ಬೆಂಬಲಿಗರು

ಶನಿವಾರ, ಜೂನ್ 26, 2021

ಬೆಕ್ಕಿನ ಕೊರಳಿಗೆ ಗಂಟೆ

  ಬೆಕ್ಕಿನ  ಕೊರಳಿಗೆ ಗಂಟೆ 

 

ಸತ್ಯ ಹೇಳುತ್ತೇನೆ ,ನನಗೆ ಸರ್ಕಾರೀ ಕಚೇರಿಗಳಿಗೆ ಅದೂ ರಾಜ್ಯ ಸರಕಾರದ ಕಚೇರಿಗಳಿಗೆ ಹೋಗುವುದೆಂದರೆ ಒಂದು ಥರಾ ಭಯ ಮತ್ತು ಆತಂಕ .(ನಾನೂ ಕೇಂದ್ರ ಸರಕಾರದ ಗಜ್ಝೆಟೆಡ್ ಅಧಿಕಾರಿ ಆಗಿದ್ದೆ )ಹೆಚ್ಚಿನ ಕಚೇರಿಗಳಲ್ಲಿ ನಾವು  ನೋಡಬೇಕಾದ ಅಧಿಕಾರಿ ಇರುತ್ತಾರೋ ಇಲ್ಲವೋ ? ಇದ್ದರೂ ನಮ್ಮನ್ನು ಮಾತನಾಡಿಸುತ್ತಾರೋ ?ನಮ್ಮ ಕೆಲಸ ಆಗುವುದೋ ಇಲ್ಲವೋ ? ಇತ್ಯಾದಿ ವ್ಯಾಕುಲಗಳು . ಯಾವುದೇ ಕಚೇರಿಗೆ ಹೋದರೆ ಆಹ್ವಾನವಿಲ್ಲದೆ ಬಂದ ಅತಿಥಿಯಂತೆ ಆಗಿ ಹೋಗುತ್ತೇವೆ .ಜನರಿಗಾಗಿ ಈ ಕಚೇರಿಗಳು ಎಂಬ ಭಾವನೆ ಬರುವುದಿಲ್ಲ .ಪಂಜೆ ಮಂಗೇಶ ರಾಯರು ಸಬ್ ಅಸಿಸ್ಟಂಟ್ ನ  ಸುಳ್ಳು ಡೈರಿ "ಯಲ್ಲಿ ಅಂದು ಸರಕಾರಿ ಇಲಾಖೆಗಳ ಬಗ್ಗೆ ಬರೆದುದು ಈಗಲೂ ಹೆಚ್ಚು ಕಡಿಮೆ ಹಾಗೆಯೇ ಇದೆ .  ಕಛೇರಿಗಳಲ್ಲಿ ಅಗರಬತ್ತಿ ಹಚ್ಚಿದ್ದ ಮಹಾತ್ಮಾ ಗಾಂಧಿ ಮತ್ತು ದೇವರ ಪಟಗಳು ನಮ್ಮನ್ನು ಅನುಕಂಪದಿಂದ ನೋಡುತ್ತಿರುತ್ತವೆ .ಇತ್ತೀಚೆಗೆ ಬ್ಯಾಂಕ್ ಗಳಲ್ಲಿಯೂ ಇಂತಹ ವಾತಾವರಣ ಇದೆ . ಇದನ್ನು ಸರಿ ಮಾಡುವುದು ಹೇಗೆ ಎಂದು ತೋಚುತ್ತಿಲ್ಲ . ಕೆಲಸ ಬಾಹುಳ್ಯದಿಂದ ,ಕ್ಷಮತೆಯನ್ನು ಗುರುತಿಸಿ ಪ್ರೋತ್ಸಾಹಿವ ವ್ಯವಸ್ಥೆ ಇಲ್ಲದಿರುವುದು ,ಸರಿಯಾದ ತರಬೇತಿಯ ಕೊರತೆ ಮತ್ತು ಕೆಲವರಲ್ಲಿ ಶೀಘ್ರ ಧನಾರ್ಜನೆ ಆಸೆ ಇತ್ಯಾದಿ ಮೇಲ್ನೋಟಕ್ಕೆ ಕಂಡು ಬರುವ ಕಾರಣಗಳು .

ಸರ್ ಎಂ ವಿಶ್ವೇಶ್ವರಯ್ಯ ಅವರೇ ಅಧಿಕಾರ  ಶಾಹಿಯ ಬಗ್ಗೆ ಇಂಗ್ಲಿಷ್ ನ ಒಂದು ನುಡಿಗಟ್ಟನ್ನು ಉದಾಹರಿಸುತ್ತಿದ್ದರು ಎಂದು ಓದಿದ ನೆನಪು ' The  secretariat has neither a body to kick nor a soul to damn.'. ಅವರು ಹೇಳುತ್ತಿದ್ದರು "ನಿಜವಾದ ಸೇವೆ ಎಂದು ಕರೆಸಿಕೊಳ್ಳಲು ಹಣದಿಂದ ಅಳೆಯಲಾಗದ ಮತ್ತು ಖರೀದಿಸಲಾಗದ ಒಂದು ಗುಣ ಅದಕ್ಕೆ ಸೇರಿಸ ಬೇಕು "

ಇನ್ನು  ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರೂ ನಮ್ಮ ಸರಕಾರಿ ಪತ್ರಗಳಲ್ಲಿ ಪ್ರೀತಿ ವಿಶ್ವಾಸಗಳು ಕಾಣುವದು ಕಡಿಮೆ . ಆದೇಶಿಸಲಾಗಿದೆ , ಸೂಚಿಸಲಾಗಿದೆ ಇತ್ಯಾದಿ ಪ್ಯಾಸಿವ್ ವಾಯ್ಸ್ ನ ಒಕ್ಕಣೆಯೊಂದಿಗೆ , ನಿರ್ದಿಷ್ಟ  ಪಾವತಿ ಚಲನ್ ಮತ್ತು ದಾಖಲೆಗಳ ಲಗತ್ತಿಕೆ ಇಲ್ಲದಿದ್ದರೆ ತಿರಸ್ಕರಿಸ ಲಾಗುವದು ಇತ್ಯಾದಿ ಬೆದರಿಕೆ ಶಬ್ದಗಳು ಸಾಮಾನ್ಯ . ಹಿಂದೆ  ಟೆಲಿಫೋನ್ ವಿದ್ಯುತ್ ಬಿಲ್ ಗಳಲ್ಲಿ  ಕೊನೇ ದಿನಾಂಕದ ಮೊದಲು ಪಾವತಿಸದಿದ್ದರೆ ಸಂಪರ್ಕ ಕತ್ತರಿಸುವ ಎಚ್ಚರಿಕೆ ಎಂದು ಇದನ್ನೇ ತಿಳಿಯುವುದು .(ಜಾಗ್ರತೆ ).ಬಿಲ್ ತಲುಪದಿರುವದು ಪಾವತಿ ಮಾಡದೇ ಇರುವುದಕ್ಕೆ ಕಾರಣವೆಂದು ಪರಿಗಣಿಸ ಲಾಗದು ಇತ್ಯಾದಿ ಎಚ್ಚರಿಕಾ ವಾಕ್ಯಗಳು ಇರುತ್ತಿದ್ದವು . 

   ಇದನ್ನೇ  ಪರಿಸ್ಕರಿಸಿ ' ಸ್ವಾಮಿ ನಿಮ್ಮ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದು ಸಂತೋಷ .ನೀವು ಇಂತಹ ದಿನ ಕೆಳ ಕಾಣಿಸಿದ ದಾಖಲೆಗಳೊಡನೆ ನಮ್ಮ ಕಚೇರಿಗೆ ಬನ್ನಿರಿ . ನಿಮ್ಮ ಸಹಾಯಕ್ಕೆ ಶ್ರೀ ರಾಮಣ್ಣ (ಫೋನ್ ನಂಬರ್ ) ಇವರನ್ನು ನಿಯುಕ್ತಿ ಗೊಳಿಸಿದ್ದೇನೆ . ಯಾವುದೇ ಸಂದೇಹ ಇದ್ದರೆ ಸಂಪರ್ಕಿಸಿರಿ . ಎಂದು ಆಕ್ಟಿವ್ ವಾಯ್ಸ್ ನಲ್ಲಿ ಒಕ್ಕಣೆ ಇದ್ದರೆ ಇವರು ನಮ್ಮವರು ಎಂಬ ಭಾವನೆ ಬರುವುದು .. ಅಲ್ಲದೆ ಕೆಲಸ ಮುಗಿಸಿ ಹೋದ ಮೇಲೂ ಅರ್ಜಿದಾರನಿಗೆ  ಅದು ಯಾವ ಹಂತದಲ್ಲಿ ಇದೆ ಎಂದು ಪತ್ರ  ಮುಖೇನ ಅಥವಾ ದೂರವಾಣಿ ಮೂಲಕ ಕಾಲಕಾಲಕ್ಕೆ ಮಾಹಿತಿ ನೀಡಿ ತಮ್ಮ ಸೇವೆಯನ್ನು ಬಳಸಿದ್ದಕ್ಕೆ ಕೃತಜ್ಞತೆ ಸಮರ್ಪಿಸಿ , ತಮ್ಮ ಕಚೇರಿಯ ಸೇವೆಯ ಗುಣಮಟ್ಟದ ಬಗ್ಗೆ ಅಭಿಪ್ರಾಯ ಸಂಗ್ರಹಿದರೆ ಇನ್ನೂ ಒಳ್ಳೆಯದಲ್ಲವೇ ?

ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ?ಮತ್ತು ಯಾಕೆ ಕಟ್ಟ ಬೇಕು ?

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ