ಬೆಂಬಲಿಗರು

ಬುಧವಾರ, ಆಗಸ್ಟ್ 4, 2021

ಉಕ್ಕಿನಡ್ಕ

                                 ಉಕ್ಕಿನಡ್ಕ 

ವಿಟ್ಲ ಕಾಸರಗೋಡು ಮಾರ್ಗದಲ್ಲಿ ಮೊದಲು ಅಡ್ಯನಡ್ಕ ಬರುತ್ತದೆ .ಆಮೇಲೆ ಅಡ್ಕಗಳ  ಸಾಲು .ಸಾರಡ್ಕ ,ಪೆಲತ್ತಡ್ಕ ,ಇಡ್ಯಡ್ಕ,ಪಿಲ್ಕಿನಡ್ಕ  ,ಉಕ್ಕಿನಡ್ಕ ,ಬನ್ಪುತ್ತಡ್ಕ ,ಪಳ್ಳತಡ್ಕ ,ಬದಿಯಡ್ಕ  ಹೀಗೇ ಅಡ್ಕಗಳನ್ನು ನೋಡಿ ಯಾರೋ ಒಂದು ಕಡೆ ನಿಂತು ಏತಡ್ಕ !(ಎಷ್ಟು ಅಡ್ಕಗಳು! )ಎಂದು ಉದ್ಗರಿಸಿದ ತಾಣ  ಯೇತಡ್ಕ  ಆಯಿತು ಎಂದು ಪ್ರತೀತಿ . 

                 ಪೆರ್ಲ ದಿಂದ  ಎರಡು ಕಿಲೋಮೀಟರ್ ದೂರದಲ್ಲಿ ಉಕ್ಕಿನಡ್ಕ ಆರಂಭ .ನಡೆದು ಕೊಂಡು ಹೋಗುವಾಗ ಆಯುರ್ವೇದ ಗಿಡ ಮೂಲಿಕೆಗಳ  ಮತ್ತು ಔಷಧಿಗಳ ಪರಿಮಳ ಮೂಗಿಗೆ ಬಿದ್ದರೆ ಜಾಗ ತಲುಪಿತು ಎಂದು  ಕಣ್ಣು ಮುಚ್ಚಿ ಕೊಂಡರೂ ಹೇಳ ಬಹುದು  .ಅದು ವೈದ್ಯ ನಾರಾಯಣ ಭಟ್ಟರ ಪ್ರಸಿದ್ಧ ಸಹಸ್ರಾಕ್ಷ ವೈದ್ಯ ಶಾಲಾ . ಆಸ್ಪತ್ರೆಗೆ ತಾಗಿ ಅವರ ಮನೆ ಕೂಡಾ ಇತ್ತು . ಅಜ್ಜನ ಮನೆಯಿಂದ ಹಲವು ಬಾರಿ ರೋಗ ಲಕ್ಷಣ ಹೇಳಿ ಅಲ್ಲಿಂದ ಔಷಧಿ ಕೊಂಡು ಹೋದದ್ದು ಇದೆ . ಔನ್ಸ್ ಕುಪ್ಪಿಯಲ್ಲಿ ಅರಿಷ್ಟ ಮತ್ತು ಕಾಗದದ ಕಟ್ಟಿನಲ್ಲಿ  ಚೂರ್ಣ .ಚೂರ್ಣ ಜೇನು ತುಪ್ಪದಲ್ಲಿ ಹಾಕಿ ತಿನ್ನುವುದು ಆದರೆ ನಮಗೆಲ್ಲಾ ಸ್ವಲ್ಪ ರುಚಿ ನೋಡುವ ಅಸೆ . 

ಸ್ವಲ್ಪ ಮುಂದೆ ನಡೆದರೆ ವಶಿಷ್ಟಾಶ್ರಮ ಶಾಲೆ . ಬೋಳು ಅಡ್ಕದಲ್ಲಿ ಗಿಡ ಮರಗಳ ನಡುವೆ ಪ್ರಶಾಂತವಾದ ಓಯಸಿಸ್ ,ಶಾಲೆ ಅನ್ವರ್ಥ ವಾಗಿ ಆಶ್ರಮದಂತೆ ಇತ್ತು . ಬಹಳ ಪ್ರಸಿದ್ದವಾದ ಶಾಲೆ . ಹಿಂದೆ ಯಕ್ಷಗಾನದ ಘಟಾನುಘಟಿಗಳು ಕೂಡುತ್ತಿದ್ದ ಸ್ಥಳ .ನನ್ನ ಮಾವನ ಮಕ್ಕಳು ಇಲ್ಲಿಗೇ ಹೋಗುತ್ತಿದ್ದು ,ಕೆಲವೊಮ್ಮೆ ನಾವೂ ಅತಿಥಿ ವಿದ್ಯಾರ್ಥಿಗಳಾಗಿ ಅವರೊಂದಿಗೆ ಹೋಗಿ ತರಗತಿಯಲ್ಲಿ ಕುಳಿತು ಕೊಳ್ಳುತ್ತಿದ್ದೆವು .. 

                               



                    ಅಲ್ಲಿಂದ ಮುಂದೆ ಕಾಸರಗೋಡು ದಿಕ್ಕಿನಲ್ಲಿ ನಡೆದರೆ ಬಲಬದಿಯಲ್ಲಿ  ರಾಮರಾಯ ಪೈಗಳ ಅಂಗಡಿ  ಕಮ್ ಪೋಸ್ಟ್ ಆಫೀಸ್ ಕಮ್ ಮನೆ . (ಪೆರ್ಲದಿಂದ ಬದಿಯಡ್ಕದ ವರೆಗೆ ಯಾರಾದರೂ ಪೈಗಳು ಇದ್ದರೆ ಬದಲಿ ನಿರೂಪಿತರಾಗುವ ವರೆಗೆ ಬಳ್ಳಂಬೆಟ್ಟು ಮೂಲದವರು ಎಂದು ತಿಳಿದುಕೊಳ್ಳಬಹುದು ) ಅದರ ಎದುರುಗಡೆ ಉಕ್ಕಿನಡ್ಕ ಬಸ್ ಸ್ಟಾಪ್ .. ರಸ್ತೆ ದಾಟಿ ಎಡ  ಬದಿಗೆ ಹೋದರೆ  ಗುತ್ತು ಗುರುವಾರೆ ಗೆ ಹೋಗುವ ಮಣ್ಣಿನ ರಸ್ತೆ .  ರಸ್ತೆ ಉಗಮದಲ್ಲಿ ಪಾಟಾಳಿ ಮಾಸ್ಟರ ಮನೆ. 

ಕಾಸರಗೋಡು ರಸ್ತೆಯಲ್ಲಿ ಸ್ವಲ್ಪ ಮುಂದೆ ಹೋದರೆ ಬಲ ಬದಿಯಲ್ಲಿ ಸೇಕ್ರೆಡ್ ಹಾರ್ಟ್ ಚರ್ಚ್ ,ಇನ್ನೂ ಮುಂದೆ ಹೋದರೆ ಬನ್ಪುತಡ್ಕ ಏಲ್ಕಾನ ರಸ್ತೆ .ಕಾಸರಗೋಡು ಮೆಡಿಕಲ್ ಕಾಲೇಜಿಗೆ ಹೋಗಲು ಸುಂದರವಾದ ಚುತುಷ್ಪದ ನಿರ್ಮಾಣ ಆಗಿದೆ .. 


Kasaragod Medical College, Ukkinadka - Home | FacebookKasaragod govt medical college to start functioning in 2017 |  coastaldigest.com - The Trusted News Portal of India

ಬಲಬದಿಯಲ್ಲಿ  ರಘುನಾಥ ಪೈಗಳ ಮನೆ ಮತ್ತು ಅಂಗಡಿ ಇತ್ತು . 

         ಗುತ್ತು ಗುರುವಾರೆ ರಸ್ತೆಯಲ್ಲಿ ಪೂರ್ವಕ್ಕೆ ಹೋಗುವಾಗ ಬಲಬದಿಯಲ್ಲಿ ದಂಬೆ ಮೂಲೆ ,ದೂರದಲ್ಲಿ ಬಳ್ಳಂಬೆಟ್ಟು ಕಾಣುವದು . ಸ್ವಲ್ಪ ಮುಂದೆ ನಡೆದರೆ ಎಡ ಬದಿಯಲ್ಲಿ ನನ್ನ ಅಜ್ಜಿ ಮನೆ ಗುರುವಾರೆ .ಅಜ್ಜ  ಕೃಷ್ಣ ಭಟ್ ಪ್ರಸಿದ್ಧ ಜ್ಯೋತಿಷಿ ಆಗಿದ್ದರು .ಸಣ್ಣ ಪ್ರಾಯದಲ್ಲಿ ತೀರಿ ಕೊಂಡ ಅವರನ್ನು ನಾನು ನೋಡಿಲ್ಲ . ನೇರ ಹೋದರೆ ನೆಲ್ಲಿಕುಂಜೆ ಗುತ್ತು .ನನ್ನ ದೊಡ್ಡಪ್ಪ ಸಿನೆಮಾ ನಟ ಗಣಪತಿ ಭಟ್ ಅವರ ಪತ್ನಿ ;ನನ್ನ ದೊಡ್ಡಮ್ಮನ ತವರು ಮನೆ .ಅವರ ತಂದೆ ಗೋವಿಂದ ಭಟ್ ಪ್ರಸಿದ್ಧ ಪಿಟೀಲು ವಾದಕರೂ ,ಸಂಗೀತ ಅಧ್ಯಾಪಕರೂ ಆಗಿದ್ದು ,ನಮ್ಮ  ಭಾಗದಲ್ಲಿ ಶಾಸ್ತ್ರೀಯ ಸಂಗೀತ ದ  ಪ್ರಸರಣ ಮಾಡಿದವರಲ್ಲಿ ಅಗ್ರಗಣ್ಯರು .ಅವರ ಮಕ್ಕಳು ಮೃದಂಗ ,ವೇಣು ಮತ್ತು ಮೋರ್ಸಿಂಗ್ ನಲ್ಲಿ ಒಬ್ಬೊಬ್ಬರು ಪ್ರವೀಣರಾಗಿದ್ದು ಕಚೇರಿ ನಡೆಸಲು ಹೊರಗಿನಿಂದ ಪಕ್ಕ ವಾದ್ಯದವರ ಅಗತ್ಯ ಇರಲಿಲ್ಲ . ಶೇಣಿ ಗೋಪಾಲ ಕೃಷ್ಣ ಭಟ್ಟರು ತಮ್ಮ ಮೊದಲನೇ ಹರಿಕತೆಗೆ ಅವರೇ ಪಕ್ಕ ವಾದ್ಯ ನುಡಿಸಿ ತನ್ನ ಸಂಗೀತ ಜ್ಞಾನ ಕೊರತೆಯನ್ನು ಮುಚ್ಚಿ ಹಾಕಿದರು ಎಂದು ಹೇಳಿಕೊಂಡಿದ್ದಾರೆ . 

ಅಲ್ಲೇ ಪಕ್ಕ ಕಂಗಿಲದಲ್ಲಿ ಒಬ್ಬರು ಪ್ರಸಿದ್ಧ ಬೋನ್ ಸೆಟ್ಟರ್(ಮೂಳೆ ವೈದ್ಯರು ) ಶಾಮ ಭಟ್ ಇದ್ದು ನಾನು ಬಾಲ್ಯದಲ್ಲಿ ಬಿದ್ದು ಮೊಣ ಕೈ ಫ್ರಾಕ್ಚರ್ ಆದಾಗ ಸರಿ ಪಡಿಸಿದ್ದರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ