ಬೆಂಬಲಿಗರು

ಶನಿವಾರ, ಡಿಸೆಂಬರ್ 31, 2022

 


 ಹಿರಿಯ ರಂಗಕರ್ಮಿ ,ಕೃಷಿಕ ಮತ್ತು ಸಾಹಿತಿ ಶ್ರೀ ಪ್ರಸಾದ್ ರಕ್ಷಿದಿ ಅವರ ಕಳೆದು ಹೋದ ದಿನಗಳು ಫೇಸ್ ಬುಕ್ ನಲ್ಲಿ ಧಾರವಾಹಿ ಆಗಿ ಬರುತ್ತಿದ್ದಾಗ ಓದಿ ಆನಂದಿಸಿ ದವರಲ್ಲಿ ನಾನೂ ಒಬ್ಬ . ಈಗ ಅದು ಪುಸ್ತಕ ರೂಪದಲ್ಲಿ ಬಂದಿದ್ದು ಪುನಃ ಓದುತ್ತಿದ್ದೇನೆ . ಅವರ ಕುಟುಂಬ ಚರಿತ್ರೆಯೊಡನೆ ಭಾರತೀಯರಲ್ಲಿ ಕಾಫಿ ಕೃಷಿ ಬೆಳೆದು ಬಂದ ವಿವರ ಕೂಡಾ ಹಾಸು ಹೊಕ್ಕಾಗಿ ಬಂದಿರುವ ಈ ಕೃತಿಯ ಲ್ಲಿ  ಕೊಡಗು ಮತ್ತು ಸಕಲೇಶಪುರ ಮುಖ್ಯ ಕರ್ಮಭೂಮಿ . ಎರಡೂ ಕಡೆ ಕೆಲಸ ಮಾಡಿದವನಾದ ನನಗೆ ಈ ವಿವರ ಗಳು ಅಪ್ಯಾಯಮಾನ . ಕಾಫಿ ಕೃಷಿಕ, ಉದ್ದಿಮೆ ದಾರರಾಗಿ ದಂತ ಕತೆ ಯಾಗಿರುವ ಸಾಕಮ್ಮ ಅವರ ಸಾಧನೆ ದಾಖಲೀಕರಣ ದಿಂದ ಆರಂಭ . ಗುಂಡು ಕುಟ್ಟಿ ಮಂಜುನಾಥಯ್ಯ ಅವರ ಉಲ್ಲೇಖ ಮಾಸ್ತಿ ವೆಂಕಟೇಶ ಐಯ್ಯಂಗಾರ್ ಮತ್ತು ಶಿವರಾಮ ಕಾರಂತ ರಂಥವರ ಕೃತಿಗಳಲ್ಲಿ ಬರುತ್ತದೆ . ಕಾರಂತರು ತಮ್ಮ ಒಂದು ಕಾದಂಬರಿ ಇವರ ಮನೆಯಲ್ಲಿ ಕುಳಿತೇ ಬರೆದವರು . ಈ ಕೃತಿಯಲ್ಲಿ ಯೂ ಅವರ ಬಹುಮುಖ ಸಾಧನೆಯ ಕಿರು ಪರಿಚಯ ಇದೆ . 

ಸಾಕಮ್ಮ ನವರ ತೋಟದಲ್ಲಿ ಮ್ಯಾನೇಜರ್ ಆಗಿದ್ದ ಗಣಪಯ್ಯ ಹಾರ್ಲೆ ಗಣಪಯ್ಯ ಆದ ಕತೆ ಮುಂದಿನದು . ಸಕಲೇಶ ಪುರದ ಹಾರ್ಲೆ ಎಸ್ಟೇಟ್ ಮತ್ತು ದಶಕಗಳ ಕಾಲ ಅದರ ಒಡೆಯರಾಗಿದ್ದ ಗಣಪಯ್ಯ ಒಂದು ದಂತ ಕತೆ . ಅವರ ಸರಳತೆ,ಶ್ರೀಮಂತಿಕೆ  ,ಸಮಾಜ ಸೇವೆ  ಮತ್ತು ಅತಿಥ್ಯ ಕೇಳಿ ದ್ದ ನನಗೂ ಅವರನ್ನು ಕಾಣುವ ಭಾಗ್ಯ ಒದಗಿತ್ತು . ನಾನು ಸಕಲೇಶ ಪುರದಲ್ಲಿ ರೈಲ್ವೆ ವೈದ್ಯಾಧಿಕಾರಿ ಆಗಿದ್ದಾಗ ಅವರ ಎಸ್ಟೇಟ್ ಡೇ ಗೆ ಕರೆಸಿದ್ದರು .ಅಲ್ಲಿ ಸಿ ಎಂ ಪೂಣಚ್ಚ ಅವರು ,ಮತ್ತು ಗಣಪಯ್ಯ ಅವರ ಪುತ್ರ ಡಾ ರವೀಂದ್ರನಾಥ ಅವರು ತಮ್ಮ ಕಾರ್ಮಿಕ ರೊಂದಿಗೆ ಬೆರೆತು ಸಂತೋಷಿಸುವುದನ್ನು ಕಣ್ಣಾರೆ ನೋಡಿದ ನನಗೆ ರಕ್ಷಿದಿ ಅವರ ಕೃತಿ ಓದುವಾಗ ಹಳೆಯ ನೆನಪುಗಳು ಕಣ್ಣೆದುರು ಬಂತು . ಬಹುಶಃ ಪ್ರಸಾದ್ ಅವರ ನಾಟಕ ಹುಚ್ಚಿಗೂ ಈ ವಾತಾವರಣ ವೇ ಹಾಲು ಎರೆದು ಪೋಷಿಸಿ ರ ಬೇಕು . 

ಈ ಕೃತಿಯಲ್ಲಿ ಸಕಲೇಶಪುರದ ಮತ್ತು ಸುತ್ತಲಿನ  ಪ್ರಸಿದ್ಧ ಎಸ್ಟೇಟ್ ಗಳ  ಕತೆ ಇದೆ . ಕ್ರೌಫೋರ್ಡ್ ,ಅವರ ಹೆಸರಿನ ಆಸ್ಪತ್ರೆ ,ಹಾಲ್ ,ಎತ್ತಿನ ಹಳ್ಳ ,ಹಾಸನ ಮಂಗಳೂರು ರೈಲ್ವೆ ,ಶಾಪ್ ಸಿದ್ದೇಗೌಡ ,ಸಕಲೇಶಪುರ ಹಾಲಿನ ಡೇರಿ ,ಚಳ್ಳೇಕೆರೆ ಸಹಕಾರ ಸಂಘ ,ಅದೇ ಹೆಸರಿನ ಥೀಯೇಟರ್ ಇತ್ಯಾದಿ ಗಳ  ಆಪ್ತ ವಿವರಣೆ ಇವೆ . ಪೂರ್ಣ ಚಂದ್ರ ತೇಜಸ್ವಿ ಅವರ ಒಡನಾಟ ಮತ್ತು ಕಾಫಿ ಡೇ ಸಿದ್ದಾರ್ಥ ನವರ ಕೊಡುಗೆ ಚಿತ್ರಣ ಅಪ್ಯಾಯ ಮಾನ ವಾಗಿವೆ . ಇವುಗಳೆಲ್ಲದರ ಜತೆಗೆ ಲೇಖಕರು ತಮ್ಮ ವೃತ್ತಿ ಮತ್ತು ಪ್ರವೃತ್ತಿ ಬೆಳೆದು ಬಂದ ಬಗೆ ಯ ಬಗ್ಗೆ ಬರೆದಿದ್ದಾರೆ . 

ಡಾ ರವೀಂದ್ರನಾಥ್ ಅವರ ವೈಜ್ಞಾನಿಕ ಮನೋಧರ್ಮ ದ  ಬಗ್ಗೆ ವಿವರ ನನಗೆ ಬಹಳ ಇಷ್ಟ ವಾಯಿತು . ಕೊಂಡು ಓದ ಬೇಕಾದ ಕೃತಿ 

ಶನಿವಾರ, ಡಿಸೆಂಬರ್ 17, 2022

 

ನನ್ನ ಅತ್ತೆ ಅಂದರೆ ಪತ್ನಿಯ ತಾಯಿ  ಮೊನ್ನೆ ಸಂಜೆ ನಿಧನರಾದರು . ಅವರ ಹೆಸರು ಗುಲಾಬಿ . ದೊಡ್ಡ ಕುಟುಂಬ ,ಅವರಿಗೆ ಎಂಟು ಅಕ್ಕ ತಂಗಿ ಯಂದಿರು ,ಒಬ್ಬ ತಮ್ಮ . ನನ್ನ ಮಾವನವರಿಗೆ ಐದು ಮಂದಿ ಸಹೋದರಿಯರು ಮತ್ತು ಇಬ್ಬರು ಸಹೋದರರರು . ಆಗೆಲ್ಲಾ ರಜೆಯಲ್ಲಿ ,ಹಬ್ಬ ಹರಿದಿನಗಳಲ್ಲಿ ಮನೆಗಳು ನೆಂಟರಿಷ್ಟರಿಂದ ತುಂಬಿ ತುಳುಕುತ್ತಿದ್ದ ದಿನಗಳು .ಮನೆಯವರನ್ನು ಮತ್ತು ಅವರೆಲ್ಲರನ್ನೂ ಚಾಕರಿ ಮಾಡಬೇಕು .ಮಿಕ್ಸಿ ಗ್ರೈಂಡರ್ ವಾಷಿಂಗ್ ಮೆಷಿನ್  ಇತ್ಯಾದಿ ಇಲ್ಲದ ದಿನಗಳು . ಇದನೆಲ್ಲಾ ನಗು ನಗುತಾ ಮಾಡಿದವರು ,ಅಂದಿನ ಎಲ್ಲಾ ತಾಯಂದಿರಂತೆ . 

             ಹೀಗೆ ವಯಸ್ಸಾಗಿ ದೇವರ ಪಾದ ಸೇರುವುದು ವಿಶೇಷ ಎಂದು ಬರೆಯುತ್ತಿಲ್ಲ . ಆದರೆ ನಾಲ್ಕೈದು ವರ್ಷಗಳಿಂದ ಅಸೌಖ್ಯದಿಂದ ನೆನಪು ಶಕ್ತಿ ಕಳೆದು ಕೊಂಡು ,ಹೆಚ್ಚು ಕಡಿಮೆ ಹಾಸಿಗೆ ಹಿಡಿದಿದ್ದ ಅವರನ್ನು ಅವರ ಮಗ ರಮೇಶ್ ,ಸೊಸೆ ಹೇಮಾ ಮತ್ತು.ಮೊಮ್ಮಕ್ಕಳು ಮೋನಿಷಾ ,ಮೋಹನ(ಇಬ್ಬರೂ ಇಂಜಿನಿಯರ್ ಗಳು ) ಶ್ರದ್ಧೆ ಯಿಂದ ನೋಡಿಕೊಂಡದ್ದು ಈಗಿನ ಕಾಲದಲ್ಲಿ  ವಿದ್ಯಾವಂತರಲ್ಲಿ ಅಪರೂಪ  . ಹೋಂ ನರ್ಸ್  ,ವೃದ್ದಾಶ್ರಮ ಇತ್ಯಾದಿಗಳ ಆಲೋಚನೆಯೇ ಅವರಿಗೆ ಬರಲಿಲ್ಲ ಎಂಬುದು ವಿಶೇಷ. ಅವರನ್ನು ಎಷ್ಟು ಕೊಂಡಾಡಿದರೂ ಕಡಿಮೆ (ನನ್ನ ನೆಂಟರು ಎಂದು ಬರೆಯುತ್ತಿಲ್ಲ ) . ಮೊಮ್ಮಗಳು ಮೋನಿಷಾ ಳ ಮದುವೆ ೧೮. ೧೨.. ೨೨ ಕ್ಕೆ ನಿಶ್ಚಯ ಆಗಿದ್ದು ,ಕಿರಿಯ ಮಗ ಆಸ್ಟ್ರೇಲಿಯಾ ದಲ್ಲಿ ವೈದ್ಯ ವೃತ್ತಿಯಲ್ಲಿ ಇರುವ ಡಾ ಕಿಶೋರ ಮತ್ತು ಅವರ ಮಕ್ಕಳು ಮೊನ್ನೆ ತಾನೇ ಆಗಮಿಸಿದ್ದು ಅವರನ್ನು ಕಂಡು ,ಜತೆಗೆ ಆಹಾರ ಸೇವಿಸಿದವರು ಅಲ್ಲಿಗೇ ಕಣ್ಣು ಮುಚ್ಚಿದರು .ಹಿಂದಿನ  ಕುಟುಂಬ ಪರಂಪರೆಯ ಒಂದು ಕೊಂಡಿ ಕಳಚಿತು

ಗುರುವಾರ, ಡಿಸೆಂಬರ್ 15, 2022

ಕದನ ಕುತೂಹಲ

 ನಿನ್ನೆ ಹಿರಿಯ ಮಿತ್ರರಾದ ಉಡುಪಿಯ ಶ್ರೀ ಗೋಪಾಲ ಕೃಷ್ಣ ಪ್ರಭು ಅವರು ಚೌಡಯ್ಯ ಮತ್ತು ದೊರೆ ಸ್ವಾಮಿ ಐಯ್ಯಂಗಾರ ಅವರ ಜಂಟಿ ಪ್ರಸ್ತುತಿ 'ರಘುವಂಶ ಸುಧಾ 'ವನ್ನು ಫೇಸ್ ಬುಕ್ ನಲ್ಲಿ ಹಂಚಿ ಕೊಂಡಿದ್ದರು . ನಾನು ಸಂಗೀತ ಪ್ರಿಯನಾದರೂ ಅದರ ಶಾಸ್ತ್ರ ದಲ್ಲಿ ಪಾಮರನು  .( ತಪ್ಪಿದ್ದರೆ ಹೊಟ್ಟೆಗೆ ಹಾಕಿ ಕೊಳ್ಳಿ ),ಈ ಕೃತಿ ಪಟ್ನಮ್ ಸುಬ್ರಹ್ಮಣ್ಯ ಐಯ್ಯರ್ ಅವರ ರಚನೆ .ರಾಗದ ಹೆಸರು ಕದನ ಕುತೂಹಲ . ಶ್ರೀರಾಮನನ್ನು ವರ್ಣಿಸುವ ಕೃತಿ

ರಘುವಂಶ ಸುದಾಂಬುಧಿ ಚಂದ್ರ ಶ್ರೀ ರಾಮ ರಾಮ ರಾಜೇಶ್ವರ

ಅನುಪಲ್ಲವಿ:
ಅಘ ಮೇಘ ಮಾರುತಶ್ರೀಕರ ಅಸುರೇಶ ಮರಿಗಂದ್ರ ವಾರ ಜಗನ್ನಾಥ 
 
ಚರಣ:
ಜಮಾದಗ್ನಿಚ  ಗರ್ವಕಂದನ 
ಜಯರುದ್ರಾದಿ ವಿಸ್ಮಿತಬಂಧನಾ
 
ಕಮಲಾಪ್ತಾ ನ್ವಯಮಂಡನ 
ಅಗಣಿತ ಅದ್ಭುತಶೌರ್ಯ ಶ್ರೀ ವೆಂಕಟೇಶ. 

 ಈ ರಾಗಕ್ಕೆ ಕದನ ಕುತೂಹಲ ಎಂದು ಏಕೆ ಬಂತು ಎಂಬುದು ನನಗೆ ಕುತೂಹಲ . ತಮಿಳರು ಥ ಮತ್ತು ದ ವನ್ನು ಪರಸ್ಪರ ವಿನಿಯೋಗಿಸಿವುದು ಉಂಟು .ಹಾಗೆ ಇದು ಕಥನ ಕುತೂಹಲವೋ ?

ಏನೇ ಇರಲಿ ಈ ಕೃತಿಯನ್ನು ವೇಗ ಗತಿಯಲ್ಲಿ ಪ್ರಸ್ತುತ ಪಡಿಸುವುದು ಸಾಮಾನ್ಯ ,ಕಿವಿಗೆ ಬಿದ್ದೊಡನೆ ಕಚೇರಿಯಲ್ಲಿ ಮಲಗಿದ್ದವರೂ ಎದ್ದು ಕೂರುವರು .ಪಕ್ಕ ವಾದ್ಯದವರು ಕದನ ಕುತೂಹಲಿಗಳಾಗಿ ಕಾದಾಡುವರಂತೆ ನುಡಿಸುವರು .. 
 ಮನೆಯಲ್ಲಿ ಮಡದಿ ಇರುವಾಗ ಈ ರಾಗ ದ ಕೃತಿ ಹಾಕುವುದಿಲ್ಲ ,ಸಾಮವೋ ,ಮಧ್ಯಮಾವತಿಯೂ ಲೇಸು .ಇಲ್ಲದದಿದ್ದರೆ ಕಲಹ ಏರ್ಪಟ್ಟು ಮನೆ ಶಾಂತಿ ಮತ್ತು ಮನಃ ಶಾಂತಿ ಹಾಳಾಗುವ ಅಪಾಯ ಇದೆ . 
 
ಕೆಲವು ಕದನ ಕುತೂಹಲಿ ಗಳು ಇದ್ದಾರೆ . ಅವರ ಬಳಿ ನೀವು ಹ್ಯಾಗಿದ್ದೀರಿ ಎಂದು ಕೇಳಿದರೆ "ಕಣ್ಣು ಕಾಣುವುದಿಲ್ಲವೇ ,ಕೇಳುವುದಕ್ಕೆ ಏನುಂಟು ?',ಅಥವಾ ಏನು ಒಬ್ಬರೇ ,ಮನೆಯವರು ಎಲ್ಲಿ ?ಎಂದು ಕೇಳಿದರೆ "ನಾನು ಬಂದರೆ ಸಾಲದೇ ?ಹಾಗಾದರೆ ನಾನು ವಾಪಸು ಹೋಗುತ್ತೇನೆ "ಎಂದು ಕದನ ಕಾಯಲು ಬರುವವರು .ಇವರಿಗೆ ಕದನ ಕುತೂಹಲಿ ಎನ್ನ ಬಹುದೇನೋ ?
 
ಮಂಡೋಲಿನ್ ಮಾಂತ್ರಿಕ  ಯು ಶ್ರೀನಿವಾಸ್ ನುಡಿಸಿದ ಈ ಕೃತಿ ಕೇಳಲು ಕೆಳಗಿನ ಲಿಂಕ್ ಬಳಸಿರಿ

https://youtu.be/v7q1XbrCSTw

ಗುರುವಾರ, ಡಿಸೆಂಬರ್ 8, 2022

ಒಂದು ಜಿಜ್ನಾಸೆ

 ನನಗೆ ಒಂದನೇ ತರಗತಿಯಿಂದ ಪಿ ಯು ಸಿ ಮುಗಿಯುವ ತನಕ ಅಧ್ಯಾಪಕರು ಮಾತ್ರ ಇದ್ದರು.ಅಧ್ಯಾಪಕಿ ಯರನ್ನು ಕಂಡದ್ದು ಮೊದಲ ಬಾರಿಗೆ ಎಂ ಬಿ ಬಿ ಎಸ್ ಕಲಿಯವಾಗ .ಈ ನಿಟ್ಟಿನಲ್ಲಿ ನಾನು ನತದೃಷ್ಟ .ಅಗೆಲ್ಲಾ ಮಹಿಳೆಯರು ಅಧ್ಯಾಪಕ ವೃತ್ತಿಗೆ ಬರುತ್ತಿದ್ದುದು ಕಡಿಮೆ . ಮುಖ್ಯವಾಗಿ ಪ್ರಾಥಮಿಕ ತರಗತಿಗಳಿಗೆ ಮಹಿಳಾ ಅಧ್ಯಾಪಕರೇ ಹೆಚ್ಚು ಸೂಕ್ತ ಎಂಬುದು ನನ್ನ ವೈಯುಕ್ತಿಕ ಅಭಿಪ್ರಾಯ .

ಇರಲಿ,ಇಲ್ಲಿ ವಿಷಯ ಅದಲ್ಲ .ಪುರುಷ ಅಧ್ಯಾಪಕರನ್ನು ಮಾಸ್ಟ್ರು ಎಂದು ಮತ್ತು ಅಧ್ಯಾಪಕಿಯರನ್ನು ಟೀಚರ್ ಎಂದು ಕರೆಯಲು ಕಾರಣವೇನು ಎಂದು ನನಗೆ ಇನ್ನೂ ತಿಳಿದಿಲ್ಲ .ಟೀಚರ್ ಎಂಬುದು ಸ್ತ್ರೀ ಲಿಂಗ ಅಲ್ಲ .ಇದು ನಮ್ಮಲ್ಲಿ ಮಾತ್ರ ಅಲ್ಲ  ಪಕ್ಕದ ರಾಜ್ಯ ಕೇರಳದಲ್ಲಿಯೂ ವ್ಯಾಪಕ ಬಳಕೆಯಲ್ಲಿ ಇದೆ .ಇಲ್ಲಿಯ ವಿಶೇಷ ಎಂದರೆ ಅಧ್ಯಾಪಕರಾಗಿ ಕೆಲವು ವರ್ಷಗಳಲ್ಲಿ ಮಾಸ್ಟರ್ ಮತ್ತು ಟೀಚರ್ ಎಂಬ ಉಪಾಧಿ ಹೆಸರಿಗೆ ಅಧಿಕೃತವಾಗಿ ಸೇರುವುದು . ಉದಾಹರಣೆಗೆ ಜನಪ್ರಿಯ ಆರೋಗ್ಯ ಮಂತ್ರಿ ಆಗಿದ್ದ ಶೈಲಜಾ ಟೀಚರ್ ,ಎಂ ಎಲ್ ಎ ಆಗಿದ್ದ ರಾಮಪ್ಪ ಮಾಸ್ಟರ್ ಇತ್ಯಾದಿ . ಇದಲ್ಲದೆ ಹಿರಿಯ ಮಿತ್ರರನ್ನು ಪ್ರೀತಿಯಿಂದ ಮಾಸ್ಟ್ರೆ ಅಥವಾ ಅದರ ಅಪಭ್ರಂಶ ಮಾಷೇ ಎಂದು ಕರೆಯುವುದುಂಟು .ಮಲೆಯಾಳದ ಪ್ರಸಿದ್ದ ಸಂಗೀತ ನಿರ್ದೇಶಕ ರಾಗಿದ್ದ ಹಲವರು ತಮ್ಮ ಹೆಸರಿನೊಡನೆ ಮಾಸ್ಟ್ರು ಪಟ್ಟ ಗಳಿಸಿದವರು .ಉದಾ ಜಾನ್ಸನ್ ಮಾಸ್ಟ್ರು ,ರವೀಂದ್ರನ್ ಮಾಷ್ಟ್ರು.ಅದೇ ದಕ್ಷಿಣಾ ಮೂರ್ತಿ ಯವರು ದಕ್ಷಿಣಾ ಮೂರ್ತಿ ಸಾರ್ ಎಂದು ಕರೆಯಲ್ಪಡುವರು .ಯಕ್ಷಗಾನ ನೃತ್ಯ ಅಧ್ಯಾಪಕರಾಗಿ ಹೆಸರು ಗಳಿಸಿದ ಉಪ್ಪಳ ಕೃಷ್ಣ ಮಾಸ್ಟರ್ ಮತ್ತು ಕನ್ಯಾನ ಕೇಶವ ಮಾಸ್ಟೆರ್ ಅವರನ್ನೂ ಇಲ್ಲಿ ಸೇರಿಸ ಬಹುದು .

ಬುಧವಾರ, ಡಿಸೆಂಬರ್ 7, 2022

ಎರಡು ಮಾರಣಾಂತಿಕ ಹೃದಯ ಕಂಪನಗಳು

 ನಿಮಗೆ ತಿಳಿದಿರುವಂತೆ ಹೃದಯಾಘಾತ ಎಂದರೆ  ಹೃದಯಕ್ಕೆ ರಕ್ತ ಸರಬರಾಜು ಮಾಡುವ ರಕ್ತ ನಾಳಗಳು ಕೊಲೆಸ್ಟರಾಲ್ ಮತ್ತು ರಕ್ತ ದ  ಹೆಪ್ಪು ಗಳಿಂದ ಬಂದ್ ಆಗಿ ಹೃದಯದ ಮಾಂಸ ಖಂಡಗಳ ಸಾವು . ಇದರಲ್ಲಿ ಎರಡು ರೀತಿಯ ಸಾವು ಸಂಭವಿಸ ಬಹುದು .ಒಂದು ಭಾರೀ ಹೃದಯಾಘಾತ ಅಂದರೆ ಮುಖ್ಯ ರಕ್ತ ನಾಳ ಬಂದ್ ಆಗಿ ಹೃದಯದ ಬಹುತೇಕ ಮಾಂಸ ಖಂಡಗಳು ನಿಷ್ಕ್ರಿಯ ಗೊಂಡು ಮೆದುಳಿಗೆ ರಕ್ತ ಪಂಪ್ ಆಗದೆ ಸಾವು ಸಂಭವಿಸುವುದು . ಇನ್ನೊಂದು ಹೃದಯದ ಯದ್ವಾ ತದ್ವಾ ಕಂಪನ . ಇಲ್ಲಿ ಹೃದಯ ಕ್ರಮ ಪ್ರಕಾರ ಸಂಕುಚನ ಮತ್ತು ವಿಕಸನ ಆಗದೆ ಬರೀ ಕಂಪಿಸುವುದರಿಂದ ರಕ್ತ ಪಂಪ್ ಆಗದೆ ಅಪಾಯ ಆಗುವುದು ,

                       ಎರಡನೇ ಕಾರಣ ವನ್ನು ವೆಂಟ್ರಿಕ್ಯುಲರ್ ಫೈಬ್ರಿಲ್ಲೇಶನ್ ಎನ್ನುತ್ತ್ತಾರೆ . ಇದು ಹೃದಯಾಘಾತ ದಲ್ಲಿ ಎರಡು ಬಾರಿ ಉಂಟಾಗ ಬಹುದು . ಮೊದಲನೆಯದಾಗಿ ಹೃದಯದ ರಕ್ತ ನಾಳ ಅಥವಾ ಕೊರೋನರಿ ಆರ್ಟರಿ  ಬ್ಲಾಕ್ ಆದಾಗ ರಕ್ತ ಸರಬರಾಜು ಹಠಾತ್ ನಿಂತ ಕಾರಣ ನೋವು ಉಂಟಾಗುವುದಲ್ಲದೆ , ಹೃದಯದ ಮಾಂಸ ಖಂಡಗಳು ಬಹಳ ಸಂಕಟದಿಂದ  ಯದ್ವಾ ತದ್ವಾ ಕುಣಿಯುವುದು . ಇನ್ನೊಂದು ಆಸ್ಪತ್ರೆಯಲ್ಲಿ  ಹೃದಯಾಘಾತಕ್ಕೆ ಚುಚ್ಚು ಮದ್ದು ಅಥವಾ  ಆಂಜಿಯೋಪ್ಲಾಸ್ಟಿ ಮೂಲಕ ಚಿಕಿತ್ಸೆ ಮಾಡಿದಾಗ ಬಂದ್ ಅದ ರಕ್ತ ಸರಬರಾಜು ಪುನಃ ಸ್ಥಾಪನೆ ಗೊಂಡಿತು ಎಂದು ಸಂತಸದಿಂದ ಮಾಂಸ ಖಂಡಗಳು ಹುಚ್ಚೆ ದ್ದು  ಕುಣಿದು ಕಂಪಿಸುವುದು .ಇದನ್ನು ರಿ ಪರ್ಫ್ಯುಷನ್ ಎರಿತ್ಮಿಯಾ ಎನ್ನುವರು .ಎರಡು ಕಂಪನದ ಪರಿಣಾಮವೂ ಒಂದೇ ಮತ್ತು ಪ್ರಾಣಾಂತಿಕ .  ಹೃದಯಕ್ಕೆ  ನೇರ ವಿದ್ಯುತ್ ಶಾಕ್(ಡಿ ಸಿ ಶಾಕ್ ) ಕೊಟ್ಟು ಕಂಪನವನ್ನು ಅಕಂಪನ ಅಥವಾ ಡಿಫೈಬ್ರಿಲ್ಲೇಶನ್ ಮಾಡುವರು . ಕೆಲವು ಬಾರಿ ಇದೂ ವಿಫಲ ಆಗುವದು ಇದೆ

ಮಂಗಳವಾರ, ಡಿಸೆಂಬರ್ 6, 2022

ಒಳ್ಳೆಯ ಚಹಾ ದ ಬೆನ್ನು ಹತ್ತಿ

ಬಾಲ್ಯದಲ್ಲಿ  ನಮಗೆ ಕುಡಿಯಲು ಚಾ ಕಾಫಿ  ಕೊಡುತ್ತಿರಲಿಲ್ಲ .ಆರೋಗ್ಯಕ್ಕೆ ಹಾನಿಕಾರಕ ,ಉಷ್ಣ ಎಂದು . ತಿಂಡಿಯೊಡನೆ ಕುಡಿಯಲು ಕೊತ್ತಂಬರಿ ಕಷಾಯ .ಬೆಲ್ಲ ಹಾಕಿದ್ದು . ನಾವು ಮನಸಿಲ್ಲದ ಮನಸಿನಲ್ಲಿ ಅದನ್ನು ಕುಡಿಯುತ್ತಿದ್ದು ಯಾವಾಗ ಕಾಫಿಗೆ ಪ್ರಮೋಷನ್ ಸಿಗುವುದೋ ಎಂದು ಕನಸು ಕಾಣುತ್ತಿದ್ದೆವು . ಬೆಳಿಗ್ಗೆ ಬಿಸಿ ಕಷಾಯ ಸಿಗುತ್ತಿದ್ದರೂ ಸಾಯಂಕಾಲ ಶಾಲೆಯಿಂದ ಬರುವಾಗ ಅದು ತಣಿದು ಕೋಡಿರುತ್ತಿತ್ತು . ಅದರ ಮೇಲ್ಪದರದಲ್ಲಿ ಹಾಲಿನ ಕೆನೆ ,ಕೆಲವೊಮ್ಮೆ ಅರೆ ಜೀವಂತ ನೊಣ. ಶಾಲೆಯಿಂದ ಬಂದೊಡನೆ ಏನಾದರೂ ತಿಂದು ಕುಡಿದು ಆಟಕ್ಕೆ ಹೋಗುವ ಧಾವಂತದಲ್ಲಿ ನಮಗೆ ಅವುಗಳ ಬಗ್ಗೆ ಗಮನ ಕಡಿಮೆ ಇದ್ದುದರಿಂದ ಹೇಗೋ ನಡೆಯುತ್ತಿತ್ತು . 

ಮುಂದೆ ಹೈ ಸ್ಕೂಲ್ ಗೆ ಬಂದಾಗ ನಮಗೆ ಕಾಪಿ ಸೇವಿಸುವ ಅನುಮತಿ ಸಿಕ್ಕಿತು .ಬೆಲ್ಲದ ಕಾಫಿ .ಆಗೆಲ್ಲಾ   ವೇಯಿಟರ್ ಕಾಪಿ ಎಂಬ ಬ್ರಾಂಡ್ ಜನಪ್ರಿಯ ಆಗಿತ್ತು . ಹೇಗೆ ಕಾಪಿ ಪ್ರಿಯನಾದ ನಾನು ಎಂ ಬಿ ಬಿ ಎಸ ಕಲಿಯಲು ಹುಬ್ಬಳ್ಳಿಗೆ ಹೋದಾಗ ತಾಪತ್ರಯ ಉಂಟಾಯಿತು .ಅಲ್ಲಿ ಹಾಸ್ಟೆಲ್ ನಲ್ಲಿ ಚಹಾ ಮಾತ್ರ ,ಕಾಪಿ ಇಲ್ಲ .ಇನ್ನು ಹೊರಗೆ ಹೋಟೆಲ್ ಗಳಲ್ಲಿ ಕೂಡಾ ಒಳ್ಳೆಯ ಕಾಫಿ ಸಿಗುತ್ತಿರಲಿಲ್ಲ . ಹೀಗೆ ನಾನು ಚಹಾ ಪಕ್ಷಕ್ಕೆ ಪಕ್ಷಾಂತರ ಮಾಡ ಬೇಕಾಯಿತು . ಬೇಂದ್ರೆಯವರು ಕೂಡಾ ಚಹಾದ ಕೂಡಾ ಚೂಡಾ ದಾಂಗ ಎಂದು ಹುಬ್ಬಳ್ಳಿಯವನನ್ನು ಕರೆದಿದ್ದಾರೆ . ನಮ್ಮಲ್ಲಿ ಅದನ್ನು ಸಜ್ಜಿಗೆ ಬಜಿಲಿನೊಡನೆ ಕಾಫಿ ಯಾಂಗೆ ಎಂದು ಮಾರ್ಪಡಿಸಿ ಕೊಳ್ಳ ಬಹುದು . 

ಚಹಾ ದ  ಬ್ರಾಂಡ್ ಮಾತ್ರ ಬದಲಿಸುತ್ತಲೇ ಇದ್ದ ನನಗೆ  ೧೯೮೯ ರಲ್ಲಿ ಮಂಗಳೂರಿಗೆ ವರ್ಗವಾಗಿ ಬಂದಾಗ ನಮ್ಮ ಬಿಡಾರಕ್ಕೆ ಸಮೀಪ ಮೈದಾನ್ ರಸ್ತೆಯಲ್ಲಿ  ಇದ್ದ ಎಂ  ಪಾಯ್ಸ್ ವೈನ್ ಸ್ಟೋರ್  ನಲ್ಲಿ ಒಳ್ಳೆಯ ಚಹಾ ಪುಡಿ ಮಿತ ದರದಲ್ಲಿ ಸಿಗುವ ಸುದ್ದಿ ತಿಳಿದು ಬಂತು . ಅಲ್ಲಿ ಆಗ ಅದು ಎಸ್ಟೇಟ್ ನಿಂದ ಫ್ರೆಶ್ ಆಗಿ ಬರುತ್ತಿತ್ತು ,ಬಂದ ದಿನ  ವೈನ್ ಸ್ಟೋರ್ ನ  ಎದುರು  ಚಹಾ ಪುಡಿ ಲಭ್ಯ ಎಂದು ಬೋರ್ಡ್ ಹಾಕುತ್ತಿದ್ದರು . ಲೂಸ್ ಚಹಾ ಪುಡಿ ,ಅದನ್ನು ಅರ್ಧ ,ಒಂದು ಕಿಲೋ ಕಟ್ಟು ಮಾಡಿ ಇಡುತ್ತಿದ್ದು ,ಒಂದೆರಡು ದಿನದಲ್ಲಿ ಖಾಲಿ ಆಗುತ್ತಿತ್ತು . ಎಷ್ಟೋ ಬಾರಿ ನಿರಾಸೆಯಿಂದ ಬರಿ ಗೈಲಿ ಬಂದದ್ದು ಇದೆ .ಕೆಲವೊಮ್ಮೆ ಪಕ್ಕದ Campco ದಲ್ಲಿ ಉದ್ಯೋಗಿ ಯಾಗಿದ್ದ ನನ್ನ ಅಣ್ಣ ನನಗೆ ತಂದು ಕೊಟ್ಟದ್ದು ಇದೆ.ಈ ಚಹಾ ಎಲೆ ಕುಡಿಸುವಾಗಲೇ ಒಳ್ಳೆಯ ಪರಿಮಳ  .(ಇದೇ ರೀತಿ ಆಗ ಪೇಟೆಯಲ್ಲಿ ದುರ್ಲಭವಾಗಿದ್ದ ಹಾಲು ಕೂಡಾ ತಂದು ಕೊಡುತ್ತಿದ್ದ ). ಈಚಲು ಮರದ ಕೆಳಗೆ ಮಜ್ಜಿಗೆ ಕುಡಿದರೂ ------ಎಂಬ ಗಾದೆ ನೀವು ಕೇಳಿರ ಬಹುದು . ಹಾಗೆ ವೈನ್ ಸ್ಟೋರ್ ನಿಂದ ಚಹಾ ಪುಡಿ ಎಂದು ನೀವು ಯೋಚಿಸುತ್ತಿರ ಬಹು ದು . ಫಾಯ್ಸ್ ಟ್ರೇಡರ್ಸ್ ಅವರು ಗುಣ ಮಟ್ಟಕ್ಕೆ ಪ್ರಸಿದ್ಧ ರಾದವರು ,ಈಗಲೂ ಕೂಡಾ ಅಲ್ಲಿ ಚಹಾ ಪುಡಿ ಸಿಗುತ್ತಿರ ಬೇಕು . ಬ್ರಾಂಡೆಡ್ ಪ್ಯಾಕೆಟ್ ನಲ್ಲಿ .ಪಕ್ಕದಲ್ಲಿ ಅವರ ಜನರಲ್ ಸ್ಟೋರ್ ಕೂಡಾ ಇದೆ .

ಮುಂದೆ ಒಮ್ಮೆ ಊಟಿ ಪ್ರವಾಸಕ್ಕೆ ಹೋದಾಗ ಅಲ್ಲಿ ನೋನ್ ಸಚ್  ಟೀ ಪರಿಚಯ ಆಯಿತು . ರೈಲ್ವೆ ಯಲ್ಲಿ ಊಟಿ ಕಡೆಯ ನೌಕರರ ಮೂಲಕ ಅದನ್ನು ತರಿಸುತ್ತಿದ್ದೆ . ಮುಂದೆ ಚೆನ್ನೈ ಗೆ ಹೋದಾಗ ಒಂದು ದಿನ  ವಸ್ತು ಪ್ರದರ್ಶನ ಮೈದಾನದಲ್ಲಿ  ತಮಿಳುನಾಡು ಟೀ ಪ್ಲಾಂಟೇಶನ್ ನವರ ಸ್ಟಾಲ್ ನಲ್ಲಿ  ಟೈಗರ್ ಬ್ರಾಂಡ್ ನ ಟ್ಯಾನ್ ಟೀ ರುಚಿ ನೋಡಿ ಕಡಿಮೆ ಬೆಲೆ ಮತ್ತು ಒಳ್ಳೆಯ ಸ್ವಾದದ ಅದಕ್ಕೆ ಮಾರು ಹೋದೆವು .ಆದರೆ ಅದು ಅಂಗಡಿಗಳಲ್ಲಿ ಸಿಗುತ್ತಿರಲಿಲ್ಲ . ಸೆಕ್ರೆಟೇರಿಯಟ್  ಬಳಿ ಅವರ ಸಣ್ಣ ಔಟ್ಲೆಟ್ ಇತ್ತು ಅಲ್ಲಿ ಹೋಗಿ ತರುವುದು . ಪುನಃ ಮಂಗಳೂರಿಗೆ ಬಂದಾಗ ಫಾಯ್ಸ್ ಅಂಗಡಿಯ ಸಿಲ್ವರ್ ಕ್ಲೌಡ್ ಚಹಾ . 

 ಈಗ ದೇವಗಿರಿ ಅವರ ಲೀಫ್ ಚಹಾ ಉಪಯೋಗಿಸುತ್ತಿದ್ದು ಅದು ಪುತ್ತೂರಿನ ಒಂದೆರಡು ಅಂಗಡಿಗಳಲ್ಲಿ ಲಭ್ಯವಿದ್ದು ಸ್ವಾದ ಚೆನ್ನಾಗಿದೆ .

ಶುಕ್ರವಾರ, ಡಿಸೆಂಬರ್ 2, 2022

ಸೆಪ್ಟಿಕ್ ಇಂಜೆಕ್ಷನ್

 ಇವತ್ತು ಒಬ್ಬರು ತಮ್ಮ ತಾಯಿಯನ್ನು ಕರೆದುಕೊಂಡು ಬಂದಿದ್ದರು.ಅವರ ಕೈಗೆ ಮುಳ್ಳು ಚುಚ್ಚಿ ಸೆಪ್ಟಿಕ್ ಆಗಿತ್ತು . ಮುಳ್ಳು ಚುಚ್ಚಿದ ದಿನವೇ ತಾವು ಸೆಪ್ಟಿಕ್ ಚುಚ್ಚು ಮದ್ದು ಕೊಡಿಸಿದ್ದರೂ ಗಾಯ ಹೇಗೆ ಸೋಂಕು ನಂಜು ಆಯಿತು ಎಂದು ಅವರಿಗೆ ಆಶ್ಚರ್ಯ . ಗಾಯವಾದಾಗ ಸಾಮಾನ್ಯವಾಗಿ ಕೊಡುವುದು ಟಿಟಿ ಇಂಜೆಕ್ಷನ್ ಅಥವಾ ಧನುರ್ವಾಯು ನಿರೋಧಕ ಚುಚ್ಚು ಮದ್ದು .ಧನುರ್ವಾತ ಒಂದು ಪ್ರಾಣಾಂತಿಕ ರೋಗವಾಗಿದ್ದು ಕ್ಲಾಸ್ಟ್ರಿಡಿಯಂ ಟೆಟನಿ ಎಂಬ ಬ್ಯಾಕ್ಟೀರಿಯಾ ದಿಂದ ಉಂಟು ಆಗುವುದು .ಅದನ್ನು ತಡೆಗಟ್ಟಲು ಮಾತ್ರ ಈ ಲಸಿಕೆಗೆ ಸಾಧ್ಯ .ಅಗ್ನಿ  ಅಸ್ತ್ರಕ್ಕೆ ಮಾತ್ರ ವರುಣಾಸ್ತ್ರ ಕೆಲಸ ಮಾಡುವಂತೆ .ಉಳಿದ ಹಲವಾರು ಸುಪ್ರಸಿದ್ಧ ಮತ್ತು ಕುಪ್ರಸಿದ್ಧ ಬ್ಯಾಕ್ಟೀರಿಯಾ ಗಳೂ ಇವೆಯಷ್ಟೆ .ಗಾಯ ಆದೊಡನೆ ಅವು ಅದರ ಮೂಲಕ ತಮ್ಮ ಕಾರ್ಯಾಚರಣೆ ಆರಂಭಿಸುತ್ತವೆ .ಕೂಡಲೇ ಬಿಳಿ ರಕ್ತ ಕಣಗಳು ಧಾವಿಸಿ ಅವುಗಳೊಡನೆ  ಹೋರಾಡುತ್ತವೆ .ಹುತಾತ್ಮ  ರಕ್ತ ಕಣಗಳು ,ಸತ್ತ ರೋಗಾಣು ,ಇವುಗಳ ಹೋರಾಟದಲ್ಲಿ ಸಿಕ್ಕಿ ಹತವಾದ ಜೀವಕೋಶಗಳು ಸೇರಿ ಕೀವು ಆಗುತ್ತದೆ . ಅಲ್ಲಿ ಉತ್ಪತ್ತಿ ಆದ ರಾಸಾಯನಿಕಗಳು ನರತಂತು ಗಳನ್ನು ಎಚ್ಚರಿಸಿ ನೋವು ಎಂಬ ಸಾಮಾನ್ಯ ಎಸ ಎಮ್ ಎಸ್ ಮೆದುಳಿಗೆ ರವಾನಿಸಿ ನಾವು ಕಾರ್ಯ ತತ್ಪರ ಆಗುವಂತೆ ಮಾಡುತ್ತವೆ . ಸಕ್ಕರೆ ಕಾಯಿಲೆ ರೋಗಿಗಳಲ್ಲಿ ಕೆಲವರಿಗೆ ಸ್ಪರ್ಶ ಜ್ಞಾನ ಇರುವುದಿಲ್ಲ ,ಆಗ ನಮ್ಮ ಅರಿವಿಗೆ ಬಾರದೆ ಸೋಂಕು ಏರುತ್ತದೆ . ಸಕ್ಕರೆ ಕಾಯಿಲೆ ಹತೋಟಿಯಲ್ಲಿ ಇಲ್ಲದದಿದ್ದರೂ ರೋಗಾಣುಗಳಿಗೆ ಸಂತಸ .ಕಾದಾಟದಲ್ಲಿ ಅವುಗಳ ಕೈ ಮೇಲಾಗುವುದು . ಇಂತಹ ಸಂದರ್ಭದಲ್ಲಿ ನಾವು ಯೋಗ್ಯ ಆಂಟಿಬಯೋಟಿಕ್ ಕೊಟ್ಟು ಸೋಂಕು ನಂಜನ್ನು ಹತೋಟಿಗೆ ತರಲು ಯತ್ನಿಸುತ್ತೇವೆ .