ಬೆಂಬಲಿಗರು

ಸೋಮವಾರ, ಆಗಸ್ಟ್ 23, 2021

ನಮ್ಮ ಹಳ್ಳಿಯೂರ ನಮಗ ಪಾಡ

              ನಮ್ಮ ಹಳ್ಳಿ ಯೂರ ನಮಗ ಪಾಡ


Betageri Krishna Sharma | Discography | DiscogsBalappa Hukkeri - Wikipedia'ಆನಂದ ಕಂದ ' ಎಂಬ ಕಾವ್ಯ ನಾಮದಿಂದ ಪ್ರಸಿದ್ದರಾದ ಬೆಟಗೇರಿ ಕೃಷ್ಣ ಶರ್ಮ (೧೯೦೦-೧೯೮೨)ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲಿ ಕೈಯಾಡಿಸಿದ್ದರು .ಅವರ ಜಾನಪದ ಸೊಗಡಿನ ಕವನಗಳು ಬಹಳ ಜನಪ್ರಿಯ . ಬಾಳಪ್ಪ ಹುಕ್ಕೇರಿ (೧೯೧೧-೧೯೯೨)ಉತ್ತರ ಕರ್ನಾಟಕದ ಪ್ರಸಿದ್ಧ ಹಾಡುಗಾರರು ; ಅಜಾನುಬಾಹು ,ತಲೆಯಲ್ಲಿ ದೊಡ್ಡ ಮುಂಡಾಸು(ಕೆಲವೊಮ್ಮೆ ಗಾಂಧಿ ಟೋಪಿ ) . ನಾನು ಹುಬ್ಬಳ್ಳಿಯಲ್ಲಿ ಇದ್ದಾಗ ಬಾಳಪ್ಪ ಹುಕ್ಕೇರಿ ಯವರ ಗಾಯನ ನಮ್ಮ ಕೊಲೇಜಿನಲ್ಲಿಯೂ ,ನಗರದ ಇತರೆಡೆಯೂ ಕೇಳುವ ಭಾಗ್ಯ ಒದಗಿತ್ತು .ಯಾವುದೇ ಕಾರ್ಯಕ್ರಮ ಇರಲಿ ಅವರು ಬೇಡಿಕೆಯ ಕಲಾವಿದರು ಆಗಿದ್ದರು .ಭಾವ ಪೂರ್ಣ ಗಾಯನ .

ಕೃಷ್ಣ ಶರ್ಮ ಮತ್ತು ಬಾಳಪ್ಪ ಹುಕ್ಕೇರಿ ಇಬ್ಬರೂ ಬೆಳಗಾವಿ ಜಿಲ್ಲೆಯವರು . ಕೃಷ್ಣ ಶರ್ಮ ಭಾರತದ ಸ್ವಾತಂತ್ರ್ಯ ಪ್ರಾಪ್ತಿ, ಕರ್ನಾಟಕತ್ವದ ಜಾಗೃತಿ ಮತ್ತು ಕರ್ನಾಟಕ ಏಕೀಕರಣಗಳಿಗೆ ತಮ್ಮ ಶಕ್ತಿ ಸರ್ವಸ್ವವನ್ನೂ ಧಾರೆಯೆರೆದು ದುಡಿದ ಕನ್ನಡ ಸಾಹಿತಿಗಳಲ್ಲಿ ಅಗ್ರಗಣ್ಯರಾದರೆ,ಬಾಳಪ್ಪನವರು  ಗಮಕಿಯಾಗಿ ಈ ಉದ್ದೇಶಗಳಿಗೆ ತಮ್ಮ ಕೊಡುಗೆ ನೀಡಿದವರು .

ಆನಂದ ಕಂದರು ರಚಿಸಿ ಬಾಳಪ್ಪ ಹುಕ್ಕೇರಿ  ಪ್ರಸಿದ್ದ  ಪಡಿಸಿದ ಒಂದು  ಜಾನಪದ ರೂಪದ ಕವನ  ನಮ್ಮೂರೇ ನಮಗೆ  ಪಾಡ ಬೇಡಪ್ಪ  ಹುಬ್ಬಳ್ಳಿ ಧಾರವಾಡ .ಉತ್ತರ ಕರ್ನಾಟಕದ ಭಾಷಾ ಎಷ್ಟು ಚಲೋ ಅದಾ ನೀವು ನೋಡ್ರಲಾ.

ನಮ್ಮ ಹಳ್ಳಿ ಯೂರ ನಮಗ ಪಾಡ 

(ತಮ್ಮ ಹಳ್ಳಿಯ ಬಾಳು ಹೇಗೆ ಸುಖ ,ಅಲ್ಲಿಯ ನೈಸರ್ಗಿಕ ಸಂಪತ್ತು ,ಜನರು ಹೇಗೆ ಪೇಟೆಗಿಂತ ಮೇಲು ಎಂಬುದರ ವರ್ಣನೆ)

-ಪಲ್ಲವಿ-
ನಮ್ಮ ಹಳ್ಳಿಯೂರಽ ನಮಗ ಪಾಡಽ-
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!

(ನಮ್ಮೂರೇ ನಮಗೆ ಸಾಕು ಪೇಟೆ ಯಾಕೆ ಬೇಕು ಎಂಬ ಅರ್ಥ )


ಊರಮುಂದ ತಿಳಿನೀರಿನ ಹಳ್ಳಽ-
ಬೇವು ಮಾವು ಹುಲಗಲ ಮರಚೆಳ್ಳಽ-
ದಂಡಿಗುಂಟ ನೋಡು ನೆಳ್ಳಽ ನೆಳ್ಳಽ-

ನೀರ ತರುವಾಗ ಗೆಣತ್ಯಾರ ಜೋಡಽ. . .
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ—


ನಮ್ಮ ಹಳ್ಳ ಕಾಶಿಯ ಹಿರಿಹೊಳಿಯ
ಒಮ್ಮ್ಯಾದರು ಬತ್ತಿಲ್ಲದು ತಿಳಿಯ-
ಬದಿಯ ತ್ವಾಟಗಳ ಬೆಳಸಿಗೆ ಕಳಿಯ-

ಹ್ಯಾಂಗ ಕೊಡತೈತಿ ಬಂದೊಮ್ಮೆ ನೋಡಽ. . .
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!


ಪಡಿವಿಯ ತುಂಬಾ ಕಾಳಿನ ಚೀಲಾ-
ನಡುಮನಿಯೊಳಗಽ ಗಳಿಗಿಯ ಸಾಲಾ-
ತುಂಬಿ ಸೂಸತಾವ ಗಡಿಗಿಯಡಕಲಾ-

ಖಾಲಿ ಇಲ್ಲವ್ವಾ ಒಂದೂ ಮನಿ-ಮಾಡಽ. . .
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!


ಹೈನದೆಮ್ಮಿ ನೋಡ ಹಾಲ ಸಮುದರಾ-
ಎಷ್ಟು ತಿನ್ನಾಕಿ ನೀ ಕೆನಿಕೆನಿ ಮಸರಾ-
ಮಜ್ಜಿಗಿ ಒಯ್ತಾರ ಊರಂತೂರಾ-

ಸೂಲಕ್ಕೊಂದು ಬಂಗಾರ್‌ಬಳಿ ಜೋಡಽ
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!


ಹೂಡುವೆತ್ತು ಹಕ್ಕಿಗೆ ಸಿಂಗಾರಾ-
ತಿಂದ ರಿಣಾ ತೀರಸತಾವ ಪೂರಾ-
ಎತ್ತು ಅಲ್ಲ ನಮ್ಮನಿ ದೇವ್ರಾ-

ಬಸವಣ್ಣಿರದಂಥಾ ಮನಿಯದು ಕಾಡಽ
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!


ಗರಡಿಯ ಹುಡುಗರ ಹುರುಪು ಅದೇನಽ
ಕರಡಿ-ಹಲಿಗಿಮಜಲಿನ ಮೋಜೇನಽ-
ಬಯಲಾಟದ ಸುಖಕಿಲ್ಲ ಸಮಾನ-

ಕೇಳಿಲ್ಲೇನಽ ಲಾವಣಿ ಗೀಗೀ ಹಾಡಽ. . .
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!


ರಾಯ ಅರಸು ನಾನಾತಗ ರಾಣಿ-
ನಮ್ಮ ಪ್ರೀತಿಯೊಳು ಸ್ವಲ್ಪೂ ಕಾಣಿ-
ಬಂದೆ ಇಲ್ಲ ನೋಡ ನನ್ನ ತವರಾಣಿ-

ನಮ್ಮ ಸಂಸಾರ ಜೇನಿನ ಗೂಡಽ
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!


ಪ್ಯಾಟಿಯೂರಿನಾ ಬಣ್ಣದ ಹೆಣ್ಣಽ-
ಮಾಟ ಮಾಡದಲೆ ಬಿಟ್ಟಾವೇನಽ-
ನಮ್ಮ ರಾಯ ನಮಗ ದಕ್ಕ್ಯಾನೇನಽ-

ಪ್ಯಾಟೀ ಊರಂಬ ಸುದ್ದೀ ತಗಿಬ್ಯಾಡಽ. . .
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!


ಊರಕಾವಲಿಗೆ ಸೀಮಿಯ ಭರಮಾ-
ಪಾರೆ ಮಾಡತಾನ ಶ್ರೀ ಬಲಭೀಮಾ-
ಮೀರಿದ ದೇವತಿ ಗುಡಿಯೆಲ್ಲಮ್ಮಾ-

ಇವರಽ ಕರುಣಾ ತಪ್ಪಿದರೆಲ್ಲಾ ಕೇಡಽ. . .
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!

* * *

ನಮ್ಮ ಹಳ್ಳಿ ನಮಗ ಬಲೆ ಪಾಡಽ. . .
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!


ಇನ್ನೊಂದು ಹಾಡು ನಾ ಸಂತಿಗಿ ಹೊಗೇನಿ 

(ಸಂತೆಗೆ ಹೋಗುವ ಯುವಕನಿಗೆ ಬೆಣ್ಣೆ ಮಾರಲು ತರುವ ಸುಂದರಿಯ ಆಕರ್ಷಣೆ .ಇದರ ಸುಂದರ ವಿವರಣೆ )

 

-ಪಲ್ಲವಿ-
ನಾ ಸಂತಿಗೆ ಹೋಗಿನ್ನಿ- ಆಕಿ ತಂದಿದ್ದಳೋ ಬೆಣ್ಣಿ;
ಹಿಂಡುಹೆಣ್ಣಿನಾಗಕಿಯs ಸರಿ ಒಂದು ಸವಿಸಕ್ಕರಿ ಕಣ್ಣಿ!
ನಾ ಸಂತಿಗೆ ಹೋಗಿನ್ನಿ- ಆಕಿ- ತಂದಿದ್ದಳೋ ಬೆಣ್ಣಿ!


ತೆನಿ ತಿರಿವಿದ ಟೋಪಿನ ಸೀರಿ-ಅದ-
ರಂಚಿಗೆ ರೇಶಿಮಿ ಭಾರಿ. . .
ಬಿಸಿಲು ಬಿದ್ದ ಕಡೆ ಭಂಗಾರದsಗೆರಿ
ಮೈಯಾಗ ಕುಪ್ಪಸ ಹೂ ಜರತಾರಿ . . . .
ನಾ ಸಂತಿಗೆ ಹೋಗಿನ್ನಿ- ಆಕಿ- ತಂದಿದ್ದಳೋ- ಬೆಣ್ಣಿ!

ಮೂಗಬಟ್ಟು ಹಾಕಿದಕಿ ಮೂಗಾ-ಕೊರ-
ದ್ಹಚ್ಚಿದ್ಹಾಂಗ ಮಾರೀ ಮ್ಯಾಗs,
ಹರಳೀನ ಝಮಿಕಿ ಕಿವಿಯಾಗs-
ತೂಗ್ಯಾಡಿ ಸುರಿಸತಿತ್ತೊ ಸೊಬಗಾ . . . .
ನಾ ಸಂತಿಗೆ ಹೋಗಿನ್ನಿ- ಆಕಿ- ತಂದಿದ್ದಳೋ ಬೆಣ್ಣಿ!

ಮುಂಗುರುಳು ಹಾರ್‍ಯಾಡುವ ಹಣಿ-
ಚೆಲ್ವಿಕಿಯ ಖಣೀ-ನೋಡು ಥೇಟಾ . . . .
ತಂಬುಲದ ಚೆಂದುಟೀ ಅರಳಿಸಿ ಬಿಟ್ಟರ
ಆ ನಗಿ ಮಲ್ಲಿಗಿತ್ವಾಟಾ-
ಕೊರಳ ಮಣೀ-ಕೆಂಪಾದ ಕೆನ್ನಿ ಕುಣಿ
ಕರದು ಕೈಯಮಾಡಿ ಕೊಟ್ಟಿತಿ ಕಾಟಾ . . . .
ನಾ ಸಂತಿಗೆ ಹೋಗಿನ್ನಿ- ಆಕಿ- ತಂದಿದ್ದಳೋ ಬೆಣ್ಣಿ!


ಸುಳಿಗಾಳಿ ಸರಿಸತಿತ್ತೊ ಸೆರಗಾ-
ಏನ್ಹೇಳ್ಳಿ ತುಂಬಿದೆದಿ ಮೆರಗಾ . . . .
ಪರಿವಿಲ್ಲ ಸರಿದ ಸೆರಗಿಂದಾ-ನನ-
ಗೇರಿತಾಗ ಏನೊ ಸುಂದಾ . . . .
ನಾ ಸಂತಿಗೆ ಹೋಗಿನ್ನಿ- ಆಕಿ- ತಂದಿದ್ದಳೋ ಬೆಣ್ಣಿ!

ಕಣ್ಣೆತ್ತ ನೋಡತಿತ್ತೋ-ಮನಸೆತ್ತ ಓಡತಿತ್ತೋ!
ಬಗಿಯೇನೊ ಹಾಡತಿತ್ತೋ-ಬೆಣ್ಣಿಗಡಗಿ ಮಾತ್ರ ಮುಂದಿತ್ತೋ
ನೋಡಿದ ನಿಟ್ಟಿಗೆ ಮಿಂಚಿನ ಕೋಲಾ
ತಿಳೀದ್ಹಾಂಗ ನನಗಾತೋ ಸೋಲಾ . . . .

ನಾ ಸಂತಿಗೆ ಹೋಗಿನ್ನಿ- ಆಕಿ- ತಂದಿದ್ದಳೋ ಬೆಣ್ಣಿ!

ಹುಕ್ಕೇರಿಯವರ ಗಾಯನ ಸವಿಯಲು ಕೆಳಗಿನ ಲಿಂಕ್  ಅದುಮಿರಿ .(ಇದರಲ್ಲಿ ಹುಕ್ಕೇರಿಯವರು ಹಾಡಿದ ಇತರ ಕೆಲವು ಗೀತೆಗಳೂ ಇವೆ .

https://youtu.be/1-S5Pmj5zr0

 ನಾ ಸಂತಿಗಿ ಹೋಗಿನ್ನಿ ಹೋಲುವ ಒಂದು ಹಾಡು ಮಲಯಾಳದಲ್ಲಿ  ದಿ  ಕಲಾಭವನ್ ಮಣಿಯವರ ಸ್ವರದಲ್ಲಿ ಇದೆ .ಕನ್ನಡದ ಹುಡುಗನಿಗೆ ನವನೀತೆ ಚೆಲುವಿ ಆಕರ್ಷಣೆ ಆದರೆ ಇಲ್ಲಿ ಮೀನು ಮಾರುವ ಮೀನಾಕ್ಷಿ .                                                  ಅದರ ಲಿಂಕ್ https://youtu.be/NxuFKB5XPoE

 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ