ಬೆಂಬಲಿಗರು

ಭಾನುವಾರ, ಸೆಪ್ಟೆಂಬರ್ 27, 2020

ಶಿಷ್ಯ ಪ್ರೀತಿ

 

ಮೇಲಿನ  ಚಿತ್ರ ನನ್ನ  ಪ್ರಾಥಮಿಕ ಶಾಲೆ ಅಧ್ಯಾಪಕರಾಗಿದ್ದ  ಶ್ರೀ ಜನಾರ್ಧನ ಶೆಟ್ಟಿ  ಅವರದು .ನಿನ್ನೆ ತಾನೇ  ದೈವಾಧೀನ ರಾದ  ಸುದ್ದಿ ಇಂದಿನ ಪತ್ರಿಕೆಯಲ್ಲಿ  ಬಂದಿದೆ .ನಮ್ಮ ಬಾಲ್ಯದಲ್ಲಿ  ಅಧ್ಯಾಪಕರು ಅನೇಕರು  ಹೊಟ್ಟೆ ಪಾಡಿಗಾಗಿ  ಈ ಕೆಲಸಕ್ಕೆ ಬಂದವರು .ಆದರೆ ಬಹುತೇಕ ಹೆಚ್ಚಿನವರು ಪ್ರಮಾಣಿಕರು .ಅಧ್ಯಯನ ಶೀಲರೂ

ವೃತ್ತಿಯನ್ನು  ಗಂಭೀರವಾಗಿ  ತೆಗೆದು ಕೊಂಡವರು ಬೆರಳೆಣಿಕೆ ಯಲ್ಲಿ ಇದ್ದರು.ಅವರ ಪೈಕಿ  ಜನಾರ್ಧನ ಶೆಟ್ಟಿ  ಮಾಸ್ಟ್ರು ಒಬ್ಬರು .ಇವರು  ಓದಿ ಬಂದು ಪಾಠ ಮಾಡುವರು .ಸುಶ್ರಾವ್ಯ ವಾಗಿ  ಕವನ ವಾಚನ  ಮಾಡುತ್ತಿದ್ದರು.ಒಂದು ಸಾರಿ  ಕ್ಲಾಸ್ ಪರೀಕ್ಷೆಯಲ್ಲಿ  ನನಗೆ  50 ರಲ್ಲಿ  48 ಅಂಕ ಬಂದಿತ್ತು .ಒಂದು ಉತ್ತರ ತಪ್ಪು ಎಂದು  2 ಮಾರ್ಕ್ ಕಳೆದಿದ್ದರು .ಆದರೆ ನಾನು ನೋಡಿದಾಗ  ನನ್ನ ಉತ್ತರ  ಸರಿಯಿತ್ತು ,ಅವರ ಮಾದರಿ ಉತ್ತರ ತಪ್ಪಾಗಿತ್ತು .ನಾನು ಅಧ್ಯಾಪಕರ ಕೊಠಡಿ ಗೆ  ಹೋಗಿ ಇದನ್ನು ಅವರ ಗಮನಕ್ಕೆ ತಂದೆ .ಅವರು ಅದನ್ನು ಪರಿಶೀಲಿಸಿ ತಮ್ಮ ತಪ್ಪನ್ನು ಒಪ್ಪಿಕೊಂಡದ್ದಲ್ಲದೆ ಬಹಳ ಪ್ರೀತಿಯಿಂದ  ನನ್ನ ಕೈ ಹಿಡಿದು  ತನ್ನ ತಾಯಿಯ ಬಗ್ಗೆ ವಿಚಾರಿಸಿದರು .ತಾಯಿ ತಾನೇ ಮೊದಲ ಗುರು .

ನಾನು ವೈದ್ಯನಾಗಿ ಮಂಗಳೂರಿನ  ವೈದ್ಯಕೀಯ  ಕೋಲೇಜ್ ಒಂದರಲ್ಲಿ ಅಧ್ಯಾಪನ ವೃತ್ತಿ  ಕೈಗೊಂಡಿದ್ದೆ .ಒಂದು ದಿನ ಯಾವುದೋ ಕಾರ್ಯಕ್ರಮ ಕ್ಕೆ  ಹುಟ್ಟೂರಿಗೆ  ಹೋಗಿದ್ದವನು  ಕನ್ಯಾನ ಸಮೀಪ ಬಂದಿತಡ್ಕ  ರಸ್ತೆ ಬದಿಯಲ್ಲಿ  ವಾಸವಾಗಿದ್ದ  ಗುರುಗಳನ್ನು  ಕಂಡು ಬರೋಣ ಎಂದು ಮನೆಯ ಬಾಗಿಲು ತಟ್ಟಿದೆ .ಅವರು ಇರಲಿಲ್ಲ .ಅವರ ಮನೆಯವರು ನನ್ನನ್ನು ಪ್ರೀತಿಯಿಂದ  ಉಪಚರಿಸಿ ಕಳುಹಿಸಿದರು .

ಇದಾದ  ಕೆಲವು ದಿನಗಳಲ್ಲಿ  ವಯೋ ವೃದ್ದ ರಾದ  ಗುರುಗಳು  ಮಂಗಳೂರಿನ ನಮ್ಮ ಕೋಲೇಜ್ ಗೆ  ನನ್ನನ್ನು ಹುಡುಕಿ ಬಂದರು .ಕೈಯಲ್ಲಿ  ಒಂದು ಬಾಟಲ್ ಜೇನು ತುಪ್ಪ ಮತ್ತು  ಗೇರು ಬೀಜದ  ಕಟ್ಟು .ನಾನು ಅವರ ಮನೆಗೆ ಬಂದಾಗ ಅವರು ಇಲ್ಲದಿದ್ದುಕ್ಕೆ ತಾವೇ ನನ್ನನ್ನು ಹುಡುಕಿ ಕೊಂಡು ಬಂದುದಲ್ಲದೆ  ಕೈಯಲ್ಲಿ  ಉಡುಗೊರೆ .ನಾನು ಅವರಿಗೆ ನಮಸ್ಕರಿಸಿ  ,ಕುಶಲೋಪರಿ  ಮಾತನಾಡಿಸಿ  ಕಳುಹಿಸಿ ಕೊಟ್ಟೆ .ಎಂತಹ  ಶಿಷ್ಯ ಪ್ರೀತಿ ,ಎಂತಹ ಸಂಸ್ಕಾರ .ಆ ಮೇಲೆ ಒಂದೆರಡು ಬಾರಿ ಅವರ ದರ್ಶನ  ಆಗಿತ್ತು .

ಇಂದು ಅವರ ನಿಧನ ವಾರ್ತೆ ನೋಡಿದಾಗ  ಹಳೆಯ ನೆನಪುಗಳು ಬರುತ್ತಿವೆ .

  ಆಚಾರ್ಯ ದೇವೋ ಭಾವ ಎಂಬ ವಾಕ್ಯ ಅನ್ವರ್ಥ ಮಾಡಿದವರು .ಎಂದರೋ ಮಹಾನುಭಾವುಲುಅಂದರಿಕಿವಂದನಮುಲು  .

                         



                                    

                                                                                   

ಶನಿವಾರ, ಸೆಪ್ಟೆಂಬರ್ 26, 2020

ಡೆಂಗು ಜ್ವರವೂ ಕಿವಿ ಹಣ್ಣೂ

                                                   kiwi | Description, Nutrition, & Facts | Britannica 

 

ಕಿವಿ  ನ್ಯೂಜಿ ಲ್ಯಾಂಡ್  ದೇಶದ ಹಕ್ಕಿ . ಅಲ್ಲಿ ಬೆಳೆಯುವ  ಹಣ್ಣಿಗೂ ಅದೇ  ಹೆಸರು .ನಮ್ಮ ದೇಶಕ್ಕೆ ಬಹುತೇಕ  ನ್ಯೂಜಿಲಂಡ್ ,ಚಿಲಿ ಮತ್ತು ಇರಾನ್ ದೇಶದಿಂದ  ಆಮದು ಆಗುವುದು .ಆದುದರಿಂದ  ದುಬಾರಿ .

ಈ ಹಣ್ಣನ್ನು  ಡೆಂಗು ರೋಗಿಗಳ ಬಳಿ ಯಾವಾಗಲೂ ಕಾಣುವೆನು .ನಾವು ವೈದ್ಯರು  ಸಲಹೆ ಮಾಡದಿದ್ದರೂ 

ಸದ್ದಿಲ್ಲದೇ ಅವರ ಆಹಾರದಲ್ಲಿ ಸೇರಿ ಹೋಗುವುದು .ಡೆಂಗು ಜ್ವರ ಕ್ಕೆ  ಈ ಹಣ್ಣಿನಲ್ಲಿ ಔಷಧಿ ಏನೂ ಇಲ್ಲ .

ಕಾಯಿಲೆಯಲ್ಲಿ  ಪ್ಲಾಟೆಲೆಟ್ ಕಣಗಳು ಕಮ್ಮಿ ಆದರೆ  ಅದನ್ನು ವರ್ಧಿಸಲು  ಇದು ರಾಮ ಬಾಣ ಎಂದು  ಯಾರೋ 

ಹೇಳಿದ್ದು  ಈಗ ವೇದ ವಾಕ್ಯ ಆಗಿದೆ . ಈ ನಂಬಿಕೆಗೆ  ಯಾವುದೇ  ವೈಜ್ನಾನಿಕ ಆಧಾರ ಇಲ್ಲ .ಎಲ್ಲಾ  ಹಣ್ಣುಗಳಂತೆ 

ಆರೋಗ್ಯಕ್ಕೆ  ಒಳ್ಳೆಯದು ಅಷ್ಟೇ .

ತಮಾಷೆಯೆಂದರೆ  ಈ ಹಣ್ಣಿನ ಬಗ್ಗೆ  ಕೆಲವು  ಸಣ್ಣ ಸಂಶೋದನೆಗಳು  ಇದು ಪ್ಲಾಟೆಲೆಟ್  ಕ್ಷಮತೆಯ  ವಿರೋಧೀ

ಗುಣಗಳನ್ನು   ಹೊಂದಿದ್ದು  ಹೃದಯಾಘಾತ  ತಡೆಗಟ್ಟ ಬಹುದು ಎಂದು ಸೂಚನೆ ನೀಡಿವೆ . ನಿಮಗೆ ತಿಳಿದಂತೆ 

ಪ್ಲಾಟೆಲೆಟ್  ಕಣಗಳು  ರಕ್ತ ಸ್ತಂಭಕ  ಆಗಿದ್ದು  ರಕ್ತ  ಹಪ್ಪು ಗಟ್ಟಲು ಸಹಾಯ ಮಾಡುವವು .ಹೃದಯದ  ರಕ್ತ ನಾಳಗಳಲ್ಲಿ   ಕೊಲೆಸ್ಟ್ರಾಲ್  ಕುಳಿತು  ಪ್ಲಾಟೆಲೆಟ್ ಕಣಗಳನ್ನು  ಆಹ್ವಾನಿಸುತ್ತದೆ .ಅವು ಒಟ್ಟು ಸೇರಿ  ರಕ್ತ  ಹೆಪ್ಪು ಗಟ್ಟಿಸಿ   ರಕ್ತನಾಳ  ವನ್ನು  ಬಂದ್ ಮಾಡಿದಾಗ  ಹೃದಯಾಘಾತ  ಆಗುವುದು .ಇದನ್ನು ತಡೆ ಗಟ್ಟಲು  ಆಸ್ಪಿರಿನ್  ನಂತಹ    ಪ್ಲಾಟೆಲೆಟ್  ವಿರೋಧೀ  ಔಷಧ ಕೊಡುವರು.  ಅಂತಹದೇ  ಕೆಲಸ ಸಣ್ಣ ಪ್ರಮಾಣದಲ್ಲಿ  ಕಿವಿ ಹಣ್ಣು  ಮಾಡುವುದು  ಎಂಬ  ಸೂಚನೆ .ಹೃದ್ರೋಗಕ್ಕೆ  ಪ್ಲಾಟೆಲೆಟ್  ವಿರೋಧೀ  ಡೆಂಗು  ಕಾಯಿಲೆಯಲ್ಲಿ  ಅದರ  ಸ್ನೇಹಿ 

ಆಗುವುದು  ಹೇಗೆ ?ಇಲ್ಲಿಯೂ  ಸಲ್ಲುವುದು  ಅಲ್ಲಿಯೂ ಸಲ್ಲುವುದುಎಂದರೆ  ನಂಬುವುದು ಕಷ್ಟ .

ಆದುದರಿಂದ ಡೆಂಗು ಜ್ವರಕ್ಕೆ  ದುಬಾರಿಯದ  ಕಿವಿ ಹಣ್ಣು ತಿನ್ನಬೇಕಿಲ್ಲ .ನಮ್ಮಲ್ಲೇ ಬೆಳೆಯುವ  ಹಣ್ಣು ಹಂಪಲು ಸಾಕು .ಆಧಾರ ರಹಿತ  ನಂಬಿಕೆ  ಬಹು ಬೇಗ  ಹಬ್ಬುತ್ತದೆ .ಆದರೆ  ಇದು ದುಬಾರಿ ನಂಬಿಕೆ.

ಶನಿವಾರ, ಸೆಪ್ಟೆಂಬರ್ 12, 2020

ಮಳೆಗಾಲದ ಬಗ್ಗೆ ಒಂದು ಪ್ರಬಂಧ

 ಮಳೆಗಾಲ  ಆರಂಭವಾಗುತ್ತಲೇ  ಕೊಡೆ  ಗೊರಬೆಗಳು ಹೊರ ಬರುತ್ತವೆ .ಇಂದಿನ ಕೊಡೆಗಳಂತೆ  ತರಾವಳಿ

ಗೊರಬೆಗಳನ್ನು ಮಾಡುವವರು ಹಳ್ಳಿಯಲ್ಲಿ ಇದ್ದರು.ಅವರಿಗೆ ಹಣವೇ ಆಗಬೇಕಿಲ್ಲ .ಹಲಸಿನ ಬೀಜವೊ 

ನೀರಡಿಕೆಯೋ ಕೊಟ್ಟರೆ ಆದೀತು .ಒಟ್ಟಿನಲ್ಲಿ ಆತ್ಮನಿರ್ಭರ  ಗ್ರಾಮಗಳು ಗೊರಬೆ ಬೆನ್ನು ಮತ್ತು ತಲೆಯ 

ಹಿಂಬಾಗ ಬೆಚ್ಚಗೆ ಇಟ್ಟೀತು.ಮುಂಬಾಗಕ್ಕೆ ವರುಣನ ಅಪ್ಪುಗೆ ಭಾಗ್ಯ .ಗಾಳಿ ಮಳೆಯಲ್ಲಿ ಕೊಡೆಯ ಅವಸ್ಥೆ

 ಇದಕ್ಕಿಂತಲೂ ಕಡೆ .

  ಉಳಿದ ಕಾಲಗಳಲ್ಲಿ ಅಡಿಕೆಯ ಹೊದಿಕೆ ಇದ್ದ ಮನೆಯ ಅಂಗಳ ಮಳೆಯ ಚಳಿಗೆ ಅಡಿಕೆ ಸೋಗೆಯ 

ಮರೆ ಹೋಗುತ್ತದೆ .ಉಳಿದೆಡೆ ಪಾಚಿ ಹಾಸು .ಕಾಲಿಟ್ಟರೆ ಜಾರುವುದು ಅದರ ಮೇಲೆ  ನಡೆದಾಡಲು 

ಅಡಿಕೆ ಮರದ ನೆಲ ಸೇತು .ಅಭ್ಯಾಸ ಇದ್ದವರಿಗೆ ಅದರ ಮೇಲಿನ ನಡಿಗೆ  ಸುಲಭ .ಇಲ್ಲದಿದ್ದವರು 

ಸರ್ಕಸ್ ಹಗ್ಗದ ಮೇಲೆ ನಡೆದಂತೆ ಆಗುವುದು .ವರ್ಷಕಾಲದ   ಉತ್ತರಾರ್ಧ ದಲ್ಲಿ  ಅಂಗಳ ತುಂಬಾ 

ತರಕಾರಿ ಬೆಳೆ.ಮುಳ್ಳು ಸೌತೆ ,ಪಡುವಲ,ಹೀರೆ ,ಬೆಂಡೆ. ಮತ್ತು ಅಲಸಂದೆ.

ನೆಂಟರು ಬರುವುದು ಕಡಿಮೆ .ರಾತ್ರಿ ಕಪ್ಪೆ ಜೀರುಂಡೆಗಳ ಹಿಮ್ಮೇಳದಲ್ಲಿ  ಮಳೆರಾಯನ ಜೋಗುಳಕ್ಕೆ 

ಸುಖ ನಿದ್ರೆ .

ಶಾಲೆಗೆ  ಹೋಗುವ  ಮಕ್ಕಳಿಗೆ  ಕಷ್ಟ  ಆದರೂ ಮಳೆ ಇಷ್ಟ .ಜೋರಾಗಿ ಮಳೆ ಬಂದರೆ ಶಾಲೆಗೆ ರಜೆ .

ಮಾಡಿನಿಂದ ಸುರಿವ ಜಲಧಾರೆಯಲ್ಲಿ ಕೈಕಾಲು,ಬುತ್ತಿಪಾತ್ರೆತೊಳೆಯಬಹುದು.ನೀರುಹುಡುಕಿ ಓಡ ಬೇಕಿಲ್ಲ ,

ಬಾವಿಯಿಂದ ಸೇದ ಬೇಕಿಲ್ಲ .ಶಾಲೆಯ ದಾರಿ ಗುಂಟ  ಹುಲುಸಾಗಿ ಬೆಳೆದಿರುವ ನೀರ ಕಡ್ಡಿ  ಸ್ಲೇಟು 

 ಒರೆಸಲು  ಸುಲಭ ಸಾಧನ .ಕಾಲ ಬೆರಳುಗಳ  ನಡುವೆ ನೀರ ಕಜ್ಜಿ .

 

ಮಳೆಗಾಲದಲ್ಲಿ ಅಜ್ಜ ಅಜ್ಜಿಯರಿಗೆ ಬೇಡಿಕೆ .ಸಮಯ ಹೋಗದಿರುವಾಗ ಕತೆ ಹೇಳಲು ,ತಮ್ಮ 

ಭಂಡಾರದಿಂದ ಹಲಸಿನ ಬೀಜ ,ಹಪ್ಪಳ ಇತ್ಯಾದಿ ಪಿಂಕಿಸಲು.

ಮಳೆಗಾಲಕ್ಕೆ ಬೇಕಾದ ಅಕ್ಕಿ ಬೇಳೆ ಇತ್ಯಾದಿ ಮೊದಲೇ ಶೇಖರಣೆ ಆಗಿರುತ್ತದೆ .ಅದರಂತೆ ಉರುವಲು 

ಸೌದೆ ,ತೆಂಗಿನ ಗರಿ ,.ಮಳೆಗಾಲಕ್ಕೆ ಪೂರ್ವ ತಯಾರಿ ಒಂದು ಹಬ್ಬ .ಕೆಲವೊಮ್ಮೆ  ಸಂಕಟ  ಮತ್ತು 

ಸವಾಲು .

ಶೇಖರ ಮಾಡಿದ ಉಪ್ಪಿನ ಕಾಯಿ ,ಹಲಸಿನ ಹಣ್ಣಿನ ಪೆರಟಿ ,ಮಾವಿನ ಮಾಂಬಳ  ಕಾಪಿಡಲು ಹಾರ 

ಸಾಹಸ .ಬೆಚ್ಚಗೆ  ಮುಚ್ಚಿ ಇಡಬೇಕು .ಆದರೂ ಬರುವುದು  ಕೆಲವೊಮ್ಮೆ  ಫಂಗಸ್ಸಿನ ಗಡ್ಡ ಮೀಸೆ .

ಬಟ್ಟೆ  ಒಣಗಿಸುವುದು ಹರ ಸಾಹಸ .ಬಾಳಂತಿ ಮಗು ಇದ್ದರೆ ಇನ್ನೂ ಕಷ್ಟ .ಬಚ್ಚಲು ಮನೆ  ಮತ್ತು 

ಅಡಿಗೆ  ಮನೆ , ಖಾಲಿ  ಓಲೆ ಮೇಲೆ ,ಬೆಚ್ಚನೆ ಹಂಡೆ ಮೇಲೆ  ಒಣಗಿಸಲ್ಪಟ್ಟ ಬಟ್ಟೆಗಳಿಗೆ ಹೊಗೆಯ ಸೆಂಟ್ .