ಬೆಂಬಲಿಗರು

ಭಾನುವಾರ, ನವೆಂಬರ್ 28, 2021

ಹೇಗೆ ಮರೆಯಲಿ ಭಾವ ನಿಮ್ಮ ?

                                 


ನನ್ನ ದೊಡ್ಡ ಅಕ್ಕ ನನಗಿಂತ ಒಂಬತ್ತು ವರ್ಷ ದೊಡ್ಡವಳು ,ನನಗೆ ನೆನಪು ಬರುವಾಗ ಅವಳು ಶಾಲೆಗೆ ಮತ್ತು ಸಂಗೀತಾಭ್ಯಾಸ ಕ್ಕೆ ಎಂದು ಅಜ್ಜನ ಮನೆ ಯಲ್ಲಿ ಇದ್ದು ,ನಾನು ಒಂದನೇ ತರಗತಿಯಲ್ಲಿ ಇರುವಾಗ ಅವಳ ಮದುವೆ ಆಗಿದ್ದು ,ಅವಳನ್ನು ಸರಿಯಾಗಿ ನೋಡಿ ದ್ದು ಗಂಡನ ಮನೆಯಲ್ಲಿಯೇ . ನನ್ನ ಭಾವ ಹತ್ತೊಕ್ಕಲು ಸುಬ್ರಾಯ ಭಟ್ ಅವರು . ಮುಂದೆ ಪಾಲು ಆದ ಮೇಲೆ ಅಲ್ಲಿಂದ ಒಂದು ಮೈಲು ದೂರದ ಮಾಪಾಲು ಅವರ ಮನೆ . ಭಾವ ಉರುವಾಲು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು . ಇವರು ಮೂಲತಃ ಶಿರಂಕಲ್ಲು ಮೂಲದವರು .. 

                   ನನ್ನ ಭಾವ ಬಹಳ ಸಾಧು ಸ್ವಭಾವದವರು ,ಒಂದು ಇರುವೆಯನ್ನು ಕೂಡಾ ನೋಯಿಸರು . ಅವರು ಶಾಲೆಗೆ ಹೋಗುವ ಕಾರಣ ಕೃಷಿ ಉಸ್ತುವಾರಿ ಅಕ್ಕ ನೋಡಿ ಕೊಳ್ಳುತ್ತಿದ್ದರು .,

ಆಗ ಉಪ್ಪಿನಂಗಡಿಯಿಂದ ಇಳಂತಿಲಕ್ಕೆ (ಹತ್ತೊಕ್ಕಲು ಇದಕ್ಕೆ ಸಮೀಪ )ನಡೆದೇ ಹೋಗುವುದು . ಉಪ್ಪಿನಂಗಡಿ ನೇತ್ರಾವತಿ  ನಡೆದೇ ಅಥವಾ ಓಡದಲ್ಲಿ ದಾಟಿ ಕಾಲು ದಾರಿ ಯಲ್ಲಿ ಸುಮಾರು  ಐದು ಕಿಲೋಮೀಟರು ,ಅದರಲ್ಲಿ  ಇಳಂತಿಲ ಸಮೀಪ ಏರು ಗುಡ್ಡೆ ಒಂದು ಕಿಲೋಮೀಟರು . ಇಳಂತಿಲದಿಂದ ಎರಡು ಕಿಲೋಮೀಟರ್ ಮಾಪಾಲಿಗೆ .ಹೀಗೆ ಉಪ್ಪಿನಂಗಡಿಯಿಂದ ಅಕ್ಕನ ಮನೆಗೆ ತಲುಪುವಾಗ "ದಾಲ ಬಲ್ಲಿ "ಆಗುವುದು . ಗುರುವಾರ ಉಪ್ಪಿನಂಗಡಿ ಸಂತೆ ದಿನ ಈ ದಾರಿಯಲ್ಲಿ ಕೃಷಿ ಉತ್ಪನ್ನಗಳನ್ನು ಹೊತ್ತು ನಡೆಯುವ ಜನರ ಉದ್ದ ಮೆರವಣಿಗೆಯೇ ಇರುತ್ತಿತ್ತು . 

 ಈಗ ಇಲ್ಲಿ ಒಳ್ಳೆಯ ರಸ್ತೆಗಳು ,ಬಸ್ ಜೀಪ್ ಸರ್ವಿಸ್ ಇದೆ. 

ನನ್ನ ಅಕ್ಕ ಭಾವನಿಗೆ ನಾಲ್ಕು ಹೆಣ್ಣು ಮಕ್ಕಳು . ಹೆಚ್ಚಾಗಿ ಅಕ್ಕನ ಹೆರಿಗೆ ನಮ್ಮ ದೊಡ್ಡ ರಜೆಯಲ್ಲಿ ಆಗುತ್ತಿತ್ತು . ಪೇಟೆಗೆ ದೂರ ಇರುವುದರಿಂದ ನಮ್ಮ ಮನೆ ಅಂಗ್ರಿಯಲ್ಲಿ ಹೆರಿಗೆಗೆ ಬರುತ್ತಿದ್ದರು ..ಆಗೆಲ್ಲಾ  ಬಾವನಿಗೆ ಸಹಾಯ ಮಾಡಲು ಎಂದು ನಾವು ಮಾಪಾಲಿಗೆ ಹೋಗುವೆವು . ನಾನು ಸಣ್ಣ ಹುಡುಗ . ಮನೆಯಿಂದ ಹೊರಡುವಾಗ ತಾಯಿ' ಚೆಲ್ಲು ಚೆಲ್ಲಾಗಿ ಮಾತನಾಡ ಬಾರದು ,ಭಾವನಿಗೆ ಗೌರವ ಕೊಡ ಬೇಕು ,ಆದಷ್ಟು ಕೆಲಸದಲ್ಲಿ ಕೂಡ ಬೇಕು ,ಇಲ್ಲದಿದ್ದರೆ ಕಡಿಮೆ ಪಕ್ಷ ತೊಂದರೆ ಕೊಡ ಬಾರದು'ಎಂದು  ಉಪದೇಶ ಮಾಡುವರು . 

ಅಕ್ಕನ ಮನೆಯಲ್ಲಿ ಭಾವನಿಗೆ  ಅಡಿಗೆ ಮಾಡಲು ನಾನು ಸಹಾಯಕ ,ಅವರು ಹೆಡ್ ಕುಕ್ . ಕಾಯಿ ಕೆರೆಯುವುದು ,ಅಕ್ಕಿ ಕಾಯಿ ಅರೆಯುವುದು ,ದೋಸೆ ಹೊಯ್ಯುವುದು ನಾನು ,ಅದಕ್ಕೆ ಬೇಕಾದ ಮಸಾಲೆ ಕರಿದು ಕೊಡುವುದು ಇತ್ಯಾದಿ ಭಾವ .ನನ್ನ ಸೊಂಟಕ್ಕೆ ಒಂದು ತೋರ್ತು ,ಅದರಲ್ಲಿ ತುಂಬಾ ಬಾಳೆ ಕಾಯಿ ,ಎಲೆಯಿಂದ ಹಿಡಿದ ಕಲೆಗಳು ,ಮೇಲೆ ಬೋಳು ಎದೆ ಮತ್ತು ಹೊಟ್ಟೆಯ ಮೇಲೆ ಒಂದು ಜನಿವಾರ . ನನ್ನನ್ನು ಈ ವೇಷದಲ್ಲಿ  ಕಂಡ ಕೆಲಸದ ಅಳು ನನ್ನ ಭಾವನವರಲ್ಲಿ "ಇಂಬೆರ್ ಅಟಿಲ್ದ ಅಣ್ಣೆರಾ ?"ಎಂದು ಒಂದು ದಿನ ಕೇಳಲು ಅವರಿಗೆ ನಗೆ ತಡೆಯಲಿಲ್ಲ ."ಇದ್ಯಪ್ಪಾ ಇಂದು ಎನ್ನ ಭಾವೇರು "ಎಂದರು .ನನಗೇನು ಬೇಸರ ಆಗಲಿಲ್ಲ . 

ಬೆಳಿಗ್ಗೆ ಕಾಪಿಗೆ ದೋಸೆ ಇಡ್ಲಿ ಮಾಡುತ್ತಿದ್ದೆವು .ಒಂದು ನಾನೂ ಭಾವನವರೂ 'ಅಕ್ಕಿ ರೊಟ್ಟಿ ಮಾಡಿದರೆ ಹೇಗೆ ,ಯಾವಾಗಲೂ ದೋಸೆ ತೆಳ್ಳವು ತಿಂದು ಸಾಕಾಯಿತು "ಎಂದು ರೊಟ್ಟಿಗೆ ಅಕ್ಕಿ ನೀರಿನಲ್ಲಿ ಹಾಕಿದೆವು . ಕಡೆಯುವುದು ನಾನು ತಾನೇ .ಈ ರೊಟ್ಟಿಗೆ ಅರೆಯುವಾಗ ಜಾಸ್ತಿ ನೀರು ಹಾಕುವಂತಿಲ್ಲ . ಹೇಗೋ ಕಷ್ಟ ಪಟ್ಟು ಕಡೆದೆ . ದಿಗ್ವಿಜಯ ಸಾಧಿಸಿದವರಂತೆ ಬಾಳೆ ಕೀತಿನಲ್ಲಿ ರೊಟ್ಟಿ ತಟ್ಟಿ ಉಬ್ಬಿಸಿ ಸ್ವಲ್ಪ ರುಚಿ ನೋಡಲು ಹಿಟ್ಟಿಗೆ ಉಪ್ಪೇ ಹಾಕಿರಲಿಲ್ಲ .ಗಟ್ಟಿ ಹಿಟ್ಟಿಗೆ ಉಪ್ಪು ಸೇರಿಸುವದು ಹೇಗೆ ಎಂದು ನಮಗೆ ತಿಳಿಯದು .ತಿಳಿದವರಲ್ಲಿ ಕೇಳಲು ಈಗಿನ ಹಾಗೆ ಮೊಬೈಲ್ ಇಲ್ಲ . ರೊಟ್ಟಿಗೆ ಸೇರಿಸಲು ಬಸಳೆ ಪದಾರ್ಥ ಮಾಡಿದ್ದು ಅದಕ್ಕೇ ಸ್ವಲ್ಪ ಉಪ್ಪು ಸೇರಿಸಿದೆವು . ಒಟ್ರಾಸಿ ಮಾಡಿದ್ದು ಉಣ್ಣೋ ಮಹಾರಾಯ ಎಂದು ಬಾಯಿ ಚಪ್ಪರಿಸಿ ಕೊಂಡು ತಿಂದೆವು . ಈ ರೊಟ್ಟಿ ,ಪೂರಿ ಎಲ್ಲಾ ಉಬ್ಬಿ ಬಂದರೆ ಚೆನ್ನ .ಕೆಲವೊಮ್ಮೆ ಅವು ಉಬ್ಬದಿರಲು ನಾನು ಪತ್ನಿಗೆ' ರೊಟ್ಟಿಯೇ ,ಪೂರಿಯೇ ನಿನ್ನ ಬಿಟ್ಟರೆ ತಿಂಡಿ ಇಲ್ಲಾ ಎಂದು ಹೊಗಳ ಬೇಕು "ಆಗ ಅವು ಸಂತಸದಿಂದ ಉಬ್ಬುವುವು ಎಂದು ಸಲಹೆ ಮಾಡುವದು ಇದೆ . 

ನನ್ನ ಅಕ್ಕನ ಹೆರಿಗೆ ಸಮಾಚಾರ ಪೋಸ್ಟ್ ಮೂಲಕ ಬರುತ್ತಿತ್ತು .ಮೊದಲ ಹೆಣ್ಣು ಮಗು ಆದಾಗ ಸಂತೋಷ .ಮೇಲೆ ಮೇಲೆ ಹೆಣ್ಣು ಮಗು ಎಂಬ ಸುದ್ದಿ ಬಂದಾಗ ಭಾವನ ಮುಖದಲ್ಲಿ ಮ್ಲಾನತೆ ಇರುತ್ತಿತ್ತು .ಅದನ್ನು ಕಂಡು ಒಕ್ಕಲು ಉಮರೆ ಬ್ಯಾರಿ ಮತ್ತು ಅವರ ಪತ್ನಿ ಸಾರಮ್ಮ 'ಬೇಜಾರು ಮಲ್ಪಡೆ ,ಮಾತ ದೇವೇರು ಕೊರ್ಪುನೆ "ಎಂದು ಸಮಾಧಾನ ಮಾಡುವರು .ಅಕ್ಕ ಭಾವ ಎಲ್ಲಾ ಹೆಣ್ಣು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ದ್ದಲ್ಲದೆ ,ಒಳ್ಳೆಯ ಮನೆಗಳಿಗೆ ಮದುವೆ ಮಾಡಿ ಕೊಟ್ಟಿರುವರು . 

ನನಗೆ ಓದುವ ಹವ್ಯಾಸ ಇದೆ ಎಂದು ಭಾವ ಪೇಟೆಗೆ ಹೋದಾಗ ಪೇಪರ್ ,ಮ್ಯಾಗಜಿನ್ ತರುವರು .ಅವರ ಬಳಿ ಕುಮಾರ ವ್ಯಾಸ ಭಾರತ ,ದೇರಾಜೆ ಅವರ ಕೃತಿಗಳು ಇದ್ದು ಅವುಗಳು ನನಗೆ ರಾವಣನ ಹೊಟ್ಟೆಗೆ ಕಾಸಿನ ಮಜ್ಜಿಗೆಯಂತೆ ಆಗುತ್ತಿದ್ದವು .ಒಂದು ಟೆಲಿ ಫಂಕನ್ ರೇಡಿಯೋ ಇದ್ದುದು ಸ್ವಲ್ಪ ಸಮಾಧಾನ .. 

 ಉರುವಾಲು ಶಾಲೆಯ ಅಭಿವೃದ್ಧಿಗೆ ಅವರ ಕೊಡುಗೆ ದೊಡ್ಡದು . ಅಲ್ಲಿ ಒಂದು ಸಂಗೀತ ಶಾಲೆಯನ್ನೂ ಆರಂಭಿಸಿದ್ದರು .(ಅದನ್ನುಶ್ರೀ  ತಾಳ್ತಜೆ ವಸಂತ ಕುಮಾರ್ ಉದ್ಘಾಟಿಸಿದ್ದರು ). ಈಗಲೂ ಊರಿನವರು ಅವರನ್ನು ನೆನಸಿ ಕೊಳ್ಳುವರು .. 

ನಾನು ಅಕ್ಕನ ಮನೆಗೆ ಬಂದು ಇಳಿದೊಡನೆ "ಪದ್ಮನಾಭ ಭಾವ ಅಬ್ಬೆ ಎಂತ ಹೇಳಿದ್ದವು ?"ಎಂದು ಕೇಳುವರು . ನಾನು "ಬೆಗುಡು ಬೆಗುಡು ಮಾತನಾಡೆಡ ಹರಿಕತೆ ಮಾಡೆಡ "ಎಂದು ಬಾಲ್ಯದ ಮುಗ್ದತೆಯಿಂದ ಉತ್ತರಿಸಿದಾಗ ನಗುವರು . 

ನನ್ನ ವಿದ್ಯಾಭ್ಯಾಸ ಕಾಲಕ್ಕೆ ತುಂಬಾ ಸಹಾಯ ಮಾಡಿದ್ದರು . ಕೊನೆಗೆ ಮರೆವು ಕಾಯಿಲೆಯಿಂದ ಬಳಲಿ ಕೆಲ ವರ್ಷಗಳ ಹಿಂದೆ ತೀರಿ ಕೊಂಡ ಈ ಸಜ್ಜನ ಮೂರ್ತಿಯನ್ನು ಯಾವಾಗಲೂ ಸ್ಮರಿಸುವೆನು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ