ಬೆಂಬಲಿಗರು

ಸೋಮವಾರ, ಆಗಸ್ಟ್ 16, 2021

ಭಾಸ್ಕರ ಕೋಡಿಂಬಾಳ ಅವರ ಬುತ್ತಿಯೂಟ

 ಭಾಸ್ಕರ ಕೋಡಿಂಬಾಳ ಅವರ ಬುತ್ತಿಯೂಟ

ಮಿತ್ರ ಭಾಸ್ಕರ  ಕೋಡಿಂಬಾಳ ನನ್ನ ಮೇಜಿನ ಮೇಲೆ ಬುತ್ತಿಯೂಟ ಇಟ್ಟು ಹೋಗಿದ್ದರು . ಒಂದೇ ಉಸಿರಿಗೆ ಬುತ್ತಿ ಖಾಲಿಯಾಯಿತು ,ಅಮ್ಮ ಕಟ್ಟಿ ಕೊಟ್ಟ ಅನ್ನ ಮೊಸರಿನ ಹಾಗೆ .  ಯಾವುದೇ ಅತಿಶಯೋಕ್ತಿ ಯ  ಒಗ್ಗರಣೆ ಇಲ್ಲದ ಬಾಲ್ಯದ ನೆನಪುಗಳ ಈ ಸರಳ ನಿರೂಪಣೆ ತಾನೇ ಓದಿಸಿ ಕೊಂಡು ಹೋಯಿತು .ಹಿರಿಯರಾದ ಡಾ ನರೇಂದ್ರ ರೈ ಅವರ ಮುನ್ನುಡಿ ಮತ್ತು ವಕೀಲರ ಸಂಘದ ಅಧ್ಯಕ್ಷ ಮನೋಹರ ವಿ ಕೆ ಯವರ ಮುನ್ನುಡಿ ಕೃತಿಯ ಸ್ವಾರಸ್ಯ ಹೆಚ್ಚಿಸಿವೆ . ನಾನು ಪಂಡಿತನೂ ಅಲ್ಲ ,ಜ್ಯೋತಿಷಿಯೂ ಅಲ್ಲ .ಸಾಮಾನ್ಯ ಓದುಗನಾಗಿ ಹೇಳಬಲ್ಲೆ ,ಭಾಸ್ಕರ ಅವರಿಂದ ಇನ್ನೂ ಉತ್ತಮ ಕೃತಿಗಳನ್ನು ನಿರೀಕ್ಷಿಸ ಬಹುದು . ಅವರಿಗೆ ಜೀವನೋತ್ಸಾಹ ಇದೆ ,ಪ್ರಕೃತಿ ಪ್ರೇಮ ಇದೆ . ನಾಗರಿಕತೆಯ ಒಯ್ಲಿನಲ್ಲಿ (ಪ್ರವಾಹದಲ್ಲಿ )ಇರುತ್ತಲೂ ಹಿಂದೆ ಸವೆದ ಹಾದಿಯ ಮತ್ತು  ನಾವು ನಿಜಕ್ಕೂ ಹೋಗ ಬೇಕಾದ ದಿಕ್ಕಿನ ಬಗ್ಗೆ ಆಲೋಚಿಸುವ ಮನೋಸ್ಥಿತಿ ಇದೆ . 

ನಾನು ಗೆರೆ ಹಾಕಿದ ಕೆಲವು ಪಂಕ್ತಿಗಳನ್ನು ಉದ್ಧರಿಸುತ್ತೇನೆ .ವಕೀಲರು ನನಗೆ ಕಾಪಿ ರೈಟ್ ಉಲ್ಲಂಘನೆ ಗೆ ನೋಟೀಸ್ ಕಳುಹಿಸ ಲಾರರು ಎಂಬ ಧೈರ್ಯ ಇದೆ . 

ದಿನ ನಿತ್ಯ ಭೂಮಿಯು ಸೂರ್ಯನಿಗೆ ಗಿರಕಿ ಹೊಡೆಯುತ್ತಿದ್ದ ದೆಸೆಯಿಂದ ಉಂಟಾಗುತ್ತಿದ್ದ ಹಗಲು ರಾತ್ರಿ ಸಮಯ ಉಚಿತವಾಗಿ ಸಿಗುತ್ತಿದ್ದರಿಂದ ಅದು ಮಾತ್ರ ನನ್ನ ಸ್ವಂತದ್ದಾಗಿತ್ತು . 

ನಮ್ಮ ದಾರಿಯ ಎದುರಿಂದ ಬರುವವರು ವಾಚ್ ಕಟ್ಟಿ ಕೊಂಡಿದ್ದರೆ 'ಗಂಟೆಷ್ಟಾಯ್ತು 'ಎಂದು ಕೇಳಿಯೇ ಮುಂದೆ ಹೋಗುತ್ತಿದ್ದುದು .ಒಬ್ಬರಲ್ಲಿ ಗಂಟೆ ಕೇಳಿ ಹತ್ತಿಪ್ಪತ್ತು ಹೆಜ್ಜೆ ನಡೆದಾಗ ಇನ್ನೊಬ್ಬರು ವಾಚ್ ಕಟ್ಟಿದವರು ಎದುರಾದರೆ ಅವರಿಗೂ 'ಗಂಟೆ ಎಷ್ಟಾಯಿತು 'ಎಂಬ ಪ್ರಶ್ನೆ ಹಾಕುತ್ತಿದ್ದೆವು .ಇದು ಸಮಯ ತಿಳಿಯಲು ಅಲ್ಲ .ಎದುರಿಂದ ಬರುವವರನ್ನು ಮಾತನಾಡಿಸಲು . 

ಮಧ್ಯಾಹ್ನ ಬೇಗನೇ ಉದ್ದದ ಗಂಟೆ ಬಾರಿಸಿದಾಗ ಟಿಪ್ಪು ಸುಲ್ತಾನನ ಫಿರಂಗಿಯ ಮದ್ದು ಗುಂಡುಗಳಂತೆ ಶಾಲೆಯ ಬಾಗಿಲಿನಿಂದ ಹೊರ ಬಿದ್ದೆವು . 

ಹೀಗಿದ್ದರೂ ಮೇಸ್ಟ್ರುಗಳಿಗಾಗಿ ಶಾಲೆಗೆ ಹೋದ ನಾವು ದಿನ ನಿತ್ಯ ಪೆಟ್ಟು ತಿನ್ನುವುದು ,ಕಲಿಯದಿದ್ದ ನಮಗೆಲ್ಲಾ ಬಿಲ್ಕುಲ್ ಸರಿ ತೋರಲಿಲ್ಲ .. 

ನಮ್ಮ ಅಂತಿಮ ಪರೀಕ್ಷೆಯ ಫಲಿತಾಂಶದ ದಿನ 'ಪಾಸ್ ಫೈಲ್ 'ದಿನವಾಗಿತ್ತು .ಆ ದಿನ ಫಲಿತಾಂಶ ತಿಳಿದುಕೊಂಡು ಬರುವಾಗ ಪರಿಚಯದವರೆಲ್ಲರೂ ಕೇಳುತ್ತಿದ್ದ ಒಂದೇ ಪ್ರಶ್ನೆ ;ಪಾಸಾ ಫೈಲಾ '.ಈಗಿನಂತೆ' ಮಾರ್ಕೆಷ್ಟು 'ಎಂದು ಕೇಳುವವರು ಯಾರೂ ಇರಲಿಲ್ಲ . 

ಅಚ್ಯುತ ಮೇಷ್ಟ್ರು ಒಂದು ತಪ್ಪಿಗೆ ಒಂದು ಪೆಟ್ಟು ನೀಡುತ್ತಿರಲಿಲ್ಲ .ಎರಡು ತಪ್ಪಿಗೆ ಒಂದು ಪೆಟ್ಟಿನಂತೆ ೫೦%ಡಿಸ್ಕೌಂಟ್ ಕೊಡುತ್ತಿದ್ದರು . 

ಬೇಸಿಗೆಯಲ್ಲಿ ಬೈಸಿ ಕೊಂಡಿದ್ದ ಸೂರ್ಯ ಮುಂಗಾರು ಆರಂಭವಾಗುತ್ತಲೇ ಕಣ್ಮರೆಯಾಗುತ್ತಿದ್ದ .ಸೂರ್ಯನಿಲ್ಲದ ದಿನಗಳು ಅದೆಷ್ಟು ಅಸನೀಯವೆಂದು ನಮಗೆ ಅರ್ಥವಾದಾಗ ಮೋಡದ ಮರೆಯಿಂದ ಇಣುಕಿ ನಮ್ಮನ್ನು ಅಣಕಿಸಿ ನಗುತ್ತಿದ್ದ . 

ನಮ್ಮೂರ ಸಾರಾಯಿ ಅಂಗಡಿಗೆ ಬರುತ್ತಿದ್ದ ಗಿರಾಕಿಗಳಿಗೆ ಮೊದಲಿಗೆ ಉತ್ತಮ ದರ್ಜೆಯ ಸಾರಾಯಿ ನೀಡಿ ನಶೆ ಏರಿದಾಗ ಅಗ್ಗದ ಮಾಲನ್ನು ನೀಡಿ ಅವರನ್ನು ವಂಚಿಸಿ ಹಣ ಗಳಿಸುವ ತಂತ್ರಗಾರಿಕೆಯ ಬಗ್ಗೆ ಕೇಳಿದ್ದೆ .ಅದೇ ರೀತಿಯ ತಂತ್ರಗಾರಿಕೆಯನ್ನು ಉಪಯೋಗಿಸಿ ವಿಲಿಯರ್ಸ್ ಪಂಪ್ ಸ್ಟಾರ್ಟ್ ಆಗಲು ದುಬಾರಿ ಪೆಟ್ರೋಲ್ ವಾಸನೆ ತೋರಿಸಿ ,ಸ್ಟಾರ್ಟ್ ಆದ ಕೂಡಲೇ ಇಂಧನ ಟ್ಯಾಂಕ್ ವಾಲ್ವನ್ನು ಸೀಮೆ ಎಣ್ಣೆ ಕಡೆಗೆ ತಿರುಗಿಸಿ ,ತಾನೇ ಕಂಡು ಹಿಡಿದ ಯಂತ್ರವನ್ನೇ ಮೂರ್ಖ ಗೊಳಿಸುತ್ತಿದ್ದುದು ನನಗೇಕೋ ವಿಚಿತ್ರ ವಾಗಿ ಕಾಣುತ್ತಿತ್ತು .. 

ನಮ್ಮ ಮನೆಗೆ ಯಾರೇ ನೆಂಟರು ಬರಲಿ ನಾವು ಸಾಕುತ್ತಿದ್ದ ಕೋಳಿಗಳ ಪೈಕಿ ಒಂದರ ಆಯುಷ್ಯ ಆ ದಿನಕ್ಕೆ ಮುಗಿಯಿತೆಂದೇ ಲೆಕ್ಕ .. 

ಮನೆಯಲ್ಲಿದ್ದರೆ ಹಾರೆ ಪಿಕ್ಕಾಸು ಹಿಡಿಯಲು ನಾನು ಕಲಿತ ಶಿಕ್ಷಣ ಅಡ್ಡಿ ಪಡಿಸುತ್ತಿತ್ತು .ಹಾಗಂತ ಕಲಿತ ಶಿಕ್ಷಣ 'ಮರ್ಯಾದೆಯಿಂದ ನಿನ್ನನ್ನು ಸಾಕ ಬಲ್ಲೆ 'ಅನ್ನುವ ಭರವಸೆ ಯನ್ನು ನೀಡಲು ಹಿಂಜರಿಯುತ್ತಿತ್ತು .. 

ಇನ್ನೂ ಹಲವು ಅಂಡರ್ ಲೈನ್ ಮಾಡಿದ ವಾಕ್ಯಗಳು ಇವೆ .ಒಂದು ಮಾತ್ರ ನನಗೆ ಒಪ್ಪಿಗೆ ಯಾಗಲಿಲ್ಲ .ತಾನು ಓದಿದ ಪುಸ್ತಕ ಜೀರ್ಣಾವಸ್ಥೆ ಯಲ್ಲಿ ಇದ್ದುದರಿಂದ ಅದಕ್ಕೆ ಸೆಕೆಂಡ್ ಹ್ಯಾಂಡ್ ಡಿಮ್ಯಾಂಡ್ ಇರಲಿಲ್ಲ ,ಎಂದು ಹೇಳಿಕೊಳ್ಳುವಾಗ ಸರಿಯಾಗಿ ಓದುವ ಅಭ್ಯಾಸ ಇರದವನು ಎಂದು ಸೂಚ್ಯವಾಗಿ ತಿಳಿಸಿದ್ದಾರೆ .ಆದರೆ ಹೆಚ್ಚು ಓದಿದವನ ಪುಸ್ತಕವೇ ಅಂದ ಗೆಡುವದು ..,

ನೀವೂ ಓದಿ ನಿಮ್ಮ ಬಾಲ್ಯವನ್ನು ಮೆಲುಕು ಹಾಕಿರಿ .ಇದು ಎಲ್ಲಿ ಲಭ್ಯವೆಂದು ಈ ಲೇಖನಕ್ಕೆ ಪ್ರತಿಕ್ರಿಯಾ ರೂಪದಲ್ಲಿ ಅವರು ಬರೆಯಲೆಂದು ಹಾರೈಕೆ

 
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ