ಬೆಂಬಲಿಗರು

ಶನಿವಾರ, ಆಗಸ್ಟ್ 21, 2021

ವರದರಾಜ ಚಂದ್ರಗಿರಿ

                                             ಕೆಳೆತನದ ಸಂಪತ್ತು
                                                    

ನಾನು ರೈಲ್ವೇ  ವೈದ್ಯಾಧಿಕಾರಿ ಆಗಿ ಚೆನ್ನೈ ನಲ್ಲಿ ಇದ್ದ ಬಗ್ಗೆ  ಹಿಂದೆ ಬರೆದಿದ್ದೆ .ಕಾವೇರಿ ಸಮಸ್ಯೆಯಿಂದ  ನಮ್ಮನ್ನು ಅವರು ಪ್ರೀತಿಯಿಂದ  ನೋಡಲಾರರು ಎಂಬ  ಭಾವನೆ ಅಲ್ಲಿ ನಾಲ್ಕು ವರ್ಷಗಳಲ್ಲಿ  ಪೂರ್ತಿ ಬದಲಾಯಿತು . ಅಕ್ಕ ಪಕ್ಕದ ಮನೆಯವರು ನಮ್ಮನ್ನು ಸಂತೋಷವಾಗಿ ಇಡಲು  ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದರು . ನಮ್ಮ ಮನೆಯವರು ಊರಿಗೆ ಹೋದಾಗ ಅಕ್ಕ ಪಕ್ಕ ದವರು ಊಟ ತಿಂಡಿಗೆ ಕರೆಯುವರು .ಅವರಿಗೆ ವಿಶೇಷ ಹಬ್ಬ ದೀಪಾವಳಿ ಮತ್ತು ಪೊಂಗಲ್  ಔತಣ ಹಾಕುವವರು . ಆದರೂ ನಮ್ಮ ಊರು ಭಾಷೆಯಿಂದ  ದೂರ ಇರುವುದು ಬೇಡ ಎಂದು ಕೆಲಸಕ್ಕೆ ರಾಜೀನಾಮೆ ಕೊಟ್ಟು ಊರಿಗೆ ಬಂದು ಮಂಗಳೂರಿನಲ್ಲಿ ನೆಲೆಯಾದೆವು .ಮಂಗಳೂರು ಬಹಳ ಬದಲಾಗಿದ್ದ ಹಾಗೆ ಭಾಸ ಆಯಿತು . ಗಲ್ಲಿ ಗಲ್ಲಿಯಲ್ಲಿ  ವೃತ್ತಿ ಪರ ಮತ್ತು ಇತರ ಶಿಕ್ಷಣ ಸಂಸ್ಥೆ ಗಳು ಬಂದು  ಪರವೂರಿನ ಜನರು ,ಅವರೊಡನೆ ಭಾಷೆ ಮತ್ತು ಸಂಸ್ಕೃತಿ ಗಳ ಪ್ರಭಾವ ಹೆಚ್ಚಾಗಿ ನಮ್ಮ ಕುಡ್ಲ ಮರೆಯಾಗಿತ್ತು . ಲೋಕಲ್ ಟಿ ವಿ ಚಾನಲ್ ಮತ್ತು ಸಿಟಿ ಬಸ್ ಗಳನ್ನು ಬಿಟ್ಟರೆ ತುಳು ಕನ್ನಡ ಮರೆಯಾಗಿತ್ತು .ಬ್ಯಾಂಕ್ ,ಕಚೇರಿ ,ಹೊಟೇಲ್ ಮತ್ತು ಶೋ ರೂಂ ಗಳಲ್ಲಿ ಸ್ಥಳೀಯ ಭಾಷೆ  ಮಾತನಾಡಿದರೆ ಗೌರವ ಇಲ್ಲ . ಅಪಾರ್ಟ್ಮೆಂಟ್ ಅಸೋಸಿಯೇಷನ್ ಸಭೆಗಳು ಇಂಗ್ಲಿಷ್ ಮಾಧ್ಯಮ ದಲ್ಲಿ . ಪರಸ್ಪರ ಮನೆಗೆ ಭೇಟಿ ,ಊಟಕ್ಕೆ ಕರೆಯುವುದು ಇತ್ಯಾದಿ ಅಪರೂಪ . ನಮ್ಮಿಂದ ಏನಾದರೂ ಆರ್ಥಿಕ ಅಥವಾ ಇನ್ನಿತರ ಅನುಕೂಲ ಇದ್ದರೆ ಮಾತ್ರ ಮಾತು ಮುಂದುವರಿಯುತ್ತಿತ್ತು .

 ಹಾಗೆ ಕೆಲವು ವರ್ಷಗಳ ನಂತರ  ಮೊದಲು ನಾನು ಇದ್ದ  ಸಣ್ಣ ಊರು ಪುತ್ತೂರಿಗೆ ತುಂಬಾ ನಿರೀಕ್ಷೆ ಯೊಂದಿಗೆ  ವಾಸ ಬದಲಾಯಿದೆ .ಪುತ್ತೂರಿನಲ್ಲಿ ಹಿಂದೆ ಇದ್ದಾಗ ಬಹಳ ಸ್ನೇಹಿತರು  ಇದ್ದರು . ಆಗ ನಾನು  ಹಾರಾಡಿ  ರೈಲ್ವೆ ಕಾಲೋನಿ ಯಲ್ಲಿ ಇದ್ದು ಸಂಜೆ ಹೊತ್ತು ಮತ್ತು ರಜಾ ದಿನಗಳಂದು  ,ಪಕ್ಕದ ಮನೆಯಲ್ಲಿ ಇದ್ದ ರೈಲೇ ಅಧಿಕಾರಿ ನಾಗರಾಜಪ್ಪ  ಅವರ ಮನೆಯಲ್ಲಿ ಗಂಟೆ ಗಟ್ಟಲೆ ಹರಟೆ ಹೊಡೆದು ಫಲಾಹಾರ ಚಹಾ ಸವಿದು ಆನಂದಿಸುತ್ತಿದ್ದೆವು .ಇನ್ನು ಕೆಲವು ಬಾರಿ ಪಕ್ಕದ ಬಡೆಕ್ಕಿಲ ಶಂಕರ ಭಟ್ ಅವರ ಮನೆಯಲ್ಲಿ  ,ಸಮೀಪದಲ್ಲಿ ವಾಸಿಸುತ್ತಿದ್ದ ಮಾವ ಮಹಾಲಿಂಗೇಶ್ವರ ಭಟ್ ಮತ್ತು ದುರ್ಗಾಮಣಿ ಅವರ ಜತೆ . ಅವರೂ ನಮ್ಮ ಮನೆಗೆ ಬರುವರು . ಹಾರಾಡಿ ಯಲ್ಲಿ ಇದ್ದ  ಶ್ರೀ ಎಂ ಟಿ ಭಟ್ ಅವರ ಮನೆಯಲ್ಲಿ  ಮಕ್ಕಳು ಅಳಿಯಂದಿರು ಸ್ನೇಹಿತರ  ದೊಡ್ಡ ಸಭೆಯೇ ಸೇರುತ್ತಿತ್ತು .ಅವರಿಗೆಲ್ಲಾ ಕಾಫಿ ತಿಂಡಿ ಇತ್ಯಾದಿ . 

ಈ ಬಾರಿ ಪುತ್ತೂರು ಬದಲಾಗಿತ್ತು ;ಎಲ್ಲೆಡೆಯಂತೆ . ಸಂಬಂಧಗಳು ವ್ಯಾವಹಾರಿಕ ಆಗಿದ್ದವು . ಒಂದೇ ವೃತ್ತಿಯವರೂ ಕೂಡಿ ವಿಷಯ ವಿಮರ್ಶೆ ಮಾಡುವದು ,ಸ್ನೇಹಿತರ ಮನೆಯಲ್ಲಿ ಕೂಡಿ ಹರಟೆ ಹೊಡೆಯುವುದು ಇತ್ಯಾದಿ ಎಲ್ಲಾ ಇತಿಹಾಸಕ್ಕೆ ಸೇರಿದ್ದವು . ಏನಿದ್ದರೂ ಮೊಬೈಲ್,  ವ್ಹಾಟ್ಸಪ್ ಫೇಸ್ಬುಕ್ ಸಂಬಂಧ .ನಾನು ಈಗ ಬರೆಯಲು ಕಾರಣ ಕೂಡಾ ನನ್ನ ಮನಸಿನ ತುಮುಲ

ಗಳನ್ನು ಹಂಚಿ ಕೊಳ್ಳಲು ಬೇರೆ ದಾರಿಯಿಲ್ಲದ್ದು .ಸಾಧ್ಯವಾದಷ್ಟು ಮಟ್ಟಿಗೆ ರೋಗಿಗಳ ಜತೆ ಸುಖ ದುಃಖ ಮಾತನಾಡುತ್ತೇನೆ . ಮೊದಲು ನೆರೆಕೆರೆಯ ಮಕ್ಕಳ ಮೈತ್ರಿ ಮಾಡುವುದು ನನ್ನ ಅಭ್ಯಾಸ ಆಗಿತ್ತು .ಹಿಂದೆ ಪುತ್ತೂರಿನಲ್ಲಿ


 ಇದ್ದಾಗ ಕಿರಣ ,ಸಂದೇಶ ,ವೈಶಾಲಿ ,ಶಂಕರ ಡಾಕ್ಟ್ರ ಮಕ್ಕಳು ,ಭಾನು ,ದೀಪು ,ಸಂತೋಷ ಇತ್ಯಾದಿ ಪುಟಾಣಿ ಗಳು ,ಈಗ ಇರುವ ಮನೆಯ ಪಕ್ಕ ಇದ್ದ ಚಿರು ,ಆಕಾಶ್ ,ಅಮೃತಾ ,ಅಪೇಕ್ಷಾ ,ಚೈತಾಲಿ ಎಲ್ಲಾ ನನ್ನ ಮಿತ್ರರು .ಆದರೆ ಈಗ ಮಕ್ಕಳು ಕೂಡಾ ಮೊಬೈಲ್ ಟಿ ವಿ ಯಲ್ಲಿಯೇ ಇರುವರು .

  ಹೀಗೆ ನಾನು ಭ್ರಮ ನಿರಸನ ಆಗಿ ಇದ್ದಾಗ ಓಯಸಿಸ್ ನಂತೆ  ಸಿಕ್ಕಿದವರು ಡಾ ವರದರಾಜ ದಂಪತಿಗಳು .ವರದರಾಜ ಚಂದ್ರಗಿರಿ ಕಾಸರಗೋಡಿನ ಚಂದ್ರಗಿರಿ ಯವರು .ಚಂದ್ರಗಿರಿ ಎಂಬ ಹೆಸರಿನಲ್ಲಿ ಒಂದು ಆಕರ್ಷಣೆ ಇದೆ . ಅದರ ಉತ್ತರಕ್ಕೆ ಕನ್ನಡ ನಾಡು . ಕಾಸರಗೋಡು ಸರಕಾರಿ ಕಾಲೇಜ್ ನಲ್ಲಿ ಕನ್ನಡ ಎಂ ಎ ಮಾಡಿ ಮುಂದೆ ಮುಂಬೈ ವಿಶ್ವವಿದ್ಯಾಲಯ ದಲ್ಲಿ  ನಮ್ಮವರೇ ಆದ ವಿದ್ವಾಂಸ ಡಾ ತಾಳ್ತಜೆ ವಸಂತ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪಿ ಎಚ್ ಡಿ ಮಾಡಿ ಕರ್ನಾಟಕ ಸರಕಾರಿ ಸೇವೆಗೆ ಸೇರಿ ಪ್ರಸ್ತುತ ಬೆಟ್ಟಂಪಾಡಿ ಕಾಲೇಜ್ ಪ್ರಿನ್ಸಿಪಾಲ್ ಆಗಿದ್ದಾರೆ .ಮೊದಲೂ ಅಲ್ಲೇ ಇದ್ದ ಅವರು ಕೆಲ ವರ್ಷ ಕಾರ್ಕಳ ಕಾಲೇಜ್ ನಲ್ಲಿ ಇದ್ದರು. ಅವರು ಮುಂಬಯಿಯಿಯಲ್ಲಿ ಇದ್ದಾಗ ಅಲ್ಲಿ ಇದ್ದ ಚಿತ್ತಾಲ ,ಕಾಯ್ಕಿಣಿ ಯಂತವರ ,ಮತ್ತು ವಿಶ್ವ ವಿದ್ಯಾಲಯಕ್ಕೆ ಅತಿಥಿಗಳಾಗಿ ಬಂದ ಸಾಹಿತಿಗಳ ನಿಕಟ ಸಂಪರ್ಕ ಪಡೆದರು . ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ರೂವಾರಿಯಾಗಿ ಹಲವು ನೂತನ ಕಾರ್ಯಕ್ರಮಗಳನ್ನು ನಡೆಸಿದರು .

ವರದರಾಜರು ವಿನಯವಂತರು .ನಾನು  ಬೇಕಾದಾಗ ಅವರ ಮನೆಗೆ ತೆರಳಿ ಹರಟೆ ಹೊಡೆಯುವೆನು .ಅವರೂ ನಮ್ಮ ಮನೆಗೆ ಬರುವರು . ಕಾರ್ಕಳ ರಾಮಚಂದ್ರ ಮತ್ತು ಎರ್ಯ ಲಕ್ಷ್ಮೀನಾರಾಯಣ ಆಳ್ವಾ ಅವರಿಗೆ ನನ್ನನ್ನು ಪರಿಚಯಿಸಿದವರು ಇವರೇ .ಕಾರ್ಕಳ ರಾಮಚಂದ್ರ ಕೊನೆಯ ದಿನದ ವರೆಗೆ ನನ್ನ ಸಂಪರ್ಕದಲ್ಲಿ ಇದ್ದರು . ಯಾರೇ ಹಿರಿಯ ಕಿರಿಯ ಸಾಹಿತಿಗಳು ಸಿಕ್ಕರೆ ನನ್ನನ್ನು ಅಭಿಮಾನದಿಂದ ಪರಿಚಯಿಸುವರು .

ಧಾರವಾಡ ಸಾಹಿತ್ಯ ಸಂಭ್ರಮ ಕ್ಕೆ ಎರಡು ಬಾರಿ ಜತೆಯಾಗಿ ಹೋಗಿದ್ದು ,ಸಾಧನ ಕೇರಿಯ ಬೇಂದ್ರೆ ಸ್ಮಾರಕ ಮತ್ತು ಮನೆಯ ಸಂದರ್ಶನ ಮಾಡಿದ್ದೇವೆ .ಖ್ಯಾತಲೇಖಕ ಕೆ ಟಿ ಗಟ್ಟಿಯವರ ಮನೆಗೆ ಹೋಗಿ ಕುಶಲ ವಿಚಾರಿಸಿದ್ದೇವೆ .

ಚಂದ್ರಗಿರಿ ಒಳ್ಳೆಯ ಭಾಷಣ ಗಾರರು .ಕೆಲವು ಮೌಲಿಕ ಕೃತಿಗಳನ್ನೂ ರಚಿಸಿದ್ದಾರೆ .ಅರಿವು ಬೆರಗು ,ಕನ್ನಡ ನಾಡೋಜ ಪೆರಡಾಲ ಕೃಷ್ಣಯ್ಯ , ವಿಶಿಷ್ಟ ಕತೆಗಾರ ಎಂ ವ್ಯಾಸ ,ಪೆರಡಾಲ ಕೃಷ್ಣಯ್ಯ ಸಮಗ್ರ ಸಾಹಿತ್ಯ ಸಂಪುಟ ,ನುಡಿನೋಟ ಇವರ ಕೆಲವು ಕೃತಿಗಳು .ಪೆರಡಾಲ ಕೃಷ್ಣಯ್ಯ ಇವರ ಅಜ್ಜ ,ಎಂ ವ್ಯಾಸ ಭಾವ .ವ್ಯಾಸರ ಕೃತಿಗಳ ಮರು ಪ್ರಕಟನೆಯ ಕೈಂಕರ್ಯ ಕೂಡಾ ಮಾಡುತ್ತಿದ್ದಾರೆ.

ಇನ್ನು ಅವರ ಪತ್ನಿ ಡಾ ಸುಲೇಖಾ ಮಕ್ಕಳ ತಜ್ನೆ ,ಹದಿಹರೆಯದ ಮಾನಸಿಕ ಸಮಸ್ಯೆಗಳ ಬಗ್ಗೆ ವಿಶೇಷ ಪರಿಣತಿ ಪಡೆದ ಇವರು ಅನೇಕ ಬಿರುದು ಗೌರವಗಳಿಗೆ ಪಾತ್ರರಾಗಿದ್ದು ,ಇವರ ಲೇಖನಗಳು  ಪತ್ರಿಕೆ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ . ಪುತ್ತೂರಿನ ಇ ಎಸ್ ಐ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಜನಾನುರಾಗಿ ವೈದ್ಯರು .

ನಾನು ಹೊಸ ಪುಸ್ತಕ ಓದಿದಾಗ , ಯಾವುದಾದರೂ ಸಾಹಿತ್ಯ ಕಾರ್ಯಕ್ರಮಕ್ಕೆ ಹೋಗಿ ಬಂದಾಗ ,ಕೆಲವೊಮ್ಮೆ ಸುಮ್ಮನೆ ಬೇಸರವಾದಗ ಅವರ ಮನೆಗೆ ಹೋಗಿ ಗಂಟೆಗಟ್ಟಲೆ ಹರಟೆ ಹೊಡೆಯುತ್ತೇನೆ .ಅವರು ಕನ್ನಡ ಪ್ರಾಧ್ಯಾಪಕರು ,ಮಡದಿ ಕೂಡಾ ಸಾಹಿತ್ಯ ಅಸಕ್ತೆ ಆಗಿರುವುದು ನನ್ನ ಭಾಗ್ಯ .

ಇವರನ್ನು ಬಿಟ್ಟರೆ ಬೇಕಾದಾಗ ಹೋಗಿ ಮಾತನಾಡಲು ಇರುವ ಸ್ನೇಹಿತರು ಮಣಿಲಾ ಸುಬ್ಬಣ್ಣ ಶಾಸ್ತ್ರಿಗಳು .ಅವರ ಬಗ್ಗೆ ಮುಂದೆ ಬರೆಯುವೆ .

             



 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ