ಬೆಂಬಲಿಗರು

ಮಂಗಳವಾರ, ನವೆಂಬರ್ 16, 2021

ನನ್ನ ಒಪ್ಪಕ್ಕ

                            ನನ್ನ ಒಪ್ಪಕ್ಕ 

                         

ನಿಮಗೆಲ್ಲಾ ಇರದ ಭಾಗ್ಯ ಒಂದು ನನಗಿದೆ ,ಅದೇ ನನ್ನ ಅಕ್ಕ ಭಾಗ್ಯ ಲಕ್ಷ್ಮಿ . ಇವಳು ನನ್ನ ಎರಡನೇ ಅಕ್ಕ ,ನನ್ನ ಒತ್ತಿನವಳು . ನಾವು ತಮ್ಮ ತಂಗಿಯರು ಅವಳನ್ನು ಒಪ್ಪಕ್ಕ ಎಂದು ಕರೆಯುವುದು . ಒಪ್ಪಕ್ಕ ಹೆಸರು ಬಹಳ ಚಂದ .ಮಲಯಾಳದಲ್ಲಿ ಕೂಡಾ ಇಂತಹ ಶಬ್ದ ಇದ್ದು ಅದು ಒಪ್ಪೋಳ್ ಆಗಿದೆ .ಎಂ ಟಿ ವಾಸುದೇವನ್ ನಾಯರ್ ಅವರ ಇದೇ  ಶೀರ್ಷಿಕೆಯ ಕತೆ ಸಿನೆಮಾ ಆಗಿ ಹೆಸರು ಗಳಿಸಿತ್ತು . 

                    ಇವಳು ನನ್ನಿಂದಲೇ ದೊಡ್ಡವಳು ಆದ ಕಾರಣ ನನ್ನಲ್ಲಿ ಸ್ವಲ್ಪ ಮಮತೆ ಜಾಸ್ತಿ . ನಮ್ಮ ಬಾಲ್ಯದಲ್ಲಿ ಪ್ರಿ ಕೆ ಜಿ , ಯು ಕೆ ಜಿ ಇರಲಿಲ್ಲವಾದ್ದರಿಂದ ನಮ್ಮ ಬಾಲ್ಯ ನಿಜಕ್ಕೂ ಹಸನಾಗಿತ್ತು . ಅಕ್ಕ ಎರಡನೇ ತರಗತಿಯಲ್ಲಿ ಇರುವಾಗ ಒಮ್ಮೊಮ್ಮೆ ನನ್ನನ್ನು ಕರೆದು ಕೊಂಡು ಹೋಗಿ ತನ್ನ ಜತೆ ಹುಡುಗಿಯರ ಬೆಂಚ್ ನಲ್ಲಿ ಕುಳಿತು ಕೊಳ್ಳಿಸುತ್ತಿದ್ದಳು . ನನ್ನ ಕೈಹಿಡಿದು ಶಾಲೆಗೆ ಎರಡು ಜಡೆ  ಹಾಕಿದ ಪುಟ್ಟು ಹುಡುಗಿ ಹೆಮ್ಮೆಯಿಂದ ನಡೆದು ಹೋಗುತ್ತಿದ್ದುದು ಮಸುಕಾಗಿ ನೆನಪಿದೆ . ಇವನು ನನ್ನ ತಮ್ಮ ಎಂದು ಎಲ್ಲರಿಗೂ ಪರಿಚಯ ಮಾಡಿಸುವಳು . ಅಕ್ಕ ಜತೆಗೆ ಇದ್ದಾಳೆ ಎಂದು ನನಗೆ ಧೈರ್ಯ . ಶಾಲೆಯಲ್ಲಿ ಊಟ ಮಾಡಿಸಿ ತನ್ನ ಲಂಗದ ತುದಿಯಿಂದ ನನ್ನ ಮುಖ ಮತ್ತು ಕೈ ಒರಸಿದವಳು .

 ಮನೆಯಲ್ಲಿ ಓದುವಾಗ ಕೂಡಾ ನನಗೂ ಅವಳಿಗೂ ಒಂದೇ ಚಿಮಿಣಿ ಎಣ್ಣೆ ದೀಪ . ಅವಳು ಗಟ್ಟಿಯಾಗಿ ಬಾಯಿ ಪಾಠ ಮಾಡುವಾಗ ಕ್ರಾಸ್ ಲರ್ನಿಂಗ್ ಮೂಲಕ ನನಗೂ ಅವಳ ಪಾಠ ಬಾಯಿ ಪಾಠ ಆಗುವುದು .ಆಕೆ ತನ್ನ ಭಂಡಾರದಿಂದ ಪುಳಿಂಕೋಟೆ ,ಸಾಂತಣಿ ನನಗೆ ಕೊಡುವಳು .ಎಲ್ಲಾ ಮಕ್ಕಳಂತೆ ನಾವು ಕೂಡಾ ಜಗಳ ಮಾಡಿದ್ದೇವೆ .ಅದರಲ್ಲಿ ದೊಡ್ಡ ಬೈಗಳು "ಸತ್ತೇ ಹೋಗು ಎಂಬ ಶಾಪ ".ರಾತ್ರಿ ಮಲಗುವಾಗ ನನಗೆ ಜ್ಞಾನೋದಯ ಆಗುವದು .'ಛೆ ಪಾಪ ಅಕ್ಕ ,ನನ್ನ ಶಾಪದಿಂದ ಅವಳು ಸತ್ತು ಹೋದರೆ ?"ದೇವರೇ ನನ್ನ ಬೈಗಳನ್ನು ನಲ್ಲಿ ಫೈ ಮಾಡು 'ಎಂದು ದೇವರಲ್ಲಿ ಬೇಡಿಕೊಂಡು ಬೆಳಿಗ್ಗೆ ಎದ್ದೊಡನೆ ಅವಳು ಬದುಕಿದ್ದಾಳೆ ಎಂದು ಖಾತರಿ ಪಡಿಸುತ್ತಿದ್ದೆ . 

             ಒಪ್ಪಕ್ಕ ಹೈ ಸ್ಕೂಲ್ ನಲ್ಲಿ ಟೆನ್ನಿ ಕೊಯ್ಟ್ ಆಟಗಾರ್ತಿ ಆಗಿದ್ದು ಅವಳು ಮತ್ತು ಅವಳ ಟೀಮ್ ಜಿಲ್ಲಾ ಮಟ್ಟದ ಗ್ರೆಗ್ ಮೆಮೋರಿಯಲ್ ಟ್ರೋಫಿ ಗೆದ್ದಿತ್ತು .ಅಕ್ಕನಿಗೆ ಆಟದ ಪ್ರಾಕ್ಟೀಸ್ ಇರುವಾಗ ಬೆಂಗಾವಲಿಗೆ ನಾನು ನಿಲ್ಲುತ್ತಿದ್ದೆ . ಪಾಠದಲ್ಲಿ ಕೂಡಾ ಹಿಂದೆ ಇರಲಿಲ್ಲ .ಆದರೆ ನಮ್ಮ ಆರ್ಥಿಕ ಪರಿಷ್ಟಿತಿ ಮತ್ತು ಆಗಿನ ಕಾಲದಲ್ಲಿ ಹಳ್ಳಿಯ ಹುಡುಗಿಯರನ್ನು  ಉನ್ನತ ಶಿಕ್ಷಣಕ್ಕೆ ಕಳುಹಿಸಲು ಹಿಂದೇಟು ಹಾಕುತ್ತಿದ್ದರಿಂದ ಆಕೆ ಪಿ ಯು ಸಿ ಗೆ ಅಧ್ಯಯನ ನಿಲ್ಲಿಸಿ ,ಕರೆಸ್ಪಾಂಡೆನ್ಸ್ ಮೂಲಕ ಶಿಕ್ಷಣ ಮುಂದುವರಿಸ ಬೇಕಾಯಿತು . 

ಮುಂದೆ ಆಕೆ ವಿ ಬಿ ಅರ್ತಿಕಜೆ ಯವರನ್ನು ವಿವಾಹ ಆಗಿ ಪುತ್ತೂರಿಗೆ ಬಂದಳು .ಅವರದು ಆಗ ದೊಡ್ಡ ಕುಟುಂಬ . ನಾವು ತಮ್ಮಂದಿರು ಪುತ್ತೂರಿನಲ್ಲಿ  ಹೋದಾಗ ಪರ್ಲಡ್ಕ   ಬಾಲವನ ದ ಪಕ್ಕ ಇರುವ ಅವಳ ಮನೆಗೆ ಹೋದಾಗ ಅವಳು ತುಂಬಾ ಸಂಭ್ರಮ ಪಡುವಳು . ಪುತ್ತೂರು ಜಾತ್ರೆ ಇತ್ಯಾದಿಗಳಿಗೆ ನಾವು ಅಲ್ಲಿಯೇ ಕ್ಯಾಂಪ್ .ನಮ್ಮ ಭಾವ ಸದಾ ಅಧ್ಯಯನ ಮತ್ತು ಬರವಣಿಗೆಯಲ್ಲಿ ನಿರತರಾಗಿ ಇರುತ್ತಿದ್ದರು . 

                  ಈಗ ನಾವಿಬ್ಬರೂ ಪುತ್ತೂರಿನಲ್ಲಿ ಇದ್ದೇವೆ .ನನಗೂ ಅವಳಿಗೂ ಅನೇಕ ವಿಚಾರಗಳಲ್ಲಿ ಸೈದ್ಧಾಂತಿಕ ಮತ ಭೇದ ಇವೆ .ಆದರೂ ಅವಳಿಗೆ ನಾನು ಸಣ್ಣ ತಮ್ಮನೇ ?ಅವಳು ನನಗೆ ಪ್ರೀತಿಯ ಒಪ್ಪಕ್ಕನೇ . ನನ್ನ ಆರ್ಥಿಕ ಅಶಿಸ್ತು ಮತ್ತು ಮಿತಿ ಮೀರಿದ ಔದಾರ್ಯದ ಬಗ್ಗೆ ಅವಳಿಗೆ ಚಿಂತೆ ಇದ್ದು ಆಗಾಗ ನನ್ನನ್ನು ಎಚ್ಚರಿಸುವಳು . 

 ಅವಳು ತಲೆಗೂದಲಿಗೆ ಬಣ್ಣ ಹಾಕೊಳ್ಳುವಳು ,ನಾನು ಅದಕ್ಕೆ ದೂರ .ಎಲ್ಲರೂ ನನ್ನನ್ನು  ಆಕೆಯ ಅಣ್ಣ ಎಂದು ಕರೆಯುವಾಗ ಕಸಿವಿಸಿ ಆಗುವುದು ,ಅವಳಿಗೆ               ಡಿಮೋಶನ್ ಮಾಡಿದ್ದಕ್ಕೆ .(ನನ್ನನ್ನು ಹಲವರು ವೈ ಡೋಂಟ್ ಯು ಡೈ ಎಂದು ಕೇಳುತ್ತಾರೆ ,ಅವರಿಗೆ ನಾನು ಐ ಆಮ್ ನಾಟ್ ಇನ್ ಹರಿ 'ಎನ್ನುವೆನು 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ