ಬೆಂಬಲಿಗರು

ಮಂಗಳವಾರ, ಮಾರ್ಚ್ 30, 2021

ತಿಂಡಿ ಪುರಾಣ

                            ತಿಂಡಿ  ಪುರಾಣ 

 ಇಂದು ನಮ್ಮಲ್ಲಿ  ಮಸಾಲೆ ದೋಸೆ .ಈ ತಿಂಡಿಯನ್ನು ಪ್ರಚುರ ಪಡಿಸಿದವರು  ಮದ್ರಾಸ್  ವುಡ್ ಲ್ಯಾಂಡ್ಸ್ ಹೋಟೆಲ್ ನ ಕೃಷ್ಣ ಭಟ್ಟರು ಎಂಬ ಪ್ರತೀತಿ . ಉದ್ದಿನ  ದೋಸೆಗೆ  ಆಲೂ ಪಲ್ಯ .ಮುಂದೆ ಇದು ರವಾ ದೋಸೆಗೂ ಬಂತು .ಮಸಾಲೆ ಕೂಡಾ ಪಾಲಕ್ ,ಮೈಸೂರು ಇತ್ಯಾದಿ ಹುಟ್ಟಿಕೊಂಡವು . ಈರುಳ್ಳಿ ತುಟ್ಟಿಯಾದಾಗ  ಆಲೂ ಗಡ್ಡೆ  ಹೆಚ್ಚು ಇರುವುದು ಮತ್ತು ವೈಸ್ ವರ್ಸಾ .  ಕೆಲವು ಕಡೆ ಆಲೂ ಬದಲಿಗೆ ಬೀಟ್ ರೂಟ್ ಇತ್ಯಾದಿ ಬರುವುದು . ಚೆನ್ನೈ ವಿ ಜಿ ಪಿ ಬೀಚ್ ನ  ಬೃಹತ್ ಮಸಾಲೆ ದೋಸೆ ಬಗ್ಗೆ ಹಿಂದೆ ಬರೆದಿರುವೆನು .ಮಸಾಲಾ ದೋಸಾ ಮೆಷಿನ್ ಕೂಡಾ ಬಂದಿದೆ . 

   ಎರಡನೇ ಮಹಾಯುದ್ಧ ಸಮಯದಲ್ಲಿ  ಅಕ್ಕಿ ಅಭಾವ ಆದಾಗ  ಬೆಂಗಳೂರಿನ ಹೆಸರಾಂತ  ಎಂ ಟಿ ಆರ್  ಹೋಟೆಲ್ ನ  ಮೈಯ್ಯರು  ಅದರ ಬದಲಿಗೆ  ರವೆ (ಸಜ್ಜಿಗೆ )ಉಪಯೋಗಿಸಿ ಪ್ರಯೋಗ ಮಾಡಿದರು .ಈಗ ಅವರ ರವಾ ಇಡ್ಲಿಯೇ ಸ್ವಲ್ಪ ಹೆಚ್ಚು ಮುಂದೆ . 

ಎಮರ್ಜೆನ್ಸಿ ಸಮಯದಲ್ಲಿ  ಹೋಟೆಲ್ ದರ ನಿಗದಿ ಪಡಿಸಿ ಸರಕಾರ ಆಜ್ಞೆ ಹೊರಡಿಸಿತು . ಗುಣಮಟ್ಟಕ್ಕೆ ಹೆಸರಾದ ಎಂ ಟಿ ಆರ್ ಹೋಟೆಲ್ ,ತಮಗೆ ಆ ರೇಟ್ ನಲ್ಲಿ ನಡೆಸಲು ಅಸಾಧ್ಯ ಎಂದು ಮುಚ್ಚಿದರು . ಪ್ರಜಾವಾಣಿ ಸಂಪಾದಕ ರಾಗಿದ್ದ  ಟಿ ಎಸ ಆರ್  ತಮ್ಮ ಜನಪ್ರಿಯ  ಛೂಬಾಣ ದಲ್ಲಿ ಬಾಗಿಲನು ತೆರೆದು ಸೇವೆಯನು ಕೊಡು ಹರಿ (ಶ್ಚಂದ್ರ ಮೈಯ್ಯ )ಯೇ ಎಂದು ಬರೆದರು .ಈ ಕಾಲದಲ್ಲಿ ಯೇ  ಅವರು ಎಂ ಟಿ ಆರ್ ಕೊಂಡಿಮೆಂಟ್ಸ್ ಆರಂಭ ಮಾಡಿ ಯಶಸ್ವಿ ಆದರು.ಮುಂದೆ ಹೊಟೇಲ್ ಆರಂಭ ಆಯಿತು .

 

ಸೋಮವಾರ, ಮಾರ್ಚ್ 29, 2021

ಹಲಸಿನ ಹಣ್ಣಿನ ಕೊಟ್ಟಿಗೆ


 ಇಂದು ನಮ್ಮಲ್ಲಿ ಹಲಸಿನ ಹಣ್ಣಿನ(ಕಡುಬು ,ಆಡ್ಯೆ)ಕೊಟ್ಟಿಗೆ 

ಇದು ಬೇಯುವಾಗ ಬರುವ ಪರಿಮಳ ದೊಡನೆ

ಹಲಸು ಮಯಣದಂತೆ ಆಂಟಿ ಬರುವರು ಹಳೇ 

ನೆನಪುಗಳಟ್ಟಿಗೆ.

ಕಳೆದ ಬೇಸಿಗೆ ,ತರತರ ಹಲಸು ,ನೀರ ಮಾವಿನ ಚಟ್ನಿ 

ಅಜ್ಜ ಅಜ್ಜಿ ಚಿಕ್ಕಪ್ಪ ಚಿಕ್ಕಮ್ಮ ಅಣ್ಣ ತಂಗಿ ಎಲ್ಲರೂ ಅಂಟಿದ್ದಾರೆ

ಇದರ ತಯಾರಿ ಸಾಮೂಹಿಕ ಕಾರ್ಯ ,ಕೊಯ್ಯುವವರು ಒಬ್ಬರು 

ತುಂಡರಿಸಿ ಸ್ವಚ್ಛ ಮಾಡುವವರು ಹಲವರು,ಕೊಚ್ಚಲು ಇನ್ನೊಬ್ಬರು 

ಅರೆಯಲು ,ಬಾಳೆಯಲಿ  ತುಂಬಿಸಿ ಬೇಯಿಸಲು ಇನ್ನಿತರರು .

ತಿನ್ನಲು ಎಲ್ಲರೂ .

ರೆಚ್ಚೆ ,ಉಳಿದ ಬಾಳೆ ಸೇರುವುದು ದನದ ಕೊಟ್ಟಿಗೆ .



ಬುಧವಾರ, ಮಾರ್ಚ್ 24, 2021

 ಹುಟ್ಟೂರೆಂದರೆ ಬರೀ ಹೆಸರಲ್ಲ ,ನೆನಪ ಒಸರು 

ನಡೆದ ಒರುಂಕು ಹಾರಿದ ತಡಮ್ಮೆ ಸವೆದ ಸಂಕ 

ಹೊಲದಲ್ಲಿ  ಏರು ದನಿ ಓ ಬೇಲೆ  ಹಾಕುವಾ ಯೆಂಕ ,

ಅಂಬಾ ಎನುವವಳು ಹಟ್ಟಿಯಲಿ ಗೌರಿಯಲ್ಲವೇ ಹೆಸರು .


ಗುಡ್ಡೆಯಿಳಿದು ಬರೆ ಕಾಣುವಾ ಬಚ್ಚಲಿನ ಹೊಗೆ 

ಬೌ ಬೌ ಎಂದು ಟೈಗರ್ ಸಂತಸದಿ ಸ್ವಾಗತಿಪ  ಬಗೆ 

ಅಂಗಳದಿ  ಹರಡಿಯುವ  ಧನ ರಾಶಿ ಅಡಿಕೆ 

ಚಾವಡಿ ಜಗಲಿ  ಗೆ  ಕಟ್ಟಿದ  ಓಲೆಯಾ ತಡಿಕೆ .


ನಿತ್ಯ  ಶಾಲೆಗೆ ನಡೆದ  ಹಸಿರ ಹಾದಿ 

ಬರಿಗಾಲು ಪಾದ ಮೆಟ್ಟಿದಾ ಸುಗ್ಗಿ  ಹುಣಿ ಮೆತ್ತೆ 

 ಬಾಗಿ ಬಾಗಿ ಚಾಮರ ಬೀಸುವ ಪೈರಿನಾ  ಗತ್ತೇ

ಮರೆಯಲಿ ಹೇಗೆ ಚಡ್ಡಿದಾರೀ ಮಿತ್ರಗಣಮತ್ತೆ.

 

ಶಾಲೆಯೆಂದರೆ  ಬರೀ ಕಟ್ಟಡವೇ ಅಲ್ಲ  ನಮ್ಮ ಉಸಿರು 

ಮಮ್ಮದೆ  ಸಂಕಪ್ಪ ನರಸಿಂಹ ಅಲ್ಲವೇ ಅವರ ಹೆಸರು 

ಅಲ್ಲಿ ಜೋಡು ಜಡೆ ಬಣ್ಣ ಬಣ್ಣದ ಲಂಗ

ಸಾವಿತ್ರಿ  ಪಾರ್ವತಿ  ಶ್ರೀದೇವಿ ಗೆಳತಿ ಗೆಳೆಯರ ಸಂಗ .


ಆಗೋ ಕಾಣುವುದು ಐತಪ್ಪನಾಯ್ಕರ  ಗಾಂಧಿ ಟೋಪಿ

ಇಲ್ಲಿ ಕರೆವರು  ರಾಮ ರಾಯರು  ಆಟಕ್ಕೆ  ಶೀಘ್ರ ಕೋಪಿ 

ಮಾಸ್ತರರ  ಮೆರವಣಿಗೆ ಕೃಷ್ಣಪ್ಪ ,ಸಂಜೀವ , ಕೊರಗಪ್ಪಶೆಟ್ಟಿ  

ಏರುತಿದೆ  ಸಂತಸದಿ ನೆನಪಿನಾ ಅಟ್ಟಿ.

 

ಕೋಡಿ  ಭಟ್ಟರ ಹೊಟೇಲ್ ನೀರುಳ್ಳಿ ಬಜೆ ಕಂಪು 

ಸಾಯಿಬ್ಬರಾ  ಅಂಗಡಿ ಗೋಲಿ ಸೋಡದ ತಂಪು 

 ಜವಳಿ ಶೆಟ್ಟರ ಅಂಗಡಿ  ಎದುರು ಹೊಲಿಗೆ  ಯಂತ್ರದ ಸದ್ದು 

ಪಕ್ಕದಲೇ ಡಾ  ಮಹಾದೇವ ಶಾಸ್ತ್ರಿಗಳ ಮದ್ದು .


ಗಂಟೆ ಬಾರಿಸುತಲೆ ಕಲರವದಿ ಹೊರಟ ಮಕ್ಕಳ ಮಂದೆ
ನಶ್ಯ ಸೇವಿಸುವ ನಾವುಡ ಮೇಷ್ಟ್ರು ನಮ್ಮ ಮುಂದೆ
ಕೇಪುಳುಗುಡ್ಡೆಯ ಹುಣಿಸೆ ಹಣ್ಣಿನ ಮರವು
ಪೀರ್ ಸಾಯಿಬ್ಬರ ಬಿಳಿ ಬಸ್ಸಿನಾ ಬರವು .



 




ಮಂಗಳವಾರ, ಮಾರ್ಚ್ 23, 2021

ವಿಷ ಪ್ರಾಶನ

                           ವಿಷ  ಪ್ರಾಷನ 

ಇತ್ತೀಚಿಗೆ  ಆತ್ಮ ಹತ್ಯಾ (ಆತ್ಮಕ್ಕೆ ಸಾವಿಲ್ಲ ಎನ್ನುತ್ತಾರೆ )ಪ್ರಕರಣಗಳು  ಮತ್ತು ರಸ್ತೆ ಅಪಘಾತಗಳು ಹೆಚ್ಚುತ್ತಿವೆ . ಆತ್ಮಹತ್ಯೆಗೆ ಹಲವು ದಾರಿಗಳು ,ಅವುಗಳ ಬಗ್ಗೆ ವಿವರ ಕೊಟ್ಟರೆ  ಯಾರಾದರೂ ಅದನ್ನು ಉಪಯೋಗಿಸುವ ಅಪಾಯ ಇರುವುದರಿಂದ ವಿವರ ಬೇಡ  . ( ಕೊಟ್ಟರೂ ಅದರ ಕಾಪಿ ರೈಟ್ ಪೂರ್ಣ ನನ್ನದೇ ಮತ್ತು ಉಪಯೋಗಿಸುವವರು ಗೌರವ ಧನ  ಪಾವತಿಸದಿದ್ದರೆ  ಕಾನೂನು ಕ್ರಮ ಕೈಗೊಳ್ಳಲಾಗುವುದು !)

ಪ್ರೇಮ ವೈಫಲ್ಯ , ಪ್ರೇಮ ಸಫಲವಾದ ಕಾರಣ ಆದ ವಿವಾಹ (ಅದರ ವೈಫಲ್ಯ ),ಪರೀಕ್ಷೆಯಲ್ಲಿ  ಅನುತ್ತೀರ್ಣ ,ತಾಯಿ ಮೊಬೈಲ್ ನೋಡುವದು ಬಿಟ್ಟು ಓದು ಎಂದು ಹೇಳಿದಳು ,ತಂದೆ ದಿನವಿಡೀ ಟಿ ವಿ ನೋಡ ಬೇಡ ಎಂದು ಗದರಿಸಿದರು ಇತ್ಯಾದಿ ಹಲ ಕಾರಣ ಗಳು . 

ಹಿಂದೆ  ಹೆಚ್ಚಿನವರು  ಟಿಕ್ ಟ್ವೆಂಟಿ ಎಂಬ ತಗಣೆ ನಿವಾರಕ ಕುಡಿದು ಬರುತ್ತಿದ್ದರು .ಅದು  ಒರ್ಗನೋ  ಫೋಸ್ಫರಸ್ ಎಂಬ ರಾಸಾಯನಿಕ .ಅದನ್ನು ಕುಡಿದರೆ ನರ ವೈಫಲ್ಯ  ಆಗಿ ಸಾಯುತ್ತಿದ್ದರು . ಅದರ   ವಾಸನೆ ಮತ್ತು ಚಿಕಿತ್ಸೆ ನಮಗೆ ನಾಸಿಕ ಮತ್ತು  ಕರ ಗತ ಆಗಿತ್ತು . ಆದರೆ ಇತ್ತೀಚಿಗೆ  ಬೇರೆ ಬೇರೆ ವಿಷಗಳು ಇದ್ದು ಅವುಗಳ ಹೆಸರು ಗೊತ್ತಿದ್ದರೆ ಪುಸ್ತಕ ,ಆನ್ಲೈನ್  ಮತ್ತು  ತಯಾರಕ ಕಂಪನಿ ಯ ಎಚ್ಚರಿಕಾ ಪತ್ರ (ಇದು ವಿಷದ  ಜತೆ ಬರುತ್ತದೆ )ನೋಡಿ ಚಿಕಿತ್ಸೆ ಮಾಡ ಬೇಕಾಗುವದು .ಈಗಲೂ ಕೀಟ ನಾಶಕಗಳ ಸೇವನೆ ಮಾಡಿ ಬರುವವರೇ ಅಧಿಕ .ಅವುಗಳಲ್ಲಿ ಒರ್ಗನೋ ಫೋಸ್ಫರಸ್ ,ಒರ್ಗನೋ ಕ್ಲೋರೈಡ್ ಇತ್ಯಾದಿ ಇವೆ .

   ಹಲವು  ವಿಷಗಳನ್ನು  ರೋಗಿಯನ್ನು ತಡ ಮಾಡದೇ ಆಸ್ಪತ್ರೆಗೆ  ಕರೆದುಕೊಂಡು ಬಂದರೆ  ಜಠರ ಕ್ಕೆ  ಕೊಳಾಯಿ ಹಾಕಿ  ತೊಳೆದು ತೆಗೆಯುವೆವು . ಕಾರ್ಬಾಲಿಕ್  ಆಸಿಡ್ (ಫಿನೈಲ್ ಇತ್ಯಾದಿ ),ಆಮ್ಲ ,ಕ್ಷಾರ  ಕುಡಿದವರಲ್ಲಿ  ಹೊಟ್ಟೆ ತೊಳೆಯುವುದು ನಿಷಿದ್ಧ . 

ವಿಷ  ಪ್ರಾಶನ  ಮಾಡಿದವರಿಗೆ  ಪ್ರಥಮ ಚಿಕಿತ್ಸೆ  ಕಲುಷಿತ ವಸ್ತ್ರಗಳನ್ನು  ತೆಗೆದು ,ಕೂಡಲೇ  ಆಸ್ಪತ್ರೆಗೆ ಸಾಗಿಸುವದು . ವಾಂತಿ ಬರಿಸಲೆಂದು  ಬಾಯಿಗೆ ಬೆರಳು ಹಾಕುವುದು ,ಜಿರಳೆ ಪಿಟ್ಟೆ ತಿನಿಸುವದು ಮಾಡ ಬಾರದು ,

ಇಲಿ  ಪಾಷಾಣ ಗಳಲ್ಲಿ  ಎರಡು ವಿಧ ಇದೆ  .ಒಂದು ರಕ್ತ ಹೆಪ್ಪು ಗಟ್ಟದಂತೆ ಮಾಡುವುದು ,ಇನ್ನೊಂದು ಲಿವರ್ ಗೆ  ಹಾನಿ ಮಾಡುವುದು . 

ಮೈಲು ತುತ್ತು  ಕೆಂಪು ರಕ್ತ ಕಣಗಳನ್ನು ನಶಿಸುವುದು ,ಮೂತ್ರ ಪಿಂಡ ವೈಫಲ್ಯ ಕ್ಕೂ ಕಾರಣ  ಆಗ ಬಹುದು .ಕಾರ್ಬೊಲಿಕ್  ಆಮ್ಲ ಕೂಡ ಕಿಡ್ನಿ ವಿರೋಧಿ . 

ಕೆಲವರು  ನಿದ್ರೆ ಮಾತ್ರೆ ಸೇವಿಸಿ ಚಿರನಿದ್ರೆಗೆ ಹೋಗಲು ಯತ್ನಿಸುವರು .ಇನ್ನು ಕೆಲವರು ಕೈಗೆ ಸಿಕ್ಕಿದ ಮಾತ್ರೆ ಸೇವಿಸುವರು

    ಹಲವು  ಬಾರಿ  ಮನೆಯವರನ್ನು ಹೆದರಿಸಲು ವಿಷ ತಿಂದಿದ್ದೇವೆ ಎಂದು ಹೇಳಿ ಆಸ್ಪತ್ರೆಗೆ  ಬರುವವರೂ ಇದ್ದಾರೆ . 

ಅಗ್ನಿ ಅಸ್ತ್ರಕ್ಕೆ ವರುಣಾಸ್ತ್ರ ,ಸರ್ಪಾಸ್ತ್ರಕ್ಕೆ  ಗರುಡಾಸ್ತ್ರ ಇರುವಂತೆ  ಕೆಲವು ವಿಷಗಳಿಗೆ  ಪ್ರತಿ ವಿಷ ಇವೆ .ಇನ್ನು ಕೆಲವಕ್ಕೆ ಇಲ್ಲ .

ವಿಷ ಕುಡಿದವರನ್ನು ,ಮದ್ಯ ಪಾನ ಸಂಬಂಧಿ , ಲೈಂಗಿಕ ರೋಗದಿಂದ ಬಳಲುವವರು  ಬಂದಾಗ ನಾವು ವಿಷ ಕುಡಿದಿದ್ದಿ  ಈಗ ಅನುಭವಿಸು ಅಥವಾ ಮಜಾ ಮಾಡಿ ಬಂದಿದ್ದಿ ನಿನ್ನ ಕರ್ಮ  ಎಂದು ಹೇಳ ಬಾರದು ಎಂದು ನಮ್ಮ ಗುರುಗಳು ಹೇಳಿ ಕೊಟ್ಟಿರುವರು .ನಾವು ಸಮಾಜದ ಮೋರಲ್  ಗಾರ್ಡಿಯನ್ ಗಳು ಅಲ್ಲಾ  ,ಕಾಯಿಲೆ ಶಮನ ಮತ್ತು ಸಾಂತ್ವನ ಮಾತ್ರ ನಮ್ಮ  ಧ್ಯೇಯ . ಗುಣ ಮುಖ ಆದಮೇಲೆ  ಯೋಗ್ಯ ಸಲಹೆ ನೀಡುವೆವು

ಭಾನುವಾರ, ಮಾರ್ಚ್ 21, 2021

ಮೆಡಿಕಲ್ ರೆಪ್ರೆಸೆಂಟೇಟಿವ್ ಎಂಬ ಶ್ರಮ ಜೀವಿಗಳು

 ಮೆಡಿಕಲ್ ರೆಪ್ರೆಸೆಂಟೇಟಿವ್  ಎಂಬ ಶ್ರಮ ಜೀವಿಗಳು .

 ಕೈಯಲ್ಲಿ ಒಂದು ಬಾಗ್ ,ಕೊರಳಲ್ಲಿ ಸೆಖೆಕಾಲದಲ್ಲೂ  ಟೈ ಹಿಡಿದು ಬಿಸಿಲು ಮಳೆ ಎನ್ನದೆ ಸದಾ ಸಂಚಾರಿಗಳಾಗಿ  ಕಾರ್ಯ ನಿರ್ವಹಿಸುವ ಮೆಡಿಕಲ್ ರೆಪ್ರೆಸೆಂಟೇಟಿವ್ ಗಳನ್ನು ನೀವು ನೋಡಿರ ಬಹುದು . ಆಸ್ಪತ್ರೆ ,ಕ್ಲಿನಿಕ್ ಮತ್ತು ಔಷಧಿ ಅಂಗಡಿಗಳಲ್ಲಿ ಇವರು ಕಾಣ ಸಿಗುವರು . ಎಂ ಬಿ ಬಿ ಎಸ್ ಪಾಸ್ ಆಗಿ ಹೌಸ್ ಸರ್ಜನ್ ಆದಾಗ ಇವರು ಕೊಡುತ್ತಿದ್ದ ಸಾಂಪಲ್ ಔಷಧಿ  ,ಪೆನ್ ಇತ್ಯಾದಿ ನನಗೆ ಅತೀವ ಸಂತೋಷ ಉಂಟು ಮಾಡುತ್ತಿತ್ತು .ಆಗ ಔಷಧಿ  ಕಂಪನಿ ಗಳು ಕಡಿಮೆ ಇದ್ದವು .ಕ್ರಮೇಣ ಇವರ ಸಂಖ್ಯೆ ಜಾಸ್ತಿ ಆಗಿ  ಇವರು ಹೇಳಿದ್ದನ್ನೇ  ಕೇಳಿ ತಲೆ ಚಿಟ್ಟು ಹಿಡಿದು ಒಮ್ಮೆ ನಾನು ಯಾವುದೇ ಕಂಪನಿ ಯ  ಪ್ರತಿನಿಧಿಯನ್ನು  ನೋಡುವುದಿಲ್ಲ ಎಂದು ಒಂದು ವರ್ಷ ಮಾಡಿದೆ .ಆಮೇಲೆ ಒಂದು ದಿನ ಯೋಚಿಸಿದಾಗ ನನಗೆ ಜ್ನಾನೋದಯ ಆಯಿತು ."ಪಾಪ ಅವರ ಕೆಲಸ ಅವರು ಮಾಡುತ್ತಾರೆ ,ಎಲ್ಲೆಲ್ಲಾ ನಡೆದು ಹೋಗಬೇಕು .ಹೋದ ಕೂಡಲೇ  ವೈದ್ಯರು ಕಾಣ ಸಿಗರು ;ಕಾಯ ಬೇಕು .ನಾನು ಕೆಲವು ಕ್ಷಣ ಅವರನ್ನು ಆಲಿಸ ಬೇಕು "ಎಂದು  ನಿರ್ಧಾರ ಬದಲಿಸಿದೆ . ಅವರು ತಮ್ಮಕಂಪನಿ ಯ  ಉತ್ಪನ್ನಗಳ  ಚಿತ್ರ ಮತ್ತು ಗುಣ ವಿಶೇಷಗಳುಳ್ಳ ಒಂದು ಫೈಲ್ ನ ಪುಟಗಳನ್ನು ತಿರುವಿ  ವರ್ಣನೆ ಮಾಡುವರು .ಈಗೀಗ  ಕಂಪ್ಯೂಟರ್ ಬಳಕೆ ಹೆಚ್ಚಾಗಿದೆ .ಕೆಲವರು  ಕಂಪನಿ ಬದಲಿಸಿದಾಗ (ಪಕ್ಷಾಂತರಿ ರಾಜಕಾರಿಣಿಗಳಂತೆ ) ತಮ್ಮ ಹಳೇ ಕಂಪನಿ ಯ ಔಷಧಿಗಳಿಗಿಂತ  ಈಗಿನವೇ ಉತ್ತಮ ಎಂದು ಪ್ಲೇಟ್ ಬದಲಿಸುವರು .

 ನನಗೆ  ಒಂದೇ ಬೇಸರ  ,ಇವರು  ಬಹಳ ಕಾಗದ ವೇಸ್ಟ್  ಮಾಡುವರು ಎಂದು .ಪ್ರತಿಯೊಬ್ಬರೂ  ತಮ್ಮ ಉತ್ಪನ್ನಗಳ ಪರಿಚಯ ಹಾಳೆಗಳನ್ನು ಯಥೇಚ್ಛ ವಾಗಿ ಕೊಟ್ಟು ಹೋಗುವರು .ಅದು ಕಸದ ಬುಟ್ಟಿ ಸೇರುವುದು .ಇನ್ನು ಉಪಯೋಗಕ್ಕೆ ಬಾರದ ಸಾಂಪಲ್ ಮತ್ತು ವೈದ್ಯರಿಗೆ ನೆನಪಿನ ಕಾಣಿಕೆ ನಿಲ್ಲಿಸಿದರೆ ವೆಚ್ಚ ತಗ್ಗಿಸ ಬಹುದು .

ನಾನು ಮೊದಲೇ  ಔಷಧಿ ಬರೆಯುವುದರಲ್ಲಿ ಜಿಪುಣ . ಕಡಿಮೆ ಕ್ರಯದಲ್ಲಿ ಉತ್ತಮ ಗುಣ ಮಟ್ಟದ  ಔಷಧಿಗಳಿಗೆ  ಪ್ರಾಧಾನ್ಯ . ನನ್ನನ್ನು ಕಂಡು ಅವರಿಗೆ ವ್ಯಾಪಾರ ಹೆಚ್ಚುವುದು ಸಂಶಯ .ಆದರೂ ನನ್ನ ದರ್ಶನದಿಂದ  ಅವರ  ಲೋಗ್ ಬುಕ್ ನಲ್ಲಿ  ನೋಡಿದ  ವೈದ್ಯರ ಸಂಖ್ಯೆ ಒಂದು ಹೆಚ್ಕುವುದು .

ಮೊದಲು ಗಂಡಸರು ಮಾತ್ರ ಈ ಕೆಲಸಕ್ಕೆ ಬರುತ್ತಿದ್ದು ಈಗ ಹೆಂಗಳೆಯರೂ ಇದ್ದಾರೆ.

ತಾವು ಭೇಟಿ ಮಾಡಿದ ವೈದ್ಯರ  ಕ್ಲಿನಿಕ್ ನಲ್ಲಿ  ಕಡಿಮೆ ರೋಗಿಗಳು ಇದ್ದರೆ "ಈಗ ಸೀಸನ್ ತುಂಬಾ ಡಲ್ ಸಾರ್ ಎಲ್ಲಾ ಕಡೆ " ಎಂದು ಸಾಂತ್ವನ ಹೇಳುತ್ತಾರೆ .ನಾನು ಕಾಯಿಲೆ ಕಮ್ಮಿ ಇದ್ದರೆ ಒಳ್ಳೆಯದು ಅಲ್ಲವೇ ಎಂದು ತಮಾಷೆ ಮಾಡುವೆನು.ಒಬ್ಬನ ಸಂಕಟ ಇನ್ನೊಬ್ಬನಿಗೆ ಅನ್ನ ; ಇದು ಹಲವು ವೃತ್ತಿಗಳಲ್ಲಿ ಇದೆ .


ಬಹಳ ಮಂದಿ  ಕಂಪನಿ  ಔಷಧಿಗಳು  ಬಹು ತುಟ್ಟಿ .ಜನೌಷಧಿ ಮಾತ್ರ ಒಳ್ಳೆಯದು ಎಂದು  ಮಾತನಾಡುತ್ತಾರೆ .ಆದರೆ ಲಕ್ಷಾಂತರ  ಮಂದಿಗೆ  ಉದ್ಯೋಗ ಕೊಡಲು   ಮತ್ತು ಹೊಸ ಹೊಸ ಔಷಧಿಗಳಿಗ  ಆವಿಷ್ಕಾರಕ್ಕೆ  ಲಾಭ  ದ  ಉತ್ತೇಜನ ಬೇಕು . ನಾವು (ನಾನೂ ಸೇರಿ )ಕಡಿಮೆ ಹಣಕ್ಕೆ ಸಿಕ್ಕಿದೊಡನೆ ಅಲ್ಲಿಗೆ ಧಾವಿಸುತ್ತೇವೆ . ಉದಾಹರಣೆಗೆ  ಭಾರೀ ಕಂಪನಿ ಗಳು ಈಗ ಚಿಲ್ಲರೆ ಔಷಧಿ ವ್ಯಾಪಾರಕ್ಕೆ ಇಳಿದಿದ್ದು ದಿಸ್ಕೌಂಟ್ ಕೊಡುತ್ತಿವೆ .ಅವರ ಜತೆ ಸಾಲ ಮಾಡಿ ,ಬಾಡಿಗೆ ಸಂಬಳ ಇತ್ಯಾದಿ ಕೊಟ್ಟು  ಅಂಗಡಿ ಇಟ್ಟ ನಮ್ಮ ಊರಿನ ಸಾಮಾನ್ಯ ಒಬ್ಬ ಫರ್ಮಾಸಿಸ್ಟ್ ಗೆ  ಇಂದು ಅಸಾಧ್ಯ . ಇದು ಇಂದಿರಾ ಕಾಂಟೀನ್ ಪಕ್ಕದಲ್ಲಿ  ಇರುವ ಸಣ್ಣ ಕಾಂಟೀನ್ ನವನ ಅವಸ್ಥೆ .



ಶನಿವಾರ, ಮಾರ್ಚ್ 20, 2021

ಅಧ್ಯಾಪಕರ ನೆನಪು

                 ಅಧ್ಯಾಪಕರ ನೆನಪು 

 

 "ಅರಿವೇ  ಗುರು "

"ಕೆಟ್ಟ ವಿದ್ಯಾರ್ಥಿ ಎಂದು ಇಲ್ಲ ,ಕೆಟ್ಟ ಅಧ್ಯಾಪಕರು ಮಾತ್ರ ಇರುವರು "

ನನ್ನ   ಪ್ರಾಥಮಿಕ  ಮತ್ತು  ಪ್ರೌಢ ಶಿಕ್ಷಣ ವನ್ನು  ಕನ್ಯಾನ ದಲ್ಲಿ  ಆಯಿತು  .ಎರಡನ್ನೂ  ತಾಲೂಕು  ಬೋರ್ಡ್ ನಡೆಸುತ್ತಿದ್ದು  ಬೋರ್ಡ್ ಹೈಯರ್ ಎಲಿಮೆಂಟರಿ ಶಾಲೆ ಮತ್ತು ಬೋರ್ಡ್  ಹೈ ಸ್ಕೂಲ್ ಎಂದು ಕರೆಯುತ್ತಿದ್ದರು . ಸ್ಥಳೀಯವಾಗಿ ನೇಮಕ ಇತ್ಯಾದಿ ಆಗುತ್ತಿದ್ದುದರಿಂದ  ಒಳ್ಳೆಯ ಶಿಕ್ಷಣ ಸಿಗುತ್ತಿತ್ತು ಎನ್ನ ಬಹುದು . ಅವು ಈಗ ಸರಕಾರಿ  ಶಾಲೆಗಳಾಗಿವೆ  . ಈ ಮಾರ್ಪಾಡೇ  ಅವುಗಳ ಅವನತಿಗೆ ಒಂದು ಕಾರಣ  ಎನ್ನ ಬಹುದು .ಅಳಿಕೆಯಂತಹ ಖಾಸಗಿ ಶಾಲೆಯನ್ನೂ  ಮೀರಿಸಿ ದ  ಫಲಿತಾಂಶ ನಮ್ಮಲ್ಲಿ ಬರುತ್ತಿತ್ತು . 

ಮೊದಲ ಎರಡು ತರಗತಿಗಳಲ್ಲಿ  ಅಕ್ಷರ ,ಒತ್ತಕ್ಷರ ,ಸಂಖ್ಯೆ  ಮಗ್ಗಿ ಇತ್ಯಾದಿ ಕಲಿಸುತ್ತಿದ್ದರು . ಮೂರರಿಂದ ಸಮಾಜ ವಿಜ್ಞಾನ ಗಣಿತ ಹೀಗೆ ಆರಂಭ ಆಗುವುದು . ಹೆಚ್ಚಿನ ಅಧ್ಯಾಪಕರು  ಪಠ್ಯ ಪುಸ್ತಕ ಒಂದು ಕೈಯಲ್ಲಿ ಮತ್ತು ಇನ್ನೊಂದರಲ್ಲಿ ಬೆತ್ತ ಹಿಡಿದು ಓದುತ್ತಾ ಹೋಗುವರು . ಅವರಿಗೆ ಮುಖ್ಯ ಎನಿಸಿದ  ಮತ್ತು ಅರ್ಥ ಆಗದೇ  ಇದ್ದರೆ  ಪುನಃ ಓದುವರು ಮತ್ತು ಅರ್ಥ ಆಯಿತಾ ,ಅಂಡರ್ ಸ್ಟಾಂಡ್ ಇತ್ಯಾದಿ ಹೇಳುವರು . ಉದಾ ; ಮಹಾತ್ಮಾ ಗಾಂಧಿಯವರು ಭಾರತ ದೇಶಕ್ಕೆ ಸ್ವಾತಂತ್ರ್ಯ  ತಂದು ಕೊಟ್ಟರು .. ಈ ವಾಕ್ಯವನ್ನು ಪೂರ್ಣವಾಗಿ ಓದುವರು ,ಆಮೇಲೆ ಮಹಾತ್ಮಾ ಗಾಂಧಿಯವರು ಏನು ಮಾಡಿದರು ? ಆಗ ನಾವು ಸ್ವಾತಂತ್ರ್ಯ ತಂದು ಕೊಟ್ಟರು ಎನ್ನ ಬೇಕು . ಯಾರು ತಂದು ಕೊಟ್ಟರು? ಗಾಂಧಿ ತಂದು ಕೊಟ್ಟರು . ಯಾರಿಗೆ ತಂದು ಕೊಟ್ಟರು ? ಭಾರತಕ್ಕೆ ತಂದುಕೊಟ್ಟರು . ನಡುವೆ  ಯಾರಾದರೂ ಹುಡುಗರ ಮನಸ್ಸು  ಕ್ಲಾಸ್ ನಲ್ಲಿ ಇಲ್ಲಾ ಎಂದು  ಅನಿಸಿದರೆ ' ಕೃಷ್ಣಪ್ಪಾ ಸ್ಟ್ಯಾಂಡ್ ಅಪ್ ,ಗಾಂಧಿ ಏನು ಮಾಡಿದರು ? "

"ಉಪವಾಸ ಮಾಡಿದರು ಸರ್"

ನಿನ್ನ ತಲೆ ,ನೀನು ಕ್ಲಾಸಿನಲ್ಲಿ ಇಲ್ಲ ,ನಿಲ್ಲು ಬೆಂಚಿನ ಮೇಲೆ "

ಇಲ್ಲಿ ಅಧ್ಯಾಪಕರೂ  ಓದಿ ಬಂದಿರುವುದಿಲ್ಲ .ಪಠ್ಯ ಪುಸ್ತಕ ಓದಿ ಅದನ್ನೇ ಪುನರಾವೃತ್ತಿ ಮಾಡುವರು . ಇದು  ಪೂರ್ಣ ನಿಷ್ಪ್ರಯೋಜಕ  ಎಂದು ನಾನು ಹೇಳುವುದಿಲ್ಲ . ಆದರೆ  ಒಳ್ಳೆಯ ಮಾದರಿ ಅಲ್ಲ. ನನ್ನ ಒಂಬತ್ತನೇ ತರಗತಿಯಲ್ಲಿ ನಡೆದ ಸಂಗತಿ .ಚರಿತ್ರೆ ಅಧ್ಯಾಪಕರು  ಇದೇ  ರೀತಿ ಓದಿ ಪಾಠ ಮಾಡುವವರು . ಮೈಸೂರಿನ ಇತಿಹಾಸ . 

" ಮೈಸೂರಿನ ಹುಲಿ ಟಿಪ್ಪು ಸುಲ್ತಾನನು ನಾಲ್ಕನೇ ಮೈಸೂರು ಯುದ್ಧದಲ್ಲಿ  1799ನೇ  ಫೆಬ್ರುವರಿ 30  ರಂದು ಮಡಿದನು ." ಎಂದು ಪುಸ್ತಕದಲ್ಲಿ ಇತ್ತು .ಅಧ್ಯಾಪಕರು ಅದನ್ನೇ ಮೇಲೆ ಹೇಳಿದಂತೆ  ಪುನರಾವೃತ್ತಿ ಮಾಡಿದರು . ನಮ್ಮ ತರಗತಿಯಲ್ಲಿ ಒಬ್ಬ ಜಾಣ ಹುಡುಗ  ಎದ್ದು ನಿಂತು "ಸಾರ್ ಫೆಬ್ರುವರಿ ಯಲ್ಲಿ ಮೂವತ್ತು ಇಲ್ಲವಲ್ಲ?"

ಮಾಸ್ಟ್ರು  ಕಕ್ಕಾ ಬಿಕ್ಕಿ .ಸುಧಾರಿಸಿ ಕೊಂಡು ಗುಡ್ 'ನಾನು ಯಾರು ಇದನ್ನು ಹೇಳುತ್ತಾರೆ ಎಂದು ಕಾಯುತ್ತಿದ್ದೆ .ಉಳಿದವರು ನಿದ್ದೆ ಮಾಡುತಿದ್ದ್ರಿರೋ?" ಎಂದರು . 

ಇನ್ನೊಮ್ಮೆ ಜೀವ ಶಾಸ್ತ್ರ  ಅಧ್ಯಾಪಕರು ಸಸ್ಯ ಮತ್ತು ಪ್ರಾಣಿಗಳಲ್ಲಿಯ ಭೇದ ಗಳ  ಪಾಠ  ಪುಸ್ತಕ ಓದುತ್ತಾ " ಸಸ್ಯಗಳಲ್ಲಿ ನರ ವ್ಯೂಹ ಇಲ್ಲ .ಏನು ಇಲ್ಲಾ  ,ನರ  ಮಂಡಲ ಇಲ್ಲ . ಪ್ರಾಣಿಗಳಲ್ಲಿ ಅದು ಇರುತ್ತದೆ ." ಇದನ್ನೇ ಪುನಃ ಪುನಃ ಓದಿದರು .ಒಬ್ಬ ವಿದ್ಯಾರ್ಥಿ " ಹಾಗಾದರೆ ನಾಚಿಕೆ ಮುಳ್ಳು (ಮುಟ್ಟಿದರೆ ಮುನಿ)ಒಂದು ಎಲೆ ಮುಟ್ಟಿದರೆ ಉಳಿದವೂ ಮಡಿಚುವುದು ಹೇಗೆ ?'ಎಂದು ಪ್ರಶ್ನಿಸಿದ . ಅದಕ್ಕೆ ಅಧ್ಯಾಪಕರು "ತಲೆ ಹರಟೆ ,ಹೇಳಿದ್ದನ್ನು ಕೇಳಿಕೊಂಡು ಕುಳಿತುಕೋ .ಇವನು ದೊಡ್ಡ ಬೃಹಸ್ಪತಿ " ಎಂದರು .

 ಮೂರನೇ ತರಗತಿಗೆ ನನಗೆ ಮಡಿಯಾಲ ಶ್ರೀನಿವಾಸ ರಾವ್ ಅಧ್ಯಾಪಕರು .ಅವರು  ಪಠ್ಯ  ಓದಿ ಬಂದು ವಿಶ್ಲೇಷಿಸಿ ಪಾಠ ಮಾಡುವರು .ಸಂಜೆ ತರಗತಿಯ ಹೊರಗೆ ಆಲದ ಮರದ ಅಡಿಯಲ್ಲಿ ಚಂದಮಾಮ ಮತ್ತು ಇತರ ಕತೆ ಪುಸ್ತಕ ಓದುವರು .ನಮ್ಮಲ್ಲಿ ಓದುವ ಹವ್ಯಾಸ ಬೆಳೆಸಿದವರು ಅವರು ಎಂಟನೇ ತರಗತಿ ವರೆಗೆ ಕಲಿತ  ಶಿಕ್ಷಕ ತರಬೇತಿ ಆಗದ ಶಿಕ್ಷಕರು . ಶಿಸ್ತು ಪಾಲನೆಗೆ ಹೆಸರಾದವರು .ಅವರ ಮಗ  ಶ್ರೀಪತಿ ರಾಯರು ನನಗೆ ಹೈ  ಸ್ಕೂಲ್ ನಲ್ಲಿ ವಿಜ್ಞಾನ ಅಧ್ಯಾಪಕರು . ತಂದೆಯಂತೆ ಮಗ . ಪೂರ್ವ ತಯಾರಿ ಮಾಡಿ ಬರುವರು ..ಪ್ರಯೋಗ ಶಾಲೆ ಇದೆಯೆಂದು ತಿಳಿದದ್ದು ಅವರಿಂದ .ತರಗತಿ ಗೆ ಆರಂಭಕ್ಕೆ ಮೊದಲೇ ಬಂದು ಸಂಬಂಧ ಪಟ್ಟ ಚಿತ್ರ ವರ್ಣಮಯವಾಗಿ  ಬೋರ್ಡ್ ನಲ್ಲಿ ಬರೆಯುವರು .ಸಾಧ್ಯವಾದ ಪ್ರಯೋಗ  ಮಾಡಿ ತೋರಿಸುವರು .ಪಠ್ಯ ಪುಸ್ತಕ  ತರಗತಿಯಲ್ಲಿ ಓದುತ್ತಿರಲಿಲ್ಲ. 

 ಹೈ ಸ್ಕೂಲ್ ನಲ್ಲಿ ಕಮ್ಮಜೆ ಸುಬ್ಬಣ್ಣ ಭಟ್ (ಅವರು ಜೂನಿಯರ್ ಕಾಲೇಜು ಅರ್ಥ ಶಾಸ್ತ್ರ  ಪ್ರಾಧ್ಯಾಪಕರಾಗಿ ನೇಮಕ ಹೊಂದಿದ್ದರೂ ಹೈ ಸ್ಕೂಲ್ ತರಗತಿಗೆ ಪಾಠ ಮಾಡುತ್ತಿದ್ದರು )ಇಂಗ್ಲಿಷ್ ಪಾಠ ವನ್ನು  ಹೇಗೆ ಮಾಡ ಬಹುದು  ಎಂದು ತೋರಿಸಿ ಕೊಟ್ಟರು .ಅಧ್ಯಯನ ಮಾಡಿ ಕ್ಲಾಸ್ ಗೆ ಬರುವರು .ನಮ್ಮಲ್ಲಿ ಸಾಹಿತ್ಯದ ಅಭಿರುಚಿ  ಕೆರಳಿಸುವ  ಪಾಠ .. ಮತ್ತು ಸಣ್ಣ ಸಣ್ಣ ವಿವರವೂ ಮನದಟ್ಟು ಮಾಡುವರು .ಉದಾಹರಣೆಗೆ  ಸ್ಯಾಂಡ್ ವಿಚ್ ಎಂಬ ಶಬ್ದ ಬಂತು .ನಾವು ಹಳ್ಳಿ ಮಕ್ಕಳು  ಕೇಳಿಯೂ ನೋಡಿಯೂ ಇಲ್ಲದ ವಸ್ತು .ಬೋರ್ಡಿನಲ್ಲಿ ಎರಡು ಬ್ರೆಡ್ ತುಂಡು ಚಿತ್ರ ಬರೆದು ನಡುವೆ ಪದಾರ್ಥ ಹಾಕಿ ಇದು ಎಂದು ವಿವರಿಸುವರು .ಅದೇ ರೀತಿ ಹೈ ಸ್ಕೂಲ್ ನಲ್ಲಿ ಶ್ರೀನಿವಾಸ ಉಪಾಧ್ಯ (ಹೆಡ್ ಮಾಸ್ಟರ್ ),ಪ್ರೈಮರಿಯಲ್ಲಿ ಜನಾರ್ಧನ ಶೆಟ್ಟರು ಅಧ್ಯಾಪನ ಎಂದರೆ ಏನು ಎಂದು ತೋರಿಸಿ ಕೊಟ್ಟವರು .ಪೂರ್ವಭಾವೀ ಅಧ್ಯಯನ ಮಾಡಿ  ತರಗತಿಗಳಿಗೆ ಅಧ್ಯಾಪಕರು ಬರುತ್ತಿದ್ದುದು ಬಹಳ ಕಡಿಮೆ ,.

   ನನಗೂ ಅಧ್ಯಾಪಕನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು . ಈಗಲೂ ನನ್ನ ಹಳ್ಳಿಯ ಶಾಲೆಯ ಎಲ್ಲಾ ಅಧ್ಯಾಪಕರ ಮೇಲೆ ನನಗೆ ಗೌರವ ಮತ್ತು ಪ್ರೀತಿ ಇದೆ :ಮತ್ತು ತಮ್ಮ ಅರಿವಿಗನುಗುಣವಾಗಿ  ಪ್ರಮಾಣಿಕ ಕೆಲಸ ಮಾಡಿದ್ದಾರೆ.ಆದರೆ ಅರಿವ ಅರಿತು  ಕುತೂಹಲ ಅರಳಿಸಿ ಮಾಡಿದವರು ಬೆರಳೆಣಿಕೆಯಷ್ಟು ಎಂದು ಈಗ ಅರಿವಾಗುತ್ತಿದೆ .


 

ಶುಕ್ರವಾರ, ಮಾರ್ಚ್ 19, 2021

ಲಕ್ಷ್ಮೀಧರ ಅಮಾತ್ಯನ ತಾಯಿಯ ಉಪದೇಶ

                           ನನ್ನ ಅಮ್ಮನ ಬಗ್ಗೆ ಬರೆಯುವಾಗ ಲಕ್ಷ್ಮಿ ಧರ  ಅಮಾತ್ಯನ ಉಲ್ಲೇಖ ಮಾಡಿದ್ದೆ .ಅವನು ಯಾರು ಎಂದು ಕೆಲವರು ಕೇಳಿದ್ದಾರೆ . ವಿಜಯನಗರ ಅರಸರ ಕಾಲದಲ್ಲಿ ಮಂತ್ರಿ ಆಗಿದ್ದವನು . ತಾಯಿ ಹಾಲು ಉಣಿಸುವಾಗ   ಮುಂದೆ ಮಂತ್ರಿಯಾದಾಗ ಏನು ಮಾಡಬೇಕೆಂದು    ಅವನ ಕಿವಿಯಲ್ಲಿ ಉಲಿಯುವ ಉಪದೇಶ ಪ್ರಸಿದ್ಧ  ಕಾವ್ಯ  ಶಾಸನ . 

             ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ ಮಾಡಿಸ

ಜ್ಜರೆಯೊಳ್ ಸಿಲ್ಕಿದನಾಥರಂ ಬಿಡಿಸು, ಮಿತ್ರರ್ಗಿಂಬುಕೆಯ್ ನಂಬಿದ|

ರ್ಗೆರೆವಟ್ಟಾಗಿರು, ಶಿಷ್ಟರಂ ಪೊರೆ ಎನುತ್ತಿಂತೆಲ್ಲಮಂ ಪಿಂತೆ ತಾ

ನೆರೆದಳ್ ಪಾಲೆರೆವೆಂದು ತೊಟ್ಟು ಕಿವಿಯೊಳ್ ಲಕ್ಷ್ಮೀಧರಾಮಾತ್ಯನಾ|

 ಈಗಿನ  ಕಾಲಕ್ಕೆ   ಇದನ್ನು ಸ್ವಲ್ಪ  ಮಾರ್ಪಾಟು ಮಾಡಬೇಕಾದೀತು ." ಕೆರೆಯಮ್  ಕಟ್ಟಿಸಿ  ನಿನ್ನ ಅನುದಾನದಿಂದ ಎಂಬ ಫಲಕ ಹಾಕಿಸು , ಅಜ್ಜರೆಯೊಳ್ ಸಿಲ್ಕಿದ ಅನಾಥರಿಗೆ  ಸಹಾಯ ಮಾಡಿ ಅದರ ಚಿತ್ರ ಪತ್ರಿಕೆ ದೃಶ್ಯ ಮಾಧ್ಯಮಗಳಲ್ಲಿ ಹಾಕು ,ಇಲ್ಲದಿದ್ದರೆ  ಮಾಡಿ ಪ್ರಯೋಜನ ಇಲ್ಲ "

 ನವರತ್ನ ರಾಮರಾಯರ  'ಕೆಲವು ನೆನಪುಗಳು' ಪುಸ್ತಕದಲ್ಲಿ ಒಂದು ಪ್ರಸಂಗ ಉಲ್ಲೇಖ ಇದೆ . ಮೈಸೂರು ಮಹಾರಾಜರ ಆಡಳಿತದಲ್ಲಿ ಅಮಲ್ದಾರ್ ಆಗಿ ಕೆಲಸ ಮಾಡಿದವರು . ಎಡತೊರೆ ಅಥವಾ ಈಗಿನ ಕೃಷ್ಣರಾಜ ನಗರ ದಲ್ಲಿ  ಸೇವೆ ಸಲ್ಲಿಸಿದ ಹಲ ವರುಷಗಳ ನಂತರ ಹಾಸನದಿಂದ ಮೈಸೂರಿಗೆ ಹೋಗುವ ದಾರಿಯಲ್ಲಿ ಕಾರಿನ ರೇಡಿಯೇಟರಿಗೆ  ನೀರು ಹಾಕಲೆಂದು ಸರಕಾರಿ ಬಾವಿಯ ಬಳಿ ನಿಲ್ಲಿಸಿ ಅಲ್ಲಿ ನೀರು ಸೇದುತ್ತಿದ್ದ ಮಹಿಳೆಯ ಬಳಿ ಕೇಳಿದರು  . ಆಳವಾದ ಬಾವಿಯಿಂದ ಸೇದಿ ಕೊಡ ತುಂಬ  ನೀರು ಕೊಟ್ಟ ಆಕೆಗೆ ಹಣ ಕೊಡಲು  ಹೋದಾಗ ದುಡ್ಡಿಗೆ ನೀರು ಮಾರಲು  ನಾವೇನು ಪೇಟೆಯವರು ಕೆಟ್ಟು ಹೋದೆವೆಯೇ ?ಎಂದು ಖಡಾಖಡಿ ನಿರಾಕರಿಸುತ್ತಾಳೆ .ಅಲ್ಲೇ ಇದ್ದ ಹಿರಿಯ  ಮಹಿಳೆ ಒಬ್ಬಳು "ಸ್ವಾಮಿ ,ಹಿಂದೆ ಇಲ್ಲಿ ಜನ ಕುಡಿಯುವ ನೀರಿಗಾಗಿ ಮೈಲು ಗಟ್ಟಲೆ  ನಡೆಯಬೇಕಿತ್ತು .ಅಳುವ ಕಂದ ಕೂಡ ಕುಡಿಯೋ ನೀರು ತರೋಕೆ ಹೋಗ್ತೀನಿ ಕಣಪ್ಪಾ  ಎಂದರೆ ಅಳು ನಿಲ್ಸೋನು . ನವರತ್ನ ರಾಯ ಎಂಬ ಎಳೇ  ಅಮಲ್ದಾರ್ ಈ ಬಾವಿ   ತೋಡಿಸಿ ಪುಣ್ಯ ಕಟ್ಕೊಂಡ .ನಿಮ್ಮ ಕಾಸು ಬೇಕಾದರೆ ಅವನಿಗೇ ಕೊಡಿ ಎಂದಳು .. 

ನವರತ್ನ ರಾಮ ರಾಯರಿಗೆ ಮನ ತುಂಬಿ ಬರುತ್ತದೆ .ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ ಪ್ರಜೆಗಳ ಹಣವನ್ನು ಅವರ ಕ್ಷೇಮಕ್ಕೆ ಮಹಾರಾಜರ ಹೆಸರಿನಲ್ಲಿ ನಡೆಸಿದ್ದ ನನಗೆ ಸಿಕ್ಕಿದ ಸಂಬಳ ಎಲ್ಲಾ ಭಕ್ಷೀಸು  (ಟಿಪ್ಸ್)ಮಾತ್ರ . ಅಂದರೆ ಜನರ ಕೃತಜ್ಞತೆ ಆಶೀರ್ವಾದ ನಿಜವಾದ ಸಂಬಳ ಎಂಬ ಅರ್ಥದಲ್ಲಿ ಬರೆಯುತ್ತಾರೆ 

ಮೈಸೂರು ದಿವಾನರಾಗಿದ್ದ  ಸರ್ ಮಿರ್ಜಾ ಇಸ್ಮಾಯಿಲ್ ಬಗ್ಗೆ ಡಿ ವಿ ಜಿ ಇಂತಹದೇ ಒಂದು ಪ್ರಸಂಗ ಉಲ್ಲೇಖಿಸುತ್ತಾರೆ . ಮಿರ್ಜಾ ನಿಧನರಾದಾಗ ಸ್ಮಶಾನದ ಹೊರಗೆ ಓರ್ವ ಮಹಿಳೆ ಬಿಕ್ಕಿ ಬಿಕ್ಕಿ ಅಳುತ್ತಿದ್ದು  ಕಾರಣ ವಿಚಾರಿಸಿದಾಗ  ಆಕೆ ಗರ್ಭಿಣಿಯಾಗಿದ್ದಾಗ  ದೂರದ ನಲ್ಲಿಯಿಂದ  ಏದುಸಿರು ಬಿಡುತ್ತಾ ನೀರು ತರುವುದನ್ನು  ನಗರ ವೀಕ್ಷಣೆಗೆ ಕುದುರೆ ಮೇಲೆ ಬಂದಿದ್ದ ದಿವಾನರು ಕಂಡು  ಮರುದಿನ ಬೆಳೆಗಾಗುವಾಗ  ಈಕೆಯ ಮನೆಯ ಮುಂದೆ ನಲ್ಲಿ ಇರಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿ ಅವಳ ಕಷ್ಟವನ್ನು  ಬೇಡದೇ  ನಿವಾರಿದ ದೇವರು ಎಂದು ಸ್ಮರಿಸುತ್ತಾಳೆ 

 

 

 

                                  

ಮಂಗಳವಾರ, ಮಾರ್ಚ್ 16, 2021

ಜನನಿ ತಾನೇ ಮೊದಲ ಗುರುವು


                         ಜನನಿ  ತಾನೇ ಮೊದಲ ಗುರುವು 

 

                  



 

ನಮ್ಮ ಹೆತ್ತವರಿಗೆ  ಹತ್ತು ಮಕ್ಕಳು ಆರು ಗಂಡು ಮತ್ತು ನಾಲ್ಕು ಹೆಣ್ಣು .ನಾನು ಆರನೆಯವನು . ನನ್ನಿಂದಲೇ ಅಕ್ಕ   ಭಾಗ್ಯಲಕ್ಷ್ಮಿ (ಒಪ್ಪಕ್ಕ ;ವಿ ಬಿ ಅರ್ತಿಕಜೆ ಅವರ ಪತ್ನಿ ) ಮತ್ತು  ತಮ್ಮ ಲಕ್ಷ್ಮಿ ನಾರಾಯಣ . ಎರಡು ಲಕ್ಷ್ಮಿಗಳ ನಡುವೆ  ಪದ್ಮನಾಭ .(ನನ್ನ ಹೆಸರು).  

ಬೇರೆ ಬೇರೆ ವಯಸ್ಸಿನ ಮಕ್ಕಳು ಇದ್ದು ಮನೆ ಸಣ್ಣ ಅಂಗನವಾಡಿ ಯಂತೆ ಇತ್ತು .ನನ್ನ ಚಿಕ್ಕಪ್ಪನ  ಮಕ್ಕಳೂ ಸೇರಿ.   ನನ್ನ ತಾಯಿ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯ ರಂತೆ ವಿವಿಧ ಹಂತದ ಮಕ್ಕಳಿಗೆ ವಯಸ್ಸಿಗೆ  ತಕ್ಕಂತೆ ವಿದ್ಯೆಯ  ಓನಾಮ  ಮಾಡುವರು . ಮೊದಲು ಬಾಯ್ದೆರೆಯಾಗಿ  ಬೆನಕ ಬೆನಕ , ಅಶ್ವಿನಿ ಭರಣಿ ,ಪಾಡ್ಯ  ಬಿದಿಗೆ .,ಮೊಹರಂ ಸಫರ್ ರಾಬಿಲಾವಿಲ್ ,ಆಟಿ  ಸೋಣೆ ಹೇಳಿಕೊಡುವರು . ಸಾಯಂಕಾಲ  ನಾವು ಸುವೋ ಮೊಟೊ ಆರಂಭ ಮಾಡಬೇಕು .ಇಲ್ಲದಿದ್ದರೆ  ಅವರು ಬೆನಕ ಬೆನಕ ಎಂದು ಕೀ ಕೊಡುವರು ಆಮೇಲೆ ಆಟೋಮ್ಯಾಟಿಕ್  ಆಗಿ ಉಳಿದದ್ದು ಮುಂದುವರಿಯ ಬೇಕು . ಆಸ್ಪತ್ರೆಯ ಐ ಸಿ ಯು ವಿನಲ್ಲಿ  ಹಲ ಮಾನಿಟರ್ ಗಳು ಏಕ ಕಾಲಕ್ಕೆ ಬೀಪ್ ಮಾಡುವಾಗ ಅನುಭವಿ  ನರ್ಸ್ ಗೆ  ಯಾವ ರೋಗಿಯ ಹೃದಯ ಬಡಿತ ತಾಳ ತಪ್ಪಿದೆ ಎಂದು ತಿಳಿಯುವಂತೆ ಎರಡು ಮೂರು  ಮಕ್ಕಳಲ್ಲಿ ಯಾರು ತಪ್ಪಿದರೂ ತಾಯಿಗೆ  ತಿಳಿಯುವುದು . 

 ಇನ್ನು  ಸಣ್ಣವರಿಗೆ ಆ ಆ ಈ ಈ  ,ದೊಡ್ಡವರಿಗೆ ಒತ್ತಕ್ಷರ ಮಗ್ಗಿ ಬರೆಯಲು ಹೇಳುವರು . ಮಗ್ಗಿ ಕೂಡಾ ವಯಸ್ಸಿಗೆ ಅನುಗುಣವಾಗಿ ಮೇಲಿನ ಸಂಖ್ಯೆಗಳಿಗೆ ಪ್ರಮೋಷನ್ ಪಡೆದು  ಇಪ್ಪತ್ತ್ತು ಇಪ್ಪತ್ಲಿ  ನಾನ್ನೂರು ವರೆಗೆ ಬರುವುದು . ನನ್ನ ಅಮ್ಮ ಕಠಿಣ  ಟಾಸ್ಕ್  ಮಾಸ್ಟರ್ . ಯಾವುದೇ ವಿನಾಯತಿ ಇಲ್ಲ . ಪುನಃ ಪುನಃ ತಪ್ಪು ಮಾಡಿದರೆ ಕಿವಿ ಹಿಂಡುವರು ,ಇಲ್ಲವೇ ಬೆನ್ನಿಗೆ ನಾಲ್ಕು ಬೀಳುವುದು . ಅತ್ತರೆ ಮೇಲಿಂದ ಒಂದು ಬೋನಸ್ ..ನಾವು ಗುಸು ಗುಸು ಎಂದು ಸೈಲೆನ್ಸರ್ ಅಳವಡಿಸಿ ಅಳುವೆವು ,ಮೂಗಿನಿಂದ  ಕಣ್ಣೀರು ಧಾರೆ  ಹರಿಯುವುದು . (ಕಣ್ಣಿನಿಂದ ಮೂಗಿಗೆ ಒಂದು ನೇತ್ರ ನಾಸಿಕಾ ನಾಳ ಇದೆ )ಸುಮ್ಮ ಸುಮ್ಮನೆ ಯಾರನ್ನೂ ಶಿಕ್ಷಿಸರು . ಸಾಯಂಕಾಲ ಅಕ್ಕಿ ರುಬ್ಬುವಾಗ ,ಅಥವಾ ಅಡಿಗೆ ಮನೆಯಲ್ಲಿ ಬೇರೆ ಕೆಲಸ ಮಾಡುವಾಗ  ಅವರ ಕಣ್ಗಾಪಿನಲ್ಲಿ  ನಮ್ಮ ಕಲಿಯುವಿಕೆ . 

ಮನೆಯಲ್ಲಿ ಅಥವಾ ಹೊರಗೆ ಅವಾಚ್ಯವೆನಿಸುವ  (ಅನ್  ಪಾರ್ಲಿ ಮೆಂಟರಿ )ಶಬ್ದ ಬಾಯಲ್ಲಿ ಬರ ಬಾರದು . ಹಿರಿಯರಿಗೆ ಎದುರು (ಪೆದಂಬು ) ಮಾತನಾಡ ಬಾರದು . ನಮ್ಮ  ತಾಯಿಯವರಲ್ಲಿ  ಒಂದು ಕಂಪ್ಯೂಟರ್ ಅಕೌಂಟ್ ಇರುತ್ತಿತ್ತು . ಯಾವ ಯಾವ ಮಕ್ಕಳು ಏನು ಶಿಸ್ತು ಉಲ್ಲಂಘನೆ ಯಾವಾಗ ಮಾಡಿದ್ದಾರೆ ಎಂಬ ನಿಖರ ದಾಖಲೆ ಅದರಲ್ಲಿ ಇರುತ್ತಿತ್ತು . ಜಜ್ ಮೆಂಟ್ ಡೇ  ಶನಿವಾರ . ಅಂದು ಎಲ್ಲಾ ಮಕ್ಕಳಿಗೆ ಎಣ್ಣೆ ಸ್ನಾನ ,ತಲೆಗೆ ಗೊಂಪು ಹಾಕಿ .ಅದನ್ನು ಅಮ್ಮನೇ ಮಾಡುವರು . ಅಲ್ಲಿ ಆ ವಾರದಲ್ಲಿ ನಾವು ಮಾಡಿದ  ಕಪಿ ಚೇಷ್ಟೆ ಗೆ  ತಕ್ಕ ಶಾಸ್ತಿ ಆಗುವುದು ,ಸರಳಿ  ಸೊಪ್ಪಿನ ಅಡರಿನಲ್ಲಿ . ನಾವು ಆ ದಿನಕ್ಕೆ ಅಂಜುತ್ತಿದ್ದೆವು . ಶನಿವಾರ ಅಮಾವಾಸ್ಯೆ ಆದರೆ ಎಣ್ಣೆ ಸ್ನಾನಕ್ಕೆ ವಿನಾಯತಿ ಅದರೊಂದಿಗೆ  ನಮಗೂ ಸ್ವಲ್ಪ ಆಶ್ವಾಸ . ಶನಿವಾರ ಅಮಾವಾಸ್ಯೆ ಬರಲಿ ಎಂದು ನಾವು ಪ್ರಾರ್ಥಿಸುತ್ತಿದ್ದೆವು . 

ನಾನು  ಬಾಲ್ಯದಲ್ಲಿ ಯಕ್ಷಗಾನ  ಹರಿಕತೆಗಳಿಗೆ ಹೋಗಿ ಮನೆಗೆ ಬಂದು ಅನುಕರಣೆ ಮಾಡುತ್ತಿದ್ದೆನಲ್ಲದೆ  .ಪುಸ್ತಕ ಓದುವ ಹುಚ್ಚಿದ್ದುದರಿಂದ  ಓದಿದ ಜೋಕುಗಳನ್ನು ಹೇಳುವ  ಅಭ್ಯಾಸ ಇತ್ತು .ನನ್ನ ಅಮ್ಮ ಅದು ಗಾಂಭೀರ್ಯಕ್ಕೆ ಕಮ್ಮಿ ಎಂದು ಭಾವಿಸುತ್ತಿದ್ದರು .ನಾನು ರಜೆಯಲ್ಲಿ ಅಕ್ಕನ ಮನೆಗೆ ಹೊರಟಾಗ ಹೋದಲ್ಲಿ ಗಂಭೀರವಾಗಿ ಇರಬೇಕು , ಬೆಗುಡು ಬೆಗುಡು(ಚೆಲ್ಲು ಚೆಲ್ಲು ) ಮಾತನಾಡ  ಬೇಡ ,ಹರಿಕತೆ  ಮಾಡಬೇಡ ಎಂದು ತಿರುಕುಳ ವಿನಾಚಿ ಮಗನ ಕಿವಿಯಲ್ಲಿ ಅರುಹಿದನಂತೆ ಹೇಳಿ ಕಳುಹಿಸುವರು . ನಾನು ಅಕ್ಕನ ಮನೆಗೆ ತಲುಪಿದ ಒಡನೇ  ಭಾವ ,ಏನು ಭಾವ ವಿಶೇಷ  ಎನ್ನುವರು .ನಾನು "ತಾಯಿಯವರು ಬೆಗುಡು ಬೆಗುಡು ಮಾತನಾಡ  ಬಾರದು  ,ಹರಿಕತೆ ಮಾಡಬಾರದು 'ಎಂದು ಹೇಳಿದ್ದಾರೆ ಎಂದು ಉತ್ತರಿಸುತ್ತಿದ್ದು ಅವರು  ಯಾವಾಗಲೂ ಇದನ್ನು ಹೇಳಿ  ನಗುವರು . 

ನಮ್ಮದು ಕೂಡು ಕುಟುಂಬವಾಗಿದ್ದು ಮನೆ ತುಂಬಾ ಮಕ್ಕಳು ,ನೆಂಟರು . ಅಮ್ಮ ಚಿಕ್ಕಮ್ಮ  ಸಾಮರಸ್ಯದಿಂದ ನೆಡೆಸಿ ಕೊಂಡು ಹೋಗುವರು .ಭಾರೀ ಅರೆಯುವ ಕಲ್ಲು . ಒಬ್ಬರು ಆ ಕಡೆ ಇನ್ನೊಬ್ಬರು ಈ ಕಡೆ ಕುಳಿತು ಮಾತನಾಡಿಕೊಂಡು ಅರೆಯುವರು . ಕೆಲವೊಮ್ಮೆ ಅವರು ಬೇರೆ ಕೆಲಸಕ್ಕೆ ಹೋದಾಗ ಮಕ್ಕಳನ್ನು ಕೂರಿಸುವರು .ಅದರಿಂದ   ಅಕ್ಕಿ ,ಕಾಯಿ ಅರೆಯುವುದು ,ಮೊಸರು ಕಡೆಯುವುದು ಇತ್ಯಾದಿ ನಮಗೆ ಅನುಭವ ಇದೆ . ಹಲಸಿನ ಹಣ್ಣಿನ ಕಡುಬು ಮಾಡುವಾಗ ನಾವು  ಅಡಿಕೆ ಹಾಳೆಯಲ್ಲಿ ಹಣ್ಣು ಹಾಕಿ ಮಕ್ಕಳು ಯಾರಾದರೂ ಕೊಚ್ಚುವರು ,ಹಿರಿಯರು ಅಕ್ಕಿ ಕಡೆಯುವರು . ಶ್ಯಾವಿಗೆ ಮಾಡುವಾಗ  ಕಬ್ಬಿಣದ ರೊಡ್ (ಸೈಬ್ಬಲ್) ನಾವೆಲ್ಲ ನೇತು ಒತ್ತುವೆವು.


ಹೋದಲ್ಲಿ  ನಮ್ಮ ಹೆಸರು ಹೇಳಿಸ(ಕೆಟ್ಟ ದಾಗಿ ) ಬಾರದು .ಇದು ಅಮ್ಮನ ಆಶಯ ಹತ್ತು ಮಕ್ಕಳನ್ನು  ತಿದ್ದಿ ತೀಡಿ ಒಂದು ಹಂತಕ್ಕೆ ತಂದುದರ  ಶ್ರೇಯ  ಅವರಿಗೆ ಸಲ್ಲ ಬೇಕು . ಅವರ ವೃದ್ದಾಪ್ಯದಲ್ಲಿಯೂ  ಪುಸ್ತಕಗಳನ್ನು ಓದಿ  ಒಂದು ನೋಟ್ ಪುಸ್ತಕದಲ್ಲಿ  ಇಷ್ಟವಾದ ವಾಕ್ಯಗಳನ್ನು ಬರೆದು ಇಟ್ಟು  ಕೊಳ್ಳುತ್ತಿದ್ದರು . ನನ್ನ ಅಜ್ಜನ ಮನೆ ಪೆರ್ಲ ಸಮೀಪ  ಉಕ್ಕಿನಡ್ಕ .. ಅವರ ಪೈಕಿ ಸಂಬಂಧಿಕರು ಹೆಚ್ಚು ಕಾಸರಗೋಡು ತಾಲೂಕಿನಲ್ಲಿ ಇದ್ದುದರಿಂದ ,ಯಾವುದೇ ಪುಸ್ತಕದಲ್ಲಿ ಶೇಣಿ ,ನೀರ್ಚಾಲು ,ಪೆರಡಾಲ  ಇತ್ಯಾದಿ  ಬಂದರೆ ಅಂಡರ್ ಲೈನ್ ಮಾಡುವರು ,ನಾನು ಪಕ್ಕದಲ್ಲಿ  ಇದ್ದರೆ  ನನ್ನನ್ನು ಕರೆದು ಹೇಳುವರು 

 

ಒಂದು ಹಿಂದಿ ಚಲನ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ತಂದೆ ಷಾ ರೂಕ್ ಖಾನ್ ಮಗ .ಅದರಲ್ಲಿ ಒಂದು ಡಯಲಾಗ್ ಇದೆ " ಮಗನೆ ಹೆತ್ತವರ ಕೋಪದ ಹಿಂದೆಯೂ ಪ್ರೀತಿ ತುಂಬಿರುತ್ತದೆ "
ಬಪ್ಪನಾಡು ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ಬಪ್ಪ ಶೇಣಿ ಮತ್ತು ಉಸ್ಮಾನ್ ಜೋಷಿ ಅವರ ನಡುವಿನ ಒಂದು ಸಂಭಾಷಣೆ ಹೀಗಿದೆ
." ಮೋನೆ ನೀ ನನ್ನಾವಣ ಎಂದಾವಣ'
' ಎಂದಾವಣ'
' ನನ್ನಾವಣ'
'ನನ್ನಾವಣ'

ಸೋಮವಾರ, ಮಾರ್ಚ್ 15, 2021

ಮಾಂಕಾಳಿ ಭೂತ

                         ಮಾಂಕಾಳಿ ಭೂತ 

ಕನ್ಯಾನ ಗ್ರಾಮದ ದೇಲಂತ ಬೆಟ್ಟು ಬಯಲಿನ  ಆರಾಧ್ಯ ಭೂತ ಮಾಂಕಾಳಿ . ಚಾವಡಿ ಬಾಗಿಲು ಎಂಬಲ್ಲಿ ಭೂತ ಸ್ಥಾನ ಇದೆ . ಬೇಸಗೆಯಲ್ಲಿ ಇಲ್ಲಿ ನೇಮ (ಈಗ ನೇಮೋತ್ಸವ ಆಗಿದೆ ) ನಡೆಯುವುದು . ಬೈಲಿನ ಭಕ್ತಾದಿಗಳು  ಭಯ ಭಕ್ತಿಯಿಂದ ನೇಮಕ್ಕೆ ತಮ್ಮ ತನು ಮನ ಮತ್ತು ಕಾಣಿಕೆಗಳಿಂದ (ಇದು ಹೆಚ್ಚಾಗಿ ಎಳನೀರು ಇತ್ಯಾದಿ ವಸ್ತು ರೂಪದಲ್ಲಿ ಇರುವುದು .)ಕೈಜೋಡಿಸುವರು .ನೇಮಕ್ಕೆ ಪೂರ್ವ ಭಾವಿಯಾಗಿ  ಗೊನೆ ಕಡಿಯುತ್ತಿದ್ದುದು  ನಮ್ಮ ಮನೆಯಲ್ಲಿ .ಅದೊಂದು ಗೌರವ .ನೇಮದಂದು ಭೂತ  ನಮ್ಮ ಮನೆಯವರನ್ನು  ಬಾರೆದ ಕಡ್ತುಲೇ ಎಂದು  ಎಂದು ವಿಶೇಷ ಸಂಭೋದನೆ ಮಾಡುವುದು . ನಮ್ಮ ಬೈಲಿನ  ಕಿರಿಂಚಿ ಮೂಲೆ  ಶ್ರೀನಿವಾಸ ರಾವ್ ಎಂಬ ಹಿರಿಯರು  ಇದಕ್ಕೆ ಗುರಿಕಾರ್ (ಅವರನ್ನು ಚೀನಣ್ಣ ಎಂದು ಎಲ್ಲರೂ  ಪ್ರೀತಿ ಗೌರವದಿಂದ ಕರೆಯುತ್ತಿದ್ದರು ) .ಅವರಿಗೆ ಮೊದಲ ಸಂಬೋಧನೆ . ಅವರು ಗಾಂಭೀರ್ಯದಲ್ಲಿ ಇಡೀ ನೇಮದ  ಉಸ್ತುವಾರಿ ವಹಿಸಿ ಕೊಳ್ಳುವರು . ಅವರು ಪಾರ್ಲಿಮೆಂಟ್ ಸ್ಪೀಕರ್ ಇದ್ದಂತೆ .ನಮಗೆ  ಭೂತಕ್ಕೆ ಏನಾದರೂ ನಿವೇದಿಸುವುದಿ ದ್ದರೆ ಅವರ ಮೂಲಕವೇ ಹೋಗಬೇಕು . ನೇಮ ಕೊನೆ ಹಂತದಲ್ಲಿ ಭೂತಕ್ಕೆ ಹರಕೆ ದೂರು  ಸಲ್ಲಿಸಿದವರ ವಿಚಾರಣೆ ಆಗುವಾಗ ಭೂತ ಅವರ ಅಭಿಪ್ರಾಯ ಕೇಳಿ ಕೊನೆಗೆ ತನ್ನ ತೀರ್ಪು ಕೊಡುತ್ತಿದ್ದುದು ವಾಡಿಕೆ . 

ಗೊನೆ  ಕಡಿದು ನೇಮ ಮುಗಿಯುವ ತನಕ ಬೈಲಿನವರು ಯಾರೂ ಪರ ಊರಿಗೆ ತೆರಳಿ ತಂಗುವಂತಿಲ್ಲ . ನಾವು ಕಾಲೇಜು ವಿದ್ಯಾಭ್ಯಾಸಕ್ಕೆ ಮನೆ ಬಿಟ್ಟು ಹೋದ ತಪ್ಪಿಗೆ ನೇಮದ ದಿನ ಎಂಟಾಣೆ  ತಪ್ಪು ದಂಡ ಕಟ್ಟಿ  ಕ್ಷಮೆ ಕೇಳುತ್ತಿದ್ದರು .. ಅದಕ್ಕೆ ಸಮ್ಮತಿಸಿದ  ಭೂತ ಯಾವ ಊರಿನಲ್ಲಿ ಇದ್ದರೂ ತನ್ನ ಅಭಯ ಹಸ್ತ ನಿಮ್ಮ ಮಕ್ಕಳ ಮೇಲೆ ಇರುತ್ತದೆ ಎನ್ನುವುದು .. 

ಭೂತ  ಕಟ್ಟುತ್ತಿದ್ದ  ಗುರುವ ಎಂಬುವರು ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದರು . ಆದರೆ ಭೂತ ಕಟ್ಟಿದ ಮೇಲೆ ದರ್ಶನ ಬಂದಾಗ ನಮಗೆ ಅವರು ದೈವವೇ . 


 ಭೂತ ಕಟ್ಟುವವರ ಮಾತು ನಿಜಕ್ಕೂ ಒಂದು ಜಾನಪದ ಸಾಹಿತ್ಯ . ಯಾವುದೇ ಅಡೆ  ತಡೆಯಿಲ್ಲದೆ  ಪುಂಖಾನುಪುಂಖ ಬರುತ್ತಿದ್ದ  ಮಾತುಗಳು ನನ್ನಲ್ಲಿ  ಕುತೂಹಲ ಹುಟ್ಟಿಸುತ್ತಿದ್ದವು . ಸನ್ನಿವೇಶಕ್ಕೆ ಸರಿಯಾಗಿ ಭೂತಕ್ಕೆ ವಾಲಗದ ಹಿಮ್ಮೇಳವೂ ಇರುತ್ತಿತ್ತು . ಜೊತೆಗೆ ಗರ್ನಾಲು . 

 ಬಾಲ್ಯದಲ್ಲಿ  ಭೂತ ಸ್ಥಾನ ,ಬನ ,ಹಾವಿನ ಹುತ್ತ ಇತ್ಯಾದಿಗಳಿಗೆ ಕೈ ತೋರಿಸ ಬಾರದು  ಎಂಬ  ನಂಬಿಕೆ ಇತ್ತು . ಒಂದು ವೇಳೆ ತಪ್ಪಿ ಬೆರಳು ತೋರಿಸಿದರೆ ತಪ್ಪಾಯಿತು ಎಂದು ಬೆರಳು ಕಡಿಯುತ್ತಿದ್ದೆವು . ಎಷ್ಟು ಅತಿರೇಕ ಎಂದರೆ ಕೇರೆ  ಹೂವು ಎಂಬ  ಕಾಡ  ಪುಷ್ಪಕ್ಕೂ  ಕೈ ತೋರಿಸುತ್ತಿರಲಿಲ್ಲ .ಈಗೆಲ್ಲ ನೇಮದ ವಿಡಿಯೋ ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಾರೆ .

ನಮ್ಮ  ಗುಡ್ಡದಲ್ಲಿ ಗುಳಿಗನ ವನ  ಇತ್ತು .ಅದಕ್ಕೆ ವರ್ಷ ಕ್ಕೊಮ್ಮೆ  ತಂಬಿಲ ಮತ್ತು ಸೇವೆ ನಡೆಯುತ್ತಿದ್ದು ಅದಕ್ಕೆ  ಒಂದು ಕೋಳಿ ಬಲಿ  ಕೊಡುತ್ತಿದ್ದರು . 

ಇದಲ್ಲದೆ  ಅಲ್ಲಲ್ಲಿ  ಅನಧಿಕೃತ  ಭೂತಗಳು ಇವೆ ಎಂಬ ಉಹಾಪೋಹಗಳು ನೆಂಟರು ಮಿತ್ರರು ಮಾತನಾಡುವುದನ್ನು  ನಾವು ಕೇಳಿಸಿಕೊಳ್ಳುತ್ತಿದ್ದೆವು . ಕಾಡು ದಾರಿಯಲ್ಲಿ ಯಾರಾದರೂ ಅನಿರೀಕ್ಷಿತ ವಾಗಿ  ಮರಣ ಹೊಂದಿದರೆ ಭೂತ ಬಡಿದು ಕೊಂಡದ್ದು ,ರಕ್ತ ಕಾರಿ ಸತ್ತನಂತೆ ಎಂದು ಹೇಳುತ್ತಿದ್ದರು . ಇನ್ನು ಕೆಲವರು "ನಮ್ಮ  ರಾಮಣ್ಣ ಮೊನ್ನೆ  ರಾತ್ರಿ ಪೆರುವಾಯಿ ಗುಡ್ಡ ದ ಬಳಿ  ಸೂಟೆ ಬೆಳಕಿನಲ್ಲಿ ಹೋಗುವಾಗ ಯಾರೋ  ಆಂಜಿದಂತೆ ಆಯಿತಂತೆ . ಬಿಳಿ ಬಟ್ಟೆ ಧರಿಸಿದ ವ್ಯಕ್ತಿ ,ಪಾದ ನೋಡುತ್ತಾನೆ  ತಿರುಗ ಮುರುಗ .ಇದು ಭೂತವೇ ,ನನ್ನ ಕತೆ ಮುಗಿಯಿತು ಎಂದು ದೇಲಂತ ಬೆಟ್ಟು ವಿಷ್ಣು ಮೂರ್ತಿಯನ್ನೂ ,ಮಾಂಕಾಳಿ ದೈವವನ್ನೂ ಗಟ್ಟಿಯಾಗಿ ಪ್ರಾರ್ಥಿಸಿದನಂತೆ .ಮಾಂಕಾಳಿ ಹೆಸರು ಕೇಳಿದ್ದೇ ಅದು ಮಾಯ" ಎನ್ನುತ್ತಿದ್ದ ಎಂಬ ಸುದ್ದಿ ಹರಡಿ ನಮ್ಮನ್ನು ಭಯ ಭೀತ ಮಾಡುವರು .ಕಲ್ಲುರ್ಟಿ ಭೂತ ದಾರಿಯಲ್ಲಿ  ಮಾರು ವೇಷದಲ್ಲಿ ಬಂದು ದಾರಿ ತಪ್ಪಿಸುವುದು ಎಂದೂ ಹೇಳುತ್ತಿದ್ದರು .ಇದನ್ನೆಲ್ಲ ಕೇಳಿದ ಕೆಲವು ದಿನಗಳು ನಮಗೆ  ಕತ್ತಲೆಯಲ್ಲಿ  ಹೊರ ಹೋಗಲು ಭಯ ಆಗುತ್ತಿತ್ತು .


ಭಾನುವಾರ, ಮಾರ್ಚ್ 14, 2021

ವಿಶಿಷ್ಟ ಅತಿಥಿಗಳು

                                   ವಿಶಿಷ್ಟ ಅತಿಥಿಗಳು

ದೊಡ್ಡ ರಜೆಯಲ್ಲಿ ಎಷ್ಟು ಆಟ ಮತ್ತು ಇತರ ಚಟುವಟಿಕೆಗಳು ಇದ್ದರೂ ಒಮ್ಮೊಮ್ಮೆ ಬೇಸರ  ಬರುತ್ತಿತ್ತು .ಕಾಗೆ ಕ್ರಾವ್  ಕ್ರಾವ್  ಎಂದು ಕೂಗಿದರೆ ಯಾರಾದರೂ ನೆಂಟರು ಬಂದಾರು  ಎಂದು ಸಂತೋಷ ಆಗುತ್ತಿತ್ತು .ಇದು ಮಕ್ಕಳಿಗೆ ಮಾತ್ರ ಅಲ್ಲ ಹಿರಿಯರಿಗೆ ಕೂಡಾ . ದಾರಿಯಲ್ಲಿ ಸಿಕ್ಕಿದ ದೂರದ ನೆಂಟರನ್ನು ಕೂಡಾ ಒತ್ತಾಯ ಮಾಡಿ ಕರೆದು ಕೊಂಡು ಬರುತ್ತಿದ್ದ ಕಾಲ  . ಬಾವಿಯಿಂದ ನೀರು ತರಬೇಕು ,ಅರೆಯುವ ಕಲ್ಲಿನಲ್ಲಿ ಅರೆಯಬೇಕು ಇಷ್ಟೆಲ್ಲಾ ಇದ್ದರೂ ಅತಿಥಿಗಳು ಬೇಕು .ಬಂದವರನ್ನೂ ಬೇಗ ಹೊರಡಲು  ಬಿಡರು .ಎಲ್ಲಿ  ಹೋಯಿತು ಆ ಕಾಲ ?ಊಟದ ಹೊತ್ತಿನಲ್ಲಿ ಯಾವ ಆಗಂತುಕ ಬಂದರೂ ಹಸಿದು ಹೋಗುವಂತಿಲ್ಲ . ಈಗಿನ ಆರ್ಥಿಕ ಪರಿಸ್ಥಿತಿ ಗೆ  ಹೋಲಿಸಿದರೆ  ಎಲ್ಲರೂ ಬಿ ಪಿ ಎಲ್  ನಲ್ಲಿ ಇದ್ದ ಸಮಯ . 

ನಮ್ಮ  ಮನೆಯ ನೈರುತ್ಯಕ್ಕೆ  ನಂದರ ಬೆಟ್ಟು ಎಂಬ ಬಯಲು ಇದೆ .ಅಲ್ಲಿ ದಾಸ ಮನೆತನದವರು  ವಾಸವಿದ್ದರು . ಆಗಾಗ ಅಲ್ಲಿಂದ ಓರ್ವ ಹಿರಿಯ ದಾಸರು  ಜಾಗಟೆ ಬಾರಿಸುತ್ತಾ  ಶಂಖ ಊದಿಕೊಂಡು  ಮನೆ ಮನೆಗೆ ಬರುವರು . ಮುಖದಲ್ಲಿ ಉದ್ದ ನಾಮ  ಮತ್ತು ಕೇಸರಿ ಬಣ್ಣದ  ಮುಂಡಾಸು ಇರುತ್ತಿತ್ತು . ಅವರಿಗೆ  ಸೇರು ಭತ್ತ ಅಥವಾ  ಅಕ್ಕಿ ಜೋಳಿಗೆಗೆ ಹಾಕುತ್ತಿದ್ದ ನೆನಪು . ಇವರ   ಕುಟುಂಬದವರೇ  ಹಳ್ಳಿಯ  ಸಂಚಾರಿ  ಫ್ಯಾನ್ಸಿ  ಸ್ಟೋರ್ . ದೊಡ್ಡ ಪೆಟ್ಟಿಗೆ ಹೊತ್ತು ಮನೆ ಮನೆಗೆ ಬರುವರು .ಹೆಣ್ಣು ಮಕ್ಕಳಿಗೆ ಬಳೆ  ,ಕಾಡಿಗೆ  ,ಲಾಲ್ ಗಂಧ ಎಂಬ ಕೆಂಪು ಬಣ್ಣದ ಪಾಲಿಷ್  ,ಎಳೆ  ಶಿಶುಗಳ  ಕರಿಮಣಿ ಬಳೆ  ,ಕುಂಕುಮ ಮತ್ತು ಉಡಿದಾರದ  ಪಟ್ಟೆ  ನೂಲು . ಹೆಣ್ಣು ಮಕ್ಕಳಿಗೆ  ಬಹಳ ಸಂಭ್ರಮ . ಗಂಡಸರ ಪಾತ್ರ  ಕಡಿಮೆ .ಕೊನೆಗೆ ಬಿಲ್ ಪಾವತಿಸುವುದಷ್ಟೇ .                                                                                       ನಾನು ಸಣ್ಣವನಿರುವಾಗ  ಲವ್ ಇನ್ ಟೋಕಿಯೋ ಎಂಬ ಹಿಂದಿ  ಸಿನಿಮಾ ತುಂಬಾ ಜನಪ್ರಿಯ ಆಗಿತ್ತು .ಅದರ ನಾಯಕಿ ತಲೆ ಕೂದಲಿಗೆ ಎರಡು ಗೋಲಿಗಳು ಇರುವ ಬ್ಯಾಂಡ್ ಹಾಕಿದ್ದಳು ಎಂದು ಕಾಣುತ್ತದೆ .ಅಲ್ಲಿಂದ  ಅದು ನಮ್ಮಲ್ಲಿಯೂ  ಜನ ಪ್ರಿಯ ಆಯಿತು ಮತ್ತು ಅದಕ್ಕೆ ಲವ್ ಇನ್ ಟೋಕಿಯೋ ಎಂದು ನಾಮಕರಣ ಆಯಿತು . ನಾವು ಹಳ್ಳಿ ಜನ ಅದನ್ನು ಲವಿಂಗ್ಟಕಿ ಎಂದು ಕರೆಯುತ್ತಿದ್ದು ,ನಮ್ಮ  ತಂದೆಯವರು ಟಂಗ್  ಟುಕಿ  ಎನ್ನುತ್ತಿದ್ದರು (ಅಕ್ಕ ತಂಗಿಯರು ಅದು ಬೇಕು ಎಂದು  ಜಾತ್ರೆಯಲ್ಲೋ ಅಂಗಡಿಯಲ್ಲೋ ತಂದೆಗೆ ದುಂಬಾಲು ಬೀಳುತ್ತಿದ್ದರು .)

ಇನ್ನು  ಭವಿಷ್ಯ ಹೇಳುವ ನರ್ಸಣ್ಣ  ಬುಡುಬುಡಿಕೆ ಬಾರಿಸಿ ಕೊಂಡು ಬಂದು ಅಯಾಚಿತವಾಗಿ  ಮುಖ ಭವಿಷ್ಯ ,ಹಸ್ತ ಸಾಮುದ್ರಿಕೆ ಮಾಡುತ್ತಿದ್ದರು .ಸಾಮಾನ್ಯವಾಗಿ  ಅದು  ಒಳಿತು ಕೆಡುಕುಗಳ ಮಿಶ್ರಣ ಇರುತ್ತಿದ್ದು ಕೇಳುಗನಿಗೆ  ನಿರಾಶೆ ಆಗದೆ  ಒಳ್ಳೆಯ ದಕ್ಷಿಣೆ ಸಂದಾಯ ಆಗುತ್ತಿತ್ತು . 

ಇನ್ನು ಬಸವಣ್ಣ ,ಭಾಗೀರಥಿಯರು ಅಲಂಕಾರ ಮಾಡಿಸಿ ಕೊಂಡು ವಾದ್ಯ ಸಮೇತ ಬರುವರು . ಹೌದಾ ಎಂದರೆ ತಲೆ ಆಡಿಸುವರು.(ಶಾಲೆಯಲ್ಲಿ ನನ್ನನ್ನು ಅಧ್ಯಾಪಕರು  ಹೌದಾ ಬಸವಣ್ಣ ಎಂದರೆ ಹೌದು ಎಂಬಂತೆ ತಲೆ ಆಡಿಸುತ್ತೀಯಾ ಕೋಲೇ ಬಸವಾ  ಎಂದು ಬೈಯ್ಯುವಾಗ ಇವುಗಳ ಮುಖ ನೆನಪಾಗುತ್ತಿತ್ತು ). ಬಸವನನ್ನು ಮದುವೆ  ಆಗುತ್ತೀಯ  ಭಾಗೀರಥಿ ಎಂದಾಗ ಮೊದಲು ಇಲ್ಲಾ ಎಂದು ತಲೆ ಆಡಿಸಿದವಳು ಆಮೇಲೆ  ಪುಸಲಾಯಿಸಿದ ಮೇಲೆ ಒಪ್ಪುವಳು . ನಂತರ ನಮ್ಮ ಅಂಗಳದಲ್ಲಿ ಮದುವೆ  . 

        ಆಟಿ  ತಿಂಗಳಲ್ಲಿ  ಆಟಿ  ಕಳಂಜ ,ನಂತರ ಸೋಣೆ  ಜೋಗಿ ತಪ್ಪದೇ ಬರುವರು . ಮಳೆ ಕಾಲದಲ್ಲಿ ಯಕ್ಷಗಾನ ಸ್ತ್ರೀ ವೇಷ ಕೂಡಾ .ಹೆಚ್ಚಾಗಿ ರಾತ್ರಿ ನಾವು ಮಲಗಿದ ಮೇಲೆ  ಸೂಟೆ  ಬೆಳಕಿನಲ್ಲಿ ಬರುವರು .ಮೊದಲು ಮನೆಯ ನಾಯಿ ಬೊಗಳಿ ಎಲ್ಲರನ್ನೂ  ಎಬ್ಬಿಸುವದು . ನಿದ್ದೆಗಣ್ಣಿನಲ್ಲಿ  ನಾವು ಎದ್ದು ನೋಡುವುದು .. ಬಾಗಿಲು ಇಲ್ಲದ  ಬರೀ  ಕಬ್ಬಿಣ ಸರಳುಗಳು ಇದ್ದ ಜಗುಲಿಯಲ್ಲಿ ನಾವು ಸಾಲಾಗಿ ಮಲಗಿರುತ್ತಿದ್ದೆವು . ಅಲ್ಲಿಂದಲೇ ನಮಗೆ ನೋಡುವ ಭಾಗ್ಯ . 

ಇಲ್ಲಿ ಒಂದು ವಿಚಾರ ನಾಯಿಗಳು ಅತಿಥಿಗಳು ಬಂದೊಡನೆ ಬೊಗಳಿ ಹಾರಡಿದರೂ ಮತ್ತೆ ನಮ್ಮೊಂದಿಗೆ ಅವೂ ಆನಂದಿಸುವವು .

  ಸೂಟೆ  ಆಗ ನಾವು ಸಾಮಾನ್ಯವಾಗಿ ಉಪಯೋಗಿಸುತ್ತಿದ್ದ  ಟಾರ್ಚ್ .ತೆಂಗಿನ  ಗರಿಗಳ (ಸೂಡಿ )ಸೂಟೆ ಯನ್ನು  ಬೇಕಾದಾಗ ಬೀಸಿ ಉರಿಸಿ ಉಳಿದ ಸಮಯ  ಜಸ್ಟ್  ಜೀವಂತ ವಿರಿಸುವ  ಎಕನಾಮಿಕ್ಸ್ ಮತ್ತು ಆರ್ಟ್ ಅನುಭವ ದಿಂದ  ಬರುವುದು .ನಾವು ಜಾತ್ರೆಗೆ ಮತ್ತು ಆಟಕ್ಕೆ ಹೋಗುವಾಗ ಇದೇ  ನಮ್ಮ ದಾರಿ ದೀಪ  .ಇದರ ಬೆಳಕಿನಲ್ಲೇ  ಹಿಂದೆ ಯಕ್ಷಗಾನ ಕೂಡಾ ನಡೆಯುತ್ತಿತ್ತಂತೆ .,

ಶನಿವಾರ, ಮಾರ್ಚ್ 13, 2021

ಮದ್ದಿನ ಕುಪ್ಪಿ

                                ಮದ್ದಿನ ಕುಪ್ಪಿ 

 

ನಮ್ಮ   ಬಾಲ್ಯದಲ್ಲಿ   ಸಣ್ಣ ಸಣ್ಣ ಕಾಯಿಲೆಗಳಿಗೆ  ಅಜ್ಜಿ ಮದ್ದು ನಡೆಯುತ್ತಿತ್ತು . ನಾವು  ಅಸೌಖ್ಯಕ್ಕಾಗಿ  ಶಾಲೆಗೆ ರಜೆ ಹಾಕ್ಕಿದ್ದು ನೆನಪಿಲ್ಲ . ಶಾಲೆಯಲ್ಲಿ ಕಲಿತ ಮಾದರಿ   ರಜೆ ಅರ್ಜಿಯಲ್ಲಿ  ಜ್ವರದಿಂದ ಬಳಲುತ್ತಿರುವುದರಿಂದ  ರಜೆ ದಯ  ಪಾಲಿಸಿ ಎಂದು ಕಲಿತದ್ದಷ್ಟೇ  ಬಂತು . ಮನೆಯಲ್ಲಿ ಹಿರಿಯರು ಕೆಲವೊಮ್ಮೆ  ತಮ್ಮ ಕಾಯಿಲೆಗಳಿಗೆ  ಕನ್ಯಾನ ದಿಂದಲೋ ವಿಟ್ಲ ದಿಂದಲೋ  ಡಾಕ್ಟಲ್ಲಿ ಹೋಗಿ ಮದ್ದು ತರಲು ಹೇಳುತ್ತಿದ್ದರು .ರೋಗ ಲಕ್ಷಣ ಹೇಳಿ ಔಷಧಿ ತರುವುದು .ಆಗ ಒಂದು ಬಿರಡೆ ಇರುವ ಔನ್ಸ್ ಕುಪ್ಪಿ ಕೊಂಡು ಹೋಗುವೆವು .ವೈದ್ಯರು ಅಥವಾ ಕಂಪೌಂಡರ್ ಅದರಲ್ಲಿ ಔಷಧಿ ತುಂಬಿಸಿ ಚೆನ್ನಾಗಿ ಕುಲುಕಿಸಿ ಕುಡಿಯಿರಿ ಎಂದು ಬರೆದ ಚೀಟಿ ಅಂಟಿಸಿ ಕೊಡುವರು .ಕೆಲವರು ಚೂರ್ಣ ಕಟ್ಟಿ ಕೊಟ್ಟು ಜೇನು ತುಪ್ಪದಲ್ಲಿ ಕಲಸಿ ತಿನ್ನಿರಿ ಎನ್ನುವರು . ಎರಡನೆಯದು ನಮಗೆ ಇಷ್ಟ . ಇಲ್ಲದ ಕೆಮ್ಮು ಬರಿಸಿ  ನಾವೂ ಸ್ವಲ್ಪ ಸೇವಿಸುತ್ತಿದ್ದೆವು . 

  ಈಗ  ಈ  ಕುಪ್ಪಿ ಕಾಣಿಸುವುದಿಲ್ಲ .ಕಂಪನಿಯವರು  ಸಣ್ಣ  ಪ್ಲಾಸ್ಟಿಕ್ ಅಥವಾ ಗ್ಲಾಸ್ ಬಾಟಲ್ ನಲ್ಲಿ  ಔಷಧಿ ಹಾಕಿಯೇ  ಕಳುಹಿಸುವರು . 

 ಮಕ್ಕಳಾಗಿದ್ದಾಗ ಎಲ್ಲಾ ಔಷಧಿಗಳಿಗಿಂತಲೂ ಸಾಂತ್ವನ  ನಮ್ಮ ಬಳಿ ತಾಯಿ ಬಂದು ಹಣೆ  ಸವರಿ  ಸೆರಗಿನಲ್ಲಿ ಗಾಳಿ ಹಾಕಿದಾಗ ,ಸೆರಗಿನಿಂದ  ಅಕ್ಕಿ ಹಿಟ್ಟು ,ಸೆಗಣಿ ಮತ್ತು ಬೆವರಿನ  ಮಿಶ್ರಣ (ಅವರು ಬೆಳಗಿನಿಂದ ಸಂಜೆ ತನಕ ಮನೆ ಕೆಲಸ ಮಾಡುತ್ತಿದ್ದುದರಿಂದ )ದ  ಕಂಪು   ಇಂದು ಮಾರ್ಕೆಟ್ ನಲ್ಲಿ ಸಿಗುವ  ಯಾವುದೇ  ಪರ್ಫ್ಯೂಮ್  ಗೆ  ಇಲ್ಲಾ ಎಂದು ಹೇಳ ಬಲ್ಲೆ

ಮರೆಯಲಾಗದ ಬ್ಯಾರಿ ಬಂಧುಗಳು

  ಮರೆಯಲಾಗದ  ಬ್ಯಾರಿ  ಬಂಧುಗಳು

 ನನ್ನ  ಬಾಲ್ಯದಲ್ಲಿ  ಕಂಡ ಒಂದು ವ್ಯಕ್ತಿ ಬಳ್ಳಿ ಬ್ಯಾರಿ .ಅವರಿಗೆ  ಆ ಹೆಸರು ಯಾಕೆ ಬಂತು ಎಂದು  ಜ್ಞಾಪಕ ಇಲ್ಲ . ಆಗಾಗ ಮನೆಗೆ ಬರುತ್ತಿದ್ದು ಮಹಾತ್ಮಾ ಗಾಂಧಿ  ಯವರ  ತದ್ರೂಪದಂತೆ  ಇದ್ದರು .ಮೃದು ಮಾತು .ಅವರನ್ನು ಎಲ್ಲರೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು . ನಾವು ಮಕ್ಕಳನ್ನೆಲ್ಲಾ ಒಬ್ಬೊಬ್ಬರನ್ನು  ಅಂಗಳದಲ್ಲಿ  ಕುಳ್ಳಿರಿಸಿ  ಬಾಯಲ್ಲಿ  ಮಂತ್ರ ಗುಣು  ಗುಣಿಸಿ ಕೈಯಲ್ಲಿ ಒಂದು  ಎಲೆಯ ಕಟ್ಟಿನಿಂದ  ನಮ್ಮ ತಲೆಗೆ  ನೋವಾಗದಂತೆ  ಬಡಿಯುತ್ತಿದ್ದರು . ದೃಷ್ಟಿ  ತೆಗೆಯುತ್ತಿದ್ದ ವಿಧಾನ .ಆ ಮೇಲೆ ಕೊಟ್ಟ ಕಾಣಿಕೆ ತೆಗೆದು ಕೊಂಡು ಚಾ ಕುಡಿದು ಹೋಗುವರು . 

ಇನ್ನೊಂದು  ಕಲಾಯಿ  ಬ್ಯಾರಿ ಮತ್ತು ಅವರ ತಂಡ .ಎರಡು ವರ್ಷಕ್ಕೊಮ್ಮೆ  ಮನೆಗೆ ಅವರನ್ನು ಕರೆಯಿಸುವರು . ಅವರು ಬಂದು ಒಂದು ಮಣ್ಣಿನ ಒಲೆ  ನಿರ್ಮಿಸಿ ಒಂದು ತುದಿಗೆ  ಚರ್ಮದ ತಿದಿ  ,ಇನ್ನೊಂದು ಕಡೆ  ಇದ್ದಿಲ ಓಲೆ . ಅವರು ತಿದಿಯಿಂದ  ಗಾಳಿ ಹಾಕಿ  ಇದ್ದಲು  ಕೆಂಪಾಗುವಂತೆ ಮಾಡುವುದನ್ನು  ಆಶ್ಚರ್ಯ ದಿಂದ ನೋಡುತ್ತಿದ್ದೆವು . ನಮಗೂ  ತಿದಿ  ಒತ್ತುವ ಆಸೆ ಆಗುತ್ತಿತ್ತು .  ಅವರ ಆಗಮನದೊಂದಿಗೆ  ಮನೆಯ ಎಲ್ಲಾ ಹಿತ್ತಾಳೆ ಪಾತ್ರೆ  ಹಂಡೆಗಳು ಹೊರ ಬರುವವು . ಅದಕ್ಕೆ ಸತುವನ್ನು ಕಾಸಿ  ಬೆಳ್ಳಿಯಂತ ಲೇಪ ಹಾಕಿ ಪಾಲಿಷ್ ಮಾಡಿ ಪಳ ಪಳ ಹೊಳೆಯುವಂತೆ  ಮಾಡುವ ಮಾಂತ್ರಿಕರಂತೆ  ಕಾಣುತ್ತಿದ್ದರು .ಕಲಾಯಿ ಕೆಲಸಕ್ಕೆ ಒಂದೆರಡು ದಿನ ಬೇಕಾಗುತ್ತಿತ್ತು .ಹಳೇ  ಚಿಮಿಣಿ ಮತ್ತು ತೆಂಗಿನ ಎಣ್ಣೆ ಡಬ್ಬಿಗಳ  ಬಾಯಿ ತೆಗೆದು ಅದಕ್ಕೆ ಸುಂದರವಾದ  ಮುಚ್ಚಳ  ಮಾಡಿ ಕೊಡುತ್ತಿದ್ದು ಅದನ್ನು  ಅವಲಕ್ಕಿ ಇತ್ಯಾದಿ ಸಂಗ್ರಹ ಮಾಡಿ ಇಡಲು ಉಪಯೋಗಿಸುತ್ತಿದ್ದರು . 

ಇನ್ನೊಬ್ಬರು  ಬಾಳೆ ಕಾಯಿ ಬ್ಯಾರಿ . ಅವರು ಶ್ರಮ ಜೀವಿ .ಆಗಾಗ ಬಂದು ಬಾಳೆ ಎಲೆ ,ಬಾಳೆಕಾಯಿ  ಕೊಂಡು ಹೋಗುವರು .ನಗು ಮುಖ . ವೃತ್ತಿಯಿಂದಾಗಿ  ಅವರ ಉಡುಗೆ ತೊಡುಗೆ  ಪೂರ್ಣ ಕಲೆಗಳಿಂದ ಕೂಡಿತ್ತು ..  ತಮ್ಮ ಖರೀದಿಯನ್ನು ತಲೆ ಹೊರೆಯಲ್ಲಿ ಎರಡು ಮೈಲು ಹೊತ್ತು ಬಸ್ಸಿನ ಟಾಪ್ ನಲ್ಲಿ  ಏರಿಸಿ ಪೇಟೆಗೊಯ್ದು ಮಾರಿ ಜೀವನ ಸಾಗಿಸುತ್ತಿದ್ದರು . ಆದರೆ  ರೈತರಾಗಲೀ  ಅವರಾಗಲಿ  ದಿಢೀರಾಗಿ  ಯಾರೂ ಶ್ರೀಮಂತರಾದುದುದು ಕಂಡ ನೆನಪಿಲ್ಲ . 

ಗುರುವಾರ, ಮಾರ್ಚ್ 11, 2021

ಕುಕ್ಕಾಜಾ ಮರಾಜಾ

 ನಮ್ಮ  ಮನೆಯಂಗಳ  ಪಶ್ಚಿಮಕ್ಕೆ  ತಡಮ್ಮೆ ದಾಟಿ ಮುಂದಕ್ಕೆ ಹೋದರೆ ಒಂದು ದೊಡ್ಡ  ನೆಲ್ಲಿಕಾಯಿ ಮರ .ಸ್ವಲ್ಪ ದೂರದಲ್ಲಿ ಒಂದು ಕಾಟು ಮಾವಿನ ಮರ .ಅದರ ಹೆಸರು ಸೊನೆ ಕುಕ್ಕು .ಸೊನೆ ಜಾಸ್ತಿ ಇದ್ದರೂ  ಬಹಳ ರುಚಿ .ಮಾವಿನ ಮರದ ಅಡಿಯಲ್ಲಿ ನಿಂತು " ಕುಕ್ಕಾಜಾ ಮಾರಾಜ ಎಕ್ಕೊಂಜಿ ಪ೦ರ್ದು   ಕೊರ್ಲಾ ನಿಕ್ಕೊಂಜಿ ಗೊರಂಟು ಅಡಕ್ಕುಬೆ "ಎಂದು  ಮಾವಿನ ಮರವನ್ನು ಬೇಡುತ್ತಿದ್ದೆವು .ಕೆಲವೊಮ್ಮೆ ತಥಾಸ್ತು ಎಂದು ಮಾಗಿದ ಹಣ್ಣು ಬೀಳುವುದು.(ಮಂತ್ರಕ್ಕೆ ಮಾವಿನ ಕಾಯಿ ಉದುರಿದಂತೆ !) .ಮುಂದೆ ಹೋದರೆ ಪಾರೆ  ತೋಟ ಅಲ್ಲಿ ಒಂದು ಮಾವು .ಪಾರೆ  ತೋಟದ ಮಾವು .  ಮುಂದೆ ತೋಡು ಬದಿಯಲ್ಲಿ ಇರುವ ಹೆಮ್ಮರ ಗಂಡಿ  ಮಾವು . ದಕ್ಷಿಣಕ್ಕೆ  ಎರಡು ಫರ್ಲಾಂಗ್ ನಡೆದರೆ  ಇಡಿಕ್ಕಾಯಿ  ಮಾವು .ಇದು ಸ್ವಲ್ಪ ಬಲಿತ ಮೇಲೆ ( ಬೀಜ ಗೊರಟು ಅಥವಾ  ಕೊರಂಟು ಆದಾಗ )ಉಪ್ಪಿನ ಕಾಯಿ ಹಾಕುವರು . ಇದಲ್ಲದೆ ಗುಡ್ಡೆಯಲ್ಲಿ ಜೀರೆಕ್ಕಿ ಮಾವು ,ಹುಳಿ  ಮಾವು ಇತ್ಯಾದಿ . ನಸುಕಿನಲ್ಲಿ ಕೈ ಬುಟ್ಟಿ  ಹಿಡಿದುಕೊಂಡು  ರಾತ್ರಿ ಬಿದ್ದ ಹಣ್ಣು ಹೆಕ್ಕಲು ಮಕ್ಕಳ ನಡುವೆ  ಪೈಪೋಟಿ . ದೊಡ್ಡ ಸಂಗ್ರಹ ತಂದು ಅಜ್ಜಿಯ ಪ್ರಶಂಶೆ ಗಳಿಸುವ  ಕಾತುರ .ಅಜ್ಜಿ  ಅದನ್ನು ಓಲೆ ಚಾಪೆಯಲ್ಲಿ ಮಾಂಬಳ ಎರೆಯುವರು .ಹಿಂದೆ  ಕಿರಿಯರು  ಹಿರಿಯರ  ಮೆಚ್ಚುಗೆ ಗಳಿಸಲು ಪ್ರಯತ್ನಿಸುತ್ತಿದ್ದರು .ಈಗ  ಉಲ್ಟಾ ಆಗಿದೆ ;  ಹಿರಿಯರು ಮಕ್ಕಳ ಕೋಪ ಮತ್ತು ಅಸಹನೆಗೆ ತುತ್ತಾಗದಂತೆ ಎಷ್ಟು ಜಾಗರೂಕರಾಗಿ ಇದ್ದರೂ ಸಾಲುವುದಿಲ್ಲ . 

    ಇದಲ್ಲದೆ   ಅರೆ ಕಸಿ ಮಾವು ಗಳಾದ  ನೆಕ್ಕರೆ , ಹೊಳೆಮಾವು ಮತ್ತು ಮೂರು  ವರ್ಷದ  ಮಾವಿನ ಮರಗಳು ಸಾಕಷ್ಟು ಇದ್ದವು .ಇವುಗಳ ತುಂಡು ಅಥವಾ ಕೆತ್ತೆ  ಉಪ್ಪಿನಕಾಯಿ ಹಾಕುವರು . 

ಮಾವಿನ ಕಾಯಿ ಚಟ್ನಿ ಬಲು ರುಚಿ . ಕಾಟು ಮಾವಿನ ಹಣ್ಣಿನ ಗೊಜ್ಜಿ ಮತ್ತು  ಸಾಸಮೆ  ಮಾಡುವರು . ಉಪ್ಪು ನೀರಿನಲ್ಲಿ ಹಾಕಿ ಶೇಖರಿಸಿದ ಮಾವಿನ ಕಾಯಿ ಮಳೆಗಾಲದ ನಂತರ ಹೊರ ಬರು ವುದು . ಇದೂ ಚಟ್ನಿ ,ಗೊಜ್ಜು ಮತ್ತು  ಪಲ್ಯಕ್ಕೆ ಉಪಯೋಗ  ಆಗುವುದು .

ಇನ್ನು  ಗೇರುವಿಗೆ  ಬಂದರೆ ಇಲ್ಲಿ ಹಣ್ಣಿಗಿಂತ ಬೀಜಕ್ಕೇ  ಮಣೆ .ಹಣ್ಣು ತುಂಬಾ ಆಕರ್ಷಣೀಯ ಇದ್ದರೆ  ತಿನ್ನುತ್ತಿದ್ದೆವು . ಅದರ ಮತ್ತು ಬಾಳೆಯ ಕಲೆ ನಮ್ಮ ಬಟ್ಟೆಯಲ್ಲಿ ತುಂಬಿ  ನಾವು ಕಲಾ ಭೂಷಣ ಆಗುತ್ತಿದ್ದೆವು . ಇನ್ನೂ ಪಕ್ವವಾಗದ  ಗೇರು ಫಲ ಕ್ಕೆ  ಕಾಯನ  ಎನ್ನುತ್ತಿದ್ದೆವು .ಎಳೇ  ಬೀಜದ ಪಾಯಸ ವಿಷು ಹಬ್ಬಕ್ಕೆ ವಿಶೇಷ . ಗೇರು ಬೀಜ  ಸಂಗ್ರಹ ಮಕ್ಕಳ ಹವ್ಯಾಸ . ನಾಲ್ಕು ಬೀಜಕ್ಕೆ ಒಂದು ಒಡ್ಡಿ . ಬೀಜ  ವನ್ನು ನೆಲದಲ್ಲಿ ಹಾಕಿ  ಇನ್ನೊಂದು ಬೀಜದಿಂದ  ಗುರಿಯಿಟ್ಟು ಹೊಡೆಯುತ್ತಿದ್ದೆವು . ಅದು ಬೀಜವನ್ನು ಮುಟ್ಟಿದರೆ ಮತ್ತು ಒಂದು ಗೇಣು  ಒಳಗೆ ಬಿದ್ದರೆ ಗುರಿಯಿಟ್ಟ ಬೀಜ ನಮಗೆ  ಆಗುತಿತ್ತು.ಇದೇ  ಆಟ  ಮನೆಯ ಜಗಲಿಯಲ್ಲಿ ಕೈಯಿಂದ  ಕೇರಂ ಕಾಯಿನ್ ಗುರಿಯಿಡುವಂತೆ  ಕೂಡಾ  ಆಡುತ್ತಿದ್ದರು . ಬೀಜವನ್ನು ಕೆಂಡದಲ್ಲಿ   ಸುಟ್ಟು ಸಿಪ್ಪೆ ತೆಗೆದು  ತಿನ್ನುತ್ತಿದ್ದೆವು . ಮನೆಯೆಲ್ಲಾ ಅದರ ಕಂಪು