ಬೆಂಬಲಿಗರು

ಗುರುವಾರ, ಆಗಸ್ಟ್ 26, 2021

ಕಾಂಪೌಂಡರ್ ನಾರಾಯಣ ಮಯ್ಯರು

 ಕಾಂಪೌಂಡರ್  ನಾರಾಯಣ ಮಯ್ಯರು  


                                       ಹಿಂದೆ  ಡಾಕ್ಟರರಿಗೆ  ಬಲಗೈ ಆಗಿ ಕಂಪೌಂಡರ್ ಇರುತ್ತಿದರು . ಇವರು ಈಗಿನ ಫಾರ್ಮಸಿಸ್ಟ್ ಗಳಂತೆ ಅಲ್ಲ . ವೈದ್ಯರಿಂದಲೇ ತರಬೇತು ಹೊಂದಿದವರು . ಆಗಿನ ಕಾಲದಲ್ಲಿ ನೀರು ಮದ್ದು ಅಥವಾ ಮಿಕ್ಸ್ಚರ್
ಬಳಕೆ ಅಧಿಕ ಇತ್ತು .ಗ್ಯಾಸ್ ಸಮಸ್ಯೆಗೆ ಕಾರ್ಮಿ ನೇಟಿವ್ ,ಭೇದಿಗೆ ಪೆಕ್ಟಿನ್ ಕೆವೊಲಿನ್ ಇತ್ಯಾದಿ ಇವುಗಳಲ್ಲಿ ಎರಡು ತರಹ . ಮಿಕ್ಸ್ಚರ್ ಅಥವಾ ಮಿಶ್ರಣದ ಘನ ರೂಪದ ಔಷಧಿ ವಸ್ತುಗಳನ್ನು ಸರಿಯಾದ ದಾಮಾಶಯದಲ್ಲಿ ಅರೆದು ನೀರು ಸೇರಿಸಿ ಇಡುವುದು ಒಂದಾದರೆ  ,ರೆಡಿ ಮೇಡ್ ಮಿಕ್ಸ್ಚರ್  ಕಾನ್ಸನ್ಟ್ರೇಟ್ ದ್ರಾವಣಕ್ಕೆ ನೀರು ಸೇರಿಸಿ ಹದ ಮಾಡುವುದು .(ರಸ್ನಾ ಶರ್ಬತ್ ಮಾಡಿದಂತೆ ). ಇನ್ನು ಮಾತ್ರೆಗಳನ್ನು ಕಟ್ಟುವುದು ,ಔಷಧಿ ಕೊಡುವುದು ಇತ್ಯಾದಿ ಕರ್ತವ್ಯ ಕಂಪೌಂಡರ್ ಮಾಡುವರು . ಗಾಯಕ್ಕೆ ಟಿಂಕ್ಚರ್ ಅಯೋಡೀನ್ ಮತ್ತು ಇತರ ಚರ್ಮ ವ್ಯಾಧಿಗಳಿಗೆ ಜಂಶನ್ ವಯಲೆಟ್ ಹಚ್ಚುವುದು 

ವೈದ್ಯರು ಮತ್ತು ಇವರ ಸಂಬಂಧ  ಕ್ರಿಯಾತ್ಮಕ (ಡೈನಾಮಿಕ್ ).ಕಂಪೌಂಡರ್ ಬಹು ಶ್ರುತರು ,  ಶತಾವಧಾನಿಗಳ ಹಾಗೆ .ಏಕ ಕಾಲಕ್ಕೆ ರೋಗಿ ವೈದ್ಯರ ಬಳಿ ಹೇಳುವುದನ್ನು ಕೇಳಿಕೊಂಡು ಔಷಧ ರೆಡಿ ಮಾಡುವುದು ಒಂದು ಕಡೆ ,ವೈದ್ಯರ ಪರಿಶೀಲನೆ ಕಳೆದು ಬರುವ ವ್ಯಕ್ತಿಗೆ ಔಷಧಿ ಕೊಡುವದು ,ಕೆಲವು ಕಡೆ ಫೀಸು ಸಂಗ್ರಹ ಮಾಡುವುದನ್ನು ಲೀಲಾ ಜಾಲವಾಗಿ ಮಾಡುವರು . ದೇವಾಲಯದಲ್ಲಿ ಮುಖ್ಯ ಮೂರ್ತಿ ಯಾರದೇ ಇದ್ದರೂ ಗಣಪತಿ  ದರ್ಶನ ಮಾಡಿಯೇ ಬರುವಂತೆ ಇವರ ಮೂಲಕವೇ ಒಳ ಹೊರ ಹೋಗುವುದು . ಅಪರೂಪಕ್ಕೆ ವೈದ್ಯರು ಇಲ್ಲದಿದ್ದರೆ ಸಣ್ಣ ಸಣ್ಣ ಕಾಯಿಲೆಗೆ ಇವರೇ ಮದ್ದು ಕೊಡುವರು . 

ಒಟ್ಟಿನಲ್ಲಿ ವಕೀಲರಿಗೆ ಗುಮಾಸ್ತರು ಇದ್ದ ಹಾಗೆ . ಹಿರಿಯ ವಕೀಲರ ಗುಮಾಸ್ತರು ಕಿರಿಯ ವಕೀಲರಿಗೆ ,ಕೆಲವೊಮ್ಮೆ ಹಿರಿಯರಿಗೆ ಕೂಡಾ ಲಾ ಪಾಯಿಂಟ್ ಹೇಳಿ ಕೊಡುತ್ತಿದ್ದರು . ಕೇಸ್ ಮೇಲೆ ಬೀಳ ಬಹುದೋ ಇಲ್ಲವೊ ಎಂಬುದರ ಬಗ್ಗೆ ,ಈಗಿನ ಜಡ್ಜರ ಬಗ್ಗೆ ಕಕ್ಷಿಗೆ ಮಾಹಿತಿ ನೀಡುವರು . 

ಶ್ರೀ ನಾರಾಯಣ ಮೈಯ್ಯರು ಪುತ್ತೂರಿನ ಡಾ ಸುಂದರ ರಾಯರ ಕಂಪೌಂಡರ್ ಆಗಿ ಪ್ರಸಿದ್ದರಾಗಿದ್ದರು .ಮೂಲತಃ ಪಾಣೆಮಂಗಳೂರು ನರಹರಿ ಬೆಟ್ಟದ ದೇವಾಲಯದಲ್ಲಿ ಸೇವೆ ಮಾಡಿಕೊಂಡಿದ್ದ ಇವರನ್ನು  ಸುಂದರ ರಾಯರು ತಮ್ಮ ಬಳಿ ಸೇರಿಸಿ ಕೊಂಡರು . ಆಮೇಲೆ ಅವರ ಮಗ ನಾರಾಯಣ ರಾಯರು ಮತ್ತು ಮೊಮ್ಮಗ ಸತ್ಯಸುಂದರ್ ವರೆಗೆ  ಪ್ರಾಮಾಣಿಕರಾಗಿ ಸೇವೆ ಸಲ್ಲಿಸಿದರು .ಎ ಪಿ ಸುಬ್ಬಯ್ಯ ಸುಂದರ ರಾವ್ ,ಸಹೋದರ ಸದಾಶಿವ ರಾವ್ ಅವರ  ಆಪ್ತ ವರ್ಗಕ್ಕೆ ಸೇರಿದವರು . ಅವರ ಕೃಷಿ ಭೂಮಿಯಲ್ಲಿ ಸ್ವಲ್ಪ ಭಾಗ   ಮಯ್ಯರಿಗೆ  ಗೇಣಿಗೆ (?)ಕೊಟ್ಟಿರಬೇಕು .. ಮುಂದೆ ಅವರ ಕುಟುಂಬ ಬೆಳೆದು ಅಲ್ಲಿ ಮುಂದುವರಿದಿರುವರು . 

ಮಯ್ಯರ  ಪುತ್ರ ಶ್ರೀನಿವಾಸ ಮಯ್ಯರು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಷಯದಲ್ಲಿ ಪ್ರಗಲ್ಭರಾಗಿದ್ದು  ಮಂಗಳೂರಿನ  ತಮ್ಮದೇ ಹೆಸರಿನ ತಾಂತ್ರಿಕ ವಿದ್ಯಾಲಯದಲ್ಲಿ ಡೀನ್ ಆಗಿದ್ದಾರೆ .ಅವರ ತಂದೆಯವರ  ಭಾವ ಚಿತ್ರ ಬೇಕು ಎಂದಾಗ  ತಮ್ಮ ಬಿಡುವಿಲ್ಲದ ದಿನಚರಿಯಲ್ಲಿಯೂ ಬೇಸರಿಸದೆ ಕಳುಹಿಸಿದ್ದಾರೆ . 

ತೆರೆಯ ಮರೆಯ ಇಂತಹ ಸಾಧಕರನ್ನು ಮತ್ತು ಸೇವಕರನ್ನು ಸಮಾಜ ಮರೆಯ ಬಾರದು . 

(ಚಿತ್ರದಲ್ಲಿ  ನಾರಾಯಣ ಮಯ್ಯ ,ಮಗ ಶ್ರೀನಿವಾಸ ಮಯ್ಯ ಮತ್ತು ನಾರಾಯಣ ಮಯ್ಯರು ಕುಳಿತು ಕೊಳ್ಳುತ್ತಿದ್ದ ಕೋಣೆ )





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ