ಬೆಂಬಲಿಗರು

ಮಂಗಳವಾರ, ನವೆಂಬರ್ 30, 2021

ಬಿಟ್ಸ್ ಪಿಲಾನಿ ಮತ್ತು ಮಿರ್ಜಾ ಇಸ್ಮಾಯಿಲ್

                                                            
 Diwan Sir Mirza Ismail.jpg

BITS Pilani Starts Online Classes for MBA – PaGaLGuYಇತ್ತೀಚಿಗೆ ಬಿಡುಗಡೆ ಆದ ಹಿರಿಯರು ಡಾ ಸಿ ಎಸ ಶಾಸ್ತ್ರೀ ಅವರ ಕೃತಿ "ಸಂಚಾರ ವಿಚಾರ ಓದುತ್ತಿದ್ದೇನೆ . ಭೌತ ಶಾಸ್ತ್ರ ದಲ್ಲಿ ಉನ್ನತ ಅಧ್ಯಯನ ಮಾಡಿ ದೇಶದ ಹೆಸರಾಂತ ಶಿಕ್ಷಣ ಸಂಸ್ಥೆ ಗಳಲ್ಲಿ ದುಡಿದು ಈಗ ಬೆಂಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ . ಅವರ ಬಾಲ್ಯದಲ್ಲಿ ,ವಿದ್ಯಾರ್ಥಿ ದೆಸೆಯಲ್ಲಿ ಮತ್ತು ಮುಂದೆ ತನಗಾಗಿ ಮತ್ತು ಹೆತ್ತವರ ಸಂತೋಷಕ್ಕಾಗಿ ನಡೆಸಿದ ಹಲವು ಯಾತ್ರೆಗಳ ಬಗ್ಗೆ ಬರೆದಿದ್ದು , ಹಿಂದಿನ ಮತ್ತು ಈಗಿನ ಸಮಾಜ ,ಜೀವನ ಮತ್ತು ಆಚರಣೆಗಳ ತುಲನಾತ್ಮಕ ವಿಶ್ಲೇಷಣೆ ಇದೆ .ಪುಸ್ತಕ ಓದಿಸಿ ಕೊಂಡು ಹೋಗುತ್ತದೆ . 

ಸುಮಾರು ಒಂದೂವರೆ ದಶಕಗಳು ಇವರು  ಪ್ರತಿಷ್ಠಿತ ಬಿಟ್ಸ್ ಪಿಲಾನಿ (Birla Institute  of Technology )ಯಲ್ಲಿ ಅಧ್ಯಾಪನ ನಡೆಸಿದ್ದು ,ವಿಶ್ರಾಂತ ರಾದ ಮೇಲೆ ಅಲ್ಲಿಗೆ ಭೇಟಿ ನೀಡಿದಾಗ ಹಳೆಯ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳ ಜತೆ ಭೇಟಿ ಬಗ್ಗೆ ಆತ್ಮೀಯ ವಿವರಣೆ ಇದೆ . ಜೈಪುರ ಬಗ್ಗೆ ಕೂಡಾ . 

ಬಿಟ್ಸ್ ಪಿಲಾನಿ ಮತ್ತು ರಾಜಸ್ತಾನದ ವಿಶ್ವ ವಿದ್ಯಾಲಯ ,ಹಲವು ಶಿಕ್ಷಣ ಸಂಸ್ಥೆಗಳ ಸ್ಥಾಪನೆಯಲ್ಲಿ ನಮ್ಮವರೇ ಆದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಅಮೂಲ್ಯ ಕೊಡುಗೆ ಇದೆ ಎಂಬುದು ನಮಗೆ ಹೆಮ್ಮೆಯ ವಿಷಯ . ಮೈಸೂರು ಸರಕಾರದಲ್ಲಿ ಸುಧೀರ್ಘ ಕಾಲ ದೀವಾನರಾಗಿ ಒಳ್ಳೆಯ  ಆಡಳಿತ ನೀಡಿ ವಿರಮಿಸಿದ ಅವರನ್ನು ಜೈಪುರ ಕೈಬೀಸಿ ಕರೆಯಿತು ,ಅಲ್ಲಿನ ಮಹಾರಾಜ ಎರಡನೇ  ಸವಾಯಿ ಮಾನ್ ಸಿಂಗ್ ಅವರಿಗೆ ಪ್ರಧಾನ ಮಂತ್ರಿ ಆಗಿ ಹೋದರು . ಶಿಕ್ಷಣ ,ಅರೋಗ್ಯ ಮತ್ತು ಮೂಲ ಭೂತ ಸೌಕರ್ಯ ಇವಕ್ಕೆ ಒತ್ತು  ನೀಡಿ ಎಲ್ಲರ ಮನ ಗೆದ್ದರು .  ಜೈಪುರದ ಮುಖ್ಯ ರಸ್ತೆಗೆ ಇವರ ಹೆಸರು ನೀಡಲಾಗಿದೆ . ೧೯೪೫ ರಲ್ಲಿ ಜಯಪುರದಲ್ಲಿ ಲೇಖಕ ,ಪ್ರಭಂದಕಾರ ಮತ್ತು ಕಾದಂಬರಿಕಾರರ (PEN )ಸಮ್ಮೇಳನ ನಡೆಸಿ ಅದರ ಅಧ್ಯಕ್ಷತೆ ತಾವೇ ವಹಿಸಿ ಯಶಸ್ವೀ ಗೊಳಿಸಿದರು . 

ತಮ್ಮ ವೃತ್ತಿ ಜೀವನ ಅನುಭವಗಳನ್ನು "My Public Life "ಎಂಬ ಹೊತ್ತಿಗೆಯಲ್ಲಿ ನಿರೂಪಿಸಿದ್ದು ಎಲ್ಲರೂ ಓದ ಬೇಕಾದ ಗ್ರಂಥ . ಉದ್ಯಮಿ ಘನ ಶ್ಯಾಮ ದಾಸ್ ಬಿರ್ಲಾ ತಮ್ಮ ಹುಟ್ಟೂರಾದ ಪಿಲಾನಿ ಯಲ್ಲಿ ಒಂದು ಇಂಟೆರ್ ಮೀಡಿಯೇಟ್ ಕಾಲೇಜು ತೆರೆಯುವ ಹಂಬಲದಿಂದ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದರೂ ,ಅವರು ಕಾಂಗ್ರೆಸ್ ಮತ್ತು ಗಾಂಧೀಜಿ ಯವರ ಹಿತೈಷಿಗಳು ಎಂಬ ಕಾರಣಕ್ಕೆ ದೆಹಲಿಯ ಬ್ರಿಟಿಷ್ ಸರಕಾರದ  ರಾಜಕೀಯ ವ್ಯವಹಾರ ವಿಭಾಗದ ಅವಕೃಪೆಯಲ್ಲಿ ಇದ್ದರು ಎಂಬ ಕಾರಣಕ್ಕೆ ಜೈಪುರ ಸರಕಾರ ಅದನ್ನು ಪರಿಗಣಿಸಲು ಹಿಂದೇಟು ಹಾಕಿತ್ತು . ಆದರೆ ಮಿರ್ಜಾ ಧೈರ್ಯದಿಂದ ಮಹಾರಾಜರನ್ನು ಒಪ್ಪಿಸಿ ಬಿರ್ಲಾ ಅವರಿಗೆ ಹಸಿರು ನಿಶಾನೆ ತೋರಿಸಿದ್ದೇ ಮುಂದೆ ಬಿಟ್ಸ್ ಪಿಲಾನಿ ಯ ಹುಟ್ಟಿಗೂ ಕಾರಣ ಆಯಿತು .ಮೈಸೂರು ಮಹಾರಾಜಾ ಕಾಲೇಜಿನಲ್ಲ್ಲಿ ಪ್ರಿನ್ಸಿಪಾಲ್ ಆಗಿ ಪ್ರಸಿದ್ಧರಾಗಿದ್ದ ಜೆ ಸಿ ರೋಲೋ ಅವರನ್ನು ಜೈಪುರಕ್ಕೆ ಕರೆಸಿ ಶಿಕ್ಷಣ ಇಲಾಖೆಯ ಸಲಹೆಗಾರರನ್ನು ಆಗಿ ನೇಮಿಸಿದರು .ಮುಂದಕ್ಕೆ ರಾಜಪುತಾನಾ ವಿಶ್ವ ವಿದ್ಯಾಲಯದ ಹುಟ್ಟಿಗೆ ಕಾರಣವಾಯಿತು . ಅದಲ್ಲದೆ ಮೈಸೂರು ಸೇವೆಯಲ್ಲಿ ಇದ್ದ ಹಿರಣ್ಯಯ್ಯ ಎಂಬುವರನ್ನು  ಕರೆಸಿ ಜೈಪುರ ಆಡಳಿತದಲ್ಲಿ ಪ್ರಜಾ ಭಾಗಿತ್ವದ ರೂಪು ರೇಷೆ ನಿರ್ಧಾರ ಮಾಡುವ ಲ್ಲಿ  ಅಧ್ಯಯನ ಮಾಡಿ ಸಲಹೆ ನೀಡುವಂತೆ ಕೇಳಿದ್ದ ಲ್ಲದೆ ಅದನ್ನು ಯಶಸ್ವಿ ಯಾಗಿ ಜಾರಿಗೆ ತಂದರು . 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ