ಬೆಂಬಲಿಗರು

ಶುಕ್ರವಾರ, ಜುಲೈ 2, 2021

ನಿಂದಾ ಸ್ತುತಿ

  ನಿಂದಾ ಸ್ತುತಿ ಎಂದು ಇದೆ . ಮೇಲ್ನೋಟಕ್ಕೆ  ಇದು ನಿಂದೆಯಂತೆ ಕಂಡರೂ ನಿಜವಲ್ಲ . ವಾಡಿಕೆಯಲ್ಲಿ ಯಾವದು ಕೀಳು ಅಥವಾ ಅಸಹ್ಯ ಎಂದು ಕೊಳ್ಳುತ್ತೇವೋ ಮೂಲ ಭೂತವಾಗಿ ನೋಡಿದರೆ ಆಗಿರುವುದಿಲ್ಲ . ಒಂದು ರೀತಿಯಲ್ಲಿ ಬಸವಣ್ಣನವರ ಕಾಯಕವೇ ಕೈಲಾಸ ಕೂಡಾ ಇದನ್ನೇ ಧ್ವನಿಸುವುದು . ಉದಾಹರಣೆಗೆ  ರಾಮಕ್ಕ ಅವಳ ಮಗಳನ್ನು ಒಂದು ಕಚೇರಿಯಲ್ಲಿ ಗುಡಿಸುವವನಿಗೆ ಮದುವೆ ಮಾಡಿ ಕೊಡುತ್ತಾಳೆ . ದಿನವೂ ನಡೆದೇ ಆಫೀಸ್ ಗೆ ಹೋಗುವವನು .ಲಂಚ ಸಿಗುವುದಿಲ್ಲ .ಸಿಕ್ಕರೂ ತೆಗೆದು ಕೊಳ್ಳನು .ಆತ್ಮ ಗೌರವ ಇರುವವನು . ಅವಳ ಜತೆಗಾತಿ ಭೀಮಕ್ಕ "ಏನೇ ರಾಮಕ್ಕ ಹೋಗಿ ಹೋಗಿ ಇಂಥಹವನಿಗೆ ಕೊಡುವುದೋ ,ಒಂದು ಸ್ಕೂಟರ್ ಇಲ್ಲ ,ಸ್ವಲ್ಪವೂ ಮೇಲು ಸಂಪಾದನೆ ಇಲ್ಲ . ಪುಟ್ಟಕ್ಕನ ಅಳಿಯನ ನೋಡು  ಕೆಲಸಕ್ಕೆ ಸೇರಿ ಎರಡು ವರ್ಷ ಆಗಿಲ್ಲ ,ಕಾರ್ ಬಂಗಲೆ ಎಲ್ಲಾ ಆಗಿದೆ . ವರ್ಷಕ್ಕೆ ಒಂದು ಸಾರ್ವಜನಿಕ ಸತ್ಯನಾರಾಯಣ ಪೂಜೆ ಮಾಡುತ್ತಾನೆ ;ಪುರೋಹಿತರೂ ಅವನ  ಭಾರೀ ದಕ್ಷಿಣೆಯನ್ನು ಹೊಗಳಿ ಕೊಂಡಾಡುತ್ತಾರೆ ,ಪೇಪರ್ ನಲ್ಲಿ ದಿನವೂ ಪಟ ಬರುತ್ತದೆ "ಎಂದು ಮೂದಲಿಸುತ್ತಾಳೆ .ಆದರೆ ನಿಜಕ್ಕೂ ದೇವರನ್ನು ನಂಬುವವರು ಈ  ರೀತಿ ಆಲೋಚಿಸುವುದು ತರವೇ ?ದೇವರಿಗೆ ಹತ್ತಿರವಾದವನು ಯಾರು ?ನಿಜಕ್ಕೂ ನನಗೆ ಒಮ್ಮೊಮ್ಮೆ ಅನಿಸುತ್ತದೆ ನಾವು ದೇವರನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸುತ್ತೇವೆ ಎಂದು .  ಕಚೇರಿಗಳಲ್ಲಿ ದೇವರ  ಪಟ ಹಾಕಿ ಊದು ಬತ್ತಿ ಹಚ್ಚಿದ ಮಾತ್ರಕ್ಕೆ ಅವನು ನಿಜವನ್ನು ಕಂಡರೂ ಕಾಣದಂತೆ ಮಾಡಿದರೆ ಅದೆಂತಾ ದೇವರೂ ? ಇನ್ನು ಕೆಲವರು ನಮ್ಮ ದೇವರನ್ನು ಅವನು ಅಪಮಾನಿಸಿದ ಎಂದು ಬೇಜಾರು ಮಾಡುತ್ತಾರೆ . ನಮ್ಮ ದೇವರು ಅವನ ದೇವರು ಎಂದು ಪಾಲು ಮಾಡಿದ ಕೂಡಲೇ ನಾವೇ ದೇವರನ್ನು ಒಂದು ಪಂಗಡದ ನಾಯಕ ಎಂದು ಮಾಡಿ ಅವನನ್ನು ಕುಗ್ಗಿಸಿದ ಹಾಗೆ ಅಲ್ಲವೇ .ಜಗಳ ಮಾಡುವುದಿದ್ದರೆ ನಮ್ಮ ನಂಬಿಕೆಗೆ ಅಪಮಾನ ಮಾಡಿದ ಎಂದು ಮಾಡಲಿ . ಎಲ್ಲಾ ಧರ್ಮಗಳಲ್ಲಿಯೂ ಸರ್ವ ಶಕ್ತನಾದ ದೇವರು ಒಬ್ಬ ಎಂದು ಹೇಳುತ್ತಾರೆ ಎಂದು ನನ್ನ ತಿಳುವಳಿಕೆ . ಧರ್ಮವನ್ನು ರಕ್ಷಿಸುವ ಉದ್ದೇಶ ಇರುವವರು ಅದನ್ನು ಮೊದಲು ಪಾಲಿಸಬೇಕು . ಎಲ್ಲರೂ ಪಾಲಿಸಿದರೆ ಧರ್ಮ ಉಳಿಯುವುದು '.ಧರ್ಮೋ ರಕ್ಷತಿಃ ರಕ್ಷಿತಃ 'ದ ಅರ್ಥ ಇದು ಎಂದು  ತಿಳಿದು ಕೊಂಡಿದ್ದೇನೆ .ಧರ್ಮವನ್ನು ಅರಿಯಲು ದಯವೇ ಧರ್ಮದ  ಮೂಲವಯ್ಯ , ಕಲ ಬೇಡ ಕೊಲಬೇಡ ,ಹುಸಿಯ ನುಡಿಯಲು  ಬೇಡ  ,ತನ್ನ ಬಣ್ಣಿಶ ಬೇಡ ಇತರ ಹಳಿಯಲು ಬೇಡ ಸಾಕು .

ಇನ್ನು  ಮಾತಿನಲ್ಲಿ ಮಾತ್ರ ಸ್ತುತಿಸಿ ಆಚರಣೆಯಲ್ಲಿ ವ್ಯತಿರಿಕ್ತವಾಗಿ ನಡೆದರೆ ಮೆಚ್ಚಲು ದೇವರು ಈ ಕಾಲದ ರಾಜಕೀಯ ನಾಯಕನಲ್ಲ . ನಮ್ಮಲ್ಲಿ ಸ್ತುತಿ ಎಷ್ಟು ಪ್ರಾಮಾಣಿಕ ಎಂದು ಪರೀಕ್ಷಿಸಲು ಸರಕಾರದ ಬಜೆಟ್ ಮೇಲಿನ ಪ್ರತಿಕ್ರಿಯೆ ನೋಡಿದರೆ ಸಾಕು . ಆಡಳಿತ ಪಕ್ಷದ ಎಲ್ಲರೂ ಹೊಗಳಲು ಪೈಪೋಟಿ ನಡೆಸಿದರೆ ವಿರೋಧ ಪಕ್ಷದವರು ಅದಕ್ಕೆ ವಿರುದ್ಧ . ನಾಯಕನು ಸರ್ವಾಧಿಕಾರಿ ಮನೋಭಾವದವನು ಆಗಿದ್ದರೆ ಎಲ್ಲರೂ ಅವನು ಏನು ಮಾಡಿದರೂ ಹೊಗಳುವವರೇ . ಆದರೆ ನಾಯಕನು ಅದನ್ನು ಹೇಗೆ ತೆಗೆದು ಕೊಳ್ಳುವನು ಎಂಬುದು ಅವನ ನೈಜ ಮೌಲ್ಯದ ಮೇಲೆ ಹೊಂದಿದೆ . ಶ್ರೀ ಮನ ಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ಮೊದಲು ತಮ್ಮ ಕೆಲವು ಆರ್ಥಿಕ ನೀತಿಗಳನ್ನು ಕಟುವಾಗಿ ವಿಮರ್ಶಿಸಿದ್ದ ರಘುರಾಮ ರಾಜನ್ ಅವರನ್ನು ರಿಸೆರ್ವೆ ಬ್ಯಾಂಕ್ ಗವರ್ನರ್ ಆಗಿ ನೇಮಿಸಲು ಹಿಂದೆ ಮುಂದೆ ನೋಡುವುದಿಲ್ಲ. ಪಿ ವಿ ನರಸಿಂಹ ರಾವ್   ತಮ್ಮ ನೀತಿಗಳನ್ನು ಟೀಕಿಸುತ್ತಿದ್ದ ವಿರೋಧಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಜಿನೇವಾ ದಲ್ಲಿ ಮಾನವ ಹಕ್ಕುಗಳ ಬಗ್ಗೆ ನಡೆದ ವಿಶ್ವ ಸಂಸ್ಥೆಯ ಅಧಿವೇಶನ ಕ್ಕೆ  ನಾಯಕನಾಗಿ ಕಳುಹಿಸುತ್ತಾರೆ .  ನಿಂದಕರು ಇರಬೇಕು ಎಂದು ದಾಸರು ಹೇಳಿದ್ದು ಇದಕ್ಕೆ .ಅತಿಯಾಗಿ ಹೊಗಳುವವರು ಹೊನ್ನ ಶೂಲಕ್ಕೆ ಏರಿಸುವರು . 

 


 

 

 ಎರಡು ನಿಂದಾ ಸ್ತುತಿಗಳಿಗೆ ಉದಾಹರಣೆ 

 

      -- ೧----

ಏನು ಮರುಳಾದೆಮ್ಮ ಎಲೆ ರುಕ್ಮಿಣಿ
ಹೀನಕುಲ ಗೊಲ್ಲ ಶ್ರೀ ಗೋಪಾಲಕೃಷ್ಣಗೆ
ಹಾಸಿಕಿಲ್ಲದೆ ಹಾವಿನ ಮೇಲೆ ಒರಗಿದವ
ಹೇಸಿಕಿಲ್ಲದೆ ಕರಡಿಯ ಕೂಡಿದ
ಗ್ರಾಸಕಿಲ್ಲದೆ ತೊತ್ತಿನ ಮಗನ ಮನೆಲುಂಡ
ದೋಷಕಂಜದೆ ಮಾವನ ಸಿರವ ತರಿದವಗೆ

ಕುಂಡಗೋಳಕರ ಮನೆ ಕುಲದೈವವೆನಿಸಿದಗೆ
ಮಂಡೆ ಬೋಳರ ಮನಕೆ ಮನದೈವವ
ಹಿಂಡು ಗೊಲ್ಲರ ಮನೆ ಹಿರಿಯನೆಂದೆನಿಸುವ
ಭಂಡಾಟದ ಗೊಲ್ಲ ಈ ಬಳಗದೊಳಗೆಲ್ಲ

ಒಬ್ಬರಲ್ಲಿ ಹುಟ್ಟಿ ಒಬ್ಬರಲ್ಲಿ ಬೆಳೆದ
ಒಬ್ಬರಿಗೆ ಮಗನಲ್ಲ ಜಗದೊಳಗೆಲ್ಲ
ಅಬ್ಬರದ ದೈವ ಶ್ರೀ ಪುರಂದರವಿಟ್ಠಲನ
ಉಬ್ಬುಬ್ಬಿ ಮದುವ್ಯಾದೆ ಉತ್ಸಾಹದಿಂದ 
 
 -- ೨--
      ಎಂಥಾ ಚೆಲುವಗೆ ಮಗಳನು ಕೊಟ್ಟನು
ಗಿರಿರಾಜನು ನೋಡಮ್ಮಮ್ಮ
ಕಂತುಹರ ಶಿವ ಚೆಲುವನೆನ್ನುತ
ಮೆಚ್ಚಿದನು ನೋಡಮ್ಮಮ್ಮಾ

ಮೋರೆ ಐದು ಮೂರು ಕಣ್ಣು
ವಿಪರೀತವ ನೋಡಮ್ಮಮ್ಮಾ
ಕೊರಳೊಳು ರುಂಡಮಾಲೆಯ
ಧರಿಸಿದ ಉರಗಭೂಷಣನ ನೋಡಮ್ಮಮ್ಮಾ

ತಲೆಯೊಂಬೋದು ನೋಡಿದರೆ ಜಡೆ
ಹೊಳೆಯುತಿದೆ ನೋಡಮ್ಮಮ್ಮಾ
ಹಲವು ಕಾಲದ ತಪಸಿ ರುದ್ರನ
ಮೈ ಬೂದಿಯ ನೋಡಮ್ಮಮ್ಮಾ

ಭೂತ ಪ್ರೇತ ಪಿಶಾಚಿಗಳೆಲ್ಲ
ಪರಿವಾರವು ನೋಡಮ್ಮಮ್ಮಾ
ಈತನ ನಾಮವು ಒಂದೇ ಮಂಗಳ
ಮುಪ್ಪುರಹರನ ನೋಡಮ್ಮಮ್ಮಾ

ಮನೆಯೆಂಬುವುದು ಸ್ಮಶಾನವು ನೋಡೆ
ಗಜ ಚರ್ಮಾಂಬರವಮ್ಮಮ್ಮಾ
ಹಣವೊಂದಾದರು ಕೈಯೊಳಗಿಲ್ಲ
ಕಪ್ಪರವನು ನೋಡಮ್ಮಮ್ಮಾ

ನಂದಿವಾಹನ ನೀಲಕಂಠನ
ನಿರ್ಗುಣನ ನೋಡಮ್ಮಮ್ಮಾ
ಇಂದಿರಾರಮಣ ಶ್ರೀ ಪುರಂದರವಿಠಲನ
ಪೊಂದಿದವನ ನೋಡಮ್ಮಮ್ಮಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ