ಬೆಂಬಲಿಗರು

ಸೋಮವಾರ, ನವೆಂಬರ್ 8, 2021

ಮಂತ್ರ ಬಿನ್ನಹ

 ನಮ್ಮಲ್ಲಿ ಹಿಂದೆ ಆಗುತ್ತಿದ್ದ ವಿವಾಹಗಳ ವೈಭವ ಮತ್ತು ಆತ್ಮೀಯತೆ ಬಗ್ಗೆ ನಾನು ಹಿಂದೆ ಬರೆದಿದ್ದೆ . ವರನ ದಿಬ್ಬಣ ಬಂದು ,ಸ್ವಾಗತ ,ಅವಲಕ್ಕಿ ಸಜ್ಜಿಗೆ ಕಾಫಿ ಆಗಿ ,ವಾರ ವಧೂ ಅಲಂಕಾರ ,ನಡುವೆ ಚಪ್ಪರದಲ್ಲಿ ಗಂಡಸರು ,ಹೆಂಗಸರು ಸಭೆಯಲ್ಲಿ ತಮ್ಮ ತಮ್ಮ ಸ್ಥಾನದಲ್ಲಿ ಚಾಪೆಯ ಮೇಲೆ ಆಸೀನರಾಗಿ ಎಲೆ ಅಡಿಕೆ ಸೇವಿಸಿಕೊಂಡು ಉಭಯ ಕುಶಲೋಪರಿ ಮಾತನಾಡುವರು .ಮಾಸ್ಟ್ರು ಬರುವ ಮುಂಚಿನ ತರಗತಿಯ ವಾತಾವರಣ .  ಹೊಸ ಬಟ್ಟೆ ಹಾಕಿಕೊಂಡ ಮಕ್ಕಳು ಹೊಸ ಮೈತ್ರಿ ಮಾಡಿಕೊಂಡು ತಮ್ಮದೇ ಲೋಕದಲ್ಲಿ ಲಾಗ ಹಾಕುವರು .ಮುಹೂರ್ತ ಸಮೀಪಿಸಿದಾಗ ಪುರೋಹಿತರು ಎದ್ದು ನಿಂತು ಒಂದು ಕೈಯಿಂದ ಮಂಟಪದ ರೀಪು ಹಿಡಿದು ಕೊಳ್ಳುವರು . ಸಭೆಯಲ್ಲಿ ಪೂರ್ಣ ಮೌನ ಆವರಿಸುವುದು . ಪುರೋಹಿತರು ಮಂತ್ರ ಬಿನ್ನಹ ಆರಂಭಿಸುವರು . ಇದು ಬಹಳ ಅಪ್ಯಾಯ ಮಾನವಾಗಿದ್ದು ನಾನು ಮಂಟಪದ ಬಳಿ ಕುಳಿತು ಆಸಕ್ತಿಯಿಂದ ಕೇಳುತ್ತಿದ್ದೆನು .ಕೆಲವು ಸಾಲು ನನಗೆ ಬಾಯಿ ಪಾಠ ಬರುತ್ತಿದ್ದು ನಾನು ಮನೆಗೆ ಹೋಗಿ ಕಲ್ಪಿತ ಮಂಟಪ ಹಿಡಿದು ಅದನ್ನು ಹೇಳುತ್ತಿದ್ದೆನು . ಈ ಬಿನ್ನಹ ಮಂತ್ರ ಭವಂತು ಸರ್ವಜ್ಞ ಎಂದು ಆರಂಭವಾಗುವುದು ಮತ್ತು ಪುರೋಹಿತರು ಎದ್ದು ನಿಂತು ಹೇಳುತ್ತಿದ್ದರಿಂದ ,ಬಸ್ಸಿನಲ್ಲಿ ಜಾಗ ಸಿಗದೇ ಮೇಲಿನ ಕಂಬಿ ಹಿಡಿದು ನಿಂತು ಬಂದರೆ ಬಸ್ಸಿಲಿ  ಭವಂತು ಸರ್ವಜ್ಞ ಮಾರಾಯ ಎಂದು ಹೇಳುತ್ತಿದ್ದರು . ಈ ಮಂತ್ರದ  ಆರಂಭದಲ್ಲಿ ಸೇರಿದ ಅತಿಥಿಗಳಿಗೆ ಹೇಗೆ ಅಭಿವಂದಿಸಲಿ ಎಂಬ ಜಿಜ್ಞಾಸೆ ಆದರೆ ,ಆಮೇಲೆ ಅತಿಥಿಗಳಿಗೆ ಷೋಡಶೋಪಚಾರ ಯಾವುವು ?ಅವುಗಳಲ್ಲಿ  ಮತ್ತೆ ಪ್ರಾಮುಖ್ಯವಾದದ್ದು ಆರು .ಅದರಲ್ಲಿ ಕೂಡಾ ನಮಸ್ಕಾರವೇ ಶೇಷ್ಠ  ,ನನ್ನಂತಹ ಬಡಪಾಯಿಯ ನಮಸ್ಕಾರವನ್ನೇ ಷಡ್ಯುಪಚಾರವಾಗಿ ಸ್ವೀಕರಿಸಿ  ಇತ್ಯಾದಿ ಬರುತ್ತದೆ . ಪುರೋಹಿತರು ಮೊದಲು ಸಂಸ್ಕೃತದಲ್ಲಿ  ,ಅದರ ಅನುವಾದ ಕನ್ನಡಲ್ಲಿ ಎರಡೂ ರಾಗವಾಗಿ ಹೇಳುವರು .ಕೇಳಲು ಬಹಳ ಹಿತ . ಈಗ ಹಾಲ್ ಗಳಲ್ಲಿ ಇವುಗಳನ್ನು ಗಮನ ಕೊಟ್ಟು ಕೇಳುವುದು ಅಸಾಧ್ಯ . ಪುರೋಹಿತರೂ ಕಾಲಕ್ಕನುಗುಣವಾಗಿ ಅದರಲ್ಲಿ ಕೆಲವು ಕಡಿತ ಮಾಡಿಕೊಳ್ಳುವರು

 ಮಂತ್ರ ಬಿನ್ನಹ ಹೀಗೆ ತೊಡಗುವುದು .

ಭವಂತಃ ಸರ್ವಜ್ಞ :ನೀವೆಲ್ಲರೂ ಸರ್ವಜ್ಞರಾದಂತವರೂ 

ಸಕಲ ಭುವನೇ ರೂಡಾಯಶಸಃ ;ಸಮಸ್ತ ಲೋಕಗಳಲ್ಲಿಯೂ ಕೀರ್ತಿಯುಳ್ಳಂಥವರುಗಳು 

ಯಯಮ್ ತಾವದ್ಬಾಲಾಹ -ನಾವಾದರೋ ಬಾಲಕರು 

ಸರಸ ವಚನೇ ನೈವ ನಿಪುಣಃ -ಸರಸ ವಚನಗಳನ್ನು ಆಡುವುದರಲ್ಲಿ ನಿಪುಣರಲ್ಲ 

ತಥಾಪಿ -ಹಾಗಾದರೂ 

ಇಯಂ ವಾಣೀ -ಈ ವಾಕ್ಯವು 

ವಿಷತು  ಭವತಾ ಕರ್ಣ ಕುಹರಂ ;ನಿಮ್ಮ ಕಿವಿಗಳನ್ನು ಪ್ರವೇಶಿಸಲಿ 

ಕಿಶೋರಸ್ಯಾಲಾಪಃ -ಬಾಲಕನ ತೊದಲು ನುಡಿಯು 

ಖಲು ಭವತಿ ಪಿತ್ರೋರತಿಮುದೇ -ತಾಯಿ ತಂದೆಯರಿಗೆ ಯಾವ ಪ್ರಕಾರವಾಗಿ ಸಂತೋಷ ತರುತ್ತದೆಯೋ ಅದೇ ಪ್ರಕಾರವಾಗಿ ನೀವೆಲ್ಲರೂ ಸಂತೋಷ ಪಡಬೇಕು . 

ಪುತ್ರೋತ್ಸವೇ- ಪುತ್ರೋತ್ಸವ ನಾಮಕರಣದಲ್ಲಿ ;ಮೌಂಜಿ ಬಂಧೇ -ಉಪನಯನದಲ್ಲಿ 

ಕನ್ಯಾಯಃ ಪ್ರಥಮಾರ್ಥವೇ -ಕನ್ನಿಕೆಯ ಪ್ರಥಮ ಋತುವಿನಲ್ಲಿ ಮಾಡತಕ್ಕಂತಹಾ ಬ್ರಹ್ಮೋದನ ಕರ್ಮದಲ್ಲಿ .,

ವಿವಾಹೇ -ವಿವಾಹದಲ್ಲಿ , ಯಜ್ಞ ಸಮಯೇ -ಯಜ್ಞ ಮಾಡುವಾಗ ,ಬಿನ್ನಹಮ್ ಪಂಚ ಸುಸ್ಮೃತಮ್ -ಈ ಐದು ಸಂದರ್ಭಗಳಲ್ಲಿ ಬ್ರಹ್ಮ ಸಭೆಯನ್ನು ಕುರಿತು ಬಿನ್ನಹ ಮಾಡಬೇಕು . 

ಆಶಿಃಪೂರ್ವಕಮಿತ್ಯೆಕೇ -ಆಶೀರ್ವಾದ ಪೂರ್ವಕವಾಗಿ ಬಿನ್ನಹ ಮಾಡಬೇಕೆಂಬುದು ಒಂದು ಮತ ;ನಮಃ ಪೂರ್ವನ್ತು ಕೇಚನಃ -ನಮಸ್ಕಾರ ಪೂರ್ವಕವಾಗಿ ಬಿನ್ನಹ ಮಾಡಿಕೊಳ್ಳಬೇಕು ಎಂದು ಕೆಲವರ ಮತ ;ಬಿನ್ನಹಂ  ವೇದಪೂರ್ವಂ ಸ್ಯಾದಿತಿ ಸರ್ವೆರ್ವಿ ನಿಶ್ಚಿತಂ -ವೇದಪೂರ್ವವಾಗಿ  ಬಿನ್ನಹ ಮಾಡಬೇಕೆಂಬುದುದು ಸರ್ವ ಸಮ್ಮತ . 

ಇವುಗಳ ಪೈಕಿ ಆಶೀ ಪೂರ್ವಕವಾದ ಬಿನ್ನಹವು ಯಾವುದಯ್ಯ ಎಂದರೇ 

ಗಿರಿಜಾ ವಿವಾಹ ಸಮಯೇ -ಪಾರ್ವತಿ ದೇವಿಯ ವಿವಾಹ ಸಮಯದಲ್ಲಿ 

ಸ್ವಸ್ತೀತಿ ಪರಿಭಾಷಿತೋ ಮುನಿವರೈ -ವಶಿಷ್ಠ ವಾಮದೇವಾದಿ ಮುನಿವರರಿಂದ ಮಂಗಲವೆಂದು ಶ್ಲಾಘಿಸಲ್ಪಟ್ಟಂತಹಾ ;ಸಂಸ್ತೂಯ ಮಾನಃ  ಸುರೈ -ದೇವಗಣದಿಂದ ಸ್ತುತಿಸಲ್ಪಟ್ಟಂತಹಾ ;ಪಾರ್ಶ್ವೇ ಪದ್ಮಜ ಪದ್ಮನಾಭ ಪುರುಹೂತಾರ್ದೈ ರ್ಜ್ಯೇರ್ಥರ್ಚಿತ -ಪಾರ್ಶ್ವ ಭಾಗದಲ್ಲಿ ಪದ್ಮನಾಭ ದೇವೇಂದ್ರನೇ ಮೊದಲಾದ ದೇವತೆಗಳಿಂದ ಜಯ ಜಯ ಎಂದು ಪೂಜಿಸಲ್ಪಟ್ಟಂತಹಾ ; ಅಗ್ರೇಚಾಪ್ಸರಸಾಮ್  ಗಣೈ ರಹ ರಹ ನೃತ್ಯದ್ಭಿ ರಾಹ್ಲಾದಿತಃ -ಎದುರಿನಲ್ಲಿ ನಾನಾ  ನೃತ್ಯವನ್ನು ಮಾಡುವ ಅಪ್ಸರ ಸ್ತ್ರೀ ಸಮೂಹದಿಂದ ಸಂತೋಶಿಸಲ್ಪಡುವಂತಹಾ ;ಸಂತುಷ್ಟಮ್ -ಸಂತುಷ್ಟನದಂತಹಾ ;ಮೃಢಮ್ -ಪರಮೇಶ್ವರನೂ .;ಸ್ಯಾತ್ ಸಂಪದೇ -ನಮಗೆ ಉತ್ತರೋತ್ತರ ಮಂಗಲವನ್ನುಂಟು ಮಾಡಲಿ ಎಂಬುದೀಗ ಆಶೀ ಪೂರ್ವಕ ಬಿನ್ನಹ .. 

ನಮಃ ಪುರ್ವಿಕಾ ವಿಜ್ಞಾಪನಾ ಕಥಾಮಿತ್ಯಾಕಾಂಕ್ಷಾಯಾಮಾಹಾ -ನಮಸ್ಕಾರ ಪೂರ್ವಕವಾದ ಬಿನ್ನಹವು ಯಾವುದಯ್ಯಾ ಎಂದರೆ --- ಹೀಗೆ ಮುಂದುವರಿಯುವುದು.ಮುಂದೆ ಸಭೆಯ ವರ್ಣನೆ ,ಅತಿಥಿ ಉಪಚಾರಗಳ  ವರ್ಣನೆ ಇರುವುದು .ಈಗ ಊಟದ ಹೊತ್ತಿಗೆ ಬಹುತೇಕ ಅತಿಥಿಗಳ ಆಗಮನ ಆಗುವುದರಿಂದ ಇವೆಲ್ಲಾ ಅರಣ್ಯ ರೋದನ ಆದಂತೆ ಭಾಸ ಆಗುವುದು .

 

(ಇದರ ಮೂಲ ಸಾಹಿತ್ಯ ಒದಗಿಸಿಕೊಟ್ಟ ನಮ್ಮ ಪುರೋಹಿತರಾದ ಅಮೈ ಶ್ರೀ ಕೃಷ್ಣ ಪ್ರಸಾದ ಭಟ್ಟರಿಗೆ ಆಭಾರಿ )

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ