ಬೆಂಬಲಿಗರು

ಶುಕ್ರವಾರ, ಆಗಸ್ಟ್ 27, 2021

ಡಾ ಪಿ ಎಸ್ ಭಟ್

                                    ಡಾ ಪಿ ಎಸ್ ಭಟ್ 

 

                                        


ನಾನು ಪ್ರಾಥಮಿಕ ಶಾಲೆಯಲ್ಲಿ ಇದ್ದಾಗ ಆಗಾಗ ಎದೆ ನೋವುಬರುತ್ತಿತ್ತು . ನನ್ನ ತಂದೆಯವರು ನನ್ನ ಹೃದಯದಲ್ಲಿ ಏನಾದರೂ ತೊಂದರೆ ಇದೆಯೇ ಎಂದು ಚಿಂತಿಸಿ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ  ಮುಖ್ಯ ವೈದ್ಯರಾಗಿ ಪ್ರಸಿದ್ಧ ರಾಗಿದ್ದ  ಪಿ ಎಸ ಭಟ್ ಅವರಲ್ಲಿ ಕರೆದು ಕೊಂಡು ಹೋದರು .ನನಗೆ  ಸುಮಾರು ನಲುವತ್ತು ವರ್ಷ ಪ್ರಾಯದ ವರೆಗೆ ಡಾಕ್ಟ್ರಲ್ಲಿ ಹೋದದ್ದು ಅದೇ ಒಂದುಬಾರಿ ಆದುದರಿಂದ ನೆನಪು ಹಸುರಾಗಿದೆ .ಬಿಳಿ ಪ್ಯಾಂಟ್ ಮತ್ತು ಶರ್ಟ್ ಹಾಕಿ ,ನಗುಮೊಗ ,ಮೃದು ವಚನದ ಡಾ ಪಿ ಎಸ ಭಟ್ ಕೈ ಹಿಡಿದು ನನ್ನ ನಾಡಿ  ,ಸ್ಟೆಥೋಸ್ಕೋಪ್ ಎದೆಯಲ್ಲಿ ಇಟ್ಟು ಪರೀಕ್ಷೆ ಮಾಡಿ  ಏನೂ ಕಾಯಿಲೆ ಇಲ್ಲ ;ಚೆನ್ನಾಗಿ ಊಟ ಮಾಡಿ ಆಟೋಟದಲ್ಲಿ ಭಾಗವಹಿಸ ಬೇಕು ಎಂದು ಹೇಳಿ ಒಂದು ಟಾನಿಕ್ ಬರೆದು ಕೊಟ್ಟರು . ಅವರು ಹೇಳಿದ್ದೇ ನನ್ನ ನೋವು ಮರಕಳಿಸಲಿಲ್ಲ . 

 ೧೯೧೦ ಜೂನ್ ೬ ರಂದು ಕಾರ್ಕಳ ಪೆರುವಾಜೆಯಲ್ಲಿ  ಜನಿಸಿದ ಸ್ಥಳೀಯ ಡಾ ಪಿ ಎಸ ಭಟ್   ಮಹಾಲಿಂಗೇಶ್ವರ ದೇವಳದ ಅರ್ಚಕರಾಗಿದ್ದ ಸುಬ್ರಾಯ ಭಟ್ ಮತ್ತು ಕಲ್ಯಾಣಿ ದಂಪತಿಗಳ ಸುಪುತ್ರರು ,ಇವರ ಪೂರ್ಣ ನಾಮ  ಪೆರುವಾಜೆ ಶ್ರೀನಿವಾಸ ಭಟ್ ..ಆರಂಭದ ವಿದ್ಯಾಭ್ಯಾಸ ಕಾರ್ಕಳ ದಲ್ಲಿ .ಮಂಗಳೂರಿನಲ್ಲಿ ಬಿ ಎ  (ಆನರ್ಸ್ )ಮಾಡಿ ಮದ್ರಾಸ್ ನಲ್ಲಿ ಆಗಿನ ಜಿ ಸಿ ಐ ಎಂ ಮಾಡಿ ವೈದ್ಯ ರಾದ ಇವರು ೧೯೪೨ ರಿಂದ ೧೯೪೭ ವರೆಗೆ ಬ್ರಿಟಿಷ್ ಸೈನ್ಯದ ವೈದ್ಯಕೀಯ ಸೇವೆಯಲ್ಲಿ ೫೪ ನೇ ಫೀಲ್ಡ್ ಆಂಬುಲೆನ್ಸ್  ಕ್ಯಾಪ್ಟನ್ ಆಗಿದ್ದು ,ದ್ವಿತೀಯ ಮಹಾಯುದ್ಧದ ವೇಳೆ ರಂಗೂನ್ ನಲ್ಲಿ ಮುಂಚೂಣಿಯ ಸೇವೆ ಸಲ್ಲಿಸಿ ದರು . ನಿವೃತ್ತಿಯ ವೇಳೆ  ಬ್ರಿಟಿಷ್ ರಾಣಿಯ ಪರವಾಗಿ ಒಂದು ಗೌರವ  ಖಡ್ಗ ನೀಡಿ ಗೌರವಿಸಲಾಗಿತ್ತು . 

                       



ತದ ನಂತರ ಕಲ್ಕತ್ತಾ ದಲ್ಲಿ ಎಂ ಬಿ ಬಿ ಎಸ ಮಾಡಿ ಮದ್ರಾಸ್ ಸರಕಾರದ ಸೇವೆಗೆ ಸೇರ್ಪಡೆ . ಕೂನೂರ್ ,ಕಲ್ಲಿಕೋಟೆ (ವೈದ್ಯಕೀಯ ಕಾಲೇಜು ಆಸ್ಪತ್ರೆ ಆರ್  ಎಂ ಓ )ಗಳಲ್ಲಿ ಕೆಲಸ ಮಾಡಿ  ಭಾಷಾವಾರು ರಾಜ್ಯಗಳ ರಚನೆಯಾದಾಗ ಮೈಸೂರು ರಾಜ್ಯ ಸೇವೆಗೆ ;೧೯೫೬ ರಿಂದ ೧೯೬೨ ವರೆಗೆ ಕುಂದಾಪುರ ತಾಲೂಕು ಆಸ್ಪತ್ರೆ ಯಲ್ಲಿ ;ಇಲ್ಲಿ ಕೂಡಾ ಜನರ ಅಪೇಕ್ಷೆ ಮೇರೆಗೆ ಎರಡು ಬಾರಿ ವರ್ಗಾವಣೆ ತಡೆ . 

೧೯೬೨ರಲ್ಲಿ  ಪುತ್ತೂರು ಸರಕಾರಿ ಆಸ್ಪತ್ರೆಗೆ . ತಮ್ಮ ಪ್ರಾಮಾಣಿಕ ಸೇವೆಯಿಂದ ಬಹು ಬೇಗ ಜನಪ್ರಿಯ  . ಆಗೆಲ್ಲಾ ಸ್ಪೆಷಲಿಸ್ಟ್ ಗಳು  ಪುತ್ತೂರಿನಂತ ಪಟ್ಟಣ ದಲ್ಲಿ ಇರಲಿಲ್ಲ .ತಾವೇ ಅರಿವಳಿಕೆ ಕೊಟ್ಟು ಶಸ್ತ್ರಕ್ರಿಯೆ ಗಳನ್ನು ಮಾಡುತ್ತಿದ್ದರು . ಆಸ್ಪತೆಯಲ್ಲಿ ಸ್ಥಳಾವಕಾಶ ದ  ಕೊರತೆಯಾದಾಗ ಸರಕಾರದ ಮಟ್ಟದಲ್ಲಿ ಪ್ರಯತ್ನಿಸಿ ಹೊಸ  ಸರ್ಜಿಕಲ್ ಬ್ಲಾಕ್ ನಿರ್ಮಾಣಕ್ಕೆ ಕಾರಣರಾದರು . ಪುತ್ತೂರು ತಾಲೂಕು ಆಸ್ಪತ್ರೆ ಯನ್ನು  ಸಂಪಾಜೆ,ಸುಳ್ಯ  ,ಶಿರಾಡಿ ,ಪೆರ್ಲ, ಆನೆಕಲ್ಲು ,ಕಲ್ಲಡ್ಕ ವರೆಗಿನ ರೋಗಿಗಳು ಅವಲಂಬಿಸಿದ್ದರು . ಪುತ್ತೂರು ಆಸ್ಪತ್ರೆಯಲ್ಲಿ ನಿವೃತ್ತಿ ನಂತರ ಒಂದು ವರ್ಷ ಸರಕಾರ ಅವರ ಸೇವೆ ವಿಸ್ತರಿಸಿತ್ತು . ನಿವೃತ್ತಿ ಬಳಿಕ ದರ್ಭೆಯಲ್ಲಿನ ತಮ್ಮ ಮನೆಯಲ್ಲಿಯೇ ಪ್ರಾಕ್ಟೀಸ್ ಆರಂಭಿಸಿ ,೧೯೭೦ ರಲ್ಲಿ ಶ್ರೀನಿವಾಸ ನರ್ಸಿಂಗ್ ಹೋಂ ಸ್ಥಾಪಿಸಿದರು . ಅದು ಬಹಳ ಜನಪ್ರಿಯ ಆಸ್ಪತ್ರೆಯಾಯಿತು . 

೧೯೭೪ ರಲ್ಲಿ ಪುತ್ತೂರು ರೋಟರಿ ಕ್ಲಬ್ ನ ಅಧ್ಯಕ್ಷ ಪದವಿ .(ಇವರ ಪುತ್ರ ಡಾ ಭಾಸ್ಕರ್ ಕೂಡಾ ನಿಷ್ಟಾವಂತ ರೋಟರಿಯನ್ ಆಗಿದ್ದು   ಮುಂದೆ  ಗವರ್ನರ್ ಆದವರು ).ಪುತ್ತೂರು ನಗರ ಸಭಾ ಸದಸ್ಯ ,ಉಪಾಧ್ಯಕ್ಷ ಮತ್ತು  ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ,ಹೀಗೆ ವಿವಿಧ ಸೇವೆ . ೧೯೭೫ ಆಗಸ್ಟ್ ೧೫ ರಂದು ನಿಧನರಾದ ಇವರು  ಪುತ್ತೂರಿನ  ಅರೋಗ್ಯ ಸೇವಾ ಮತ್ತು ಸಾಮಾಜಿಕ ರಂಗದಲ್ಲಿ ತಮ್ಮ ಹೆಸರು ಸ್ಥಾಯಿ ಯಾಗಿ ಉಳಿಸಿದವರು . 

ಡಾ ಪಿ ಎಸ ಭಟ್ ಅವರ ಪುತ್ರಿಯರಾದ  ರಮಾದೇವಿ  ಸ್ತ್ರೀರೋಗ ತಜ್ಞೆಯಾಗಿ ತಂದೆಯ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ,ಆಮೇಲೆ ತಮ್ಮದೇ ಪ್ರತ್ಯೇಕ ಆಸ್ಪತ್ರೆ ತೆರದಿದ್ದು ಪ್ರಸಿದ್ಧ ರಾದವರು,ಇವರ ಪುತ್ರ ಡಾ ಅನಿಲ್ ತಾಯಿಯ ಹಾಗೆ ಗೈನಕೊಲೊಜಿಸ್ಟ್ .ಇನ್ನೋರ್ವ ಮಗಳು ಲೀಲಾವತಿ ವೈದ್ಯೆ ಯಾಗಿ ತಮ್ಮ ಪತಿ ಡಾ ಜನಾರ್ಧನ್ ಜತೆ ಸಕಲೇಶಪುರದಲ್ಲಿ ಶ್ರೀನಿವಾಸ ನರ್ಸಿಂಗ್ ಹೋಂ ಆರಂಭಿಸಿ  ನಡೆಸುತ್ತಿದ್ದು ಅವರ ಮಕ್ಕಳಾದ ಅನೂಪ್ ಮತ್ತು ಅಲೋಕ್ ತಜ್ಞ ವೈದ್ಯರು .ಒಬ್ಬ ನನ್ನ ಶಿಷ್ಯ . 

ದೊಡ್ಡ ಮಗ ದಿ ಕೃಷ್ಣ ಮೂರ್ತಿ ಭಟ್ ಅವರ ಮಗ ಡಾ ದಿಲೀಪ್ ಮಂಗಳೂರಿನಲ್ಲಿ ಮೂಳೆ ತಜ್ಞ .ಎರಡನೇ ಮಗ ಮೋಹನ್ ಮಂಡ್ಯದಲ್ಲಿ ವೈದ್ಯ . ಕಿರೀ ಪುತ್ರ (ಕಿರಿಯವರಾದರೂ ಅಜಾನುಬಾಹು )ಡಾ ಭಾಸ್ಕರ್   ಓರ್ಥೋಪೆಡಿಕ್  ಸರ್ಜನ್ ಆಗಿದ್ದು ಪುತ್ತೂರಿನ ಶ್ರೀನಿವಾಸ ನರ್ಸಿಂಗ್ ಹೋಂ ಮುನ್ನೆಡಿಸಿ ,ಈಗ ಪುತ್ತೂರು ಸಿಟಿ ಆಸ್ಪತ್ರೆ ಮ್ಯಾನೇಜಿಂಗ್  ಡೈರೆಕ್ಟರ್ ಆಗಿರುವರು ,ಅವರ ಮಕ್ಕಳಾದ ವರುಣ್ (ನನ್ನ ವಿದ್ಯಾರ್ಥಿ )ಮತ್ತು ವರ್ಷಾ ಕೂಡಾ ತಜ್ಞ ವೈದ್ಯರಾಗಿದ್ದು ಡಾ ಪಿ ಎಸ ಭಟ್ ಅವರ ಕುಟುಂಬದ ೨೬ ಮಂದಿ ದೇಶ ವಿದೇಶದ ವಿವಿದೆಡೆ ಈ ರಂಗದಲ್ಲಿ ಇದ್ದು ಸೇವೆ ಸಲ್ಲಿಸುತ್ತಿದ್ದಾರೆ . 

              ಡಾ ಪಿ ಎಸ ಭಟ್ ಜನಸಾಮಾನ್ಯರಲ್ಲಿ ಪ್ರೀತಿ ಗಳಿಸಲು ಮುಖ್ಯ ಕಾರಣ  ತಮ್ಮ ಸರಕಾರಿ ಸೇವೆಯನ್ನು ತ್ರಿಕರಣ ಪೂರ್ವಕವಾಗಿ ಮಾಡಿದ್ದು . ಆಗೆಲ್ಲಾ ಅವರು ಪರವೂರಿಗೆ ಬಸ್ ನಲ್ಲೆ ಸಂಚರಿಸುತ್ತಿದ್ದು ಅವರನ್ನು ಆಸ್ಪತ್ರೆಯ ವಸತಿ ಗೃಹದಲ್ಲಿ ಇಳಿಸಲು ಡ್ರೈವರ್ ನವರು ಬಸ್ಸನ್ನು  ಮುಖ್ಯ ಮಾರ್ಗ ಬಿಟ್ಟು ಆಸ್ಪತ್ರೆ ಮೂಲಕ ಹೋಗುತ್ತಿದ್ದರಂತೆ .

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ