ಬೆಂಬಲಿಗರು

ಭಾನುವಾರ, ಆಗಸ್ಟ್ 15, 2021

ಶ್ವಾನ ಪುರಾಣ

                    ಶ್ವಾನ ಪುರಾಣ 

ನಮ್ಮ ಪಕ್ಕದ ಖಾಲಿ ಕಾಂಪೌಂಡ್ ನಲ್ಲಿ ಒಂದು ಬೀದಿ ನಾಯಿ ಆರು ಮರಿಗಳನ್ನು ಇಟ್ಟಿತ್ತು  . ತಾಯಿ ಸಣಕಲು ,ಮಕ್ಕಳಿಗೆ ಹಾಲು ಸಾಕಾಗುತ್ತಿರಲಿಲ್ಲ ಎನಿಸುತ್ತದೆ . ಚಂದ ಚಂದದ ಮರಿಗಳು . ಅಮ್ಮನಿಗೆ ಅಕ್ಕ ಪಕ್ಕದ ಮನೆಯವರು ಅನ್ನ ಹಾಕುತ್ತಾರೆ .ದಿನಾಲೂ ಈ ಮರಿಗಳ ಬೆಳವಣಿಗೆ ,ಆಟ ನೋಡುತ್ತಿದ್ದೆ . ಮರಿಗಳಿಗೆ ಏನಾದರೂ ಕೊಡುವಾ ಎಂದು ಪಾರ್ಲೆ  ಬಿಸ್ಕತ್ ತಂದೆ .ಇಂಟರ್ನೆಟ್ ನಲ್ಲಿ ನೋಡಿದಾಗ ನಾಯಿಗಳಿಗೆ ಮನುಷ್ಯರ ಬಿಸ್ಕತ್ ಕೊಡಲೇ ಬಾರದು ;ತಾಯಿಯ ಹಾಲೇ ಕೊಡಬೇಕು ಎಂದಿತ್ತು . . ಮೊನ್ನೆ ಆಸ್ಪತ್ರೆಯಿಂದ ಬರುವಾಗ ವೆಟರ್ನರಿ ಫಾರ್ಮಸಿ ಯಿಂದ  ನಾಯಿ ಮರಿ ಆಹಾರ  ಕೊಂಡು ಬಂದು( ಅದನ್ನು ಕೂಡಾ ಸ್ವಲ್ಪ ಸ್ವಲ್ಪವೇ ಕೊಡಿ ಎಂದು ಅಂಗಡಿಯವರು ಎಚ್ಚರಿಸಿದ್ದ್ದರು ),ಪುಡಿ ಮಾಡಿ ಸ್ವಲ್ಪ ಅನ್ನ ಹಾಲು ಹಾಕಿ ಕೊಟ್ಟಾಗ ಮರಿಗಳು ಗಬ ಗಬನೇ ತಿಂದವು . ಈ ಮರಿಗಳು ನಮ್ಮ ಇತರ ಬೀದಿ ನಾಯಿಗಳಿಗೂ ತುಂಬಾ ಪ್ರೀತಿಯವು .ಅವು ತಿನ್ನುವಾಗ ಬೇರೆ ಯಾವುದೂ  ಬಾಯಿ ಹಾಕುವುದಿಲ್ಲ ,ಬದಲಾಗಿ ಅವುಗಳಿಗೆ ರಕ್ಷಣೆ ಕೊಡುತ್ತವೆ.ಪುಣ್ಯಕೋಟಿಯ ಅಕ್ಕ ತಂಗಿಯರ ಹಾಗೆ . ನಿನ್ನೆ ಸಂಜೆ  ತಿಂಡಿಗೆ ನಮ್ಮ ಕಂಪೌಂಡಿಗೆ ಬಂದಾಗ ತೆಗೆದ ಚಿತ್ರಹಾಕಿದ್ದೇನೆ 

ಆರು ಮರಿಗಳಲ್ಲಿ ಮೂರು ಗಂಡು ಮರಿಗಳನ್ನು ಯಾರೋ ಸಾಕಲು ತೆಗೆದು ಕೊಂಡು ಹೋಗಿರುವರು .ಹೆಣ್ಣು ಮರಿಗಳನ್ನು ಬಿಟ್ಟು ಹೋಗಿರುವರು .ಬೆಕ್ಕಿನ ಮರಿ ಆದರೆ ಹೆಣ್ಣೇ ಬೇಕು . ಲೇಖಕಿ ಸಹನಾ ಕಾಂತಬೈಲ್ ದನದ ಗಂಡು ಕರು ಕೂಡಾ ಈಗ ಯಾರಿಗೂ ಬೇಡ ,ತಾನು ಕಾಡಿನಲ್ಲಿ ಬಿಟ್ಟು ಬಂದೆ ಎಂದು ಬರೆದಿರುವರು . ಈಗ ಉಳುಮೆಗೆ (ಇದ್ದರೆ )ಟಿಲ್ಲರ್ ,ಗರ್ಭಾ ಧಾರಣೆ ಕೃತಕ ,ಆದುದರಿಂದ ಹೋರಿ ಸಾಕುವುದು ಕಷ್ಟ . ಭೈರಪ್ಪನವರು ತಬ್ಬಲಿಯು ನೀನಾದೆ ಮಗನೆ ಕಾದಂಬರಿಯಲ್ಲಿ ಪಶುಗಳನ್ನು ನೈಸರ್ಗಿಕ ಲೈಂಗಿಕ ಸಂಬಂಧ ಗಳಿಂದ ವಂಚಿತರನ್ನಾಗಿ ಮಾಡುವುದರ ಬಗ್ಗೆ ಜಿಜ್ಞಾಸೆ ಮಾಡಿದ್ದಾರೆ ಎಂದು ನೆನೆಪು . 

ಹಳ್ಳಿ ಮನೆಗಳಲ್ಲಿ ನಾಯಿ ಕುಟುಂಬದ ಒಂದು ಅಂಗ .ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ದಾಸು ಎಂಬ ನಾಯಿ ಇತ್ತು ,ಆಮೇಲೆ  ಜಾಕು ಮತ್ತು ಜಾನು ಎಂಬ ಜೋಡಿ ಬಂದವು . ಅವುಗಳ ದುರದೃಷ್;ಟ ನಮ್ಮೊಡನೆ ಅವೂ ಸಸ್ಯಾಹಾರಿ ಆಗ ಬೇಕಾಯಿತು . ಮನೆಗೆ ಯಾರು ಆಗಂತುಕರು ,ಪ್ರಾಣಿಗಳು ಬಂದರೂ ಅವು ಎಚ್ಚರಿಸುವವು . ನಾವು ನೆಂಟರ ಮನೆಗೆ ಹೋಗುವಾಗ ಮಾರ್ಗದ ವರೆಗೆ ಬೆಂಗಾವಲು ಕೊಡುವವು .  

ನನ್ನ ತಮ್ಮ ಲಕ್ಷ್ಮಿ ನಾರಾಯಣ ನಿಗೆ  ನಾಯಿ ,ದನ ಕರು  ಎಂದರೆ ಚಿಕ್ಕಂದಿನಿಂದಲೇ ಪ್ರೀತಿ . ಈಗಲೂ ನಾಯಿ ಸಾಕುತ್ತಿದ್ದಾನೆ . ಅವನ ಜತೆ ದೀರ್ಘ ಕಾಲ ಇದ್ದ ಗುಂಡ ಎಂಬ ನಾಯಿ ಸತ್ತಾಗ "ಗುಂಡನ ಕತೆ "ಎಂಬ ಪುಸ್ತಕವನ್ನೇ ಬರೆದು ಪ್ರಕಟಿಸಿರುವನು . ಲೇಖಕ  ನಾ ಡಿ ಸೋಜಾ ರಂತವರು ಅದನ್ನು ಓದಿ ಮೆಚ್ಚಿದ್ದಾರೆ . ಶ್ವಾನ ಪ್ರಿಯರು ಬೇಕಾದಲ್ಲಿ ಮಂಗಳೂರಿನ ಜ್ಯೋತಿ ಬಳಿಯ ನವ ಕರ್ನಾಟಕ ಪುಸ್ತಕ ಅಂಗಡಿಯಲ್ಲಿ ಕೇವಲ ರೂ 30 ಕ್ಕೆ ಲಭ್ಯವಿದೆ . 



 

 


             

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ