ಬೆಂಬಲಿಗರು

ಭಾನುವಾರ, ಆಗಸ್ಟ್ 1, 2021

ಶಕುಂತಲಾ ಕಿಣಿ ಯವರ ಬಳ್ಳಂಬೆಟ್ಟಿನ ಬಾಲ್ಯ ಕಾಲ

              ಶಕುಂತಲಾ ಕಿಣಿ ಯವರ ಬಳ್ಳಂಬೆಟ್ಟಿನ ಬಾಲ್ಯ ಕಾಲ 



 


ಕೆಂಡ ಸಂಪಿಗೆ ಕನ್ನಡ ಜಲತಾಣದ ಮೊದಲನೇ ಅವತಾರ ಹಲವು ಒಳ್ಳೆಯ ಲೇಖಕರನ್ನು ಪರಿಚಯಿಸಿ ,ತನ್ಮೂಲಕ ಒಳ್ಳೆಯ ಕೃತಿಗಳು ಕನ್ನಡದಲ್ಲಿ ಹುಟ್ಟಿ ಕೊಂಡಿವೆ . ಅದರ ಸಂಪಾದಕ ಅಬ್ದುಲ್ ರಶೀದ್ ಅವರು ಒಳ್ಳೆಯ ವೇಗ ವರ್ಧಕ (catalyst ). ರಾಜೇಶ್ವರಿ ತೇಜಸ್ವಿ ,ವಿದ್ಯಾಭೂಷಣ ,ಪೆಜತ್ತಾಯ ,ಜನಾರ್ಧನ ಭಟ್ ,ಲಕ್ಷೀಶ ತೋಳ್ಪಾಡಿ  ,ಅಶೋಕ್ ಕುಮಾರ್ ,ಪ್ರಶಾಂತ್ ಅಡೂರ್ ,ಅನಿತಾ ನರೇಶ್ ಮಂಚಿ ಇವರ ಬರಹಗಳು ನಮ್ಮನ್ನು ಮುದ ಗೊಳಿಸುತ್ತಿದ್ದವು  . ವಾಚಕರ ರಚನಾತ್ಮಕ  ಪ್ರತಿಕ್ರಿಯೆಗಳೂ ಉತ್ತಮ ಮಟ್ಟದಲ್ಲಿ ಇದ್ದವು .ಮುಂದೆ ಅವು ಪುಸ್ತಕ ರೂಪದಲ್ಲಿ ಬಂದಾಗ ತಪ್ಪದೇ ಖರೀದಿಸಿ ಪುನಃ ಓದಿದೆ . ನನಗೆ ಬಹಳ ಆಪ್ತವಾದ ಒಂದು ಧಾರಾವಾಹಿ 'ಶಕುಂತಲಾ ಕಿಣಿ' ಅವರ ಬಳ್ಳಂಬೆಟ್ಟಿನ ಬಾಲ್ಯ ಕಾಲ .

ನನ್ನ ಅಜ್ಜನ ಮನೆ ಉಕ್ಕಿನಡ್ಕ ಸಮೀಪ ಗುರುವಾರೆ. ಆಗೆಲ್ಲಾ ಅಜ್ಜಿ ಮನೆ ನಮ್ಮ ಎರಡನೇ ಮನೆ ಇದ್ದಂತೆ .ದೊಡ್ಡ ರಜೆಯಲ್ಲಿ ತಿಂಗಳು ಗಟ್ಟಲೆ ಅಲ್ಲಿ  ಕ್ಯಾಂಪ್ . ಮಕ್ಕಳಿಗೆ ವಾತಾವರಣದ ಬದಲಾವಣೆ ಮತ್ತು ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವುದನ್ನು  ಕಲಿಸಿ ಕೊಡುವ ತಾಣ . ಹಾಕಿದ ಅಂಗಿ ಚಡ್ಡಿ ,ಕಿಸೆಯಲ್ಲಿ ಬಸ್ ಚಾರ್ಜ್ ಗೆ ಬೇಕಾದಷ್ಟೇ ಚಿಲ್ಲರೆ ಹಣ . ಬೇರೆಲ್ಲಾ ನಾವು ಹೋದಲ್ಲಿಂದ .ಉಕ್ಕಿನಡ್ಕ ದಲ್ಲಿ ರಾಮರಾಯ ಪೈ ಗಳ ಅಂಗಡಿ ಕಂ ಪೋಸ್ಟ್ ಆಫೀಸು;ಅವರೇ ಪೋಸ್ಟ್ ಮಾಸ್ಟೆರ್ ;ನವಭಾರತ ಆಮೇಲೆ ಉದಯವಾಣಿ ಪತ್ರಿಕೆಗೆ ಅವರೇ ಏಜೆಂಟ್   .ನಾವು ಬಸ್ ಇಳಿದು ಪೈಗಳ ಅಂಗಡಿಯ ಹಿಂದೆ ಇದ್ದ ಮನೆಯಲ್ಲಿ ಬಾಯಾರಿಕೆ ಕುಡಿದು ,ಅಜ್ಜನ ಮನೆಗೆ ಪೇಪರ್ ,ಪೋಸ್ಟ್ ಇದೆಯೇ ಎಂದು ವಿಚಾರಿಸಿ ಕೊಂಡು ಹೋಗುವೆವು .ರಾಮರಾಯ ಪೈಗಳಿಗೆ ನನ್ನ ತಾಯಿ ,ಅಣ್ಣಂದಿರ ಪರಿಚಯ ಇದ್ದು ಅವರ ಬಗ್ಗೆ ವಿಚಾರಿಸುವರು .ಬೆಳಿಗ್ಗೆ ಪೇಪರ್ ಬಂಡಲ್ ಬಂದ ಒಡನೆ ಚಂದಾದಾರರ ಹೆಸರು ಸುಂದರವಾದ ಅಕ್ಷರದಲ್ಲಿ ಬರೆದು ಇಡುತ್ತಿದ್ದರು .

ಶಕುಂತಲಾ ಕಿಣಿ ಮಂಗಳೂರು ಆಕಾಶ ವಾಣಿಯಲ್ಲಿ ಉದ್ಘೋಷಕಿ ಯಾಗಿ ಜನಪ್ರಿಯ ರಾಗಿದ್ದರು .ಅವರ ತವರು ಮನೆ ಉಕ್ಕಿನಡ್ಕ ಸಮೀಪ ಬಳ್ಳಂಬೆಟ್ಟು. ಅವರ ಬಳ್ಳಂಬೆಟ್ಟಿನ ಬಾಲ್ಯ ಆರಂಭದ ಅಧ್ಯಾಯ ಅವರ ಉದ್ಯೋಗ ಪರ್ವದ ಕಡು ನಿರೀಕ್ಷೆ ಯ ಕಾಲದ ಒಂದು ದಿನ ಹಳ್ಳಿಯ ಎಲ್ಲಾ ಮನೆಯಲ್ಲಿಯೂ ಇರುವಂತೆ 'ಉರಿ ಬಿಸಿಲು ಸುಕಾಸುಮ್ಮಗೆ ಸುರಿದು ಹಾಳಾಗುತ್ತಿದೆ ,ಮಳೆ ಬರುವುದಕ್ಕೆ ಮೊದಲೇ ತಡವಾಗಿ ಬಲಿತ ಹಲಸಿನ ಕಾಯಿಗಳ ಹಪ್ಪಳ ಮಾಡಿ ,ಬಿಸಿಲಿನಲ್ಲಿ ಒಣಗಿಸಿ ,ಕಟ್ಟು ಮಾಡಿ ಅಟ್ಟಕ್ಕೇರಿಸುವ ಮತ್ತು ಬೀಜಗಳನ್ನು ಉಪ್ಪು ಹಾಕಿ ಬೇಯಿಸಿ ಬಿಸಿಲಿನಲ್ಲಿ ಒಣಗಿಸಿ ಸಾಂತಣಿ ಮಾಡಿ ಇಡುವ 'ಧಾವಂತದ ಕೆಲಸ ಇವರಲ್ಲಿಯೂ ಸಾಮೂಹಿಕ ಪಾಲುಗೊಳ್ಳುವಿಕೆಯಿಂದ ನಡೆಯುತ್ತಿರುತ್ತದೆ .ಸ್ನಾನ ಊಟ ಯಾವುದಕ್ಕೂ ಸಮಯವಿಲ್ಲ ,ಹಲಸಿನ ಕಾಯಿ ಕೆಲಸವೇ ಹಾಗೆ . ಅದೇ ಸಮಯಕ್ಕೆ ಮಂಗಳೂರು ಆಕಾಶವಾಣಿಯಿಂದ ಹಿಂದೆ ಹಾಜರಾಗಿದ್ದ ಇಂಟರ್ವ್ಯೂ ಫಲವಾಗಿ ಉದ್ಘೋಷಕಿ ಯಾಗಿ  ಆಯ್ಕೆಯಾದ ಮತ್ತು ಅಂದೇ ಸೇರಲು ಕೊನೇ ದಿನ ಎಂಬ ಟೆಲಿಗ್ರಾಂ ರಾಮರಾಯ ಪೈಗಳು ಅಂಚೆ ಕಚೇರಿಯಿಂದ ಪಕ್ಕದ ಮನೆಯವರ ಮೂಲಕ ಕಳುಹಿಸುತ್ತಾರೆ "ಪೋಸ್ಟ್ ಮಾಸ್ಟೆರ್ ಚಿಕ್ಕಪ್ಪನ ಉಪಕಾರ ನೆನೆದು ಕಣ್ಣಲ್ಲಿ ನೀರು ತುಂಬಿ ಬಂದಿತ್ತು "

."ನಾನು ಇದೀಗ ಕೆಲಸ ಸಿಕ್ಕ ಸಂತೋಷವೂ ,ಅದನ್ನು ಕಳೆದು ಕೊಳ್ಳುವ ಆತಂಕವೂ ಒಟ್ಟಿಗೆ ಆವಿರ್ಭವಿಸಿ ,ಸ್ನಾನ ,ಊಟ ,ಯಾವುದೂ ಇಲ್ಲದೆ ,ಕೈ ,ಕಾಲುಗಳಲ್ಲಿ ಅಂಟುತ್ತಿದ್ದ ಹಲಸಿನ ಮೇಣವನ್ನೂ ಗಮನಿಸದೆ ,ಒಂದಕ್ಕೊಂದು  ಮ್ಯಾಚಿಂಗ್ ಆಗದ ಕೈಗೆ ಸಿಕ್ಕ ಬಟ್ಟೆಯನ್ನು ಧರಿಸಿ ,ಹಪ್ಪಳ ಒತ್ತುತ್ತಿದ್ದ ಅಣ್ಣ,ಉಂಡೆ ಕಟ್ಟುತ್ತಿದ್ದ ಅಪ್ಪಯ್ಯ ,ಹಪ್ಪಳ ಉರುಟು ಮಾಡುತ್ತಿದ್ದ ಅಮ್ಮನ ಕಾಲಿಗೆ ನಮಸ್ಕರಿಸಿ ,ಉಕ್ಕಿನಡ್ಕ ದ ಏರು ಹಾದಿಯನ್ನು ಪಿ ಟಿ ಉಷಾಳಂತೆ ಓಡುತ್ತಲೇ ಹತ್ತಿ ,ರಾಜ ರಸ್ತೆ ಸಿಕ್ಕಿದೊಡನೆ ಎದುರಾದ ಕಾರೊಂದಕ್ಕೆ ಕೈ ತೋರಿಸಿ ನನ್ನ ಸಮಸ್ಯೆ ಯನ್ನು ಹೇಳಿ ,ಹತ್ತುವ ಮುನ್ನ ಗೇರು ಮರಗಳ ಎಡೆಯಿಂದ ದೂರದಲ್ಲಿ ತೋರುವ ನನ್ನ ಮನೆಯ ಮಜಲು ಗದ್ದಯಂಚಿನಲ್ಲಿ ನಿಂತ ಅಣ್ಣನ ಆಕೃತಿಗೆ ಕೈಬೀಸಿದ್ದೆ."

ಇದರಲ್ಲಿ ಅಜ್ಜಿ ,ಅಮ್ಮ ,ಅಪ್ಪ ,ಅಣ್ಣ ,ಅತ್ತಿಗೆ ,ಶಾಲೆ ,ಗೆಳತಿಯರು,ಅಧ್ಯಾಪಕರು ಮತ್ತು ನೆರೆ ಹೊರೆಯವರ ಬಗ್ಗೆ ಆತ್ಮೀಯ ಬರಹಗಳು ಇವೆ .ನಮ್ಮ ನಿಮ್ಮೆಲ್ಲರ ಬಾಲ್ಯವನ್ನು ನೆನಪಿಸುವಂತೆ ಇರುವ ಕಾರಣ ಆಪ್ಯಾಯ ಮಾನವಾಗಿವೆ .

ಅಮ್ಮನ ಬಗ್ಗೆ ಬರೆಯುತ್ತಾ 'ಪ್ರತಿಯೊಂದು ಕೆಲಸದಲ್ಲಿಯೂ ಅಮ್ಮ ತೋರುತ್ತಿದ್ದ ಶ್ರದ್ದೆ ,ಜೀವನ ಪ್ರೀತಿ ,ಬರಲಿರುವ ನಾಳೆಗಳಿಗಾಗಿ ಅವರು ತೋರುತ್ತಿದ್ದ ಉತ್ಸಾಹ ,ಕಾಳಜಿ ನಮಗೊಂದು ಅಲಿಖಿತ ಜೀವನ ಪಠ್ಯ ದಂತೆ ಇಂದು ತೋರುತ್ತಿದೆ'

 .'ಮಳೆಗಾಲಕ್ಕೆ ಅಮ್ಮನನ್ನು ನೆನಪಿಸುವ ಅದ್ಭುತ ಶಕ್ತಿಯಿದೆ ,ನೆನೆದ ದೇಹವನ್ನು ನೇವರಿಸಿ ಬಿಸುಪು ನೀಡುವ ,ಹಸಿದ ಹೊಟ್ಟೆಗೆ ಬಿಸಿ ಬಿಸಿಯಾಗಿ ತಿನ್ನಲು ,ಉಣ್ಣಲು ನೀಡುವ ಅಮ್ಮನ ವಾತ್ಸಲ್ಯದ ಕೈಗಳು ಯುಗ ಯುಗಾಂತರಕ್ಕೂ ನೆನಪಾಗಿ ಉಳಿದು ಬಿಟ್ಟಿವೆ .'

'ಈಗ ನಮ್ಮೆಲ್ಲರ ಬಳಿ ಬಟ್ಟೆ ಬರೆಗಳಿಗಾಗಲಿ ,ಅವುಗಳನ್ನು ಜೋಡಿಸಿಡಲು ವಾರ್ಡ್ ರೋಬ್ ,ಸ್ಟೀಲ್ ಕಪಾಟುಗಗಳಿಗಾಗಲೀ ಯಾವ ಕೊರತೆಯೂ ಇಲ್ಲ .ಆದರೆ ಎಷ್ಟೇ ಬಟ್ಟೆಬರೆ ಕೊಂಡರೂ ,ಅಮ್ಮನ ಹಳೆಯ ಟ್ರಂಕ್ ತೆರೆದಾಗ ಪ್ರತಿ ಬಾರಿಯೂ ಹೊಸದೆಂಬಂತೆ ನಾವೆಲ್ಲರೂ ಓಡಿ ಅದರ ಸುತ್ತಲೂ  ನೆರೆಯುತ್ತಿದ್ದುದೂ,ಅದು ಹೊರ ಸೂಸುವ ಜಿರಲೆ ಗುಳಿಗೆಯ ಕಂಪಿಗೆ ಮೈ ಮರೆಯುತ್ತಿದ್ದುದೂ ,ಚಿಮಿಣಿ ಎಣ್ಣೆಯ ಮಂಕು ಬೆಳಕಿನಲ್ಲಿ  ಟ್ರಂಕನ್ನು ಅಮ್ಮ ತೆರೆದಾಗ ಅಮ್ಮನ ರೇಶಿಮೆ ಸೀರೆಯ ಮಡಿಕೆಗಳಲ್ಲಿ ಜಿನುಗುತ್ತಿದ್ದ ಹೊಸತನದ ಆನಂದವನ್ನು ಹೀರುತ್ತಿದ್ದ ಆ ದಿನಗಳಷ್ಟು ಈಗಿನ ಹೊಸ ಬಟ್ಟೆಗಳು ಕೊಡುತ್ತಿಲ್ಲ .'

ಅಗೆಲ್ಲಾ ಸಹಜವೆಂಬಂತೆ  ಪರವೂರಿಗೆ ಹೋಗುವ ಮತ್ತು ಬರುವ ದಾರಿಯಲ್ಲಿ ಕತ್ತಲೆಯಾದರೆ  ಮತ್ತು  ಶಿಕ್ಷಣಕ್ಕಾಗಿ ಬಂಧುಗಳ ಮನೆಯಲ್ಲಿ ತಂಗುವ ಅನೇಕ ಉಲ್ಲೇಖಗಳನ್ನು ಓದುವಾಗ ಹೀಗೂ ಒಂದು ಕಾಲ ಇತ್ತೇ ಎಂದು ಈಗಿನ ತಲೆಮಾರಿನವರು ಆಶ್ಚರ್ಯ ಪಡುವಂತೆ ಆಗುವುದು .

ಈ ಪುಸ್ತಕದ ಹಲವು ಪ್ರತಿಗಳನ್ನು ನಾನು ನನ್ನ ಬಂಧುಗಳಲ್ಲಿ ಹಂಚಿದ್ದೇನೆ .ಅವರೂ ಓದಿ ಸಂತೋಷ ಪಟ್ಟಿದ್ದಾರೆ .ಶಕುಂತಲಾ ಕಿಣಿಯವರಿಗೆ  ದೂರವಾಣಿ ಮಾಡಿ ನನ್ನ ಮೆಚ್ಚಿಗೆ ತಿಳಿಸಿದಾಗ ನಾನು ಉಡುಪಿಯ ಫಿಜಿಕ್ಸ್ ಪ್ರಾಧ್ಯಾಪಕ ಡಾ ಎ ಪಿ ಭಟ್ ಎಂದು ತಿಳಿದುಕೊಂಡಿದ್ದೆ ಎಂದರು .(ಕೆಂಡ ಸಂಪಿಗೆಯಲ್ಲಿ ನನ್ನ ಒಂದು ಪ್ರತಿಕ್ರಿಯೆಯನ್ನು ಅವರು ಪುಸ್ತಕದಲ್ಲಿ ಸೇರಿಸಿದ್ದಾರೆ )

ಬಾಲಂಗೋಚಿ :ಬಿ ಗೋಪಾಲಕೃಷ್ಣ ಪೈ ಗಳ ಪ್ರಸಿದ್ದ ಕಾದಂಬರಿ ಸ್ವಪ್ನ ಸಾರಸ್ವತ ಕೂಡಾ ಬಳ್ಳಂಬೆಟ್ಟಿನಲ್ಲಿ ಕೊನೆಗೊಳ್ಳುತ್ತದೆ . ಶಕುಂತಲಾ ಅವರ ಚಿಕ್ಕಪ್ಪನ ಮಗಳು .

ಬಾಲಂಗೋಚಿ :

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ