ಬೆಂಬಲಿಗರು

ಗುರುವಾರ, ಜೂನ್ 24, 2021

ಡಾ ಎಚ್ ಕೆ ನಂಜುಂಡ ಸ್ವಾಮಿ

 ಹಿರಿಯರಾದ ಮರಕಿಣಿ ನಾರಾಯಣ ಮೂರ್ತಿಯವರು ಮೊನ್ನೆ ಫೇಸ್ ಬುಕ್ ನಲ್ಲಿ ಡಾ ಎಚ್ ಕೆ ರಂಗನಾಥರ ಎರಡು ಪುಸ್ತಕಗಳ ಭಾವ ಚಿತ್ರ ಹಾಕಿದ್ದರು   .ಕೂಡಲೇ ನನಗೆ ರಂಗನಾಥ ಅವರ ಸಹೋದರ ಡಾ ಎಚ್ ಕೆ ನಂಜುಡ ಸ್ವಾಮಿ ಅವರ ನೆನಪಾಯಿತು . ಇವರು ಸಹೋದರರೆಲ್ಲ ಪ್ರತಿಭಾವಂತರು ; ಖ್ಯಾತ ಸಾಹಿತಿ ಕವಿ ಆಡಳಿತಗಾರ ಎಸ ವಿ ಪರಮೇಶ್ವರ ಭಟ್ ಅವರ ಪತ್ನಿ ಇವರ ಸಹೋದರಿ ,ಮತ್ತು ಪ್ರಜಾವಾಣಿ ಯ ಸಂಪಾದಕರಾಗಿ  ಖ್ಯಾತರಾಗಿದ್ದ ಟಿ ಎಸ ರಾಮಚಂದ್ರ ರಾವ್ ಇವರ ಸಮೀಪ ಸಂಬಂದಿ . ವಿದ್ಯಾರ್ಥಿ ದೆಸೆಯಲ್ಲಿಯೇ ನಾಟಕ ಸಾಹಿತ್ಯ ರಂಗಗಳಲ್ಲಿ ಕೈಯ್ಯಾಡಿಸಿದ್ದ ಇವರು ತಮ್ಮ  ವೈದ್ಯಕೀಯ ವೃತ್ತಿಯಿಂದಾಗಿ (ಅಮೇರಿಕಾದಲ್ಲಿ )ಆ ಕಡೆ ಗಮನ ಹರಿಸಲು ಸಾಧ್ಯವಾಗದೆ ,ನಿವೃತ್ತಿ ನಂತರ  ಈ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡರು . ಖ್ಯಾತ ಬರಹಗಾರ  ಶ್ರೀನಿವಾಸ ವೈದ್ಯರಂತೆ ತಮ್ಮ ಅರುವತ್ತರ ವಯಸ್ಸಿನ ನಂತರ ಬರವಣಿಗೆ ತೊಡಗಿಸಿ ಕೊಂಡು ಸೈ ಎನಿಸಿ ಕೊಂಡವರು . ಕೆಲ ವರ್ಷಗಳ ಹಿಂದೆ ತೀರಿ ಕೊಂಡರು . 

ಕೆಲ ವರ್ಷಗಳ ಹಿಂದೆ ಮಂಗಳೂರಿನ ಅತ್ರಿ ಬುಕ್ ಸೆಂಟರ್ ನಲ್ಲಿ ಇವರ ಸುಶ್ರುತ ನಡೆದ ಹಾದಿಯಲ್ಲಿ ಪುಸ್ತಕ ಕಣ್ಣಿಗೆ ಬಿದ್ದಿತು . ವೈದ್ಯರೊಬ್ಬರು ಬರೆದ ಪುಸ್ತಕ ಎಂದು ಕೊಂಡು ಓದಿದೆನು .ಬಹಳ ಆತ್ಮೀಯ ಬರಹ ,ಭಾಗಶಃ  ಆತ್ಮ ಕಥಾತ್ಮಕ . ಆಮೇಲೆ ನನ್ನ ವಿದ್ಯಾರ್ಥಿಗಳಿಗೆ  ಮತ್ತು ಮಿತ್ರರಿಗೆ ಇದನ್ನು  ಓದುವಂತೆ ಶಿಫಾರಸ್ಸು ಮಾಡಿದೆನು .ನನ್ನ ಮಗನ ಮದುವೆಗೆ ಇದರ ಹಲವು ಕಾಪಿಗಳನ್ನು  ಹುಬ್ಬಳ್ಳಿಯಿಂದ ನೇರ ತರಿಸಿ ಬಂದಿದ್ದ ನನ್ನ  ವೈದ್ಯಕೀಯ ಸಹಪಾಠಿ ಗಳಿಗೆ ಹಂಚಿದ್ದೇನೆ . 

ಈ ಪುಸ್ತಕವನ್ನು ಮೆಚ್ಚಿ  ಅವರಿಗೆ ಈ ಮೇಲ್ ಮಾಡಿದ್ದಕ್ಕೆ ಕೂಡಲೇ ಉತ್ತರಿಸಿದ್ದರಲ್ಲದೆ ತಮ್ಮ ಇತರ ಕೃತಿಗಳು ಯಾವುದೆಲ್ಲ ಎಲ್ಲಿ ಲಭ್ಯ ಎಂಬ ಮಾಹಿತಿಯನ್ನೂ ನೀಡಿದರು .ನನ್ನ ಬಳಿ ಅವರ ಇತರ ಕೃತಿಗಳಾದ ಕಾನನದ ಮಲ್ಲಿಗೆ ,ನಿಶ್ಶಬ್ದ  ಸಂಗೀತ ,ಕನ್ನಡ ಗಿನ್ನಡ ಮತ್ತು ಕಲಸು ಮೇಲೋಗರ ಇವೆ . ಕಾನನದ  ಮಲ್ಲಿಗೆಗೆ ಕೋ ಚೆನ್ನ ಬಸಪ್ಪ ಮುನ್ನುಡಿ ಬರೆದಿದ್ದಾರೆ . ಹೆಚ್ಚಿನವು ಲಲಿತ ಪ್ರಬಂಧ ಗಳು ಎನ್ನ ಬಹುದು ,ಮತ್ತು ಓದಿಸಿ ಕೊಂಡು ಹೋಗುವವು . 


ಶುಶ್ರುತ ನಡೆದ ಹಾದಿಯಲ್ಲಿ ಪುಸ್ತಕದಲ್ಲಿ  ನೊಂದ ಹೃದಯಿ ಡಾಕ್ಟರ್ ಜಾಕೋಬ್ಸ್ ಎಂಬ ಲೇಖನ ಇದೆ .ಇದು ನಿಜ ಕತೆ . ಡಾಕ್ಟರ್ ಜಾಕೋಬ್ಸ್ ಪಿಟ್ಸ್ ಬರ್ಗ್ ನ ಹೆಸರಾಂತ  ಸ್ತ್ರೀ ರೋಗ ಶಾಸ್ತ್ರಜ್ಞರು . ನುರಿತ ಶಸ್ತ್ರ ಚಿಕಿತ್ಸಕರು ಮತ್ತು ರೋಗಿಗಳ ಬಗ್ಗೆ ಅನುಕಂಪ ಇರುವವರು ಎಂದು  ಪ್ರಸಿದ್ಧ ರಾದವರು . ಯಾವಾಗಲೂ ಬ್ಯುಸಿ . ಇವರ ಬಳಿಗೆ ಮಕ್ಕಳಿಲ್ಲದ ವಿವಾಹಿತ ಯುವತಿ ಓರ್ವಳು ಶಂಕಿತ ಗರ್ಭ ಕೋಶದ ಗಡ್ಡೆ ಯ ಚಿಕಿತ್ಸೆ ಗಾಗಿ  ಬರುತ್ತಾಳೆ  . ಆಗೆಲ್ಲಾ ಹೊಟ್ಟೆಯ ಅಲ್ಟ್ರಾ ಸೌಂಡ್ ಸ್ಕ್ಯಾನ್ ಇರಲಿಲ್ಲ .ವೈದ್ಯರು ತಮ್ಮ ಕೈಯ್ಯಲ್ಲಿ ಪರೀಕ್ಷೆ ಮಾಡಿ ಅಂದಾಜು ಮಾಡಬೇಕು . ಕೆಳ ಹೊಟ್ಟೆಯ ಗಡ್ಡೆ ಆದ್ದರಿಂದ ಗರ್ಭ ಕೋಶ ಇಲ್ಲವೇ ಮೂತ್ರಾಶಯ (urinary bladder )ಗೆ ಸಂಬಂದಿಸಿದ್ದು ಎಂದು ಕೊಂಡು ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದರು . ಈಕೆಗೆ ಮಕ್ಕಳು ಆಗಿಲ್ಲದ ಕಾರಣ ಗರ್ಭ ಕೋಶದ ಗಡ್ಡೆ ಇದ್ದರೆ ಅದನ್ನು ತೆಗೆಯುವ ಉದ್ದೇಶ ದಿಂದ  ಹೊಟ್ಟೆ  ಓಪನ್ ಮಾಡಿ ನೋಡಿದರೆ ಗರ್ಭ ಕೋಶಕ್ಕೆ  ಅಂಟಿ ಕೊಂಡು ಒಂದು ಗಡ್ಡೆ ಇದ್ದಿತು ,ಇದುವರೆಗೆ ಇವರು ಕಂಡಿರದಂತಹುದು .ಮುಟ್ಟಿ ನೋಡಿದರೆ ಕ್ಯಾನ್ಸರ್ ತರಹ ಇರಲಿಲ್ಲ ,ಕಷ್ಟ ಪಟ್ಟು ಅದನ್ನು ಬೇರ್ಪಡಿಸಿ ಹೊರ ತೆಗೆದು ಬಯಾಪ್ಸಿ ಗೆ ಕಳುಹಿಸಿದರೆ  ಅದು ಆರೋಗ್ಯವಂತ ಮೂತ್ರ ಪಿಂಡ ಎಂಬ ರಿಪೋರ್ಟ್ ಬರುತ್ತದೆ . ಅಪರೂಪಕ್ಕೆ ಕೆಲವರಲ್ಲಿ  ಕಿಡ್ನಿ ತಾನು ಇರ ಬೇಕಾದ ಜಾಗದ ಬದಲಾಗಿ ಬೇರೆಲ್ಲೋ ಸ್ಥಾಪಿತ ವಾಗಿರುತ್ತದೆ . ಈ ರೋಗಿಯಲ್ಲಿಯೂ ಹಾಗೆಯೇ ಆಗಿತ್ತು .ದುರದೃಷ್ಟ ವಶಾತ್  ಅವಳಿಗೆ ಹುಟ್ಟಿನಾರಭ್ಯ ಒಂದೇ ಮೂತ್ರ ಪಿಂಡ ಇದ್ದಿತು ಕೂಡಾ (ಎಲ್ಲರಲ್ಲೂ ಎಡ  ಮತ್ತು ಬಲ ಎಂದು ಎರಡು ಇರುತ್ತದೆ .)ಆಗೆಲ್ಲಾ ಡಯಾಲಿಸಿಸ್ ಚಿಕಿತ್ಸೆ ಕೂಡಾ ಮುಂದುವರಿದು ಇರಲಿಲ್ಲ .ಕೆಲ ದಿನಗಳಲ್ಲಿ ರೋಗಿ ಮರಣ ಹೊಂದುವಳು . ಆಸ್ಪತ್ರೆಯ ಡೆತ್  ಆಡಿಟ್ ಮೀಟಿಂಗ್ ನಲ್ಲಿ ಉಳಿದ ಸಹೋದ್ಯೋಗಿಗಳು  ಅಂತಹ ಸಂದರ್ಭದಲ್ಲಿ  ತಾವೂ ಜಾಕೋಬ್ಸ್ ಅವರ ತರಹವೇ ಮಾಡುತ್ತಿದ್ದೆವು ಎಂದು ಸಮಾಧಾನ ಮಾಡುತ್ತಾರೆ .ರೋಗಿಯ ಸಂಬಂಧಿಕರೂ ಇವರ ಮೇಲೆ ಆಕ್ಷೇಪಣೆ ಏನೂ ಮಾಡಿದಂತೆ ಇಲ್ಲ . ಆದರೂ ನೊಂದ  ಡಾಕ್ಟರ್ ಜಾಕೋಬ್ಸ್ ಕೆಲ ದಿನಗಳ ನಂತರ ಆತ್ಮ ಹತ್ಯೆ ಮಾಡಿ ಕೊಳ್ಳುತ್ತಾರೆ .ಇದಕ್ಕೆ ಕಾರಣ ಆ ರೋಗಿಯ ಹಳೆಯ ಒಂದು ವೈದ್ಯಕೀಯ ದಾಖಲೆಯಲ್ಲಿ  ಆಕೆಗೆ ಒಂದೇ ಕಿಡ್ನಿ ಇರುವುದು ಮತ್ತು ಅದು ತನ್ನ ಯಾವತ್ತೂ ಇರುವ ತಾಣದಲ್ಲಿ ಇಲ್ಲ ಎಂಬ ಉಲ್ಲೇಖ ಇತ್ತು .ಆದರೆ ಕಾರ್ಯ ಬಾಹುಳ್ಯ ದ ಒತ್ತಡದಿಂದ ಅದನ್ನು ಅವರು ಗಮನಿಸಿ ಇರಲಿಲ್ಲ . 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ