ಬೆಂಬಲಿಗರು

ಶುಕ್ರವಾರ, ನವೆಂಬರ್ 5, 2021

ಕೆಲವು ಹಳೆಯ ಜನಪ್ರಿಯ ಔಷಧಿಗಳು

 ಕೆಲವು ಔಷಧಿಗಳು ಮರೆಯುವ ಮುನ್ನ 

ಕೆಲವು ವರ್ಷಗಳ ಹಿಂದೆ ಆಸ್ಪತ್ರೆಗಳಲ್ಲಿ ವ್ಯಾಪಕವಾಗಿ  ಉಪಯೋಗಿಸಲ್ಪಡುತ್ತಿದ್ದ ಕೆಲವು ಔಷಧಿಗಳು ಈಗ ಬಳಕೆಯಲ್ಲಿ ಇಲ್ಲ . ಅವುಗಳಲ್ಲಿ ಕೆಲವನ್ನು ನೆನಪಿಸಿ ಕೊಳ್ಳೋಣ .

       ಸಾಮಾನ್ಯವಾಗಿ ಜ್ವರ ,ಶೀತ ಇತ್ಯಾದಿಗಳಿಗೆ ಎ ಪಿ ಸಿ ಎಂಬ ಮಾತ್ರೆ ಬರೆಯುತ್ತಿದ್ದೆವು .ಇದರಲ್ಲಿ ಆಸ್ಪಿರಿನ್ ,ಫಿನೆಸಿಟಿನ್(paracetamol ಇದರ ಉತ್ಪನ್ನ )ಮತ್ತು ಕೆಫಿನ್ ಇದ್ದು ಹಲವು ದಶಕಗಳು ಉಪಯೋಗದಲ್ಲಿ ಇತ್ತು 

ಇನ್ನು ಆಂಟಿ ಬಯೊಟಿಕ್ ಆಗಿ ಇದ್ದುದು ಪೆನ್ಸಿಲಿನ್ ;ಪ್ರೋಕೈನ್ ಪೆನ್ಸಿಲಿನ್ ಎಂಬ ಬಿಳಿ ಇಂಜೆಕ್ಷನ್ ಎಲ್ಲಾ ರೋಗಗಳಿಗೂ ರಾಮ ಬಾಣ ವಾಗಿ ಕೊಡುತ್ತಿದ್ದರು . ಸೀಮಿತ ಸರಬರಾಜು ಇದ್ದ ಕಾರಣ ಮೊದಲು ಬಂದವರಿಗೆ ಮಾತ್ರ ಸರಿಯಾದ ಡೋಸ್ ಸಿಕ್ಕಿ ,ಕೊನೆಗೆ ಬಂದವರಿಗೆ ವಿವಾಹ ಸಮಾರಂಭಗಳಲ್ಲಿ ನಿರೀಕ್ಷೆಗಿಂತ ಅಧಿಕ ಅತಿಥಿ ಗಳು ಬಂದರೆ ಸಾರು ,ಸಾಂಭಾರು ನೀರು ಸೇರಿಸಿ ಉದ್ದ ಎಳೆಯುವಂತೆ ಡಿಸ್ಟಿಲ್ಡ್ ವಾಟರ್ ಸೇರಿಸಿ ಉದ್ದ ಎಳೆದದ್ದೂ ಉಂಟು.ಪೆನ್ಸಿಲಿನ್ ಅಲರ್ಜಿ ಇದ್ದರೆ ಟೆಟ್ರ ಸೈಕ್ಲೀನ್ .ಹಿಂದೆ ಬರೆದಂತೆ ಇಂಜೆಕ್ಷನ್ ಸೂಜಿ ಕುದಿಸಿ ಪುನಃ ಉಪಯೋಗಿಸುತ್ತಿದ್ದುದರಿಂದ ಅವು ಮೊಂಡಾಗಿ ಕೊಡುವವರಿಗೂ ಕೊಳ್ಳುವವರಿಗೂ ಹಿಂಸೆ ಆಗುತ್ತಿತ್ತು . ಆಂಟಿ ಬಾಕ್ಟೀರಿಯಲ್ ಮಾತ್ರೆ ಸಲ್ಫಾ ಡಯಾಜಿನ್ ಲಭ್ಯವಿರುತ್ತಿತ್ತು . ಕಡಿಮೆ ಔಷಧಿಗಳು ಇದ್ದ ಕಾರಣ ನೆನಪು ಇಟ್ಟು ಕೊಳ್ಳುವುದು ಕಷ್ಟ ಇರಲಿಲ್ಲ . 

ದಮ್ಮುಕಾಯಿಲೆಗೆ  ಅಮಿನೊಫಿಲಿನ್ ಇಂಜೆಕ್ಷನ್  ರಕ್ತನಾಳಕ್ಕೆ ಕೊಡ ಬೇಕಿದ್ದು ,ಸ್ವಲ್ಪ ಹೊರ ಬಂದರೂ ಸಿಕ್ಕಾಬಟ್ಟೆ ಉರಿಯಿಂದ ರೋಗಿಗಳು ಶಾಪ ಹಾಕುತ್ತಿದ್ದರು .ಅಪಸ್ಮಾರಕ್ಕೆ ಪಾರಲ್ದಿಹೈಡ್ ಎಂಬ ವಿಶಿಷ್ಟ ವಾಸನೆಯ ಇಂಜೆಕ್ಷನ್ ಇದ್ದು ಅದರ ಅಂಪ್ಯೂಲ ಒಡೆದೊಡನೆ ಇಡೀ ಪ್ರದೇಶದಲ್ಲಿ ವ್ಯಾಪಿಸುತ್ತಿತ್ತು .

ಗಾಯಕ್ಕೆ ಹಚ್ಚಲು ಟಿಂಕ್ಚರ್ ಗಳು ಇದ್ದವು . ಆಲ್ಕೋಹಾಲ್ ನಲ್ಲಿ  ಔಷಧಿ ಕರಗಿಸಿ ಮಾಡಿದ ದ್ರಾವಣಕ್ಕೆ ಟಿಂಕ್ಚರ್ ಎನ್ನುತ್ತಾರೆ . ಗಾಯಗಳಿಗೆ ಟಿಂಕ್ಚರ್ ಅಯೋಡಿನ್ ಹಚ್ಚುತ್ತಿದ್ದು ಅದರ ಉರಿ ಬಲ್ಲವನೇ ಬಲ್ಲ . ಇನ್ನೊಂದು ಟಿಂಕ್ಚರ್ ಬೆಂಝೋಯಿನ್ .ಇದನ್ನು ಗಾಯಕ್ಕೆ ಹಚ್ಚಿ ಮೇಲೆ ಹತ್ತಿ ಅಥವಾ ಬಟ್ಟೆ ಇಟ್ಟರೆ ಅಂಟಿ ಕೊಳ್ಳುವುದು . ಇದೇ ಟಿಂಕ್ಚರ್ ಕಫ ಕರಗಲು ಇನ್ಹಲೇಷನ್ (ಸೇದುವುದು )ರೂಪದಲ್ಲಿ ಕೊಡುವ ಪದ್ಧತಿ ಇತ್ತು . ಇನ್ನು ಚರ್ಮದ ಹುಣ್ಣು ,ಕುರ ಮತ್ತು  ಫಂಗಸ್ ಇನ್ಸ್ಪೆಕ್ಷನ್ ಇತ್ಯಾದಿಗಳಿಗೆ ನೀಲಿ ಬಣ್ಣದ ಜೇನ್ಷನ್ ವಯೊಲೆಟ್ ಎಂಬ ಔಷಧ(ಇದನ್ನು ನಾವು ಸರ್ವ ಚರ್ಮ ರೋಗ ನಿವಾರಕ ಎಂದು ಕರೆಯುತ್ತಿದ್ದೆವು ) . ಇವುಗಳೆಲ್ಲ  ದೊಡ್ಡ ಜಾರ್ ಗಳಲ್ಲಿ ಇಟ್ಟು  ರೋಗಿಗಳಿಗೆ ಪ್ರಸಾದದ ರೂಪದಲ್ಲಿ ಹಚ್ಚಿ ನೆಕ್ಸ್ಟ್ ನೆಕ್ಸ್ಟ್ ಎಂದು ಕ್ಯೂವಿನಲ್ಲಿ ನಿಂತಿರುವ ಮುಂದಿನವರನ್ನು ಕರೆಯುವುದು .ಸರಕಾರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಗಳಲ್ಲಿ ಜನ ಸಂದಣಿ ಇರುತ್ತಿತ್ತು . 

ಜಜ್ಜಿದ ನೋವಿಗೆ ಟರ್ಪೆಂಟೈನ್ ಲಿನಿಮೆಂಟ್ ;ಇದಕ್ಕೆ ಘಾಟು ವಾಸನೆ ಇತ್ತು .

ಕುಡಿಯುವ ಸಿರಪ್ ಗಳಲ್ಲಿ ಕಫ್ ಸಿರಪ್ ಕೆಮ್ಮಿಗೆ , ಕಾರ್ಮಿನೇಟೀವ್ ಮಿಕ್ಸ್ಚರ್ ಗ್ಯಾಸ್ ಗೆ ಮತ್ತು ಅಜೀರ್ಣಕ್ಕೆ ,ಪೆಕ್ಟಿನ್ ಕೆವೊಲಿನ್ ಭೇದಿ ನಿಲ್ಲಲು ಕೊಡುತ್ತಿದ್ದರು . 

 ಈಗ ಇದರಲ್ಲಿ ಹಲವು ಮರೆಯಾಗಿವೆ . ಸಾವಿರಾರು ಹೊಸ ಔಷಧಿಗಳು ಬಂದಿವೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ