ಬೆಂಬಲಿಗರು

ಶನಿವಾರ, ನವೆಂಬರ್ 20, 2021

ಮಾನಸ ಪುತ್ರಿ ನೇಹಾ


 

ನಾವು ಮಂಗಳೂರಿನಲ್ಲಿ  ದಶಕಗಳೂ ಮೀರಿ ವಾಸವಿದ್ದು ,ಪಳ್ನಿರ್ ನಲ್ಲಿ ಒಂದು ಸ್ವಂತ ಫ್ಲಾಟ್ ಇತ್ತು . ಇಂದಿನ  ಸಣ್ಣ ಕುಟುಂಬ ಯುಗದಲ್ಲಿ  ಅಪಾರ್ಟ್ಮೆಂಟ್ ವಾಸ ಒಂದು ವಿಧದಲ್ಲಿ ಒಳ್ಳೆಯದು . ವಿಸ್ತರಿತ ಕೂಡು ಕುಟುಂಬ ಅಲ್ಲಿ ಇರುವುದು .ಈ ಶಬ್ದ  ನಾನು ನೋಡಿದ್ದು ಖ್ಯಾತ ಹಿರಿಯ ವೈದ್ಯರಾದ ಡಾ ಕೆ ಆರ್ ಶೆಟ್ಟಿ ಅವರ ಒಂದು ಲೇಖನದಲ್ಲಿ .ಅವರು ಸ್ವತಃ ದೊಡ್ಡ ಬಂಗಲೆ ಬಿಟ್ಟು  ಕದ್ರಿ ಪಾರ್ಕ್ ಸಮೀಪ ತಾವೇ ಒಂದು ಅಪಾರ್ಟ್ಮೆಂಟ್ ನಿರ್ಮಿಸಿ ಆಯ್ದ ವ್ಯಕ್ತಿಗಳಿಗೆ ನೀಡಿದ್ದಾರೆ .ಅಲ್ಲಿ ವಾಸಿಸುವ ಜನರು ಒಳ್ಳೆಯವರಾಗಿ ಇದ್ದರೆ ಫ್ಲಾಟ್ ಜೀವನ ಉತ್ತಮ .ಮಕ್ಕಳಿಗೆ ಆಡಲು ಸ್ನೇಹಿತರು ಸಿಗುವರು ,ಭದ್ರತೆ ಅಧಿಕ ಇರುವುದು ಇತ್ಯಾದಿ .

ನನ್ನ ಮನೆಯ ಸರೀ ಎದುರು ದಿನರಾಜ್ ವೀಣಾ ದಂಪತಿಗಳು ಇದ್ದರು.ದಿನರಾಜ್ ಒಂದು ಗರಾಜ್ ನಡೆಸುತ್ತಿದ್ದರು ,ವೀಣಾ ಶಿಕ್ಷಕಿ .ಅವರ ಪುಟ್ಟ ಮಗು ನೇಹಾ ನಮ್ಮೆಲ್ಲರ ಅಚ್ಚು ಮೆಚ್ಚಿನ ಕಣ್ಮಣಿ .ನಾನು ಆಸ್ಪತ್ತ್ರೆಯಿಂದ ಬಂದು ಬಾಗಿಲು ತೆರೆಯುವ ಶಬ್ದ ಕೇಳಿದ ಕೂಡಲೇ ಓಡಿ ಬರುವಳು .ಅವಳ ಅಮ್ಮ 'ತಾಳು ಪುಟ್ಟಾ ಡಾಕ್ಟರ್ ಮಾಮಾ ಈಗ ತಾನೇ ಬಂದದ್ದಷ್ಟೆ ,ಅವರು ಕಾಫಿ ಕುಡಿದು ರೆಸ್ಟ್ ತೆಗೊಳ್ಳಲಿ ,ಆಮೇಲೆ ಹೋಗು "ಎಂದರೆ ಕೇಳಳು. ಬಡ ಬಡ ಬಾಗಿಲು ಬಡಿದು ಅಳುವಳು .ನಾನು ಬಿಡಿ ಅಮ್ಮಾ ಎಂದು ಕರೆಯುವೆನು .ನಮ್ಮ ಮನೆಯಲ್ಲಿ ನಾನು ,ನನ್ನ ಪತ್ನಿ ಮತ್ತು ಮಗ ನಿತಿನ್ ಜತೆ ಒಂದು ಗಂಟೆ ಕಳೆದು , ಮುದ್ದು ಮುಗ್ದ ಮಾತಿನಿಂದ ನಮ್ಮನ್ನು ಹರುಷ ಗೊಳಿಸುವಳು .ಆಮೇಲೆ ಅಮ್ಮ ಜೋರು ಮಾಡಿದಾಗಲೇ ವಾಪಸು .ನನ್ನ ಆಯಾಸ ಎಲ್ಲಾ ಮಾಯ .ಎಸ್ಟೋ ಬಾರಿ ನಮ್ಮಲ್ಲಿಯೇ ಊಟ ತಿಂಡಿ . 

ನನ್ನ ಮಗ ನಿತಿನ್ ಟಿ ವಿ ನೋಡುತ್ತಿದ್ದರೆ "ಆಫ್ ಮಾಡಣ್ಣಾ ,ಓದು ಓದು ಎಂದು ಆಕ್ಷನ್ ಸಹಿತ ಗದರುವಳು .ನಾನು ನೀನು ಗುಡ್ ಗರ್ಲ್ ಎಂದರೆ  ತಲೆಗೆ ಕೈ ಇಟ್ಟು'ಈ ಮಾಮನಿಗೆ ಇಂಗ್ಲೀಷ್ ಬರುವುದಿಲ್ಲ .ಗರ್ಲ್ ಅಲ್ಲಾ ಗಲ್(R ಸೈಲೆಂಟ್ ಎಂಬಂತೆ )ಎನ್ನುವಳು . ಅವಳ ಬಾಲ್ಯ ಲೀಲೆ ನಮಗೆ ಆಪ್ಯಾಯ ಮಾನವಾಗಿತ್ತು .

      ಈಗ ಅವರ ಕುಟುಂಬ ಬೆಂಗಳೂರಿನಲ್ಲಿ ನೆಲಸಿದೆ .ನೇಹಾ ಇಂಜಿನೀರಿಂಗ್ ಮುಗಿಸಿದ್ದಾಳೆ . ಆದರೂ ಅವಳ ಚಿತ್ರಣ ಆಗಾಗ ಕಣ್ಣು ಮುಂದೆ ಬಂದು ಮನಸು ಮುದ ಗೊಳ್ಳುವುದು .ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ ಎಂದು ಅವಳಿಗೆ ನಮ್ಮ ಹಾರೈಕೆ ,

ಇತ್ತೀಚೆಗೆ ಬಿಡುಗಡೆ ಆದ ನನ್ನ ಪುಸ್ತಕ 'ವೈದ್ಯನ ವಗೈರೆ ಗಳು "ವಿನಲ್ಲಿಯೂ ಅವಳ ಬಗ್ಗೆ ಉಲ್ಲೇಖ ಇದೆ .ಅದಕ್ಕೆ ಸಂಬಂದಿಸಿದ ಕಾರ್ಟೂನ್ ಕೆಳಗೆ ಕಾಪಿ ಮಾಡಿ ಹಾಕಿದ್ದೇನೆ  .

                         



             


 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ