ಬೆಂಬಲಿಗರು

ಭಾನುವಾರ, ಜೂನ್ 27, 2021

ಗುರು ಸ್ಮರಣೆ

                                                            

ನನ್ನ   ಪ್ರಾಥಮಿಕ ವಿದ್ಯಾಭ್ಯಾಸ ಕನ್ಯಾನ ಬೋರ್ಡ್ ಹೈಯರ್ ಎಲಿಮೆಂಟರಿ ಶಾಲೆ ಯಲ್ಲಿ ನಡೆಯಿತು . ಯಥಾರ್ಥದಲ್ಲಿ  ನಮ್ಮ ಮನೆಯಿಂದ ಅಳಿಕೆ ಪ್ರಾಥಮಿಕ ಶಾಲೆಗೆ ಅರ್ಧ ಮೈಲು .ಕನ್ಯಾನ ಶಾಲೆಗೆ ಎರಡು ಮೈಲು . ಆದರೂ ನಮ್ಮ ಗ್ರಾಮದ ಶಾಲೆ ಎಂದು ಅಲ್ಲಿಗೆ ಕಳುಹಿದ್ದ ಹಾಗೆ ಕಾಣುತ್ತದೆ . ಶಿಕ್ಷಣದ ಗುಣಮಟ್ಟ ಮತ್ತು ಫಲಿತಾಂಶ ದಲ್ಲಿ ಆಗೆಲ್ಲ ಸರಕಾರಿ ಶಾಲೆಗಳು ಮುಂದೆಯೇ ಇದ್ದ ದಿನಗಳು . ಪುತ್ತೂರಿನ  ಹಾರಾಡಿ ಶಾಲೆ ಮತ್ತು ಬೋರ್ಡ್ ಹೈ ಸ್ಕೂಲ್ ಕೂಡಾ ಅದಕ್ಕೆ ಉದಾಹರಣೆ . 

                  ನಮಗೆ ಹೆಡ್ ಮಾಸ್ಟರ್ ಆಗಿದ್ದವರು ಪಿದಮಲೆ ಕೃಷ್ಣ ಭಟ್ ಅವರು . ಹಸನ್ಮುಖ ,ತುಂಬಾ ಸ್ಟ್ರಿಕ್ಟ್ ಅಲ್ಲ ,ಹಾಗೆಂದು ಅತೀ ಮೆದುವೂ ಅಲ್ಲದ ವ್ಯಕ್ತಿತ್ವ . ಶರ್ಟಿನ ಕಾಲರ್  ಹಿಂದೆ ಯಾವಾಗಲೂ ಒಂದು ಕರವಸ್ತ್ರ.  ಏಳನೇ ತರಗತಿಗೆ ಗಣಿತ ಹಾಗೂ ಇಂಗ್ಲಿಷ್ ಪಾಠ ತೆಗೆದು ಕೊಳ್ಳುತ್ತಿದ್ದರು . ಸಾಮಾನ್ಯ ಮಕ್ಕಳಿಗೆ ಕಠಿಣ ಎನ್ನಿಸುವ ಈ ವಿಷಯಗಳನ್ನು ಸರಳವಾಗಿ ಹೇಳಿ ಕೊಡುತ್ತಿದ್ದರು .ಅವರ ನೆನಪಿನೊಂದಿಗೆ ಪ್ರ. ಪ್ರ. ,ತ್ರಿಜ್ಯ ,ವ್ಯಾಸ ,ಘನ ಫಲ ,ಪೈತಾಗೋರಾಸ್,ಇದನ್ನು ಸಾದಿಸ ಬೇಕಿತ್ತು ಇವುಗಳೆಲ್ಲಾ ಸಾಲಾಗಿ ಬರುತ್ತಿವೆ .

ಅವರ ಪತ್ನಿ ಯ  ತವರು ಮನೆ ನಮ್ಮ ಗ್ರಾಮದ ನೀರ್ಪಾಜೆ . ಕನ್ಯಾನದಲ್ಲಿ ಅವರು ಒಬ್ಬರೇ ಇರುತ್ತಿದ್ದು ವಾರಕ್ಕೋ ಎರಡು ವಾರಕ್ಕೋ ಒಮ್ಮೆ ಊರಿಗೆ ಹೋಗುತ್ತಿದ್ದರು .ನಮ್ಮ ಶಾಲೆಯ ಎದುರು ಜವಳಿ ಶೆಟ್ಟಿ ಎಂದು ಪ್ರಸಿದ್ಧರಾದ ದೈಯೆಂದ್ರೆ ಫಕೀರಪ್ಪ ಶೆಟ್ಟಿ ಅವರ ಅಂಗಡಿ ಮೇಲೆ ಒಂದು ರೂಮ್ ನಲ್ಲಿ ಅವರ ವಾಸ . ಅದರ ಪಕ್ಕದ ಇನ್ನೊಂದು ಬದಿಯಲ್ಲಿ ಹಿಂದಿನ ಪಂಚಾಯತ್ ಆಫೀಸ್ ಇತ್ತು . ರೂಮ್ ಎಂದರೆ ಕೋಣೆ  ಮಾತ್ರ . ಅವರು ಸ್ನಾನಕ್ಕೆ ಶಾಲೆ ಎದುರು ಇರುವ ಸರಕಾರಿ ಬಾವಿ ಉಪಯೋಗಿಸುತ್ತಿದ್ದಿರ ಬೇಕು ;ಶೌಚಕ್ಕೆ ಬಯಲು . ಇದು ಆಗ ಸಾಮಾನ್ಯ .ಈಗ ಊಹಿಸಲೂ ಸಾಧ್ಯವಿಲ್ಲ . ಊಟ ತಿಂಡಿಗಳು  ಶಾಲೆಯ ಹಿಂದೆ ಇದ್ದ ಬೋರ್ಡಿಂಗ್ ರಾಮಣ್ಣ ನವರಲ್ಲಿ .ನಾವೂ ಮಧ್ಯಾಹ್ನ  ಊಟಕ್ಕೆ ಅಲ್ಲಿಯೇ ಹೋಗುತ್ತಿದ್ದೆವು . 

               ನಾನು ಏಳನೇ ತರಗತಿಯಲ್ಲಿ ಸ್ಕೂಲ್ ಪ್ಯೂಪಿಲ್ ಲೀಡರ್ ಆಗಿದ್ದೆ . ಕ್ಲಾಸ್ ಲೀಡರ್ ಗೆ  ಅಧ್ಯಾಪಕರು ತರಗತಿಯಲ್ಲಿ  ಇಲ್ಲದಾಗ ಮಕ್ಕಳ ಗಲಾಟೆ (ತಾನೂ ಅದಕ್ಕೆ ಪಾಲುದಾರ ಆಗಿದ್ದರೂ ) ಒಂದು ಮಟ್ಟಕ್ಕಿಂತ ಮೇಲೆ ಹೋದಾಗ ಸೈಲೆನ್ಸ್ ಸೈಲೆನ್ಸ್ ಎಂದು ಆರ್ಡರ್ ಮಾಡುವ ಹಕ್ಕು ,ಮತ್ತು ಜೋರಾಗಿ ಮಾತನಾಡಿದವರ ಹೆಸರು ಬರೆದು ಕ್ಲಾಸ್ ಟೀಚರ್ ಗೆ ದೂರು ಕೊಡುವುದು ,ತಿದ್ದಿದ ಪ್ರಬಂಧ ಪುಸ್ತಕ ವಾಪಾಸು ಮಾಡುವುದು ಮತ್ತು ಕ್ಲಾಸ್ ಗುಡಿಸುವವರ ಟೈಮ್ ಟೇಬಲ್ ಮಾಡುವುದು ಇತ್ಯಾದಿ ಅಧಿಕಾರಗಳು ಇದ್ದವು .ಸ್ಕೂಲ್ ಪ್ಯೂಪಿಲ್ ಲೀಡರ್ ಗೆ ಎರಡು ಹೆಮ್ಮೆಯ ಕಾರ್ಯಗಳು  ಇದ್ದವು .ಒಂದು -  ಶಾಲೆಯ ಗಂಟೆ ಕಾಲ ಕಾಲಕ್ಕೆ ಬಾರಿಸುವುದು ;  ಸಣ್ಣ ರೈಲು ಪಟ್ಟಿಯ ತುಂಡಿಗೆ ಕಬ್ಬಿಣದ ಸರಳಿನಲ್ಲಿ  .ನಮ್ಮ ಸಂಕೇತ ಇಡೀ ಶಾಲೆಯನ್ನೇ  ಕಂಟ್ರೋಲ್ ಮಾಡುತ್ತಿದ್ದ ಭಾವನೆ . ಇನ್ನೊಂದು ರಜಾ ದಿನ ಘೋಷಣೆ ನೋಟೀಸ್ ಪುಸ್ತಕ ಎಲ್ಲಾ ತರಗತಿಗಳಿಗೆ ಒಯ್ದು ಅದನ್ನು ಓದುವುದು . ಕಾಕಿ ಬೈಂಡ್ ಹಾಕಿದ ಪುಸ್ತಕದಲ್ಲಿ ಮುದ್ದಾದ ಕೃಷ್ಣ ಭಟ್ ಅವರ ಅಕ್ಷರ ಈಗಲೂ ನನ್ನ ಕಣ್ಣ ಮುಂದೆ ಇದೆ . 

ಮಧ್ಯಾಹ್ನ ಬೋರ್ಡಿಂಗ್ ನಲ್ಲಿ  ಅಧ್ಯಾಪಕರಿಗೆ ಬೇರೆ ,ಮಕ್ಕಳಿಗೆ ಬೇರೆ ಪಂಕ್ತಿ . ಅವರು ಮತ್ತು  ಐತಪ್ಪ ನಾಯ್ಕ್  ಮಾಸ್ಟ್ರು ಊಟಕ್ಕೆ ಬರುತ್ತಿದ್ದರು . ಅಲ್ಲಿ ಸರಸ ಸಂಭಾಷಣೆ ನಡೆಯುವದು ;ಬೋರ್ಡಿಂಗ್ ರಾಮಣ್ಣ ಮತ್ತು ಐತಪ್ಪ ನಾಯ್ಕ್ ಸರಸಿಗಳು . ಕೃಷ್ಣ ಭಟ್ ಇವರ ಮಾತುಕತೆ ಕೇಳಿ ಸಂತೋಷ ಪಡುವರು . 

ಏಳನೇ ಕ್ಲಾಸ್ ನ  ಪಬ್ಲಿಕ್ ಪರೀಕ್ಷೆಯಲ್ಲಿ ನನಗೆ ಜಿಲ್ಲೆಗೆ ಮೂರನೇ ರಾಂಕ್ ಬಂದಾಗ ತುಂಬಾ ಸಂತೋಷ ಪಟ್ಟು ಬೆನ್ನು ತಟ್ಟಿ ಆಶೀರ್ವಾದ ಮಾಡಿದ್ದರು .                 . ಇದೇ ತಿಂಗಳು ಹದಿನೈದರಂದು ಅವರು ತೀರಿ ಕೊಂಡ ವಾರ್ತೆ ಪತ್ರಿಕೆಯಲ್ಲಿ ಓದಿದಾಗ ಹಳೆಯ ನೆನಪುಗಳು ಮರುಕಳಿಸಿದವು .ಅವರ ನಿಧನ ಒಂದು ವಾರದ ನಂತರ ಮುಡಿಪು ಶಾಲೆಯಲ್ಲಿ ಮುಖ್ಯೋಪಾಧ್ಯಾಯ ರಾಗಿ  ವಿದ್ಯಾರ್ಥಿ ಪ್ರಿಯರಾಗಿದ್ದ ಅವರ ಅಣ್ಣ ಪಿದಮಲೆ  ರಾಮ ಭಟ್ಟರೂ ತೀರಿ ಕೊಂಡ ವಾರ್ತೆ ಬಂತು . 

            ನಮ್ಮನ್ನೆಲ್ಲ ರೂಪಿಸಿದ ಅಧ್ಯಾಪಕರು ,ಒಬ್ಬೊಬ್ಬರೇ ತಮ್ಮ ಜೀವನ ಯಾತ್ರೆ ಮುಗಿಸಿ ಹೋಗುತ್ತಿದ್ದಾರೆ . ಪಂಜೆ ಮಂಗೇಶ ರಾಯರ ಬಗ್ಗೆ ಕುವೆಂಪು ಬರೆದ ಸಾಲುಗಳು ನೆನಪಿಗೆ ಬರುತ್ತಿವೆ .. 

 ಹಾಲು ಸಕ್ಕರೆ ಸೇರಿ ನೀವಾದಿರಾಚಾರ್ಯ
ನಡೆಯ ಮಡಿಯಲಿ, ನುಡಿಯ ಸವಿಯಲ್ಲಿ. ನಿಮ್ಮ ಬಗೆ
ಹಸುಳೆ ನಗೆ: ನಿಮ್ಮ ಕೆಳೆಯೊಲುಮೆ ಹಗೆತನಕೆ ಹಗೆ.
ಕಪ್ಪುರಕೆ ಕಿಡಿ ಮತ್ತೆ ಸತ್ಯಕ್ಕೆ ಸೌಂದರ್ಯ
ಸಂಗಮಿಸಿದಂತೆ, ರಂಜಿಸಿದೆ ಜೀವನ ಸೂರ್ಯ
ನಿಮ್ಮದೆಮ್ಮಯ ನುಡಿಯ ಗುಡಿಗೆ, ಮಂಗಳ ಕಾಂತಿ
ಪರಿಮಳಂಗಳನಿತ್ತು. ನಿಮ್ಮ ಬಾಳಿನ ಶಾಂತಿ
ಮತ್ತೆ ರಸಕಾರ್ಯಗಳಿಗುಪಮೆ ವೀಣಾತೂರ್ಯ!
ಕಚ್ಚಿದರೆ ಕಬ್ಬಾಗಿ, ಹಿಂಡಿದರೆ ಜೇನಾಗಿ
ನಿಮ್ಮುತಮಿಕೆಯನೆ ಮೆರೆದಿರಯ್ಯ: ಚಪ್ಪಾಳೆ
ಮೂಗುದಾರವನಿಕ್ಕಿ ನಡೆಯಿಸಿದರದು ಬಾಳೆ
ಹಿರಿಯ ಸಿರಿ ಚೇತನಕೆ? ಕೀರ್ತಿಲೋಭಕೆ ಬಾಗಿ
ಬಾಳ್ಬಂಡಿ ನೊಗಕೆ ಹೆಗಲಿತ್ತವರು ನೀವಲ್ಲ;
ತೇರ್ಮಿಣಿಯನೆಳೆದಿರಲ್ಲದೆ ಮತ್ತೆ ಮಣಿದಿಲ್ಲ!


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ