ಬೆಂಬಲಿಗರು

ಗುರುವಾರ, ನವೆಂಬರ್ 18, 2021

ಬಾರಿಸು ತನ್ನ ತಮ್ಮಟೆಯಾ

                 ಬಾರಿಸು ತನ್ನ ತಮ್ಮಟೆಯಾ 

ನಾಗರಿಕ ಶಾಸ್ತ್ರ (Civics )ಎಂಬುದು ಸಮಾಜ ಅಧ್ಯಯನದ ಮುಖ್ಯ ಅಂಗ . ನಾವು ಸಿಂಗಾಪುರ ಎಷ್ಟು ಸ್ವಚ್ಛ ಇದೆ ,ವಾಸ್ಕೋ ಡಾ ಗಾಮಾ ಭಾರತಕ್ಕೆ ಯಾವಾಗ ಬಂದ ಇತ್ಯಾದಿ ಪಾಠ ಪುಸ್ತಕದಲ್ಲಿ ಕಲಿತು ರಾಂಕ್ ಸಮೇತ ಪಾಸ್ ಆಗುತ್ತೇವೆ .ನಿಜ ಜೀವನದಲ್ಲಿ  ನಾಗರಿಕ ಪ್ರಜ್ಞೆ  ಅಳವಡಿಸುವುದಿಲ್ಲ ,ಚರಿತ್ರೆಯಿಂದ ಕಲಿಯುವುದಿಲ್ಲ . 

ಮುಖ್ಯ ರಸ್ತೆಯಿಂದ ನಮ್ಮ ಮನೆಗೆ ಹೋಗುವ ಒಳ ಮಾರ್ಗದ  ಆರಂಭದಲ್ಲಿ ಒಂದು ಚರಂಡಿ  ಮುಚ್ಚಿ ಹೋಗಿ ನೀರು ರಸ್ತೆಯಲ್ಲಿ ನಿಲ್ಲುತ್ತಿತ್ತು .ನಗರ ಸಭೆಯವರು ಹೊಸಾ ಚರಂಡಿ ನಿರ್ಮಿಸಿ ಕೊಟ್ಟರು .ಇದಕ್ಕಾಗಿ ನಾನೂ ನಗರ ಸಭೆಯ ಅಧ್ಯಕ್ಷರನ್ನು ಕಂಡು ನಿವೇದಿಸಿದ್ದೆ . ಚರಂಡಿಯ ಕಾಂಕ್ರೀಟ್ ಸ್ಲಾಬ್ ಮತ್ತು ಕೆಲ ರಸ್ತೆಯ  ಅಂತರಕ್ಕೆ ಸ್ವಲ್ಪ ಮಣ್ಣು ಹಾಕಿ ಬಿಟ್ಟಿದ್ದು ಅದು ಮಳೆಗೆ ಕೊಚ್ಚಿ ಹೋಯಿತು . ಇದರಿಂದ ವಾಹನಗಳು ಇಳಿಯುವಾಗ ಮತ್ತು ಹತ್ತುವಾಗ ಸ್ವಲ್ಪ ತೊಂದರೆ . ನಾನು ಎರಡು ಸಾರಿ ಮುಂಜಾನೆ ಎಲ್ಲರೂ ಏಳುವ ವೇಳೆ ಒಂದು ಸಣ್ಣ ಹಾರೆ ಸಹಿತ ಅಲ್ಲಿಗೆ ಹೋಗಿ ಬಳಿಯಲ್ಲಿ ಇದ್ದ ರಾಶಿಯಿಂದ ಮಣ್ಣು ತಂದು ಹಾಕಿದೆ .ಈಗ ಸ್ವಲ್ಪ ಪರವಾಗಿಲ್ಲ . 

             ಅದೇ ರಸ್ತೆಯಲ್ಲಿ ಮುಂದಕ್ಕೆ ಮೆಸ್ಕಾಂ ನವರು ಹದ್ದು ಮೀರಿ ಬೆಳೆದಿದ್ದ ಗೆಲ್ಲು ಬಳ್ಳಿಗಳನ್ನು ತುಂಡು ಮಾಡಿ ರಸ್ತೆಯ ಬದಿಯಲ್ಲಿ ಹಾಕಿ ಹೋಗಿದ್ದು ಪಾದಚಾರಿಗಳಿಗೆ ಕಷ್ಟ ಆಗುತ್ತಿತ್ತು .ವಾರ ಕಳೆದರೂ ಯಾರೂ ಇದರ ಬಗ್ಗೆ ತಲೆ ಕೆಡಿಸಿ ಕೊಂಡಂತೆ ಇರಲಿಲ್ಲ .ಒಂದು ಮುಂಜಾವು ಕತ್ತಿ ತೆಗೆದು ಕೊಂಡು ಹೋಗಿ ಅವುಗಳನ್ನು ತುಂಡು ಮಾಡಿ ರಸ್ತೆ ಬದಿ ತೆರವು ಮಾಡಿದೆ . 

ಮೇಲಿನ ಎರಡು ಕೆಲಸಗಳನ್ನು ಅತೀ  ಬೆಳಿಗ್ಗೆ ಮಾಡಿದ್ದ ಉದ್ದೇಶ ,ಯಾರೂ ಕಾಣುವುದಿಲ್ಲ ,ಕಂಡರೆ ನನಗೆ ಮರ್ಯಾದೆಗೆ ಕೊರತೆ ಎಂದು ಅಲ್ಲ ;ಡಾಕ್ಟ್ರು ಯಾಕೆ ಕಷ್ಟ ಪಡುತ್ತೀರಿ ಎಂದು ಸಂತಾಪ ಸೂಚಿಸುವರೇ ಹೊರತು ಯಾರೂ ಸಹಾಯಕ್ಕೆ ಬರುವುದಿಲ್ಲ .ಈ ರಸ್ತೆಯಲ್ಲಿ  ಎಷ್ಟೋ ಯುವಕರು ಓಡಾಡುತ್ತಾರೆ ,ಬೇಕಾದರೆ ಪ್ಲಾಸ್ಟಿಕ್ ಚೀಲ ,ಗುಟ್ಕಾ ಕವರ್ ಎಸೆದು ಹೋಗುವರು . ಇಂತಹ ಕೆಲಸಕ್ಕೆ ಬಾರರು . ನೂಜಿಬೈಲ್ ಸೂರ್ಯನಾರಾಯಣ  ಭಟ್ ಎಂಬ ಹಿರಿಯರು ಹಿಂದೊಮ್ಮೆ ನನ್ನ ಕಾರ್ಯದಲ್ಲಿ ಸಹಕಾರ ನೀಡಿದ್ದರು . 

ಇನ್ನು ನಮ್ಮ ಮನೆಯ ಮುಂದಿನ ರಸ್ತೆಯನ್ನು ನನ್ನ ಪತ್ನಿ ಗುಡಿಸಿ ಯಾವಾಗಳೂ  ಸ್ವಚ್ಛ ಇಟ್ಟಿರುವಳು ,ಮನೆಯ ಹೊರಗಿನ ಚರಂಡಿಯನ್ನೂ ಕಾಲ ಕಾಲಕ್ಕೆ ನಿರ್ಮಲ ಗೊಳಿಸುವಳು . ಯಾರಾದರರೂ ಕಸ ಎಸೆಯುವುದು  ಕಂಡರೆ ನಿರ್ದಾಕ್ಷಿಣ್ಯ ವಾಗಿ  ಕರೆದು ಖಂಡಿಸುವಳು . 

ಇಷ್ಟೆಲ್ಲಾ ನನ್ನ ತಮ್ಮಟೆ ನಾನೇ ಬಾರಿಸಿದ್ದು  ಇದನ್ನು ಓದಿಯಾದರೂ ಯುವಕರು ನಾಗರೀಕ ಪ್ರಜ್ಞೆ ಬೆಳೆಸಿಕೊಳ್ಳಲಿ ಎಂದು ,ಆಗ ಮಾತ್ರ ಸಮಾಜ ಪ್ರಾಕ್ಟಿಕಲ್ಸ್ ನಲ್ಲಿ ನಾವು ಪಾಸ್ . 

 






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ