ಬೆಂಬಲಿಗರು

ಭಾನುವಾರ, ನವೆಂಬರ್ 7, 2021

ನನ್ನ ಕೀಳರಿಮೆ

 ಬಾಲ್ಯದಲ್ಲಿ' ಭಾಷೆ ಇಲ್ಲದವ' ಎಂದು ಹಲವು ಭಾರಿ ಬೈಗಳು ತಿಂದಿದ್ದೇನೆ . ನಾನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದದ್ದು  ಕನ್ನಡ ಮಾಧ್ಯಮದಲ್ಲಿ ಅದೂ ಸರಕಾರಿ ಶಾಲೆಯಲ್ಲಿ . ಆಮೇಲೆ  ಪಿ ಯು ಸಿ ,ವೈದ್ಯಕೀಯ  ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಇಂಗ್ಲಿಷ್ ಮಾಧ್ಯಮದಲ್ಲಿ . ಅನೇಕ ರಾಜ್ಯಗಲ್ಲಿ ,ದೇಶಗಳಲ್ಲಿ  ,ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡಿದರೂ,ಅಲ್ಪ ಸ್ವಲ್ಪ ಇಂಗ್ಲಿಷ್ ಸಾಹಿತ್ಯ ಓದಿ ಕೊಂಡಿದ್ದರೂ ನಾನು  ಯೋಚಿಸುವುದು ಕನ್ನಡದಲ್ಲಿ . ಬಾಯಲ್ಲಿ ಮೊದಲು ಬರುವುದು ಮಾತೃ ಭಾಷೆ . ನಿಜ ಒಪ್ಪಿ ಕೊಳ್ಳುತ್ತೇನೆ .ನನಗೆ ಇಂಗ್ಲಿಷ್ ಸರಿಯಾಗಿ ಬರುವುದಿಲ್ಲ ;ಮಾತ್ರವಲ್ಲ  ಶುದ್ಧ  ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಭಾರತೀಯರ ಮುಂದೆ ಮಾತನಾಡುವಾಗ ನನಗೆ ಕೀಳರಿಮೆ (inferiority complex ) ಬರುತ್ತದೆ .ಅದು ಮಾತ್ರವಲ್ಲ ಆಧುನಿಕತೆಯೊಡನೆ ತಾಲೂಕು ಹಾಕಿ ಕೊಂಡಿರುವ ತಾರಾ ಸಂಸ್ಕೃತಿ ಎಷ್ಟು ಪ್ರಯತ್ನಿಸಿದರೂ ನನಗೆ ಒಗ್ಗಿಲ್ಲ . ಉದಾ ದೊಡ್ಡ ಐಷಾರಾಮಿ ಹೋಟೆಲ್ ಗಳಲ್ಲಿ ನನಗೆ ಸರಿಯಾಗಿ ನಿದ್ದೆ ಬರದು ,ಅಲ್ಲಿನ ಶವರ್ ಟಬ್ ನಲ್ಲಿ ಸ್ನಾನ ಮಾಡಿದರೆ ಮಾಡಿದ ಹಾಗೆ ಆಗುವುದಿಲ್ಲ . ಇನ್ನು ತೊಡೆಯ ಮೇಲೆ ಟವೆಲ್ ಹಾಕಿಕೊಂಡು ಚಮಚ ,ಮುಳ್ಳು ಚಮಚಗಳಲ್ಲಿ   ಸರ್ಕಸ್ ಮಾಡಿ ತಿಂದರೆ ತಿಂದ ಹಾಗೆ ಆಗದು .ನನಗೆ ಕೈಯಲ್ಲಿ ಕಲಸಿ ಬಾಯಿ ಚಪ್ಪರಿಸಿ ಊಟ ಮಾಡಿದರೇನೇ ಊಟ . 

ಇನ್ನು ಆಸ್ಪತ್ರೆಯಲ್ಲಿ  ರೋಗಿಗಳೊಡನೆ ಅವರ ಮಾತೃ ಭಾಷೆಯಲ್ಲಿ ಮಾತನಾಡಿದರೇನೇ ನನಗೆ ಸಮಾಧಾನ ಆಗುವುದು . ಇಲ್ಲಿ ಒಂದು ಮಾತು ಹೇಳಬೇಕು ;ಮಾತೃಭಾಷೆ ಯಲ್ಲಿ ಮಾತನಾಡಿದರೆ ಸಂತೋಷ ಪಟ್ಟು ಅದೇ ಮಾತಲ್ಲಿ ಉತ್ತರಿಸುವರಲ್ಲಿ ತಮಿಳರು ಮೊದಲನೇ ಸ್ಥಾನ . ಚೆನ್ನೈ ಯಲ್ಲಿ ನಾನು ಇದ್ದಾಗ ರೋಗಿ ವೈದ್ಯರ ಸಂಹವನ ತಮಿಳು ಭಾಷೆಯಲ್ಲಿಯೇ ಇದ್ದು ನಾನು ಬೇಗನೆ ಆ ಭಾಷೆ ಕಲಿಯುವಂತೆ ಆಯಿತು .ಮಲಯಾಳಿಗಳು ಪರವಾಗಿಲ್ಲ .ಕನ್ನಡದವರು ಮಾತ್ರ ಸ್ವಲ್ಪ ಓದಿ ಕೊಂಡಿದ್ದರೆ ಸಾಕು ,ಇಂಗ್ಲಿಷ್ ಶಬ್ದಗಳೇ ಬರುವವು . ನಾನು ಆಸ್ಪತ್ರೆಯಲ್ಲಿ ಸಿಬ್ಬಂದಿ ಯೊಡನೆ  ಅವರ ಭಾಷೆಯಲ್ಲಿ ಮಾತನಾಡಿ ಎನ್ನುವೆನು . ತುಳು ತಾಯಿ ಭಾಷೆ ಇರುವ ಸಿಬ್ಬಂದಿ ಕೂಡಾ ಹಳ್ಳಿಯವರೊಡನೆ ಕನ್ನಡ ,ಇಂಗ್ಲಿಷ್ ನಲ್ಲಿ ಮಾತನಾಡುವರು . ಉದಾಹರಣೆಗೆ 'ಈರೆನೊಟ್ಟುಗು ಏರು ಉಳ್ಳೇರು 'ಎನ್ನುವುದಕ್ಕೆ ಬದಲು ನಿಮ್ಮ  ಪಾರ್ಟಿ ಎಲ್ಲಿದ್ದಾರೆ ಎನ್ನುವರು . ಅದೇ ತರಹ ಕನ್ನಡ ಮಾತ್ರ ಬರುವವರೊಡನೆ ಇಂಗ್ಲಿಷ್ ಪದ ಹೆಚ್ಚು ಬಳಸುವರು . ಇದು ನಮ್ಮ ನಾಡಿನ ವಿಶೇಷ . 

ಇನ್ನು ಈಗಿನ ಯುವ ತಲೆಮೊರೆ ಯ ರೋಗಿಗಳು ,ಮುಖ್ಯವಾಗಿ ಬೆಂಗಳೂರಿನಲ್ಲಿ ಕೆಲಸದಲ್ಲಿ (ಜಾಬ್ ಮಾಡುವವರು )ಇರುವವರು ಅಂತೂ ಬಹುಪಾಲು ಕನ್ನಡದಲ್ಲಿ ಕೇಳಿದ ಪ್ರಶ್ನೆಗಳಿಗೆ  ಉತ್ತರಿಸುವ ಭಾಷೆ ಬೆಂಗಳೂರಿನ ಮೋಡಿಯ ಇಂಗ್ಲಿಷ್ ಕನ್ನಡ ಆಗಿದ್ದು ,ಅವರೊಡನೆ ಮಾತನಾಡಲು ನಾನು ತಡವರಿಸುತ್ತೇನೆ . ಅವರನ್ನು ಸಂತೋಷ ಪಡಿಸಲು ಎಂದು ಇಂಗ್ಲಿಷ್ ಮಾತನಾಡಲು ಹೋದರೆ ನನ್ನ ಜ್ಞಾನ ಅರ್ಧದಲ್ಲಿ ಕೈ ಕೊಡುವುದು .

 ಹೀಗೆ ನಾನು ಇರುವ ಪರಿಸರದ ಪ್ರಭಾವದಿಂದ ನನ್ನ ಭಾಷಾ ಜ್ಞಾನದ ಬಗ್ಗೆ ನಿಜಕ್ಕೂ ನಾನು ಕೀಳರಿಮೆ ಹೊಂದಿದ್ದೇನೆ .ಪುಣ್ಯಕ್ಕೆ ನಾನು ಕಾನ್ವೆಂಟ್ ನಲ್ಲಿ ಓದಿದ ಹುಡುಗಿಯನ್ನು ಪತ್ನಿಯಾಗಿ ಪಡೆದಿಲ್ಲ . 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ