ಬೆಂಬಲಿಗರು

ಭಾನುವಾರ, ಸೆಪ್ಟೆಂಬರ್ 27, 2020

ಶಿಷ್ಯ ಪ್ರೀತಿ

 

ಮೇಲಿನ  ಚಿತ್ರ ನನ್ನ  ಪ್ರಾಥಮಿಕ ಶಾಲೆ ಅಧ್ಯಾಪಕರಾಗಿದ್ದ  ಶ್ರೀ ಜನಾರ್ಧನ ಶೆಟ್ಟಿ  ಅವರದು .ನಿನ್ನೆ ತಾನೇ  ದೈವಾಧೀನ ರಾದ  ಸುದ್ದಿ ಇಂದಿನ ಪತ್ರಿಕೆಯಲ್ಲಿ  ಬಂದಿದೆ .ನಮ್ಮ ಬಾಲ್ಯದಲ್ಲಿ  ಅಧ್ಯಾಪಕರು ಅನೇಕರು  ಹೊಟ್ಟೆ ಪಾಡಿಗಾಗಿ  ಈ ಕೆಲಸಕ್ಕೆ ಬಂದವರು .ಆದರೆ ಬಹುತೇಕ ಹೆಚ್ಚಿನವರು ಪ್ರಮಾಣಿಕರು .ಅಧ್ಯಯನ ಶೀಲರೂ

ವೃತ್ತಿಯನ್ನು  ಗಂಭೀರವಾಗಿ  ತೆಗೆದು ಕೊಂಡವರು ಬೆರಳೆಣಿಕೆ ಯಲ್ಲಿ ಇದ್ದರು.ಅವರ ಪೈಕಿ  ಜನಾರ್ಧನ ಶೆಟ್ಟಿ  ಮಾಸ್ಟ್ರು ಒಬ್ಬರು .ಇವರು  ಓದಿ ಬಂದು ಪಾಠ ಮಾಡುವರು .ಸುಶ್ರಾವ್ಯ ವಾಗಿ  ಕವನ ವಾಚನ  ಮಾಡುತ್ತಿದ್ದರು.ಒಂದು ಸಾರಿ  ಕ್ಲಾಸ್ ಪರೀಕ್ಷೆಯಲ್ಲಿ  ನನಗೆ  50 ರಲ್ಲಿ  48 ಅಂಕ ಬಂದಿತ್ತು .ಒಂದು ಉತ್ತರ ತಪ್ಪು ಎಂದು  2 ಮಾರ್ಕ್ ಕಳೆದಿದ್ದರು .ಆದರೆ ನಾನು ನೋಡಿದಾಗ  ನನ್ನ ಉತ್ತರ  ಸರಿಯಿತ್ತು ,ಅವರ ಮಾದರಿ ಉತ್ತರ ತಪ್ಪಾಗಿತ್ತು .ನಾನು ಅಧ್ಯಾಪಕರ ಕೊಠಡಿ ಗೆ  ಹೋಗಿ ಇದನ್ನು ಅವರ ಗಮನಕ್ಕೆ ತಂದೆ .ಅವರು ಅದನ್ನು ಪರಿಶೀಲಿಸಿ ತಮ್ಮ ತಪ್ಪನ್ನು ಒಪ್ಪಿಕೊಂಡದ್ದಲ್ಲದೆ ಬಹಳ ಪ್ರೀತಿಯಿಂದ  ನನ್ನ ಕೈ ಹಿಡಿದು  ತನ್ನ ತಾಯಿಯ ಬಗ್ಗೆ ವಿಚಾರಿಸಿದರು .ತಾಯಿ ತಾನೇ ಮೊದಲ ಗುರು .

ನಾನು ವೈದ್ಯನಾಗಿ ಮಂಗಳೂರಿನ  ವೈದ್ಯಕೀಯ  ಕೋಲೇಜ್ ಒಂದರಲ್ಲಿ ಅಧ್ಯಾಪನ ವೃತ್ತಿ  ಕೈಗೊಂಡಿದ್ದೆ .ಒಂದು ದಿನ ಯಾವುದೋ ಕಾರ್ಯಕ್ರಮ ಕ್ಕೆ  ಹುಟ್ಟೂರಿಗೆ  ಹೋಗಿದ್ದವನು  ಕನ್ಯಾನ ಸಮೀಪ ಬಂದಿತಡ್ಕ  ರಸ್ತೆ ಬದಿಯಲ್ಲಿ  ವಾಸವಾಗಿದ್ದ  ಗುರುಗಳನ್ನು  ಕಂಡು ಬರೋಣ ಎಂದು ಮನೆಯ ಬಾಗಿಲು ತಟ್ಟಿದೆ .ಅವರು ಇರಲಿಲ್ಲ .ಅವರ ಮನೆಯವರು ನನ್ನನ್ನು ಪ್ರೀತಿಯಿಂದ  ಉಪಚರಿಸಿ ಕಳುಹಿಸಿದರು .

ಇದಾದ  ಕೆಲವು ದಿನಗಳಲ್ಲಿ  ವಯೋ ವೃದ್ದ ರಾದ  ಗುರುಗಳು  ಮಂಗಳೂರಿನ ನಮ್ಮ ಕೋಲೇಜ್ ಗೆ  ನನ್ನನ್ನು ಹುಡುಕಿ ಬಂದರು .ಕೈಯಲ್ಲಿ  ಒಂದು ಬಾಟಲ್ ಜೇನು ತುಪ್ಪ ಮತ್ತು  ಗೇರು ಬೀಜದ  ಕಟ್ಟು .ನಾನು ಅವರ ಮನೆಗೆ ಬಂದಾಗ ಅವರು ಇಲ್ಲದಿದ್ದುಕ್ಕೆ ತಾವೇ ನನ್ನನ್ನು ಹುಡುಕಿ ಕೊಂಡು ಬಂದುದಲ್ಲದೆ  ಕೈಯಲ್ಲಿ  ಉಡುಗೊರೆ .ನಾನು ಅವರಿಗೆ ನಮಸ್ಕರಿಸಿ  ,ಕುಶಲೋಪರಿ  ಮಾತನಾಡಿಸಿ  ಕಳುಹಿಸಿ ಕೊಟ್ಟೆ .ಎಂತಹ  ಶಿಷ್ಯ ಪ್ರೀತಿ ,ಎಂತಹ ಸಂಸ್ಕಾರ .ಆ ಮೇಲೆ ಒಂದೆರಡು ಬಾರಿ ಅವರ ದರ್ಶನ  ಆಗಿತ್ತು .

ಇಂದು ಅವರ ನಿಧನ ವಾರ್ತೆ ನೋಡಿದಾಗ  ಹಳೆಯ ನೆನಪುಗಳು ಬರುತ್ತಿವೆ .

  ಆಚಾರ್ಯ ದೇವೋ ಭಾವ ಎಂಬ ವಾಕ್ಯ ಅನ್ವರ್ಥ ಮಾಡಿದವರು .ಎಂದರೋ ಮಹಾನುಭಾವುಲುಅಂದರಿಕಿವಂದನಮುಲು  .

                         



                                    

                                                                                   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ