ಬೆಂಬಲಿಗರು

ಬುಧವಾರ, ಜೂನ್ 30, 2021

ಮರೆಯಲಾಗದ ಮಹನೀಯರು ಶ್ರೀ ಆರ್ ಎನ್ ಶೆಟ್ಟಿ

 

                      
www.tvdaijiworld.com/images6/allwyn_171220_rnsh...

 

ಹದಿಮೂರು ವರ್ಷ ರೈಲ್ವೆ ಸೇವೆ ಮಾಡಿದ ನನಗೆ ಪೆನ್ಷನ್ ಪಡೆಯುವ ಅರ್ಹತೆ ಇರಲಿಲ್ಲ . ಕೆ ಎಸ ಹೆಗ್ಡೆ ಮೆಡಿಕಲ್ ಕಾಲೇಜು ಸೇರಿ ,ಹೊಸ ಸಂಸ್ಥೆಯೊಡನೆ ಬೆಳೆಯುವ ಅವಕಾಶ . ಕಾಲೇಜು ಇನ್ನೂ ಆರಂಭವಾದ ಕಾರಣ ನಮ್ಮ ಸಹಾಯಕ್ಕೆ ಪಿ ಜಿ ,ಹೌಸ್ ಸರ್ಜನ್ಸ್ ಇರಲಿಲ್ಲ .ರೆಸಿಡೆಂಟ್ಸ್ ಎಂದು ಕೆಲವು ತರುಣ ವೈದ್ಯರು ಇದ್ದರು . ರೋಗಿಗಳ ದೇಖೆ ರೇಖೆ ಜವಾಬ್ದಾರಿ ನೇರವಾಗಿ ನಮ್ಮ ಹೆಗಲಿಗೆ . ಕಾಲೇಜು ಸಮಯದ ನಂತರ ಹೊರಗಡೆ ಪ್ರಾಕ್ಟೀಸ್ ಮಾಡಲು ಅನುಮತಿ ಇತ್ತು . ಆದರೆ ಕಾಲ್ ಡ್ಯೂಟಿ ಆಗಾಗ ಇರುತ್ತಿದ್ದು ಮಂಗಳೂರಿನಲ್ಲಿ ಪ್ರಾಕ್ಟೀಸ್ ನಡೆಸಿ ಒಳರೋಗಿಗಳನ್ನು ಅಡ್ಮಿಟ್ ಮಾಡಿದರೆ ಎರಡು ದೋಣಿಯಲ್ಲಿ ಕಾಲು ಇಟ್ಟಂತೆ ,ಎರಡು ಕಡೆಯೂ ನ್ಯಾಯ ಒದಗಿಸಲಾಗದ ಅವಸ್ಥೆ . ಸಂಸ್ಥೆ ಇನ್ನೂ ಆರಂಭದ ದಿನಗಳಲ್ಲಿ ಇದ್ದುದರಿಂದ ಒಳ್ಳೆಯ ಸಂಬಳ ನಿರೀಕ್ಷಿಸುವಂತೆ ಇರಲಿಲ್ಲ . ಆದರೂ ಆರಂಭದ ವರ್ಷಗಳು ನಿಜಕ್ಕೂ ತುಂಬಾ ಸಂತೋಷ ತಂದುವು .ವೈದ್ಯ ವೈದ್ಯರ ನಡುವೆ ,ವೈದ್ಯ ಸಿಬ್ಬಂದಿ ನಡುವೆ ಅನ್ಯೋನ್ಯತೆ ಇತ್ತು . ಒಂದು ರಾತ್ರಿ ನಾನು ಸ್ತ್ರೀ ರೋಗ ತಜ್ಞರಿಗೆ ಸಿಸೇರಿಯನ್ ಗೆ ಅಸಿಸ್ಟ್ ಮಾಡಿದ್ದೆನು . ದಿನ ನಿತ್ಯದ ಕಾರ್ಯಗಳಲ್ಲಿ ತುಂಬಾ ಸ್ವಾತಂತ್ರ್ಯ ಇತ್ತು . 

                      ಸಂಬಳ ಸಾರಿಗೆ ಮಟ್ಟಿಗೆ ರೈಲ್ವೆ ಹುದ್ದೆಗಿಂತ ಕೆಳಗೆ ಜಾರಿದ್ದೆನು . ಮಂಗಳೂರಿನಲ್ಲಿ ಸ್ವಂತಃ ಫ್ಲಾಟ್ ಇದ್ದುದು ಸ್ವಲ್ಪ ಸಮಾಧಾನ .ಆದರೂ ಮೂರು ವರ್ಷಗಳಲ್ಲಿ ನನ್ನ ಬ್ಯಾಂಕ್ ಬ್ಯಾಲೆನ್ಸ್ ಸಮಾಧಾನ ಕರ ಇರಲಿಲ್ಲ . ಅದೇ ಸಮಯಕ್ಕೆ ಹಿಂದೆ ನಾನು ರಿಜಿಸ್ಟರ್ ಮಾಡಿದ್ದ ಮಧ್ಯ ಪ್ರಾಚ್ಯದ ಸರಕಾರಿ ವೈದ್ಯಕೀಯ ವಿಭಾಗ ನನ್ನನ್ನು ಕರೆಯಿತು .ನನಗೂ ಹೊಸ ಊರು ,ಜನ ಮತ್ತು ಸಂಸ್ಕೃತಿ  ಅಧ್ಯಯನದಲ್ಲಿ ಆಸಕ್ತಿ ಇದ್ದುದರಿಂದ ಒಪ್ಪಿಕೊಂಡು ದೇಶ ಬಿಟ್ಟೆ . ಮೊದಲ ವರ್ಷ ದ  ರಜೆ ಮುಗಿಸಿ ಹಿಂತೆರಳುವಾಗ ಪತ್ರಿಕೆ ಮೂಲಕ ಮುರುಡೇಶ್ವರದಲ್ಲಿ ಉದ್ಯಮಿ  ಶ್ರೀ ಆರ್ ಏನ್ ಶೆಟ್ಟಿ ಅವರು ಒಂದು ಆಸ್ಪತ್ರೆ ಆರಂಭಿಸುವರು ,ಮತ್ತು ಅದಕ್ಕೆ ವೈದ್ಯರ ಅವಶ್ಯಕತೆ ಇದೆ ಎಂಬ ಪ್ರಕಟಣೆ ನೋಡಿದೆ . ಕೂಡಲೇ ಅವರಿಗೆ ನನ್ನ ಇಂಗಿತವನ್ನು ತಿಳಿಸಿ ಪತ್ರ ಹಾಕಿ ವಿಮಾನ ಏರಿದೆನು . 

ಕೆಲವು ವಾರಗಳ ನಂತರ ಒಂದು ದಿನ ನಾನು ಓ ಪಿ ಡಿ ಯಲ್ಲಿ ರೋಗಿಗಳನ್ನು ನೋಡುತ್ತಿರಬೇಕಾದರೆ  ಬೆಂಗಳೂರಿನಿಂದ ಒಂದು ಫೋನ್ ಬಂತು .(ಆಗ ಮೊಬೈಲ್ ಸೇವೆ ಆರಂಭವಾಗಿತ್ತು ). ನಾನು ಫೋನ್ ತೆಗೆಯಲು ,"ಹಲ್ಲೋ ನಾನು ಆರ್ ಏನ್ ಶೆಟ್ಟಿ ಬೆಂಗಳೂರಿನಿಂದ ಮಾತನಾಡುವದು , ನಮ್ಮ ಮುರುಡೇಶ್ವರದ ಆಸ್ಪತ್ರೆಗೆ ನೀವು ಬಂದರೆ ಸಂತೋಷ ,ನಿಮ್ಮ ಬಗ್ಗೆ ಡಾ ಶಾಂತಾರಾಮ ಶೆಟ್ಟಿ ಯವರ ಬಳಿ ಕೇಳಿ ತಿಳಿದು ಕೊಂಡಿರುವೆನು " ಎಂಬ ಶಬ್ದಗಳನ್ನು ಕೇಳಿ ನಾನು ದಂಗಾದೆನು . ಈಗಷ್ಟೇ ರಜೆ ಮುಗಿಸಿ ಮರಳಿರುವುದರಿಂದ ಇನ್ನು ಊರಿಗೆ ಬರಲು ಆರು ತಿಂಗಳು ಆಗ ಬಹುದು ಎಂದು ಉತ್ತರಸಿದಾಗ ,"ಧಾರಾಳ ,ಕಟ್ಟಡ ಇತ್ಯಾದಿ ಇನ್ನೂ ನಿರ್ಮಾಣ ಹಂತದಲ್ಲಿ ಇದೆ ಎಂದರು . 

ಉತ್ತರ ಕನ್ನಡದಲ್ಲಿ ವೈದ್ಯಕೀಯ ಸೌಲಭ್ಯ ಇನ್ನೂ ಸಾಲದು . ಅಲ್ಲಿ ಸುಸಜ್ಜಿತ ಆಸ್ಪತ್ರೆ ಯನ್ನು ಕಟ್ಟಿ ಬೆಳೆಸುವುದು ನಿಜಕ್ಕೂ ಒಂದು ಸಂತೋಷದ ಸಾಹಸ ಕಾರ್ಯ . ಅಲ್ಲದೆ  ಭಟ್ಕಳ ದಲ್ಲಿ ಮಿತ್ರರಾದ ಡಾ ಪಾಂಡುರಂಗ ನಾಯಕ್ ಮತ್ತು ಕುಮಟಾದಲ್ಲಿ ಡಾ ತಿಮ್ಮಣ್ಣ ಹೆಗ್ಡೆ ಇದ್ದಾರೆ . ತಿಂಗಳುಗಳು ಜಾರಿ ನಾನು ರಜೆ ತೆಗೆದುಕೊಂಡು ಊರಿಗೆ ಬಂದಾಗ ಆರ್ ಏನ್ ಶೆಟ್ಟರಿಗೆ ಫೋನಾಯಿಸಿದೆ . ಇಂತಹ ದೊಡ್ಡ ಉದ್ಯಮಿ , ಮೊದಲು ನನ್ನನ್ನು ಸಂಪರ್ಕಿಸಿದಾಗಲೂ ,ನಾನು ಅವರನ್ನು ಕಾಂಟಾಕ್ಟ್ ಮಾಡಿದಾಗಲೂ ಯಾವುದೇ ಅಸ್ಸಿಸ್ಟಂಟ್ ಗಳ  ಮೂಲಕ ಅಲ್ಲ ನೇರ ಸಂಪರ್ಕ . 

                     ನಾನು ಹುಬ್ಬಳ್ಳಿಯಲ್ಲಿ ಕಲಿಯುತ್ತಿದ್ದ ಸಮಯ ಆರ್ ಎನ್ ಶೆಟ್ಟರ ಕಚೇರಿ ಹುಬ್ಬಳ್ಳಿಯಲ್ಲಿ ದೇಶಪಾಂಡೆ ನಗರದಲ್ಲಿ ,ಕೆ ಎಂ ಸಿ ಗೆ ಸಮೀಪ ಇತ್ತು . ಉತ್ತರ ಕರ್ನಾಟಕ ಮತ್ತು ಮಲೆನಾಡಿನ ಹಲವು ಭಾರೀ ನೀರಾವರಿ  ಕಾಮಗಾರಿ ಯಶಸ್ವಿಯಾಗಿ ನಡೆಸಿ ಅವರ ಹೆಸರು ಉತ್ತುಂಗಕ್ಕೆ ಏರುತ್ತಿದ್ದ ಕಾಲ . ಕರ್ನಾಟಕ ಸಂಘಕ್ಕೆ ದೇಣಿಗೆಗಾಗಾಗಿ ಅವರ ಲ್ಲಿಗೆ  ಹೋಗಿದ್ದೆನಾದುದರಿಂದ ಅವನ್ನು ಮುಖತಃ ನೋಡಿದ್ದೆ . ಆ ಮೇಲೆ ಅವರ ಕಾರ್ಯ ಕ್ಷೇತ್ರ ದೇಶದಾದ್ಯಂತ ಹಬ್ಬಿತಲ್ಲದೆ ,ಹೋಟೆಲ್ ಉದ್ಯಮ ,ಸಿರಾಮಿಕ್ ಫ್ಯಾಕ್ಟರಿ , ಮಾರುತಿ ಕಾರ್ ಏಜನ್ಸಿ ,ರಿಯಲ್ ಎಸ್ಟೇಟ್ ಮತ್ತು ತಾಂತ್ರಿಕ ವಿದ್ಯಾ ಸಂಸ್ಥೆ ಇತ್ಯಾದಿಗಳಿಗೆ ವಿಕಸಿತವಾಯಿತು .ಮುಖ್ಯ ಕಚೇರಿ ಬೆಂಗಳೂರಿನ ಎಂ ಜಿ ರೋಡಿನ ತಾಜ್ ಹೋಟೆಲ್ (ಇದೂ ಇವರ ಹೋಟೆಲ್ ,ತಾಜ್ ಗೆ ಲೀಸ್ )ಪಕ್ಕದಲ್ಲಿ ಇತ್ತು . 

ನಾನು ಊರಿಗೆ ಬಂದವನೇ ಬೆಂಗಳೂರಿಗೆ ಹೋಗಿ ಅವರನ್ನು ಕಂಡೆನು . ಮುರುಡೇಶ್ವರದ ಮೇಲೆ ಅವರಿಗೆ ಇರುವ ಬಂಧ ,ಆಸ್ಪತ್ರೆಯನ್ನು ಯಾವುದಕ್ಕೂ ಕಡಿಮೆ ಇಲ್ಲದಂತೆ ,ಸುಸಜ್ಜಿತವಾಗಿ ಬೆಳೆಸಿ ನಡೆಸುವ ಕನಸು ಅವರಿಗೆ ಇತ್ತು . ಆಗಲೇ ಮುರುಡೇಶ್ವರದಲ್ಲಿ ಒಂದು ಪಾಲಿ ಟೆಕ್ನಿಕ್ ನಡೆಸುತ್ತಿದ್ದ ಅವರು ನರ್ಸಿಂಗ್ ಕಾಲೇಜು ನಡೆಸುವ ಯೋಜನೆಯನ್ನೂ ಹಾಕಿದ್ದರು . ಅವರೊಡನೆ ನಮ್ಮ ಮಾತು ಎಲ್ಲಾ ಕನ್ನಡದಲ್ಲಿ . ಅವರ ಸರಳತೆ ,ನೇರ ನುಡಿ  ನನ್ನ ಮೇಲೆ ಪರಿಣಾಮ ಬೀರಿತು . ಸಾಮಾನ್ಯವಾಗಿ ನನಗೆ ಭಾರೀ ಹಣವಂತರೆಂದರೆ ಸ್ವಲ್ಪ ಅಲರ್ಜಿ ಮತ್ತು ಆದಷ್ಟು ಅವರಿಂದ ದೂರ ಇರುವ ಪ್ರವೃತ್ತಿ .(ಇದು ಸರಿ ಎಂದು ನಾನು ಹೇಳುವುದಿಲ್ಲ ). ನನ್ನ ಸಂಬಳ ಸಾರಿಗೆ ಇತ್ಯಾದಿ ಸಮಾಧಾನಕರವಾಗಿ ನಿರ್ಧಾರ ಆಗಿ ,ಮುಂದೊಂದು ದಿನ  ಮುರುಡೇಶ್ವರದಲ್ಲಿ  ಭೇಟಿ ಯಾಗುವ ಯೋಜನೆ ಮಾಡಿದರು . 

ಮುರುಡೇಶ್ವರದಲ್ಲಿ ನಾವು  ನಿಯೋಜಿತ ಆಸ್ಪತ್ರೆಯ ಪರಿಶೀಲನೆ ಮಾಡಿದೆವು ,ನನ್ನ ಕೆಲವು ಸಲಹೆಗಳನ್ನು ಕೊಟ್ಟೆನು . ಆಮೇಲೆ ಅವರದೇ ನವೀನ್ ಹೋಟೆಲ್ ನಲ್ಲಿ ಊಟ ಹಾಕಿ ನನ್ನೊಡನೇ ಅವರೂ ಸೇರಿದರು . 

ಅವರಲ್ಲಿ ಸೇರುವ ಯೋಜನೆಯಿಂದ ನಾನು ಪುನಃ ಮೆಡಿಕಲ್ ಕಾಲೇಜು ಸೇರಲಿಲ್ಲ . ಕಾಸರಗೋಡು ,ಉಪ್ಪಳದ ಆಸ್ಪತ್ರಗಳಿಗೆ ಭೇಟಿ ನೀಡಿ ಸಮಯ ಕಳೆಯುತ್ತಿದ್ದೆ ,ಆದರೆ ನನ್ನ ದುರಾದೃಷ್ಟಕ್ಕೆ ಮುರುಡೇಶ್ವರದ ಆಸ್ಪತ್ರೆಯ ಆರಂಭ ಕಾರಣಾಂತರ ಗಳಿಂದ ಬಹಳ ಮುಂದೆ ಹೋಯಿತು . ಮತ್ತು ನಾನು ಅವರಿಗೆ ಪತ್ರ ಬರೆದು ಭಾರವಾದ ಮನಸಿನಿಂದ ಹಿಂದೆ ಸರಿದು ಮಂಗಳೂರಿನ ವೈದ್ಯಕೀಯ ಕಾಲೇಜು ಪುನಃ ಸೇರಿದೆ . 

ಆದರೂ ಇಂತಹ ಹಿರಿಯ ಸಾಧಕ ರನ್ನು ಸಮೀಪದಿಂದ ಕಿಂಚಿತ್ ಅರಿಯುವ ಅವಕಾಶ ಸಿಕ್ಕಿದ್ದು ಭಾಗ್ಯ ಎಂದೇ ತಿಳಿಯುತ್ತೇನೆ ..ತುಂಬು ಜೀವನ ನಡೆಸಿದ ಶೆಟ್ಟರು ಕಳೆದ ವರ್ಷ ತೀರಿ ಕೊಂಡರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ