ಬೆಂಬಲಿಗರು

ಮಂಗಳವಾರ, ಆಗಸ್ಟ್ 31, 2021

ಪುಸ್ತಕ ಪರಿಚಾರಕ ಪ್ರಕಾಶ ಕೊಡೆಂಕಿರಿ

                          ಪುಸ್ತಕ ಪರಿಚಾರಕ ಪ್ರಕಾಶ ಕೊಡೆಂಕಿರಿ

                      

       ಮೊನ್ನೆ ನನ್ನ ಸಹೋದರ ಶಾಲೆಗಳಲ್ಲಿ ಹಂಚಲೆಂದು  ಒಂದು ಪುಸ್ತಕ ಕಟ್ಟು ಹೋಗಿದ್ದನು . ಅದನ್ನು ತಲುಪಿಸುವದು ಹೇಗೆ ಎಂದು ಆಲೋಚಿಸುವಾಗ ನೆನಪಿಗೆ ಬಂದವರು ಕೊಡೆಂಕಿರಿ ಪ್ರಕಾಶ್ .ಇಂದು ಆಸ್ಪತ್ರೆಗೆ ಬಂದವರು ೧೦ ಕಿಲೋ ಭಾರದ ಅದನ್ನು ಹೇಗೆ ಕೊಂಡು ಹೋಗುವಿರಿ ,ಆಟೋ ಮಾಡಿ ಕೊಡುವೆ ಎಂದಾಗ' ಸಾರ್ ನೀವು ಯೋಚನೆ ಮಾಡ ಬೇಡಿರಿ ಎಂದು ಅದನ್ನು ಹೆಗಲ ಮೇಲೆ ಹೊತ್ತು ನಡೆದರು . ಆಸ್ಪತ್ರೆಯಿಂದ ಅವರ ಅಂಗಡಿಗೆ ಮುಕ್ಕಾಲು ಕಿಲೋಮೀಟರ್ ದೂರ . 

ಪ್ರಕಾಶ್ ಬೋಳಂತಕೋಡಿ ಈಶ್ವರ ಭಟ್ ಗರಡಿಯಲ್ಲಿ ತಯಾರು ಆದವರು . ಶೋಭಾ ಪುಸ್ತಕಾಲಯ ವನ್ನು  ರಾಜೇಶ್ ಪವರ್ ಪ್ರೆಸ್ ನವರಿಂದ ಖರೀದಿಸಿ ಬೋಳಂತಕೋಡಿ ನಡೆಸುತ್ತಿದ್ದರು .ಅವರಿಗೆ ಸಹಾಯಕರಾಗಿ ಸೇರಿಕೊಂಡ ಅವರು ಪುಸ್ತಕ ವ್ಯಾಪಾರ ದ ಒಳ ಹೊರಗು ಕಲಿತರು .ಮುಂದೆ ತಮ್ಮದೇ ಆದ ಜ್ಞಾನ ಗಂಗಾ ಪುಸ್ತಕ ಮಳಿಗೆಯನ್ನು ಆರಂಭಿಸಿದರು . ಇವರದು ಸ್ಥಾವರ ಉದ್ಯಮದೊಂದಿಗೆ  ಸಂಚಾರಿ ಪುಸ್ತಕ ವ್ಯಾಪಾರ ಕೂಡಾ ಇದೆ . 

ಕರ್ನಾಟಕದಾದ್ಯಂತ ಸಾಹಿತ್ಯ ಸಮ್ಮೇಳನ ,ಸುತ್ತ ಮುತ್ತಲಿನ ಶಾಲಾ ವಾರ್ಷಿಕೋತ್ಸವ ,ಮದುವೆ ,ಗೃಹ ಪ್ರವೇಶ ,ಮುಂಜಿಗಳಗಳಲ್ಲಿ ಇವರು ಮತ್ತು ಇವರ ಪುಸ್ತಕ ಸಂಗ್ರಹ ಹಾಜರ್ . ನಾನೂ ಯಾರಿಗಾದರೂ ಉಡುಗೊರೆ ಕೊಡುವುದಿದ್ದರೆ ಅವರಿಗೆ ಫೋನಾಯಿಸುವೆನು .ಸಂದರ್ಭಾನುಸಾರ ಅವರು ಪುಸ್ತಕ ಕಟ್ಟು ಆಸ್ಪತ್ರೆಗೆ ತಲುಪಿಸುವರು . 

ಪ್ರಕಾಶ್  ಹೆಸರಿಗೆ ತಕ್ಕಂತೆ ಪುಸ್ತಕ ಪ್ರಕಾಶಕರೂ ಹೌದು .ದೇರಾಜೆ ಸೀತಾರಾಮಯ್ಯ ನವರ ಭಾರತ ಮತ್ತು ರಾಮಾಯಣ ಪುಸ್ತಕ ಪುನರ್ಮುದ್ರಣ ಮಾಡಿದ್ದಾರೆ .ಹಲವು ಯಕ್ಷಗಾನ ಪ್ರಸಂಗಗಳು .,ಸಾಮಗ ಪಡಿದನಿ .ಕಡಂಬಿಲ ಅಡುಗೆ ಮುಂತಾದ ಐವತ್ತಕ್ಕೂ ಮೀರಿ ಕೃತಿಗಳು ಇವರಿಂದ ಪ್ರಕಾಶಿಸ ಲ್ಪಟ್ಟಿವೆ . ೨೦೦೪ ರಲ್ಲಿ ತಮ್ಮ ಮನೆಯಲ್ಲಿ ಪ್ರಥಮ ಗೃಹ ಸಾಹಿತ್ಯ ಸಮ್ಮೇಳನ ನಡೆಸಿದ ಶ್ರೇಯ ಇವರದು . ತಮ್ಮ ಗುರುಗಳಾದ ಬೋಳಂತಕೋಡಿ ಯವರ ಸ್ಮರಣಾರ್ಥ ನೆನಪಿನ ಕಾರ್ಯಕ್ರಮ ಯೋಚನೆ ,ಯೋಜನೆ ,ಪ್ರಶಸ್ತಿ ಪ್ರಧಾನ ರೂಪೀಕರಣ ಮತ್ತು ಅನುಷ್ಠಾನ ಇವರ ಸಾಧನೆ . 

ಇವರಿಗೆ ೨೦೧೪ ರ ಸರಸ್ವತಿ ಪುರಸ್ಕಾರ .ಕಾಂತಾವರ ಕನ್ನಡ ಸಂಘದ ಗೌರವ ,ಸವಣೂರು ಮಂಗಳ ಕಲಾ ವೇದಿಕೆ ಸಂಮ್ಮಾನ ,ಜೇಸಿ ಯವರ ಸಾಧನಾ ಪ್ರಶಸ್ತಿ ,೨೦೧೭ ಕಡಬ ತಾಲೂಕು ಸಮ್ಮೇಳನದಲ್ಲಿ ಸಮ್ಮಾನ ಇತ್ಯಾದಿ ಲಭಿಸಿದ್ದು ಅರ್ಹತೆಯಿಂದ ಗಳಿಸಿರುವರು . 

ಪ್ರವಾಸ ಪ್ರಿಯರಾದ ಪ್ರಕಾಶರು  ವೈಷನೋ ದೇವಿ ,ಅಸ್ಸಾಮ ಮೇಘಾಲಯ ಮತ್ತು ಅರುಣಾಚಲ ಪ್ರದೇಶ ಸಂಚಾರ ಕೈಗೊಂಡಿದ್ದಾರಲ್ಲದೆ ಕರ್ನಾಟಕದ ವಿವಿಧ ಪ್ರವಾಸಿ ತಾಣಗಳನ್ನು ಬಿಟ್ಟಿಲ್ಲ . 

ಪುಸ್ತಕ ವ್ಯಾಪಾರದಲ್ಲಿ ಹಲವು ವಿನೋದಕರ ಘಟನೆ ಅವರು ನೆನಪು ಮಾಡಿಕೊಳ್ಳುತ್ತಾರೆ .ಒಂದು ಕಡೆ ಪುಸ್ತಕ ಪ್ರದರ್ಶನದಲ್ಲಿ ಓರ್ವ ಅಧ್ಯಾಪಕರು ಕಾರಂತರ ಬಾಲ ಪ್ರಪಂಚ ಪುಸ್ತಕದ  ಹಾಳೆಗಳನ್ನು ಮಗುಚಿ ಹಾಕಿ ಕಾರಂತರು  ಬರೆಯುತ್ತಾರಾ ?ಎಂದು ಕೇಳಿದರಂತೆ .ಇನ್ನೊಂದು ಕಡೆ ಮಗು ಅಸೆ ಪಟ್ಟಿತು ಎಂದು ಪುಸ್ತಕ ಕೊಂಡ ತಂದೆ ಸ್ವಲ್ಪ ಬಿಟ್ಟು ಒಬ್ಬರೇ ಬಂದು ಮಗು ಸಮಾಧಾನ ಮಾಡಲು ಕೊಂಡ ಹಾಗೆ ಮಾಡಿದೆ ,ಪುಸ್ತಕ ತೆಗೆದು ಕೊಂಡು ದುಡ್ಡು ವಾಪಸು ಕೊಡಿ ಎಂದರಂತೆ.. 

 ನನ್ನೊಡನೆ ಹವ್ಯಕ ಭಾಷೆಯಲ್ಲಿಯೇ ಮಾತುಕತೆ(ಅವರ ಮಾತೃಭಾಷೆ ತುಳು ) . ಅವರ ಅಮ್ಮ ಶಾರದಾ ,ಪತ್ನಿ ಸುಜಾತಾ ಮತ್ತು ಮಗ ಆದಿತ್ಯ ಕೂಡಾ ಇವರಿಗೆ ಬೇಕಾದ ಸಹಕಾರ ನೀಡುವರು . 

ಹಿಂದೆ ಜಿ ಪಿ ರಾಜರತ್ನಂ ಯಾವಾಗಲೂ ತಮ್ಮ ಜೋಳಿಗೆಯಲ್ಲಿ ಮಾರಾಟಕ್ಕೆ ಕನ್ನಡ ಪುಸ್ತಕಗಳನ್ನು ಇಟ್ಟು ಕೊಂಡಿರುತ್ತರಂತೆ ;ಉಡುಪಿ ಯಲ್ಲಿ  ಕು. ಗೋ. ಕೂಡಾ .ಅವರಂತೆ ತಮ್ಮದೇ ಮಾರ್ಗದಲ್ಲಿ  ನಮ್ಮ ಪ್ರಕಾಶಣ್ಣ.

ಭಾನುವಾರ, ಆಗಸ್ಟ್ 29, 2021

ಮಣಿಲಾ ಸುಬ್ಬಣ್ಣ ಶಾಸ್ತ್ರಿಗಳು

                     ಮಣಿಲ ಸುಬ್ಬಣ್ಣ ಶಾಸ್ತ್ರಿಗಳು 

                      ಯಾವುದೇ ಉದ್ಯೋಗಕ್ಕೆ ಅರ್ಜಿ ಕರೆಯುವಾಗ (ವಿಶೇಷವಾಗಿ ಸರಕಾರಿ )ಅದರಲ್ಲಿ ಒಂದು ಎಚ್ಚರಿಕೆಯ ಒಕ್ಕಣೆ ಇರುತ್ತದೆ . ಯಾವುದೇ ಕಾರಣಕ್ಕೆ ಅಪೂರ್ಣವಾದ  ಮತ್ತು ಕೊನೆಯ ದಿನಾಂಕ ಕಳೆದು ಬರುವ ಅರ್ಜಿಗಳನ್ನು ಪರಿಗಣಿಸುವುದಿಲ್ಲ . ಇಂತಹ ಒಂದು ಅರ್ಜಿಗೆ ಹಲವು ದಾಖಲೆಗಳು (ಕೆಲವು ದೃಢೀಕೃತ );ಹಳ್ಳಿಯಿಂದ ಬಂದವರಿಗೆ ಅದರ ಮಾಹಿತಿ ಇಲ್ಲದೆ ,ಪೇಟೆಯವರಿಗೆ ಅತಿ ವಿಶ್ವಾಸದಿಂದ ಇದರಲ್ಲಿ ಎಡವಟ್ಟು ಆಗುವುದುಂಟು . ಅದಕ್ಕೆಲ್ಲಾ ಪರಿಹಾರ ಎಂಬಂತೆ ಪುತ್ತೂರಿನಲ್ಲಿ ಮಣಿಲ ಜೆರಾಕ್ಸ್ ಎಂಬ  ಒಂದು ಸೇವಾ ತಾಣ  ಇದೆ .ಇಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ,ಉದ್ಯೋಗಾರ್ಥಿಗಳಿಗೆ ಮತ್ತು ಜನಸಾಮಾನ್ಯರಿಗೆ ಬೇಕಾದ ಅನೇಕ ಫಾರಂ ಗಳು ,ಸವಿವರವಾಗಿ ಲಭ್ಯ .ಇದರ ರೂವಾರಿ ಪ್ರಸಿದ್ಧ ಮಣಿಲ ಶಾಸ್ತ್ರೀ ಮನೆತನದ ಶ್ರೀ ಸುಬ್ಬಣ್ಣ ಶಾಸ್ತ್ರಿಗಳು .ಸ್ವ ಉದ್ಯೋಗಕ್ಕಾಗಿ ಜಾಬ್ ಟೈಪಿಂಗ್ ಆರಂಬಿಸಿ ಸ್ವಲ್ಪ ಆ ಕಡೆ ಈ ಕಡೆ ವಿಸ್ತರಿಸಿ ಪರಿಶ್ರಮದಿಂದ ಒಂದು ನೆಲೆ ಕಂಡು ಕೊಂಡವರು,

ನಾನು ಹಲವು ಬಾರಿ ಅಜ್ಞಾತನಾಗಿ ಇವರ  ಬಳಿ ಫಾರಂ ಗಳನ್ನು ಪಡೆದು ಉಪಯೋಗಿಸಿರುವೆ .ಆದರೆ ಈ ಬಾರಿ ಪುತ್ತೂರಿಗೆ ಬಂದಾಗ ಇವರ ಪರಿಚಯ ಸ್ನೇಹಕ್ಕೆ ತಿರುಗಿ  ಸಂತೋಷ ಪಟ್ಟಿದ್ದೇನೆ . ಸುಬ್ಬಣ್ಣ ಶಾಸ್ತ್ರಿಗಳು ನೇರ ನುಡಿ ನಡೆಯ ಮನುಷ್ಯ . ಅವರಿಗೆ ವ್ಯವಹಾರ ಬೇರೆ ,ವೈಯುಕ್ತಿಕ  ಸ್ನೇಹ ಬೇರೆ . ಇದು ನನಗೆ ಬಹಳ ಹಿಡಿಸಿದೆ . ಆಗಾಗ ಅವರ ಮನೆಗೆ ,ಅಂಗಡಿಗೆ ಭೇಟಿ ಕೊಟ್ಟು ವಿಚಾರ ವಿನಿಮಯ ಮಾಡುವುದು ಇದೆ . ಅವರು ಕೆಲಸದಲ್ಲಿ ಭಾರೀ ಶಿಸ್ತು ಇಟ್ಟು ಕೊಂಡವರು ,ಅನಾವಶ್ಯಕ ರಜೆ ಹಾಕರು .ಮದುವೆ ಇತ್ಯಾದಿ ಸಮಾರಂಭಗಳು ಭಾನುವಾರ ಅಲ್ಲದಿದ್ದರೆ ಮುನ್ನಾ ದಿನವೇ ತರಕಾರಿ ಹಚ್ಚಲು ಹೋಗುವರು;ನಾನೂ ಹಲವು ಬಾರಿ ಇವರಿಗೆ ಜತೆಯಾಗಿದ್ದೇನೆ . 

ಇವರ ವ್ಯವಹಾರದಲ್ಲಿ  ಚೌಕಾಸಿಗೆ ಆಸ್ಪದ ಇಲ್ಲ . ನಾವು ಸರಕಾರದಿಂದ ಸಂಬಳ ಸಿಗುವವರಿಗೆ ಲಂಚ ಪಾವತಿಸಲು ಹಿಂದೆ  ಮುಂದೆ ನೋಡುವುದಿಲ್ಲ . ಶ್ರಮ ಜೀವಿಗಳಿಗೆ ,ಸ್ವಯಂ ಉದ್ಯೋಗಿಗಳ ಸೇವೆಗೆ ಯೋಗ್ಯ ಪ್ರತಿಫಲ ನೀಡಲು ಮಾತ್ರ ಮೀನಮೇಷ . ಶಾಸ್ತ್ರಿಗಳಿಗೆ ಇದರ ಅನುಭವ ಬೇಕಾದಷ್ಟು ಆಗಿದೆ . ಉಳ್ಳವರು ಮಾತು ತಪ್ಪುವುದು ಹೆಚ್ಚು ಎಂಬುದೂ ವೇದ್ಯವಾಗಿದೆ . ಅವರ ರೋಚಕ ಅನುಭವಗಳನ್ನು ಬರಹದಲ್ಲಿ ಭಟ್ಟಿ ಇಳಿಸುತ್ತಿದ್ದಾರೆ .ಕೆಲವು ತುಣುಕುಗಳ ಸ್ಕ್ರೀನ್ ಶಾಟ್ ಇದಕ್ಕೆ ಸೇರಿಸಿದ್ದು ವಿವರಕ್ಕಾಗಿ  ಅವರ ಪುಸ್ತಕಕ್ಕೆ ಕಾಯೋಣ . 

ಇವರ ಕುಟುಂಬದವರಿಗೆ  ಒಂದು ಫೈನಾನ್ಸ್ ಕಂಪನಿ ಯಿಂದ ಇವರಿಗೆ ಬರಬೇಕಿದ್ದ ಹಣ ಮಾಜಿ ಎಂ ಎಲ್ ಎ  ಶ್ರೀ ರಾಮ ಭಟ್ ಅವರ ಮಧ್ಯಸ್ಥಕೆಯಿಂದ ಸಿಕ್ಕಿದಾಗ ಅದನ್ನು ವಿವೇಕಾನಂದ ವಿದ್ಯಾ ಸಂಸ್ಥೆಗೇ ಕೊಟ್ಟರು .ಮಗಳ ಮದುವೆಯ ದಿನ ದೊಡ್ಡ ಮೊತ್ತವೊಂದನ್ನು ಇದೇ ಉದ್ದೇಶಕ್ಕಾಗಿ ನೀಡಿ ದ  ಇವರು ನಾವು ಆಡಂಬರಕ್ಕೆ ಮಾಡುವ ಮೊತ್ತದ ಒಂದು ಪಾಲು ಬಡ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಿದರೆ ಅದಕ್ಕಿಂತ ಪುಣ್ಯ ಬೇರೆ ಏನಿದೆ ಎನ್ನುವರು .  ಉರಿಮಜಲು ರಾಮ ಭಟ್ ಅವರ ಮೇಲೆ ಅವರಿಗೆ ಅತೀವ ಗೌರವ ಮತ್ತು ಅಭಿಮಾನ 

ಇನ್ನು ಅನೀರಿಕ್ಷಿತವಾಗಿ  ಸಂಕಷ್ಟದಲ್ಲಿ ಸಿಲುಕಿ ಕೊಂಡ ಎಷ್ಟೋ ಕುಟುಂಬಗಳಿಗೆ ಅವರು ಧನ ಸಹಾಯವನ್ನು  ಸಮಾನ ಮನಸ್ಕರೊಂದಿಗೊಡಗೂಡಿ ಒಟ್ಟು ಹಾಕಿ ಕೊಟ್ಟಿರುವರು . ಅವರು ಇದರಲ್ಲಿ ಪ್ರಚಾರ ಪಡೆಯ ಬಯಸರು ;ಆದರೂ ಇತರರು  ಸತ್ಕಾರ್ಯ ಕ್ಕೆ ಪ್ರಚೋದನೆ ಪಡೆಯಲಿ ಎಂಬ ಉದ್ದೇಶದಿಂದ ಬರೆಯುತ್ತಿದ್ದೇನೆ .