ಬೆಂಬಲಿಗರು

ಭಾನುವಾರ, ಆಗಸ್ಟ್ 29, 2021

ಮಣಿಲಾ ಸುಬ್ಬಣ್ಣ ಶಾಸ್ತ್ರಿಗಳು

                     ಮಣಿಲ ಸುಬ್ಬಣ್ಣ ಶಾಸ್ತ್ರಿಗಳು 

                      ಯಾವುದೇ ಉದ್ಯೋಗಕ್ಕೆ ಅರ್ಜಿ ಕರೆಯುವಾಗ (ವಿಶೇಷವಾಗಿ ಸರಕಾರಿ )ಅದರಲ್ಲಿ ಒಂದು ಎಚ್ಚರಿಕೆಯ ಒಕ್ಕಣೆ ಇರುತ್ತದೆ . ಯಾವುದೇ ಕಾರಣಕ್ಕೆ ಅಪೂರ್ಣವಾದ  ಮತ್ತು ಕೊನೆಯ ದಿನಾಂಕ ಕಳೆದು ಬರುವ ಅರ್ಜಿಗಳನ್ನು ಪರಿಗಣಿಸುವುದಿಲ್ಲ . ಇಂತಹ ಒಂದು ಅರ್ಜಿಗೆ ಹಲವು ದಾಖಲೆಗಳು (ಕೆಲವು ದೃಢೀಕೃತ );ಹಳ್ಳಿಯಿಂದ ಬಂದವರಿಗೆ ಅದರ ಮಾಹಿತಿ ಇಲ್ಲದೆ ,ಪೇಟೆಯವರಿಗೆ ಅತಿ ವಿಶ್ವಾಸದಿಂದ ಇದರಲ್ಲಿ ಎಡವಟ್ಟು ಆಗುವುದುಂಟು . ಅದಕ್ಕೆಲ್ಲಾ ಪರಿಹಾರ ಎಂಬಂತೆ ಪುತ್ತೂರಿನಲ್ಲಿ ಮಣಿಲ ಜೆರಾಕ್ಸ್ ಎಂಬ  ಒಂದು ಸೇವಾ ತಾಣ  ಇದೆ .ಇಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ,ಉದ್ಯೋಗಾರ್ಥಿಗಳಿಗೆ ಮತ್ತು ಜನಸಾಮಾನ್ಯರಿಗೆ ಬೇಕಾದ ಅನೇಕ ಫಾರಂ ಗಳು ,ಸವಿವರವಾಗಿ ಲಭ್ಯ .ಇದರ ರೂವಾರಿ ಪ್ರಸಿದ್ಧ ಮಣಿಲ ಶಾಸ್ತ್ರೀ ಮನೆತನದ ಶ್ರೀ ಸುಬ್ಬಣ್ಣ ಶಾಸ್ತ್ರಿಗಳು .ಸ್ವ ಉದ್ಯೋಗಕ್ಕಾಗಿ ಜಾಬ್ ಟೈಪಿಂಗ್ ಆರಂಬಿಸಿ ಸ್ವಲ್ಪ ಆ ಕಡೆ ಈ ಕಡೆ ವಿಸ್ತರಿಸಿ ಪರಿಶ್ರಮದಿಂದ ಒಂದು ನೆಲೆ ಕಂಡು ಕೊಂಡವರು,

ನಾನು ಹಲವು ಬಾರಿ ಅಜ್ಞಾತನಾಗಿ ಇವರ  ಬಳಿ ಫಾರಂ ಗಳನ್ನು ಪಡೆದು ಉಪಯೋಗಿಸಿರುವೆ .ಆದರೆ ಈ ಬಾರಿ ಪುತ್ತೂರಿಗೆ ಬಂದಾಗ ಇವರ ಪರಿಚಯ ಸ್ನೇಹಕ್ಕೆ ತಿರುಗಿ  ಸಂತೋಷ ಪಟ್ಟಿದ್ದೇನೆ . ಸುಬ್ಬಣ್ಣ ಶಾಸ್ತ್ರಿಗಳು ನೇರ ನುಡಿ ನಡೆಯ ಮನುಷ್ಯ . ಅವರಿಗೆ ವ್ಯವಹಾರ ಬೇರೆ ,ವೈಯುಕ್ತಿಕ  ಸ್ನೇಹ ಬೇರೆ . ಇದು ನನಗೆ ಬಹಳ ಹಿಡಿಸಿದೆ . ಆಗಾಗ ಅವರ ಮನೆಗೆ ,ಅಂಗಡಿಗೆ ಭೇಟಿ ಕೊಟ್ಟು ವಿಚಾರ ವಿನಿಮಯ ಮಾಡುವುದು ಇದೆ . ಅವರು ಕೆಲಸದಲ್ಲಿ ಭಾರೀ ಶಿಸ್ತು ಇಟ್ಟು ಕೊಂಡವರು ,ಅನಾವಶ್ಯಕ ರಜೆ ಹಾಕರು .ಮದುವೆ ಇತ್ಯಾದಿ ಸಮಾರಂಭಗಳು ಭಾನುವಾರ ಅಲ್ಲದಿದ್ದರೆ ಮುನ್ನಾ ದಿನವೇ ತರಕಾರಿ ಹಚ್ಚಲು ಹೋಗುವರು;ನಾನೂ ಹಲವು ಬಾರಿ ಇವರಿಗೆ ಜತೆಯಾಗಿದ್ದೇನೆ . 

ಇವರ ವ್ಯವಹಾರದಲ್ಲಿ  ಚೌಕಾಸಿಗೆ ಆಸ್ಪದ ಇಲ್ಲ . ನಾವು ಸರಕಾರದಿಂದ ಸಂಬಳ ಸಿಗುವವರಿಗೆ ಲಂಚ ಪಾವತಿಸಲು ಹಿಂದೆ  ಮುಂದೆ ನೋಡುವುದಿಲ್ಲ . ಶ್ರಮ ಜೀವಿಗಳಿಗೆ ,ಸ್ವಯಂ ಉದ್ಯೋಗಿಗಳ ಸೇವೆಗೆ ಯೋಗ್ಯ ಪ್ರತಿಫಲ ನೀಡಲು ಮಾತ್ರ ಮೀನಮೇಷ . ಶಾಸ್ತ್ರಿಗಳಿಗೆ ಇದರ ಅನುಭವ ಬೇಕಾದಷ್ಟು ಆಗಿದೆ . ಉಳ್ಳವರು ಮಾತು ತಪ್ಪುವುದು ಹೆಚ್ಚು ಎಂಬುದೂ ವೇದ್ಯವಾಗಿದೆ . ಅವರ ರೋಚಕ ಅನುಭವಗಳನ್ನು ಬರಹದಲ್ಲಿ ಭಟ್ಟಿ ಇಳಿಸುತ್ತಿದ್ದಾರೆ .ಕೆಲವು ತುಣುಕುಗಳ ಸ್ಕ್ರೀನ್ ಶಾಟ್ ಇದಕ್ಕೆ ಸೇರಿಸಿದ್ದು ವಿವರಕ್ಕಾಗಿ  ಅವರ ಪುಸ್ತಕಕ್ಕೆ ಕಾಯೋಣ . 

ಇವರ ಕುಟುಂಬದವರಿಗೆ  ಒಂದು ಫೈನಾನ್ಸ್ ಕಂಪನಿ ಯಿಂದ ಇವರಿಗೆ ಬರಬೇಕಿದ್ದ ಹಣ ಮಾಜಿ ಎಂ ಎಲ್ ಎ  ಶ್ರೀ ರಾಮ ಭಟ್ ಅವರ ಮಧ್ಯಸ್ಥಕೆಯಿಂದ ಸಿಕ್ಕಿದಾಗ ಅದನ್ನು ವಿವೇಕಾನಂದ ವಿದ್ಯಾ ಸಂಸ್ಥೆಗೇ ಕೊಟ್ಟರು .ಮಗಳ ಮದುವೆಯ ದಿನ ದೊಡ್ಡ ಮೊತ್ತವೊಂದನ್ನು ಇದೇ ಉದ್ದೇಶಕ್ಕಾಗಿ ನೀಡಿ ದ  ಇವರು ನಾವು ಆಡಂಬರಕ್ಕೆ ಮಾಡುವ ಮೊತ್ತದ ಒಂದು ಪಾಲು ಬಡ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಿದರೆ ಅದಕ್ಕಿಂತ ಪುಣ್ಯ ಬೇರೆ ಏನಿದೆ ಎನ್ನುವರು .  ಉರಿಮಜಲು ರಾಮ ಭಟ್ ಅವರ ಮೇಲೆ ಅವರಿಗೆ ಅತೀವ ಗೌರವ ಮತ್ತು ಅಭಿಮಾನ 

ಇನ್ನು ಅನೀರಿಕ್ಷಿತವಾಗಿ  ಸಂಕಷ್ಟದಲ್ಲಿ ಸಿಲುಕಿ ಕೊಂಡ ಎಷ್ಟೋ ಕುಟುಂಬಗಳಿಗೆ ಅವರು ಧನ ಸಹಾಯವನ್ನು  ಸಮಾನ ಮನಸ್ಕರೊಂದಿಗೊಡಗೂಡಿ ಒಟ್ಟು ಹಾಕಿ ಕೊಟ್ಟಿರುವರು . ಅವರು ಇದರಲ್ಲಿ ಪ್ರಚಾರ ಪಡೆಯ ಬಯಸರು ;ಆದರೂ ಇತರರು  ಸತ್ಕಾರ್ಯ ಕ್ಕೆ ಪ್ರಚೋದನೆ ಪಡೆಯಲಿ ಎಂಬ ಉದ್ದೇಶದಿಂದ ಬರೆಯುತ್ತಿದ್ದೇನೆ . 





                         
                      
 

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ