ಬೆಂಬಲಿಗರು

ಶನಿವಾರ, ಜುಲೈ 10, 2021

ನಾ ಕಂಡ ಪುತ್ತೂರಿನ ದಿಗ್ಗಜಗಳು

(ನಾ ಕಂಡ) ಪುತ್ತೂರಿನಲ್ಲಿ  ನಡೆದಾಡಿದ ದಿಗ್ಗಜಗಳು 

 

K. Shivaram Karanth - Wikipedia
ಪುತ್ತೂರು ಹಲವು ಸಾಧಕರ ಊರು .ಇವರಲ್ಲಿ ಕೆಲವರನ್ನು ಕಣ್ಣಾರೆ ಕಾಣುವ ಭಾಗ್ಯ ನನಗೆ ಇತ್ತು . 
ಶಿವರಾಮ ಕಾರಂತರು ಪರ್ಲಡ್ಕ ಬಾಲವನ ದಲ್ಲಿ ವಾಸವಿದ್ದರು .ನನ್ನ ಅಕ್ಕನ ಮನೆ ಅವರ ಮನೆಗೆ ಸಮೀಪ .ಕಾರಂತರು ಪುತ್ತೂರು ಪೇಟೆಗೆ ನಡೆದು ಹೋಗುತ್ತಿದ್ದರು .ಕೈಯ್ಯಲ್ಲಿ ಒಂದು ವೃತ್ತ ಪತ್ರಿಕೆ ,ಸ್ವಲ್ಪ ನೆಲದಕಡೆ ದೃಷ್ಟಿ . ಆಗೆಲ್ಲಾ ಪೇಟೆಯಿಂದ ಪರ್ಲಡ್ಕಕ್ಕೆ ಎಲ್ಲರೂ ನಡೆದೇ ಹೋಗುವುದು . ಅವರನ್ನು ಕಂಡಾಗ ನಮಸ್ಕಾರ ಮಾಡುತ್ತಿದ್ದೆನು . ಅವರೂ ಪ್ರತಿ ನಮಸ್ಕಾರ ,ಮಾಡಿ ಹೋಗುತ್ತಿದ್ದರು . ಪೇಟೆಯ ಶ್ರೀಧರ ಭಟ್ಟರ ಅಂಗಡಿ ಬಳಿ ಅವರೂ ಅವರ ಮಿತ್ರರೂ ಹರಟೆ ಹೊಡೆ ಯುತ್ತಿದ್ದರು ಎಂದು ಕೇಳಿದ್ದೇನೆ . 
ಇನ್ನೊಬ್ಬರು ವಕೀಲ ಸದಾಶಿವ ರಾಯರು .ಇವರ ಬಗ್ಗೆ ನಾನು ಹಿಂದೆಯೇ ಬರೆದಿರುವೆನು .ಪುತ್ತೂರಿನ ಹೆಸರಾಂತ ವಕೀಲರು . ನನ್ನ ಅಜ್ಜನ ಆರಾಧ್ಯ ದೇವತೆ . ಇವರ ಸಹೋದರ ಖ್ಯಾತ ವೈದ್ಯರಾಗಿದ್ದ ಸುಂದರ ರಾಯರು ;ನಾನು ಇವರನ್ನು ಕಂಡಿಲ್ಲ ,ಅವರ ವರ್ಣನೆ ಸಾಕಷ್ಟು ಕೇಳಿದ್ದೇನೆ . ಸದಾಶಿವ ರಾಯರ ಪತ್ನಿ ಶಿವರಾಮ ಕಾರಂತರ ಸಹೋದರಿ . ಸದಾಶಿವ ರಾಯರನ್ನು ಸರಿಯಾಗಿ ನೋಡುವಾಗ ಅವರು ವಕೀಲಿ ವೃತ್ತಿ ಬಿಟ್ಟು ಸಾರ್ವಜನಿಕ ಕೆಲಸಗಳಲ್ಲಿ ತೊಡಗಿಸಿ ಕೊಂಡಿದ್ದರು . ಕೃಶವಾದ ಶರೀರ ,ಖಾದೀ ಬಟ್ಟೆ . ಪುತ್ತೂರು ಪೇಟೆಯಲ್ಲಿ ನಡೆದು ಹೋಗುವುದನ್ನು ಹಲವು ಬಾರಿ ಕಂಡಿರುವೆನು .ರಾಮಕೃಷ್ಣ ಆಶ್ರಮದ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದರು .ಈಗ ಪುತ್ತೂರಿನ ಹಿರಿಯ ವಕೀಲರಾದ ರಾಮಮೋಹನ ರಾಯರು ಅವರ ಪುತ್ರ . 
ಮೂರನೆಯವರು ಬೋಳಂತಕೋಡಿ ಈಶ್ವರ ಭಟ್ ಅವರು ..ಇವರದೂ ಕೃಶ ಕಾಯ .ಬೋನಂತಾಯ ಆಸ್ಪತ್ರೆಯ ಪಕ್ಕದ ಹಳೇ ಕಟ್ಟಡದ ಮಹಡಿಯಲ್ಲಿ ಅವರ ಕಛೇರಿ ಇತ್ತು .ಕೈಯಲ್ಲಿ ಒಂದು ಬ್ಯಾಗ್ ಹಿಡಿದು ಕೊಂಡು ದರ್ಭೆಯಲ್ಲಿ ಇರುವ ಮನೆಗೆ ನಡೆದುಕೊಂಡು ಹೋಗುವುದನ್ನು ಕಂಡಿದ್ದೇನೆ .ಅವರು ಪುತ್ತೂರು ಕನ್ನಡ ಸಂಘವನ್ನು ಸಕ್ರಿಯ ಗೊಳಿಸಿ ಹಲವು ಸಾಹಿತ್ಯಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟುದಲ್ಲದೆ ,ಅಮೂಲ್ಯ ಪುಸ್ತಕಗಳನ್ನು ಪ್ರಕಟಿಸಿದರು . ಅವರ ಜತೆ ಒಂದು ಕ್ರಿಯಾಶೀಲ ತಂಡವಿದ್ದು ಚಂದಾ ಸಂಗ್ರಹಕ್ಕಾಗಿ ಪುತ್ತೂರಿನಾದ್ಯಂತ ನಡೆದು ಹೋಗುವರು .ಉದಯವಾಣಿ ಮತ್ತು ಇಂಡಿಯನ್ ಎಕ್ಷ ಪ್ರೆಸ್ ಪತ್ರಿಕೆಗಳಿಗೆ ಭಾತ್ಮೀದಾರರೂ ಆಗಿದ್ದ ಅವರನ್ನು ಕೆಲವು ರೈಲ್ವೆ ಕಾರ್ಯಕ್ರಮಗಳಿಗೆ ಆಹ್ವಾನಿಸಿದ್ದೆನು .ನನ್ನ ಮೇಲೆ ವಿಶೇಷ ಪ್ರೀತಿ ಇತ್ತು .,
 
ಮೂವರೂ ಜೀವಮಾನದ ಸಾಧಕರು . ಸರಳವಾಗಿ ಬದುಕಿದವರು.( ನುಡಿದಂತೆ )  ನಡೆದವರು . ಅಂತಹವರನ್ನು ಹತ್ತಿರದಿಂದ ಕಂಡಿದ್ದೇನೆ ಎಂಬುದೇ ಭಾಗ್ಯ
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ