ಬೆಂಬಲಿಗರು

ಬುಧವಾರ, ಜೂನ್ 30, 2021

ಮರೆಯಲಾಗದ ಮಹನೀಯರು ಶ್ರೀ ಆರ್ ಎನ್ ಶೆಟ್ಟಿ

 

                      
www.tvdaijiworld.com/images6/allwyn_171220_rnsh...

 

ಹದಿಮೂರು ವರ್ಷ ರೈಲ್ವೆ ಸೇವೆ ಮಾಡಿದ ನನಗೆ ಪೆನ್ಷನ್ ಪಡೆಯುವ ಅರ್ಹತೆ ಇರಲಿಲ್ಲ . ಕೆ ಎಸ ಹೆಗ್ಡೆ ಮೆಡಿಕಲ್ ಕಾಲೇಜು ಸೇರಿ ,ಹೊಸ ಸಂಸ್ಥೆಯೊಡನೆ ಬೆಳೆಯುವ ಅವಕಾಶ . ಕಾಲೇಜು ಇನ್ನೂ ಆರಂಭವಾದ ಕಾರಣ ನಮ್ಮ ಸಹಾಯಕ್ಕೆ ಪಿ ಜಿ ,ಹೌಸ್ ಸರ್ಜನ್ಸ್ ಇರಲಿಲ್ಲ .ರೆಸಿಡೆಂಟ್ಸ್ ಎಂದು ಕೆಲವು ತರುಣ ವೈದ್ಯರು ಇದ್ದರು . ರೋಗಿಗಳ ದೇಖೆ ರೇಖೆ ಜವಾಬ್ದಾರಿ ನೇರವಾಗಿ ನಮ್ಮ ಹೆಗಲಿಗೆ . ಕಾಲೇಜು ಸಮಯದ ನಂತರ ಹೊರಗಡೆ ಪ್ರಾಕ್ಟೀಸ್ ಮಾಡಲು ಅನುಮತಿ ಇತ್ತು . ಆದರೆ ಕಾಲ್ ಡ್ಯೂಟಿ ಆಗಾಗ ಇರುತ್ತಿದ್ದು ಮಂಗಳೂರಿನಲ್ಲಿ ಪ್ರಾಕ್ಟೀಸ್ ನಡೆಸಿ ಒಳರೋಗಿಗಳನ್ನು ಅಡ್ಮಿಟ್ ಮಾಡಿದರೆ ಎರಡು ದೋಣಿಯಲ್ಲಿ ಕಾಲು ಇಟ್ಟಂತೆ ,ಎರಡು ಕಡೆಯೂ ನ್ಯಾಯ ಒದಗಿಸಲಾಗದ ಅವಸ್ಥೆ . ಸಂಸ್ಥೆ ಇನ್ನೂ ಆರಂಭದ ದಿನಗಳಲ್ಲಿ ಇದ್ದುದರಿಂದ ಒಳ್ಳೆಯ ಸಂಬಳ ನಿರೀಕ್ಷಿಸುವಂತೆ ಇರಲಿಲ್ಲ . ಆದರೂ ಆರಂಭದ ವರ್ಷಗಳು ನಿಜಕ್ಕೂ ತುಂಬಾ ಸಂತೋಷ ತಂದುವು .ವೈದ್ಯ ವೈದ್ಯರ ನಡುವೆ ,ವೈದ್ಯ ಸಿಬ್ಬಂದಿ ನಡುವೆ ಅನ್ಯೋನ್ಯತೆ ಇತ್ತು . ಒಂದು ರಾತ್ರಿ ನಾನು ಸ್ತ್ರೀ ರೋಗ ತಜ್ಞರಿಗೆ ಸಿಸೇರಿಯನ್ ಗೆ ಅಸಿಸ್ಟ್ ಮಾಡಿದ್ದೆನು . ದಿನ ನಿತ್ಯದ ಕಾರ್ಯಗಳಲ್ಲಿ ತುಂಬಾ ಸ್ವಾತಂತ್ರ್ಯ ಇತ್ತು . 

                      ಸಂಬಳ ಸಾರಿಗೆ ಮಟ್ಟಿಗೆ ರೈಲ್ವೆ ಹುದ್ದೆಗಿಂತ ಕೆಳಗೆ ಜಾರಿದ್ದೆನು . ಮಂಗಳೂರಿನಲ್ಲಿ ಸ್ವಂತಃ ಫ್ಲಾಟ್ ಇದ್ದುದು ಸ್ವಲ್ಪ ಸಮಾಧಾನ .ಆದರೂ ಮೂರು ವರ್ಷಗಳಲ್ಲಿ ನನ್ನ ಬ್ಯಾಂಕ್ ಬ್ಯಾಲೆನ್ಸ್ ಸಮಾಧಾನ ಕರ ಇರಲಿಲ್ಲ . ಅದೇ ಸಮಯಕ್ಕೆ ಹಿಂದೆ ನಾನು ರಿಜಿಸ್ಟರ್ ಮಾಡಿದ್ದ ಮಧ್ಯ ಪ್ರಾಚ್ಯದ ಸರಕಾರಿ ವೈದ್ಯಕೀಯ ವಿಭಾಗ ನನ್ನನ್ನು ಕರೆಯಿತು .ನನಗೂ ಹೊಸ ಊರು ,ಜನ ಮತ್ತು ಸಂಸ್ಕೃತಿ  ಅಧ್ಯಯನದಲ್ಲಿ ಆಸಕ್ತಿ ಇದ್ದುದರಿಂದ ಒಪ್ಪಿಕೊಂಡು ದೇಶ ಬಿಟ್ಟೆ . ಮೊದಲ ವರ್ಷ ದ  ರಜೆ ಮುಗಿಸಿ ಹಿಂತೆರಳುವಾಗ ಪತ್ರಿಕೆ ಮೂಲಕ ಮುರುಡೇಶ್ವರದಲ್ಲಿ ಉದ್ಯಮಿ  ಶ್ರೀ ಆರ್ ಏನ್ ಶೆಟ್ಟಿ ಅವರು ಒಂದು ಆಸ್ಪತ್ರೆ ಆರಂಭಿಸುವರು ,ಮತ್ತು ಅದಕ್ಕೆ ವೈದ್ಯರ ಅವಶ್ಯಕತೆ ಇದೆ ಎಂಬ ಪ್ರಕಟಣೆ ನೋಡಿದೆ . ಕೂಡಲೇ ಅವರಿಗೆ ನನ್ನ ಇಂಗಿತವನ್ನು ತಿಳಿಸಿ ಪತ್ರ ಹಾಕಿ ವಿಮಾನ ಏರಿದೆನು . 

ಕೆಲವು ವಾರಗಳ ನಂತರ ಒಂದು ದಿನ ನಾನು ಓ ಪಿ ಡಿ ಯಲ್ಲಿ ರೋಗಿಗಳನ್ನು ನೋಡುತ್ತಿರಬೇಕಾದರೆ  ಬೆಂಗಳೂರಿನಿಂದ ಒಂದು ಫೋನ್ ಬಂತು .(ಆಗ ಮೊಬೈಲ್ ಸೇವೆ ಆರಂಭವಾಗಿತ್ತು ). ನಾನು ಫೋನ್ ತೆಗೆಯಲು ,"ಹಲ್ಲೋ ನಾನು ಆರ್ ಏನ್ ಶೆಟ್ಟಿ ಬೆಂಗಳೂರಿನಿಂದ ಮಾತನಾಡುವದು , ನಮ್ಮ ಮುರುಡೇಶ್ವರದ ಆಸ್ಪತ್ರೆಗೆ ನೀವು ಬಂದರೆ ಸಂತೋಷ ,ನಿಮ್ಮ ಬಗ್ಗೆ ಡಾ ಶಾಂತಾರಾಮ ಶೆಟ್ಟಿ ಯವರ ಬಳಿ ಕೇಳಿ ತಿಳಿದು ಕೊಂಡಿರುವೆನು " ಎಂಬ ಶಬ್ದಗಳನ್ನು ಕೇಳಿ ನಾನು ದಂಗಾದೆನು . ಈಗಷ್ಟೇ ರಜೆ ಮುಗಿಸಿ ಮರಳಿರುವುದರಿಂದ ಇನ್ನು ಊರಿಗೆ ಬರಲು ಆರು ತಿಂಗಳು ಆಗ ಬಹುದು ಎಂದು ಉತ್ತರಸಿದಾಗ ,"ಧಾರಾಳ ,ಕಟ್ಟಡ ಇತ್ಯಾದಿ ಇನ್ನೂ ನಿರ್ಮಾಣ ಹಂತದಲ್ಲಿ ಇದೆ ಎಂದರು . 

ಉತ್ತರ ಕನ್ನಡದಲ್ಲಿ ವೈದ್ಯಕೀಯ ಸೌಲಭ್ಯ ಇನ್ನೂ ಸಾಲದು . ಅಲ್ಲಿ ಸುಸಜ್ಜಿತ ಆಸ್ಪತ್ರೆ ಯನ್ನು ಕಟ್ಟಿ ಬೆಳೆಸುವುದು ನಿಜಕ್ಕೂ ಒಂದು ಸಂತೋಷದ ಸಾಹಸ ಕಾರ್ಯ . ಅಲ್ಲದೆ  ಭಟ್ಕಳ ದಲ್ಲಿ ಮಿತ್ರರಾದ ಡಾ ಪಾಂಡುರಂಗ ನಾಯಕ್ ಮತ್ತು ಕುಮಟಾದಲ್ಲಿ ಡಾ ತಿಮ್ಮಣ್ಣ ಹೆಗ್ಡೆ ಇದ್ದಾರೆ . ತಿಂಗಳುಗಳು ಜಾರಿ ನಾನು ರಜೆ ತೆಗೆದುಕೊಂಡು ಊರಿಗೆ ಬಂದಾಗ ಆರ್ ಏನ್ ಶೆಟ್ಟರಿಗೆ ಫೋನಾಯಿಸಿದೆ . ಇಂತಹ ದೊಡ್ಡ ಉದ್ಯಮಿ , ಮೊದಲು ನನ್ನನ್ನು ಸಂಪರ್ಕಿಸಿದಾಗಲೂ ,ನಾನು ಅವರನ್ನು ಕಾಂಟಾಕ್ಟ್ ಮಾಡಿದಾಗಲೂ ಯಾವುದೇ ಅಸ್ಸಿಸ್ಟಂಟ್ ಗಳ  ಮೂಲಕ ಅಲ್ಲ ನೇರ ಸಂಪರ್ಕ . 

                     ನಾನು ಹುಬ್ಬಳ್ಳಿಯಲ್ಲಿ ಕಲಿಯುತ್ತಿದ್ದ ಸಮಯ ಆರ್ ಎನ್ ಶೆಟ್ಟರ ಕಚೇರಿ ಹುಬ್ಬಳ್ಳಿಯಲ್ಲಿ ದೇಶಪಾಂಡೆ ನಗರದಲ್ಲಿ ,ಕೆ ಎಂ ಸಿ ಗೆ ಸಮೀಪ ಇತ್ತು . ಉತ್ತರ ಕರ್ನಾಟಕ ಮತ್ತು ಮಲೆನಾಡಿನ ಹಲವು ಭಾರೀ ನೀರಾವರಿ  ಕಾಮಗಾರಿ ಯಶಸ್ವಿಯಾಗಿ ನಡೆಸಿ ಅವರ ಹೆಸರು ಉತ್ತುಂಗಕ್ಕೆ ಏರುತ್ತಿದ್ದ ಕಾಲ . ಕರ್ನಾಟಕ ಸಂಘಕ್ಕೆ ದೇಣಿಗೆಗಾಗಾಗಿ ಅವರ ಲ್ಲಿಗೆ  ಹೋಗಿದ್ದೆನಾದುದರಿಂದ ಅವನ್ನು ಮುಖತಃ ನೋಡಿದ್ದೆ . ಆ ಮೇಲೆ ಅವರ ಕಾರ್ಯ ಕ್ಷೇತ್ರ ದೇಶದಾದ್ಯಂತ ಹಬ್ಬಿತಲ್ಲದೆ ,ಹೋಟೆಲ್ ಉದ್ಯಮ ,ಸಿರಾಮಿಕ್ ಫ್ಯಾಕ್ಟರಿ , ಮಾರುತಿ ಕಾರ್ ಏಜನ್ಸಿ ,ರಿಯಲ್ ಎಸ್ಟೇಟ್ ಮತ್ತು ತಾಂತ್ರಿಕ ವಿದ್ಯಾ ಸಂಸ್ಥೆ ಇತ್ಯಾದಿಗಳಿಗೆ ವಿಕಸಿತವಾಯಿತು .ಮುಖ್ಯ ಕಚೇರಿ ಬೆಂಗಳೂರಿನ ಎಂ ಜಿ ರೋಡಿನ ತಾಜ್ ಹೋಟೆಲ್ (ಇದೂ ಇವರ ಹೋಟೆಲ್ ,ತಾಜ್ ಗೆ ಲೀಸ್ )ಪಕ್ಕದಲ್ಲಿ ಇತ್ತು . 

ನಾನು ಊರಿಗೆ ಬಂದವನೇ ಬೆಂಗಳೂರಿಗೆ ಹೋಗಿ ಅವರನ್ನು ಕಂಡೆನು . ಮುರುಡೇಶ್ವರದ ಮೇಲೆ ಅವರಿಗೆ ಇರುವ ಬಂಧ ,ಆಸ್ಪತ್ರೆಯನ್ನು ಯಾವುದಕ್ಕೂ ಕಡಿಮೆ ಇಲ್ಲದಂತೆ ,ಸುಸಜ್ಜಿತವಾಗಿ ಬೆಳೆಸಿ ನಡೆಸುವ ಕನಸು ಅವರಿಗೆ ಇತ್ತು . ಆಗಲೇ ಮುರುಡೇಶ್ವರದಲ್ಲಿ ಒಂದು ಪಾಲಿ ಟೆಕ್ನಿಕ್ ನಡೆಸುತ್ತಿದ್ದ ಅವರು ನರ್ಸಿಂಗ್ ಕಾಲೇಜು ನಡೆಸುವ ಯೋಜನೆಯನ್ನೂ ಹಾಕಿದ್ದರು . ಅವರೊಡನೆ ನಮ್ಮ ಮಾತು ಎಲ್ಲಾ ಕನ್ನಡದಲ್ಲಿ . ಅವರ ಸರಳತೆ ,ನೇರ ನುಡಿ  ನನ್ನ ಮೇಲೆ ಪರಿಣಾಮ ಬೀರಿತು . ಸಾಮಾನ್ಯವಾಗಿ ನನಗೆ ಭಾರೀ ಹಣವಂತರೆಂದರೆ ಸ್ವಲ್ಪ ಅಲರ್ಜಿ ಮತ್ತು ಆದಷ್ಟು ಅವರಿಂದ ದೂರ ಇರುವ ಪ್ರವೃತ್ತಿ .(ಇದು ಸರಿ ಎಂದು ನಾನು ಹೇಳುವುದಿಲ್ಲ ). ನನ್ನ ಸಂಬಳ ಸಾರಿಗೆ ಇತ್ಯಾದಿ ಸಮಾಧಾನಕರವಾಗಿ ನಿರ್ಧಾರ ಆಗಿ ,ಮುಂದೊಂದು ದಿನ  ಮುರುಡೇಶ್ವರದಲ್ಲಿ  ಭೇಟಿ ಯಾಗುವ ಯೋಜನೆ ಮಾಡಿದರು . 

ಮುರುಡೇಶ್ವರದಲ್ಲಿ ನಾವು  ನಿಯೋಜಿತ ಆಸ್ಪತ್ರೆಯ ಪರಿಶೀಲನೆ ಮಾಡಿದೆವು ,ನನ್ನ ಕೆಲವು ಸಲಹೆಗಳನ್ನು ಕೊಟ್ಟೆನು . ಆಮೇಲೆ ಅವರದೇ ನವೀನ್ ಹೋಟೆಲ್ ನಲ್ಲಿ ಊಟ ಹಾಕಿ ನನ್ನೊಡನೇ ಅವರೂ ಸೇರಿದರು . 

ಅವರಲ್ಲಿ ಸೇರುವ ಯೋಜನೆಯಿಂದ ನಾನು ಪುನಃ ಮೆಡಿಕಲ್ ಕಾಲೇಜು ಸೇರಲಿಲ್ಲ . ಕಾಸರಗೋಡು ,ಉಪ್ಪಳದ ಆಸ್ಪತ್ರಗಳಿಗೆ ಭೇಟಿ ನೀಡಿ ಸಮಯ ಕಳೆಯುತ್ತಿದ್ದೆ ,ಆದರೆ ನನ್ನ ದುರಾದೃಷ್ಟಕ್ಕೆ ಮುರುಡೇಶ್ವರದ ಆಸ್ಪತ್ರೆಯ ಆರಂಭ ಕಾರಣಾಂತರ ಗಳಿಂದ ಬಹಳ ಮುಂದೆ ಹೋಯಿತು . ಮತ್ತು ನಾನು ಅವರಿಗೆ ಪತ್ರ ಬರೆದು ಭಾರವಾದ ಮನಸಿನಿಂದ ಹಿಂದೆ ಸರಿದು ಮಂಗಳೂರಿನ ವೈದ್ಯಕೀಯ ಕಾಲೇಜು ಪುನಃ ಸೇರಿದೆ . 

ಆದರೂ ಇಂತಹ ಹಿರಿಯ ಸಾಧಕ ರನ್ನು ಸಮೀಪದಿಂದ ಕಿಂಚಿತ್ ಅರಿಯುವ ಅವಕಾಶ ಸಿಕ್ಕಿದ್ದು ಭಾಗ್ಯ ಎಂದೇ ತಿಳಿಯುತ್ತೇನೆ ..ತುಂಬು ಜೀವನ ನಡೆಸಿದ ಶೆಟ್ಟರು ಕಳೆದ ವರ್ಷ ತೀರಿ ಕೊಂಡರು

ಮಂಗಳವಾರ, ಜೂನ್ 29, 2021

ಸುಮಶರನ ಬಾಣಗಳು

   ಸುಮಶರನ  ಬಾಣಗಳು 

ಜೀವಿಗಳಲ್ಲಿ ಮೂಲ ಪ್ರವೃತ್ತಿ ತಮ್ಮ ರಕ್ಷಣೆ ಮತ್ತು ಸಂತತಿ ಬೆಳೆಸುವದು ಮತ್ತು ತನ್ನ ಸಮಾಜದಲ್ಲಿ ಒಂದು ಗುರುತಿಸುವಿಕೆ ಪಡೆಯುವುದು . 

ಗಂಡು ಹೆಣ್ಣಿನ ಆಕರ್ಷಣೆ ಪ್ರೇಮ ,ಕಾಮ ,ಮಾತೃ ವಾತ್ಸಲ್ಯ ,ಪುತ್ರ ವಾತ್ಸಲ್ಯ ಇತ್ಯಾದಿ ಇವುಗಳ ಬೇರೆ ಬೇರೆ ಪ್ರಕಟಣೆಗಳು . ನಮ್ಮ ಶರೀರದಲ್ಲಿ ಇದಕ್ಕೆಂದೇ ವ್ಯವಸ್ಥಿತವಾದ ಕಾರ್ಯಾಂಗ ಇದೆ . 

ಲಾಕ್ ಡೌನ್ ಸಮಯದಲ್ಲಿ ಟಿ ವಿ ಯಲ್ಲಿ ಒಳ್ಳೆಯ ಯಕ್ಷಗಾನ ನೋಡುವುದನ್ನು ಹವ್ಯಾಸವಾಗಿ ಬೆಳೆಸಿಕೊಂಡಿದ್ದೇನೆ . ನಮ್ಮ ಕಲಾವಿದರ ಅರಿವಿನ ಆಳ ,ವಾಕ್ ಸಂಪತ್ತು  ಭಾಗವತರ ಸಂಗೀತ  ಸಾಹಿತ್ಯ ಜ್ಞಾನ ಮತ್ತು ಚೆಂಡೆ ಮದ್ದಳೆ ವಾದಕರ ಲಯ ಜ್ಞಾನ ಇತ್ಯಾದಿ ನೋಡಿ ನಿಜಕ್ಕೂ ಬೆರಗಾಗಿರುವೆನು . ಇವರಲ್ಲಿ ಬಹಳ ಮಂದಿ ನಿಜಕ್ಕೂ ವಿಶ್ವ ವಿದ್ಯಾಲಯಗಳ ಗೌರವ ಉಪಾಧಿಗಳಿಗೆ ಅರ್ಹರು . 

 

ಹೆಚ್ಚಿನ ಪ್ರಸಂಗಗಳಲ್ಲಿ  ಶೃಂಗಾರ ರಸ ಇದ್ದೇ ಇರುವುದು . ಒಳ್ಳೆಯ ನಾಟ್ಯ ಹಾವಭಾವ ಪ್ರದರ್ಶನಕ್ಕೆ ಪೂರಕ ಮತ್ತು ನೋಡುಗರಿಗೆ ಅದು ಅಪ್ಯಾಯ ಮಾನ . ಮಕ್ಕಳು ಮಾತ್ರ ಇಂತಹ ಸೀನ್ ಬಂದಾಗ ನಿದ್ದೆ ಮಾಡಿ ಯುದ್ಧ ಆರಂಭವಾಗುವಾಗ ಎದ್ದು ಕಣ್ಣು ಕಣ್ಣು ಬಿಟ್ಟು ನೋಡುವರು  . ಶೃಂಗಾರಕ್ಕೆ ಅಧಿಪನಾದ ಕಾಮ ದೇವ ಅಥವಾ ಮನ್ಮಥ ನ ಹೆಸರು ಆಗಾಗ ಬರುವುದು.ನೇರವಾಗಿ ಅವನ ಅವಶ್ಯ ಇಲ್ಲದಿದ್ದರೂ  ವಿಷ್ಣು ವಿನ  ಪ್ರಸ್ತಾಪ ಬರುವಾಗ ಕೆಲವೊಮ್ಮೆ ಪ್ರಾಸಕ್ಕೆ ,ಇನ್ನು ಕೆಲವೊಮ್ಮೆ ಶಬ್ದ ಉತ್ಪತ್ತಿ ಆನಂದಕ್ಕೆ ಕಂತು ಪಿತ ,ಕಂದರ್ಪ ಜನಕ ,ಸುಮಶರ ಪಿತ ಇತ್ಯಾದಿ ,ಅವನು ಕಾಮನ ತಂದೆ ಎಂದು ಭಾಗವತರು ಹಾಡುವರು . 

ಇದರ ಬಗ್ಗೆ ಅಧ್ಯಯನ ಮಾಡಲಾಗಿ ಮನ್ಮಥನು ಬ್ರಹ್ಮ ದೇವನ ಪುತ್ರನೆಂದೂ ,ಶಿವನ ಕೋಪಕ್ಕೆ ತುತ್ತಾಗಿ ಭಸ್ಮ ಆದವನು ಮತ್ತೆ ಕೃಷ್ಣಾವತಾರದಲ್ಲಿ  ರೋಹಿಣಿ ಹೊಟ್ಟೆಯಲ್ಲಿ ಪ್ರದ್ಯುಮ್ನನಾಗಿ ಜನಿಸಿದನೆಂದೂ ತಿಳಿಯಿತು .ಆದರೂ ಮನ್ಮಥನಿಗೆ ಈ ಎರಡನೇ ಜನ್ಮದಾತನೇ ತಂದೆಯೆಂದು ಹೇಳುವುದು ಲೋಕ ರೂಢಿ ಆಯಿತು . 

ಮನ್ಮಥನ ಬಳಿ ಐದು ಕುಸುಮ ಶರಗಳು . ಕೆಲವರಿಗೆ ಒಂದೇ ಸಾಕು .ಕೆಲವರಿಗೆ ಐದು ಇದ್ದರೂ  ಪರಿಣಾಮ ಬೀರದು .ಆ ಸಂದರ್ಭ ವೈದ್ಯರು ಮತ್ತು ಔಷಧಿ ಅವಶ್ಯಕತೆ ಬರುವುದು .. ಐದು ಬಾಣಗಳು  ಲಂಭಿನಿ ,ತಾಪಿನಿ ,ದ್ರಾವಿನಿ ,ಮಾರಿನಿ ಮತ್ತು ಬೋಧಿನಿ . ಅದರಲ್ಲಿರುವ ಪಂಚ ಪುಷ್ಪಗಳು ಅರವಿಂದ (ಬಿಳಿ ತಾವರೆ ).ಅಶೋಕ ,ಚೂತ (ಮಾವಿನ ಹೂ ),ನವ ಮಾಲಿಕಾ (ಮಲ್ಲಿಗೆ)ಮತ್ತು ನೀಲೋತ್ಪಲ (ನೀಲ ತಾವರೆ ). ನಮ್ಮಲ್ಲಿ ಮದುವೆ ಸಮಾರಂಭಕ್ಕೆ ಮಲ್ಲಿಗೆ ಹೂ ಬಹಳ ಮುಖ್ಯ ಇದಕ್ಕೇ ಇರ ಬೇಕು . 

ವಂಶ ಮುಂದುವರಿಯಲು ಮನ್ಮಥನ  ಸಹಾಯ ಅತ್ಯವಶ್ಯಕ . ಅವನ ಐದು ಶರಗಳಿಗೆ ವೈಜ್ಞಾನಿಕ ಭಾಷೆಯಲ್ಲಿ ಫೋಲಿಕ್ಯುಲರ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್ , ಲ್ಯೂಟಿನೈಸಿಂಗ್ ಹಾರ್ಮೋನ್ (ಇವು ಮೆದುಳಿನಲ್ಲಿ ಮತ್ತು ತಲೆಯೊಳಗಿನ ಪಿಟ್ಯೂಟರಿ ಗ್ರಂಥಿಯಲ್ಲಿ ಉತ್ಪತ್ತಿ ಆಗುವವು ),ಟೆಸ್ಟೋಸ್ಟ್ರೆರೋನ್ ,ಇಸ್ಟ್ರೋಜನ್ ಮತ್ತು ಪ್ರೊಜೆಸ್ಟಿರೋನ್ ( ಅಂಡಾಶಯ ಮತ್ತು ವೃಷಣಗಳಲ್ಲಿ ಪ್ರಧಾನವಾಗಿ ತಯಾರಾಗುವವು ) ಎನ್ನುವರು .  ಗಂಡಿನಲ್ಲಿ ಹೆಣ್ಣು ಹಾರ್ಮೋನು ಮತ್ತು ಹೆಣ್ಣಿನಲ್ಲಿ ಗಂಡು ಹಾರ್ಮೋನ್ ಸ್ವಲ್ಪ ಇರುವದು ,ಮತ್ತು ನಿಜಾರ್ಥ ದಲ್ಲಿ  ನಾವೆಲ್ಲ ನಾರೀಶ್ವರರರು (ಅರ್ಧ ಅಲ್ಲ ಮುಕ್ಕಾಲೋ ಕಾಲೋ ). ಇವುಗಳ  ಪರಿಣಾಮ ವಯಸ್ಸಿಗೆ ಬಂದಾಗ ಪ್ರೀತಿ ಪ್ರೇಮ ,ಇತ್ಯಾದಿ ನೈಸರ್ಗಿಕ ಪ್ರಕಟಣೆಗಳು .ನಾವೇ ನಿರ್ಮಿಸಿದ  ಸಮಾಜ ಸುಲಲಿತವಾಗಿ ನಡೆಯಲು ನಾವು ಅದಕ್ಕೆ ಹಾಕಿ ಕೊಂಡ ಕಟ್ಟು ಪಾಡುಗಳು ವಿವಾಹ ,ಕುಟುಂಬ ಇತ್ಯಾದಿ . 

 Five Arrows Of Manmatha – Names Of The Five Arrows Of Kamadeva | Hindu Blog

ಕಾರಿನ ಬೌತಿಸರು

                    ಬೌತೀಸ್  ಸೋಜರ ಕಾರು 

 ನನಗೆ ತಿಳಿದಂತೆ ಕನ್ಯಾನ ಗ್ರಾಮದ ಮೊದಲನೇ ಕಾರು ಬೌತೀಸ  ಸೋಜರದ್ದು . ಕಳಂಜಿ ಮೂಲೆ ಸೆರಗಿನ ಪಂಜಾಜೆ ಯಲ್ಲಿ ಅವರ ಮನೆ ;ಪೇಟೆಗೆ ಸಮೀಪ . ಬಾಡಿಗೆಗೆ ಓಡಿಸುತ್ತಿದ್ದ್ದು ಅದುವೇ ಅವರ ವೃತ್ತಿ . ಆರಂಭದ ಕಾರು  ಹ್ಯಾಂಡಲ್(ಕ್ರ್ಯಾಂಕ್ ) ಹಾಕಿ ತಿರುಗಿಸಿ ಸ್ಟಾರ್ಟ್ ಮಾಡುವಂತಹದು .ದಾರಿಯಲ್ಲಿ ನಿಂತರೆ ನಿಲ್ಲಿಸಿ ತಾವೇ ಇಳಿದು ಸ್ಟಾರ್ಟ್ ಮಾಡಬೇಕು . ಅಂತೆಯೇ ಕಾಲ ಕಾಲಕ್ಕೆ ರೇಡಿಯೇಟರ್ ನ ದಾಹ ತೀರಿಸ ಬೇಕು . ಆಮೇಲೆ ಕೀ ಸ್ಟಾರ್ಟ್ ಅಂಬಾಸಡರ್ ಕಾರ್ ಬಂತು .ಬೌತೀಸರು ಕನ್ಯಾನ ಮತ್ತು ವಿಟ್ಲ ದ  ನಡುವೆ ಸರ್ವಿಸ್ ನಡೆಸುವರು.ಆಗ  ಕನ್ಯಾನದಲ್ಲಿ ರಿಕ್ಷಾ ಜೀಪ್ ಇತ್ಯಾದಿ ಇರಲಿಲ್ಲ .ನಾವು ಹೆಚ್ಚಾಗಿ ಬೈರಿಕಟ್ಟೆಯಿಂದ ವಾಹನ ಹಿಡಿಯುತ್ತಿದ್ದರಿಂದ ಅವರ ಕಾರಿನಲ್ಲಿ ಸಂಚರಿಸಿದ್ದು ಕಡಿಮೆ . ಆದರೂ ಊರಿನವರು ಸಾಮಾನು ಸಾಗಿಸಲು ,ಪೇಟೆಗೆ ಹೋಗಲು ಅವರ ವಾಹನ ತುಂಬಾ ಅನುಕೂಲ ಇತ್ತು . ಸರ್ವಿಸ್ ಕಾರಿನಲ್ಲಿ ಮುಂದೆ ಡ್ರೈವರ್ ಅಲ್ಲದೆ ಕನಿಷ್ಠ ಮೂರು ಪ್ರಯಾಣಿಕರನ್ನು ಹಾಕುತ್ತಿದುದು ಸಾಮಾನ್ಯ . ಇಂತಹ ಸಂದರ್ಭದಲ್ಲಿ ಚಾಲಕರ ಸೊಂಟದ ಬಲ ಭಾಗ ಮಾತ್ರ ಕಾರಿನ ಸೀಟಿನ ಮೇಲೆ ,ಎರಡೂ ತೊಡೆಗಳು  ಸಮಾಂತರವಾಗಿ ಬಲದ ಕಡೆ ,ಮೊಣಕಾಲಿನಿಂದ ಕೆಳಗೆ ಎಡಗಡೆ  ಕ್ಲಚ್ ,ಬ್ರೇಕ್ ಮತ್ತು ಆಕ್ಸಿಲೇಟರ್ ಸಂಭಾಳಿಸುತ್ತಿತ್ತುದು ಸೋಜಿಗವೇ ಸರಿ . ಆದರೆ ಜನ ಹಾಕದೆ ಇದ್ದರೆ ಖಂಡಿತ ಅವರಿಗೆ ಅಸಲು ಆಗದು . 

ಕನ್ಯಾನದಲ್ಲಿ ಆಗ  ಎಲ್ಲರಿಗೂ ಇದ್ದ ಡಾಕ್ಟರ್ ಡಾ ಮಹಾದೇವ ಶಾಸ್ತ್ರಿಗಳು ಒಬ್ಬರೇ .ಯಾರ ಮನೆಯಲ್ಲಿಯಾದರೂ ರಾತ್ರಿ ಹೊತ್ತು ಗಂಭೀರ ಅಸೌಖ್ಯ ಆದರೆ ಸೂಟೆ ಹಿಡಿದುಕೊಂಡು ಬೌತೀಸರ ಮನೆಗೆ ಓಟ .(ಆಗ ಫೋನ್ ಇರಲಿಲ್ಲ )ಅವರನ್ನು ಎಬ್ಬಿಸಿ ಮಹಾದೇವ ಶಾಸ್ತ್ರಿಗಳ ಮನೆಗೆ . ಮನೆ ವರೆಗೆ ಮಾರ್ಗಗಳು ಇರುತ್ತಿದುದು ಕಡಿಮೆ ಆಗಿದ್ದ ಆ ದಿನಗಲ್ಲಿ ಗದ್ದೆ ಹುಣಿ ,ತಡಮ್ಮೆ ಮತ್ತು ಒರುಂಕು ದಾಟಿ ಡಾಕ್ಟರರು ಮನೆಗೆ ಬಂದು ಪರೀಕ್ಷೆ ಮಾಡಿ ಉಪಚಾರ ಮಾಡುವರು . ಇಲ್ಲಿ ವಿಶೇಷ ಎಂದರೆ ಇಬ್ಬರೂ ಅಪರಾತ್ರಿ ತೊಂದರೆ ಕೊಟ್ಟುದಕ್ಕೆ ಗೊಣಗಿದ್ದು ಇಲ್ಲ .ಮತ್ತು ರಾತ್ರಿ ಮನೆಯಲ್ಲಿ ಹಣ ಇಲ್ಲದ ಸಂದರ್ಭಗಳೇ ಹೆಚ್ಚಾಗಿದ್ದು  ಎಲ್ಲೆ ಕೊರ್ಪೆ ಎಂದು ಕರೆದು ಕೊಂಡು ಬಂದವರು ಹೇಳುವರು ,ಇವರು ಗೊಣಗದೇ ಹೋಗುವರು .ವಾಪಾಸು ಡಾಕ್ಟ್ರ ಜತೆ ಬೌತಿಸರು  ಮಾತ್ರ ,ಅವರನ್ನು ಮತ್ತು ಅವರ ಪೆಟ್ಟಿಗೆಯನ್ನು ತಲುಪಿಸಿ ಮನೆಗೆ ಮರಳುವರು .ಇಂತಹ ಸಂದರ್ಭ ಅನೇಕ .ಅಂತೂ ತಮ್ಮ ಸೇವೆಯಿಂದ ದೇವ ಪಾದ ಸೇರ ಹೊರಟಿದ್ದ  ಅನೇಕರ ಪ್ರಯಾಣಕ್ಕೆ ಬ್ರೇಕ್ ಹಾಕಿದ್ದರು . 

ಕೆಲ ವರ್ಷಗಳ  ವೃದ್ಧಾಪ್ಯದಿಂದ ಸೊಂಟದ ಎಲುಬು ಮುರಿದು ನಮ್ಮಆಸ್ಪತ್ರೆಯಲ್ಲಿ  ಅದನ್ನು ಸರಿ ಪಡಿಸಿ ಹೋದವರು ,ಕೆಲ ತಿಂಗಳುಗಳ ನಂತರ ಮನೆಯಲ್ಲಿ ತೀರಿ ಕೊಂಡರು . ಅವರ ಏಕೈಕ ಪುತ್ರ ಕೆಲವು ತಿಂಗಳುಗಳ ಹಿಂದೆ  ಆಸ್ಪತ್ರೆಗೆ ಹೋಗುವಾಗ ದ್ವಿಚಕ್ರ  ಅಪ ಘಾತದಿಂದ  ಮೃತ ಪಟ್ಟ ವಾರ್ತೆ ನಮಗೆಲ್ಲ ಆಘಾತ ಉಂಟು ಮಾಡಿದೆ .ಯಾಕೆ  ನಿರ್ದಯನಾದೆಯೋ ಶ್ರೀ ಹರಿಯೇ ? 

ಈಗಲೂ ವಿಟ್ಲ ಪೇಟೆಯಲ್ಲಿ ಕನ್ಯನ ಕನ್ಯನ ಎಂದು ಊರವರ ಕರೆಯುತ್ತಿದ್ದ ಬೌತೀಸರ ನೆನಪಾಗುವದು .. 


May be an image of 1 person

 

 

ಭಾನುವಾರ, ಜೂನ್ 27, 2021

ಗುರು ಸ್ಮರಣೆ

                                                            

ನನ್ನ   ಪ್ರಾಥಮಿಕ ವಿದ್ಯಾಭ್ಯಾಸ ಕನ್ಯಾನ ಬೋರ್ಡ್ ಹೈಯರ್ ಎಲಿಮೆಂಟರಿ ಶಾಲೆ ಯಲ್ಲಿ ನಡೆಯಿತು . ಯಥಾರ್ಥದಲ್ಲಿ  ನಮ್ಮ ಮನೆಯಿಂದ ಅಳಿಕೆ ಪ್ರಾಥಮಿಕ ಶಾಲೆಗೆ ಅರ್ಧ ಮೈಲು .ಕನ್ಯಾನ ಶಾಲೆಗೆ ಎರಡು ಮೈಲು . ಆದರೂ ನಮ್ಮ ಗ್ರಾಮದ ಶಾಲೆ ಎಂದು ಅಲ್ಲಿಗೆ ಕಳುಹಿದ್ದ ಹಾಗೆ ಕಾಣುತ್ತದೆ . ಶಿಕ್ಷಣದ ಗುಣಮಟ್ಟ ಮತ್ತು ಫಲಿತಾಂಶ ದಲ್ಲಿ ಆಗೆಲ್ಲ ಸರಕಾರಿ ಶಾಲೆಗಳು ಮುಂದೆಯೇ ಇದ್ದ ದಿನಗಳು . ಪುತ್ತೂರಿನ  ಹಾರಾಡಿ ಶಾಲೆ ಮತ್ತು ಬೋರ್ಡ್ ಹೈ ಸ್ಕೂಲ್ ಕೂಡಾ ಅದಕ್ಕೆ ಉದಾಹರಣೆ . 

                  ನಮಗೆ ಹೆಡ್ ಮಾಸ್ಟರ್ ಆಗಿದ್ದವರು ಪಿದಮಲೆ ಕೃಷ್ಣ ಭಟ್ ಅವರು . ಹಸನ್ಮುಖ ,ತುಂಬಾ ಸ್ಟ್ರಿಕ್ಟ್ ಅಲ್ಲ ,ಹಾಗೆಂದು ಅತೀ ಮೆದುವೂ ಅಲ್ಲದ ವ್ಯಕ್ತಿತ್ವ . ಶರ್ಟಿನ ಕಾಲರ್  ಹಿಂದೆ ಯಾವಾಗಲೂ ಒಂದು ಕರವಸ್ತ್ರ.  ಏಳನೇ ತರಗತಿಗೆ ಗಣಿತ ಹಾಗೂ ಇಂಗ್ಲಿಷ್ ಪಾಠ ತೆಗೆದು ಕೊಳ್ಳುತ್ತಿದ್ದರು . ಸಾಮಾನ್ಯ ಮಕ್ಕಳಿಗೆ ಕಠಿಣ ಎನ್ನಿಸುವ ಈ ವಿಷಯಗಳನ್ನು ಸರಳವಾಗಿ ಹೇಳಿ ಕೊಡುತ್ತಿದ್ದರು .ಅವರ ನೆನಪಿನೊಂದಿಗೆ ಪ್ರ. ಪ್ರ. ,ತ್ರಿಜ್ಯ ,ವ್ಯಾಸ ,ಘನ ಫಲ ,ಪೈತಾಗೋರಾಸ್,ಇದನ್ನು ಸಾದಿಸ ಬೇಕಿತ್ತು ಇವುಗಳೆಲ್ಲಾ ಸಾಲಾಗಿ ಬರುತ್ತಿವೆ .

ಅವರ ಪತ್ನಿ ಯ  ತವರು ಮನೆ ನಮ್ಮ ಗ್ರಾಮದ ನೀರ್ಪಾಜೆ . ಕನ್ಯಾನದಲ್ಲಿ ಅವರು ಒಬ್ಬರೇ ಇರುತ್ತಿದ್ದು ವಾರಕ್ಕೋ ಎರಡು ವಾರಕ್ಕೋ ಒಮ್ಮೆ ಊರಿಗೆ ಹೋಗುತ್ತಿದ್ದರು .ನಮ್ಮ ಶಾಲೆಯ ಎದುರು ಜವಳಿ ಶೆಟ್ಟಿ ಎಂದು ಪ್ರಸಿದ್ಧರಾದ ದೈಯೆಂದ್ರೆ ಫಕೀರಪ್ಪ ಶೆಟ್ಟಿ ಅವರ ಅಂಗಡಿ ಮೇಲೆ ಒಂದು ರೂಮ್ ನಲ್ಲಿ ಅವರ ವಾಸ . ಅದರ ಪಕ್ಕದ ಇನ್ನೊಂದು ಬದಿಯಲ್ಲಿ ಹಿಂದಿನ ಪಂಚಾಯತ್ ಆಫೀಸ್ ಇತ್ತು . ರೂಮ್ ಎಂದರೆ ಕೋಣೆ  ಮಾತ್ರ . ಅವರು ಸ್ನಾನಕ್ಕೆ ಶಾಲೆ ಎದುರು ಇರುವ ಸರಕಾರಿ ಬಾವಿ ಉಪಯೋಗಿಸುತ್ತಿದ್ದಿರ ಬೇಕು ;ಶೌಚಕ್ಕೆ ಬಯಲು . ಇದು ಆಗ ಸಾಮಾನ್ಯ .ಈಗ ಊಹಿಸಲೂ ಸಾಧ್ಯವಿಲ್ಲ . ಊಟ ತಿಂಡಿಗಳು  ಶಾಲೆಯ ಹಿಂದೆ ಇದ್ದ ಬೋರ್ಡಿಂಗ್ ರಾಮಣ್ಣ ನವರಲ್ಲಿ .ನಾವೂ ಮಧ್ಯಾಹ್ನ  ಊಟಕ್ಕೆ ಅಲ್ಲಿಯೇ ಹೋಗುತ್ತಿದ್ದೆವು . 

               ನಾನು ಏಳನೇ ತರಗತಿಯಲ್ಲಿ ಸ್ಕೂಲ್ ಪ್ಯೂಪಿಲ್ ಲೀಡರ್ ಆಗಿದ್ದೆ . ಕ್ಲಾಸ್ ಲೀಡರ್ ಗೆ  ಅಧ್ಯಾಪಕರು ತರಗತಿಯಲ್ಲಿ  ಇಲ್ಲದಾಗ ಮಕ್ಕಳ ಗಲಾಟೆ (ತಾನೂ ಅದಕ್ಕೆ ಪಾಲುದಾರ ಆಗಿದ್ದರೂ ) ಒಂದು ಮಟ್ಟಕ್ಕಿಂತ ಮೇಲೆ ಹೋದಾಗ ಸೈಲೆನ್ಸ್ ಸೈಲೆನ್ಸ್ ಎಂದು ಆರ್ಡರ್ ಮಾಡುವ ಹಕ್ಕು ,ಮತ್ತು ಜೋರಾಗಿ ಮಾತನಾಡಿದವರ ಹೆಸರು ಬರೆದು ಕ್ಲಾಸ್ ಟೀಚರ್ ಗೆ ದೂರು ಕೊಡುವುದು ,ತಿದ್ದಿದ ಪ್ರಬಂಧ ಪುಸ್ತಕ ವಾಪಾಸು ಮಾಡುವುದು ಮತ್ತು ಕ್ಲಾಸ್ ಗುಡಿಸುವವರ ಟೈಮ್ ಟೇಬಲ್ ಮಾಡುವುದು ಇತ್ಯಾದಿ ಅಧಿಕಾರಗಳು ಇದ್ದವು .ಸ್ಕೂಲ್ ಪ್ಯೂಪಿಲ್ ಲೀಡರ್ ಗೆ ಎರಡು ಹೆಮ್ಮೆಯ ಕಾರ್ಯಗಳು  ಇದ್ದವು .ಒಂದು -  ಶಾಲೆಯ ಗಂಟೆ ಕಾಲ ಕಾಲಕ್ಕೆ ಬಾರಿಸುವುದು ;  ಸಣ್ಣ ರೈಲು ಪಟ್ಟಿಯ ತುಂಡಿಗೆ ಕಬ್ಬಿಣದ ಸರಳಿನಲ್ಲಿ  .ನಮ್ಮ ಸಂಕೇತ ಇಡೀ ಶಾಲೆಯನ್ನೇ  ಕಂಟ್ರೋಲ್ ಮಾಡುತ್ತಿದ್ದ ಭಾವನೆ . ಇನ್ನೊಂದು ರಜಾ ದಿನ ಘೋಷಣೆ ನೋಟೀಸ್ ಪುಸ್ತಕ ಎಲ್ಲಾ ತರಗತಿಗಳಿಗೆ ಒಯ್ದು ಅದನ್ನು ಓದುವುದು . ಕಾಕಿ ಬೈಂಡ್ ಹಾಕಿದ ಪುಸ್ತಕದಲ್ಲಿ ಮುದ್ದಾದ ಕೃಷ್ಣ ಭಟ್ ಅವರ ಅಕ್ಷರ ಈಗಲೂ ನನ್ನ ಕಣ್ಣ ಮುಂದೆ ಇದೆ . 

ಮಧ್ಯಾಹ್ನ ಬೋರ್ಡಿಂಗ್ ನಲ್ಲಿ  ಅಧ್ಯಾಪಕರಿಗೆ ಬೇರೆ ,ಮಕ್ಕಳಿಗೆ ಬೇರೆ ಪಂಕ್ತಿ . ಅವರು ಮತ್ತು  ಐತಪ್ಪ ನಾಯ್ಕ್  ಮಾಸ್ಟ್ರು ಊಟಕ್ಕೆ ಬರುತ್ತಿದ್ದರು . ಅಲ್ಲಿ ಸರಸ ಸಂಭಾಷಣೆ ನಡೆಯುವದು ;ಬೋರ್ಡಿಂಗ್ ರಾಮಣ್ಣ ಮತ್ತು ಐತಪ್ಪ ನಾಯ್ಕ್ ಸರಸಿಗಳು . ಕೃಷ್ಣ ಭಟ್ ಇವರ ಮಾತುಕತೆ ಕೇಳಿ ಸಂತೋಷ ಪಡುವರು . 

ಏಳನೇ ಕ್ಲಾಸ್ ನ  ಪಬ್ಲಿಕ್ ಪರೀಕ್ಷೆಯಲ್ಲಿ ನನಗೆ ಜಿಲ್ಲೆಗೆ ಮೂರನೇ ರಾಂಕ್ ಬಂದಾಗ ತುಂಬಾ ಸಂತೋಷ ಪಟ್ಟು ಬೆನ್ನು ತಟ್ಟಿ ಆಶೀರ್ವಾದ ಮಾಡಿದ್ದರು .                 . ಇದೇ ತಿಂಗಳು ಹದಿನೈದರಂದು ಅವರು ತೀರಿ ಕೊಂಡ ವಾರ್ತೆ ಪತ್ರಿಕೆಯಲ್ಲಿ ಓದಿದಾಗ ಹಳೆಯ ನೆನಪುಗಳು ಮರುಕಳಿಸಿದವು .ಅವರ ನಿಧನ ಒಂದು ವಾರದ ನಂತರ ಮುಡಿಪು ಶಾಲೆಯಲ್ಲಿ ಮುಖ್ಯೋಪಾಧ್ಯಾಯ ರಾಗಿ  ವಿದ್ಯಾರ್ಥಿ ಪ್ರಿಯರಾಗಿದ್ದ ಅವರ ಅಣ್ಣ ಪಿದಮಲೆ  ರಾಮ ಭಟ್ಟರೂ ತೀರಿ ಕೊಂಡ ವಾರ್ತೆ ಬಂತು . 

            ನಮ್ಮನ್ನೆಲ್ಲ ರೂಪಿಸಿದ ಅಧ್ಯಾಪಕರು ,ಒಬ್ಬೊಬ್ಬರೇ ತಮ್ಮ ಜೀವನ ಯಾತ್ರೆ ಮುಗಿಸಿ ಹೋಗುತ್ತಿದ್ದಾರೆ . ಪಂಜೆ ಮಂಗೇಶ ರಾಯರ ಬಗ್ಗೆ ಕುವೆಂಪು ಬರೆದ ಸಾಲುಗಳು ನೆನಪಿಗೆ ಬರುತ್ತಿವೆ .. 

 ಹಾಲು ಸಕ್ಕರೆ ಸೇರಿ ನೀವಾದಿರಾಚಾರ್ಯ
ನಡೆಯ ಮಡಿಯಲಿ, ನುಡಿಯ ಸವಿಯಲ್ಲಿ. ನಿಮ್ಮ ಬಗೆ
ಹಸುಳೆ ನಗೆ: ನಿಮ್ಮ ಕೆಳೆಯೊಲುಮೆ ಹಗೆತನಕೆ ಹಗೆ.
ಕಪ್ಪುರಕೆ ಕಿಡಿ ಮತ್ತೆ ಸತ್ಯಕ್ಕೆ ಸೌಂದರ್ಯ
ಸಂಗಮಿಸಿದಂತೆ, ರಂಜಿಸಿದೆ ಜೀವನ ಸೂರ್ಯ
ನಿಮ್ಮದೆಮ್ಮಯ ನುಡಿಯ ಗುಡಿಗೆ, ಮಂಗಳ ಕಾಂತಿ
ಪರಿಮಳಂಗಳನಿತ್ತು. ನಿಮ್ಮ ಬಾಳಿನ ಶಾಂತಿ
ಮತ್ತೆ ರಸಕಾರ್ಯಗಳಿಗುಪಮೆ ವೀಣಾತೂರ್ಯ!
ಕಚ್ಚಿದರೆ ಕಬ್ಬಾಗಿ, ಹಿಂಡಿದರೆ ಜೇನಾಗಿ
ನಿಮ್ಮುತಮಿಕೆಯನೆ ಮೆರೆದಿರಯ್ಯ: ಚಪ್ಪಾಳೆ
ಮೂಗುದಾರವನಿಕ್ಕಿ ನಡೆಯಿಸಿದರದು ಬಾಳೆ
ಹಿರಿಯ ಸಿರಿ ಚೇತನಕೆ? ಕೀರ್ತಿಲೋಭಕೆ ಬಾಗಿ
ಬಾಳ್ಬಂಡಿ ನೊಗಕೆ ಹೆಗಲಿತ್ತವರು ನೀವಲ್ಲ;
ತೇರ್ಮಿಣಿಯನೆಳೆದಿರಲ್ಲದೆ ಮತ್ತೆ ಮಣಿದಿಲ್ಲ!


ಶನಿವಾರ, ಜೂನ್ 26, 2021

ಬಾಬು ಪೂಜಾರಿ

                     ಮರೆಯಲಾಗದ ಮಹನೀಯರು  ಶ್ರೀ ಬಾಬು ಪೂಜಾರಿ 


    ಹುಟ್ಟೂರಿಗೆ ಮರಳುವ ಉದ್ದೇಶದಿಂದ ರೈಲ್ವೇ ವೈದ್ಯಾಧಿಕಾರಿ ಹುದ್ದೆಗೆ   ಪೆನ್ಷನ್ ಬರುವ ಅವಧಿಗೂ ಮುನ್ನ ರಾಜೀನಾಮೆ ಕೊಟ್ಟು ಬಂದೆನು.ಮೊದಲಿನಿಂದಲೂ ಅಧ್ಯಾಪಕ ನಾಗಬೇಕೆಂಬ ಹಂಬಲ ಇತ್ತು .ನನ್ನ ಗುರುಗಳು ಕಲಿಸುವುದು ಜ್ನಾನಾರ್ಜನೆಯ ಉತ್ತಮ ಮಾರ್ಗ ಎಂದು ಆಗಾಗ ಹೇಳುತ್ತಿದ್ದರು .(Teaching is the best way of learning). ಆಗ ತಾನೇ ನಿಟ್ಟೆ ಎಜುಕೇಷನ್ ಟ್ರಸ್ಟ್ ನವರು  ದೇರಳಕಟ್ಟೆಯಲ್ಲಿ  ಜಸ್ಯಿಸ್ ಕೆ ಎಸ್ ಹೆಗ್ಡೆ ಅವರ ಹೆಸರಿನಲ್ಲಿ ಹೊಸ ವೈದ್ಯಕೀಯ ಕಾಲೇಜ್ ಆರಂಭಿಸುವ ಯತ್ನದಲ್ಲಿ ಆಸ್ಪತ್ರೆ ಸ್ಥಾಪಿಸಿದ್ದರು . ಅಲ್ಲಿ ಮೆಡಿಸಿನ್ ವಿಭಾಗಕ್ಕೆ ಸೇರಿದೆನು.ಡಾ ಅಮರನಾಥ ಹೆಗ್ಡೆ ಮತ್ತು ಡಾ ಎ ಸಿ ಹೆಗ್ಡೆ ಒಂದೊಂದು ಯೂನಿಟ್ ನ ಮುಖ್ಯಸ್ಥರು . ಪ್ರೊ . ಎ ಸಿ ಹೆಗ್ಡೆ ಹುಬ್ಬಳ್ಳಿಯಲ್ಲಿ ನನ್ನ ಗುರುಗಳಾಗಿ ಇದ್ದವರು .ನಿವೃತ್ತಿ ನಂತರ ಇಲ್ಲಿ ಸೇರಿದ್ದರು . ಡಾ ಅಮರನಾಥ ಹೆಗ್ಡೆ ಮಂಗಳೂರು ಕೆ ಎಂ ಸಿ ಯಲ್ಲಿ ಪ್ರಾಧ್ಯಾಪಕ ಮತ್ತು ಮಂಗಳೂರಿನ ಜನಪ್ರಿಯ ವೈದ್ಯರಾಗಿ ಇದ್ದವರು .ಇಬ್ಬರೂ ಈಗ ಇಲ್ಲ . ಪೆರಂಬೂರು ರೈಲ್ವೇ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದರಿಂದ ಆತ್ಮ ವಿಶ್ವಾಸ ಇತ್ತು . ನನ್ನ ಅಧ್ಯಾಪನ ಅನುಭವ ಬಗ್ಗೆ ಇನ್ನೊಮ್ಮೆ ಬರೆಯುವೆನು .

         ನಾನು ಸೇರಿದುದು ಹೊಸ ಕಾಲೇಜ್ .ಸ್ಥಾಪಕ ರಿಗೆ  ಸಂಸ್ಥೆ ಒಳ್ಳೆಯ ಹೆಸರು ಗಳಿಸ ಬೇಕು ಎಂಬ ಉದ್ದೇಶ ಬಲವಾಗಿತ್ತು .ನುರಿತ ಪ್ರಾಮಾಣಿಕ ಸಿಬ್ಬಂದಿಗಳನ್ನು ಆಯ್ಕೆ ಮಾಡಿ ಕೊಂಡಿದ್ದರು . ನನ್ನ ಮೇಲೆ ಬಹಳ ಪ್ರಭಾವ ಬೀರಿದವರು ಶ್ರೀ ಬಾಬು ಪೂಜಾರಿ ಅವರು . ಇವರು ಸುರತ್ಕಲ್  ಕೆ ಆರ್ ಈ ಸಿ (ಈಗಿನ ಎನ್ ಐ ಟಿ ಕೆ )ಯ ಆಡಳಿತ ಕಚೇರಿಯಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿ ಅಧೀಕ್ಷಕ ರಾಗಿ ನಿವೃತ್ತರಾದವರು . ಶೈಕ್ಷಣಿಕ ಸಂಸ್ಥೆಯಲ್ಲಿನ ತಮ್ಮ  ಅಪಾರ ಆಡಳಿತ ಅನುಭವ ವನ್ನು ಈ ಹೊಸ ಕಾಲೇಜ್ ಗೆ  ಧಾರೆ ಎರೆದರು . ಸರಳ ಆದರೆ ಶಿಸ್ತು ಬದ್ಧ ಉಡುಗೆ ತೊಡುಗೆ ,ಸಮಯ ಪಾಲನೆ ,ಕಾರ್ಯ ಶಿಸ್ತು ಮತ್ತು ನೇರ ( ಕೆಲವೊಮ್ಮೆ ನಿಷ್ಠುರ ಎನಿಸ ಬಹುದಾದ ) ನುಡಿ ತಮಗೆ ಸರಿ ಎಂದು ಕಂಡುದನ್ನು ಕಹಿ ಎನಿಸ ಬಹುದಾದರೂ ಮೇಲಿನವರಿಗೆ ಸಂಕೋಚವಿಲ್ಲದೆ ತಿಳಿಸುವರು . ರೈಲ್ವೇ ಆಸ್ಪತ್ರೆ ಯಲ್ಲಿನ  ಬಾಲಸುಬ್ರಹ್ಮಣ್ಯಂ ಎಂಬುವರ ಬಗ್ಗೆ ಹಿಂದೆ ಬರೆದಿದ್ದೆ . ಅವರನ್ನು ನೆನಪಿಸುತ್ತಿದ್ದರು . 

 

   ಇವರ ಹುಟ್ಟೂರು ಬೆಳ್ಳಾರೆ ಸಮೀಪ ಮಾಡಾವು .ಕೆ ಎಸ್ ಹೆಗ್ಡೆ ಮೆಡಿಕಲ್ ಕಾಲೇಜ್ ನಲ್ಲಿ ದಶಕದ ಮೇಲಿನ ಸಾರ್ಥಕ ಸೇವೆ ಸಲ್ಲಿಸಿ  ನಿವೃತ್ತರಾಗಿ ಈಗ ಸುರತ್ಕಲ್ ಮುಕ್ಕದ ಸಮೀಪ ನೆಲೆಸಿದ್ದಾರೆ .ಅವರು ಅಷ್ಟು ನಿಷ್ಠುರ ರಾಗಿ ಇದ್ದರೂ ಸಿಬ್ಬಂದಿ ಅವರನ್ನು ತುಂಬಾ ಪ್ರೀತಿ ಗೌರವ ದಿಂದ ಕಾಣುತ್ತಿದ್ದರು. ಅವರ ವಿದಾಯ ಕೂಟದಲ್ಲಿ ಬಹಳ ಆತ್ಮೀಯತೆ ಕಂಡು ಬಂತು ,ಹಲವರ ಕಣ್ಣಾಲಿ ತುಂಬಿ ಬಂದಿತ್ತು .

ಒಂದು ಸಂಸ್ಥೆಯ ಶ್ಯೇಯಸ್ಸಿನ ಹಿಂದೆ ಹಲವರ ಪ್ರಮಾಣಿಕ ದುಡಿಮೆ ಇರುತ್ತದೆ . ಈಗ ಈ ಭಾಗದಲ್ಲಿ ಪ್ರಸಿದ್ದವಾಗಿರುವ ಎನ್ ಐ ಟಿ ಕೆ ಮತ್ತು ಕ್ಷೇಮ (ಕೆ ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿ )ಎರಡರಲ್ಲೂ  ಕೊಡುಗೆ ಸಲ್ಲಿಸಿರುವ ಬಾಬು ಪೂಜಾರಿ ನಮ್ಮ ಊರಿನವರು ಎಂಬ ಹೆಮ್ಮೆ .ಆಗಾಗ ಅವರನ್ನು ಸಂಪರ್ಕಿಸಿ ಯೋಗ ಕ್ಷೇಮ ವಿಚಾರಿಸುತ್ತೇನೆ .

                      




ಬೆಕ್ಕಿನ ಕೊರಳಿಗೆ ಗಂಟೆ

  ಬೆಕ್ಕಿನ  ಕೊರಳಿಗೆ ಗಂಟೆ 

 

ಸತ್ಯ ಹೇಳುತ್ತೇನೆ ,ನನಗೆ ಸರ್ಕಾರೀ ಕಚೇರಿಗಳಿಗೆ ಅದೂ ರಾಜ್ಯ ಸರಕಾರದ ಕಚೇರಿಗಳಿಗೆ ಹೋಗುವುದೆಂದರೆ ಒಂದು ಥರಾ ಭಯ ಮತ್ತು ಆತಂಕ .(ನಾನೂ ಕೇಂದ್ರ ಸರಕಾರದ ಗಜ್ಝೆಟೆಡ್ ಅಧಿಕಾರಿ ಆಗಿದ್ದೆ )ಹೆಚ್ಚಿನ ಕಚೇರಿಗಳಲ್ಲಿ ನಾವು  ನೋಡಬೇಕಾದ ಅಧಿಕಾರಿ ಇರುತ್ತಾರೋ ಇಲ್ಲವೋ ? ಇದ್ದರೂ ನಮ್ಮನ್ನು ಮಾತನಾಡಿಸುತ್ತಾರೋ ?ನಮ್ಮ ಕೆಲಸ ಆಗುವುದೋ ಇಲ್ಲವೋ ? ಇತ್ಯಾದಿ ವ್ಯಾಕುಲಗಳು . ಯಾವುದೇ ಕಚೇರಿಗೆ ಹೋದರೆ ಆಹ್ವಾನವಿಲ್ಲದೆ ಬಂದ ಅತಿಥಿಯಂತೆ ಆಗಿ ಹೋಗುತ್ತೇವೆ .ಜನರಿಗಾಗಿ ಈ ಕಚೇರಿಗಳು ಎಂಬ ಭಾವನೆ ಬರುವುದಿಲ್ಲ .ಪಂಜೆ ಮಂಗೇಶ ರಾಯರು ಸಬ್ ಅಸಿಸ್ಟಂಟ್ ನ  ಸುಳ್ಳು ಡೈರಿ "ಯಲ್ಲಿ ಅಂದು ಸರಕಾರಿ ಇಲಾಖೆಗಳ ಬಗ್ಗೆ ಬರೆದುದು ಈಗಲೂ ಹೆಚ್ಚು ಕಡಿಮೆ ಹಾಗೆಯೇ ಇದೆ .  ಕಛೇರಿಗಳಲ್ಲಿ ಅಗರಬತ್ತಿ ಹಚ್ಚಿದ್ದ ಮಹಾತ್ಮಾ ಗಾಂಧಿ ಮತ್ತು ದೇವರ ಪಟಗಳು ನಮ್ಮನ್ನು ಅನುಕಂಪದಿಂದ ನೋಡುತ್ತಿರುತ್ತವೆ .ಇತ್ತೀಚೆಗೆ ಬ್ಯಾಂಕ್ ಗಳಲ್ಲಿಯೂ ಇಂತಹ ವಾತಾವರಣ ಇದೆ . ಇದನ್ನು ಸರಿ ಮಾಡುವುದು ಹೇಗೆ ಎಂದು ತೋಚುತ್ತಿಲ್ಲ . ಕೆಲಸ ಬಾಹುಳ್ಯದಿಂದ ,ಕ್ಷಮತೆಯನ್ನು ಗುರುತಿಸಿ ಪ್ರೋತ್ಸಾಹಿವ ವ್ಯವಸ್ಥೆ ಇಲ್ಲದಿರುವುದು ,ಸರಿಯಾದ ತರಬೇತಿಯ ಕೊರತೆ ಮತ್ತು ಕೆಲವರಲ್ಲಿ ಶೀಘ್ರ ಧನಾರ್ಜನೆ ಆಸೆ ಇತ್ಯಾದಿ ಮೇಲ್ನೋಟಕ್ಕೆ ಕಂಡು ಬರುವ ಕಾರಣಗಳು .

ಸರ್ ಎಂ ವಿಶ್ವೇಶ್ವರಯ್ಯ ಅವರೇ ಅಧಿಕಾರ  ಶಾಹಿಯ ಬಗ್ಗೆ ಇಂಗ್ಲಿಷ್ ನ ಒಂದು ನುಡಿಗಟ್ಟನ್ನು ಉದಾಹರಿಸುತ್ತಿದ್ದರು ಎಂದು ಓದಿದ ನೆನಪು ' The  secretariat has neither a body to kick nor a soul to damn.'. ಅವರು ಹೇಳುತ್ತಿದ್ದರು "ನಿಜವಾದ ಸೇವೆ ಎಂದು ಕರೆಸಿಕೊಳ್ಳಲು ಹಣದಿಂದ ಅಳೆಯಲಾಗದ ಮತ್ತು ಖರೀದಿಸಲಾಗದ ಒಂದು ಗುಣ ಅದಕ್ಕೆ ಸೇರಿಸ ಬೇಕು "

ಇನ್ನು  ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರೂ ನಮ್ಮ ಸರಕಾರಿ ಪತ್ರಗಳಲ್ಲಿ ಪ್ರೀತಿ ವಿಶ್ವಾಸಗಳು ಕಾಣುವದು ಕಡಿಮೆ . ಆದೇಶಿಸಲಾಗಿದೆ , ಸೂಚಿಸಲಾಗಿದೆ ಇತ್ಯಾದಿ ಪ್ಯಾಸಿವ್ ವಾಯ್ಸ್ ನ ಒಕ್ಕಣೆಯೊಂದಿಗೆ , ನಿರ್ದಿಷ್ಟ  ಪಾವತಿ ಚಲನ್ ಮತ್ತು ದಾಖಲೆಗಳ ಲಗತ್ತಿಕೆ ಇಲ್ಲದಿದ್ದರೆ ತಿರಸ್ಕರಿಸ ಲಾಗುವದು ಇತ್ಯಾದಿ ಬೆದರಿಕೆ ಶಬ್ದಗಳು ಸಾಮಾನ್ಯ . ಹಿಂದೆ  ಟೆಲಿಫೋನ್ ವಿದ್ಯುತ್ ಬಿಲ್ ಗಳಲ್ಲಿ  ಕೊನೇ ದಿನಾಂಕದ ಮೊದಲು ಪಾವತಿಸದಿದ್ದರೆ ಸಂಪರ್ಕ ಕತ್ತರಿಸುವ ಎಚ್ಚರಿಕೆ ಎಂದು ಇದನ್ನೇ ತಿಳಿಯುವುದು .(ಜಾಗ್ರತೆ ).ಬಿಲ್ ತಲುಪದಿರುವದು ಪಾವತಿ ಮಾಡದೇ ಇರುವುದಕ್ಕೆ ಕಾರಣವೆಂದು ಪರಿಗಣಿಸ ಲಾಗದು ಇತ್ಯಾದಿ ಎಚ್ಚರಿಕಾ ವಾಕ್ಯಗಳು ಇರುತ್ತಿದ್ದವು . 

   ಇದನ್ನೇ  ಪರಿಸ್ಕರಿಸಿ ' ಸ್ವಾಮಿ ನಿಮ್ಮ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದು ಸಂತೋಷ .ನೀವು ಇಂತಹ ದಿನ ಕೆಳ ಕಾಣಿಸಿದ ದಾಖಲೆಗಳೊಡನೆ ನಮ್ಮ ಕಚೇರಿಗೆ ಬನ್ನಿರಿ . ನಿಮ್ಮ ಸಹಾಯಕ್ಕೆ ಶ್ರೀ ರಾಮಣ್ಣ (ಫೋನ್ ನಂಬರ್ ) ಇವರನ್ನು ನಿಯುಕ್ತಿ ಗೊಳಿಸಿದ್ದೇನೆ . ಯಾವುದೇ ಸಂದೇಹ ಇದ್ದರೆ ಸಂಪರ್ಕಿಸಿರಿ . ಎಂದು ಆಕ್ಟಿವ್ ವಾಯ್ಸ್ ನಲ್ಲಿ ಒಕ್ಕಣೆ ಇದ್ದರೆ ಇವರು ನಮ್ಮವರು ಎಂಬ ಭಾವನೆ ಬರುವುದು .. ಅಲ್ಲದೆ ಕೆಲಸ ಮುಗಿಸಿ ಹೋದ ಮೇಲೂ ಅರ್ಜಿದಾರನಿಗೆ  ಅದು ಯಾವ ಹಂತದಲ್ಲಿ ಇದೆ ಎಂದು ಪತ್ರ  ಮುಖೇನ ಅಥವಾ ದೂರವಾಣಿ ಮೂಲಕ ಕಾಲಕಾಲಕ್ಕೆ ಮಾಹಿತಿ ನೀಡಿ ತಮ್ಮ ಸೇವೆಯನ್ನು ಬಳಸಿದ್ದಕ್ಕೆ ಕೃತಜ್ಞತೆ ಸಮರ್ಪಿಸಿ , ತಮ್ಮ ಕಚೇರಿಯ ಸೇವೆಯ ಗುಣಮಟ್ಟದ ಬಗ್ಗೆ ಅಭಿಪ್ರಾಯ ಸಂಗ್ರಹಿದರೆ ಇನ್ನೂ ಒಳ್ಳೆಯದಲ್ಲವೇ ?

ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ?ಮತ್ತು ಯಾಕೆ ಕಟ್ಟ ಬೇಕು ?

 

ಗುರುವಾರ, ಜೂನ್ 24, 2021

ಡಾ ಎಚ್ ಕೆ ನಂಜುಂಡ ಸ್ವಾಮಿ

 ಹಿರಿಯರಾದ ಮರಕಿಣಿ ನಾರಾಯಣ ಮೂರ್ತಿಯವರು ಮೊನ್ನೆ ಫೇಸ್ ಬುಕ್ ನಲ್ಲಿ ಡಾ ಎಚ್ ಕೆ ರಂಗನಾಥರ ಎರಡು ಪುಸ್ತಕಗಳ ಭಾವ ಚಿತ್ರ ಹಾಕಿದ್ದರು   .ಕೂಡಲೇ ನನಗೆ ರಂಗನಾಥ ಅವರ ಸಹೋದರ ಡಾ ಎಚ್ ಕೆ ನಂಜುಡ ಸ್ವಾಮಿ ಅವರ ನೆನಪಾಯಿತು . ಇವರು ಸಹೋದರರೆಲ್ಲ ಪ್ರತಿಭಾವಂತರು ; ಖ್ಯಾತ ಸಾಹಿತಿ ಕವಿ ಆಡಳಿತಗಾರ ಎಸ ವಿ ಪರಮೇಶ್ವರ ಭಟ್ ಅವರ ಪತ್ನಿ ಇವರ ಸಹೋದರಿ ,ಮತ್ತು ಪ್ರಜಾವಾಣಿ ಯ ಸಂಪಾದಕರಾಗಿ  ಖ್ಯಾತರಾಗಿದ್ದ ಟಿ ಎಸ ರಾಮಚಂದ್ರ ರಾವ್ ಇವರ ಸಮೀಪ ಸಂಬಂದಿ . ವಿದ್ಯಾರ್ಥಿ ದೆಸೆಯಲ್ಲಿಯೇ ನಾಟಕ ಸಾಹಿತ್ಯ ರಂಗಗಳಲ್ಲಿ ಕೈಯ್ಯಾಡಿಸಿದ್ದ ಇವರು ತಮ್ಮ  ವೈದ್ಯಕೀಯ ವೃತ್ತಿಯಿಂದಾಗಿ (ಅಮೇರಿಕಾದಲ್ಲಿ )ಆ ಕಡೆ ಗಮನ ಹರಿಸಲು ಸಾಧ್ಯವಾಗದೆ ,ನಿವೃತ್ತಿ ನಂತರ  ಈ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡರು . ಖ್ಯಾತ ಬರಹಗಾರ  ಶ್ರೀನಿವಾಸ ವೈದ್ಯರಂತೆ ತಮ್ಮ ಅರುವತ್ತರ ವಯಸ್ಸಿನ ನಂತರ ಬರವಣಿಗೆ ತೊಡಗಿಸಿ ಕೊಂಡು ಸೈ ಎನಿಸಿ ಕೊಂಡವರು . ಕೆಲ ವರ್ಷಗಳ ಹಿಂದೆ ತೀರಿ ಕೊಂಡರು . 

ಕೆಲ ವರ್ಷಗಳ ಹಿಂದೆ ಮಂಗಳೂರಿನ ಅತ್ರಿ ಬುಕ್ ಸೆಂಟರ್ ನಲ್ಲಿ ಇವರ ಸುಶ್ರುತ ನಡೆದ ಹಾದಿಯಲ್ಲಿ ಪುಸ್ತಕ ಕಣ್ಣಿಗೆ ಬಿದ್ದಿತು . ವೈದ್ಯರೊಬ್ಬರು ಬರೆದ ಪುಸ್ತಕ ಎಂದು ಕೊಂಡು ಓದಿದೆನು .ಬಹಳ ಆತ್ಮೀಯ ಬರಹ ,ಭಾಗಶಃ  ಆತ್ಮ ಕಥಾತ್ಮಕ . ಆಮೇಲೆ ನನ್ನ ವಿದ್ಯಾರ್ಥಿಗಳಿಗೆ  ಮತ್ತು ಮಿತ್ರರಿಗೆ ಇದನ್ನು  ಓದುವಂತೆ ಶಿಫಾರಸ್ಸು ಮಾಡಿದೆನು .ನನ್ನ ಮಗನ ಮದುವೆಗೆ ಇದರ ಹಲವು ಕಾಪಿಗಳನ್ನು  ಹುಬ್ಬಳ್ಳಿಯಿಂದ ನೇರ ತರಿಸಿ ಬಂದಿದ್ದ ನನ್ನ  ವೈದ್ಯಕೀಯ ಸಹಪಾಠಿ ಗಳಿಗೆ ಹಂಚಿದ್ದೇನೆ . 

ಈ ಪುಸ್ತಕವನ್ನು ಮೆಚ್ಚಿ  ಅವರಿಗೆ ಈ ಮೇಲ್ ಮಾಡಿದ್ದಕ್ಕೆ ಕೂಡಲೇ ಉತ್ತರಿಸಿದ್ದರಲ್ಲದೆ ತಮ್ಮ ಇತರ ಕೃತಿಗಳು ಯಾವುದೆಲ್ಲ ಎಲ್ಲಿ ಲಭ್ಯ ಎಂಬ ಮಾಹಿತಿಯನ್ನೂ ನೀಡಿದರು .ನನ್ನ ಬಳಿ ಅವರ ಇತರ ಕೃತಿಗಳಾದ ಕಾನನದ ಮಲ್ಲಿಗೆ ,ನಿಶ್ಶಬ್ದ  ಸಂಗೀತ ,ಕನ್ನಡ ಗಿನ್ನಡ ಮತ್ತು ಕಲಸು ಮೇಲೋಗರ ಇವೆ . ಕಾನನದ  ಮಲ್ಲಿಗೆಗೆ ಕೋ ಚೆನ್ನ ಬಸಪ್ಪ ಮುನ್ನುಡಿ ಬರೆದಿದ್ದಾರೆ . ಹೆಚ್ಚಿನವು ಲಲಿತ ಪ್ರಬಂಧ ಗಳು ಎನ್ನ ಬಹುದು ,ಮತ್ತು ಓದಿಸಿ ಕೊಂಡು ಹೋಗುವವು . 


ಶುಶ್ರುತ ನಡೆದ ಹಾದಿಯಲ್ಲಿ ಪುಸ್ತಕದಲ್ಲಿ  ನೊಂದ ಹೃದಯಿ ಡಾಕ್ಟರ್ ಜಾಕೋಬ್ಸ್ ಎಂಬ ಲೇಖನ ಇದೆ .ಇದು ನಿಜ ಕತೆ . ಡಾಕ್ಟರ್ ಜಾಕೋಬ್ಸ್ ಪಿಟ್ಸ್ ಬರ್ಗ್ ನ ಹೆಸರಾಂತ  ಸ್ತ್ರೀ ರೋಗ ಶಾಸ್ತ್ರಜ್ಞರು . ನುರಿತ ಶಸ್ತ್ರ ಚಿಕಿತ್ಸಕರು ಮತ್ತು ರೋಗಿಗಳ ಬಗ್ಗೆ ಅನುಕಂಪ ಇರುವವರು ಎಂದು  ಪ್ರಸಿದ್ಧ ರಾದವರು . ಯಾವಾಗಲೂ ಬ್ಯುಸಿ . ಇವರ ಬಳಿಗೆ ಮಕ್ಕಳಿಲ್ಲದ ವಿವಾಹಿತ ಯುವತಿ ಓರ್ವಳು ಶಂಕಿತ ಗರ್ಭ ಕೋಶದ ಗಡ್ಡೆ ಯ ಚಿಕಿತ್ಸೆ ಗಾಗಿ  ಬರುತ್ತಾಳೆ  . ಆಗೆಲ್ಲಾ ಹೊಟ್ಟೆಯ ಅಲ್ಟ್ರಾ ಸೌಂಡ್ ಸ್ಕ್ಯಾನ್ ಇರಲಿಲ್ಲ .ವೈದ್ಯರು ತಮ್ಮ ಕೈಯ್ಯಲ್ಲಿ ಪರೀಕ್ಷೆ ಮಾಡಿ ಅಂದಾಜು ಮಾಡಬೇಕು . ಕೆಳ ಹೊಟ್ಟೆಯ ಗಡ್ಡೆ ಆದ್ದರಿಂದ ಗರ್ಭ ಕೋಶ ಇಲ್ಲವೇ ಮೂತ್ರಾಶಯ (urinary bladder )ಗೆ ಸಂಬಂದಿಸಿದ್ದು ಎಂದು ಕೊಂಡು ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದರು . ಈಕೆಗೆ ಮಕ್ಕಳು ಆಗಿಲ್ಲದ ಕಾರಣ ಗರ್ಭ ಕೋಶದ ಗಡ್ಡೆ ಇದ್ದರೆ ಅದನ್ನು ತೆಗೆಯುವ ಉದ್ದೇಶ ದಿಂದ  ಹೊಟ್ಟೆ  ಓಪನ್ ಮಾಡಿ ನೋಡಿದರೆ ಗರ್ಭ ಕೋಶಕ್ಕೆ  ಅಂಟಿ ಕೊಂಡು ಒಂದು ಗಡ್ಡೆ ಇದ್ದಿತು ,ಇದುವರೆಗೆ ಇವರು ಕಂಡಿರದಂತಹುದು .ಮುಟ್ಟಿ ನೋಡಿದರೆ ಕ್ಯಾನ್ಸರ್ ತರಹ ಇರಲಿಲ್ಲ ,ಕಷ್ಟ ಪಟ್ಟು ಅದನ್ನು ಬೇರ್ಪಡಿಸಿ ಹೊರ ತೆಗೆದು ಬಯಾಪ್ಸಿ ಗೆ ಕಳುಹಿಸಿದರೆ  ಅದು ಆರೋಗ್ಯವಂತ ಮೂತ್ರ ಪಿಂಡ ಎಂಬ ರಿಪೋರ್ಟ್ ಬರುತ್ತದೆ . ಅಪರೂಪಕ್ಕೆ ಕೆಲವರಲ್ಲಿ  ಕಿಡ್ನಿ ತಾನು ಇರ ಬೇಕಾದ ಜಾಗದ ಬದಲಾಗಿ ಬೇರೆಲ್ಲೋ ಸ್ಥಾಪಿತ ವಾಗಿರುತ್ತದೆ . ಈ ರೋಗಿಯಲ್ಲಿಯೂ ಹಾಗೆಯೇ ಆಗಿತ್ತು .ದುರದೃಷ್ಟ ವಶಾತ್  ಅವಳಿಗೆ ಹುಟ್ಟಿನಾರಭ್ಯ ಒಂದೇ ಮೂತ್ರ ಪಿಂಡ ಇದ್ದಿತು ಕೂಡಾ (ಎಲ್ಲರಲ್ಲೂ ಎಡ  ಮತ್ತು ಬಲ ಎಂದು ಎರಡು ಇರುತ್ತದೆ .)ಆಗೆಲ್ಲಾ ಡಯಾಲಿಸಿಸ್ ಚಿಕಿತ್ಸೆ ಕೂಡಾ ಮುಂದುವರಿದು ಇರಲಿಲ್ಲ .ಕೆಲ ದಿನಗಳಲ್ಲಿ ರೋಗಿ ಮರಣ ಹೊಂದುವಳು . ಆಸ್ಪತ್ರೆಯ ಡೆತ್  ಆಡಿಟ್ ಮೀಟಿಂಗ್ ನಲ್ಲಿ ಉಳಿದ ಸಹೋದ್ಯೋಗಿಗಳು  ಅಂತಹ ಸಂದರ್ಭದಲ್ಲಿ  ತಾವೂ ಜಾಕೋಬ್ಸ್ ಅವರ ತರಹವೇ ಮಾಡುತ್ತಿದ್ದೆವು ಎಂದು ಸಮಾಧಾನ ಮಾಡುತ್ತಾರೆ .ರೋಗಿಯ ಸಂಬಂಧಿಕರೂ ಇವರ ಮೇಲೆ ಆಕ್ಷೇಪಣೆ ಏನೂ ಮಾಡಿದಂತೆ ಇಲ್ಲ . ಆದರೂ ನೊಂದ  ಡಾಕ್ಟರ್ ಜಾಕೋಬ್ಸ್ ಕೆಲ ದಿನಗಳ ನಂತರ ಆತ್ಮ ಹತ್ಯೆ ಮಾಡಿ ಕೊಳ್ಳುತ್ತಾರೆ .ಇದಕ್ಕೆ ಕಾರಣ ಆ ರೋಗಿಯ ಹಳೆಯ ಒಂದು ವೈದ್ಯಕೀಯ ದಾಖಲೆಯಲ್ಲಿ  ಆಕೆಗೆ ಒಂದೇ ಕಿಡ್ನಿ ಇರುವುದು ಮತ್ತು ಅದು ತನ್ನ ಯಾವತ್ತೂ ಇರುವ ತಾಣದಲ್ಲಿ ಇಲ್ಲ ಎಂಬ ಉಲ್ಲೇಖ ಇತ್ತು .ಆದರೆ ಕಾರ್ಯ ಬಾಹುಳ್ಯ ದ ಒತ್ತಡದಿಂದ ಅದನ್ನು ಅವರು ಗಮನಿಸಿ ಇರಲಿಲ್ಲ . 



ಬನ್ನಿರಿ ನೋಡಿರಿ ಆನಂದ ಪಡಿರಿ

 ಬನ್ನಿರಿ  ನೋಡಿರಿ ಆನಂದ ಪಡಿರಿ 

 

ಬಾಲ್ಯದಲ್ಲಿ ಕೆಲವು ಹವ್ಯಾಸಗಳು ಇದ್ದವು . ಅವುಗಳಲ್ಲಿ ಒಂದು ನೋಟೀಸ್ ಸಂಗ್ರಹಿಸುವುದು . ಊರಲ್ಲಿ ಯಕ್ಷಗಾನ ಬಯಲಾಟ ಇದ್ದರೆ  ಗಾಡಿಯಲ್ಲಿ ಮೈಕ್ ಇಟ್ಟು  "ಬನ್ನಿರಿ ನೋಡಿರಿ ಆನಂದ ಪಡಿರಿ ".ಅಣ್ಣನಕುಲೆ ಅಕ್ಕನಕುಲೆ ಬಲೆ ತೂಲೆ ಒಂಜೇ ಒಂಜಿ ಪ್ರದರ್ಶನ "ಎಂದು ಉದ್ಘೋಷಣೆ ಮಾಡುತ್ತಾ ಹೋಗುವರು .ಅವರ ಹಿಂದೆಯೇ ನಾವು ಮಕ್ಕಳು ಓಡಿ  ನೋಟೀಸ್ ಹೆಕ್ಕುವೆವು .ಹೆಚ್ಚು ಸಿಕ್ಕರೆ ಸಂತೋಷ ,ಇಲ್ಲವಾದರೆ ನಿರಾಸೆ . ಬಣ್ಣ ಬಣ್ಣದ ನೋಟೀಸ್ . ವಿದ್ಯುತ್ ದೀಪಗಳಿಂದ ಅಲಂಕೃತವಾದ ರಂಗ ಸಜ್ಜಿಕೆ (ಇದು ಆಗ ಒಂದು ಆಕರ್ಷಣೆ ,ಯಾಕೆಂದರೆ ಮನೆಗಳಲ್ಲಿ ಇನ್ನೂ ಕರೆಂಟ್ ಇರಲಿಲ್ಲ )ಯಲ್ಲಿ' ಕಾಂತಾ ಬಾರೆ ಬುಧಾ ಬಾರೆ ",ದೇವಪೂಂಜ ಪ್ರತಾಪ ",'ಪಾಪಣ್ಣ ವಿಜಯ ಗುಣ ಸುಂದರಿ "ಶ್ವೇತ ಕುಮಾರ ಚರಿತ್ರೆ "ಇತ್ಯಾದಿ ಪ್ರಸಂಗಗಳ ಹೆಸರು ಹೇಳಿ ನೋಡಿ ಆನಂದಿಸಿರಿ ಎಂಬ ಅಹ್ವಾನ ವೂ  ನೋಡದೇ  ನಿರಾಶರಾಗದಿರಿ ಎಂಬ ಎಚ್ಚರಿಕೆಯೂ ಈ ನೋಟೀಸ್ ಗಳ  ಮುಖ್ಯ ಒಕ್ಕಣೆ . 

ಇನ್ನು ವಿಟ್ಲ ಪೇಟೆಯಲ್ಲಿ ಟೆಂಟ್  ಸಿನೆಮಾ ಆರಂಭವಾದ ಮೇಲೆ ,ಹೊಸ ಚಿತ್ರ ಬಂದಾಗ ಒಬ್ಬ ವ್ಯಕ್ತಿ ಸೈಕಲ್ ನಲ್ಲಿ  ಬಂದು  ಅಂಗಡಿ ಗೋಡೆಗಳಿಗೆ ಪೋಸ್ಟರ್ ಹಚ್ಚಿ ,ನೋಟೀಸ್ ಕೊಟ್ಟು ಹೋಗುತ್ತಿದ್ದನು . ರಾಜಹಂಸ ಥೀಯೇಟರ್ ನಲ್ಲಿ ಇಂದಿನಿಂದ  'ಉಳಗಂ ಸುಟ್ಟ್ರು ಬನ್  ವಾಲಿಬನ್' ಎರಡು ದೇಖಾವೆ ,ತಪ್ಪದೇ ನೋಡಿರಿ ಇತ್ಯಾದಿ . ಕನ್ನಡ ಸಿನೆಮಾ ಬಂದರೆ ನಮಗೆ ನಮ್ಮ ದೊಡ್ಡಪ್ಪ ನಟಿಸಿದ್ದರೆ ಅವರ ಹೆಸರು ನೋಟೀಸ್ ನಲ್ಲಿ ಕಂಡು ತುಂಬಾ ಖುಷಿ ಮತ್ತು ಹೆಮ್ಮೆ . ಅಂತಹ ನೋಟೀಸ್ ನಮ್ಮ ಸೇಫ್ಟಿ ಲಾಕರ್ ನಲ್ಲಿ ಭದ್ರವಾಗಿ ಇರುವುದು . 

ಇನ್ನು ಕೆಲವು ಕಿಡಿಗೇಡಿ ನೋಟೀಸ್ ಗಳು  ಸಿಗುತ್ತಿದ್ದವು .ಯಾವುದಾದರು ಪ್ರಸಿದ್ಧ ತೀರ್ಥ ಕ್ಷೇತ್ರದ ಮಹಿಮೆ ಬಗ್ಗೆ ಮೊದಲು ಉಲ್ಲೇಖ . ಆಮೇಲೆ ಈ ನೋಟೀಸ್ ಓದಿದದವರು ಇದರ ನೂರು ಪ್ರತಿ ಮಾಡಿ ಹಂಚುವುದು . ಹಾಗೆ ಮಾಡಿದ ಒಬ್ಬರಿಗೆ ಲಾಟರಿಯಲ್ಲಿ ಲಕ್ಷ ಹೊಡೆದಿರುವುದು ,ಉಢಾಫೆ ಮಾಡಿ ಮಾಡದೇ ಇದ್ದವರಿಗೆ ಲಕ್ವಾ ಹೊಡೆದಿರುವುದು ;ಇತ್ಯಾದಿ .ಮೊದಲು ಇಂತಹ ಎಚ್ಚರಿಕೆ ಪತ್ರ ನೋಡಿ ನಾವು ಕೆಲವು ಕಾಪಿ ಮಾಡಿದ್ದೂ ಇದೆ .ಆ ಮೇಲೆ ಹಿರಿಯರಿಗೆ ತಿಳಿದು ಅದನ್ನು ನಿಲ್ಲಿಸಿದ ನೆನಪು . 

ಇನ್ನು ನೋಟೀಸ್ ಗಳ  ಹೊರತಾಗಿ ಕೆಲವು ಅಮೂಲ್ಯ ಸಂಗ್ರಹಗಳು ಇದ್ದವು . 

ನವಿಲು ಗರಿಗಳು ಒಂದು  .ಆಗೆಲ್ಲಾ ಈಗಿನ ಹಾಗೆ ಕರ್ಕಶವಾಗಿ ಕೂಗಿ ಕೊಂಡು ಬರುವ ನವಿಲುಗಳು ಅಪರೂಪ;ನೋಡೇ  ಇಲ್ಲ ಎನ್ನ ಬಹುದು . ಆದುದರಿಂದ ನವಿಲು ಗರಿ ಸಿಕ್ಕಿದರೆ ಪುಸ್ತಕದ ಒಳಗೆ ಇಟ್ಟರೆ ಅದು ಮರಿ ಹಾಕುವುದು ಎಂಬ ನಂಬಿಕೆ ಇತ್ತು . 

ಇನ್ನು  ಸೋಡಾ  ಬಾಟ್ಲಿ ಯ  ಗೋಲಿ , ಬಸ್ ಟಿಕೆಟ್ ಪುಸ್ತಕದ ಕೌಂಟರ್ ಫಾಯಿಲ್ , ನೂಲುಸುತ್ತುವ ಕಾಗದದ ಓಟೆ (ಇದನ್ನು ನಾವು  ಟೆಲಿಫೋನ್ ಮಾಡಲು ಉಪಯೋಗಿಸುತ್ತಿದ್ದೆವು ಮತ್ತು ಅದನ್ನು ಊದಿ ಸಿಳ್ಳೆ ಹಾಕುತ್ತಿದ್ದೆವು )ಇವೆಲ್ಲಾ ನಮ್ಮ ಆಸ್ತಿ . 

ಸಣ್ಣ ಸಣ್ಣ ವಸ್ತುಗಳು ,ತರುತ್ತಿದ್ದ ಸಂತೋಷ ಬಲು ದೊಡ್ಡದು . ಚಿನ್ನ ಚಿನ್ನ ಆಸೈ . ಸಂತೋಷ  ಸಾಪೇಕ್ಷ ವಾದುದು . ಮಕ್ಕಳಿಗೆ ಆದ ಸಂತೋಷ  ಹಿರಿಯರಿಗೆ ಆದ ಸಂತೋಷಕ್ಕಿಂತ ಸಣ್ಣದಲ್ಲ ;ಹಿರಿಯರು ಸಂತೋಷಿಸುವ ವಿಷಯಗಳು ಮತ್ತು ವಸ್ತುಗಳು  ಇವುಗಳಿಂತ ಮಿಗಿಲಲ್ಲ

 

 

ಮಂಗಳವಾರ, ಜೂನ್ 22, 2021

ತಲೆ ಭಾರ

 

ಹಿಂದೆ ಹಳ್ಳಿಗಳು ಆತ್ಮ ನಿರ್ಭರ ಆಗಿದ್ದವು . ಅಡಿಕೆ ಮಾರಾಟಕ್ಕೆ ಮತ್ತು ಕೆಲವು ದಿನಸಿ ವಸ್ತುಗಳಿಗೆ  ಮಾತ್ರ ನಗರವನ್ನು ಅವಲಂಬಿಸ ಬೇಕಿತ್ತು . ಆಹಾರ ಧಾನ್ಯ ಅಕ್ಕಿ .ಉದ್ದು ,ಹೆಸರು ಮತ್ತು ತರಕಾರಿ ಇತ್ಯಾದಿ ನಾವೇ ಬೆಳೆಯುತ್ತಿದ್ದೆವು . ಎಣ್ಣೆಯ ಗಾಣ ನಡೆಸುವವರು ,ಅವಲಕ್ಕಿ ಹೊರಿಯಕ್ಕಿ ತಯಾರಿಸುವವರೂ ಇದ್ದರು . ಕೃಷಿಗೆ ಬೇಕಾದ ಹಾರೆ ಪಿಕ್ಕಾಸು ,ಕತ್ತಿ  ಮತ್ತು ಮಡು (ಕೊಡಲಿ )ಇತ್ಯಾದಿ ,ಮನೆಗೆ ಬೇಕಾದ ಮಣ್ಣಿನ ಪಾತ್ರೆಗಳು ಇತ್ಯಾದಿಗಳನ್ನು  ತಯಾರು ಮಾಡುವ ವೃತ್ತಿಯವರು ,ಮರದ ಕೆಲಸದ ಬಡಗಿ ,ಮಣ್ಣಿನ ಗೋಡೆ ಕಟ್ಟುವವರು ಇತ್ಯಾದಿ ಪ್ರತಿಯೊಂದು ಊರಿನಲ್ಲಿ ಇರುತ್ತಿದ್ದರು . ಒಂದು ರೀತಿಯಲ್ಲಿ  ನಾವು ಲಾಕ್ ಡೌನ್ ಆಗಿಯೇ ಇರುತ್ತಿದ್ದೆವು . 

           ಈಗ ಕೋವಿಡ್ ಲಾಕ್ ಡೌನ್ ಆಗಿ ನನಗೆ ಭಾರೀ ತಾಪತ್ರಯ ಕ್ಕೆ  ಬಂದಿದೆ . ತಿಂಗಳಿಗೆ ಒಮ್ಮೆ  ವ್ರತದಂತೆ  ತಲೆಗೂದಲು  ಕಟಾಯಿಸುತ್ತಿದ್ದ  ನಾನು ಮುಚ್ಚನಾಗಿ ಹುಚ್ಚನಂತೆ ಆಗಿ ಹೋಗಿರುವೆನು ;ಕಿವಿ ಮುಚ್ಚಿ ಹೋಗಿ ಭಾಗಶಃ ಕಿವುಡ ಆಗಿ  ಮನೆಯಲ್ಲಿ ಪತ್ನಿ ,ಆಸ್ಪತ್ರೆಯಲ್ಲಿ ರೋಗಿ ಮತ್ತ್ತು ನರ್ಸ್ ಗಳ  ಅಪಹಾಸ್ಯಕ್ಕೆ ಗುರಿಯಾಗಿರುವೆನು . ನನ್ನನ್ನು ನೋಡಿದರೆ ಜಟಾಧಾರೀ  ಶಂಕರ ಮತ್ತು  ತಪಸ್ಸಿಗೆ ಕುಳಿತ ವಿಶ್ವಾಮಿತ್ರನ ನೆನಪು ಆದರೆ ನನ್ನ ತಪ್ಪಲ್ಲ .ನನ್ನ ಹೆಸರು ಪದ್ಮನಾಭ ಹೋಗಿ ಈಗ 'ಕೇಶ'ವ ಆಗಿದೆ . ಈಗಿನ ತಲೆ (?)ಮಾರಿನವರಿಗೆ  ಕೂದಲು ಬೆಳೆಸುವುದೇ ಫ್ಯಾಷನ್ ಆದುದರಿಂದ  ಅವರು ಸಂಕಷ್ಟದಲ್ಲಿಯೂ  ಅದೃಷ್ಟವನ್ನು ಕಾಣುವರು . ಹರಿದ ಪ್ಯಾಂಟ್ ,ಕೈ ಬಳಿ ಒಟ್ಟೆ(ಹರಿದು ರಂಧ್ರ )ಆದ ರವಿಕೆ ಕೂಡಾ ಈಗ ಆಗಿರುವಂತೆ . 

ಬಾಲ್ಯದಲ್ಲಿ  ಎಂದು ಎಂದು ನಮ್ಮ ತಲೆ ಭಾರ ಹೆಚ್ಚಾಗುವುದೋ ಆಗೆಲ್ಲ ಕಣ್ಣ ಭಂಡಾರಿ ಎಂಬವರು  ತಮ್ಮ ಆಯುಧಗೊಳೊಂದಿಗೆ  ಪ್ರತ್ಯಕ್ಷ ಆಗುತ್ತಿದ್ದರು . ರಜಾ ದಿನ ನೋಡಿಯೇ ಬರುತ್ತಿದ್ದ ಅವರಿಗೆ ನಾವೆಲ್ಲಾ ತಲೆ ಬಾಗುತ್ತಿದ್ದವು ,ಮೇಲೆ ನೋಡಿದರೆ ತಲೆಯನ್ನು ಕೆಳಗೆ ಒತ್ತುವರು ,ಎಡ ಗಡೆ ತಿರುಗಿದರೆ ಬಲಕ್ಕೆ ತಿರುಗಿಸುವರು . ಯಾವುದೇ ಮುಲಾಜು ಇಲ್ಲದೆ ಬೋಳು ಮಂಡೆ ಮಾಡುವಂತೆ ಹಿರಿಯರೇ ಆಜ್ಞೆ ಮಾಡುತ್ತಿದ್ದುದರಿಂದ  ಸಿನಿಮಾ ನಟರಂತೆ ಕ್ರಾಪ್ ಇಡುವ ನಮ್ಮ ಆಸೆ ಹಾಗೆಯೇ ಉಳಿಯುತ್ತಿತ್ತು . ಮಕ್ಕಳಿಗೆ ಕತ್ತರಿ ಮಾತ್ರ ,ಹಿರಿಯರಿಗೆ  ಬಾಳು ಕತ್ತಿ ಸ್ವಲ್ಪ ಉಪಯೋಗಿಸುವರು . ಅವರು ಬಾಳು ಕತ್ತಿಯನ್ನು ಮಸೆಯುವ ಒಂದು ಕಲ್ಲನ್ನೂ ತರುತ್ತಿದ್ದು ಹರಿತ ಮಾಡಿ ಕೊಳ್ಳುವರು .ನನ್ನ ಅಣ್ಣ ಆಗ" ಬಾಳು ಬೆಳಗಿತು' ಎನ್ನುವನು .ನಮ್ಮ ಎದುರು ಗಡೆ ಕನ್ನಡಿ ಇರುತ್ತಿರಲಿಲ್ಲ . ಸಾಮೂಹಿಕ ಕೇಶ ಕರ್ತನದ ಬಳಿಕ ನಾವೆಲ್ಲಾ  ತಿರುಪತಿ ರಿಟರ್ನ್ಡ್ ತರಹ ಕಾಣುತ್ತಿದ್ದೆವು . ಕಣ್ಣನವರ ಬಳಿಕ ಅವರ ತಮ್ಮ ಪಕೀರ ಭಂಡಾರಿ ಬರುತ್ತಿದ್ದರು . ಮನೆಯಲ್ಲಿ ನಡೆಯುವ ಹೇರ್ ಕಟಿಂಗ್ ಗೆ  ಕುರ್ಚಿ ಇಲ್ಲ , ನಾವೆಲ್ಲಾ ಮರದ ಮಣೆಯ ಮೇಲೆಯೇ ಕುಳಿತು ಕೊಳ್ಳುತ್ತಿದ್ದೆವು . 

  ಎಲ್ಲಾ ಮುಗಿದು ಹೋಗುವಾಗ ಅವರ ಸಂಭಾವನೆ ,ತೆಂಗಿನಕಾಯಿ ,ಅಡಿಕೆ ,ವೀಳ್ಯದ ಎಲೆ ಕೊಡುವರು  .ಚಹಾ ಉಪಹಾರ ಸೇವಿಸಿ ಮುಂದೆ ಹೋಗುವರು . ಈಗ ಲಾಕ್ ಡೌನ್ ಸಮಯದಲ್ಲಿ ಅವರ ನೆನಪು ಆಗುವುದು ,ಜೀವನ ಎಷ್ಟು ಸರಳ ಆಗಿತ್ತು . ನಮ್ಮ ಬೇಕುಗಳು ಹೆಚ್ಚಿನವು ಅನಾಯಾಸವಾಗಿ ನೆರವೇರುತ್ತಿದ್ದವು . 

ನಿಮಗೆ ತಿಳಿದಿರ ಬಹುದು .ಒಂದು ಕಾಲಕ್ಕೆ ಯುರೋಪ್ ನಲ್ಲಿ  ಕ್ಷೌರಿಕ ರೇ  ಶಸ್ತ್ರ ಚಿಕಿತ್ಸಕ ರಾಗಿದ್ದು , ಈಗಿನ ರಾಯಲ್ ಕಾಲೇಜು ಒಫ್ ಸರ್ಜನ್ಸ್ ನ ಹುಟ್ಟು ರೋಯಲ್ ಕಾಲೇಜು ಒಫ್ ಬಾರ್ಬರ್ಸ್ ನಿಂದ ಆಯಿತು . ಅವರ ಸಂಭಾವನೆ ವೈದ್ಯರ ಫೀಸ್ ಗಿಂತಲೂ ಹೆಚ್ಚಾಗಿದ್ದ ಸಮಯ ಇತ್ತು . ಹೀಗೆ ಚಾರಿತ್ರಿಕ ನೆಲೆಯಲ್ಲಿ ಆದರೂ ಅಧಿಕಾರಿಗಳು  ಸಲೂನ್ ತೆರೆಯಲು ಅನುಮತಿ ನೀಡಿದರೆ ನನ್ನಂತಹವರಿಗೆ ಅನುಕೂಲ ಆಗುತ್ತಿತ್ತು . ನನಗೆ ಒಂದು ಸಂದೇಹ ಈ ಲಾಕ್ ಡೌನ್ ಯಾರಿಗೆ ಎಲ್ಲಾ ಎಂದು ನಿರ್ಧರಿಸುವವರು  ಬೋಳು ಮಂಡೆಯವರು ಇರಬಹುದು ,ನಮ್ಮಂಥವರ ಮೇಲೆ ಸ್ವಲ್ಪ ಅಸೂಯೆ ಇರಬೇಕು .

ಗುರುವಾರ, ಜೂನ್ 10, 2021

ಏನೂ ಇಲ್ಲದ ತಲೆಯಲ್ಲಿ ಹೇನೂ ಇಲ್ಲವೇ

                                 ತಲೆಯ  ಹೇನಿನ ಕಾಟ 

"ಏನೂ ಇಲ್ಲದ ತಲೆಯಲ್ಲಿ ಹೇನೂ ಇಲ್ಲವೇ ?" 

                

       Nitpicking: Why We Do It & 2 Questions To Stop Doing It | Marissa Bracke |  Digital Business Strategy & Implementationಮನೆ  ಮನೆಗಳಲ್ಲಿ  ಹೆಚ್ಚಾಗಿ ಸಂಜೆ ಹೊತ್ತು ತಲೆಯಿಂದ ಹೇನು ಹೆಕ್ಕುವುದು  ಸಾಮಾನ್ಯ ಕಂಡು ಬರುವ ದೃಶ್ಯ ಆಗಿತ್ತು ಮತ್ತು ಕೆಲವು ಕಡೆ ಈಗಲೂ ಇದೆ . ಈ ಹೇನಿನ ಉಪಟಳ ಶತಮಾನಗಳಿಂದ  ಜಗತ್ತಿನ ಎಲ್ಲಾ ಕಡೆ ಇದೆ . ಹೇನಿಗೆ ಇಂಗ್ಲಿಷ್ ನಲ್ಲಿ  ಲೌಸ್ ಎನ್ನುವರು . ಆ ಭಾಷೆಯಲ್ಲಿ ಒಂದು ಲೌಸಿ ಎಂಬ ನುಡಿಗಟ್ಟು ಇದೆ ಅರ್ಥಾತ್ ಅಸಹ್ಯ ಅಥವಾ ಚೆನ್ನಾಗಿಲ್ಲದ್ದು .. ಹೇನಿನ ಮೊಟ್ಟೆಗೆ ಇಂಗ್ಲಿಷ್ ನಲ್ಲಿ  ನಿಟ್ಸ್ ಎನ್ನುವರು . ನಿಟ್ ಪಿಕ್ಕಿಂಗ್ ಎಂಬ ಉಪಯೋಗ ಇದೆ ,ಇದರ ಅರ್ಥ ಯಾವುದಾದರೂ ವಿಷಯವನ್ನು ಒಕ್ಕಿ ಒಕ್ಕಿ(ಕೆದಕಿ ಕೆದಕಿ ) ನೋಡುವದು . ಇದನ್ನೇ ಗೋಯಿಂಗ್ ಓವರ್ ದಿ ಥಿಂಗ್ಸ್ ವಿಥ್ ಫೈನ್ ಟೂತ್  ಕಾಂಬ್ ಎಂದು ಬಳಸುವದೂ ಇದೆ . 

ತಲೆಯ ಹೇನು ಒಂದು ಪರಾವಲಂಬಿ ಜೀವಿ . ನೈರ್ಮಲ್ಯ ಕೊರತೆ ಮತ್ತು ಕಿಕ್ಕಿರಿದ ಮನೆಗಳು ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡಲು ಸಹಾಯಕಾರಿ . ಹೆಣ್ಣು ಮಕ್ಕಳಲ್ಲಿ ಇದರ ಉಪಟಳ ಜಾಸ್ತಿ . ತಲೆಯ ಚರ್ಮದಿಂದ ರಕ್ತ ಹೀರಿ  ಬದುಕುವ ಇವು ,ಅಲ್ಲಿಯೇ ಮೊಟ್ಟೆ  ಇಟ್ಟು ಸಂತಾನ ಬೆಳೆಸುವವು ..ಸ್ವಲ್ಪ ಹಳದಿ ,ಹೆಚ್ಚು ಬಿಳಿ ಇರುವ ಮೊಟ್ಟೆಗಳು ಕೂದಲ ಬುಡಕ್ಕೆ ಅಂಟಿಕೊಂಡು ಇರುವವು .. ಇವು ಮೊದಲು ತರುಣ ಆಮೇಲೆ  ಪ್ರಬುದ್ಧ ಆಗುವವು . 

                     Head louse - Wikipedia ಇವುಗಳ ಕಡಿತದಿಂದ ವಿಪರೀತ ತುರಿಕೆ ಉಂಟಾಗುವದು .

ಹಿಂದೆ  ನೈರ್ಮಲ್ಯ ಕೊರತೆಯಿಂದ ಇದರ ಹಾವಳಿ ಸರ್ವ ವ್ಯಾಪಿ ಆಗಿದ್ದು ,ಅದು ಒಂದು ಸಹಜ ಉಪಟಳ ಎಂದು ಎಲ್ಲರೂ ಭಾವಿಸುತ್ತ್ತಿದ್ದರು .ಹೇನು ತೆಗೆಯುವ ಬಾಚಣಿಗೆ ಎಂದೇ ಎಲ್ಲರ ಮನೆಯಲ್ಲಿ ಪ್ರತ್ಯೇಕ ಇರುತ್ತಿತ್ತು .ತಾಯಿ ಸಮಯ ಸಿಕ್ಕಾಗ ಮಗಳನ್ನು ತನ್ನ ಕಾಲ್ಗಳ ನಡುವೆ ಕೂರಿಸಿ ಹೇನು ಹೆಕ್ಕಿ ಅದನ್ನು ಉಗುರುಗಳ ನಡುವೆ ಚಿಟುಕ್ಕೆಂದು ಕೊಲ್ಲು ತ್ತಿದ್ದರು .ಕೆಲವರು ಈ ಕೆಲಸಕ್ಕೆ ಕತ್ತಿ (ಮಚ್ಚು )ಯನ್ನೂ ಬಳಸುತ್ತಿದ್ದರು . ಇದೇ  ವೇಳೆಯನ್ನು ಕೆಲವು ತಾಯಿ ಮಕ್ಕಳು ಪರಸ್ಪರ ಗುಟ್ಟು ಮಾತನಾಡಿ ಕೊಳ್ಳಲು ,ಇನ್ನು ಕೆಲವು ಅಮ್ಮಂದಿರು ಮಗ್ಗಿ ಬಾಯಿಪಾಠ  ಮಾಡಿಸಲು ಉಪಯೋಗಿಸುವರು .ಕೋಪ ಬಂದಾಗ ಮಗಳ ತಲೆಗೆ ಕುಟ್ಟುವರು .ತಾಯಿ ಮಕ್ಕಳನ್ನು ಸ್ವಲ್ಪ ಹತ್ತಿರ ಮಾಡಿದ ಶ್ರೇಯ ಹೇನಿಗೆ  ಸಿಗಬೇಕು .  ಪುನರಪಿ ಜನನ ಆಗಿ ಕೆಲವು ದಿನಗಳ ನಂತರ  ಇದೇ ಹೇನು ಸಂಹಾರ ಕಾರ್ಯದ ಪುನರಾವರ್ತನೆ ಆಗುವುದು . 

  ಈ  ಕಾಟಕ್ಕೆ ಈಗ ಒಳ್ಳೆಯ ಔಷಧಿಗಳು ಬಂದಿವೆ .  ಪೆರ್ಮೆಥ್ರಿನ್ ನ ೧% ಲೋಷನ್ , ೧% ಲಿಂಡೇನ್ , ೦.೫% ಮ್ಯಾಲಾಥಿಯೊನ್ ಮತ್ತು  ೦.೫%  ಐವರ್ ಮೆಕ್ಟಿನ್ ಲೋಷನ್ ಇತ್ಯಾದಿ .ಇವುಗಳನ್ನು ಸಾಮಾನ್ಯ ಶಾಂಪೂ ಉಪಯೋಗಿಸಿ ಒಣಗಿಸಿದ  ತಲೆಗೆ  ಹಚ್ಚಿ  ೧೦ ನಿಮಿಷಗಳ ಕಾಲ ಬಿಟ್ಟು ಕೂದಲು ತೊಳೆಯ ಬೇಕು .ತಲೆಯನ್ನು  ಬಗ್ಗಿಸಿ  ತೊಳೆಯುವುದರಿಂದ  ಶರೀರಕ್ಕೆ ಔಷಧಿ  ಸೇರದಂತೆ ಮಾಡ ಬಹುದು . ಇವುಗಳಲ್ಲಿ  ಹೆಚ್ಚಿನ ಔಷಧಿಗಳು  ಮೊಟ್ಟೆಗಳನ್ನು  ಸಂಪೂರ್ಣ ನಾಶ ಮಾಡವು ,ಆದುದರಿಂದ  ೧೦ ದಿನ ಬಿಟ್ಟು ಪುನಃ ಔಷಧಿ ಪ್ರಯೋಗ ಮಾಡುವುದು .ಕಣ್ಣಿನ ಒಳಗೆ ಔಷಧಿ ಹೋಗದಂತೆ ನೋಡಿ ಕೊಳ್ಳ ಬೇಕು .ಕಣ್ಣ ರೆಪ್ಪೆಗೆ ವ್ಯಾಸಲಿನ್ ಹಚ್ಚುವುದರಿಂದ  ಹೇನು ನಿವಾರಿಸ ಬಹುದು . 

ಮನುಷ್ಯರ ಮತ್ತು ಪ್ರಾಣಿಗಳ ಹೇನುಗಳು ಬೇರೆ .ಪ್ರಾಣಿಗಳ ಹೇನು ನಮ್ಮ ತಲೆಗೆ ಬಾರದು ;ಆದರೂ ಸಾಕು ಪ್ರಾಣಿಗಳ ಮೈಯಲ್ಲಿ ನಮ್ಮ ತಲೆಯಿಂದ ಬಿದ್ದ ಹೇನು ಮತ್ತು ಮೊಟ್ಟೆ ಇರ ಬಹುದು . ಮನುಜರ ಹೇನು ತಲೆಯಿಂದ ಹೊರ ಬಿದ್ದ ಕೆಲವು ಗಂಟೆಗಳಲ್ಲಿ ಸಾವನ್ನು ಅಪ್ಪುವುದು . ನಮ್ಮ ಬಟ್ಟೆಗಳಲ್ಲಿ ಹೇನಿನ  ಮೊಟ್ಟೆ  ಇರುವುದರಿಂದ ಕುದಿಯುವ ಬಿಸಿ ನೀರಿನಲ್ಲಿ ಅದ್ದಬೇಕು . ಬಿಸಿ ನೀರಿನಲ್ಲಿ ಹಾಕ  ಬಾರದ ಬಟ್ಟೆಗಳನ್ನು  ಡ್ರೈ ವಾಶ್  ಮಾಡಿ  ಎರಡು ವಾರ ಚೀಲದ ಒಳಗೆ ಇಡಬೇಕು . ಬಾಚಣಿಕೆ ಯನ್ನು ಸ್ವಚ್ಛ ವಾಗಿ ಇಡಬೇಕಲ್ಲದೆ ಒಬ್ಬರದ್ದು ಅವರೇ ಉಪಯೋಗಿಸುವುದು ಉತ್ತಮ ,

ಬುಧವಾರ, ಜೂನ್ 9, 2021

ಏಳು ಸುತ್ತಿನ ಕೋಟೆ

              ಏಳು  ಸುತ್ತಿನ  ಕೋಟೆ 


ಬಾಲ್ಯದಲ್ಲಿ  ಆಗಾಗ ಕೇಳುತ್ತಿದ್ದ ಕತೆಯ ಪ್ರೋಟೋ  ಟೈಪ್ ,. ಏಳು  ಕೋಟೆಗಳ  ಒಳಗೆ  ಒಬ್ಬ  ರಾಜಕುಮಾರಿ  .  ಅವಳನ್ನು  ಗೆದ್ದು ಮದುವೆ ಯಾಗುವ  ಮನಸುಳ್ಳ  ಒಬ್ಬ  ರಾಜಕುಮಾರ  .ಆದರೆ ಅಲ್ಲಿಗೆ  ಹೋಗುವ ದಾರಿ ಸುಗಮ  ಅಲ್ಲ . ಮೊದಲನೇ  ಕೋಟೆಯ  ಬಾಗಿಲಿನಲ್ಲಿ  ಒಬ್ಬಳು ಮುದುಕಿ .ಅವಳು ಕೇಳಿದ ಮೂರು ಪ್ರಶ್ನೆಗಳಿಗೆ  ಸರಿಯಾದ  ಉತ್ತರ ಕೊಟ್ಟರೆ  ಎರಡನೇ  ಕೋಟೆಯ  ಬಾಗಿಲು  ತೆರೆಯುವುದು .ಅಲ್ಲಿ  ಒಂದು  ಗಿಳಿ .ಅದು  ರಾಜಕುಮಾರನಿಗೆ ಒಂದು ಗುಪ್ತ ಸಂಕೇತ  ನೀಡುವುದು .ಅದನ್ನು  ಕಾವಲುಗಾರರಿಗೆ ಹೇಳಿದರೆ ಆರನೇ  ಬಾಗಿಲು ವರೆಗೆ ಹೋಗ ಬಹುದು . ಅಲ್ಲಿ  ಏಳು ಹಕ್ಕಿಯಗಳ  ಗೂಡುಗಳು, ಏಳನೇ ಹಕ್ಕಿಯ  ಕೊರಳೊಳಗೆ ಒಂದು ಮಣಿ . ಆ ಮಣಿಯನ್ನು ತೋರಿಸಿ  ಅಜ್ಜಿ ಹೇಳಿದ ಗುಪ್ತ ಸಂಕೇತ  ಹೇಳಿದರೆ  ರಾಜಕುಮಾರಿಯ  ದರ್ಶನ. 

ಇಂತಹದೇ  ಅನುಭವ ನನಗೆ ನಿನ್ನೆ ಆಯಿತು .ಎಲ್ಲರೂ ಮಾಡುತ್ತಾರೆ ಎಂದು  ಇಂಟರ್ನೆಟ್  ಬ್ಯಾಂಕಿಂಗ್  ಮೂಲಕ  ಹಣ ಕಳುಹಿಸಲು ಎಂದು ಯೂಸರ್  ನೇಮ್  ಮತ್ತು  ಪಾಸ್ ವರ್ಡ್  ಕ್ಯಾಪ್ ಚಾ   ಹಾಕಿದರೆ   ತೆರೆಯಲಿಲ್ಲ .ಬದಲಿಗೆ  ನಿಮ್ಮ  ಮೊಬೈಲ್ ಗೆ  ಬಂದ  ಲಾಗ್ ಇನ್  ಓ ಟಿ ಪಿ ಹಾಕಿರಿ ಎಂದಿತು .ಮೊಬೈಲ್ ನಲ್ಲಿ  ನಾನು  ಸಂದೇಶ  ಓದು ವಷ್ಟರಲ್ಲಿ  ಮೊಬೈಲ್ ದೀಪ ಅರಿತು .ಪುನಃ ಆನ್ ಮಾಡಿದಾಗ  ಮೊಬೈಲ್ ಪಿನ್ ಕೇಳಿತು .ಅದನ್ನು  ಹಾಕಿ ಮೆಸ್ಸೆಂಜರ್  ಗೆ  ಹೋಗಿ  ಓ ಟಿ ಪಿ ಕಾಪಿ ಮಾಡಲು  ಇನ್  ವ್ಯಾಲಿಡ್  ಎಂದು ಬರಲು  ಪುನಃ  ಸರಿಯಾಗಿ  ನೋಡಿ ಎಂಟರ್  ಮಾಡಲು  ನಿಮ್ಮ  ಸೆಶನ್  ಮುಗಿದಿದೆ ,ಪುನಃ  ಆರಂಭಿಸಿರಿ  ಎಂದು ಬಂತು . ಛಲ ಬಿಡದ  ತ್ರಿವಿಕ್ರಮನಂತೆ  ಮತ್ತೆ ಲಾಗ್ ಇನ್  , ಓ ಟಿ ಪಿ  ಯೆಲ್ಲಾ  ಆದಾಗ  ಮೊದಲನೇ  ಬಾಗಿಲು ತೆರೆಯಿತು . 

ಇಷ್ಟೆಲ್ಲ  ಆಗಿ  ನಾನು ಕಳುಹಿಸ ಬೇಕಿದ್ದವರ  ಹೆಸರು ,ಅಕೌಂಟ್ ನಂಬರ್  ಮೊತ್ತ ಇತ್ಯಾದಿ ಹಾಕಿದಾಗ ಇದನ್ನು ಕಳುಹಿಸಲು  ನಿಮ್ಮ ಮೊಬೈಲ್ ನಲ್ಲಿ ಸೆಕ್ಯೂರಿಟಿ  ಓ ಟಿ ಪಿ  ಆಪ್  ಡೌನ್ ಲೋಡ್ ಮಾಡಿರಿ ,ಮತ್ತು ಅದರಲ್ಲಿ  ಬರುವ ಸೆಕ್ಯೂರಿಟಿ ಕೋಡ್  ಎಂಟರ್ ಮಾಡಿರಿ ಎಂದು ಬಂತು .ಗೂಗಲ್ ಪೇ  ಯಲ್ಲಿ  ಆಪ್  ಡೌನ್ಲೋಡ್ ಮಾಡಿ  activate  ಮಾಡಲು  ಪುನಃ ಲಾಗ್ ಇನ್ ಹೆಸರು ಮತ್ತು ಪಾಸ್ವರ್ಡ್  ಕೇಳಿತು .ಮುಂದೆ ಮುಂದುವರಿಯಲು ಅವರೇ ಕೊಡುವ ಉಂಡು ಸಂದೇಶ ಅವರಿಗೆ  ಎಸ್  ಎಂ  ಎಸ್   ಮಾಡಲು ಹೇಳಿತು . ಆಮೇಲೆ ನಾವು ನಮ್ಮ ಪಾಸ್ ವರ್ಡ್ ಪುನಃ ಹಾಕಬೇಕು .ಅಲ್ಲಿಗೆ ಸೆಕ್ಯೂರಿಟಿ  ಓ ಟಿ ಪಿ ಆಪ್ ನ  ಪಿನ್ ರಚಿಸುವ ಹಕ್ಕು ಬಂತು .ಅದನ್ನು ಎರಡು ಬಾರಿ ಹಾಕಿದಾಗ  ನೀವು ನಿಮ್ಮ ಇಂಟರ್ನೆಟ್ ಬ್ಯಾಂಕಿಂಗ್  ಸೈಟ್ ನಲ್ಲಿ  ಪ್ರೊಫೈಲ್ ಗೆ  ಹೋಗಿ  ಅಲ್ಲಿ  ನಿಮ್ಮ ಮೊಬೈಲ್ ಗೆ  ಬಂದ  ಓ ಟಿ ಪಿ ಯನ್ನು validate  ಸೆಕ್ಯೂರಿಟಿ  ಅಪ್ ಪಿನ್ ಎಂಬ ಭಾಗಕ್ಕೆ ಹೋಗಿ  ಎಂಟರ್ ಮಾಡಿದಾಗ  ಆಪ್ ಕಾರ್ಯ ನಿರತವಾಗುವುದು .ಆಮೇಲೆ  ನೀವು ರಚಿಸಿದ ಪಿನ್ ಹಾಕಿ ತೆರೆದು ಒಂದು ಸೆಕ್ಯೂರಿಟಿ ಓ ಟಿ ಪಿ ದಯಪಾಲಿಸು ಎಂದಾಗ ಬರುವ ಸಂಖ್ಯೆಯನ್ನು  ನಾವು ಇಂಟರ್ನೆಟ್  ಬ್ಯಾಂಕಿಂಗ್ ನಲ್ಲಿ ಹಣ ಪಾವತಿ ಹಂತದಲ್ಲಿ ಎಂಟರ್ ಮಾಡಿದಾಗ ಮಾತ್ರ  ಕೆಲಸ ಆಯಿತು . 

ಇದು ಎಲ್ಲಾ ನಮ್ಮ ಗಳಿಕೆಯ  ಸುರಕ್ಷಿತತೆ ಗೆ  ಎಂದು ಮಾಡಿದ್ದು ಆದರೂ ದಿನದಿಂದ ದಿನಕ್ಕೆ  ಸಂಕೀರ್ಣವೂ ,ನಮ್ಮಂತಹವರಿಗೆ  ಕಬ್ಬಿಣದ ಕಡಲೆಯೂ ಆಗಿ , ಬ್ಯಾಂಕಿಂಗ್ ಕೆಲಸ  ಮುಗಿಯುವಾಗ ತಲೆ ಚಿಟ್ಟು  ಹಿಡಿಯುವುದು

ಚಿಮಿಣಿ

  ಚಿಮಿಣಿ ದೀಪ 

                                  
Brass Antique Oil Lamp Or kerosene Lamp

ಚಿಕ್ಕಂದಿನಲ್ಲಿ ಮನೆಯಲ್ಲಿ ವಿದ್ಯುತ್ ಸೌಕರ್ಯ ಇರಲಿಲ್ಲ .ಹತ್ತು ಬುಡ್ಡಿ ದೀಪ ,ಎರಡು ಲಾಂಪ್ ಮತ್ತು ಒಂದೆರಡು ಲಾಟೀನು ಇರುತ್ತಿತ್ತು .ಪ್ರತಿ ದಿನ ಸಾಯಂಕಾಲ ಈ ದೀಪಗಳ ಬತ್ತಿ ಸರಿ ಮಾಡುವುದು ,ಎಣ್ಣೆ ತುಂಬಿಸುವುದು ,ಮತ್ತು ಲಾಂಪ್ ,ಲಾಟೀನುಗಳ ಗಾಜಿನ ಮಸಿ ಒರಸುವುದು ಒಬ್ಬರ ಕೆಲಸ . ಚಿಮಿಣಿ ಬುಡ್ಡಿಗಳ ಕೊರತೆ ಉಂಟಾದರೆ ಸಣ್ಣ ಔಷಧಿ ಬಾಟಲಿನ ಮುಚ್ಚಳ ದಲ್ಲಿ ಒಟ್ಟೆ ಮಾಡಿ ಬತ್ತಿ ಇಳಿಸಿ ಚಿಮಿಣಿ ದೀಪ ತಯಾರು ಮಾಡುತ್ತಿದ್ದೆವು . ಮಕ್ಕಳಿಗೆ ಓದಲು ಇಂತಹ ಸಣ್ಣ ಚಿಮಿಣಿ ದೀಪಗಳು .ನಮ್ಮ ಮನೆ ತುಂಬಾ ಮಕ್ಕಳಿದ್ದು ಇಬ್ಬರಿಗೆ ಒಂದರಂತೆ ಒಂದು ದೀಪ . 

  ನಾನು ಮತ್ತು ಅಕ್ಕ ಭಾಗ್ಯಲಕ್ಷ್ಮಿ ಒಂದು ದೀಪವನ್ನು ಹೆಚ್ಚಾಗಿ ಷೇರ್ ಮಾಡಿಕೊಳ್ಳುತ್ತಿದ್ದೆವು . ಅವಳು ಓದುವಾಗ ತನ್ನ ಬಳಿ ಕಾಪಿಟ್ಟ ಸಾಂತಣಿ ಪುಳಿಂಕೊಟ್ಟೆ ನನಗೂ ಕೊಟ್ಟು ತಿನ್ನುವಳು . ಇಬ್ಬರೂ ಗಟ್ಟಿಯಾಗಿ ಓದುವೆವು .ನಾವು ಓದುತ್ತಿದ್ದುದು ನಮ್ಮ ಅರಿವಿಗೋ ಅಥವಾ ಹಿರಿಯರನ್ನು ಸಮಾಧಾನ ಪಡಿಸಲೋ ಎಂಬ ಸಂಶಯ ನನಗೆ ಈಗ ಬರುತ್ತಿದೆ .ಇಬ್ಬರೂ ಒಂದೇ ದೀಪದ ಬೆಳಕಿನಲ್ಲಿ ಓದುವಾಗ  ಕೊನ್ಫ್ಲಿಕ್ಟ್ಸ್ ಆಫ್ ಇಂಟರೆಸ್ಟ್ ಬರುತ್ತದೆ . ಕೆಲವೊಮ್ಮೆ ದೀಪ ಅವಳ ಬಳಿಗೆ  ಹೆಚ್ಚು ಸರಿಸಿದ್ದಾಳೆ ;ನನಗೆ ಕಾಣುವುದಿಲ್ಲ  ಎಂದು ಸಣ್ಣ ಜಗಳ ವಾದದ್ದು ಇದೆ .ಇಂತಹ ಅಧ್ಯಯನ ಕ್ರಾಸ್  ಲರ್ನಿಂಗ್  ಗೆ  ಕಾರಣ ವಾದದ್ದು  ಅನೇಕ ಬಾರಿ . ಉದಾಹರಣೆಗೆ ನಾನು ರನ್ನನ ಗಧಾ ಯುದ್ಧದ ,'ಆ ರವಮಂ ನಿರಸ್ತ ಘನ  ರವಮಂ ನಿರ್ಜಿತ ಕಂಠೀ ರವ ರವಮಂ ,ಕೋಪಾರುಣ ನೇತ್ರಮ್ ಕೇಳ್ದಾ    ನೀರೊಳಗಿದ್ದೂಬೆಮರ್ತನುರಾಗಪತಾಕಮ್"ಗಟ್ಟಿಯಾಗಿ ಬಾಯಿಪಾಠ ಮಾಡುವಾಗ ಅವಳು ' ಇಂಡಿಯ ಈಸ್ ರಿಚ್ ಕಂಟ್ರೀ ಇನ್ಹಬೀಟೆಡ್ ಬೈ ಪೂರ್ ಪೀಪುಲ್; ಟುಡೇಸ್  ಲುಕ್ಷುರಿ ಈಸ್  ಟುಮರೋಸ್ ನೆಸೇಸಿಟಿ" ಎಂದು ಎಕನಾಮಿಕ್ಸ್ ನೋಟ್ಸ್ ಕಂಠ ಪಾಟ ಗಟ್ಟಿಯಾಗಿ ಮಾಡುವಳು .ಇದರಿಂದ ನನ್ನ ಪದ್ಯ ಅವಳಿಗೂ ಅವಳ ನೋಟ್ಸ್ ನನಗೂ ತಪ್ಪದೇ ಬರುವುದು , ನಮಗೆ ಬೇಕಾದ್ದು ಅಲ್ಲ.

ಚಿಮಿಣಿ  ದೀಪಗಳಿಗೆ  ಹಾತೆಗಳು ಆತ್ಮಹತ್ಯೆ  ಮಾಡಿಕೊಳ್ಳಲು  ಬರುವವು . ಅವುಗಳ  ಮೃತ ಶರೀರ  ನಮ್ಮ ಪಠ್ಯ ಪುಸ್ತಕಗಳ ಪುಟಗಳ  ಒಳಗಡೆ   ಶಾಶ್ವತ  ಸ್ಮಾರಕ ಪಡೆಯುವವು . ನೊಣಂಪ್ರತಿ ಎಂಬ  ಶಬ್ದ  ಹುಟ್ಟಿದ್ದೇ ಹೀಗೆ . ಇನ್ನುಳಿದ  ಕೀಟಗಳನ್ನು  ಹಲ್ಲಿಗಳು ಹೊಂಚು  ಹಾಕಿ  ತಿನ್ನುವುವು . ಇವುಗಳೆಲ್ಲ  ಜೀವಿಗಳ ನಡುವೆ  ನಮ್ಮ ಅನ್ಯೋನ್ಯ  ಬಾಳು .ಹಲವು ಬಾರಿ  ಚಿಮಿಣಿ ದೀಪದ  ಎದುರು  ಓದುವುದಕ್ಕೆ  ಕುಳಿತಲ್ಲಿಯೇ ನಿದ್ದೆ  ತೂಗಿ  ನಮ್ಮ ತಲೆ ಗೂದಲಿಗೆ ಬೆಂಕಿ ಹಿಡಿದು  ವಾಸನೆ ಬರುವಾಗ   ಎಚ್ಚರ  ಆದದ್ದು ಇದೆ

ಸಂಜೆ ಹೊತ್ತು  ಒಂದು ದೀಪವನ್ನು  ಒಲೆಯ ಬೆಂಕಿಯ ಸಹಾಯದಿಂದ  ಹಚ್ಚಿ  ,ಮತ್ತೆ ಅದರ  ಬೆಳಕನ್ನು  ಒಂದೊಂದಾಗಿ ಇತರ ದೀಪಗಳಿಗೆ  ಹಂಚುವುದು  ಜ್ನಾನವನ್ನು  ಒಬ್ಬರಿಂದ  ಇನ್ನೊಬ್ಬರಿಗೆ  ಪಸರಿಸುವ ಕ್ರಿಯೆಯನ್ನು ಸಂಕೇತಿಸುವುದು.ಬಚ್ಚಲು ಮನೆಗೊ ಹಿತ್ತಿಲಿಗೋ ಹೋಗುವಾಗ ಕೈಯಲ್ಲಿ ಒಂದು ಚಿಮ್ಮಿಣಿ ದೀಪ ,ಆದರೆ ದೀಪದ ಕೆಳಗೆ ಕತ್ತಲೆಯೇ .

ಭಾನುವಾರ, ಜೂನ್ 6, 2021

ಕೊಡೆ

                        ಕೊಡೆ 


       

THULU ORIPUGA-kavyasutha : ಪಣೊಲಿ,ಪಣೋರು ,ಗೊರಬೆ -panoli,panoru,gorabe                                          ಮಳೆ ಗಾಲ ಆರಂಭವಾಗಿದೆ .ಕೊಡೆ ಗಳು ಹೊರಗೆ ಬಂದಿವೆ . 

ಚಿಕ್ಕಂದಿನಲ್ಲಿ ನಾವು ಮನೆಯಲ್ಲಿ ಉಪಯೋಗಿಸುತ್ತಿದ್ದುದು ಗೊರಬೆ .ಮನೆ ಭಾಷೆಯಲ್ಲಿ ಅದನ್ನು ಕಿರಿಂಜೆಲು ಎನ್ನುತ್ತಿದ್ದೆವು . ಇದರಲ್ಲಿ ಎರಡು ವಿಧ ಇದ್ದುವು .ಒಂದು ತೆಂಗಿನ ಓಲೆ (ಮಡಲು)ಯಿಂದ ಮಾಡಿದ್ದು .ನಾವು ಹೆಚ್ಚಾಗಿ ಉಪಯೋಗಿಸುತ್ತಿದ್ದುದು .ಅದರ ತಲೆ ಭಾಗದಲ್ಲಿ ಹುಂಜದಂತೆ ಒಂದು ಜುಟ್ಟು ಇರುತ್ತಿತ್ತು . ಇನ್ನೊಂದು ತಾಳೆ ಓಲೆಯಿಂದ ಮಾಡಿದುದು . ಹಿರಿಯರು ಮತ್ತು ಕಾರ್ಮಿಕರು ಹೆಚ್ಚಾಗಿ ಉಪಯೋಗಿಸುತ್ತಿದುದು. ಚಿತ್ರದಲ್ಲಿ ಕಾಣುವುದು ಇದುವೇ. ನಮ್ಮ ಮನೆಯ ಹತ್ತಿರ  ರಾಚು ಆಚಾರಿ ಎಂಬವರು ಇದ್ದರು.ಅವರು ಚೆನ್ನಾಗಿ ಗೊರಬೆ ಹಣೆಯುತ್ತಿದ್ದು ನಮ್ಮ ಬೇಡಿಕೆಗಳನ್ನು ಪೂರೈಸುತ್ತಿದ್ದರು . ಜೋರಾಗಿ ಮಳೆ ಬರುವಾಗ ಕೊಡೆಗಿಂತ ಗೊರಬೆ ಉತ್ತಮ .ಕಡೇ ಪಕ್ಷ ಬೆನ್ನು ಬೆಚ್ಚಗೆ ಉಳಿಯುವುದು . 'ಮರಳಿ ಮಣ್ಣಿಗೆ 'ಕಾದಂಬರಿಯಲ್ಲಿ ಸರಸೋತಿಯದ್ದೋ  ಪಾರೋತಿಯದ್ದೋ ಮದುವೆ ದಿಬ್ಬಣ ವನ್ನು ಕಾರಂತರು ವರ್ಣಿಸುವಾಗ ಮಳೆಯಿಂದಾಗಿ  ಮದುವೆ ಮನೆಗೆ ತಲುಪುವಾಗ ಬೆನ್ನು ಮಾತ್ರ ಒದ್ದೆಯಾಗದೆ ಉಳಿದದ್ದು ಎಂದು ಬರೆದ ನೆನಪು . ಶಾಲೆಗೆ ಕೂಡ ಅರ್ಧದಷ್ಟು ಮಕ್ಕಳು ಗೊರಬೆ ಧಾರಿ  ಗಳಾಗಿ  ಬರುತ್ತಿದ್ದರು . ನಮ್ಮ ಕಿವಿ ಗೊರಬೆಯ ಒಳಗೆ ಇರುತ್ತಿದ್ದರಿಂದ  ಮತ್ತು ಮಳೆಯ ಶಬ್ದ ಎರಡೂ ಸೇರಿ ನಮ್ಮನ್ನು ಭಾಗಶಃ  ಕಿವುಡ ರನ್ನಾಗಿ ಮಾಡುವುದು .

 

ನೇಜಿ ನೆಡುವ ಸಮಯ ಎಲ್ಲರೂ ಸಾಲಾಗಿ ಬಾಗಿ ಗೊರಬೆಗಳ ಸಾಲು ತೇಲುತ್ತ ಇರುವಂತೆ ಕಾಣುವುದು. ಮಳೆ ಇಲ್ಲದ ಸಮಯ ಹುಣಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ದೃಶ್ಯ ಕೂಡಾ ನೆನಪಿಗೆ ಬರುವುದು.
ಗದ್ದೆ ತೋಟಕ್ಕೆ ಹೋಗುವಾಗ ಗೊರಬೆ ಮರೆತು ಹೋದಾಗ ಹಠಾತ್ ಮಳೆ ಬಂದರೆ ಮುಂಡಿ ಎಲೆ ಸಿಕ್ಕಿದರೆ ಅದನ್ನೇ ತುಂಡು ಮಾಡಿ ತಲೆಗೆ ಹಿಡಿದುಕೊಂಡು ಬರುವುದು .

ಮುಂದೆ ಕೊಡೆ ಬಂತು . ನಮ್ಮ ಊರ ಮಳೆಗೆ ಕೊಡೆ ಮಾನಸಿಕ ರಕ್ಷಣಾ ಭಾವಕ್ಕೆ ಮಾತ್ರ .ಜೋರಾಗಿ ಗಾಳಿ ಮಳೆ ಬಂದರೆ ವರುಣನಿಂದ ನಮ್ಮನ್ನು ರಕ್ಷಿಸದು .ಗದ್ದೆಯ ಹುಣಿಯಲ್ಲಿ ನಡೆಯುವಾಗ ಗಾಳಿ ನಮ್ಮನ್ನು ಕೊಡೆ ಸಹಿತ  ಧರಾ ಶಾಯಿ ಯಾಗಿ ಮಾಡಿದ್ದು ಇದೆ . ಮಳೆಗೆ ಮೈಲು ಗಟ್ಟಲೆ ನಡೆದು ಶಾಲೆಗೆ ತಲುಪುವಾಗ ಕೆಲವು ದಿನ ಚಂಡಿ ಪುಂಡಿ . ವರ್ಷದಲ್ಲಿ ಮೂರು ನಾಲ್ಕು ದಿನವಾದರೂ ಹೆಡ್ ಮಾಸ್ತರು ನಮ್ಮ ಸ್ಥಿತಿ ಗಮನಿಸಿ ರಜೆ ಘೋಷಿಸುವರು .ನಮಗೆ ಭಾರೀ ಖುಷಿ . ತುಂಬಾ ದಿನಗಳ ರಜೆ ಬಂದಾಗ ಯಾವಾಗ ಶಾಲೆ ಶುರು ಆಗುವುದೊ ಎಂಬ ಚಿಂತೆ ,ಶಾಲೆ ಆರಂಭ ಆದ ಮೇಲೆ ರಜೆ ಯಾವಾಗ ಬರುವುದೋ ಎಂಬ ಯೋಚನೆ ಮಕ್ಕಳಿಗೆ ಅನಾದಿ ಕಾಲದಿಂದಲೂ ಇದ್ದದ್ದು .

ಕೊಡೆ ನಮಗೆ ಚಿಕ್ಕಪ್ಪ ಮಂಗಳೂರು ಅಡಿಕೆ ಬಂಡಸಾಲೆ ಯಿಂದ ಬರುವಾಗ ತರುತ್ತಿದ್ದುದು .ಅದರ ಬಟ್ಟೆಯಲ್ಲಿ ಸಿಲ್ವರ್ ಪೈಂಟ್ನಿಂದ ನಮ್ಮ ಹೆಸರು ಬರೆಸುತ್ತಿದ್ದರು .ನಮ್ಮ ಹೆಮ್ಮೆಯ ಸೊತ್ತು .ಈಗಿನಂತೆ ವರ್ಷಕ್ಕೆ ಒಂದು ಕೊಡೆ ಕೊಳ್ಳುವುದು ಇರಲಿಲ್ಲ . ಹಲವು ಭಾರಿ ಅದಕ್ಕೆ ಸರ್ವೀಸ್ ಮಾಡುವುದು . ಕೆಲವೊಮ್ಮೆ ಬಟ್ಟೆಯನ್ನೇ ಬದಲಾಯಿಸುದು .ಮಳೆಗಾಲ ಮುಗಿಯುತ್ತಲೇ ಆಟ್ಟ ಸೇರುವುದು .

ಮದುವೆ ದಿಬ್ಬಣದಲ್ಲಿ ಕೊಡೆ ಮುಖ್ಯ ವಸ್ತು .ನನ್ನ ಮದುವೆ ದಿನ ಅದನ್ನು ಕೊಂಡು ಹೋಗಲು ಬಿಟ್ಟು ಹೋಗಿತ್ತು . ಕಡೆಗೆ ಹುಡುಗಿಯ ಕೊಡೆಯನ್ನೇ ತತ್ಕಾಲ ತೆಗೆದು ಕೊಂಡೆವು .ಕೊಡೆ ಇಲ್ಲದ್ದ ಮಾಣಿಗೆ (ಗಂಡಿಗೆ) ಕೂಸಿನ (ಹುಡುಗಿಯ )ಕೊಡೆ .ಎಂಬುದು ಒಳ್ಳೆಯ ಪನ್ ಆಯಿತು .

ಎ ಜೆ ಗಾರ್ಡ್ನರ್  ಅವರ ಅಂಬ್ರೆಲ್ಲ ಮೋರಲ್ಸ್ ಎಂಬ ಪ್ರಸಿದ್ದ ಲಲಿತ ಪ್ರಬಂಧ ಇದೆ .ಇದರಲ್ಲಿ ಸಮಾರಂಭ ,ಚರ್ಚ್ ಇತ್ಯಾದಿ ಗಳಿಗೆ  ಹೋಗಿ ವಾಪಾಸು ಬರುವಾಗ ಗಡಿಬಿಡಿ ಯಲ್ಲಿ  ನಾವು ನಮ್ಮ ಹಳೇ ಕೊಡೆ ಬದಲಿಗೆ ಇನ್ಯಾರದೋ ಹೊಸ ಕೊಡೆ ತಪ್ಪಿ ತೆಗೆದು ಕೊಳ್ಳುವುದು ,ನಂತರ ಅರ್ಧ ದಾರಿಯಲ್ಲಿ ಅದನ್ನು ನೋಡಿ "ಛೇ ತಪ್ಪಾಯಿತಲ್ಲಾ ,ಇದ್ಯಾರದೋ ಬೇರೆ ಕೊಡೆ "ಎಂದು ಕೊಂಡು ಪುನಃ ಹೋಗಿ ಮರಳಿಸುವಾ ಎಂದು ಆತ್ಮ ಸಾಕ್ಷಿ ಹೇಳುವುದು . ವಾಸ್ತವ ಪ್ರಜ್ನೆ" ನಾನು ಪುನಃ ಹೋಗುವಷ್ಟರಲ್ಲಿ  ಇದರ ಯಜಮಾನ ಇನ್ಯಾರದೋ ಕೊಡೆ ತೆಗೆದು ಕೊಂಡು ಮನೆಗೆ ಹೋಗಿರುವನು .ಇದು ನನಗೇ ಆಯಿತು.ನಾನು ಉದ್ದೇಶ ಪೂರ್ವಕ ಬದಲಿಸಿದ್ದು ಅಲ್ಲವಲ್ಲ .(ಯಾಕೆಂದರೆ ಇದು ಹೊಸ ಕೊಡೆ !)"ಎಂದು ಸಮಜಾಯಿಷಿ ನೀಡುವುದು .ದೇವಸ್ಥಾನಕ್ಕೆ ಹೊಸಾ ಕೊಡೆ ತೆಗೆದು ಕೊಂಡು ಹೋದರೆ ನಮ್ಮ ಮನಸು ಹೊರಗೆ ಇಟ್ಟ ಕೊಡೆ ಮೇಲೇ ಇರುವುದರಿಂದ ಛತ್ರಿ ಚಿತ್ತರಾಗಿ ಭಾಗವಂತನನ್ನು ಪ್ರಾರ್ಥಿಸುತ್ತೇವೆ .

ಗುರುವಾರ, ಜೂನ್ 3, 2021

ಮಲೇರಿಯಾ ಜೀವನ ಚರಿತ್ರೆ

   ಮಲೇರಿಯಾ ಜೀವನ ಚಕ್ರ ಅಥವಾ ಚರಿತ್ರೆ 


ಪ್ರಕೃತಿಯ ಸೃಷ್ಟಿ ಬಹು ವಿಚಿತ್ರ . ಮನುಷ್ಯ ನ ದೇಹದಲ್ಲಿ ಸಂಕೀರ್ಣವಾದ   ರೋಗ ನಿರೋಧಕ  ವ್ಯವಸ್ಥೆ ಇಟ್ಟಿದೆ  .ಅದೇ ಸಮಯ ಅವನನ್ನು ಹಣಿಯಲು ಬೇಕಾದ ಪ್ರಬಲ ಆಯುಧ ಗಳು ಉಳ್ಳ ರೋಗಾಣುಗಳನ್ನೂ . 

ಉದಾಹರಣೆಗೆ ಇಂದು ನಾವು ಮಲೇರಿಯಾ ಕಾಯಿಲೆಯನ್ನು ಪರಿಗಣಿಸುವ . ಹಿಂದೆ ನಾವು ಕೊಕ್ಕೆ ಹುಳದ ಬಗ್ಗೆ  ತಿಳಿದಿದ್ದೇವೆ . ಅದು ಏಕ ಪ್ರಾಣಿ ವೃತಸ್ತ  . ಮನುಷ್ಯ ಓರ್ವ ಇದ್ದರೆ ಸಾಕು ಅದರ ಬಾಲ್ಯ ,ಯೌವನ ,ಸಂತಾನೋತ್ಪತ್ತಿ  ನಮ್ಮೊಳಗೇ ನಡೆದು ಮುಗಿಯುವುದು .ಅದರ ಮೊಟ್ಟೆ ಮಣ್ಣಿನಲ್ಲಿ ಸ್ವಲ್ಪಕಾಲ ಬೆಳೆದು ಬೆಳವಣಿಗೆ ಕಂಡು ಮತ್ತೆ ಮನುಷ್ಯನ ಶರೀರ ಸೇರಿ .ಪುನರಪಿ ಜನನಂ ಪುನರಪಿ ಮರಣಂ ಪುನರಪಿ ನರನ ಜಠರೇ (ಕರುಳೇ )ಶಯನಂ . 

ಆದರೆ ಮಲೇರಿಯಾ ಜೀವನ ಚರಿತ್ರೆ ಹಾಗಲ್ಲ ; ಇನ್ನೂ ರೋಚಕ .. 

ಈ ಪರೋಪಜೀವಿ ಗೆ  ಎರಡು ಆತಿಥೇಯರು ಬೇಕೇ ಬೇಕು . ಒಂದು ನಿರ್ಣಾಯಕ -ಹೆಣ್ಣು ಅನೋಫಿಲಿಸ್ ಸೊಳ್ಳೆ ಮತ್ತೊಂದು ಮಧ್ಯವರ್ತಿ -ಮನುಷ್ಯ . ಗಂಡು ಸೊಳ್ಳೆ ಅಹಿಂಸಾ ವಾದಿ ,ನಮ್ಮ ಸುದ್ದಿಗೆ ಬರದು ,ಸಾಧು .ಸಸ್ಯಾಹಾರಿ .ಹೆಣ್ಣು ಸೊಳ್ಳೆ ರಕ್ತ ಪಿಪಾಸು , ಅದರ ರೆಕ್ಕೆಯ ಚಲನೆ ಉಚಿತವಾದ ಸಂಗೀತ ಉಂಟು ಮಾಡುವುದು . ನಮ್ಮನ್ನು ಕಚ್ಚಿದಾಗ ಅದರ ಲಾಲಾರಸದಲ್ಲಿ  ಇರುವ ರಾಸಾಯನಿಕಗಳು ರಕ್ತ ಕೂಡಲೇ ಹೆಪ್ಪುಗಟ್ಟದಂತೆ ಮಾಡಿ ಹೆಚ್ಚು ರಕ್ತ ಅದಕ್ಕೆ ಸಿಗುವಂತೆ ಮಾಡುವವು . ಬದಲಿಗೆ ಸೊಳ್ಳೆಯ ಬಾಯಿಯ ಮೂಲಕ ಮಲೇರಿಯಾ ರೋಗಾಣು  ಪ್ಲಾಸ್ಮೋಡಿಯಂ ನಮ್ಮ ಶರೀರ ಸೇರುವುದು ;ಕಡಿತದ ವ್ಯಾಪಾರ . ಸೊಳ್ಳೆಯನ್ನು  ಮಲೇರಿಯ ಕಾಡುವುದಿಲ್ಲ 

  ಸೊಳ್ಳೆ ಮಲೇರಿಯ ರೋಗಾಣುವಿನ ನಿರ್ಣಾಯಕ ಅತಿಥೇಯ ಎಂದೆವಲ್ಲ .ಅದರ ಅರ್ಥ ಅದರ ವೈವಾಹಿಕ ಜೀವನ ಮತ್ತು ಸಂತಾನೋತ್ಪತ್ತಿ ಹೆಣ್ಣು ಅನೋಫಿಲಿಸ್ ಸೊಳ್ಳೆಯ ಒಳಗೇ ನಡೆಯುವದು . ಸ್ವಲ್ಪ ಬೆಳೆದ ಮರಿಗಳು ಮನುಷ್ಯನ ಶರೀರ ರಕ್ತದ ಮೂಲಕ ಸೇರಿ ,ಅದರ ಬ್ರಹ್ಮಚಾರಿ ಜೀವನ ಅಲ್ಲಿ ನಡೆಯುವದು . ಮೊದಲು ಲಿವರ್ ಸೇರಿ ಅಲ್ಲಿ ಕೆಲವು ಹಂತದ ಬೆಳವಣಿಗೆ ,ಆಮೇಲೆ  ಎಳೆಯ ಕೆಂಪು ರಕ್ತ ಕಣಗಳ ಮೇಲೆ ಧಾಳಿ ,ಅಲ್ಲಿ ಅತಿಥಿಯಾಗಿ ಸೇವೆ ಸಲ್ಲಿಸಿ ಬೆಳವಣಿಗೆ ಹೊಂದಿ ಪುರಾಣದ ವಾತಾಪಿಯಂತೆ  ಅತಿಥೇಯನ (ಅಂದರೆ ಕೆಂಪು ರಕ್ತ ಕಣಗಳ )ಶರೀರ ಛೇದಿಸಿ ಹೊರ ಬರುವವು .ಕೆಲವು ಪುನಃ ಲಿವರ್ ಯಾತ್ರೆ ಕೈಗೊಂಡರೆ ಮತ್ತೆ ಹಲವು ಪುನಃ ಕೆಂಪು ರಕ್ತ ಕಣ ಸೇರಿ ಕಾರ್ಯಕ್ರಮ ಮುಂದು ವರಿಸುವವು .  ರೋಗಾಣು ಮತ್ತು ನಶಿಸುತ್ತಿರುವ ರಕ್ತ ಕಣಗಳಿಂದ ಉಂಟಾದ ವಸ್ತುಗಳು ಜ್ವರ ಕಾರಕಗಳು .ಈ ತರಹ ಉಂಟಾದ ಮರಿಗಳು ಬೆಳೆದು ಕೆಲವು ಗಂಡು ಮತ್ತು ಕೆಲವು ಹೆಣ್ಣು ಆಗಿ ,ಸೊಳ್ಳೆಯ ಕಡಿತಕ್ಕೆ ಕಾದು ,ಮುಂದೆ ಅದರ ಶರೀರದಲ್ಲಿ ವಿವಾಹ ,ಮಧುಚಂದ್ರ ಮತ್ತು ಸಂತಾನೋತ್ಪತ್ತಿ ನಡೆಸುವವು . ಮುಂದಿನ ಹಂತದ ಜೀವನ ಮನುಷ್ಯ ಶರೀರದಲ್ಲಿ

   ನಮ್ಮ ಊರಿನಲ್ಲಿ ವೈ ವಾಕ್ಸ್ ಮತ್ತು ಫಾಲ್ಸಿಫಾರಂ ಎಂಬ ಎರಡು ತರಹದ ಮಲೇರಿಯ ಕಾಯಿಲೆ ರೋಗಾಣುಗಳು ಕಾಡುತ್ತಿವೆ ,ಇದರಲ್ಲಿ  ಫಾಲ್ಸಿಫಾರಂ ಸ್ವಲ್ಪ ಅಪಾಯಕಾರಿ .ಅದು ಮೆದುಳು ,ಮೂತ್ರಪಿಂಡ ಇತ್ಯಾದಿಗಳಿಗೆ ಹಾನಿ ಮಾಡುವದು ಹೆಚ್ಚು . ಮಲೇರಿಯ ಲಿವರನ್ನು ಕಾಡುವುದರಿಂದ ಮತ್ತು ಕೆಂಪು ರಕ್ತಕಣಗಳನ್ನು ನಾಶ ಮಾಡುವದುದರಿಂದ ಮಲೇರಿಯಾ ದಲ್ಲಿ ಹಳದಿ ಕಾಮಾಲೆ ಬರ ಬಹುದು .ಇದನ್ನು ಕಾಮಾಲೆ ರೋಗ ಹಳ್ಳಿ ಮದ್ದು ಮಾಡುವೆವು ಎಂದು ಕುಳಿತರೆ ಪ್ರಾಣಾಪಾಯ ಆದೀತು . 

   ನೋಡಿ ಪ್ರಕೃತಿಯ ವಿಚಿತ್ರ ಆಟ .ನಾವು ಬಾರಿಯ ದಾಳದ ಪಗಡೆಯಾಳುಗಳು . 


EID_lec17_slide8-largehttps://youtu.be/A2-XTlHBf_4

ಕೊಕ್ಕೆ ಹುಳದ ಜೀವನ ಚರಿತ್ರೆ

      ಕೊಕ್ಕೆ ಹುಳದ ಜೀವನ ಚಕ್ರ 

 

 ಪ್ರತಿಯೊಂದು ಕರುಳ ಜಂತುವಿನ ಜೀವನ ಚಕ್ರ ಸಂಕೀರ್ಣವಾಗಿದ್ದು ಪ್ರಕೃತಿಯ ವೈಚಿತ್ರ್ಯವನ್ನು ಸಾರುತ್ತದೆ . ಉದಾಹರಣೆಗೆ  ರಕ್ತ ಹೀರುವ ಕೊಕ್ಕೆ ಹುಳ (Hookworm )ನ್ನು ತೆಗೆದು ಕೊಳ್ಳುವ . ಗಂಡು ಮತ್ತು ಹೆಣ್ಣುಹುಳಗಳು ಕರುಳ ಒಳಗಣ ಮಿಲನದ ಫಲವಾಗಿ ಹೆಣ್ಣು ಹುಳಗಳು ದಿನಕ್ಕೆ ಸಾವಿರಾರು ಮೊಟ್ಟೆಗಳನ್ನು ಇಡುತ್ತವೆ .ಈ ಮೊಟ್ಟೆಗಳು ಮಲದ ಮೂಲಕ ನೆಲ ಸೇರಿ ಕೆಲ ದಿನಗಳಲ್ಲಿ ಹಂತ ಹಂತವಾಗಿ ಎರಡು ರೂಪದ ಲಾರ್ವಾ ಆಗಿ ಪರಿವರ್ತನೆ ಗೊಳ್ಳುವುದು . ಎರಡನೇ ರೂಪದ ಲಾರ್ವಾ ನಮ್ಮ ಕಾಲಿನ ಗಾಯ ಮತ್ತು ಕೂದಲ ರಂಧ್ರಗಳ ಮೂಲಕ ಶರೀರದ ಪ್ರವೇಶ ಪಡೆಯುವುದು . ಅಲ್ಲಿ ಅದು ರಕ್ತನಾಳಗಳನ್ನು ಪ್ರವೇಶಿಸಿ ಶ್ವಾಸಕೋಶ ಸೇರಿ ,ರಕ್ತ ನಾಳ ಭೇದಿಸಿ ಶ್ವಾಸ ಕೋಶ ,ಶ್ವಾಸ ನಾಳ ಮೂಲಕ ಗಂಟಲು ಸೇರಿ ,ಅನ್ನ ನಾಳದಲ್ಲಿ ಇಳಿದು ತನ್ನ ನಿವಾಸವಾದ ಕರುಳು ಸೇರುವುದು .ಇಲ್ಲಿ ಲಾರ್ವಾ ರೂಪದಿಂದ ಪ್ರಬುದ್ಧ ಗಂಡು ಮತ್ತು ಹೆಣ್ಣು ಕೊಕ್ಕೆ ಹುಳವಾಗಿ ಮಾರ್ಪಡುವುದು .. ಅಲ್ಲಿ ಕರುಳ ಗೋಡೆಗೆ ಆತು ಕೊಂಡು ರಕ್ತ ಹೀರುವುದು . 

ಈ ಹುಳದ ಲಾರ್ವಾ ಚರ್ಮ ಪ್ರವೇಶಿಸಿದ ಭಾಗದ ಸುತ್ತ ಮುತ್ತ ಅಲ್ಲರ್ಜಿ ಯಿಂದ ತುರಿಕೆ ಮತ್ತು ಕೆಂಪು ಉಂಟಾಗ ಬಹುದು .ಶ್ವಾಸ ಕೋಶದ ಮೂಲಕ ನಡೆಯುವ ಸವಾರಿ ಮತ್ತು ಕಟ್ಟೆ  ಪೂಜೆಯಿಂದ ಕೆಮ್ಮು ಮತ್ತು ಅಸ್ತಮಾ ಉಂಟಾಗ ಬಹುದು . ಇವು ಅಲರ್ಜಿ ಅಥವಾ ಅತಿ ಸಂವೇದನೆಯಿಂದ ಉಂಟಾಗುವ ತೊಂದರೆಗಳು . ಕರುಳಿನ ರಕ್ತ ಹೀರುವಿಕೆಯಿಂದ ತೀವ್ರ ತರ ರಕ್ತ ಹೀನತೆ ಉಂಟಾಗ ಬಹುದು . 

                ಇಂತಹ ಪರೋಪಜೀವಿಗಳು ಸೇರಿದಾಗ ಮಾನವ ನ ರಕ್ತದಲ್ಲಿ ಇಯೋಸಿನೋಫಿಲ್ ಎಂಬ ಬಿಳಿ ರಕ್ತ ಕಣಗಳ ಸಂಖ್ಯೆ ಹೆಚ್ಚಾಗುವುದು ;ಇದನ್ನು .ಇಯೋಸಿನೋಫಿಲಿಯಾ ಎನ್ನುವರು . ಇಯೋಸಿನೋಫಿಲಿಯಾ ಎಂಬುದು ಒಂದು ಕಾಯಿಲೆಯಲ್ಲ .ಹಲವು ಕಾಯಿಲೆಗಳಲ್ಲಿ ಅದು ಇರ ಬಹುದು . ಬಹಳ ಮಂದಿ ನನಗೆ ಇಯೋಸಿನೋಫಿಲಿಯಾ ಕಾಯಿಲೆ ಇದೆ ಎಂದು ಬರುತ್ತಾರೆ . 

ಕೊಕ್ಕೆ ಹುಳ ತಡೆಗಟ್ಟಲು ಬಯಲು ಶೌಚ ನಿರ್ಮೂಲನೆ ಮತ್ತು ಪಾದರಕ್ಷೆ ಹಾಕಿ ನಡೆಯುವುದು ಮುಖ್ಯ .ಆದರೆ ಹಳ್ಳಿಗಳಲ್ಲಿ ಕೃಷಿ ಚಟುವಟಿಕೆ ಯಲ್ಲಿ ತೊಡಗಿರುವಾಗ ಎರಡನೇಯದು ಸ್ವಲ್ಪ ಕಷ್ಟ . 

ನಾಯಿ ಮತ್ತು ಬೆಕ್ಕುಗಳಲ್ಲಿಯೂ ಕೊಕ್ಕೆ ಹುಳ ಕಾಟ ಇದ್ದು ಅವುಗಳು ಮನುಷ್ಯರಿಗೆ ಹರಡ ಬಹುದು .ಆದರೆ ಅವು ಹೆಚ್ಚಾಗಿ ಚರ್ಮದ ತುರಿಕೆ ಮತ್ತು ಕೆಂಪು ಉಂಟು ಮಾಡಬಹುದು . ಅವು ಅಲ್ಲಿಯೇ ಕೊನೆಯುಸಿರು ಎಳೆಯುವದು ಸಾಮಾನ್ಯವಾದ್ದರಿಂದ  ಕರುಳಿನ ವರೆಗೆ ತಲುಪುವುದು ಅಪರೂಪ ..ಏನೇ ಇರಲಿ ಸಾಕು ಪ್ರಾಣಿಗಳಿಗೂ ಹುಳದ ಔಷಧ ಆಗಾಗ ಕೊಡುತ್ತಿರ ಬೇಕು 

 

CDC - Hookworm - Biology