ಬೆಂಬಲಿಗರು

ಮಂಗಳವಾರ, ನವೆಂಬರ್ 16, 2021

             ವಿಶಿಷ್ಟ ಸಾಧಕಿ ಸಿಂಚನ ಲಕ್ಷ್ಮಿ 

             

ಈಗ ನಮ್ಮ ಊರಿನ ಹೆಮ್ಮೆಯ   ಈ ಸಾಧಕಿಯ ಸುದ್ದಿ ಎಲ್ಲಾ ಕಡೆ .ಇವಳ ಹೆಸರು ಸಿಂಚನ ಲಕ್ಷ್ಮಿ . ವೈದ್ಯಕೀಯ ಪ್ರವೇಶಕ್ಕೆ ಇರುವ ಅಖಿಲ ಭಾರತ ನೀಟ್ ಪರೀಕ್ಷೆಯ ವಿಶೇಷ ವಿಭಾಗದಲ್ಲಿ  ದೇಶಕ್ಕೆ ಎರಡನೇ ಸ್ಥಾನ ಗಳಿಸಿದ ಕೀರ್ತಿ .

ಜನ್ಮತಾ ಬೆನ್ನು ಮೂಳೆ ಒಂದು ಪಾರ್ಶ್ವಕ್ಕೆ ಬಾಗಿದ(Congenital Scoliosis)ತೊಂದರೆ ಇದ್ದ ಈಕೆ ಅದನ್ನು ಸರಿ ಪಡಿಸಲು ಅರಕ್ಕೂ ಮೀರಿ ಸಂಕೀರ್ಣ ಶಸ್ತ್ರಕ್ರಿಯೆಗೆ ಒಳಗಾಗ ಬೇಕಾಯಿತು . ಅಗೆಲ್ಲಾ ತರಗತಿಗಳ ಹಾಜರಿ ಇಲ್ಲ . ಆದರೂ ಎದೆಗುಂದದೆ ಅಧ್ಯಯನ .ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ,ಪಿ ಯು ಸಿ ಯಲ್ಲೂ ಅದನ್ನು ಬಿಟ್ಟು ಕೊಡಲಿಲ್ಲ . ಈ ವರ್ಷದ ಜೆ ಈ ಈ ಪರೀಕ್ಷೆಯಲ್ಲಿ ಒಳ್ಳೆಯ ರಾಂಕ್ ಬಂದು  ಪ್ರತಿಷ್ಠಿತ ಮುಂಬೈ ಐ ಐ ಟಿ ಯಲ್ಲಿ ಪ್ರವೇಶ ಪಡೆದು ಅದಕ್ಕಾಗಿ ವೈದ್ಯಕೀಯ ಫಿಟ್ನೆಸ್ ಸರ್ಟಿಫಿಕೇಟ್ ಗೆ ನನ್ನಲ್ಲಿ ಬಂದಿದ್ದಳು .ಆಗಿನ್ನೂ ನೀಟ್ ಪರೀಕ್ಷೆ ಫಲಿತಾಂಶ  ಬಂದಿರಲಿಲ್ಲ .ಆದರೂ ಒಳ್ಳೆಯ ರಾಂಕ್ ಪಡೆಯುಯವ ಆತ್ಮ ವಿಶ್ವಾಸ ಆಕೆಗೆ ಇದ್ದು ದೆಹಲಿಯ ಖ್ಯಾತ ಆಲ್ ಇಂಡಿಯ ಮೆಡಿಕಲ್ ಸೈನ್ಸ್ ಗೆ ಸೇರುವ ಇಚ್ಛೆ ಪ್ರಕಟಿಸಿದ್ದಳು . ಅವಳ ವಿಶ್ವಾಸ ಹುಸಿಯಾಗಲಿಲ್ಲ .ಈ ಸಾಧಕಿಯ ಆಶೆ ಈಡೇರಲಿ . ಒಳ್ಳೆಯ ತಾಳ್ಮೆ ,ಸಂಹವನ ಸಾಮರ್ಥ್ಯ ಇರುವ ಈಕೆ ಖಂಡಿತಾ ಉತ್ತಮ  ವೈದ್ಯೆ ಆಗುವುದರಲ್ಲಿ ಸಂದೇಹ ಇಲ್ಲ . 

ಇಲ್ಲಿ ಅವಳಿಗೆ ಎಲ್ಲಾ ತರಹದ ಬೆಂಬಲ ಕೊಟ್ಟು ,ಸಾಧನೆಗೆ ಪೂರಕರಾದ ಅವರ ಹೆತ್ತವರನ್ನು ಅಭಿನಂದಿಸಲೆ ಬೇಕು ,ಶ್ರೀ ಮುರಳೀಧರ ಬಂಗಾರಡ್ಕ ಮತ್ತು ಶೋಭಾ ಅವರು  ಮಗುವಿನ ವಿಕಲತೆ ಬಗ್ಗೆ ದೃತಿಕೆಟ್ಟು ಕೈ ಚೆಲ್ಲಿ ಕೂರದೆ ಬೇಕಾದ ಚಿಕಿತ್ಸೆ ಮಾಡಿಸಿ ಅದನ್ನು ಸರಿ ಪಡಿಸಿ , ಪ್ರತಿಭಾನ್ವಿತೆ ಆದ ಮಗಳು ಅಧ್ಯಯನ ದಲ್ಲಿ  ತನ್ನ ಹಿರಿಮೆ ಕಾಯ್ದು ಕೊಳ್ಳುವಂತೆ ನೋಡಿ ಕೊಂಡದ್ದು ಸಾಮಾನ್ಯ  ಸಾಧನೆ ಅಲ್ಲ .

ಉಪ್ಪಿನಂಗಡಿ ಸಮೀಪ ಹತ್ತೊಕ್ಕಲು  ಎಂಬಲ್ಲಿ ಅನಂತೇಶ್ವರ ಭಟ್ ಎಂಬವರು ಇದ್ದರು.ಮೂಲತಃ ಶಿರಂಕಲ್ಲು  ಜೋಯಿಶ ಕವಲಿನವರಾದ ಇವರು ನಾನು ನನ್ನ ಜೀವನದಲ್ಲಿ  ಕಂಡ ಸಜ್ಜನರಲ್ಲಿ ಸಜ್ಜನರಾದ ಒಬ್ಬರು .ಅವರ ಪತ್ನಿ ದೇವಕಿ ಅಮ್ಮ . ಸಕಲರಿಗೂ ಒಳಿತನ್ನೇ ಬಯಸುವ ಚಿನ್ನದ ಮನಸಿನವರು . ಅವರ ಮಗಳು ಲೀಲಾ ಅವರನ್ನು  ಮಚ್ಚಿಮಲೆ ಜಯರಾಮ ಭಟ್ ಅವರಿಗೆ ಕೊಟ್ಟಿದ್ದು ಅವರ ಪುತ್ರಿ ಶೋಭಾ ಬಂಗಾರಡ್ಕ . ಇನ್ನು ಮುರಳೀಧರ  ಅವರು ಬಂಗಾರಡ್ಕ ರಾಮಕೃಷ್ಣ ಭಟ್ ಅವರ ಪುತ್ರ (ಇವರ ಬಗ್ಗೆ ಹಿಂದೆ ಬರೆದಿದ್ದೆ ). ಮುರಳೀಧರ ಮತ್ತು ಅವರ ಅಣ್ಣ ಜನಾರ್ಧನ ಭಟ್ ಒಳ್ಳೆಯ ಕೃಷಿಕರು ,ಸ್ಥಿತಿ ವಂತರೂ ಆಗಿದ್ದರೂ ತಮ್ಮ ಸಹಜ ವಿನಯ ಮತ್ತು ವಿದ್ಯಾ ಪಕ್ಷಪಾತ ಗುಣದಿಂದ ಸಮಾಜದಲ್ಲಿ  ಜನಾನುರಾಗಿಗಳು . ಹಿರಿಯರ ಗುಣ ಮಗುವಿನಲ್ಲಿ ನೋಡು ಎಂಬುದು ಈ ಕುಟುಂಬದ ಎಲ್ಲಾ ಸದಸ್ಯರಲ್ಲಿ ಕಾಣ ಬಹುದು .

   ಇನ್ನು ಸಿಂಚನ ಲಕ್ಷ್ಮಿಯ ಅಕ್ಕ ಸಿಂಧೂರ ಸರಸ್ವತಿ ಕೂಡಾ ಪ್ರತಿಭಾವಂತೆ ಯಾಗಿದ್ದು  ಉದ್ದಕ್ಕೂ ರಾಂಕ್ ಗಳಿಕೆಯಲ್ಲಿ ಮುಂದೆ ಇದ್ದು ,ಇಂಜಿನೀರಿಂಗ್ ಪರೀಕ್ಷೆಯಲ್ಲಿ ವಿಶ್ವ ವಿದ್ಯಾಲಯಕ್ಕೆ ಮೊದಲ ರಾಂಕ್ ಪಡೆದು ಈಗ ಉದ್ಯೋಗಸ್ತೆ . ವಿದ್ಯಾ ದಧಾತಿ ವಿನಯಂ ಎಂಬುದನ್ನು ಪ್ರಾತ್ಯಕ್ಷಿಕ ನೋಡ ಬೇಕಾದರೆ ಈ ಮಕ್ಕಳನ್ನು ನೋಡ ಬಹುದು .ಇವರಿಗೆ ಒಬ್ಬ ಸಣ್ಣ ತಮ್ಮ ಇದ್ದು ಅವನೂ ಅಕ್ಕಂದಿರ ಹಾದಿ ಹಿಡಿಯುವುದರಲ್ಲಿ ಸಂದೇಹ ಇಲ್ಲ .

                     



ನನಗೆ ಸ್ವಲ್ಪ ಗರ್ವ ಇದೆ .ಬಂಗಾರಡ್ಕ ಮತ್ತು ನನ್ನ ಅಂಗ್ರಿ ಒಂದೇ ಕುಟುಂಬ .ಅಲ್ಲದೆ ಅವರ ಕುಟುಂಬದವರು ನನ್ನಲ್ಲಿ ಸ್ನೇಹ ವಿಶ್ವಾಸ ಹೊಂದಿದವರು ,ಅವರ ಕುಟುಂಬ ವೈದ್ಯ ನಾನು ಎಂದು .
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ