ ವಿಷಯ ಬರೆಯುವಾಗ  ಇನ್ನೊಂದು ನೆನಪು ಬರುತ್ತದೆ.ನನ್ನ ಪಿ  ಜಿ . ಪ್ರಾಕ್ಟಿಕಲ ಪರೀಕ್ಷೆ  ಹೈದರಾಬಾದ್ ನ ಓಸ್ಮಾನಿಯಾ ಆಸ್ಪತ್ರೆ ಯಲ್ಲಿ .ನಾನೂ ನನ್ನ ಮಿತ್ರ ಡಾ ಸಂದೀಪ್ (ಈಗ ಮಂಗಳೂರಿನ ಪ್ರಸಿದ್ದ ಗ್ಯಾಸ್ಟ್ರೊ ಎಂಟೆರಲಾಜಿಸ್ಟ್ ) ಮದ್ರಾಸಿನಿಂದ ಪರೀಕ್ಷಾರ್ಥಿ ಗಳಾಗಿ ಹೋಗಿದ್ದೆವು .ಖ್ಯಾತ ಪ್ರೊಫ್ ಬಿ ಕೆ ಸಹಾಯ  ಮುಖ್ಯ ಪರೀಕ್ಷಕರು .ಅವರು ಎಷ್ಟು ಒಳ್ಳೆಯವರೆಂದರೆ ನಮಗೆ ಕೂಲೆಜಿನ ಗೆಸ್ಟ್ ಹೌಸ್ ನಲ್ಲಿ ವಸತಿ ಕೂಡ ಏರ್ಪಡಿಸಿದ್ದರು .ಮುನ್ನಾ ದಿನ ರಾತ್ರಿ ವಿದ್ಯುತ್ ವೈಫಲ್ಯ .ಸೊಳ್ಳೆ ಕಡಿತದಿಂದ ನಿದ್ದೆಯೇ ಇಲ್ಲ .ಸೆಖೆ ಬೇರೆ .ಪರೀಕ್ಷೆಯಲ್ಲಿ ನನಗೆ ಮುಖ್ಯ ಕೇಸ್ ಆಗಿ ಓರ್ವ ಮುಸ್ಲಿಂ ಮಹಿಳೆ .ಹಿಂದಿ ಗೊತ್ತಿದ್ದುದರಿಂದ ಬಚಾವ್ .
ಕ್ಯಾ ತಕ್ಲೀಫ್ (ಏನು ತೊಂದ್ರೆ )ಎಂದು ಕೇಳಿದ್ದೆ ತಡ ಗೊಳೋ ಎಂದು ಅಳತೊಡಗಿದಳು .ಏನು ಹೇಳಲಿ ಸಾಹೇಬರೇ ನನ್ನ ಗಂಡನಿಗೆ ನಾನು ಬೇಡವಾಗಿದ್ದೇನೆ .ದೇವರಿಗೂ ಬೇಡ .ನನಗೆ ಅಸೌಖ್ಯ ಅದ  ಮೇಲೆ ಪತಿ ನನ್ನನ್ನು ಮನೆಯಿಂದ ಹೊರ ಹಾಕಿ ಎರಡನೇ  ಬೀ ಬಿ ಯೊಡನೆ ಇರುತ್ತಾರೆ .ನನ್ನನ್ನು ಕೇಳುವವರು ಅಲ್ಲಾ ಮಾತ್ರ .ಅವಳನ್ನು ಸಮಾಧಾನ ಮಾಡಿ ಪರೀಕ್ಷೆ ತೊಡಗಲು ಹರ ಸಾಹಸ ಮಾಡ ಬೇಕಾಯಿತು. ಪಕ್ಕದಲ್ಲಿ ಸಂದೀಪ್ ಗೆ ಡಯಾಬಿಟಿಕ್ ನುರೋಪತಿ ಕೇಸ್ ,ರೋಗಿ ತೆಲುಗು ಮಾತನಾಡುವ ಗಂಡಸು.ಅವರಿಗೆ  ಒಬ್ಬ ಭಾಷಾಂತರ ಸಹಾಯಕ್ಕೆ ಸಣ್ಣ ಪ್ರಾಯದ ನರ್ಸ್ .ಸಂದೀಪ್ ಹಿಸ್ಟರಿ ತೆಗೆದು ಕೊಳ್ಳುವಾಗ ರೋಗಿಗೆ ಲೈಂಗಿಕ ದೌರ್ಬಲ್ಯ ಇದೆಯೇ ಎಂದು ಕೇಳಬೇಕಿತ್ತು .ತಾನೆ ತಮಿಳ್ ಕನ್ನಡ ಮಿಶ್ರಿತ ಭಾಷೆಯಲ್ಲಿ ಕೇಳಿದ ರೋಗಿಗೆ ಅರ್ಥ ಆಗಲಿಲ್ಲ .ಆಮೇಲೆ ಸಿಸ್ಟರ್ ಗೆ  does he have impotence ಎಂದು ಕೇಳಿ ಎಂದ .ಅಕೆಗೆ ಅರ್ಥ ಆಗಲಿಲ್ಲ .ಕೈಕರಣೆ ಮಾಡಿ ತೋರಿಸಿದ .ಸುಮಾರು ಹತ್ತು ನಿಮಿಷ ಈ ನೋಟ ಸಾಗಿತ್ತು .ಪಕ್ಕದ ಬೆಡ್ ನಲ್ಲಿ ರೋಗಿಯನ್ನು ಪರಿಕ್ಷಿಸುತ್ತಿದ್ದ ನಾನು ಸಂದೀಪ್ ಗೆ ಬಿಟ್ಟು ಬಿಡಿ ಎಂದು ಸಂಜ್ಞೆ ಮಾಡಿದೆ .ಇಬ್ಬರೂ ಪಾಸು ಆದೆವೆನ್ನಿ .
ಇದೇ ಸಂದೀಪ್ ಮದ್ರಾಸ್ನಲ್ಲಿ ಬಂದ ಹೊಸದು.ಒಬ್ಬ ರೋಗಿ ಮೆಡಿಕಲ್ ಓ ಪಿ ಯಲ್ಲಿ ಕಾಲು ನೋವಿಗೆಂದು ಬಂದವನನ್ನು ಪರೀಕ್ಷೆ ಮಾಡಿ ಇದು ಎಲುಬಿನ ಸಮಸ್ಯೆ ನೀ ಪೋಯಿ ಮೂಳೆ ಡಾಕ್ಟರ ಪಾರ್ ಎಂದರು .ರೋಗಿಗೆ ಆಶ್ಚರ್ಯ .ನನಗೆ ಕಾಲು ನೋವು .ಈ ಡಾಕ್ಟರ ಮೆದುಳು ಡಾಕ್ಟರ ನೋಡಲು ಹೇಳುತ್ತಿದ್ದಾರೆ ಏಕೆ?ತಮಿಳಿನಲ್ಲಿ ಮೂಳೆ ಎಂದರೆ ಮೆದುಳು .


ಗುರುವಾರ, ಫೆಬ್ರವರಿ 26, 2015

ಎಚ್ ೧ ಏನ್ ೧ ಜಾತಕ

                                       


ವೈರಸ್ ಗಳಲ್ಲಿ  ಎರಡು ಜಾತಿ .ಡಿಎನ್ಎ ವೈರಸ್  ಮತ್ತು   ಅರ ಏನ್ ಎ ವೈರಸ್ . ಎರಡನೇ ವರ್ಗದಲ್ಲಿ  ಅರ್ತ್ಹೋ  ಮಿಕ್ಷೊ  ವೈರಸ್ ಎಂಬ ಗುಂಪು .ಈ ಗುಂಪಿನಲ್ಲಿ  ಆರು   ಒಳ ಪಂಗಡ ಗಳು ಇನ್ಫ್ಲುಯೆಂಜಾ ಎ ಬಿ ಸಿ ಮೊದಲ ಮೂರು . ಹೆಸರೇ  ಹೇಳುವಂತೆ  ಫ್ಲೂ ಉಂಟು ಮಾಡುವ ವೈರಸ್ ಗಳು .

ಈಗ  ತಾಂಡವ  ಆಡುತ್ತಿರುವ  ಏಚ೧ ಎನ೧  ಇನ್ಫ್ಲುಯೆಂಜಾ ಎ ಗುಂಪಿಗೆ ಸೇರಿದ  ರೋಗಾಣು . ಎಚ್ ಎಂದರೆ  ಹೆಮಗ್ಲುಟಿನಿನ್(Haemaglutinin)  -ಎಂದರೆ ಕೆಂಪು ರಕ್ತ ಕಣಗಳನ್ನು  ಒಟ್ಟು ಸೇರಿಸಬಲ್ಲ ವಸ್ತು , ಏನ್ ಎಂದರೆ ನ್ಯುರಮಿಡೆಸ್(Nuramidase)  ಜೀವ ಕೋಶಗಳನ್ನು ಛೇದಿಸಬಲ್ಲ  ಎನ್ ಝಯಿಂ .  ಇವೆರಡು  ಈ ರೋಗಾಣು ವಿನ  ಪ್ರಮುಖ ಅಸ್ತ್ರಗಳು . ಈ ಅಸ್ತ್ರಗಳಲ್ಲಿ

ಆಗಾಗ ವಿನ್ಯಾಸ ಬದಲಾಗುತ್ತ ಇರುತ್ತವೆ .ಇದರಿಂದ ಲೇ  H1N1 ,H1N2,H5N1 ಇತ್ಯಾದಿ .

ಈ ವೈರಸ್ ಹಂದಿಗಳಲ್ಲಿ ಸ್ವಾಶಕೋಶದ ಕಾಯಿಲೆ ಉಂಟು ಮಾಡುವುದು .ಕೆಲವೊಮ್ಮೆ ಮನುಷ್ಯನು ಸಿಕ್ಕಿ ಕೊಳ್ಳುವನು ಇದನ್ನು ಹಂದಿ ಜ್ವರ ಎಂದು ಕರೆಯುವರು. ಈ ವೈರಸ್ ನ  ಬೇರೆ  ಪ್ರಭೇದಗಳು  ಹಕ್ಕಿ ಜ್ವರ ,ನಾಯಿ ಜ್ವರ ಮತ್ತು ಕುದುರೆ ಜ್ವರ ಗಳು .ಈ ಹೆಸರುಗಳು  ಪ್ರಾಥಮಿಕ ವಾಗಿ  ಈ ರೋಗಾಣುಗಳು  ಆಕ್ರಮಿಸುವ ಜೀವಿಗಳ ಹೆಸರುಗಳು .ನಡುವೆ  ಆಗಾಗ ನರರನ್ನೂ ಕಾಡುವುವು .

೨೦೦೯ ರಲ್ಲಿ ಈ ಜ್ವರವನ್ನು ಖಂಡಾಂತರ (Pandemic) ಘೋಷಿಸಲಾಯಿತು .
ಈ ಫ್ಲೂ ಜ್ವರದ ವೈರಸ್ ಗಳು ಬಹಳ ಬುದ್ಧಿವಂತರು . ಅವು ಆಗಾಗ್ಗೆ ತಮ್ಮ ರಚನೆಯನ್ನು ಬದಲಾಯಿಸಿ ಕೊಳ್ಳುವ ಗೋಸುಂಬೆ  ಜಾತಿಯವು .ಇದರಿಂದ ಇವಕ್ಕೆ ಪರಿಣಾಮ ಕಾರಿ  ಲಸಿಕೆ ರಚನೆ ಇನ್ನೂ ಮರೀಚಿಕೆ ಯಾಗಿದೆ .

ಒಂದು ಕಣದ ಪುರಾಣ

ನನ್ನ  ಹೆಸರು  ಪ್ಲೇಟ್ ಲೆಟ್ ,ತ್ರೋಮ್ಬೋ ಸೈಟ್  ಎಂದೂ ಕರೆಯುವರು .ನಾನು ಮಹಾಭಾರತದ ವಿದುರನಂತೆ ತೆರೆಯ

 ಮರೆಯ  ಸಂಭಾವಿತ.ನಿಮಗೆಲ್ಲಾ ಕೆಂಪು ಮತ್ತು ಬಿಳಿ ರಕ್ತ ಕಣಗಳ ಬಗ್ಗೆ ಸರಿಯಾಗಿ ಗೊತ್ತು .ಕೆಂಪು ರಕ್ತ ಕಣಗಳು

 ಶ್ವಾಸಕೋಶ ದಿಂದ ಜೀವಕೋಶ ಗಳಿಗೆ  ಆಮ್ಲಜನಕ ಸಾಗಿಸುದು ,ಬಿಳಿ ಕಣಗಳು  ರೋಗಾಣುಗಳನ್ನು ಆಕ್ರಮಿಸಿ

ಕೊಳ್ಳುವುದು ಇತ್ಯಾದಿ.ಆದರೆ ನನ್ನ ಬಗ್ಗೆ ನಿಮಗೆ ಏನು ತಿಳಿದಿದೆ ?ಏನೂ ಇಲ್ಲ .ನಾನೇ ಹೇಳುತ್ತೇನೆ .ನಿಮ್ಮ ಶರೀರದಲ್ಲಿ

ಒಂದು ಗಾಯವಾಯಿತು ಎಂದುಕೊಳ್ಳಿ .ಆಗ ನಾನು ಮತ್ತು ನನ್ನ  ಹಿಂಡು ಆ ಜಾಗಕ್ಕೆ ಧಾವಿಸಿ  ನಮ್ಮಗಳ ದೇಹಗಳನ್ನೇ

ಅಡ್ಡವಿರಿಸಿ ರಕ್ತನಾಳಗಳಿಂದ ರಕ್ತ ಸೋರದಂತೆ ತಡೆಗಟ್ತುತ್ತೇವೆ. ಅ  ಮೇಲಿಂದ ಹೆಪ್ಪುಗಟ್ಟಿಸುವ ಸಾಧನಗಳು ಬಂದು

ಗಾಯವನ್ನು ಸೀಲ್ ಮಾಡುವುದು .ನೀವು  ಪುರಾಣದ ಉದ್ಧಾಲಕನ ಕತೆ ಕೇಳಿದ್ದಿರಲ್ಲವೇ? ನಾನು ನಿಮ್ಮ ಶರೀರದ

 ಉದ್ದಾಲಕ .ನಾನು ಮತ್ತು ನನ್ನ ಮಿತ್ರರು ಇಲ್ಲದಿದ್ದಲ್ಲಿ ನೀವು ಸಣ್ಣ ಗಾಯ ಆದರೂ ರಕ್ತ ಸ್ರಾವದಿಂದ ಸಾಯುವಿರಿ .


 ಕೆಲವೊಮ್ಮೆ  ಅಪದ್ಧ ಸಂಭವಿಸುವುದು ಉಂಟು .ಹೃದಯದ ರಕ್ತ ನಾಳಗಳಲ್ಲಿ  (coronary artery) ನೀವು ಮಿತಿ ಮೀರಿ

ತಿಂದ ಕೊಬ್ಬು ಸೇರಿಕೊಂಡು  ನಮ್ಮನ್ನು ಆಹ್ವಾನಿಸಿದರೆ ನಾವೇನು ಮಾಡಬೇಕು ?ನಮ್ಮ ಹಿಂಡು ಅಲ್ಲಿ ಒಟ್ಟು ಸೇರಿ

ಕೊಳವೆ ಬಂದ್ಹ್ ಮಾಡುವ ಆಟ ಆಡುತ್ತೇವೆ .ಅದರಿಂದ ನಿಮ್ಮ ಹೃದಯಕ್ಕೆ ರಕ್ತ ಸಿಗದೇ ನಿಮ್ಮ  ಹೃದಯಕ್ಕೆ ಆಘಾತ ಆದರೆ

ಅದು ನಿಮ್ಮದೇ ತಪ್ಪಲ್ಲವೇ?ನಮ್ಮನ್ನು ಬೇರೆ ಬೇರೆ ಮಾಡಲು ನೀವುಗಳು ಆಸ್ಪಿರಿನ್ ಇತ್ಯಾದಿ  ಔಷಧಿ  ಪ್ರಯೋಗಿಸುವಿರಿ .

ನನ್ನಂತಹ ಗುಬ್ಬಿಯ ಮೇಲೆ ಎಂತೆಂತಹ ಬ್ರಹ್ಮಾಸ್ತ್ರ ? ಕ್ಲೋಪಿದೊಗ್ರೆಲ್ ,ಅಬಿಕ್ಷಿಮಾಬ್ ,ತಿಕ್ಲೋಪಿದೀನ್ ,ಇನ್ನೂ ಏನೇನು

ಔಷಧಿಗಳು ?

ನನ್ನನ್ನು ದ್ವೇಷಿಸುತ್ತಿರುವ ನಿಮಗೆ ನನ್ನ   ಪ್ರಾಮುಖ್ಯತೆ ಅರಿಯಲು ಎಂದೇ  ದೇವರು ನಮ್ಮ ಪ್ರಾರ್ಥನೆ ಕೇಳಿ ಡೆಂಗು

ಜ್ವರವನ್ನು ಸೃಷ್ಟಿಸಿದ. ಡೆಂಗುವಿನಿಂದ ನೀವು ನನ್ನ್ನ ಇರುವಿಕೆ ಬೆಗ್ಗೆ ಅರಿತಿರಿ .ನಿಮ್ಮ ಪತ್ನಿ ಕೆಲವೊಮ್ಮೆ ಜಗಳವಾಡುವಾಗ

ನಾನು ಇಲ್ಲವಾದರೇ ಬುದ್ಧಿ  ಬರುವುದು ಎನ್ನುವರಲ್ಲವೇ ?ಹಾಗೆ .


ಆದರೆ ಒಂದು ಗುಟ್ಟು ನಾನು ಹೇಳುವೆನು .ಡೆಂಗು ಜ್ವರದಲ್ಲಿ ನಾನು ಎಷ್ಟು ನಶಿಸಿದರೂ ಫೇನಿಕ್ಷ್ ನಂತೆ ಮೇಲೆದ್ದು

ಬರುವೆನು .ಅದಕ್ಕೆಂದು ಹೊರಗಿನಿಂದ ಪ್ಲೇಟ್ ಲೆಟ್  ತರಿಸುವ ಅವಶ್ಯಕತೆ ಇಲ್ಲ .ನನ್ನ ಮಹಿಮೆ ಎಸ್ಟಿದೆ  ಎಂದರೆ  ಸುಮಾರು

ಮೂರುವರೆ ಲಕ್ಷವಿರುವ ನಮ್ಮ ಸೈನ್ಯ ಐದು ಸಾವಿರಕ್ಕೆ ಇಳಿದರೂ ನಾವು ಪರಿಸ್ತಿತಿ ನಿಭಾಯಿಸುವೆವು .ಸಾಧಾರಣ ವೈರಲ್

ಜ್ವರಗಳಲ್ಲೂ ನಮ್ಮ ಸಂಖ್ಯೆ ಸ್ವಲ್ಪ ಕುಗ್ಗ ಬಹುದು .ಅದಕ್ಕೆಲ್ಲ್ಲಾ ನೀವು ಹೆದರುವ ಅವಶ್ಯಕತೆ ಇಲ್ಲಾ.

ಬುಧವಾರ, ಫೆಬ್ರವರಿ 25, 2015

ಪ್ರಸಿದ್ದ ವೈದ್ಯರು

ಅಷ್ಟೇನು ಪ್ರಾಕ್ಟೀಸ್ ಇಲ್ಲದ ನನಗೆ ಕೆಲವೊಮ್ಮೆ ಸಭೆ ಸಮಾರಂಭಗಳಿಗೆ ಅತಿಥಿಯಾಗಿ ಹೋಗುವ ಭಾಗ್ಯ ಸಿಗುತ್ತದೆ .ಅಲ್ಲಿ

ಅತಿಥೇಯರು ನನ್ನನ್ನು ಪ್ರಸಿದ್ದ ವೈದ್ಯರು ತಮ್ಮ ಬಿಡುವಿಲ್ಲದ ವೇಳೆಯಲ್ಲಿ ಎಲ್ಲಾ ಕಾರ್ಯಗಳನ್ನು ಬದಿಗಿಟ್ಟು ಬಂದಿರುತ್ತಾರೆ

ಎಂದು ಪರಿಚಯಿಸುವಾಗ ಮುಜುಗರ ಆಗುತ್ತದೆ . ನನ್ನಲ್ಲಿಗೆ ಬರುವ ರೋಗಿಗಗಳು ನಗರದ ಪ್ರಸಿದ್ಧ ವೈದ್ಯರ ಹೆಸರು ಹೇಳಿ

ಅಲ್ಲಿ ಬಹಳಷ್ಟು ಕ್ಯೂ ಇರುವುದರಿಂದ ತತ್ಕಾಲಕ್ಕೆ ನಿಮ್ಮ ಕೈಗುಣ ನೋಡೋಣ ಎಂದು ಬಂದೆವೆಂದು ಓಪನ್ ಆಗಿ ಹೇಳುವರು .

ನಾನು ಸುಮ್ಮನೆ ಕತೆ ಪುಸ್ತಕ ಓದುತ್ತಲೋ ಕಂಪ್ಯೂಟರ್ ಕುಟ್ಟುತ್ತಲೋ ಇರುವುದು ಜನನಿತ ವಾದ ವಿಚಾರ ,


ಮತ್ತೆ ನನಗೆ ರೋಗಿಗಳು ಬರುವುದಾದರೂ ಹೇಗೆ ?ನನಗೆ ಓರ್ವ ಧರ್ಮ ಪತ್ನಿ ಇದ್ದಾರೆ .( ಧರ್ಮ ಪತ್ನಿ ಎಂದು ಏಕೆ

ಕರೆಯುತ್ತಾರೆ ಎಂದು ಇದು ವರೆಗೆ ತಿಳಿದಿಲ್ಲ .ಅಧರ್ಮ ಪತ್ನಿ ಯರಿಂದ ಬೇರ್ಪಡಿಸಲು ಆ ತರಹದ ಪತ್ನಿಯರೇ ಇಲ್ಲವಲ್ಲ

.ನಾವು ಜಗಳವಾಡುವಾಗ ಹೆಂಡತಿ ನಾನು ಧರ್ಮಕ್ಕೆ ಸಿಕ್ಕಿದವಳೋ ಎಂದು ಲಾ ಪಾಯಿಂಟ್ ಹಾಕುವುದುಂಟು )

ಈಕೆ ವಾರಕ್ಕೆ ಒಂದು ದಿನ  ಲಲಿತಾ ಸಹಸ್ರನಾಮ ವನ್ನೂ .ಇನ್ನೊಂದು ದಿನ  ವಿಷ್ಣು ಸಹಸ್ರನಾಮವನ್ನೂ ,ಮಿಕ್ಕುಳಿದ

ದಿನಗಳಲ್ಲಿ  ನನಗೆ ಸಹಸ್ರ ನಾಮವನ್ನೂ ಮಾಡುತ್ತಾಳೆ .ದೈವ ಭಕ್ತೆಯಾದ ಆಕೆ ಈ ಸಹಸ್ರನಾಮದ  ಕೊನೆಗೆ  ಸರ್ವೇ ಜನಾ

ಸುಖಿನೋಭವಂತು  ಎಂದು ಪ್ರಾರ್ಥಿಸುವುದು ವಾಡಿಕೆ .ಇದರಿಂದಾಗಿ  ಪಕ್ಕದ ಸರ್ವೇ (ಒಂದು ಊರಿನ ಹೆಸರು ),

ಕಾಣಿಯೂರು ಪ್ರದೇಶದಲ್ಲಿ ಎಲ್ಲರೂ ಆರೋಗ್ಯವಂತರಾಗಿ  ನನ್ನ  ಪ್ರಾಕ್ಟೀಸ್ ಗಣನೀಯವಾಗಿ  ಇಳಿಯಿತು .ಇದನ್ನು ಅವಳಿಗೆ

ಹೇಳಿದರೆ ಸರ್ವೇ ಜನಾ ಬಿಟ್ಟು ಲೋಕ ಸಮಸ್ತಾ ಸುಖಿನೋ ಭವಂತು ಎನ್ನ ತೊಡಗಿ ನಾಲ್ದೆಸೆ ಯಿಂದ  ನನಗೆ  ಇದ್ದ

ರೋಗಿಗಳೂ ಇಲ್ಲದಂತಾಯಿತು .


ನನಗೆ ಬರುವ ಮುಜುಗರ ನನ್ನ ವೈರಿಗಳಿಗೂ ಬೇಡ .ಒಂದು ಮುಂಜಾನೆ ನಿವೃತ್ತ ಪ್ರಿನ್ಸಿಪಾಲ್ ಓರ್ವರು ತಮ್ಮ ಪತ್ನಿ

ಸಮೇತವಾಗಿ ಬಂದು ತನಗೆ ಗ್ಯಾಸ್ಟ್ರಿಕ್ ,ಒಳ್ಳೆಯ ಔಷಧಿ ಕೊಡಿ ಎಂದು ಹೇಳಿದರು ,ಆದರೆ ಅವರ ರೋಗ ಲಕ್ಷಣ

ನೋಡುವಾಗ ನನಗೆ ಸಂಶಯ ಬಂದು ಇ ಸಿ ಜಿ ಮಾಡಿ ನೋಡಿದರೆ  ಅವರಿಗೆ ಲಘು ಹೃದಯಾಘಾತ ಆಗಿತ್ತು .ಅದನ್ನು

ಅವರಿಗೆ ತಿಳಿಸಿ( ಒಳ್ಳೆ ಡಯಾಗ್ನೋಸಿಸ್ ಮಾಡಿದ ಹೆಮ್ಮೆಯಲ್ಲಿ  )ದಾಗ   ಆ ದಂಪತಿಗಳ  ಮರು  ಪ್ರಶ್ನೆ  :ಒಳ್ಳೇ ಡಾಕ್ಟರ್


ಯಾರಿದ್ದಾರೆ ? ನಾನು  ಒಳ್ಳೆಯ ಡಾಕ್ಟರ್ ಎಂದು ನಾನೆ  ಹೇಗೆ ಹೇಳಿಕೊಳ್ಳುವುದು ?


 ನನ್ನ ಗುರುಗಳಾದ  ಡಾ ಎಂ ಕೆ ಮಣಿಯವರು ಸಾವಿರಾರು ಔಷಧಿಗಳು ಇರುವುದರಿಂದ  ಯಾವುದೇ ಒಂದನ್ನು ಬರೆಯುವ

ಮೊದಲು ಅದರ ಸರಿಯಾದ ಡೋಸ್ ಮತ್ತು ಅಡ್ಡ  ಪರಿಣಾಮಗಳ ಬಗ್ಗೆ  ಸಂದೇಹ ಇದ್ದರೆ  ಅದರ ಮಾಹಿತಿ ಇರುವ

ಪುಸ್ತಕವನ್ನು ಓದಿ ಕೊಡಿರಿ ಎಂದು ಹೇಳುತ್ತಿದ್ದರು .ಅದನ್ನು ಶಿರಸಾವಹಿಸಿ  ಪಾಲಿಸುತ್ತಿದ್ದ ನನ್ನನ್ನು ನೋಡಿ ರೋಗಿಗಳು ಇವನು


ಪುಸ್ತಕ ನೋಡಿ  ಔಷಧಿ ಕೊಡುವ ಡಾಕ್ಟರ ಎಂದು ಪುಕ್ಕಟೆ ಪ್ರಚಾರ ಮಾಡಿದ  ಪರಿಣಾಮ ನನ್ನ ಪಾಡು ಹೇಳ ತೀರದಾಯಿತು

.ಈಗ  ನಾನು ಪುಸ್ತಕದ ಬದಲಿಗೆ  ಕಂಪ್ಯೂಟರ್ ಉಪಯೋಗಿಸ  ತೊಡಗಿದ್ದೇನೆ .ಪರಿಸ್ಥಿತಿ  ಕೊಂಚ ಸುಧಾರಿಸಿದೆ .


ಮತ್ತೊಂದು ಸಮಸ್ಯೆ ಇದೆ .ನಾನು ಬಂಧು ಮಿತ್ರರ ಮನೆ ಮದುವೆ ಸಮಾರಂಭಗಳಿಗೆ ಮುಹೂರ್ತಕ್ಕೆ ಸರಿಯಾಗಿ

ಹೋಗುತ್ತಿದ್ದೆ ಅಲ್ಲಿ  ಬಂದ ಕೆಲವೇ ಮಂದಿ ನನ್ನನ್ನು ಸಖೇದಾಶ್ಚರ್ಯ ಮತ್ತು ಮರುಕದಿಂದ ನೋಡಿ ಏನು ಡಾಕ್ಟ್ರೆ ಪೇಶೆ೦ಟ್ಸ್

ಇಲ್ಲವೇ ಎಂದು  ಪ್ರಶ್ನಿಸುತ್ತಿದ್ದರು .ಆ ಮೇಲೆ ನನ್ನ ಹಿತೈಷಿಗಳು ಇಂತಹ ಕಾರ್ಯಕ್ರಮಗಳಿಗೆ  ಊಟದ ಸಮಯಕ್ಕೆ

ಹಾಜರಾಗುವುದೇ ಮರ್ಯಾದೆ ಎಂದು ಹೇಳಿದರು.
   

   ಮೊನ್ನೆ ಒಬ್ಬರು ಬಂದರು .ನಮ್ಮ ಪಕ್ಕದ ಓಣಿಯಲ್ಲಿ  ವಾಹನಗಳ  ಬಿಡಿಭಾಗ ಮಾರುವ ಅಂಗಡಿ ಉಧ್ಘಾಟನೆ ಕಾರ್ಯಕ್ರಮ .

ಒಂದೆರಡು ಸ್ಥಳೀಯ   ಪ್ರಮುಖರ ಹೆಸರು  ಹೇಳಿ ಆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ  ಕರೆದಾಗ ತಾವು ತುಂಬಾ ಬ್ಯುಸಿ

ಎಂದೂ ನನ್ನನ್ನು ಕೇಳಿನೋಡಿ ಅವರಿಗೆ ಹೆಚ್ಚು ಕೆಲಸ ಇರುವುದಿಲ್ಲ ಎಂದು ಹೇಳಿದರೆಂದು .ಮತ್ತೇನು ಮಾಡಲಿ

ಯೋಗ್ಯರಾದವರು  ಯಾರೂ ಸಿಗುತ್ತಿಲ್ಲ  ನೀವು ಬಂದರೆ ಆಗುತ್ತಿತ್ತು ಎಂದರು !ಮತ್ತೊಮ್ಮೆ  ಒಂದು ಪುಸ್ತಕ ಪ್ರದರ್ಶನ

ಉದ್ಘಾಟನೆಗೆ  ನಿಗದಿತ ಮುಖ್ಯ ಅತಿಥಿ ಕೊನೆ ಗಳಿಗೆಯಲ್ಲಿ ಕೈಕೊಟ್ಟಾಗ  ಅದರ ಪ್ರಾಯೋಜಕರು ಏನು ಮಾಡುವುದು ಸಾರ್

ಹೊತ್ತು ಬಂದಾಗ ಕತ್ತೆ ಕಾಲು ಹಿಡಿ ಎಂಬಂತೆ ನಿಮ್ಮನ್ನು ಕೇಳಿಕೊಳ್ಳುತ್ತೇವೆ ಎಂದು ಅಂಗಲಾಚಿದರು .                                          


ನನಗೊಂದು ಭಯ ಮತ್ತು ಆಸೆ .ಇತ್ತೀಚಿಗೆ ಮದುವೆ ಮಂಟಪದಿಂದ ವರನ ನಾಪತ್ತೆ  ಎಂಬ ವಾರ್ತೆಗಳನ್ನು  ಮೇಲಿಂದ ಮೇಲೆ

ಓದುತ್ತಿರುತ್ತೇವೆ .ಎಲ್ಲಿಯಾದರೂ ಅಂತಹ ಸಂದರ್ಭದಲ್ಲಿ  ನನಗೆ ಏನಾದರೂ ಬದಲಿ ವರನಾಗಿ  ನನಗೆ  ಚಾನ್ಸ್

ಸಿಗಬಹುದೋ ಎಂಬ ಆಸೆ ಮನದಲ್ಲಿ ಇದೆ .ದಯವಿಟ್ಟು  ಈ ವಿಚಾರವನ್ನು ನನ್ನ ಹೆಂಡತಿಗೆ ಹೇಳಬೇಡಿ .

ಸೋಮವಾರ, ಫೆಬ್ರವರಿ 23, 2015

ದಂತ ಕತೆ

ಮೊನ್ನೆ ನಗರದ ದಂತ ವೈದ್ಯ ಸಂಘದವರ ವರ್ಷದ ಮೊದಲ ಸಭೆಗೆ ಮುಖ್ಯ                                         ಅತಿಥಿಯಾಗಿ ಕರೆದಿದ್ದರು .ದಂತ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಅನುಭವ 
ಇದ್ದರೂ ಇಂತಹ ಸಭೆಯಲ್ಲಿ ಮೊದಲ ಭಾರಿ ಭಾಗವಹಿಸುತ್ತಿರುವುದರಿಂದ 
ಪ್ರಥಮ ಚುಂಬನದಲ್ಲಿ ದಂತ ಭಗ್ನವಾಗುವ ಒಳ ಭಯ . ಹಾಗೇನಾದರೂ 
ಆದಲ್ಲಿ ದಂತ ವೈದ್ಯರೇ ಇದ್ದರಲ್ಲಾ  ಎಂಬ ಧೈರ್ಯದಿಂದ ಒಪ್ಪಿಕೊಂಡೆ                                                      .ಅಂತೂ ಕಾರ್ಯಕ್ರಮ ಸಾಂಗವಾಗಿ ನೆರವೇರಿತು ಎನ್ನಿ. ದಂತ ವೈದ್ಯರು ,ಪ್ರತಿಭಾ ವಂತರು 
ಏಕಕಾಲದಲ್ಲಿ ವಿಜ್ಞಾನಿಗಳೂ ಕಲಾಕಾರರೂ ಆಗಿರಬೇಕಾಗುತ್ತದೆ .

ನನಗೆ ಈ ದಂತ ವೈದ್ಯರ ಮೇಲೆ ಒಂದು ಸಿಟ್ಟು ಇದೆ .ಪರಿಣತ ಹಲ್ಲಿನ
ವೈದ್ಯರಿ0ದಾಗಿ ಚಕ್ಕುಲಿ ಚಿಪ್ಸ್ ಗಳ ಕ್ರಯ ಗಗನಕ್ಕೆ ಏರಿದೆ.ಹಣ್ಣು ಹಣ್ಣು
ಮುದುಕರೂ ಕೃತಕ ಹಲ್ಲುಗಳನ್ನು ಇಟ್ಟು ಇವುಗಳನ್ನು ಸವಿಯ ತೊಡಗಿದ
ಮೇಲೆ ಇವುಗಳನ್ನು ತಯಾರಿಸುವರ ಅದೃಷ್ಟ ಖುಲಾಯಿಸಿದೆ .ಅಲ್ಲದೆ  ಅಡಿಕೆಗೆ
ಇಷ್ಟು ಕ್ರಯ ಬರುವಲ್ಲಿ ಹಲ್ಲಿನ ವೈದ್ಯರ ಪಾಲೂ ಗಣನೀಯ ಎಂಬುದನ್ನು
ಮರೆಯ ಬಾರದು .
ಇನ್ನೊಂದು ದೂರು ಈಗ ಪ್ರಾಯವಾದವರು ಕಾಣ ಸಿಗುವುದೇ ಇಲ್ಲ .ದಾಳಿಂಬೆ
ಹಣ್ಣಿನಂತಹ  ಕೃತಕ ಹಲ್ಲುಗಳು ಮತ್ತು ಬಣ್ಣ ಹಾಕಿದ ಕೇಶಗಳಿಂದ
ಅಲಂಕೃತರಾಗಿ ಯಾರು ಹಿರಿಯರು ಯಾರು ಕಿರಿಯರು ಎಂದು ಮೇಲ್ನೋಟಕ್ಕೆ
ತಿಳಿಯುವುದಿಲ್ಲ .ಮೊನ್ನೆ ಮನೆಯಲ್ಲಿ ಒಂದು ಧಾರ್ಮಿಕ
ಕಾರ್ಯಕ್ರಮ .ಪುರೋಹಿತರು  ಹಿರಿಯಲ್ಲರಿಗೆ ನಮಸ್ಕಾರ ಮಾಡಿ ಬನ್ನಿ
ಎಂದರು .ಸಭೆಯಲ್ಲಿ ನೋಡಿದರೆ ಎಲ್ಲರೂ ಕಿರಿಯರಂತೆ ಕಾಣುತ್ತಾರೆ !ನನ್ನ
ಪೇಚು ಯಾರಿಗೂ ಬೇಡ .
ದೇವಲೋಕದಿಂದ ರಂಭೆ ಉರ್ವಶಿಯರನ್ನು ಭೂಲೋಕದಲ್ಲಿ ತಪಸ್ವಿಯರ
ತಪೋಭಂಗ ಮಾಡಲು ಹೋಗ ಹೇಳಿದಾಗ ಅಲ್ಲಿ ಚಿರಯವ್ವನೆಯರಾದ  ತಮಗೆ
ವೃದ್ದಾಪ್ಯ ಬರುವುದನ್ನು ಸಹಿಸಲು ಆಗುವುದಿಲ್ಲ ,ಆದುದರಿಂದ ನಾವು
ಹೋಗಲಾರೆವು ಎಂದು ಅಪ್ಸರೆಯರು  ಮುಷ್ಕರ ಹೂಡಿದರಂತೆ.ಅದಕ್ಕೆಂದೇ
ದೇವೆಂದ್ರನು ಅವರ ಸಮಾಧಾನಕ್ಕೆ  ದಂತವೈದ್ಯರನ್ನು ಸೃಷ್ಟಿಸಿದನೆಂಬ ದಂತ
ಕತೆಯಿದೆ.
ಕೃತಕ ಹಲ್ಲಿನ ಬಲದಿಂದ ಆ ವಯಸ್ಸಿಗೆ ತಿನ್ನ ಬಾರದ್ದೆನ್ನಲ್ಲ ತಿಂದು ಹೊಟ್ಟೆ
ಬಾಧೆಯಿಂದ ನೆರಳುವವರನ್ನು ಚಿಕಿತ್ಸುವ  ಕೆಲಸ ನಮ್ಮ ಮೇಲೆ .!
ಅಜ್ಜ ಅಜ್ಜಿಯರು ನನಗೆ ಹಸಿವೇ ಇಲ್ಲ (ಮೊದಲಿನ ಹಾಗೆ ತಿನ್ನಲು ಆಗುವುದಿಲ್ಲ )
ಎಂದರೆ ದೇವರು ನಮ್ಮ ಶರೀರಕ್ಕೆ ಬೇಕಷ್ಟು ಮಾತ್ರ ತಿನ್ನುವ ಹಸಿವೆ
ಕೊಡುತ್ತಾನೆ .ಅಲ್ಲದೆ ನಿಮಗೆ ಹಸಿವು ಹೆಚ್ಚಿಸುವ  ಔಷಧಿ ಕೊಟ್ಟು ನಿಮ್ಮ ಸೊಸೆ
ಮಕ್ಕಳ ಶಾಪ ಕೇಳಬೇಕಾದೀತು .(ಇವರ ಆಹಾರ ಬೇಡಿಕೆ ಈಡೇರಿಸುವರು
ಅವರಲ್ಲವೇ?)ಎಂಬ ಸಿದ್ದ ಉತ್ತರ ಕೊಡುವೆನು . ಅದರಂತೆ ವಯಸ್ಸಾದವರು 
ಕಿವಿ ಕೇಳಿಸುವುದಿಲ್ಲ ಎಂದರೆ  ಮಕ್ಕಳು ಮೊಮ್ಮಕ್ಕಳು ಬೈಯ್ಯುವುದನ್ನು
ಕೇಳಿಸದಿರಲಿ ಎಂದು ದೇವರೇ ಕೇಳುವ ಶಕ್ತಿ ಕಸಿದುಕೊಂಡು ಉಪಕಾರ
ಮಾಡುತ್ತಾನೆ ಎನ್ನುತ್ತೇನೆ .
ಅಂತೂ ಇಂತೂ ದಂತ ವೈದ್ಯರು ಮತ್ತು ಸೌಂದರ್ಯ ತಜ್ಞ ರಿಂದಾಗಿ  ಎನಗಿಂತ

ಹಿರಿಯರಿಲ್ಲ ಎಂದು ಪರಿತಪಿಸುವಂತಾಗಿದ್ದಂತೂ  ನಿಜ