ಬೆಂಬಲಿಗರು

ಮಂಗಳವಾರ, ನವೆಂಬರ್ 30, 2021

ಬಿಟ್ಸ್ ಪಿಲಾನಿ ಮತ್ತು ಮಿರ್ಜಾ ಇಸ್ಮಾಯಿಲ್

                                                            
 Diwan Sir Mirza Ismail.jpg

BITS Pilani Starts Online Classes for MBA – PaGaLGuYಇತ್ತೀಚಿಗೆ ಬಿಡುಗಡೆ ಆದ ಹಿರಿಯರು ಡಾ ಸಿ ಎಸ ಶಾಸ್ತ್ರೀ ಅವರ ಕೃತಿ "ಸಂಚಾರ ವಿಚಾರ ಓದುತ್ತಿದ್ದೇನೆ . ಭೌತ ಶಾಸ್ತ್ರ ದಲ್ಲಿ ಉನ್ನತ ಅಧ್ಯಯನ ಮಾಡಿ ದೇಶದ ಹೆಸರಾಂತ ಶಿಕ್ಷಣ ಸಂಸ್ಥೆ ಗಳಲ್ಲಿ ದುಡಿದು ಈಗ ಬೆಂಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ . ಅವರ ಬಾಲ್ಯದಲ್ಲಿ ,ವಿದ್ಯಾರ್ಥಿ ದೆಸೆಯಲ್ಲಿ ಮತ್ತು ಮುಂದೆ ತನಗಾಗಿ ಮತ್ತು ಹೆತ್ತವರ ಸಂತೋಷಕ್ಕಾಗಿ ನಡೆಸಿದ ಹಲವು ಯಾತ್ರೆಗಳ ಬಗ್ಗೆ ಬರೆದಿದ್ದು , ಹಿಂದಿನ ಮತ್ತು ಈಗಿನ ಸಮಾಜ ,ಜೀವನ ಮತ್ತು ಆಚರಣೆಗಳ ತುಲನಾತ್ಮಕ ವಿಶ್ಲೇಷಣೆ ಇದೆ .ಪುಸ್ತಕ ಓದಿಸಿ ಕೊಂಡು ಹೋಗುತ್ತದೆ . 

ಸುಮಾರು ಒಂದೂವರೆ ದಶಕಗಳು ಇವರು  ಪ್ರತಿಷ್ಠಿತ ಬಿಟ್ಸ್ ಪಿಲಾನಿ (Birla Institute  of Technology )ಯಲ್ಲಿ ಅಧ್ಯಾಪನ ನಡೆಸಿದ್ದು ,ವಿಶ್ರಾಂತ ರಾದ ಮೇಲೆ ಅಲ್ಲಿಗೆ ಭೇಟಿ ನೀಡಿದಾಗ ಹಳೆಯ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳ ಜತೆ ಭೇಟಿ ಬಗ್ಗೆ ಆತ್ಮೀಯ ವಿವರಣೆ ಇದೆ . ಜೈಪುರ ಬಗ್ಗೆ ಕೂಡಾ . 

ಬಿಟ್ಸ್ ಪಿಲಾನಿ ಮತ್ತು ರಾಜಸ್ತಾನದ ವಿಶ್ವ ವಿದ್ಯಾಲಯ ,ಹಲವು ಶಿಕ್ಷಣ ಸಂಸ್ಥೆಗಳ ಸ್ಥಾಪನೆಯಲ್ಲಿ ನಮ್ಮವರೇ ಆದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಅಮೂಲ್ಯ ಕೊಡುಗೆ ಇದೆ ಎಂಬುದು ನಮಗೆ ಹೆಮ್ಮೆಯ ವಿಷಯ . ಮೈಸೂರು ಸರಕಾರದಲ್ಲಿ ಸುಧೀರ್ಘ ಕಾಲ ದೀವಾನರಾಗಿ ಒಳ್ಳೆಯ  ಆಡಳಿತ ನೀಡಿ ವಿರಮಿಸಿದ ಅವರನ್ನು ಜೈಪುರ ಕೈಬೀಸಿ ಕರೆಯಿತು ,ಅಲ್ಲಿನ ಮಹಾರಾಜ ಎರಡನೇ  ಸವಾಯಿ ಮಾನ್ ಸಿಂಗ್ ಅವರಿಗೆ ಪ್ರಧಾನ ಮಂತ್ರಿ ಆಗಿ ಹೋದರು . ಶಿಕ್ಷಣ ,ಅರೋಗ್ಯ ಮತ್ತು ಮೂಲ ಭೂತ ಸೌಕರ್ಯ ಇವಕ್ಕೆ ಒತ್ತು  ನೀಡಿ ಎಲ್ಲರ ಮನ ಗೆದ್ದರು .  ಜೈಪುರದ ಮುಖ್ಯ ರಸ್ತೆಗೆ ಇವರ ಹೆಸರು ನೀಡಲಾಗಿದೆ . ೧೯೪೫ ರಲ್ಲಿ ಜಯಪುರದಲ್ಲಿ ಲೇಖಕ ,ಪ್ರಭಂದಕಾರ ಮತ್ತು ಕಾದಂಬರಿಕಾರರ (PEN )ಸಮ್ಮೇಳನ ನಡೆಸಿ ಅದರ ಅಧ್ಯಕ್ಷತೆ ತಾವೇ ವಹಿಸಿ ಯಶಸ್ವೀ ಗೊಳಿಸಿದರು . 

ತಮ್ಮ ವೃತ್ತಿ ಜೀವನ ಅನುಭವಗಳನ್ನು "My Public Life "ಎಂಬ ಹೊತ್ತಿಗೆಯಲ್ಲಿ ನಿರೂಪಿಸಿದ್ದು ಎಲ್ಲರೂ ಓದ ಬೇಕಾದ ಗ್ರಂಥ . ಉದ್ಯಮಿ ಘನ ಶ್ಯಾಮ ದಾಸ್ ಬಿರ್ಲಾ ತಮ್ಮ ಹುಟ್ಟೂರಾದ ಪಿಲಾನಿ ಯಲ್ಲಿ ಒಂದು ಇಂಟೆರ್ ಮೀಡಿಯೇಟ್ ಕಾಲೇಜು ತೆರೆಯುವ ಹಂಬಲದಿಂದ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದರೂ ,ಅವರು ಕಾಂಗ್ರೆಸ್ ಮತ್ತು ಗಾಂಧೀಜಿ ಯವರ ಹಿತೈಷಿಗಳು ಎಂಬ ಕಾರಣಕ್ಕೆ ದೆಹಲಿಯ ಬ್ರಿಟಿಷ್ ಸರಕಾರದ  ರಾಜಕೀಯ ವ್ಯವಹಾರ ವಿಭಾಗದ ಅವಕೃಪೆಯಲ್ಲಿ ಇದ್ದರು ಎಂಬ ಕಾರಣಕ್ಕೆ ಜೈಪುರ ಸರಕಾರ ಅದನ್ನು ಪರಿಗಣಿಸಲು ಹಿಂದೇಟು ಹಾಕಿತ್ತು . ಆದರೆ ಮಿರ್ಜಾ ಧೈರ್ಯದಿಂದ ಮಹಾರಾಜರನ್ನು ಒಪ್ಪಿಸಿ ಬಿರ್ಲಾ ಅವರಿಗೆ ಹಸಿರು ನಿಶಾನೆ ತೋರಿಸಿದ್ದೇ ಮುಂದೆ ಬಿಟ್ಸ್ ಪಿಲಾನಿ ಯ ಹುಟ್ಟಿಗೂ ಕಾರಣ ಆಯಿತು .ಮೈಸೂರು ಮಹಾರಾಜಾ ಕಾಲೇಜಿನಲ್ಲ್ಲಿ ಪ್ರಿನ್ಸಿಪಾಲ್ ಆಗಿ ಪ್ರಸಿದ್ಧರಾಗಿದ್ದ ಜೆ ಸಿ ರೋಲೋ ಅವರನ್ನು ಜೈಪುರಕ್ಕೆ ಕರೆಸಿ ಶಿಕ್ಷಣ ಇಲಾಖೆಯ ಸಲಹೆಗಾರರನ್ನು ಆಗಿ ನೇಮಿಸಿದರು .ಮುಂದಕ್ಕೆ ರಾಜಪುತಾನಾ ವಿಶ್ವ ವಿದ್ಯಾಲಯದ ಹುಟ್ಟಿಗೆ ಕಾರಣವಾಯಿತು . ಅದಲ್ಲದೆ ಮೈಸೂರು ಸೇವೆಯಲ್ಲಿ ಇದ್ದ ಹಿರಣ್ಯಯ್ಯ ಎಂಬುವರನ್ನು  ಕರೆಸಿ ಜೈಪುರ ಆಡಳಿತದಲ್ಲಿ ಪ್ರಜಾ ಭಾಗಿತ್ವದ ರೂಪು ರೇಷೆ ನಿರ್ಧಾರ ಮಾಡುವ ಲ್ಲಿ  ಅಧ್ಯಯನ ಮಾಡಿ ಸಲಹೆ ನೀಡುವಂತೆ ಕೇಳಿದ್ದ ಲ್ಲದೆ ಅದನ್ನು ಯಶಸ್ವಿ ಯಾಗಿ ಜಾರಿಗೆ ತಂದರು . 



ಭಾನುವಾರ, ನವೆಂಬರ್ 28, 2021

ಹೇಗೆ ಮರೆಯಲಿ ಭಾವ ನಿಮ್ಮ ?

                                 


ನನ್ನ ದೊಡ್ಡ ಅಕ್ಕ ನನಗಿಂತ ಒಂಬತ್ತು ವರ್ಷ ದೊಡ್ಡವಳು ,ನನಗೆ ನೆನಪು ಬರುವಾಗ ಅವಳು ಶಾಲೆಗೆ ಮತ್ತು ಸಂಗೀತಾಭ್ಯಾಸ ಕ್ಕೆ ಎಂದು ಅಜ್ಜನ ಮನೆ ಯಲ್ಲಿ ಇದ್ದು ,ನಾನು ಒಂದನೇ ತರಗತಿಯಲ್ಲಿ ಇರುವಾಗ ಅವಳ ಮದುವೆ ಆಗಿದ್ದು ,ಅವಳನ್ನು ಸರಿಯಾಗಿ ನೋಡಿ ದ್ದು ಗಂಡನ ಮನೆಯಲ್ಲಿಯೇ . ನನ್ನ ಭಾವ ಹತ್ತೊಕ್ಕಲು ಸುಬ್ರಾಯ ಭಟ್ ಅವರು . ಮುಂದೆ ಪಾಲು ಆದ ಮೇಲೆ ಅಲ್ಲಿಂದ ಒಂದು ಮೈಲು ದೂರದ ಮಾಪಾಲು ಅವರ ಮನೆ . ಭಾವ ಉರುವಾಲು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು . ಇವರು ಮೂಲತಃ ಶಿರಂಕಲ್ಲು ಮೂಲದವರು .. 

                   ನನ್ನ ಭಾವ ಬಹಳ ಸಾಧು ಸ್ವಭಾವದವರು ,ಒಂದು ಇರುವೆಯನ್ನು ಕೂಡಾ ನೋಯಿಸರು . ಅವರು ಶಾಲೆಗೆ ಹೋಗುವ ಕಾರಣ ಕೃಷಿ ಉಸ್ತುವಾರಿ ಅಕ್ಕ ನೋಡಿ ಕೊಳ್ಳುತ್ತಿದ್ದರು .,

ಆಗ ಉಪ್ಪಿನಂಗಡಿಯಿಂದ ಇಳಂತಿಲಕ್ಕೆ (ಹತ್ತೊಕ್ಕಲು ಇದಕ್ಕೆ ಸಮೀಪ )ನಡೆದೇ ಹೋಗುವುದು . ಉಪ್ಪಿನಂಗಡಿ ನೇತ್ರಾವತಿ  ನಡೆದೇ ಅಥವಾ ಓಡದಲ್ಲಿ ದಾಟಿ ಕಾಲು ದಾರಿ ಯಲ್ಲಿ ಸುಮಾರು  ಐದು ಕಿಲೋಮೀಟರು ,ಅದರಲ್ಲಿ  ಇಳಂತಿಲ ಸಮೀಪ ಏರು ಗುಡ್ಡೆ ಒಂದು ಕಿಲೋಮೀಟರು . ಇಳಂತಿಲದಿಂದ ಎರಡು ಕಿಲೋಮೀಟರ್ ಮಾಪಾಲಿಗೆ .ಹೀಗೆ ಉಪ್ಪಿನಂಗಡಿಯಿಂದ ಅಕ್ಕನ ಮನೆಗೆ ತಲುಪುವಾಗ "ದಾಲ ಬಲ್ಲಿ "ಆಗುವುದು . ಗುರುವಾರ ಉಪ್ಪಿನಂಗಡಿ ಸಂತೆ ದಿನ ಈ ದಾರಿಯಲ್ಲಿ ಕೃಷಿ ಉತ್ಪನ್ನಗಳನ್ನು ಹೊತ್ತು ನಡೆಯುವ ಜನರ ಉದ್ದ ಮೆರವಣಿಗೆಯೇ ಇರುತ್ತಿತ್ತು . 

 ಈಗ ಇಲ್ಲಿ ಒಳ್ಳೆಯ ರಸ್ತೆಗಳು ,ಬಸ್ ಜೀಪ್ ಸರ್ವಿಸ್ ಇದೆ. 

ನನ್ನ ಅಕ್ಕ ಭಾವನಿಗೆ ನಾಲ್ಕು ಹೆಣ್ಣು ಮಕ್ಕಳು . ಹೆಚ್ಚಾಗಿ ಅಕ್ಕನ ಹೆರಿಗೆ ನಮ್ಮ ದೊಡ್ಡ ರಜೆಯಲ್ಲಿ ಆಗುತ್ತಿತ್ತು . ಪೇಟೆಗೆ ದೂರ ಇರುವುದರಿಂದ ನಮ್ಮ ಮನೆ ಅಂಗ್ರಿಯಲ್ಲಿ ಹೆರಿಗೆಗೆ ಬರುತ್ತಿದ್ದರು ..ಆಗೆಲ್ಲಾ  ಬಾವನಿಗೆ ಸಹಾಯ ಮಾಡಲು ಎಂದು ನಾವು ಮಾಪಾಲಿಗೆ ಹೋಗುವೆವು . ನಾನು ಸಣ್ಣ ಹುಡುಗ . ಮನೆಯಿಂದ ಹೊರಡುವಾಗ ತಾಯಿ' ಚೆಲ್ಲು ಚೆಲ್ಲಾಗಿ ಮಾತನಾಡ ಬಾರದು ,ಭಾವನಿಗೆ ಗೌರವ ಕೊಡ ಬೇಕು ,ಆದಷ್ಟು ಕೆಲಸದಲ್ಲಿ ಕೂಡ ಬೇಕು ,ಇಲ್ಲದಿದ್ದರೆ ಕಡಿಮೆ ಪಕ್ಷ ತೊಂದರೆ ಕೊಡ ಬಾರದು'ಎಂದು  ಉಪದೇಶ ಮಾಡುವರು . 

ಅಕ್ಕನ ಮನೆಯಲ್ಲಿ ಭಾವನಿಗೆ  ಅಡಿಗೆ ಮಾಡಲು ನಾನು ಸಹಾಯಕ ,ಅವರು ಹೆಡ್ ಕುಕ್ . ಕಾಯಿ ಕೆರೆಯುವುದು ,ಅಕ್ಕಿ ಕಾಯಿ ಅರೆಯುವುದು ,ದೋಸೆ ಹೊಯ್ಯುವುದು ನಾನು ,ಅದಕ್ಕೆ ಬೇಕಾದ ಮಸಾಲೆ ಕರಿದು ಕೊಡುವುದು ಇತ್ಯಾದಿ ಭಾವ .ನನ್ನ ಸೊಂಟಕ್ಕೆ ಒಂದು ತೋರ್ತು ,ಅದರಲ್ಲಿ ತುಂಬಾ ಬಾಳೆ ಕಾಯಿ ,ಎಲೆಯಿಂದ ಹಿಡಿದ ಕಲೆಗಳು ,ಮೇಲೆ ಬೋಳು ಎದೆ ಮತ್ತು ಹೊಟ್ಟೆಯ ಮೇಲೆ ಒಂದು ಜನಿವಾರ . ನನ್ನನ್ನು ಈ ವೇಷದಲ್ಲಿ  ಕಂಡ ಕೆಲಸದ ಅಳು ನನ್ನ ಭಾವನವರಲ್ಲಿ "ಇಂಬೆರ್ ಅಟಿಲ್ದ ಅಣ್ಣೆರಾ ?"ಎಂದು ಒಂದು ದಿನ ಕೇಳಲು ಅವರಿಗೆ ನಗೆ ತಡೆಯಲಿಲ್ಲ ."ಇದ್ಯಪ್ಪಾ ಇಂದು ಎನ್ನ ಭಾವೇರು "ಎಂದರು .ನನಗೇನು ಬೇಸರ ಆಗಲಿಲ್ಲ . 

ಬೆಳಿಗ್ಗೆ ಕಾಪಿಗೆ ದೋಸೆ ಇಡ್ಲಿ ಮಾಡುತ್ತಿದ್ದೆವು .ಒಂದು ನಾನೂ ಭಾವನವರೂ 'ಅಕ್ಕಿ ರೊಟ್ಟಿ ಮಾಡಿದರೆ ಹೇಗೆ ,ಯಾವಾಗಲೂ ದೋಸೆ ತೆಳ್ಳವು ತಿಂದು ಸಾಕಾಯಿತು "ಎಂದು ರೊಟ್ಟಿಗೆ ಅಕ್ಕಿ ನೀರಿನಲ್ಲಿ ಹಾಕಿದೆವು . ಕಡೆಯುವುದು ನಾನು ತಾನೇ .ಈ ರೊಟ್ಟಿಗೆ ಅರೆಯುವಾಗ ಜಾಸ್ತಿ ನೀರು ಹಾಕುವಂತಿಲ್ಲ . ಹೇಗೋ ಕಷ್ಟ ಪಟ್ಟು ಕಡೆದೆ . ದಿಗ್ವಿಜಯ ಸಾಧಿಸಿದವರಂತೆ ಬಾಳೆ ಕೀತಿನಲ್ಲಿ ರೊಟ್ಟಿ ತಟ್ಟಿ ಉಬ್ಬಿಸಿ ಸ್ವಲ್ಪ ರುಚಿ ನೋಡಲು ಹಿಟ್ಟಿಗೆ ಉಪ್ಪೇ ಹಾಕಿರಲಿಲ್ಲ .ಗಟ್ಟಿ ಹಿಟ್ಟಿಗೆ ಉಪ್ಪು ಸೇರಿಸುವದು ಹೇಗೆ ಎಂದು ನಮಗೆ ತಿಳಿಯದು .ತಿಳಿದವರಲ್ಲಿ ಕೇಳಲು ಈಗಿನ ಹಾಗೆ ಮೊಬೈಲ್ ಇಲ್ಲ . ರೊಟ್ಟಿಗೆ ಸೇರಿಸಲು ಬಸಳೆ ಪದಾರ್ಥ ಮಾಡಿದ್ದು ಅದಕ್ಕೇ ಸ್ವಲ್ಪ ಉಪ್ಪು ಸೇರಿಸಿದೆವು . ಒಟ್ರಾಸಿ ಮಾಡಿದ್ದು ಉಣ್ಣೋ ಮಹಾರಾಯ ಎಂದು ಬಾಯಿ ಚಪ್ಪರಿಸಿ ಕೊಂಡು ತಿಂದೆವು . ಈ ರೊಟ್ಟಿ ,ಪೂರಿ ಎಲ್ಲಾ ಉಬ್ಬಿ ಬಂದರೆ ಚೆನ್ನ .ಕೆಲವೊಮ್ಮೆ ಅವು ಉಬ್ಬದಿರಲು ನಾನು ಪತ್ನಿಗೆ' ರೊಟ್ಟಿಯೇ ,ಪೂರಿಯೇ ನಿನ್ನ ಬಿಟ್ಟರೆ ತಿಂಡಿ ಇಲ್ಲಾ ಎಂದು ಹೊಗಳ ಬೇಕು "ಆಗ ಅವು ಸಂತಸದಿಂದ ಉಬ್ಬುವುವು ಎಂದು ಸಲಹೆ ಮಾಡುವದು ಇದೆ . 

ನನ್ನ ಅಕ್ಕನ ಹೆರಿಗೆ ಸಮಾಚಾರ ಪೋಸ್ಟ್ ಮೂಲಕ ಬರುತ್ತಿತ್ತು .ಮೊದಲ ಹೆಣ್ಣು ಮಗು ಆದಾಗ ಸಂತೋಷ .ಮೇಲೆ ಮೇಲೆ ಹೆಣ್ಣು ಮಗು ಎಂಬ ಸುದ್ದಿ ಬಂದಾಗ ಭಾವನ ಮುಖದಲ್ಲಿ ಮ್ಲಾನತೆ ಇರುತ್ತಿತ್ತು .ಅದನ್ನು ಕಂಡು ಒಕ್ಕಲು ಉಮರೆ ಬ್ಯಾರಿ ಮತ್ತು ಅವರ ಪತ್ನಿ ಸಾರಮ್ಮ 'ಬೇಜಾರು ಮಲ್ಪಡೆ ,ಮಾತ ದೇವೇರು ಕೊರ್ಪುನೆ "ಎಂದು ಸಮಾಧಾನ ಮಾಡುವರು .ಅಕ್ಕ ಭಾವ ಎಲ್ಲಾ ಹೆಣ್ಣು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ದ್ದಲ್ಲದೆ ,ಒಳ್ಳೆಯ ಮನೆಗಳಿಗೆ ಮದುವೆ ಮಾಡಿ ಕೊಟ್ಟಿರುವರು . 

ನನಗೆ ಓದುವ ಹವ್ಯಾಸ ಇದೆ ಎಂದು ಭಾವ ಪೇಟೆಗೆ ಹೋದಾಗ ಪೇಪರ್ ,ಮ್ಯಾಗಜಿನ್ ತರುವರು .ಅವರ ಬಳಿ ಕುಮಾರ ವ್ಯಾಸ ಭಾರತ ,ದೇರಾಜೆ ಅವರ ಕೃತಿಗಳು ಇದ್ದು ಅವುಗಳು ನನಗೆ ರಾವಣನ ಹೊಟ್ಟೆಗೆ ಕಾಸಿನ ಮಜ್ಜಿಗೆಯಂತೆ ಆಗುತ್ತಿದ್ದವು .ಒಂದು ಟೆಲಿ ಫಂಕನ್ ರೇಡಿಯೋ ಇದ್ದುದು ಸ್ವಲ್ಪ ಸಮಾಧಾನ .. 

 ಉರುವಾಲು ಶಾಲೆಯ ಅಭಿವೃದ್ಧಿಗೆ ಅವರ ಕೊಡುಗೆ ದೊಡ್ಡದು . ಅಲ್ಲಿ ಒಂದು ಸಂಗೀತ ಶಾಲೆಯನ್ನೂ ಆರಂಭಿಸಿದ್ದರು .(ಅದನ್ನುಶ್ರೀ  ತಾಳ್ತಜೆ ವಸಂತ ಕುಮಾರ್ ಉದ್ಘಾಟಿಸಿದ್ದರು ). ಈಗಲೂ ಊರಿನವರು ಅವರನ್ನು ನೆನಸಿ ಕೊಳ್ಳುವರು .. 

ನಾನು ಅಕ್ಕನ ಮನೆಗೆ ಬಂದು ಇಳಿದೊಡನೆ "ಪದ್ಮನಾಭ ಭಾವ ಅಬ್ಬೆ ಎಂತ ಹೇಳಿದ್ದವು ?"ಎಂದು ಕೇಳುವರು . ನಾನು "ಬೆಗುಡು ಬೆಗುಡು ಮಾತನಾಡೆಡ ಹರಿಕತೆ ಮಾಡೆಡ "ಎಂದು ಬಾಲ್ಯದ ಮುಗ್ದತೆಯಿಂದ ಉತ್ತರಿಸಿದಾಗ ನಗುವರು . 

ನನ್ನ ವಿದ್ಯಾಭ್ಯಾಸ ಕಾಲಕ್ಕೆ ತುಂಬಾ ಸಹಾಯ ಮಾಡಿದ್ದರು . ಕೊನೆಗೆ ಮರೆವು ಕಾಯಿಲೆಯಿಂದ ಬಳಲಿ ಕೆಲ ವರ್ಷಗಳ ಹಿಂದೆ ತೀರಿ ಕೊಂಡ ಈ ಸಜ್ಜನ ಮೂರ್ತಿಯನ್ನು ಯಾವಾಗಲೂ ಸ್ಮರಿಸುವೆನು

ಶುಕ್ರವಾರ, ನವೆಂಬರ್ 26, 2021

ಮರೆಯಲಾಗದ ಒಂದು ದಿನ

                                    







ನಿನ್ನೆಯ ದಿನ ನನ್ನ ಜೀವನದ ಅತ್ಯಂತ ಮಧುರ ದಿನ . ಮುಂಜಾನೆ ೯ ಗಂಟೆಗೆ ಪುತ್ತೂರಿನಿಂದ ಮಿತ್ರ ವಿದ್ವಾಂಸ ಡಾ ವರದರಾಜ ಚಂದ್ರಗಿರಿ ಮತ್ತು ಪ್ರಕಾಶ ಕೊಡೆಂಕ್ರಿ ಜತೆ ದೇರಳಕಟ್ಟೆಗೆ ನನ್ನ ಕಾರಿನಲ್ಲಿ ಪ್ರಯಾಣ .ಸಮಾನ ಮನಸ್ಕರು ಜತೆಯಿರಲು ದಾರಿ ಸವೆದದ್ದೇ ತಿಳಿಯಲಿಲ್ಲ . ದೇರಳಕಟ್ಟೆ ಕ್ಷೇಮ ಕ್ಯಾಂಪಸ್ ಪ್ರವೇಶಿಸಿದ ಒಡನೆ ಡಾ ಕಿಶನ್ ಮತ್ತು ಮ್ಯಾನೇಜರ್  ರಚನಾ ಚೆಂಗಪ್ಪ ಅವರ ನಗುಮೊಗದ ಸ್ವಾಗತ . ರಚನಾ ಕೌನ್ಸೆಲರ್ ಆಗಿ ಸೇರಿ ಶ್ರೀ ಬಾಬು ಪೂಜಾರಿ (ಇವರ ಬಗ್ಗೆ ಹಿಂದೆ ಬರೆದಿದ್ದೆ )ಅವರು ನಿವೃತ್ತರಾದ ಮೇಲೆ ಆಫೀಸ್ ಮ್ಯಾನೇಜರ್ ಆದವರು .ಸದಾ ನಗುಮೊಗ ,ಪಾದರಸ ಚಲನೆ .ನನ್ನ ಪರಿಚಯ ಆಯಿತೋ ಎಂದು ಕೇಳಲು 'ಸರ್ ನಿಮ್ಮ ಮರೆಯುವುದುಂಟೋ ನೀವು ಸ್ಥಾಪಕ ಅಧ್ಯಾಪಕ ಗಣ ಭೂಷಣರು "ಎಂದರು .ಕಿಶನ್ ಇಡೀ ಕಾರ್ಯಕ್ರಮ ಏರ್ಪಡಿಸಿದ ಉತ್ಸಾಹಿ ವೈದ್ಯ ,ರೋಗ ಶಾಸ್ತ್ರ ವಿಭಾಗ ಅಧ್ಯಾಪಕ . 

ಡೀನ್ ಡಾ ಪ್ರಕಾಶ್ ನಮಗಾಗಿ ಕಾಯುತ್ತಿದ್ದು ಸಹೋದ್ಯೋಗಿಗಳ ಜತೆ ಉಪಹಾರ ನಂತರ ಸರಿ ಹನ್ನೊಂದು ಗಂಟೆಗೆ ನಾನು ಹಿಂದೆ ಪಾಠ ಮಾಡಿದ ಹಾಳ್ ನಂಬರ್ ೧ ರಲ್ಲಿ ಸಭಾ ಕಾರ್ಯಕ್ರಮ . 

ಮೆಡಿಸಿನ್ ವಿಭಾಗ ಮುಖ್ಯಸ್ಥ ಡಾ ಸುಧೀಂದ್ರ ರಾವ್ ಕನ್ನಡದಲ್ಲಿ ಸ್ವಾಗತಿಸಿ ,ನನ್ನ ವಿದ್ಯಾರ್ಥಿಯಾಗಿ ಈಗ ಪ್ರೊಫೆಸರ್ ಆಗಿರುವ ಡಾ ಶಾಮ್ ಪ್ರಕಾಶ್ ನನ್ನ ಪರಿಚಯ ಮಾಡಿದರು .ನಂತರ ಪುಸ್ತಕ ಬಿಡುಗಡೆ . 

ನನ್ನ ಮಾತಿನ ಸಾರಾಂಶ ಹೀಗಿತ್ತು . 

"ಕ್ಷೇಮಕ್ಕೆ ಬರುವುದೆಂದರೆ ನನಗೆ ತವರು ಮನೆಗೆ ಬಂದಂತೆ ;ನನ್ನ ೪೦ ವರ್ಷಗಳ ವೃತ್ತಿ ಜೀವನದಲ್ಲಿ ಹಲವು ಕಡೆ ಕೆಲಸ ಮಾಡಿದ್ದು ಅದರಲ್ಲಿ ಎರಡು ನನ್ನ ಹೃದಯಕ್ಕೆ ಬಲು ಸಮೀಪ .ಒಂದು ರೈಲ್ವೆ ಆಸ್ಪತ್ರೆ ಪೆರಂಬೂರ್ ,ಮತ್ತು ಇನ್ನೊಂದು ಕ್ಷೇಮಾ .ಇದರ ಆರಂಭದ ವರ್ಷಗಳಲ್ಲಿ ಸಂಸ್ಥೆಗೆ ಒಂದು ಇಮೇಜ್ ತರುವಲ್ಲಿ ನನ್ನ ಅಳಿಲು ಸೇವೆಯೂ ಸೇರಿದೆ .ಪಿ ಜಿ ಇಂಟರ್ನ್ ಗಳು ಇಲ್ಲದ ಆ ಅವಧಿಯಲ್ಲಿ ಆಸ್ಪತ್ರೆಯಲ್ಲಿ ಕೇಸ್ ಶೀಟ್ ,ಡಿಸ್ಚಾರ್ಜ್ ಸಮ್ಮರಿ ಬರೆಯುವುದು ಇತ್ಯಾದಿ ಕೆಲಸ ಮಾಡಿದ್ದೇವೆ .ಎರಡು ದಿನಕ್ಕೊಮ್ಮೆ ದಿನ ರಾತ್ರಿ ಪಾಳಿ ಮಾಡಿದ್ದು ನಾಲ್ಕನೇ ಮಹಡಿಯ ಡ್ಯೂಟಿ ರೂಮ್ ನಿಂದ ಒಂದನೇ ಫ್ಲೋರ್ ನಲ್ಲಿ ಸುಮಾರು ಕಿಲೋಮೀಟರು ದೂರ ಇರುವ ಐ ಸಿ ಯು ,ಇನ್ನೂ ಕೆಳಗೆ ಓ ಪಿ ಡಿ ಗೆ ನಡೆದು ,ಕೆಲವೊಮ್ಮೆ ಓಡಿ ಹೋಗಿದ್ದೇವೆ ..ಹಗಲು ರಾತ್ರಿ ಇರುತ್ತಿದ್ದರಿಂದ ಇಲ್ಲಿಯ ಎಲ್ಲಾ ಸಿಬ್ಬಂದಿಗಳೂ ಪರಿಚಿತರಾಗಿದ್ದರು .ಇನ್ನು ಪ್ಯಾಥಾಲಜಿ ,ಬಯೋ ಕೆಮಿಸ್ಟ್ರಿ ಮತ್ತು ರೇಡಿಯೊಲೊಜಿ ವಿಭಾಗಕ್ಕೆ ರೋಗಿಗಳ ವಿವರ ಚರ್ಚಿಸಲು ಸ್ವತಃ ಹೋಗುತ್ತಿದ್ದು ಎಲ್ಲರೂ ಮಿತ್ರರು . ನಾನು ವಿಭಾಗಕ್ಕೆ ಯಾವುದಾದರೂ ಕೆಲಸ ಅಪೇಕ್ಷಿಸಿದಾಗ ಕೂಡಲೇ ಆಗುತ್ತಿದ್ದು ಆಮೇಲೆ ಬಂದ ಸಹೋದ್ಯೋಗಿಗಳಿಗೆ ಆಶ್ಚರ್ಯ ಆಗುತ್ತಿತ್ತು . ನನ್ನ ಹೆಸರು ಆಪರೇಷನ್ ಥೀಯೇಟರ್ ನ ಶಸ್ತ್ರಕ್ರಿಯಾ ಪಟ್ಟಿಯಲ್ಲಿ ಕೂಡಾ ಕಾಣ ಬಹುದು ;ರಾತ್ರಿ ಪಾಳಿಯಲ್ಲಿ ಕೆಲವೊಮ್ಮೆ ಮಿತ್ರರಿಗೆ ಅಸಿಸ್ಟ್ ಮಾಡಲು ಸ್ವ  ಇಚ್ಛೆಯಿಂದ ಹೋಗಿದ್ದೆ .. ಫುಲ್ ಟೈಮ್ ಕಾರ್ಡಿಯಾಲಜಿಸ್ಟ್ ಬರುವ ತನಕ ಹೃದಯದ ಸ್ಕ್ಯಾನ್ (ಏಕೋ ಕಾರ್ಡಿಯೋಗ್ರಫಿ )ನಾನೇ ಮಾಡುತ್ತಿದ್ದು ರೇಡಿಯಾಲಜಿ ವಿಭಾಗದ ಒಬ್ಬನೂ ಆಗಿದ್ದೆ ,ಮಧ್ಯಾಹ್ನ ಊಟ ಅಲ್ಲಿಯೇ ಡಾ ಶ್ರೀಕೃಷ್ಣ ಭಟ್ ಜತೆ . 

ಖ್ಯಾತ ವೈದ್ಯ ಪ್ರಾಧ್ಯಾಪಕ ಡಾ ಕೆ ವಿ ತಿರುವೆಂಗಡಂ ಹೇಳುತ್ತಿದ್ದರು .'"ಕಲಿಕೆಗೆ ಉತ್ತಮ ಮಾರ್ಗ ಕಲಿಸುವುದು .ಇನ್ನೊಬ್ಬನಿಗೆ  ಕಲಿಸುವಾಗ ನೀವೂ ಕಲಿಯುವಿರಿ ."ಇದರ ಅರ್ಥ ಇಲ್ಲಿ ನನಗೆ ಆಗಿದೆ .ನಾನು ಕಲಿಸಿದ ಅನೇಕರು ಈಗ ಪ್ರೊಫೆಸರ್ ಆಗಿದ್ದು ನಾನು ಪ್ರೊಫೆಸರ್ ಗಳ ಅಧ್ಯಾಪಕ ಎಂದು ಅಜ್ಜ ನಾದ ಅನುಭವ 

ಪುಸ್ತಕಗಳು ಮತ್ತು ವಾಚನಾಲಯ ನನ್ನ ಹೃದಯಕ್ಕೆ ಹತ್ತಿರ .ಇಲ್ಲಿಯ ವಾಚನಾಲಯ ಸಜ್ಜು ಗೊಳಿಸಲು ಈಗ ಡಾಕ್ಟರ್ ಆಗಿರುವ ಯುವತಿ  ಲೈಬ್ರರಿಯನ್ ಸುಪ್ರಿತಾ ಶೆಟ್ಟಿ ಯವರಿಗೆ ಕಾಲೇಜಿಗೆ ರಜೆ ಹಾಕಿ ಬಂದು ಸಹಾಯ ಮಾಡಿದ್ದೆ . ಇವನು ಆಸ್ಪತ್ರೆ ಕೆಲಸ ಮಾಡದೇ ಅಂಡಲೆಯುತ್ತಿದ್ದಾನೆ ಎಂದು ಇತರರು ಹೇಳುವುದು ಬೇಡ ಮತ್ತು ನೇರವಾಗಿ ನನ್ನ ವಿಭಾಗಕ್ಕೆ ಸಂಬಂಧಿಸದ ಕಾರ್ಯ ಅಲ್ಲ ಎಂಬ ಕಾರಣಕ್ಕೆ ರಜೆ ಹಾಕಿದ್ದು . 

ವೈದ್ಯ ಶಾಸ್ತ್ರ ಅತೀ ವೇಗವಾಗಿ ಮುಂದುವರಿಯುತ್ತಿದ್ದು ಅದರ ಗತಿ ಹಿಡಿಯುವುದರಲ್ಲಿ  ವ್ಯಸ್ತರಾದ ನಾವು ಜನ ಸಾಮಾನ್ಯರನ್ನು ಇದ್ದಲ್ಲೇ ಬಿಟ್ಟು ,ಅವರು ವಿವರಗಳಿಗಾಗಿ ಅವೈಜ್ಞಾನಿಕ ಮೂಲಗಳನ್ನು ಅವಲಂಬಿಸ ಬೇಕಾಗಿದೆ .. ನಾವು ನಮ್ಮ ಹಿರಿಯರ ಜ್ಞಾನಕ್ಕೆ ಹೆಮ್ಮೆ ಪಡ ಬೇಕು ;ಅವರ ಮೌಢ್ಯ ಮತ್ತು ಮೂಡ ನಂಬಿಕೆಗಳಿಗೆ ಅಲ್ಲಾ .ಕವಿಗಳು ಹೇಳಿದಂತೆ 'ನಿಮ್ಮ ಪಾದದ ಧೂಳಿ ನಮ್ಮ ಹಣೆಯ ಮೇಲೆ ಇರಲಿ ,ಆದರೆ ಕೆಳಗೆ ಬಂದು ದೃಷ್ಟಿ ಮಸುಕು ಮಾಡದಿರಲಿ "

ನಾನು ಶಾಲಾ ಪಠ್ಯಗಳಲ್ಲಿ ಪ್ರಥಮ ಚಿಕಿತ್ಸೆಗೆ ಆದ್ಯತೆ ನೀಡಿಲ್ಲ .ನನ್ನ ಕೃತಿಯ ಮೊದಲ ಪುಟ ಅದರಿಂದ ಆರಂಭಿಸಿದ್ದೇನೆ . 

ಹಲವು ಕಾಯಿಲೆಗಳಿಗೆ ಸ್ಥಳೀಯ ಭಾಷೆಯಲ್ಲಿ ನಾವಿನ್ನೂ ಸರಿಯಾದ ಹೆಸರು ಇಟ್ಟಿಲ್ಲ ..ಉದಾ ಸ್ಟ್ರೋಕ್ ,ಇದು ಮೆದುಳಿನ ರಕ್ತ ಸಂಚಾರ ವ್ಯತ್ಯಯವಾಗಿ ಉಂಟಾಗುವದು ,ಇದನ್ನು ಪಕ್ಷವಾತ ,ಲಕ್ವಾ ಇತ್ಯಾದಿ ಕರೆದರೆ ಕಾಯಿಲೆ ಕೈ ಕಾಲಿನಲ್ಲಿ ಎಂಬ ಭಾವ ಬರುವುದು .ಅದಕ್ಕೆ ನಾನು ಮೆದುಳಿನ ಆಘಾತ ಎಂಬ ಹೆಸರು ಹುಟ್ಟು ಹಾಕಿದ್ದು ಅದರ ಕಾಪಿ ರೈಟ್ ಅಥವಾ ಪೇಟೆಂಟ್ ಕೇಳುವದಿಲ್ಲ . ಇನ್ನು ಹರ್ಪಿಸ್ ಜೊಸ್ಟರ್ ಎಂಬ ರೋಗಕ್ಕೆ ಸರ್ಪ ಸುತ್ತು ಎಂದು ಕರೆಯುವುದರಿಂದ ಒಂದು ಕಳಂಕ ಮತ್ತು ಧಾರ್ಮಿಕ ಬಣ್ಣ ಬಂದು ಜನರು ಲಭ್ಯವಿರುವ ಒಳ್ಳೆಯ ಚಿಕಿತ್ಸೆ ಬದಲಿಗೆ ಬೇರೆ ಮಾರ್ಗದಲ್ಲಿ ಹೋಗಿ ಬವಣೆ ಅನುಭವಿಸುವರು .ಅದಕ್ಕೆ ನಾನು ನರ ಕೋಟಲೆ ಎಂದು ಹೆಸರು ಕೊಟ್ಟಿರುವೆನು .ಸರಕಾರ ರಸ್ತೆ ,ವೃತ್ತಗಳ ಹೆಸರು ಬದಲಿಸಿದಂತೆ ರೋಗಗಳ ಹೆಸರೂ ಬದಲಿಸಿ ಇನ್ನು ಮುಂದೆ ಯಾರದರೂ ಸರ್ಪ ಸುತ್ತು ಎಂಬ ಹೆಸರು ಉಪಯೋಗಿಸಿದರೆ ದಂಡ ಹಾಕ ಬಹುದು . 

ಇನ್ನು ಜನರಿಗೆ ಊರಿನಲ್ಲಿ ಇರುವ ಕಾಯಿಲೆಗಳಾದ ಟೈಫಸ್ ,ಆಮ್ನಿಯೋಟಿಕ್ ಫ್ಲೂಯಿಡ್ ಎಂಬೋಲಿಸ್ಮ್ ಇತ್ಯಾದಿಗಳ ಬಗ್ಗೆ ಮಾಹಿತಿ ಇಲ್ಲದುದರಿಂದ ಅವನ್ನು ಪುಸ್ತಕದಲ್ಲಿ ಸೇರಿಸಿದ್ದೇನೆ .  ನಾನಾ ಕಾರಣಕ್ಕೆ ಬರುವ ಜಾಂಡಿಸ್ ಅಥವಾ ಮಂಜಪಿತ್ತ ಎಂಬ ರೋಗ ಲಕ್ಷಣವನ್ನು ರೋಗ ಎಂದು ತಿಳಿದು ಆಗುವ ಅನಾಹುತ ಮನನ ಮಾಡುವ ಪ್ರಯತ್ನ ,ಗ್ಯಾಸ್ಟ್ರಿಕ್ ಎಂಬ ಅಸ್ಪಷ್ಟ ರೋಗ ಲಕ್ಷಣ ಬಗ್ಗೆ ಚರ್ಚೆ ಮಾಡಿದ್ದೇನೆ .,ರೋಗಿಯನ್ನು ಇಡಿಯಾಗಿ ಚಿಕಿತ್ಸೆ ಮಾಡದೇ ರಿಪೋರ್ಟ್ ಗೆ ಔಷಧಿ ಕೊಡುವದುದರ ಅಪಾಯ ಬಗ್ಗೆ ವಿವರ ಇದೆ . 

ಇವಲ್ಲದೆ ಪುಸ್ತಕದಲ್ಲಿ ಕೆಲವು  ವ್ಯಕ್ತಿ ಚಿತ್ರಗಳು ,ನನ್ನ ವಿದ್ಯಾರ್ಥಿ ,ವೃತ್ತಿ ಜೀವನದ ಪಕ್ಷಿನೋಟ ಇದೆ. 

ಇವುಗಳನ್ನು ನಾನು ಫೇಸ್ ಬುಕ್ ನಲ್ಲಿ ಸರಣಿಯಾಗಿ ಬರೆಯುತ್ತಿದ್ದು ಹಿರಿಯರಾದ ಡಾ ಸಿ ಆರ್ ಬಲ್ಲಾಳ್ ಮತ್ತು ಅನೇಕ ಮಿತ್ರರು ಆಶಿಸಿದಂತೆ ಪುಸ್ತಕ ರೂಪದಲ್ಲಿ ತಂದಿರುವೆನು . 

ನಮಗೆ ಎರಡು ಆಯ್ಕೆ ಇದೆ .ಒಂದು ರೋಗಿಗಳ ಮೌಢ್ಯ ಗಳನ್ನು ಅಲ್ಲ ಗೆಳೆಯದೇ ಅದಕ್ಕೂ ಸೇರಿ ಔಷಧಿ ಬರೆಯುವದು .ಇನ್ನೊಂದು ಅವರ ತಪ್ಪು ತಿಳುವಳಿಕೆ ಗಳನ್ನು ಎತ್ತಿ ತೋರಿಸಿ ,ವೈಜ್ಞಾನಿಕ ಮಾಹಿತಿಗಳನ್ನು ನೀಡುವದು ,ಎರಡನೇಯದಕ್ಕೆ ಸಮಯ ಮತ್ತು ವ್ಯವಧಾನ ಬೇಕು .ಆದರೆ ಅದಕ್ಕೆ ಹೆಚ್ಚಿನ  ಧನ ರೂಪದ ಪ್ರತಿಫಲ ನಿರೀಕ್ಷಿಸುವಂತೆ ಇಲ್ಲ .. "

ಡಾ ವರದರಾಜ ಚಂದ್ರಗಿರಿ ನನ್ನ ಮತ್ತು ಪುಸ್ತಕದ ಬಗ್ಗೆ ತಪ್ಪುಗಳನ್ನು ಹೊಟ್ಟೆಗೆ ಹಾಕಿ ಹರಸಿದರು . ಡೀನ್ ಡಾ ಪಿ ಎಸ ಪ್ರಕಾಶ್ ಅಧ್ಯಕ್ಷ ಭಾಷಣ ಮಾಡಿದರು .ಡಾ ಕಿಶನ್ ವಂದನಾರ್ಪಣೆ ಮಾಡುವಾಗ ನನ್ನನ್ನು ಪುನಃ ಕ್ಷೇಮಾ ಕ್ಕೆ ಬರುವಂತೆ ಅಹ್ವಾನ ಇತ್ತರು . 

ಹೆಸರು ಬರೆಯ ಹೋಗುವುದಿಲ್ಲ .ನನ್ನ ಹಳೆಯ ಸಹೋದ್ಯೋಗಿಗಳು ಪ್ರೀತಿಯಿಂದ ಬಂದ್ದಿದ್ದು ಅವರ ಆರದ ಪ್ರೀತಿ ಸ್ನೇಹಗಳ ಕಂಡು ಮನಸು ತುಂಬಿ ಬಂತು , ಕಿರಿಯರು ಕೆಲವರು ನನ್ನ ಪಾದ ಮುಟ್ಟಿ ಆಶೀರ್ವಾದ ತೆಗೆದು ಕೊಂಡಾಗ ಈ ಕಾಲದಲ್ಲಿ ಅದೂ ಮೆಡಿಕಲ್ ಕಾಲೇಜಿನಲ್ಲಿ ಇಂತಹ ಸಂಬಂಧಗಳು ಇವೆಯೇ ಎಂದು ನೀವು ಆಲೋಚಿಸ ಬಹುದು

 

ಬುಧವಾರ, ನವೆಂಬರ್ 24, 2021

ಉದರ ನಿಮಿತ್ತಂ

                            ನನ್ನ ವೈದ್ಯನ ವಗೈರೆ ಗಳು ಪುಸ್ತಕದಲ್ಲಿ ಉದರ ಶೂಲಾ ಬಹು ವಿಧ ರೋಗಂ ಎಂಬ ಶೀರ್ಷಿಕೆಯ ಒಂದು ಲೇಖನ ಇದ್ದು ಶಂಕರಾಚಾರ್ಯರ ಭಜ ಗೋವಿಂದಂ ನ ಒಂದು ಸಾಲು ಉದರ ನಿಮಿತ್ತಂ ಬಹುಕೃತ ವೇಷಮ್ ಎಂದು ಇದ್ದು ಅದರಿಂದ ಪ್ರೇರಿತ ವಾದುದು 

ಜಟಿಲೋ ಮುಂಡಿಹಿ ಲುಂಚಿತ ಕೇಶಃ  

ಕಾಷಾಯಾಂಬರ ಬಹುಕೃತ ವೇಷಹ 

ಪಶ್ಯನ್ನಪಿ ಚ ನ ಪಶ್ಯತಿ ಮೂಢಹ 

ಉದರ ನಿಮಿತ್ತಂ ಬಹುಕೃತ ವೇಷಮ್ . 

(ಕೆಲರು ಬಿಡುವರು ಜುಟ್ಟು ,ಇನ್ನು ಕೆಲರು ಬೋಳಿಪರು ಮಂಡೆ

ಕಾವಿಯ ಉಡುಗೆ ಬಹು ಬಹು ವೇಷ 

ಜಗವ ನೋಡಿಯೂ ಜಗವ ಅರಿಯರು 

ಹೊಟ್ಟೆಯ ಪಾಡಿಗೆ ಬಹು ವಿಧ ವೇಷ .)

 ಹೆಚ್ಚು ಕಡಿಮೆ ಇದೇ ಭಾವಾರ್ಥ ಬರುವ ಜನಪ್ರಿಯ ಪುರಂಧರ ದಾಸರ ದೇವರ ನಾಮ ಉದರ ವೈರಾಗ್ಯ ವಿದು ;

 ಉದರ ವೈರಾಗ್ಯವಿದು ನಮ್ಮ
ಪದುಮನಾಭನಲಿ ಲೇಶ ಭಕುತಿಯಿಲ್ಲ

ಉದಯಕಾಲದಲೆದ್ದು ಗಡಗಡ ನಡುಗುತ
ನದಿಯಲಿ ಮಿಂದೆನೆಂದು ಹಿಗ್ಗುತಲಿ
ಮದ ಮತ್ಸರ ಕ್ರೋಧ ಒಳಗೆ ತುಂಬಿಟಗೊಂಡು
ಬದಿಯಲ್ಲಿದ್ದವರಿಗಾಶ್ಚರ್ಯ ತೋರುವುದು

ಕಂಚುಗಾರನ ಬಿಡಾರದಂದದಿ
ಕಂಚು ಹಿತ್ತಾಳೆ ಪ್ರತಿಮೆಗಳ ನೆರಹಿ
ಮಿಂಚಬೇಕೆಂದು ಬಲು ಜ್ಯೋತಿಗಳನು ಹಚ್ಚಿ
ವಂಚನೆಯಿಂದಲಿ ಪೂಜೆ ಮಾಡುವುದು

ಕರದಲಿ ಜಪಮಣಿ ಬಾಯಲಿ ಮಂತ್ರವು
ಅರಿವೆಯ ಮುಸುಕನು ಮೋರೆಗೆ ಹಾಕಿ
ಪರಸತಿಯರ ಗುಣ ಮನದಲಿ ಸ್ಮರಿಸುತ
ಪರಮ ವೈರಾಗ್ಯಶಾಲಿ ಎಂದೆನಿಸುವುದು

ಬೂಟಕತನದಲಿ ಬಹಳ ಭಕುತಿ ಮಾಡಿ
ದಿಟನೀತ ಸರಿಯಾರಿಲ್ಲೆನಿಸಿ
ನಾಟಕ ಸ್ತ್ರೀಯಂತೆ ಬಯಲ ಡಂಭವ ತೋರಿ
ಊಟದ ಮಾರ್ಗದ ಜ್ಞಾನವಿದಲ್ಲದೆ

ನಾನು ಎಂಬುದ ಬಿಟ್ಟು ಜ್ಞಾನಿಗಳಡನಾಡಿ
ಏನಾದರು ಹರಿ ಪ್ರೇರಣೆಯೆಂದು
ಧ್ಯಾನಿಸಿ ಮೌನದಿ ಪುರಂದರವಿಠಲನ
ಕಾಣದೆ ಮಾಡಿದ ಕಾರ್ಯಗಳೆಲ್ಲವು.

 

 

ಮಂಗಳವಾರ, ನವೆಂಬರ್ 23, 2021

ನಾನು ಕಾಪಿಡುವ ಸರ್ಟಿಫಿಕೇಟ್ ಗಳು

                                                     

ನನ್ನಲ್ಲಿ ಎಸ್ ಎಸ್ ಎಲ್ ಸಿ ಯಿಂದ ಆರಂಬಿಸಿ ವೈದ್ಯಕೀಯ ಸ್ನಾತಕೋತ್ತರ ಪದವಿ ವರೆಗೆ ಹಲವು ವಿದ್ಯಾರ್ಹತೆ ಮತ್ತು ಅನುಭವ ದ ಪ್ರಮಾಣ ಪಾತ್ರಗಳು ಇವೆ .ಆದರೆ ನಾನು ಜತನದಿಂದ ಕಾಪಿಟ್ಟ ಎರಡು ಕೆಳಗೆ ಕೊಟ್ಟಿರುವೆನು .ಮೊದಲನೆಯದು ಎಂ ಬಿ ಬಿ ಎಸ ವಿದ್ಯಾರ್ಥಿ ಆಗಿದ್ದಾಗ ಮಕ್ಕಳ ವಾರ್ಡ್ ನಲ್ಲಿ ದೀರ್ಘ ಕಾಲದ ರೋಗಗಳಿಗೆ (Chronic diseases ) ದಾಖಲಾದ ಬಡ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ್ದಕ್ಕೆ ,ವಿಭಾಗಾ ಮುಖ್ಯಸ್ಥ ರಾಗಿದ್ದ ಡಾ ಮಾಲತಿ ಯಶವಂತ್ ದಯಪಾಲಿಸಿದ್ದು . ಇದೊಂದು ಸಣ್ಣ ಸ್ವಯಂ ಸೇವೆ . ನಾನು ,ಡಾ ಸಂಜೀವ ಕುಲಕರ್ಣಿ (ಧಾರವಾಡ ಮಕ್ಕಳ ಬಳಗ ಸ್ಥಾಪಿಸಿದವರು ಮತ್ತು ಇತರ ಕೆಲವು ಸಮಾನ ಮನಸ್ಕರು ಸೇರಿ ಮಾಡಿದ ಕಾಯಕ    

                                                                            ಇನ್ನೊಂದು ಚೆನ್ನೈ ಯಲ್ಲಿ ಬಹಳ ಪ್ರಸಿದ್ಧರಾಗಿ,ಪ್ರಾಧ್ಯಾಪಕರ ಪ್ರಾಧ್ಯಾಪಕ ಎಂದು ಕರೆಸಿಕೊಂಡಿದ್ದ ದಿವಂಗತ ಪ್ರೊ.ಕೆ ವಿ ತಿರುವೆಂಗಡಂ ದಯಪಾಲಿಸಿದ್ದು . ಅವರು ರೈಲ್ವೆ ಆಸ್ಪತ್ರೆಗೆ ಪಿ ಜಿ ಗಳಿಗೆ ಪಾಠ ಮಾಡಲು ಬರುತ್ತಿದ್ದು ಯಾವುದೇ ಶುಲ್ಕ ತೆಗೆದು ಕೊಳ್ಳುತ್ತಿರಲಿಲ್ಲ . ರೋಗಿಯ ರೋಗ ಚರಿತ್ರೆ ಮತ್ತು ಪರೀಕ್ಷೆಗೆ ಬಹು ಮಹತ್ವ ಕೊಡುತ್ತಿದ್ದರು . ಯಾವುದೇ ಟೆಸ್ಟ್ ಬರೆಯುವಾಗ ಅದರಿಂದ ರೋಗ ನಿಧಾನಕ್ಕೆ ಎಷ್ಟು ಉಪಯೋಗ ಇದೆ ಎಂದು ಸರಿಯಾಗಿ ಯೋಚಿಸಿ ಬರೆಯಿರಿ . ರೋಗಿಯ ಪರೀಕ್ಷೆ ಮಾಡುವಾಗ ಇಡೀ ರೋಗಿಯನ್ನು ಮಾಡಬೇಕು ;ಶರೀರದ ಒಂದು ಭಾಗವನ್ನಲ್ಲ .ಇವು ಅವರ ಅನುಭವಾಮೃತ ಅಣಿಮುತ್ತುಗಳು . ತಮಿಳುನಾಡಿನಾದ್ಯಂತ ಅವರು ವೈದ್ಯಕೀಯ ರಂಗದಲ್ಲಿ ಮನೆ ಮಾತು . ಎಂಟ್ರನ್ಸ್ ಪರೀಕ್ಷೆಗಳ ಮಾದರಿ ಉತ್ತರವನ್ನು ಹೈ ಕೋರ್ಟ್ ನಲ್ಲಿ ಪ್ರಶ್ನಿಸಿದಾಗ ನ್ಯಾಯಾಧೀಶರು ಇವರ ಸಲಹೆ ಕೇಳುತ್ತಿದ್ದರು . ನಾನು ಒಂದು ಪ್ರಮಾಣ ಪತ್ರ ಕೇಳಿದಾಗ ತಮ್ಮ ಲೆಟರ್ ಹೆಡ್ ನಲ್ಲಿ ಪೆನ್ಸಿಲ್ ನಲ್ಲಿ ಬರೆದು ಕೊಟ್ಟು ಟೈಪ್ ಮಾಡಿಕೊಂಡು ಬರ ಹೇಳಿದರು .ಅದು ಸರಿ ಎಂದು ಖಚಿತವಾದ ಮೇಲೆ ಖಾಲಿ ಲೆಟರ್ ಹೆಡ್ ಹಾಳೆ ಕೊಟ್ಟು ಅಂತಿಮ ಟೈಪ್ ಆದ ಪ್ರಮಾಣ ಪತ್ರಕ್ಕೆ ಸಹಿ ಹಾಕಿ ಕೊಡುವರು . ಕೆಲ ತಿಂಗಳುಗಳ ಹಿಂದೆ ತೀರಿ ಕೊಂಡ ಇವರ ಬಗ್ಗೆ ನನ್ನ ಪುಸ್ತಕದಲ್ಲಿ ಕಿರು ಲೇಖನ ಇದೆ


                   
                                                    

ಭಾನುವಾರ, ನವೆಂಬರ್ 21, 2021

ಗೆಳೆಯನ ನಲ್ ಮಾತು

                          

ಇವರು ಡಾ ಸಿ ಬಿ ಮೋಹನ್ . ಮೆಡಿಕಲ್ ಕಾಲೇಜು ನಲ್ಲಿ ನನ್ನ ಸಹಪಾಠಿ ಮತ್ತು ಪ್ರಿಯ ಮಿತ್ರ .ಇವರು ಕೊಡಗು ಮೂಲದ ಹವ್ಯಕ ಬ್ರಾಹ್ಮಣರು ;ಇವರ ಹಿರಿಯರು ಬೆಂಗಳೂರು ಸಮೀಪ ಆನೇಕಲ್ ನಲ್ಲಿ ಬಂದು  ನೆಲಸಿದ್ದು ,ನಮ್ಮ ಬೋಳಂತಕೋಡಿ ಈಶ್ವರ ಭಟ್ ಅವರ ಸಮೀಪ ಬಂಧು .  ಆನೇಕಲ್ ನಲ್ಲಿ  ಜನಸ್ನೇಹಿ ಆಸ್ಪತ್ರೆಯಾದ ವಿಜಯಾ ನರ್ಸಿಂಗ್ ಹೋಂ ಮೋಹನ್ ದಂಪತಿಗಳು ನಡೆಸುತ್ತಿದ್ದು ಬಹಳ ಜನಪ್ರಿಯರಾಗಿದ್ದಾರೆ .ಕಾಲೇಜ್ ನಲ್ಲಿ ಇರುವಾಗ ಇವರು ಕ್ರಿಕೆಟ್ ಆಟಗಾರ , ಸ್ಟ್ರೈಕ್ ಬೌಲರ್ .ನಾನು ಪುಸ್ತಕ ಹುಳುವಾದರೆ ಇವರು ನನಗಿಂತ ದೊಡ್ಡ ಓದುಬಾಕ . ನನ್ನ ಕೃತಿ ವೈದ್ಯನ ವಗೈರೆಗಳು ಓದಿ ತನ್ನ ಅಭಿಪ್ರಾಯ ಬರೆದು ತಿಳಿಸಿದ್ದಾರೆ . ಅದನ್ನು ಹಾಗೆಯೇ ಕೊಟ್ಟಿದ್ದೇನೆ .ಅಂದ ಹಾಗೆ ಇವರು ಪುಸ್ತಕವನ್ನು ಹಣ ಕೊಟ್ಟು ಕೊಂಡು ಓದಿದ್ದಾರೆ

 ಪದ್ಮನಾಭ ಭಟ್ ಸರ್
ವಂದನೆಗಳು. ಇನ್ನು ಐವತ್ತು ಪುಟಗಳು ಓದಲು ಬಾಕಿಯಿದೆ.
ಇತ್ತೀಜೆಗಷ್ಟೆ ಹನುಮಂತ ರಾಯರ " ವಕೀಲರ ವಗೈರೆಗಳು  ಓದಿ ಮುಗಿಸಿದ್ದೆ. ಅಂತೆಯೇ ರಾ. ಶಿ. ಯವರ ಮನೋನಂದನ ಓದಿದೆ. ಅದೇ ಮಾದರಿಯಲ್ಲಿ ತಮ್ಮ ಪುಸ್ತಕ ಹೊರಬಂದಿದೆ. ಪ್ರತಿ ವಗೈರೆಗಳಿಗೂ ಒಂದು ಚಿತ್ತಾಕರ್ಷಕ ಹೆಸರು ಕೊಟ್ಟಿದ್ದೀರಿ. " ಚಿಕಿತ್ಸೆ ರೋಗಿಗೋ ರಿಪೋರ್ಟಿಗೋ"
ವೈದ್ಯರ ತುರಾತುರಿಯ ನಿರ್ಣಯಗಳು ರೋಗಿಗೆ ಹೇಗೆ ಮಾರಕವಾಗಬಲ್ಲವು ಎನ್ನುವುದನ್ನು ಎತ್ತಿ ತೋರಿದ್ದೀರಿ. ಮದ್ದಿನ ಕುಪ್ಪಿಯನ್ನು ಜ್ಞಾಪಿಸಿ ಕುಪ್ಪಿ ತರದೇ ಹೋದರೆ ಔಷಧಿ ಕೊಡದೇ ವಾಪಾಸು ಕಳುಹಿಸುತ್ತಿದ್ದ ದೊಡ್ಡಪ್ಪ ಡಾ. ಚಂದ್ರಶೇಖರ್ ರವರ ನೆನಪು ತಂದಿದ್ದೀರಿ. ಬದಲಿ ಮುಖ್ಯ ಅತಿಥಿಯಾಗಿ ರಂಜಿಸಿದ್ದೀರಿ.
" ಚಿರ ಋಣಿ ಭಾವ" ಎಂದು ಬರೆದು ವಾರಾನ್ನದ ಊಟ ಮಾಡುತ್ತಿದ್ದ ಕನ್ನಡದ ಮೇರು ನಟ ಉದಯಕುಮಾರರಿಗಾಗಿ ಕಾಯುತ್ತಿದ್ದ ನನ್ನ ಅಮ್ಮನನ್ನು ನೆನಪಿಗೆ ತಂದಿದ್ದೀರಿ. 

 ಮುನ್ನುಡಿ ಬರೆದ ಡಾ. ಸಿ. ಆರ್. ಬಲ್ಲಾಳರ ಮಾತಿನಂತೆ ಬಹುತೇಕ ಲೇಖನಗಳು ಆರೋಗ್ಯ ಮತ್ತು ವೈದ್ಯಕೀಯ ವಿಚಾರಗಳ ಬಗ್ಗೆ ಇದ್ದು ನನ್ನಂತ ಸರ್ವರೋಗ ಚಿಕಿತ್ಸಕ ಸಾಮಾನ್ಯ ವೈದ್ಯನಿಗೆ ಸಹಾಯ ಹಸ್ತ ನೀಡಿದ್ದೀರಿ.

ಉಧ್ದಾಲಕನ ಉಲ್ಲೇಖಿಸಿ
ನಾನು ಈ ಹಿಂದೆ ಬರೆದ ಪದ್ಯ
" ಭಟ್ಟರೆ ಪ್ಲೇಟಿಲೆಟ್ಟುಗಳಿಗೇಕೆ ನನ್ನ ಮೇಲೆ ಕೋಪ
ಛಂಗೆಂದು ಮೇಲೆ ಹಾರಿ
ಧೊಪ್ಪೆಂದು ಕೆಳಗೆ ಬೀಳೆ
ನನ್ನೆದೆಯ ಬಡಿತೊದಳು
ಏರು ಪೇರು"

 ಮಾದ್ರಿ ಮತ್ತು ಪಾಂಡು ಪುರಾಣ ತೆಗೆದು ಪಥ್ಯ ಹೇಳಿದ್ದೀರಿ. ರಾ. ಶಿ. ಯವರನ್ನು
ಏನೇನು ತಿನ್ನಬಹುದು ಡಾಕ್ಟ್ರೆ ಎಂದು ರೋಗಿ ಕೇಳಿದರೆ" ನನ್ನ ತಲೆಯೊಂದು ಬಿಟ್ಟು ಏನು ಬೇಕಾದರೂ ತಿನ್ನಯ್ಯ" ಎಂದು
ರೇಗಿದ ನೆನಪು

 ಪುಸ್ತಕ ತುಂಬಾ ಚೆನ್ನಾಗಿದೆ
ಬರವಣಿಗೆ ಸಹ ಒಳಗಿನ ಲೇಖಕನನ್ನು  ಹೊರ ಹಾಕಿದೆ.
ಸ್ವಲ್ಪ ಪಂಚತಂತ್ರ ದ ಪ್ರಯೋಗ ಮಾಡಿ ಪ್ರಸಂಗಗಳ ಮೂಲಕ ಸಾಮಾನ್ಯರನ್ನು ಹೆಚ್ಚು ತಲುಪಬಹುದಿತ್ತೇನೋ ಅನಿಸುತ್ತೆ. ಮುಕ್ತಾಯ ಪರಿಪೂರ್ಣವಾಗಿಲ್ಲ. ಹಾಗಾಗಿ ಇದರ ಮುಂದುವರಿದ ಭಾಗ ಹೊರ ಬರಲಿ.
ನಮ್ಮ ಹೆಮ್ಮೆಯ ಪ್ರೀತಿಯ
ಗುರುವಾಗಿರುವ ಸ್ನೇಹಿತರು ನೀವು. ನಿಮಗೆ ಯಶಸ್ಸು ಸಿಗಲಿ. 

 ಮಡಿಕೇರಿಯ ದಿನಗಳನ್ನು ಬರೆದಿದ್ದೀರಿ. ನನ್ನ ಪೂರ್ವಜರ ತವರು ಮನೆ. ಓಂಕಾರೇಶ್ವರನ ಸನ್ನಿಧಿಯ ಎದುರೇ ನಮ್ಮ ಮನೆ. ತಾವು ಉಲ್ಲೇಖಿಸಿರುವ ಗುಂಡುಗುಟ್ಟಿ ಮಂಜುನಾಥ, ಮತ್ತು ಮಕ್ಕಿರಾಮಯ್ಯ ಸನಿಹದ ಬಂಧುಗಳು. ಕೊಡಗಿನ ಗೌರಮ್ಮ ತಾಯಿಯ ಸಂಬಂಧಿ.

ಕೆಎಂಸಿಯ ದಿನಗಳಲ್ಲಿ ನನ್ನ ಹೆಸರು ಬಂದಿರುವುದು ಈ ಅಪ್ರಯೋಜಕ ಸಹ ತಮ್ಮ ನೆನಪಲ್ಲಿರುವದೇ ಖುಷಿ

ಹಿರಿಯರನ್ನು ನೆನೆದಿದ್ದೀರಿ
ಅಜ್ಜಿಯ ಸಹನಶೀಲತೆ, ಅಜ್ಜನ ಪ್ರೀತಿ, ಜನತಾ ಚಪ್ಪಲಿ ಅಂಗಡಿಯಲ್ಲಿ ತಂದೆಯವರು ಬರುತ್ತಾರೆ ಎಂದು ಹೇಳಿ ಸೌಮ್ಯ ಮೂರುತಿ ಖಾದರ್ ಸಾಹೇಬರನ್ನು ಪರಿಚಯಿಸಿದ್ದೀರಿ. ಡಾ ಪಾವಟೆ, ಎಚ್. ಆರ್ ಖನ್ನಾ ಇವರ ಬಗ್ಗೆ ಬರೆದು ನಮ್ಮ ಜ್ಞಾನ ಹೆಚ್ಚಿಸಿದ್ದೀರಿ. 


 

 

ಶನಿವಾರ, ನವೆಂಬರ್ 20, 2021

ಮಾನಸ ಪುತ್ರಿ ನೇಹಾ


 

ನಾವು ಮಂಗಳೂರಿನಲ್ಲಿ  ದಶಕಗಳೂ ಮೀರಿ ವಾಸವಿದ್ದು ,ಪಳ್ನಿರ್ ನಲ್ಲಿ ಒಂದು ಸ್ವಂತ ಫ್ಲಾಟ್ ಇತ್ತು . ಇಂದಿನ  ಸಣ್ಣ ಕುಟುಂಬ ಯುಗದಲ್ಲಿ  ಅಪಾರ್ಟ್ಮೆಂಟ್ ವಾಸ ಒಂದು ವಿಧದಲ್ಲಿ ಒಳ್ಳೆಯದು . ವಿಸ್ತರಿತ ಕೂಡು ಕುಟುಂಬ ಅಲ್ಲಿ ಇರುವುದು .ಈ ಶಬ್ದ  ನಾನು ನೋಡಿದ್ದು ಖ್ಯಾತ ಹಿರಿಯ ವೈದ್ಯರಾದ ಡಾ ಕೆ ಆರ್ ಶೆಟ್ಟಿ ಅವರ ಒಂದು ಲೇಖನದಲ್ಲಿ .ಅವರು ಸ್ವತಃ ದೊಡ್ಡ ಬಂಗಲೆ ಬಿಟ್ಟು  ಕದ್ರಿ ಪಾರ್ಕ್ ಸಮೀಪ ತಾವೇ ಒಂದು ಅಪಾರ್ಟ್ಮೆಂಟ್ ನಿರ್ಮಿಸಿ ಆಯ್ದ ವ್ಯಕ್ತಿಗಳಿಗೆ ನೀಡಿದ್ದಾರೆ .ಅಲ್ಲಿ ವಾಸಿಸುವ ಜನರು ಒಳ್ಳೆಯವರಾಗಿ ಇದ್ದರೆ ಫ್ಲಾಟ್ ಜೀವನ ಉತ್ತಮ .ಮಕ್ಕಳಿಗೆ ಆಡಲು ಸ್ನೇಹಿತರು ಸಿಗುವರು ,ಭದ್ರತೆ ಅಧಿಕ ಇರುವುದು ಇತ್ಯಾದಿ .

ನನ್ನ ಮನೆಯ ಸರೀ ಎದುರು ದಿನರಾಜ್ ವೀಣಾ ದಂಪತಿಗಳು ಇದ್ದರು.ದಿನರಾಜ್ ಒಂದು ಗರಾಜ್ ನಡೆಸುತ್ತಿದ್ದರು ,ವೀಣಾ ಶಿಕ್ಷಕಿ .ಅವರ ಪುಟ್ಟ ಮಗು ನೇಹಾ ನಮ್ಮೆಲ್ಲರ ಅಚ್ಚು ಮೆಚ್ಚಿನ ಕಣ್ಮಣಿ .ನಾನು ಆಸ್ಪತ್ತ್ರೆಯಿಂದ ಬಂದು ಬಾಗಿಲು ತೆರೆಯುವ ಶಬ್ದ ಕೇಳಿದ ಕೂಡಲೇ ಓಡಿ ಬರುವಳು .ಅವಳ ಅಮ್ಮ 'ತಾಳು ಪುಟ್ಟಾ ಡಾಕ್ಟರ್ ಮಾಮಾ ಈಗ ತಾನೇ ಬಂದದ್ದಷ್ಟೆ ,ಅವರು ಕಾಫಿ ಕುಡಿದು ರೆಸ್ಟ್ ತೆಗೊಳ್ಳಲಿ ,ಆಮೇಲೆ ಹೋಗು "ಎಂದರೆ ಕೇಳಳು. ಬಡ ಬಡ ಬಾಗಿಲು ಬಡಿದು ಅಳುವಳು .ನಾನು ಬಿಡಿ ಅಮ್ಮಾ ಎಂದು ಕರೆಯುವೆನು .ನಮ್ಮ ಮನೆಯಲ್ಲಿ ನಾನು ,ನನ್ನ ಪತ್ನಿ ಮತ್ತು ಮಗ ನಿತಿನ್ ಜತೆ ಒಂದು ಗಂಟೆ ಕಳೆದು , ಮುದ್ದು ಮುಗ್ದ ಮಾತಿನಿಂದ ನಮ್ಮನ್ನು ಹರುಷ ಗೊಳಿಸುವಳು .ಆಮೇಲೆ ಅಮ್ಮ ಜೋರು ಮಾಡಿದಾಗಲೇ ವಾಪಸು .ನನ್ನ ಆಯಾಸ ಎಲ್ಲಾ ಮಾಯ .ಎಸ್ಟೋ ಬಾರಿ ನಮ್ಮಲ್ಲಿಯೇ ಊಟ ತಿಂಡಿ . 

ನನ್ನ ಮಗ ನಿತಿನ್ ಟಿ ವಿ ನೋಡುತ್ತಿದ್ದರೆ "ಆಫ್ ಮಾಡಣ್ಣಾ ,ಓದು ಓದು ಎಂದು ಆಕ್ಷನ್ ಸಹಿತ ಗದರುವಳು .ನಾನು ನೀನು ಗುಡ್ ಗರ್ಲ್ ಎಂದರೆ  ತಲೆಗೆ ಕೈ ಇಟ್ಟು'ಈ ಮಾಮನಿಗೆ ಇಂಗ್ಲೀಷ್ ಬರುವುದಿಲ್ಲ .ಗರ್ಲ್ ಅಲ್ಲಾ ಗಲ್(R ಸೈಲೆಂಟ್ ಎಂಬಂತೆ )ಎನ್ನುವಳು . ಅವಳ ಬಾಲ್ಯ ಲೀಲೆ ನಮಗೆ ಆಪ್ಯಾಯ ಮಾನವಾಗಿತ್ತು .

      ಈಗ ಅವರ ಕುಟುಂಬ ಬೆಂಗಳೂರಿನಲ್ಲಿ ನೆಲಸಿದೆ .ನೇಹಾ ಇಂಜಿನೀರಿಂಗ್ ಮುಗಿಸಿದ್ದಾಳೆ . ಆದರೂ ಅವಳ ಚಿತ್ರಣ ಆಗಾಗ ಕಣ್ಣು ಮುಂದೆ ಬಂದು ಮನಸು ಮುದ ಗೊಳ್ಳುವುದು .ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ ಎಂದು ಅವಳಿಗೆ ನಮ್ಮ ಹಾರೈಕೆ ,

ಇತ್ತೀಚೆಗೆ ಬಿಡುಗಡೆ ಆದ ನನ್ನ ಪುಸ್ತಕ 'ವೈದ್ಯನ ವಗೈರೆ ಗಳು "ವಿನಲ್ಲಿಯೂ ಅವಳ ಬಗ್ಗೆ ಉಲ್ಲೇಖ ಇದೆ .ಅದಕ್ಕೆ ಸಂಬಂದಿಸಿದ ಕಾರ್ಟೂನ್ ಕೆಳಗೆ ಕಾಪಿ ಮಾಡಿ ಹಾಕಿದ್ದೇನೆ  .

                         



             


 

ಗುರುವಾರ, ನವೆಂಬರ್ 18, 2021

ಮೇರು ಪ್ರತಿಭೆಯ ಕಲಾವಿದ ಶ್ರೀನಿವಾಸನ್

                   ಬಹುಮುಖ      ಪ್ರತಿಭೆಯ ಕಲಾವಿದ   ಶ್ರೀನಿವಾಸನ್ 

 Malayalam actor Sreenivasan hospitalized – After being admitted in the ICU,  his condition is now stable and taken off ventilator : Bollywood News -  Bollywood Hungama ಮಲಯಾಳ ಭಾಷೆಯ ಪ್ರತಿಭಾವಂತ ಕಲಾವಿದ ಶ್ರೀನಿವಾಸನ್ . ನಟ ,  ಚಿತ್ರ ಕತೆ ಬರಹಗಾರ ,ನಿರ್ದೇಶಕ ,ತಯಾರಕ ಎಲ್ಲಾ ಸಮ್ಮಿಳಿತ . ತಮ್ಮ ಸುಂದರವಲ್ಲ ಎನ್ನುವ ರೂಪ ,ಕಪ್ಪು ಮೈ ಬಣ್ಣವನ್ನೇ ಬಂಡವಾಳ ಮಾಡಿ ಯಶಸ್ಸು ಕಂಡ  ಅಪರೂಪದ ಪ್ರತಿಭೆ .ಇವರು ಬರೆದ ಸಂಭಾಷಣೆಗಳು ಒಳ್ಳೆಯ ಪಂಚ್ ಹೊಂದಿದ್ದು ಜನಪ್ರಿಯ . 

ಮೊನ್ನೆ ಟಿ ವಿ ಯಲ್ಲಿ ನಿರ್ದೇಶಕರು ಒಂದು ವಿಷಯ ಜ್ಞಾಪಿಸಿ ಕೊಳ್ಳುತ್ತಿದ್ದರು . ಚಿತ್ರವೊಂದರಲ್ಲಿ ಶ್ರೀನಿವಾಸನ್ ಅಲ್ಪ ಆದಾಯ ಇರುವ ಗಂಡ ,ಊರ್ವಶಿ ಕೊಳ್ಳುಬಾಕಿ ಹೆಂಡತಿ . ಕಂತಿನಲ್ಲಿ ಬೇಕಾದ್ದು ಬೇಡದ್ದು ಎಲ್ಲಾ ಕೊಂಡು ,ಕಂತು ಕಟ್ಟಿಲ್ಲಾ ಎಂದು ಅಂಗಡಿಯವನು ಫೋನ್ ಮಾಡಿ ದಬಾಯಿಸಿದ್ದನ್ನು ಗಂಡ ಬರುವಾಗ ಹೇಳಿ ಅಳುವಳು  .ಅದಕ್ಕೆ ಶ್ರೀನಿವಾಸನ್  ಹೆಂಡತಿಗೆ "ಇಷ್ಟು ಸಣ್ಣ ವಿಷಯಕ್ಕೆ ಬೈದನೇ .ನಮ್ಮ ದೇಶ ಅಮೆರಿಕಾ ದಿಂದ ಸಾಲ ತೆಗೆದು ಕೊಂಡು ಕಟ್ಟುವುದು ತಡವಾದರೆ ಅಲ್ಲಿನ ಅಧ್ಯಕ್ಷರು ನಮ್ಮ ಪ್ರಧಾನಿಗೆ ಫೋನ್ ಮಾಡಿ ಬಯ್ಯುತ್ತಾರೆಯೇ ?"ಎಂದು ಸಮಾಧಾನ ಮಾಡುವರು .ಈ ಡಯಲಾಗ್ ಶ್ರೀನಿವಾಸನ್ ಅವರೇ ಸೂಚಿಸಿದ್ದು ಬಹಳ ಜನಪ್ರಿಯ ಆಯಿತು . 

ನಾಡೋಡಿ ಕಾಟ್ ಎಂಬ ಚಿತ್ರದಲ್ಲಿ ಮೋಹನಲಾಲ್ ಮತ್ತು ಶ್ರೀನಿವಾಸನ್ ನಿರುದ್ಯೋಗಿ ಯುವಕರು . ಇತರರ ಮಾತು ಕೇಳಿ ಬ್ಯಾಂಕ್ ನಿಂದ ಸಾಲ ತೆಗೆದು ಹೈನು ಉದ್ಯಮಕ್ಕೆ ಒಂದು ಹಸು ಕೊಂಡು ,ರಾತ್ರಿ ಮಲಗಿರುವಾಗ ತಮ್ಮ ಮುಂದಿನ ಅಭ್ಯುದಯದ ಕನಸು ಕಾಣುತ್ತಾರೆ . ಆಗ ದನ ಅಂಬಾ ಎಂದು ಹಸಿವಿನಿಂದ ಕೂಗಲು ಮೋಹನಲಾಲ್ "ಐಶ್ವರ್ಯದ ಸೈರನ್ ನಂತೆ ಕೇಳುತ್ತಿದೆ "ಎನ್ನುವ ಡೈಲಾಗು ಬರೆದವರು . 

ವಿಡಂನಾತ್ಮಕ ಚಿತ್ರ ಸಂದೇಶಂ ನ' ಪೋಲೆಂಡ್ ನಿನ್ನ ಅಪ್ಪನ ಆಸ್ತಿಯೇ (ತರವಾಡು ಸೊತ್ತೋ ?"ಡಯಲಾಗ್ ಮತ್ತು ಅದೇ ಚಿತ್ರದ ಶ್ರೀನಿವಾಸನ್ ಮದುವೆಗೆ ಹೆಣ್ಣು ನೋಡಲು ಹೋದ ಸೀನ್ ಬಹು ಜನಪ್ರಿಯ .ವಡಕ್ಕ್ ನೋಕಿ ಯಂತ್ರಂ ನಲ್ಲಿ ಸುಂದರಿ ಹುಡುಗಿಯನ್ನು ಮದುವೆಯಾದ ಚೆಲುವನಲ್ಲದ ಹುಡುಗದ ವಿಚಿತ್ರ ಭಾವನೆಗಳು ,ವಿಕೃತಿಗಳು ಶ್ರೀನಿವಾಸನ್ ನಟಿಸಿದ ಪರಿ ಅಪೂರ್ವ . 

ಚಿಂತಾ ವಿಷ್ಟಯಾಯಯ ಶಾಮಲಾ ಹಲವು ಅವಾರ್ಡ್ಗಳನ್ನು ಬಾಚಿಕೊಂಡ ಉತ್ತಮ ಚಿತ್ರ .ಬೇಜವಾಬ್ದಾರ ಆದರೆ ಎಲ್ಲಾ ರಂಗಗಳಲ್ಲಿ ಪ್ರವೀಣ ಎಂದು ತಿಳಿಕೊಂಡ ಶಾಲಾ ಅಧ್ಯಾಪಕನ ಕತೆ . ವಿಶ್ವ ಆರ್ಥಿಕ ನೀತಿ ಇತ್ಯಾದಿ ಗಳ ಬಗ್ಗೆ ಹೆಂಡತಿಗೆ ಲೆಕ್ಚರ್ ಕೊಡುವಾಗ ಆಕೆ ತಣ್ಣನೆ ತಿಂಗಳುಗಳಿಂದ ಕಟ್ಟಿರದ ವಿದ್ಯುತ್ ಬಿಲ್ ಮುಂದಿಟ್ಟು ಅದೆಲ್ಲಾ ನನಗೆ ಗೊತ್ತಿಲ್ಲ ಇದನ್ನು ಕಟ್ಟಿ ಬನ್ನಿರಿ ಎನ್ನುವಳು . 

ಇವರ ಮಗ ವಿನೀತ್ ಕೂಡಾ ಒಳ್ಳೆಯ ನಟ ಮತ್ತು ಹಾಡುಗಾರ .. 

 ವಡಕ್ಕ್ ನೋಕಿ ಯಂತ್ರಂ ಚಿತ್ರದಲ್ಲಿ ವಿವಾಹ ಮೊದಲ ರಾತ್ರಿಯ ಹಾಸ್ಯ ಪ್ರಸಂಗ ದಲ್ಲಿ ಶ್ರೀನಿವಾಸನ್  ಆಗಮಿಸಲಿರುವ ತನ್ನ  ಪತ್ನಿಯ ಸ್ವಾಗತದ ರಿಹರ್ಸಲ್ ಮತ್ತು ಮತ್ತೆ ನಡೆದುದು ನೋಡಲು ಕೆಳಗಿನ ಲಿಂಕ್ ಅದುಮಿರಿ .

 

 https://youtu.be/JuK_E7bk2jg


ಬಾರಿಸು ತನ್ನ ತಮ್ಮಟೆಯಾ

                 ಬಾರಿಸು ತನ್ನ ತಮ್ಮಟೆಯಾ 

ನಾಗರಿಕ ಶಾಸ್ತ್ರ (Civics )ಎಂಬುದು ಸಮಾಜ ಅಧ್ಯಯನದ ಮುಖ್ಯ ಅಂಗ . ನಾವು ಸಿಂಗಾಪುರ ಎಷ್ಟು ಸ್ವಚ್ಛ ಇದೆ ,ವಾಸ್ಕೋ ಡಾ ಗಾಮಾ ಭಾರತಕ್ಕೆ ಯಾವಾಗ ಬಂದ ಇತ್ಯಾದಿ ಪಾಠ ಪುಸ್ತಕದಲ್ಲಿ ಕಲಿತು ರಾಂಕ್ ಸಮೇತ ಪಾಸ್ ಆಗುತ್ತೇವೆ .ನಿಜ ಜೀವನದಲ್ಲಿ  ನಾಗರಿಕ ಪ್ರಜ್ಞೆ  ಅಳವಡಿಸುವುದಿಲ್ಲ ,ಚರಿತ್ರೆಯಿಂದ ಕಲಿಯುವುದಿಲ್ಲ . 

ಮುಖ್ಯ ರಸ್ತೆಯಿಂದ ನಮ್ಮ ಮನೆಗೆ ಹೋಗುವ ಒಳ ಮಾರ್ಗದ  ಆರಂಭದಲ್ಲಿ ಒಂದು ಚರಂಡಿ  ಮುಚ್ಚಿ ಹೋಗಿ ನೀರು ರಸ್ತೆಯಲ್ಲಿ ನಿಲ್ಲುತ್ತಿತ್ತು .ನಗರ ಸಭೆಯವರು ಹೊಸಾ ಚರಂಡಿ ನಿರ್ಮಿಸಿ ಕೊಟ್ಟರು .ಇದಕ್ಕಾಗಿ ನಾನೂ ನಗರ ಸಭೆಯ ಅಧ್ಯಕ್ಷರನ್ನು ಕಂಡು ನಿವೇದಿಸಿದ್ದೆ . ಚರಂಡಿಯ ಕಾಂಕ್ರೀಟ್ ಸ್ಲಾಬ್ ಮತ್ತು ಕೆಲ ರಸ್ತೆಯ  ಅಂತರಕ್ಕೆ ಸ್ವಲ್ಪ ಮಣ್ಣು ಹಾಕಿ ಬಿಟ್ಟಿದ್ದು ಅದು ಮಳೆಗೆ ಕೊಚ್ಚಿ ಹೋಯಿತು . ಇದರಿಂದ ವಾಹನಗಳು ಇಳಿಯುವಾಗ ಮತ್ತು ಹತ್ತುವಾಗ ಸ್ವಲ್ಪ ತೊಂದರೆ . ನಾನು ಎರಡು ಸಾರಿ ಮುಂಜಾನೆ ಎಲ್ಲರೂ ಏಳುವ ವೇಳೆ ಒಂದು ಸಣ್ಣ ಹಾರೆ ಸಹಿತ ಅಲ್ಲಿಗೆ ಹೋಗಿ ಬಳಿಯಲ್ಲಿ ಇದ್ದ ರಾಶಿಯಿಂದ ಮಣ್ಣು ತಂದು ಹಾಕಿದೆ .ಈಗ ಸ್ವಲ್ಪ ಪರವಾಗಿಲ್ಲ . 

             ಅದೇ ರಸ್ತೆಯಲ್ಲಿ ಮುಂದಕ್ಕೆ ಮೆಸ್ಕಾಂ ನವರು ಹದ್ದು ಮೀರಿ ಬೆಳೆದಿದ್ದ ಗೆಲ್ಲು ಬಳ್ಳಿಗಳನ್ನು ತುಂಡು ಮಾಡಿ ರಸ್ತೆಯ ಬದಿಯಲ್ಲಿ ಹಾಕಿ ಹೋಗಿದ್ದು ಪಾದಚಾರಿಗಳಿಗೆ ಕಷ್ಟ ಆಗುತ್ತಿತ್ತು .ವಾರ ಕಳೆದರೂ ಯಾರೂ ಇದರ ಬಗ್ಗೆ ತಲೆ ಕೆಡಿಸಿ ಕೊಂಡಂತೆ ಇರಲಿಲ್ಲ .ಒಂದು ಮುಂಜಾವು ಕತ್ತಿ ತೆಗೆದು ಕೊಂಡು ಹೋಗಿ ಅವುಗಳನ್ನು ತುಂಡು ಮಾಡಿ ರಸ್ತೆ ಬದಿ ತೆರವು ಮಾಡಿದೆ . 

ಮೇಲಿನ ಎರಡು ಕೆಲಸಗಳನ್ನು ಅತೀ  ಬೆಳಿಗ್ಗೆ ಮಾಡಿದ್ದ ಉದ್ದೇಶ ,ಯಾರೂ ಕಾಣುವುದಿಲ್ಲ ,ಕಂಡರೆ ನನಗೆ ಮರ್ಯಾದೆಗೆ ಕೊರತೆ ಎಂದು ಅಲ್ಲ ;ಡಾಕ್ಟ್ರು ಯಾಕೆ ಕಷ್ಟ ಪಡುತ್ತೀರಿ ಎಂದು ಸಂತಾಪ ಸೂಚಿಸುವರೇ ಹೊರತು ಯಾರೂ ಸಹಾಯಕ್ಕೆ ಬರುವುದಿಲ್ಲ .ಈ ರಸ್ತೆಯಲ್ಲಿ  ಎಷ್ಟೋ ಯುವಕರು ಓಡಾಡುತ್ತಾರೆ ,ಬೇಕಾದರೆ ಪ್ಲಾಸ್ಟಿಕ್ ಚೀಲ ,ಗುಟ್ಕಾ ಕವರ್ ಎಸೆದು ಹೋಗುವರು . ಇಂತಹ ಕೆಲಸಕ್ಕೆ ಬಾರರು . ನೂಜಿಬೈಲ್ ಸೂರ್ಯನಾರಾಯಣ  ಭಟ್ ಎಂಬ ಹಿರಿಯರು ಹಿಂದೊಮ್ಮೆ ನನ್ನ ಕಾರ್ಯದಲ್ಲಿ ಸಹಕಾರ ನೀಡಿದ್ದರು . 

ಇನ್ನು ನಮ್ಮ ಮನೆಯ ಮುಂದಿನ ರಸ್ತೆಯನ್ನು ನನ್ನ ಪತ್ನಿ ಗುಡಿಸಿ ಯಾವಾಗಳೂ  ಸ್ವಚ್ಛ ಇಟ್ಟಿರುವಳು ,ಮನೆಯ ಹೊರಗಿನ ಚರಂಡಿಯನ್ನೂ ಕಾಲ ಕಾಲಕ್ಕೆ ನಿರ್ಮಲ ಗೊಳಿಸುವಳು . ಯಾರಾದರರೂ ಕಸ ಎಸೆಯುವುದು  ಕಂಡರೆ ನಿರ್ದಾಕ್ಷಿಣ್ಯ ವಾಗಿ  ಕರೆದು ಖಂಡಿಸುವಳು . 

ಇಷ್ಟೆಲ್ಲಾ ನನ್ನ ತಮ್ಮಟೆ ನಾನೇ ಬಾರಿಸಿದ್ದು  ಇದನ್ನು ಓದಿಯಾದರೂ ಯುವಕರು ನಾಗರೀಕ ಪ್ರಜ್ಞೆ ಬೆಳೆಸಿಕೊಳ್ಳಲಿ ಎಂದು ,ಆಗ ಮಾತ್ರ ಸಮಾಜ ಪ್ರಾಕ್ಟಿಕಲ್ಸ್ ನಲ್ಲಿ ನಾವು ಪಾಸ್ . 

 






ಮಂಗಳವಾರ, ನವೆಂಬರ್ 16, 2021

ನನ್ನ ಒಪ್ಪಕ್ಕ

                            ನನ್ನ ಒಪ್ಪಕ್ಕ 

                         

ನಿಮಗೆಲ್ಲಾ ಇರದ ಭಾಗ್ಯ ಒಂದು ನನಗಿದೆ ,ಅದೇ ನನ್ನ ಅಕ್ಕ ಭಾಗ್ಯ ಲಕ್ಷ್ಮಿ . ಇವಳು ನನ್ನ ಎರಡನೇ ಅಕ್ಕ ,ನನ್ನ ಒತ್ತಿನವಳು . ನಾವು ತಮ್ಮ ತಂಗಿಯರು ಅವಳನ್ನು ಒಪ್ಪಕ್ಕ ಎಂದು ಕರೆಯುವುದು . ಒಪ್ಪಕ್ಕ ಹೆಸರು ಬಹಳ ಚಂದ .ಮಲಯಾಳದಲ್ಲಿ ಕೂಡಾ ಇಂತಹ ಶಬ್ದ ಇದ್ದು ಅದು ಒಪ್ಪೋಳ್ ಆಗಿದೆ .ಎಂ ಟಿ ವಾಸುದೇವನ್ ನಾಯರ್ ಅವರ ಇದೇ  ಶೀರ್ಷಿಕೆಯ ಕತೆ ಸಿನೆಮಾ ಆಗಿ ಹೆಸರು ಗಳಿಸಿತ್ತು . 

                    ಇವಳು ನನ್ನಿಂದಲೇ ದೊಡ್ಡವಳು ಆದ ಕಾರಣ ನನ್ನಲ್ಲಿ ಸ್ವಲ್ಪ ಮಮತೆ ಜಾಸ್ತಿ . ನಮ್ಮ ಬಾಲ್ಯದಲ್ಲಿ ಪ್ರಿ ಕೆ ಜಿ , ಯು ಕೆ ಜಿ ಇರಲಿಲ್ಲವಾದ್ದರಿಂದ ನಮ್ಮ ಬಾಲ್ಯ ನಿಜಕ್ಕೂ ಹಸನಾಗಿತ್ತು . ಅಕ್ಕ ಎರಡನೇ ತರಗತಿಯಲ್ಲಿ ಇರುವಾಗ ಒಮ್ಮೊಮ್ಮೆ ನನ್ನನ್ನು ಕರೆದು ಕೊಂಡು ಹೋಗಿ ತನ್ನ ಜತೆ ಹುಡುಗಿಯರ ಬೆಂಚ್ ನಲ್ಲಿ ಕುಳಿತು ಕೊಳ್ಳಿಸುತ್ತಿದ್ದಳು . ನನ್ನ ಕೈಹಿಡಿದು ಶಾಲೆಗೆ ಎರಡು ಜಡೆ  ಹಾಕಿದ ಪುಟ್ಟು ಹುಡುಗಿ ಹೆಮ್ಮೆಯಿಂದ ನಡೆದು ಹೋಗುತ್ತಿದ್ದುದು ಮಸುಕಾಗಿ ನೆನಪಿದೆ . ಇವನು ನನ್ನ ತಮ್ಮ ಎಂದು ಎಲ್ಲರಿಗೂ ಪರಿಚಯ ಮಾಡಿಸುವಳು . ಅಕ್ಕ ಜತೆಗೆ ಇದ್ದಾಳೆ ಎಂದು ನನಗೆ ಧೈರ್ಯ . ಶಾಲೆಯಲ್ಲಿ ಊಟ ಮಾಡಿಸಿ ತನ್ನ ಲಂಗದ ತುದಿಯಿಂದ ನನ್ನ ಮುಖ ಮತ್ತು ಕೈ ಒರಸಿದವಳು .

 ಮನೆಯಲ್ಲಿ ಓದುವಾಗ ಕೂಡಾ ನನಗೂ ಅವಳಿಗೂ ಒಂದೇ ಚಿಮಿಣಿ ಎಣ್ಣೆ ದೀಪ . ಅವಳು ಗಟ್ಟಿಯಾಗಿ ಬಾಯಿ ಪಾಠ ಮಾಡುವಾಗ ಕ್ರಾಸ್ ಲರ್ನಿಂಗ್ ಮೂಲಕ ನನಗೂ ಅವಳ ಪಾಠ ಬಾಯಿ ಪಾಠ ಆಗುವುದು .ಆಕೆ ತನ್ನ ಭಂಡಾರದಿಂದ ಪುಳಿಂಕೋಟೆ ,ಸಾಂತಣಿ ನನಗೆ ಕೊಡುವಳು .ಎಲ್ಲಾ ಮಕ್ಕಳಂತೆ ನಾವು ಕೂಡಾ ಜಗಳ ಮಾಡಿದ್ದೇವೆ .ಅದರಲ್ಲಿ ದೊಡ್ಡ ಬೈಗಳು "ಸತ್ತೇ ಹೋಗು ಎಂಬ ಶಾಪ ".ರಾತ್ರಿ ಮಲಗುವಾಗ ನನಗೆ ಜ್ಞಾನೋದಯ ಆಗುವದು .'ಛೆ ಪಾಪ ಅಕ್ಕ ,ನನ್ನ ಶಾಪದಿಂದ ಅವಳು ಸತ್ತು ಹೋದರೆ ?"ದೇವರೇ ನನ್ನ ಬೈಗಳನ್ನು ನಲ್ಲಿ ಫೈ ಮಾಡು 'ಎಂದು ದೇವರಲ್ಲಿ ಬೇಡಿಕೊಂಡು ಬೆಳಿಗ್ಗೆ ಎದ್ದೊಡನೆ ಅವಳು ಬದುಕಿದ್ದಾಳೆ ಎಂದು ಖಾತರಿ ಪಡಿಸುತ್ತಿದ್ದೆ . 

             ಒಪ್ಪಕ್ಕ ಹೈ ಸ್ಕೂಲ್ ನಲ್ಲಿ ಟೆನ್ನಿ ಕೊಯ್ಟ್ ಆಟಗಾರ್ತಿ ಆಗಿದ್ದು ಅವಳು ಮತ್ತು ಅವಳ ಟೀಮ್ ಜಿಲ್ಲಾ ಮಟ್ಟದ ಗ್ರೆಗ್ ಮೆಮೋರಿಯಲ್ ಟ್ರೋಫಿ ಗೆದ್ದಿತ್ತು .ಅಕ್ಕನಿಗೆ ಆಟದ ಪ್ರಾಕ್ಟೀಸ್ ಇರುವಾಗ ಬೆಂಗಾವಲಿಗೆ ನಾನು ನಿಲ್ಲುತ್ತಿದ್ದೆ . ಪಾಠದಲ್ಲಿ ಕೂಡಾ ಹಿಂದೆ ಇರಲಿಲ್ಲ .ಆದರೆ ನಮ್ಮ ಆರ್ಥಿಕ ಪರಿಷ್ಟಿತಿ ಮತ್ತು ಆಗಿನ ಕಾಲದಲ್ಲಿ ಹಳ್ಳಿಯ ಹುಡುಗಿಯರನ್ನು  ಉನ್ನತ ಶಿಕ್ಷಣಕ್ಕೆ ಕಳುಹಿಸಲು ಹಿಂದೇಟು ಹಾಕುತ್ತಿದ್ದರಿಂದ ಆಕೆ ಪಿ ಯು ಸಿ ಗೆ ಅಧ್ಯಯನ ನಿಲ್ಲಿಸಿ ,ಕರೆಸ್ಪಾಂಡೆನ್ಸ್ ಮೂಲಕ ಶಿಕ್ಷಣ ಮುಂದುವರಿಸ ಬೇಕಾಯಿತು . 

ಮುಂದೆ ಆಕೆ ವಿ ಬಿ ಅರ್ತಿಕಜೆ ಯವರನ್ನು ವಿವಾಹ ಆಗಿ ಪುತ್ತೂರಿಗೆ ಬಂದಳು .ಅವರದು ಆಗ ದೊಡ್ಡ ಕುಟುಂಬ . ನಾವು ತಮ್ಮಂದಿರು ಪುತ್ತೂರಿನಲ್ಲಿ  ಹೋದಾಗ ಪರ್ಲಡ್ಕ   ಬಾಲವನ ದ ಪಕ್ಕ ಇರುವ ಅವಳ ಮನೆಗೆ ಹೋದಾಗ ಅವಳು ತುಂಬಾ ಸಂಭ್ರಮ ಪಡುವಳು . ಪುತ್ತೂರು ಜಾತ್ರೆ ಇತ್ಯಾದಿಗಳಿಗೆ ನಾವು ಅಲ್ಲಿಯೇ ಕ್ಯಾಂಪ್ .ನಮ್ಮ ಭಾವ ಸದಾ ಅಧ್ಯಯನ ಮತ್ತು ಬರವಣಿಗೆಯಲ್ಲಿ ನಿರತರಾಗಿ ಇರುತ್ತಿದ್ದರು . 

                  ಈಗ ನಾವಿಬ್ಬರೂ ಪುತ್ತೂರಿನಲ್ಲಿ ಇದ್ದೇವೆ .ನನಗೂ ಅವಳಿಗೂ ಅನೇಕ ವಿಚಾರಗಳಲ್ಲಿ ಸೈದ್ಧಾಂತಿಕ ಮತ ಭೇದ ಇವೆ .ಆದರೂ ಅವಳಿಗೆ ನಾನು ಸಣ್ಣ ತಮ್ಮನೇ ?ಅವಳು ನನಗೆ ಪ್ರೀತಿಯ ಒಪ್ಪಕ್ಕನೇ . ನನ್ನ ಆರ್ಥಿಕ ಅಶಿಸ್ತು ಮತ್ತು ಮಿತಿ ಮೀರಿದ ಔದಾರ್ಯದ ಬಗ್ಗೆ ಅವಳಿಗೆ ಚಿಂತೆ ಇದ್ದು ಆಗಾಗ ನನ್ನನ್ನು ಎಚ್ಚರಿಸುವಳು . 

 ಅವಳು ತಲೆಗೂದಲಿಗೆ ಬಣ್ಣ ಹಾಕೊಳ್ಳುವಳು ,ನಾನು ಅದಕ್ಕೆ ದೂರ .ಎಲ್ಲರೂ ನನ್ನನ್ನು  ಆಕೆಯ ಅಣ್ಣ ಎಂದು ಕರೆಯುವಾಗ ಕಸಿವಿಸಿ ಆಗುವುದು ,ಅವಳಿಗೆ               ಡಿಮೋಶನ್ ಮಾಡಿದ್ದಕ್ಕೆ .(ನನ್ನನ್ನು ಹಲವರು ವೈ ಡೋಂಟ್ ಯು ಡೈ ಎಂದು ಕೇಳುತ್ತಾರೆ ,ಅವರಿಗೆ ನಾನು ಐ ಆಮ್ ನಾಟ್ ಇನ್ ಹರಿ 'ಎನ್ನುವೆನು 

 

             ವಿಶಿಷ್ಟ ಸಾಧಕಿ ಸಿಂಚನ ಲಕ್ಷ್ಮಿ 

             

ಈಗ ನಮ್ಮ ಊರಿನ ಹೆಮ್ಮೆಯ   ಈ ಸಾಧಕಿಯ ಸುದ್ದಿ ಎಲ್ಲಾ ಕಡೆ .ಇವಳ ಹೆಸರು ಸಿಂಚನ ಲಕ್ಷ್ಮಿ . ವೈದ್ಯಕೀಯ ಪ್ರವೇಶಕ್ಕೆ ಇರುವ ಅಖಿಲ ಭಾರತ ನೀಟ್ ಪರೀಕ್ಷೆಯ ವಿಶೇಷ ವಿಭಾಗದಲ್ಲಿ  ದೇಶಕ್ಕೆ ಎರಡನೇ ಸ್ಥಾನ ಗಳಿಸಿದ ಕೀರ್ತಿ .

ಜನ್ಮತಾ ಬೆನ್ನು ಮೂಳೆ ಒಂದು ಪಾರ್ಶ್ವಕ್ಕೆ ಬಾಗಿದ(Congenital Scoliosis)ತೊಂದರೆ ಇದ್ದ ಈಕೆ ಅದನ್ನು ಸರಿ ಪಡಿಸಲು ಅರಕ್ಕೂ ಮೀರಿ ಸಂಕೀರ್ಣ ಶಸ್ತ್ರಕ್ರಿಯೆಗೆ ಒಳಗಾಗ ಬೇಕಾಯಿತು . ಅಗೆಲ್ಲಾ ತರಗತಿಗಳ ಹಾಜರಿ ಇಲ್ಲ . ಆದರೂ ಎದೆಗುಂದದೆ ಅಧ್ಯಯನ .ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ,ಪಿ ಯು ಸಿ ಯಲ್ಲೂ ಅದನ್ನು ಬಿಟ್ಟು ಕೊಡಲಿಲ್ಲ . ಈ ವರ್ಷದ ಜೆ ಈ ಈ ಪರೀಕ್ಷೆಯಲ್ಲಿ ಒಳ್ಳೆಯ ರಾಂಕ್ ಬಂದು  ಪ್ರತಿಷ್ಠಿತ ಮುಂಬೈ ಐ ಐ ಟಿ ಯಲ್ಲಿ ಪ್ರವೇಶ ಪಡೆದು ಅದಕ್ಕಾಗಿ ವೈದ್ಯಕೀಯ ಫಿಟ್ನೆಸ್ ಸರ್ಟಿಫಿಕೇಟ್ ಗೆ ನನ್ನಲ್ಲಿ ಬಂದಿದ್ದಳು .ಆಗಿನ್ನೂ ನೀಟ್ ಪರೀಕ್ಷೆ ಫಲಿತಾಂಶ  ಬಂದಿರಲಿಲ್ಲ .ಆದರೂ ಒಳ್ಳೆಯ ರಾಂಕ್ ಪಡೆಯುಯವ ಆತ್ಮ ವಿಶ್ವಾಸ ಆಕೆಗೆ ಇದ್ದು ದೆಹಲಿಯ ಖ್ಯಾತ ಆಲ್ ಇಂಡಿಯ ಮೆಡಿಕಲ್ ಸೈನ್ಸ್ ಗೆ ಸೇರುವ ಇಚ್ಛೆ ಪ್ರಕಟಿಸಿದ್ದಳು . ಅವಳ ವಿಶ್ವಾಸ ಹುಸಿಯಾಗಲಿಲ್ಲ .ಈ ಸಾಧಕಿಯ ಆಶೆ ಈಡೇರಲಿ . ಒಳ್ಳೆಯ ತಾಳ್ಮೆ ,ಸಂಹವನ ಸಾಮರ್ಥ್ಯ ಇರುವ ಈಕೆ ಖಂಡಿತಾ ಉತ್ತಮ  ವೈದ್ಯೆ ಆಗುವುದರಲ್ಲಿ ಸಂದೇಹ ಇಲ್ಲ . 

ಇಲ್ಲಿ ಅವಳಿಗೆ ಎಲ್ಲಾ ತರಹದ ಬೆಂಬಲ ಕೊಟ್ಟು ,ಸಾಧನೆಗೆ ಪೂರಕರಾದ ಅವರ ಹೆತ್ತವರನ್ನು ಅಭಿನಂದಿಸಲೆ ಬೇಕು ,ಶ್ರೀ ಮುರಳೀಧರ ಬಂಗಾರಡ್ಕ ಮತ್ತು ಶೋಭಾ ಅವರು  ಮಗುವಿನ ವಿಕಲತೆ ಬಗ್ಗೆ ದೃತಿಕೆಟ್ಟು ಕೈ ಚೆಲ್ಲಿ ಕೂರದೆ ಬೇಕಾದ ಚಿಕಿತ್ಸೆ ಮಾಡಿಸಿ ಅದನ್ನು ಸರಿ ಪಡಿಸಿ , ಪ್ರತಿಭಾನ್ವಿತೆ ಆದ ಮಗಳು ಅಧ್ಯಯನ ದಲ್ಲಿ  ತನ್ನ ಹಿರಿಮೆ ಕಾಯ್ದು ಕೊಳ್ಳುವಂತೆ ನೋಡಿ ಕೊಂಡದ್ದು ಸಾಮಾನ್ಯ  ಸಾಧನೆ ಅಲ್ಲ .

ಉಪ್ಪಿನಂಗಡಿ ಸಮೀಪ ಹತ್ತೊಕ್ಕಲು  ಎಂಬಲ್ಲಿ ಅನಂತೇಶ್ವರ ಭಟ್ ಎಂಬವರು ಇದ್ದರು.ಮೂಲತಃ ಶಿರಂಕಲ್ಲು  ಜೋಯಿಶ ಕವಲಿನವರಾದ ಇವರು ನಾನು ನನ್ನ ಜೀವನದಲ್ಲಿ  ಕಂಡ ಸಜ್ಜನರಲ್ಲಿ ಸಜ್ಜನರಾದ ಒಬ್ಬರು .ಅವರ ಪತ್ನಿ ದೇವಕಿ ಅಮ್ಮ . ಸಕಲರಿಗೂ ಒಳಿತನ್ನೇ ಬಯಸುವ ಚಿನ್ನದ ಮನಸಿನವರು . ಅವರ ಮಗಳು ಲೀಲಾ ಅವರನ್ನು  ಮಚ್ಚಿಮಲೆ ಜಯರಾಮ ಭಟ್ ಅವರಿಗೆ ಕೊಟ್ಟಿದ್ದು ಅವರ ಪುತ್ರಿ ಶೋಭಾ ಬಂಗಾರಡ್ಕ . ಇನ್ನು ಮುರಳೀಧರ  ಅವರು ಬಂಗಾರಡ್ಕ ರಾಮಕೃಷ್ಣ ಭಟ್ ಅವರ ಪುತ್ರ (ಇವರ ಬಗ್ಗೆ ಹಿಂದೆ ಬರೆದಿದ್ದೆ ). ಮುರಳೀಧರ ಮತ್ತು ಅವರ ಅಣ್ಣ ಜನಾರ್ಧನ ಭಟ್ ಒಳ್ಳೆಯ ಕೃಷಿಕರು ,ಸ್ಥಿತಿ ವಂತರೂ ಆಗಿದ್ದರೂ ತಮ್ಮ ಸಹಜ ವಿನಯ ಮತ್ತು ವಿದ್ಯಾ ಪಕ್ಷಪಾತ ಗುಣದಿಂದ ಸಮಾಜದಲ್ಲಿ  ಜನಾನುರಾಗಿಗಳು . ಹಿರಿಯರ ಗುಣ ಮಗುವಿನಲ್ಲಿ ನೋಡು ಎಂಬುದು ಈ ಕುಟುಂಬದ ಎಲ್ಲಾ ಸದಸ್ಯರಲ್ಲಿ ಕಾಣ ಬಹುದು .

   ಇನ್ನು ಸಿಂಚನ ಲಕ್ಷ್ಮಿಯ ಅಕ್ಕ ಸಿಂಧೂರ ಸರಸ್ವತಿ ಕೂಡಾ ಪ್ರತಿಭಾವಂತೆ ಯಾಗಿದ್ದು  ಉದ್ದಕ್ಕೂ ರಾಂಕ್ ಗಳಿಕೆಯಲ್ಲಿ ಮುಂದೆ ಇದ್ದು ,ಇಂಜಿನೀರಿಂಗ್ ಪರೀಕ್ಷೆಯಲ್ಲಿ ವಿಶ್ವ ವಿದ್ಯಾಲಯಕ್ಕೆ ಮೊದಲ ರಾಂಕ್ ಪಡೆದು ಈಗ ಉದ್ಯೋಗಸ್ತೆ . ವಿದ್ಯಾ ದಧಾತಿ ವಿನಯಂ ಎಂಬುದನ್ನು ಪ್ರಾತ್ಯಕ್ಷಿಕ ನೋಡ ಬೇಕಾದರೆ ಈ ಮಕ್ಕಳನ್ನು ನೋಡ ಬಹುದು .ಇವರಿಗೆ ಒಬ್ಬ ಸಣ್ಣ ತಮ್ಮ ಇದ್ದು ಅವನೂ ಅಕ್ಕಂದಿರ ಹಾದಿ ಹಿಡಿಯುವುದರಲ್ಲಿ ಸಂದೇಹ ಇಲ್ಲ .

                     



ನನಗೆ ಸ್ವಲ್ಪ ಗರ್ವ ಇದೆ .ಬಂಗಾರಡ್ಕ ಮತ್ತು ನನ್ನ ಅಂಗ್ರಿ ಒಂದೇ ಕುಟುಂಬ .ಅಲ್ಲದೆ ಅವರ ಕುಟುಂಬದವರು ನನ್ನಲ್ಲಿ ಸ್ನೇಹ ವಿಶ್ವಾಸ ಹೊಂದಿದವರು ,ಅವರ ಕುಟುಂಬ ವೈದ್ಯ ನಾನು ಎಂದು .
 

ಸೋಮವಾರ, ನವೆಂಬರ್ 15, 2021

ಮನಸು ತುಂಬಿದಾಗ ಮಾತು ಹೊರಡುವುದಾದರೂ ಹೇಗೆ ?

 ಮನಸು ತುಂಬಿದಾಗ ಮಾತು ಹೊರಡುವುದಾದರೂ ಹೇಗೆ ?

                




ನಿನ್ನೆ ನನ್ನ ಪುಸ್ತಕ ಬಿಡುಗಡೆ ಸಮಾರಂಭ . ಭಾನುವಾರ ಬೆಳಿಗ್ಗೆ ಇಟ್ಟರೆ ಜನ ಬಾರರು ಎಂದು ಮಿತ್ರ ಪ್ರಕಾಷ್ ಎಚ್ಚರಿಸಿದರೂ ,ಸಾಯಂಕಾಲ ಕಾಡು ವಿನಲ್ಲಿ ರಘು ಅಣ್ಣನ ಕಾರ್ಯಕ್ರಮಕ್ಕೆ ತೊಂದರೆ ಆಗ ಬಾರದು ಎಂದು ರಿಸ್ಕ್ ತೆಗೆದು ಕೊಂಡೇ ಇಟ್ಟದ್ದು .ಅಕಾಲ ಮಳೆಯ ನಡುವೆಯೂ ಆಸಕ್ತರು ಹಿತೈಷಿಯಗಳು ಒಳ್ಳೆಯ ಸಂಖ್ಯೆಯಲ್ಲಿ ಬಂದಿದ್ದರು.ವಿದುಷಿ  ಸುಚಿತ್ರಾ ಹೊಳ್ಳ ಅವರ ತಂಡ ವಚನಗಳು ಮತ್ತು ದೇವರ ನಾಮಗಳನ್ನು ಬಹಳ ಚೆನ್ನಾಗಿ ಹಾಡಿದರು .

ಸಹೋದರಿ ಡಾ ಸುಲೇಖಾ ಚಂದ್ರಗಿರಿ ಕಾರ್ಯಕ್ರಮ ಚೆನ್ನಾಗಿ ನಡೆಸಿ ಕೊಟ್ಟರು .ವರದರಾಜ ಚಂದ್ರಗಿರಿ ಅವರ ಪುಸ್ತಕ ಪರಿಚಯ ಭಾಷಣ ,ಒಳಿತನ್ನು ಹೆಕ್ಕಿ ಹೊಳಪಿಟ್ಟು ಸಿಂಗರಿಪ ಪೋಲೆ ಇದ್ದು ,ನನಗೇ ನನ್ನ ಬರವಣಿಗೆಯಲ್ಲಿ ಕಾಣದ ಗುಣ ಸಹೃದತೆಯ ದ್ಯೋತಕ . ಎಲ್ಲರೂ ಅವರ ಮಾತನ್ನು ಮೆಚ್ಚಿ ಒಪ್ಪಿಕೊಂಡರು . 

ಹಿರಿಯರಾದ ಶ್ರೀ ಲಕ್ಷ್ಮೀಶ ತೊಲ್ಪಾಡಿ ನನ್ನನ್ನು ಒಂದು ಲೇಖಕ ಎಂದು ಘೋಷಿಸಿ ಆಶೀರ್ವಾದ ಮಾಡಿದರು .ಗೆಳಯರಾದ ಹಿರಿಯ ಲೇಖಕ ಪ್ರಾಧ್ಯಾಪಕ ಕೃಷಿಕ ನರೇಂದ್ರ ರೈ ,ವಕೀಲ ಲೇಖಕ ಭಾಸ್ಕರ ಕೊಡಿಂಬಾಳ ನನ್ನ ಫೇಸ್ ಬುಕ್ ಬರಹ ಗಳ ಬಗ್ಗೆ ಒಳ್ನುಡಿಗಳನ್ನು ಆಡಿ ಹರಸಿದರು . ಅಧ್ಯಕ್ಷ ಡಾ ಸೂರ್ಯ ನಾರಾಯಣ ರೂ .

ಕಾರ್ಯಕ್ರಮಕ್ಕೆ ಹಿರಿಯರಾದ ಸುಬ್ರಹ್ಮಣ್ಯ ಕೊಳತ್ತಾಯ ,ಪುರಂಧರ ಭಟ್,ಡಾ ಯೇತಡ್ಕ   ಸುಬ್ರಾಯ ಭಟ್ ಮತ್ತು ಸುಧಾಮ ಕೆದಿಲಾಯ  ತಮ್ಮ ವೃದ್ದಾಪ್ಯ ದ ಸಮಸ್ಯೆಗಳು ಇದ್ದರೂ ಬಂದು ಹರಸಿದ್ದು ನನ್ನ ಮನ ತುಂಬಿ ಬಂದಿದೆ . ಬಂದವರೆಲ್ಲಾ ಕೊನೆ ತನಕ ಕುಳಿತು  ತಾವೂ ಸಂತೋಷ ಪಟ್ಟುದಲ್ಲದೆ  ಕಾರ್ಯಕ್ರಮ ಕಳೆಗಟ್ಟುವಂತೆ ಮಾಡಿದರು .

ಮಿತ್ರ ಪ್ರಕಾಶರ ಅಭಿಪ್ರಾಯದಂತೆ ಒಂದು ಪುಸ್ತಕ ಬಿಡುಗಡೆ ದಿನ ರೆಕಾರ್ಡ್ ಎನ್ನ ಬಹುದದಂತಹ ಮಾರಾಟ ಆಗಿದೆ ,

ಹಿತೈಷಿಯಗಳು ಕೆಲವರು ಹೇಳಿದರು ನನ್ನ ಪ್ರಸ್ತಾವಿಕ ಭಾಷಣ ಯಾವತ್ತಿನ ಮಟ್ಟಕ್ಕೆ ಬರಲಿಲ್ಲ ಎಂದು . ಒಂಬತ್ತು ತಿಂಗಳು ಹೊತ್ತು ಸುಖ ಪ್ರಸವ ಆಗಿ (ಪುಸ್ತಕ ಪ್ರಕಟನೆಗೆ ಹೋಗಿ ನವ ಮಾಸಗಳು ಸಂದವು .ಕೋವಿಡ್ ಕಾರಣ ತಡವಾಯಿತು )ನಾಮಕರಣಕ್ಕೆ ಇಷ್ಟು ಸನ್ಮನಸುಗಳನ್ನು ಕಂಡಾಗ ಮನವು ತುಂಬಿ ಬಂದಿತ್ತು ,ಮಾತು ಹೊರಡುವುದಾದರೂ ಹೇಗೆ ?

ಎಲ್ಲರಿಗೂ ವಂದನೆಗಳು . ಪುಸ್ತಕ ಬೇಕಾದವರು ಶ್ರೀ ಪ್ರಕಾಶ  ಅವರನ್ನು ವ್ಹಾಟ್ಸ್ ಅಪ್ 9480451560  ನಲ್ಲಿ ಸಂಪರ್ಕಿಸಿ . ಮೊದಲು ಪುಸ್ತಕ ಬೇಕು ಎಂದು ಹೇಳಿದವರೂ ಕೂಡಾ .ಪುಸ್ತಕವನ್ನು ಮಂಗಳೂರಿನ ಜ್ಯೋತಿ ಬಳಿ ಇರುವ ನವಕರ್ನಾಟಕ ಪುಸ್ತಕ ಅಂಗಡಿಯಲ್ಲಿಯೂ ಲಭ್ಯ ಮಾಡುವೆನು .ಅಲ್ಲಿ ಶ್ರೀ ಶಾಂತಾರಾಂ ಅವರನ್ನು ಸಂಪರ್ಕಿಸ ಬಹುದು .ಏನಾದರೂ ಸಮಸ್ಯೆ ಇದ್ದರೆ  ನನಗೆ ಫೇಸ್ ಬುಕ್ ಮೆಸೇಜ್ ಹಾಕಿರಿ .

ಶನಿವಾರ, ನವೆಂಬರ್ 13, 2021

ದೇವಕಾರ್ಯ

 ದೇವಕಾರ್ಯ 

ಮೊನ್ನೆ ಒಂದು ದಂಪತಿ ನನ್ನಲ್ಲಿ ರೋಗ ತಪಾಸಣೆಗೆ ಬಂದವರು ಹೋಗುವಾಗ ಮುಖದಿಂದ ಮಾಸ್ಕ್ ತೆಗೆದು ನಮ್ಮನ್ನು ಗುರುತು ಸಿಕ್ಕಿತಾ ಸಾರ್ ಎಂದು ಕೇಳಿದರು . ನೂರಾರು ಜನರನ್ನು ನೋಡುವ ನಮಗೆ ನೆನೆಪು ಇರುವುದಿಲ್ಲ . ಕ್ಷಮೆ ಕೇಳಿ ಇಲ್ಲವಲ್ಲಾ ಎಂದೆ. "ಸಾರ್ ಎರಡು ವರ್ಷ ಹಿಂದೆ ನಾವು ಔಷಧಿಗೆ ಬಂದಿದ್ದೆವು .ಅದೇ ದಿನ ನಮ್ಮ ಮಗಳಿಗೆ ಯುನಿವರ್ಸಿಟಿ ಗೆ ಸೇರಲು ಕಡೆ ದಿನ.ಫೀಸು ಕಟ್ಟಲು ಹಣ ಕೊರತೆ ಇದೆ ಎಂದಾಗ ನೀವು ಎರಡು ಸಾವಿರ ರೂಪಾಯಿ ಕೊಟ್ಟು ವಾಪಸು ಕೊಡುವುದು ಬೇಡ 'ಎಂದು ಹೇಳಿದ್ದಿರಿ. ಈಗ ಅವಳು ಕಲಿತು ಒಳ್ಳೆಯ ಕೆಲಸದಲ್ಲಿ ಇದ್ದು ಕುಟುಂಬಕ್ಕೆ  ಊರು ಗೋಲು ಆಗಿರುವಳು .ನಿಮ್ಮ ಕೈ ರಾಶಿ "ಎಂದರು . ನನಗೆ ನೆನಪಿಗೆ ಬಂತು .

                         ನನಗೆ ಒಂದು ವೀಕ್ನೆಸ್ ಇದೆ .ಈ ತರಹ ಕೇಳಿದಾಗ ಕಿಸೆಯಲ್ಲಿ ಇದ್ದುದನ್ನು ತೆಗೆದು ಕೊಡುತ್ತೇನೆ . ಅಮೇಲೆ ಅದರ ಬಗ್ಗೆ ಯೋಚಿಸುವುದಿಲ್ಲ .ಒಂದಿಬ್ಬರು ಇದನ್ನು ದುರುಪಯೋಗ ಮಾಡಿಕೊಂಡದ್ದೂ ಇದೆ . ನನ್ನ ಮಟ್ಟಿಗೆ ಇದೇ ದೊಡ್ಡ ದೇವಕಾರ್ಯ . 

ಹೀಗೆ ಕೊಡಲು ನಮಗೂ ಸಂಪಾದನೆ ಬೇಕು . ಕೆಲವರು  ವೈದ್ಯರ ಫೀಜ್ ಕೊಡಲು ಹಿಂದೆ ಮುಂದೆ ನೋಡುತ್ತಾರೆ .ಅದರಲ್ಲೂ ನನ್ನ ಬಳಿಗೆ ಬಂದ ಹಲವು ರೋಗಿಗಳನ್ನು ಪರೀಕ್ಷೆ  ಮಾಡಿದ ಬಳಿಕ ನಿಮಗೆ  ಯಾವ  ಔಷಧಿಯೂ ಬೇಡ ಎಂದು ಹೇಳಿ ಕಳುಹಿಸುವ ಕಾರಣ ಮದ್ದು ಬರೆಯದವರಿಗೆ  ಹಣ ಯಾಕೆ ಕೊಡ ಬೇಕು ಎಂಬ ಭಾವನೆ . ಹೆಚ್ಚಾಗಿ  ಬಡವರು  ಭಕ್ತಿಯಿಂದ  ಫೀಸು ಕೊಡುತ್ತಾರೆ . 'ಬಾಲೆ ಡಾಕ್ತ್ರೆನ ಕಾಸು ಕೊರ್ಲಾ "'ಮೋನೆ ಡಾಕ್ಟ್ರು ಫೀಜ್ ಕೊಡ್ಕಂಡೆ"ಎಂದು ಹಿರಿಯರು ನೆನಪಿಸುವುದನ್ನು ಕಂಡಿದ್ದೇನೆ . ಇನ್ನು ಕೆಲವರು ಮರೆತು ಹೋದವರು ತಿಂಗಳುಗಳ ಬಳಿಕ ತಂದು ಕೊಟ್ಟದ್ದು ಇದೆ. ಉಳ್ಳವರು ಕೆಲವರು  ಸ್ನೇಹಚಾರ ,ನೆಂಟಸ್ತಿಗೆ ಹೇಳಿ ಮಾಯವಾಗುವರು .ಮಂಗಳೂರಿನಲ್ಲಿ ಇದ್ದಾಗ ,ವಿದೇಶದಲ್ಲಿ ಕೆಲಸ ಮಾಡಿ  ಒಳ್ಳೆಯ ಪೆನ್ಷನ್ ಇರುವ  ಹಿರಿಯರು ಪ್ರತಿ ಸಲ ಶುಡ್ ಐ ಪೇ ಯು ಎಂದು ಅತೀ ಕಡಿಮೆ ಬೆಲೆಯ ನೋಟ್ ಕೊಡಲು ಮನಸಿಲ್ಲದೆ ಮುಂದೆ ಹಿಂದೆ ಚಾಚುತ್ತಿದ್ದರು. ಫೀಜ್ ಮನ್ನಾ ಮಾಡುವುದು ನಮ್ಮ ವಿವೇಚನೆಗೆ ಬಿಟ್ಟದ್ದು .ಕೊಡ ಬೇಕಾದವರು ಕೊಡಲೇ ಬೇಕು .

ಶುಕ್ರವಾರ, ನವೆಂಬರ್ 12, 2021

ಡಾ ಎಂ ಕೆ ಭಂಡಿ

                ಡಾ ಎಂ ಕೆ ಭಂಡಿ 

             

MK.BHANDI                 

ಹಿಂದೆ ನಾನು ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ  ಹತ್ತಿರ ದ ಮಂಗಳೂರು ವಿಶ್ವ ವಿದ್ಯಾಲಯದಿಂದ ಅಧ್ಯಾಪಕರು,ಸಿಬ್ಬಂದಿ ಮತ್ತು  ವಿದ್ಯಾರ್ಥಿಗಳು ಚಿಕಿತ್ಸೆಗೆ  ಬರುತ್ತಿದ್ದರು . ಇವರಲ್ಲಿ ಓರ್ವ ಹಿರಿಯರು ಬಹುಪಾಲು ಎಲ್ಲರಿಗೂ ಸಂಗಾತಿಯಾಗಿ ಸಹಾಯಕ್ಕೆ  ಬರುತ್ತಿದ್ದರು . ಹಾಗೆ ಪರಿಚಯ ಆದವರು ಡಾ ಎಂ ಕೆ ಭಂಡಿ .ಅವರು ವಿಶ್ವ ವಿದ್ಯಾಲಯದ ಮುಖ್ಯ ಲೈಬ್ರರಿಯನ್ ಆಗಿದ್ದರು . 

ಮೊದಲೇ ನಾನು ಪುಸ್ತಕ ಪ್ರಿಯ ಮತ್ತು ಅದರ ಬೇಟೆ ಆಡುವವನು . ನಾನು ಅತ್ಯಂತ ಗೌರವಿಸುವ ಮತ್ತು ಕರ್ನಾಟಕದ ವಿದ್ಯಾಕ್ಷೇತ್ರದ ಧ್ರುವ ತಾರೆ ಡಾ  ಡಿ ಸಿ ಪಾವಟೆಯವರು ಅನೇಕ ಗಣಿತ ಪಠ್ಯ ಪುಸ್ತಕಗಳ ಜೊತೆ  ಆತ್ಮ ಚರಿತಾತ್ಮಕವಾದ ಎರಡು ಕೃತಿಗಳನ್ನು ಬರೆದಿದ್ದು ನಾನು ಅವುಗಳನ್ನು ವಾಚನಾಲಯದಿಂದ ತಂದು ಓದಿದ್ದೆ .ಅವುಗಳನ್ನು ಪುನಃ ಓದಬೇಕೆನಿಸಿದಾಗ ಸಿಗಲಿಲ್ಲ . ಔಟ್ ಒಫ್ ಪ್ರಿಂಟ್ . ನಾನು ಶ್ರೀ ಭಂಡಿಯವವನ್ನು ಕೇಳಿಕೊಳ್ಳಲು 'ಸಾರ್ ನೀವು ಚಿಂತಿಸ ಬೇಡಿ "ಎಂದು ಕರ್ನಾಟಕ ವಿಶ್ವವಿದ್ಯಾಲಯದ ಲೈಬ್ರರಿಯಲ್ಲಿ ಇದ್ದ ಎರಡೂ  ಕೃತಿಗಳನ್ನು ಜೆರಾಕ್ಸ್ ಮಾಡಿ ಬೈಂಡ್ ಹಾಕಿಸಿ ಕೊಟ್ಟರು .ನನ್ನಿಂದ ಯಾವುದೇ ಪ್ರತಿಫಲ ತೆಗೆದು ಕೊಳ್ಳಲಿಲ್ಲ .ಮುಂದೆ ಕರ್ನಾಟಕದ ರಾಜ್ಯಪಾಲರಾಗಿ  ಒಳ್ಳೆಯ ಹೆಸರು ಪಡೆದಿದ್ದ ಶ್ರೀ ಧರ್ಮವೀರ ಅವರ ಆತ್ಮ ಚರಿತ್ರೆಯನ್ನೂ  ಅದೇ ಪ್ರಕಾರ ತೆಗೆಸಿ ಕೊಟ್ಟರು . 

ಇವರ ಮಾರ್ಗದರ್ಶನದಲ್ಲಿ ಅನೇಕ ವಿದ್ಯಾರ್ಥಿಗಳು  ಪಿ ಎಚ್ ಡಿ ಮಾಡಿದ್ದಾರೆ .ಫುಲ್ ಬ್ರೈಟ್ ಸ್ಕಾಲರ್ ಆಗಿದ್ದ ಇವರಿಗೆ ಅನೇಕ ಗೌರವಗಳು ಸಂದಿವೆ . 

ನಾಳೆ ನನ್ನ ಪುಸ್ತಕ ಬಿಡುಗಡೆ ಸಂದರ್ಭ ತಟ್ಟನೆ ಅವರ ನೆನಪಾಗಿ  ಫೋನ್ ಮಾಡಿ ಸಂಪರ್ಕಿಸಿದೆ .ಈಗ ಬೆಂಗಳೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ . ಅವರಿಗೆ ಅರೋಗ್ಯ ,ಮನಶಾಂತಿ ಕೋರಿದಾಗ ತುಂಬಾ ಸಂತೋಷ ಪಟ್ಟರು .ಅವರ ಫೋನ್ ಡೈರೆಕ್ಟರಿ ಯಲ್ಲಿ ನನ್ನ ಹೆಸರು ಇನ್ನೂ ಇಟ್ಟು ಕೊಂಡಿರುವರು

ಸೋಮವಾರ, ನವೆಂಬರ್ 8, 2021

ಮಂತ್ರ ಬಿನ್ನಹ

 ನಮ್ಮಲ್ಲಿ ಹಿಂದೆ ಆಗುತ್ತಿದ್ದ ವಿವಾಹಗಳ ವೈಭವ ಮತ್ತು ಆತ್ಮೀಯತೆ ಬಗ್ಗೆ ನಾನು ಹಿಂದೆ ಬರೆದಿದ್ದೆ . ವರನ ದಿಬ್ಬಣ ಬಂದು ,ಸ್ವಾಗತ ,ಅವಲಕ್ಕಿ ಸಜ್ಜಿಗೆ ಕಾಫಿ ಆಗಿ ,ವಾರ ವಧೂ ಅಲಂಕಾರ ,ನಡುವೆ ಚಪ್ಪರದಲ್ಲಿ ಗಂಡಸರು ,ಹೆಂಗಸರು ಸಭೆಯಲ್ಲಿ ತಮ್ಮ ತಮ್ಮ ಸ್ಥಾನದಲ್ಲಿ ಚಾಪೆಯ ಮೇಲೆ ಆಸೀನರಾಗಿ ಎಲೆ ಅಡಿಕೆ ಸೇವಿಸಿಕೊಂಡು ಉಭಯ ಕುಶಲೋಪರಿ ಮಾತನಾಡುವರು .ಮಾಸ್ಟ್ರು ಬರುವ ಮುಂಚಿನ ತರಗತಿಯ ವಾತಾವರಣ .  ಹೊಸ ಬಟ್ಟೆ ಹಾಕಿಕೊಂಡ ಮಕ್ಕಳು ಹೊಸ ಮೈತ್ರಿ ಮಾಡಿಕೊಂಡು ತಮ್ಮದೇ ಲೋಕದಲ್ಲಿ ಲಾಗ ಹಾಕುವರು .ಮುಹೂರ್ತ ಸಮೀಪಿಸಿದಾಗ ಪುರೋಹಿತರು ಎದ್ದು ನಿಂತು ಒಂದು ಕೈಯಿಂದ ಮಂಟಪದ ರೀಪು ಹಿಡಿದು ಕೊಳ್ಳುವರು . ಸಭೆಯಲ್ಲಿ ಪೂರ್ಣ ಮೌನ ಆವರಿಸುವುದು . ಪುರೋಹಿತರು ಮಂತ್ರ ಬಿನ್ನಹ ಆರಂಭಿಸುವರು . ಇದು ಬಹಳ ಅಪ್ಯಾಯ ಮಾನವಾಗಿದ್ದು ನಾನು ಮಂಟಪದ ಬಳಿ ಕುಳಿತು ಆಸಕ್ತಿಯಿಂದ ಕೇಳುತ್ತಿದ್ದೆನು .ಕೆಲವು ಸಾಲು ನನಗೆ ಬಾಯಿ ಪಾಠ ಬರುತ್ತಿದ್ದು ನಾನು ಮನೆಗೆ ಹೋಗಿ ಕಲ್ಪಿತ ಮಂಟಪ ಹಿಡಿದು ಅದನ್ನು ಹೇಳುತ್ತಿದ್ದೆನು . ಈ ಬಿನ್ನಹ ಮಂತ್ರ ಭವಂತು ಸರ್ವಜ್ಞ ಎಂದು ಆರಂಭವಾಗುವುದು ಮತ್ತು ಪುರೋಹಿತರು ಎದ್ದು ನಿಂತು ಹೇಳುತ್ತಿದ್ದರಿಂದ ,ಬಸ್ಸಿನಲ್ಲಿ ಜಾಗ ಸಿಗದೇ ಮೇಲಿನ ಕಂಬಿ ಹಿಡಿದು ನಿಂತು ಬಂದರೆ ಬಸ್ಸಿಲಿ  ಭವಂತು ಸರ್ವಜ್ಞ ಮಾರಾಯ ಎಂದು ಹೇಳುತ್ತಿದ್ದರು . ಈ ಮಂತ್ರದ  ಆರಂಭದಲ್ಲಿ ಸೇರಿದ ಅತಿಥಿಗಳಿಗೆ ಹೇಗೆ ಅಭಿವಂದಿಸಲಿ ಎಂಬ ಜಿಜ್ಞಾಸೆ ಆದರೆ ,ಆಮೇಲೆ ಅತಿಥಿಗಳಿಗೆ ಷೋಡಶೋಪಚಾರ ಯಾವುವು ?ಅವುಗಳಲ್ಲಿ  ಮತ್ತೆ ಪ್ರಾಮುಖ್ಯವಾದದ್ದು ಆರು .ಅದರಲ್ಲಿ ಕೂಡಾ ನಮಸ್ಕಾರವೇ ಶೇಷ್ಠ  ,ನನ್ನಂತಹ ಬಡಪಾಯಿಯ ನಮಸ್ಕಾರವನ್ನೇ ಷಡ್ಯುಪಚಾರವಾಗಿ ಸ್ವೀಕರಿಸಿ  ಇತ್ಯಾದಿ ಬರುತ್ತದೆ . ಪುರೋಹಿತರು ಮೊದಲು ಸಂಸ್ಕೃತದಲ್ಲಿ  ,ಅದರ ಅನುವಾದ ಕನ್ನಡಲ್ಲಿ ಎರಡೂ ರಾಗವಾಗಿ ಹೇಳುವರು .ಕೇಳಲು ಬಹಳ ಹಿತ . ಈಗ ಹಾಲ್ ಗಳಲ್ಲಿ ಇವುಗಳನ್ನು ಗಮನ ಕೊಟ್ಟು ಕೇಳುವುದು ಅಸಾಧ್ಯ . ಪುರೋಹಿತರೂ ಕಾಲಕ್ಕನುಗುಣವಾಗಿ ಅದರಲ್ಲಿ ಕೆಲವು ಕಡಿತ ಮಾಡಿಕೊಳ್ಳುವರು

 ಮಂತ್ರ ಬಿನ್ನಹ ಹೀಗೆ ತೊಡಗುವುದು .

ಭವಂತಃ ಸರ್ವಜ್ಞ :ನೀವೆಲ್ಲರೂ ಸರ್ವಜ್ಞರಾದಂತವರೂ 

ಸಕಲ ಭುವನೇ ರೂಡಾಯಶಸಃ ;ಸಮಸ್ತ ಲೋಕಗಳಲ್ಲಿಯೂ ಕೀರ್ತಿಯುಳ್ಳಂಥವರುಗಳು 

ಯಯಮ್ ತಾವದ್ಬಾಲಾಹ -ನಾವಾದರೋ ಬಾಲಕರು 

ಸರಸ ವಚನೇ ನೈವ ನಿಪುಣಃ -ಸರಸ ವಚನಗಳನ್ನು ಆಡುವುದರಲ್ಲಿ ನಿಪುಣರಲ್ಲ 

ತಥಾಪಿ -ಹಾಗಾದರೂ 

ಇಯಂ ವಾಣೀ -ಈ ವಾಕ್ಯವು 

ವಿಷತು  ಭವತಾ ಕರ್ಣ ಕುಹರಂ ;ನಿಮ್ಮ ಕಿವಿಗಳನ್ನು ಪ್ರವೇಶಿಸಲಿ 

ಕಿಶೋರಸ್ಯಾಲಾಪಃ -ಬಾಲಕನ ತೊದಲು ನುಡಿಯು 

ಖಲು ಭವತಿ ಪಿತ್ರೋರತಿಮುದೇ -ತಾಯಿ ತಂದೆಯರಿಗೆ ಯಾವ ಪ್ರಕಾರವಾಗಿ ಸಂತೋಷ ತರುತ್ತದೆಯೋ ಅದೇ ಪ್ರಕಾರವಾಗಿ ನೀವೆಲ್ಲರೂ ಸಂತೋಷ ಪಡಬೇಕು . 

ಪುತ್ರೋತ್ಸವೇ- ಪುತ್ರೋತ್ಸವ ನಾಮಕರಣದಲ್ಲಿ ;ಮೌಂಜಿ ಬಂಧೇ -ಉಪನಯನದಲ್ಲಿ 

ಕನ್ಯಾಯಃ ಪ್ರಥಮಾರ್ಥವೇ -ಕನ್ನಿಕೆಯ ಪ್ರಥಮ ಋತುವಿನಲ್ಲಿ ಮಾಡತಕ್ಕಂತಹಾ ಬ್ರಹ್ಮೋದನ ಕರ್ಮದಲ್ಲಿ .,

ವಿವಾಹೇ -ವಿವಾಹದಲ್ಲಿ , ಯಜ್ಞ ಸಮಯೇ -ಯಜ್ಞ ಮಾಡುವಾಗ ,ಬಿನ್ನಹಮ್ ಪಂಚ ಸುಸ್ಮೃತಮ್ -ಈ ಐದು ಸಂದರ್ಭಗಳಲ್ಲಿ ಬ್ರಹ್ಮ ಸಭೆಯನ್ನು ಕುರಿತು ಬಿನ್ನಹ ಮಾಡಬೇಕು . 

ಆಶಿಃಪೂರ್ವಕಮಿತ್ಯೆಕೇ -ಆಶೀರ್ವಾದ ಪೂರ್ವಕವಾಗಿ ಬಿನ್ನಹ ಮಾಡಬೇಕೆಂಬುದು ಒಂದು ಮತ ;ನಮಃ ಪೂರ್ವನ್ತು ಕೇಚನಃ -ನಮಸ್ಕಾರ ಪೂರ್ವಕವಾಗಿ ಬಿನ್ನಹ ಮಾಡಿಕೊಳ್ಳಬೇಕು ಎಂದು ಕೆಲವರ ಮತ ;ಬಿನ್ನಹಂ  ವೇದಪೂರ್ವಂ ಸ್ಯಾದಿತಿ ಸರ್ವೆರ್ವಿ ನಿಶ್ಚಿತಂ -ವೇದಪೂರ್ವವಾಗಿ  ಬಿನ್ನಹ ಮಾಡಬೇಕೆಂಬುದುದು ಸರ್ವ ಸಮ್ಮತ . 

ಇವುಗಳ ಪೈಕಿ ಆಶೀ ಪೂರ್ವಕವಾದ ಬಿನ್ನಹವು ಯಾವುದಯ್ಯ ಎಂದರೇ 

ಗಿರಿಜಾ ವಿವಾಹ ಸಮಯೇ -ಪಾರ್ವತಿ ದೇವಿಯ ವಿವಾಹ ಸಮಯದಲ್ಲಿ 

ಸ್ವಸ್ತೀತಿ ಪರಿಭಾಷಿತೋ ಮುನಿವರೈ -ವಶಿಷ್ಠ ವಾಮದೇವಾದಿ ಮುನಿವರರಿಂದ ಮಂಗಲವೆಂದು ಶ್ಲಾಘಿಸಲ್ಪಟ್ಟಂತಹಾ ;ಸಂಸ್ತೂಯ ಮಾನಃ  ಸುರೈ -ದೇವಗಣದಿಂದ ಸ್ತುತಿಸಲ್ಪಟ್ಟಂತಹಾ ;ಪಾರ್ಶ್ವೇ ಪದ್ಮಜ ಪದ್ಮನಾಭ ಪುರುಹೂತಾರ್ದೈ ರ್ಜ್ಯೇರ್ಥರ್ಚಿತ -ಪಾರ್ಶ್ವ ಭಾಗದಲ್ಲಿ ಪದ್ಮನಾಭ ದೇವೇಂದ್ರನೇ ಮೊದಲಾದ ದೇವತೆಗಳಿಂದ ಜಯ ಜಯ ಎಂದು ಪೂಜಿಸಲ್ಪಟ್ಟಂತಹಾ ; ಅಗ್ರೇಚಾಪ್ಸರಸಾಮ್  ಗಣೈ ರಹ ರಹ ನೃತ್ಯದ್ಭಿ ರಾಹ್ಲಾದಿತಃ -ಎದುರಿನಲ್ಲಿ ನಾನಾ  ನೃತ್ಯವನ್ನು ಮಾಡುವ ಅಪ್ಸರ ಸ್ತ್ರೀ ಸಮೂಹದಿಂದ ಸಂತೋಶಿಸಲ್ಪಡುವಂತಹಾ ;ಸಂತುಷ್ಟಮ್ -ಸಂತುಷ್ಟನದಂತಹಾ ;ಮೃಢಮ್ -ಪರಮೇಶ್ವರನೂ .;ಸ್ಯಾತ್ ಸಂಪದೇ -ನಮಗೆ ಉತ್ತರೋತ್ತರ ಮಂಗಲವನ್ನುಂಟು ಮಾಡಲಿ ಎಂಬುದೀಗ ಆಶೀ ಪೂರ್ವಕ ಬಿನ್ನಹ .. 

ನಮಃ ಪುರ್ವಿಕಾ ವಿಜ್ಞಾಪನಾ ಕಥಾಮಿತ್ಯಾಕಾಂಕ್ಷಾಯಾಮಾಹಾ -ನಮಸ್ಕಾರ ಪೂರ್ವಕವಾದ ಬಿನ್ನಹವು ಯಾವುದಯ್ಯಾ ಎಂದರೆ --- ಹೀಗೆ ಮುಂದುವರಿಯುವುದು.ಮುಂದೆ ಸಭೆಯ ವರ್ಣನೆ ,ಅತಿಥಿ ಉಪಚಾರಗಳ  ವರ್ಣನೆ ಇರುವುದು .ಈಗ ಊಟದ ಹೊತ್ತಿಗೆ ಬಹುತೇಕ ಅತಿಥಿಗಳ ಆಗಮನ ಆಗುವುದರಿಂದ ಇವೆಲ್ಲಾ ಅರಣ್ಯ ರೋದನ ಆದಂತೆ ಭಾಸ ಆಗುವುದು .

 

(ಇದರ ಮೂಲ ಸಾಹಿತ್ಯ ಒದಗಿಸಿಕೊಟ್ಟ ನಮ್ಮ ಪುರೋಹಿತರಾದ ಅಮೈ ಶ್ರೀ ಕೃಷ್ಣ ಪ್ರಸಾದ ಭಟ್ಟರಿಗೆ ಆಭಾರಿ )

 

 

ಭಾನುವಾರ, ನವೆಂಬರ್ 7, 2021

ನನ್ನ ಕೀಳರಿಮೆ

 ಬಾಲ್ಯದಲ್ಲಿ' ಭಾಷೆ ಇಲ್ಲದವ' ಎಂದು ಹಲವು ಭಾರಿ ಬೈಗಳು ತಿಂದಿದ್ದೇನೆ . ನಾನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದದ್ದು  ಕನ್ನಡ ಮಾಧ್ಯಮದಲ್ಲಿ ಅದೂ ಸರಕಾರಿ ಶಾಲೆಯಲ್ಲಿ . ಆಮೇಲೆ  ಪಿ ಯು ಸಿ ,ವೈದ್ಯಕೀಯ  ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಇಂಗ್ಲಿಷ್ ಮಾಧ್ಯಮದಲ್ಲಿ . ಅನೇಕ ರಾಜ್ಯಗಲ್ಲಿ ,ದೇಶಗಳಲ್ಲಿ  ,ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡಿದರೂ,ಅಲ್ಪ ಸ್ವಲ್ಪ ಇಂಗ್ಲಿಷ್ ಸಾಹಿತ್ಯ ಓದಿ ಕೊಂಡಿದ್ದರೂ ನಾನು  ಯೋಚಿಸುವುದು ಕನ್ನಡದಲ್ಲಿ . ಬಾಯಲ್ಲಿ ಮೊದಲು ಬರುವುದು ಮಾತೃ ಭಾಷೆ . ನಿಜ ಒಪ್ಪಿ ಕೊಳ್ಳುತ್ತೇನೆ .ನನಗೆ ಇಂಗ್ಲಿಷ್ ಸರಿಯಾಗಿ ಬರುವುದಿಲ್ಲ ;ಮಾತ್ರವಲ್ಲ  ಶುದ್ಧ  ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಭಾರತೀಯರ ಮುಂದೆ ಮಾತನಾಡುವಾಗ ನನಗೆ ಕೀಳರಿಮೆ (inferiority complex ) ಬರುತ್ತದೆ .ಅದು ಮಾತ್ರವಲ್ಲ ಆಧುನಿಕತೆಯೊಡನೆ ತಾಲೂಕು ಹಾಕಿ ಕೊಂಡಿರುವ ತಾರಾ ಸಂಸ್ಕೃತಿ ಎಷ್ಟು ಪ್ರಯತ್ನಿಸಿದರೂ ನನಗೆ ಒಗ್ಗಿಲ್ಲ . ಉದಾ ದೊಡ್ಡ ಐಷಾರಾಮಿ ಹೋಟೆಲ್ ಗಳಲ್ಲಿ ನನಗೆ ಸರಿಯಾಗಿ ನಿದ್ದೆ ಬರದು ,ಅಲ್ಲಿನ ಶವರ್ ಟಬ್ ನಲ್ಲಿ ಸ್ನಾನ ಮಾಡಿದರೆ ಮಾಡಿದ ಹಾಗೆ ಆಗುವುದಿಲ್ಲ . ಇನ್ನು ತೊಡೆಯ ಮೇಲೆ ಟವೆಲ್ ಹಾಕಿಕೊಂಡು ಚಮಚ ,ಮುಳ್ಳು ಚಮಚಗಳಲ್ಲಿ   ಸರ್ಕಸ್ ಮಾಡಿ ತಿಂದರೆ ತಿಂದ ಹಾಗೆ ಆಗದು .ನನಗೆ ಕೈಯಲ್ಲಿ ಕಲಸಿ ಬಾಯಿ ಚಪ್ಪರಿಸಿ ಊಟ ಮಾಡಿದರೇನೇ ಊಟ . 

ಇನ್ನು ಆಸ್ಪತ್ರೆಯಲ್ಲಿ  ರೋಗಿಗಳೊಡನೆ ಅವರ ಮಾತೃ ಭಾಷೆಯಲ್ಲಿ ಮಾತನಾಡಿದರೇನೇ ನನಗೆ ಸಮಾಧಾನ ಆಗುವುದು . ಇಲ್ಲಿ ಒಂದು ಮಾತು ಹೇಳಬೇಕು ;ಮಾತೃಭಾಷೆ ಯಲ್ಲಿ ಮಾತನಾಡಿದರೆ ಸಂತೋಷ ಪಟ್ಟು ಅದೇ ಮಾತಲ್ಲಿ ಉತ್ತರಿಸುವರಲ್ಲಿ ತಮಿಳರು ಮೊದಲನೇ ಸ್ಥಾನ . ಚೆನ್ನೈ ಯಲ್ಲಿ ನಾನು ಇದ್ದಾಗ ರೋಗಿ ವೈದ್ಯರ ಸಂಹವನ ತಮಿಳು ಭಾಷೆಯಲ್ಲಿಯೇ ಇದ್ದು ನಾನು ಬೇಗನೆ ಆ ಭಾಷೆ ಕಲಿಯುವಂತೆ ಆಯಿತು .ಮಲಯಾಳಿಗಳು ಪರವಾಗಿಲ್ಲ .ಕನ್ನಡದವರು ಮಾತ್ರ ಸ್ವಲ್ಪ ಓದಿ ಕೊಂಡಿದ್ದರೆ ಸಾಕು ,ಇಂಗ್ಲಿಷ್ ಶಬ್ದಗಳೇ ಬರುವವು . ನಾನು ಆಸ್ಪತ್ರೆಯಲ್ಲಿ ಸಿಬ್ಬಂದಿ ಯೊಡನೆ  ಅವರ ಭಾಷೆಯಲ್ಲಿ ಮಾತನಾಡಿ ಎನ್ನುವೆನು . ತುಳು ತಾಯಿ ಭಾಷೆ ಇರುವ ಸಿಬ್ಬಂದಿ ಕೂಡಾ ಹಳ್ಳಿಯವರೊಡನೆ ಕನ್ನಡ ,ಇಂಗ್ಲಿಷ್ ನಲ್ಲಿ ಮಾತನಾಡುವರು . ಉದಾಹರಣೆಗೆ 'ಈರೆನೊಟ್ಟುಗು ಏರು ಉಳ್ಳೇರು 'ಎನ್ನುವುದಕ್ಕೆ ಬದಲು ನಿಮ್ಮ  ಪಾರ್ಟಿ ಎಲ್ಲಿದ್ದಾರೆ ಎನ್ನುವರು . ಅದೇ ತರಹ ಕನ್ನಡ ಮಾತ್ರ ಬರುವವರೊಡನೆ ಇಂಗ್ಲಿಷ್ ಪದ ಹೆಚ್ಚು ಬಳಸುವರು . ಇದು ನಮ್ಮ ನಾಡಿನ ವಿಶೇಷ . 

ಇನ್ನು ಈಗಿನ ಯುವ ತಲೆಮೊರೆ ಯ ರೋಗಿಗಳು ,ಮುಖ್ಯವಾಗಿ ಬೆಂಗಳೂರಿನಲ್ಲಿ ಕೆಲಸದಲ್ಲಿ (ಜಾಬ್ ಮಾಡುವವರು )ಇರುವವರು ಅಂತೂ ಬಹುಪಾಲು ಕನ್ನಡದಲ್ಲಿ ಕೇಳಿದ ಪ್ರಶ್ನೆಗಳಿಗೆ  ಉತ್ತರಿಸುವ ಭಾಷೆ ಬೆಂಗಳೂರಿನ ಮೋಡಿಯ ಇಂಗ್ಲಿಷ್ ಕನ್ನಡ ಆಗಿದ್ದು ,ಅವರೊಡನೆ ಮಾತನಾಡಲು ನಾನು ತಡವರಿಸುತ್ತೇನೆ . ಅವರನ್ನು ಸಂತೋಷ ಪಡಿಸಲು ಎಂದು ಇಂಗ್ಲಿಷ್ ಮಾತನಾಡಲು ಹೋದರೆ ನನ್ನ ಜ್ಞಾನ ಅರ್ಧದಲ್ಲಿ ಕೈ ಕೊಡುವುದು .

 ಹೀಗೆ ನಾನು ಇರುವ ಪರಿಸರದ ಪ್ರಭಾವದಿಂದ ನನ್ನ ಭಾಷಾ ಜ್ಞಾನದ ಬಗ್ಗೆ ನಿಜಕ್ಕೂ ನಾನು ಕೀಳರಿಮೆ ಹೊಂದಿದ್ದೇನೆ .ಪುಣ್ಯಕ್ಕೆ ನಾನು ಕಾನ್ವೆಂಟ್ ನಲ್ಲಿ ಓದಿದ ಹುಡುಗಿಯನ್ನು ಪತ್ನಿಯಾಗಿ ಪಡೆದಿಲ್ಲ . 

 

ಸರಳ ಸಂಕೀರ್ಣತೆ

                   ಸರಳ ಸಂಕೀರ್ಣತೆ 

ನಾನು ಮಂಗಳೂರಿನಲ್ಲಿ ಇದ್ದಾಗ ಉಪ್ಪಳದ ಕೆ ಎನ್ ಎಚ್ ಆಸ್ಪತ್ರೆಗೆ ನಿಯಮಿತ ಭೇಟಿ ನೀಡುತ್ತಿದ್ದೆ .ಸುತ್ತ ಮುತ್ತಲಿನ ಹಳ್ಳಿಯವರಿಗೆ ಇದರಿಂದ ಪ್ರಯೋಜನ ಆಗುತ್ತಿತ್ತು . 

   ಒಂದು ಬಾರಿ ಓರ್ವ ತಾಯಿ ಯಾವುದೊ ಕಾಯಿಲೆಗೆ ದಾಖಲು ಆಗಿದ್ದರು . ಡಿಸ್ಚಾರ್ಜ್ ಆಗಿ ಹೋಗುವಾಗ ನನ್ನಲ್ಲಿ  ರಹಸ್ಯವಾಗಿ ಒಂದು ವಿನಂತಿ ಮಾಡಿದರು . ತನ್ನ ಬಿಲ್ ಸ್ವಲ್ಪ ಏರಿಸಿ ಬರೆದು ಕೊಡಬಹುದೋ ?ಎಂಬುದೇ ಅವರ ಬೇಡಿಕೆ .ನನಗೆ ಆಶ್ಚರ್ಯ ಆಯಿತು . ಸರಕಾರಿ ಕಂಟ್ರಾಕ್ಟರ್ ಗಳು ಏರಿಸಿ ಬಿಲ್ ಬರೆಯುವರು ಎಂದು ಕೇಳಿದ್ದೆ .ತನ್ನ ಮನೆಯವರೇ  ಪಾವತಿ ಮಾಡುವ ಬಿಲ್ ಗೆ ಹೀಗೆ ಏಕೆ ಮಾಡುವರು?

                  ವಿಚಾರಿಸಿದಾಗ ತಿಳಿಯಿತು . ಆ ಪ್ರದೇಶದಲ್ಲಿ  ಸಾಮಾನ್ಯವಾಗಿ ಇರುವಂತೆ ಇವರ ಮಗ ಕೂಡಾ   ಗಲ್ಫ್ ಉದ್ಯೋಗಿ .ಆತನ ತಾಯಿ ಹೆಂಡತಿ ಮಕ್ಕಳು ಊರಿನಲ್ಲಿ ಇದ್ದಾರೆ . ಮಗ ಅಲ್ಲಿ ಕಷ್ಟ ಪಟ್ಟು ದುಡಿಯುತ್ತಿದ್ದಾನೆ .ತಾನು  ಸೊಸೆ ಮೊಮ್ಮಗುವಿಗೆ ಪ್ರೀತಿಯಲ್ಲಿ  ಏನಾದರೂ ಕೊಂಡು ಕೊಡಲು ಕಾಸು ಕೇಳಲು ಸಂಕೋಚ .ಆದರೆ  ಔಷಧೋಪಚಾರಕ್ಕೆ  ಎಂದರೆ ಮಗನಿಗೆ ಬೇಸರ ಆಗದು .ಆದ್ದರಿಂದ  ಆ ಬಾಬತ್ತಿನಲ್ಲಿ  ಸ್ವಲ್ಪ ದುಡ್ಡು ಶೇಖರಿಸುವ  ಆಲೋಚನೆ .ನನಗೆ ತಿಳಿದಂತೆ ಈ ತಾಯಿಯೂ ಒಳ್ಳೆಯವರು . ನಾನು ಏನೋ ಸಮಾಧಾನ ಮಾಡಿ ಕಳುಹಿಸಿದೆ . ಮೇಲ್ನೋಟಕ್ಕೆ ಸರಳವಾಗಿ ಕಾಣುವ ಜೀವ ಜೀವನಗಳಲ್ಲಿ ಕೂಡಾ ಎಷ್ಟು ಸಂಕೀರ್ಣತೆ ಅಡಗಿದೆ ಎಂದು ಯೋಚಿಸ ತೊಡಗಿದೆ

        

ಶನಿವಾರ, ನವೆಂಬರ್ 6, 2021

ಸರಳತೆಯ ದಂತ ಕತೆಗಳು

Mangalore: Freedom fighter Sanjeevanath Aikala passes away - Daijiworld.com 

ವರ್ಷಗಳ ಹಿಂದೆ ನಾನು ಕೆ ಎಸ ಹೆಗ್ಡೆ ಮೆಡಿಕಲ್  ಕಾಲೇಜು ನಲ್ಲಿ ಕೆಲಸ ಮಾಡುತ್ತಿರುವ ಸಮಯ ;ಒಂದು ದಿನ ಓ ಪಿ ಡಿ ಯಲ್ಲಿ ಇರುವಾಗ ಓರ್ವ ಬಡ ಕೃಷಣ ಕಾಯರು ಖಾದಿ ದಿರಿಸು ಮತ್ತು ಹಳೇ ಹವಾಯಿ ಚಪ್ಪಲಿ ಧಾರಿ ಯಾಗಿ  ತಮ್ಮ ಊರಿನ ಯಾರೋ ಬಡ ರೋಗಿಗೆ ಉಚಿತ ಚಿಕೆತ್ಸೆ ಕೊಡಿಸಲು ಓಡಾಡುತ್ತಿದ್ದರು . ಅವರು ಹೋದ ಮೇಲೆ ಅವರನ್ನು ಪರಿಚಯ ಇದ್ದ ನನ್ನ ಸಹೋದ್ಯೋಗಿ 'ಸರ್ ಅವರು ಮಾಜಿ ಎಂ ಎಲ್ ಈ ಸಂಜೀವ ನಾಥ ಐಕಳ ಅವರು ಸರ್ ,ಶುದ್ಧ ಗಾಂಧಿವಾದಿ 'ಎಂದರು . ಐಕಳರು ಕಾರ್ನಾಡು ಸದಾಶಿವ ರಾಯರ ಅನುಯಾಯಿ ಆಗಿ ಸ್ವಾತಂತ್ರ್ಯ ಸಮರದಲ್ಲಿ ಭಾಗಿ ಆದವರು ,ಮುಂದೆ ಜಯಪ್ರಕಾಶ ನಾರಾಯಣ ಅವರಿಂದ ಪ್ರಭಾವಿತ ರಾಗಿ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ ಸೇರಿ , ಎಂ ಎಲ್ ಎ  ಆಗಿದ್ದು ಸೇವೆ ಮಾಡಿದವರು . ಸರಳ ಪರಿಶುದ್ಧ ಜೀವನ ನಡೆಸಿ ೬.೨ ೨೦೧೪ ರಂದು ತೀರಿ ಕೊಂಡರು .. 

 ನಾನು ಚೆನ್ನೈ ಪೆರಂಬೂರು ರೈಲ್ವೆ ಆಸ್ಪತ್ರೆಯಲ್ಲಿ ಇದ್ದಾಗ ಒಂದು ದಿನ ಮುಖ್ಯ ವೈದ್ಯಾಧಿಕಾರಿ ಮತ್ತು ಕಾರ್ಡಿಯೋಲಾಜಿಸ್ಟ್ ಆಗಿದ್ದ ಡಾ ಅಬ್ರಹಾಂ ಅವರನ್ನು ಕಾಣಲು ಹೋಗಿದ್ದೆ ..ರೂಮಿನ ಹೊರಗೆ ಅವರನ್ನು ಕಾಣಲು ಹಲವು ರೋಗಿಗಳ ಕ್ಯೂ ಇತ್ತು . ನನ್ನೊಡನೆ ಮಾತನಾಡುತ್ತಾ "ಅಲ್ಲಿ ಹೊರಗೆ ಧೋತಿ ಉಟ್ಟುಗೊಂಡು ನಿಂತಿದ್ದಾರಲ್ಲಾ ಅವರು ಕೇರಳದ ಮಾಜಿ ಮುಖ್ಯ ಮಂತ್ರಿ ಸಿ ಅಚ್ಚುತ ಮೆನನ್ ಅವರ ಮುಖ್ಯ ಕಾರ್ಯದರ್ಶಿ ಆಗಿದ್ದ ಐ ಎ ಎಸ ಅಧಿಕಾರಿ . ರಾಜನಂತೆ ಮಂತ್ರಿ ;ಎಷ್ಟು ಸರಳರು ನೋಡಿ "ಎಂದರು . ಅಚ್ಚುತ ಮೆನನ್ ಎರಡು ಭಾರಿ ಕೇರಳದ ಮುಖ್ಯ ಮಂತ್ರಿ ಆಗಿದ್ದವರು . ಆಮೇಲೆ ತಮ್ಮ ಊರು ತ್ರಿಚೂರಿನಲ್ಲಿ ಸಾಮಾನ್ಯರಂತೆ ಬದುಕಿದರು .ಒಂದು ದಿನ ಮಾಮೂಲಿನಂತೆ ವಾಕಿಂಗ್ ಮಾಡಿ ರೈಲ್ವೆ ಸ್ಟೇಷನ್ ಪುಸ್ತಕ ಅಂಗಡಿಯಿಂದ ಪತ್ರಿಕೆ ಕೊಂಡು ಹೊರ ಬರುವ ವೇಳೆ ಇವರ ಪರಿಚಯ ಇಲ್ಲದ ಟಿ ಟಿ ಇವರನ್ನು ನಿಲ್ಲಿಸಿ ಟಿಕೆಟ್ ಕೇಳಿ ದಬಾಯಿಸಿದರಂತೆ . ಸಾಮಾನ್ಯರಂತೆ ಸಭೆ ಸಮಾರಂಭ ಗಳಲ್ಲಿ ಭಾಗವಿಸುತ್ತಿದ್ದ ಇವರು ,ಪರವೂರಿಗೆ ಬಸ್ ,ಟ್ರೈನಿನ ಎರಡನೇ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದರು . 

 C Achutha Menon - Alchetron, The Free Social Encyclopedia