ಬೆಂಬಲಿಗರು

ಮಂಗಳವಾರ, ಜೂನ್ 22, 2021

ತಲೆ ಭಾರ

 

ಹಿಂದೆ ಹಳ್ಳಿಗಳು ಆತ್ಮ ನಿರ್ಭರ ಆಗಿದ್ದವು . ಅಡಿಕೆ ಮಾರಾಟಕ್ಕೆ ಮತ್ತು ಕೆಲವು ದಿನಸಿ ವಸ್ತುಗಳಿಗೆ  ಮಾತ್ರ ನಗರವನ್ನು ಅವಲಂಬಿಸ ಬೇಕಿತ್ತು . ಆಹಾರ ಧಾನ್ಯ ಅಕ್ಕಿ .ಉದ್ದು ,ಹೆಸರು ಮತ್ತು ತರಕಾರಿ ಇತ್ಯಾದಿ ನಾವೇ ಬೆಳೆಯುತ್ತಿದ್ದೆವು . ಎಣ್ಣೆಯ ಗಾಣ ನಡೆಸುವವರು ,ಅವಲಕ್ಕಿ ಹೊರಿಯಕ್ಕಿ ತಯಾರಿಸುವವರೂ ಇದ್ದರು . ಕೃಷಿಗೆ ಬೇಕಾದ ಹಾರೆ ಪಿಕ್ಕಾಸು ,ಕತ್ತಿ  ಮತ್ತು ಮಡು (ಕೊಡಲಿ )ಇತ್ಯಾದಿ ,ಮನೆಗೆ ಬೇಕಾದ ಮಣ್ಣಿನ ಪಾತ್ರೆಗಳು ಇತ್ಯಾದಿಗಳನ್ನು  ತಯಾರು ಮಾಡುವ ವೃತ್ತಿಯವರು ,ಮರದ ಕೆಲಸದ ಬಡಗಿ ,ಮಣ್ಣಿನ ಗೋಡೆ ಕಟ್ಟುವವರು ಇತ್ಯಾದಿ ಪ್ರತಿಯೊಂದು ಊರಿನಲ್ಲಿ ಇರುತ್ತಿದ್ದರು . ಒಂದು ರೀತಿಯಲ್ಲಿ  ನಾವು ಲಾಕ್ ಡೌನ್ ಆಗಿಯೇ ಇರುತ್ತಿದ್ದೆವು . 

           ಈಗ ಕೋವಿಡ್ ಲಾಕ್ ಡೌನ್ ಆಗಿ ನನಗೆ ಭಾರೀ ತಾಪತ್ರಯ ಕ್ಕೆ  ಬಂದಿದೆ . ತಿಂಗಳಿಗೆ ಒಮ್ಮೆ  ವ್ರತದಂತೆ  ತಲೆಗೂದಲು  ಕಟಾಯಿಸುತ್ತಿದ್ದ  ನಾನು ಮುಚ್ಚನಾಗಿ ಹುಚ್ಚನಂತೆ ಆಗಿ ಹೋಗಿರುವೆನು ;ಕಿವಿ ಮುಚ್ಚಿ ಹೋಗಿ ಭಾಗಶಃ ಕಿವುಡ ಆಗಿ  ಮನೆಯಲ್ಲಿ ಪತ್ನಿ ,ಆಸ್ಪತ್ರೆಯಲ್ಲಿ ರೋಗಿ ಮತ್ತ್ತು ನರ್ಸ್ ಗಳ  ಅಪಹಾಸ್ಯಕ್ಕೆ ಗುರಿಯಾಗಿರುವೆನು . ನನ್ನನ್ನು ನೋಡಿದರೆ ಜಟಾಧಾರೀ  ಶಂಕರ ಮತ್ತು  ತಪಸ್ಸಿಗೆ ಕುಳಿತ ವಿಶ್ವಾಮಿತ್ರನ ನೆನಪು ಆದರೆ ನನ್ನ ತಪ್ಪಲ್ಲ .ನನ್ನ ಹೆಸರು ಪದ್ಮನಾಭ ಹೋಗಿ ಈಗ 'ಕೇಶ'ವ ಆಗಿದೆ . ಈಗಿನ ತಲೆ (?)ಮಾರಿನವರಿಗೆ  ಕೂದಲು ಬೆಳೆಸುವುದೇ ಫ್ಯಾಷನ್ ಆದುದರಿಂದ  ಅವರು ಸಂಕಷ್ಟದಲ್ಲಿಯೂ  ಅದೃಷ್ಟವನ್ನು ಕಾಣುವರು . ಹರಿದ ಪ್ಯಾಂಟ್ ,ಕೈ ಬಳಿ ಒಟ್ಟೆ(ಹರಿದು ರಂಧ್ರ )ಆದ ರವಿಕೆ ಕೂಡಾ ಈಗ ಆಗಿರುವಂತೆ . 

ಬಾಲ್ಯದಲ್ಲಿ  ಎಂದು ಎಂದು ನಮ್ಮ ತಲೆ ಭಾರ ಹೆಚ್ಚಾಗುವುದೋ ಆಗೆಲ್ಲ ಕಣ್ಣ ಭಂಡಾರಿ ಎಂಬವರು  ತಮ್ಮ ಆಯುಧಗೊಳೊಂದಿಗೆ  ಪ್ರತ್ಯಕ್ಷ ಆಗುತ್ತಿದ್ದರು . ರಜಾ ದಿನ ನೋಡಿಯೇ ಬರುತ್ತಿದ್ದ ಅವರಿಗೆ ನಾವೆಲ್ಲಾ ತಲೆ ಬಾಗುತ್ತಿದ್ದವು ,ಮೇಲೆ ನೋಡಿದರೆ ತಲೆಯನ್ನು ಕೆಳಗೆ ಒತ್ತುವರು ,ಎಡ ಗಡೆ ತಿರುಗಿದರೆ ಬಲಕ್ಕೆ ತಿರುಗಿಸುವರು . ಯಾವುದೇ ಮುಲಾಜು ಇಲ್ಲದೆ ಬೋಳು ಮಂಡೆ ಮಾಡುವಂತೆ ಹಿರಿಯರೇ ಆಜ್ಞೆ ಮಾಡುತ್ತಿದ್ದುದರಿಂದ  ಸಿನಿಮಾ ನಟರಂತೆ ಕ್ರಾಪ್ ಇಡುವ ನಮ್ಮ ಆಸೆ ಹಾಗೆಯೇ ಉಳಿಯುತ್ತಿತ್ತು . ಮಕ್ಕಳಿಗೆ ಕತ್ತರಿ ಮಾತ್ರ ,ಹಿರಿಯರಿಗೆ  ಬಾಳು ಕತ್ತಿ ಸ್ವಲ್ಪ ಉಪಯೋಗಿಸುವರು . ಅವರು ಬಾಳು ಕತ್ತಿಯನ್ನು ಮಸೆಯುವ ಒಂದು ಕಲ್ಲನ್ನೂ ತರುತ್ತಿದ್ದು ಹರಿತ ಮಾಡಿ ಕೊಳ್ಳುವರು .ನನ್ನ ಅಣ್ಣ ಆಗ" ಬಾಳು ಬೆಳಗಿತು' ಎನ್ನುವನು .ನಮ್ಮ ಎದುರು ಗಡೆ ಕನ್ನಡಿ ಇರುತ್ತಿರಲಿಲ್ಲ . ಸಾಮೂಹಿಕ ಕೇಶ ಕರ್ತನದ ಬಳಿಕ ನಾವೆಲ್ಲಾ  ತಿರುಪತಿ ರಿಟರ್ನ್ಡ್ ತರಹ ಕಾಣುತ್ತಿದ್ದೆವು . ಕಣ್ಣನವರ ಬಳಿಕ ಅವರ ತಮ್ಮ ಪಕೀರ ಭಂಡಾರಿ ಬರುತ್ತಿದ್ದರು . ಮನೆಯಲ್ಲಿ ನಡೆಯುವ ಹೇರ್ ಕಟಿಂಗ್ ಗೆ  ಕುರ್ಚಿ ಇಲ್ಲ , ನಾವೆಲ್ಲಾ ಮರದ ಮಣೆಯ ಮೇಲೆಯೇ ಕುಳಿತು ಕೊಳ್ಳುತ್ತಿದ್ದೆವು . 

  ಎಲ್ಲಾ ಮುಗಿದು ಹೋಗುವಾಗ ಅವರ ಸಂಭಾವನೆ ,ತೆಂಗಿನಕಾಯಿ ,ಅಡಿಕೆ ,ವೀಳ್ಯದ ಎಲೆ ಕೊಡುವರು  .ಚಹಾ ಉಪಹಾರ ಸೇವಿಸಿ ಮುಂದೆ ಹೋಗುವರು . ಈಗ ಲಾಕ್ ಡೌನ್ ಸಮಯದಲ್ಲಿ ಅವರ ನೆನಪು ಆಗುವುದು ,ಜೀವನ ಎಷ್ಟು ಸರಳ ಆಗಿತ್ತು . ನಮ್ಮ ಬೇಕುಗಳು ಹೆಚ್ಚಿನವು ಅನಾಯಾಸವಾಗಿ ನೆರವೇರುತ್ತಿದ್ದವು . 

ನಿಮಗೆ ತಿಳಿದಿರ ಬಹುದು .ಒಂದು ಕಾಲಕ್ಕೆ ಯುರೋಪ್ ನಲ್ಲಿ  ಕ್ಷೌರಿಕ ರೇ  ಶಸ್ತ್ರ ಚಿಕಿತ್ಸಕ ರಾಗಿದ್ದು , ಈಗಿನ ರಾಯಲ್ ಕಾಲೇಜು ಒಫ್ ಸರ್ಜನ್ಸ್ ನ ಹುಟ್ಟು ರೋಯಲ್ ಕಾಲೇಜು ಒಫ್ ಬಾರ್ಬರ್ಸ್ ನಿಂದ ಆಯಿತು . ಅವರ ಸಂಭಾವನೆ ವೈದ್ಯರ ಫೀಸ್ ಗಿಂತಲೂ ಹೆಚ್ಚಾಗಿದ್ದ ಸಮಯ ಇತ್ತು . ಹೀಗೆ ಚಾರಿತ್ರಿಕ ನೆಲೆಯಲ್ಲಿ ಆದರೂ ಅಧಿಕಾರಿಗಳು  ಸಲೂನ್ ತೆರೆಯಲು ಅನುಮತಿ ನೀಡಿದರೆ ನನ್ನಂತಹವರಿಗೆ ಅನುಕೂಲ ಆಗುತ್ತಿತ್ತು . ನನಗೆ ಒಂದು ಸಂದೇಹ ಈ ಲಾಕ್ ಡೌನ್ ಯಾರಿಗೆ ಎಲ್ಲಾ ಎಂದು ನಿರ್ಧರಿಸುವವರು  ಬೋಳು ಮಂಡೆಯವರು ಇರಬಹುದು ,ನಮ್ಮಂಥವರ ಮೇಲೆ ಸ್ವಲ್ಪ ಅಸೂಯೆ ಇರಬೇಕು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ