ಬೆಂಬಲಿಗರು

ಶುಕ್ರವಾರ, ಡಿಸೆಂಬರ್ 2, 2022

ಸೆಪ್ಟಿಕ್ ಇಂಜೆಕ್ಷನ್

 ಇವತ್ತು ಒಬ್ಬರು ತಮ್ಮ ತಾಯಿಯನ್ನು ಕರೆದುಕೊಂಡು ಬಂದಿದ್ದರು.ಅವರ ಕೈಗೆ ಮುಳ್ಳು ಚುಚ್ಚಿ ಸೆಪ್ಟಿಕ್ ಆಗಿತ್ತು . ಮುಳ್ಳು ಚುಚ್ಚಿದ ದಿನವೇ ತಾವು ಸೆಪ್ಟಿಕ್ ಚುಚ್ಚು ಮದ್ದು ಕೊಡಿಸಿದ್ದರೂ ಗಾಯ ಹೇಗೆ ಸೋಂಕು ನಂಜು ಆಯಿತು ಎಂದು ಅವರಿಗೆ ಆಶ್ಚರ್ಯ . ಗಾಯವಾದಾಗ ಸಾಮಾನ್ಯವಾಗಿ ಕೊಡುವುದು ಟಿಟಿ ಇಂಜೆಕ್ಷನ್ ಅಥವಾ ಧನುರ್ವಾಯು ನಿರೋಧಕ ಚುಚ್ಚು ಮದ್ದು .ಧನುರ್ವಾತ ಒಂದು ಪ್ರಾಣಾಂತಿಕ ರೋಗವಾಗಿದ್ದು ಕ್ಲಾಸ್ಟ್ರಿಡಿಯಂ ಟೆಟನಿ ಎಂಬ ಬ್ಯಾಕ್ಟೀರಿಯಾ ದಿಂದ ಉಂಟು ಆಗುವುದು .ಅದನ್ನು ತಡೆಗಟ್ಟಲು ಮಾತ್ರ ಈ ಲಸಿಕೆಗೆ ಸಾಧ್ಯ .ಅಗ್ನಿ  ಅಸ್ತ್ರಕ್ಕೆ ಮಾತ್ರ ವರುಣಾಸ್ತ್ರ ಕೆಲಸ ಮಾಡುವಂತೆ .ಉಳಿದ ಹಲವಾರು ಸುಪ್ರಸಿದ್ಧ ಮತ್ತು ಕುಪ್ರಸಿದ್ಧ ಬ್ಯಾಕ್ಟೀರಿಯಾ ಗಳೂ ಇವೆಯಷ್ಟೆ .ಗಾಯ ಆದೊಡನೆ ಅವು ಅದರ ಮೂಲಕ ತಮ್ಮ ಕಾರ್ಯಾಚರಣೆ ಆರಂಭಿಸುತ್ತವೆ .ಕೂಡಲೇ ಬಿಳಿ ರಕ್ತ ಕಣಗಳು ಧಾವಿಸಿ ಅವುಗಳೊಡನೆ  ಹೋರಾಡುತ್ತವೆ .ಹುತಾತ್ಮ  ರಕ್ತ ಕಣಗಳು ,ಸತ್ತ ರೋಗಾಣು ,ಇವುಗಳ ಹೋರಾಟದಲ್ಲಿ ಸಿಕ್ಕಿ ಹತವಾದ ಜೀವಕೋಶಗಳು ಸೇರಿ ಕೀವು ಆಗುತ್ತದೆ . ಅಲ್ಲಿ ಉತ್ಪತ್ತಿ ಆದ ರಾಸಾಯನಿಕಗಳು ನರತಂತು ಗಳನ್ನು ಎಚ್ಚರಿಸಿ ನೋವು ಎಂಬ ಸಾಮಾನ್ಯ ಎಸ ಎಮ್ ಎಸ್ ಮೆದುಳಿಗೆ ರವಾನಿಸಿ ನಾವು ಕಾರ್ಯ ತತ್ಪರ ಆಗುವಂತೆ ಮಾಡುತ್ತವೆ . ಸಕ್ಕರೆ ಕಾಯಿಲೆ ರೋಗಿಗಳಲ್ಲಿ ಕೆಲವರಿಗೆ ಸ್ಪರ್ಶ ಜ್ಞಾನ ಇರುವುದಿಲ್ಲ ,ಆಗ ನಮ್ಮ ಅರಿವಿಗೆ ಬಾರದೆ ಸೋಂಕು ಏರುತ್ತದೆ . ಸಕ್ಕರೆ ಕಾಯಿಲೆ ಹತೋಟಿಯಲ್ಲಿ ಇಲ್ಲದದಿದ್ದರೂ ರೋಗಾಣುಗಳಿಗೆ ಸಂತಸ .ಕಾದಾಟದಲ್ಲಿ ಅವುಗಳ ಕೈ ಮೇಲಾಗುವುದು . ಇಂತಹ ಸಂದರ್ಭದಲ್ಲಿ ನಾವು ಯೋಗ್ಯ ಆಂಟಿಬಯೋಟಿಕ್ ಕೊಟ್ಟು ಸೋಂಕು ನಂಜನ್ನು ಹತೋಟಿಗೆ ತರಲು ಯತ್ನಿಸುತ್ತೇವೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ