ಬೆಂಬಲಿಗರು

ಬುಧವಾರ, ಜುಲೈ 7, 2021

ಸಂಸ್ಥೆಯ ಹೆಮ್ಮೆಯ ಆಸ್ತಿ ಡಾ ಪಿ ಎಸ್ ಪ್ರಕಾಶ್



                                    


                                             

                                                                                        ನಾನು ೧೯೯೯ರಲ್ಲಿ   ದೇರಳಕಟ್ಟೆ ಕ್ಷೇಮಾ (ಕೆ ಎಸ ಮೆಡಿಕಲ್ ಅಕಾಡೆಮಿ )ಗೆ ಉಪ ಪ್ರಾಧ್ಯಾಪಕ ನಾಗಿ ಸೇರಿದೆನು . ಮೊದಲು ನಾನು ಡಾ ಅಮರನಾಥ ಹೆಗ್ಡೆಯವರ ಯೂನಿಟ್ ನಲ್ಲಿ ಇದ್ದೆ ಕೆಲವು  ತಿಂಗಳುಗಳ ಬಳಿಕ ನನ್ನ ಗುರುಗಳಾಗಿದ್ದ ಪ್ರೊ ಎ ಸಿ ಹೆಗ್ಡೆಯವರ ಎರಡನೇ ಯೂನಿಟ್ ಗೆ ಹಾಕಿದರು . ಈ ಯೂನಿಟ್ ನಲ್ಲಿ  ಈಗ ಖ್ಯಾತ ವೈದ್ಯರಾಗಿರುವ ಡಾ ಶ್ರೀನಿವಾಸ ಕಕ್ಕಿಲ್ಲಾಯ ಮತ್ತು ಡಾ ವಿಷ್ಣು ಶರ್ಮ ಇದ್ದರು . ಮುಂದೆ ಕಾಲೇಜು ಬೆಳೆದಂತೆ ಮೂರನೇ ಯೂನಿಟ್ ಆರಂಭವಾಗಿ ಕೆ ಎಂ ಸಿ ಯಲ್ಲಿ ಇದ್ದ ಪ್ರೊ ರಾಘವೇಂದ್ರ ಭಟ್ ಅದರ ಮುಖ್ಯಸ್ಥ ರಾಗಿ ಬಂದರು .ಆಗ ನನ್ನನ್ನು ಅಲ್ಲಿಗೆ ಕರೆದರು . ಇನ್ನು ೨೦೦೨ ರಲ್ಲಿ ಡಾ ಪಿ ಎಸ ಪ್ರಕಾಶ್ ಎಂಬವರು ಬಂದು ನಾಲ್ಕನೇ ಯೂನಿಟ್ ಮಾಡಿದಾಗ ನಾನು ಅಲ್ಲಿಗೆ ಹೋದೆನು .ಪುಣ್ಯಕ್ಕೆ ಸದ್ಯದಲ್ಲಿ ಐದನೇ ಯೂನಿಟ್ ಆರಂಭವಾಗಿಲ್ಲ . 

ಇಲ್ಲಿ ಒಂದು ಅಂಶ ಗಮನಿಸ ಬೇಕು  . ನಾನು ವೃತ್ತಿಯಲ್ಲಿ ಸ್ವಲ್ಪ ಹಳೆಯವನಾದರೂ  ಮೆಡಿಕಲ್ ಕಾಲೇಜಿಗೆ ಬೇಕಾದ ಕಲಿಸುವಿಕೆ ಅನುಭವ ನನಗೆ ಇಲ್ಲಿಗೆ ಸೇರಿದ ಮೇಲೆಯೇ ಲೆಕ್ಕ ಆದುದರಿಂದ ನಾನು ಅಸಿಸ್ಟಂಟ್ ಆಗಿಯೇ ಇದ್ದರೂ ವಯೋ ವೃದ್ಧ (?)ನಾದ ನನ್ನನ್ನು ಎಲ್ಲರೂ ಪ್ರೀತಿ ಗೌರವದಿಂದ ನೋಡುತ್ತಿದ್ದರು . ಮತ್ತು ಒಂದು ಯೂನಿಟ್ ನಿಂದ ಇನ್ನೊಂದಕ್ಕೆ ಆಗಾಗ ಬದಲಾಯಿಸಿದ್ದು ನನ್ನ  ಕೆಲಸ ಕಾರ್ಯಗಳು ನಿರೀಕ್ಷಿತ ಮಟ್ಟಕ್ಕೆ ಬಾರದೆ ಇರುವುದರಿಂದ ಇರಬಹುದಾದರೂ , ನನ್ನ  ಪ್ರಾಮಾಣಿಕತೆಯನ್ನು ಮೆಚ್ಚಿ ಎಂದು ನಾನು ತಿಳಿದು ಕೊಂಡಿರುವೆನು .ಪಾಸಿಟಿವ್ ಥಿಂಕಿಂಗ್ . 

ಡಾ ಪ್ರಕಾಶ್ ಮೂಲತಃ ಕೋಟದವರು .ಅವರ ತಂದೆ ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದು ವಿದ್ಯಾಭ್ಯಾಸ ಹೆಚ್ಚಿನದೂ ಬೆಂಗಳೂರಿನಲ್ಲಿಯೇ . ಪ್ರತಿಭಾವಂತರಾದ ಇವರು ಪ್ರತಿಷ್ಠಿತ ಬೆಂಗಳೂರು ಮೆಡಿಕಲ್ ಕಾಲೇಜಿನಿಂದ ಎಂ ಬಿ ಬಿ ಎಸ ಮತ್ತು  ಎಂ ಡಿ  ಪದವಿ ಮೈಸೂರು ಮೆಡಿಕಲ್ ಕಾಲೇಜಿನಿಂದ ಪಡೆದರು . 

ಆಮೇಲೆ ಮಣಿಪಾಲ ಕೆ ಎಂ ಸಿ ಯಲ್ಲಿ ಮೆಡಿಸಿನ್ ವಿಭಾಗದ ಅಧ್ಯಾಪಕರಾಗಿ ರೀಡರ್ ಹುದ್ದೆಗೆ ಏರಿದರು . ನಂತರ ಲಿಬಿಯಾ ದೇಶದ ಮೆಡಿಕಲ್ ಕಾಲೇಜು ಒಂದರಲ್ಲಿ ಹತ್ತು ವರ್ಷ ಪ್ರಾಧ್ಯಾಪಕರಾಗಿ ದುಡಿದರು . ಅಲ್ಲಿಂದ ಮರಳಿದವರೇ ಕ್ಷೇಮಾ ಕ್ಕೆ ಸೇರ್ಪಡೆ . ನನ್ನೊಡನೆ ಡಾ ಸತೀಶ ರಾವ್ ಎಂಬ ಯುವಕರೂ ಪ್ರತಿಭಾವಂತರೂ ಈ ಯೂನಿಟ್ ನಲ್ಲಿ ಇದ್ದರು .ಆಮೇಲೆ ನಾನು ಕೆಲ ವರ್ಷ ಕಾಲೇಜು ಸೇವೆ ಬಿಟ್ಟು ದೇಶ ವಿದೇಶಗಳಲ್ಲಿ ಅಲೆದು ಪುನಃ ಕ್ಷೇಮ ಸೇರಿದಾಗ ಡಾ ಪ್ರಕಾಶ್ ವಿಭಾಗದ ಮುಖ್ಯಸ್ಥರು ,ನನ್ನನ್ನು ಅವರ ಈಗಿನ ಒಂದನೇ ಯೂನಿಟ್ ಗೆ ಹಾಕಿಸಿಕೊಂಡರು .. 

         ಡಾ ಪ್ರಕಾಶ್  ನೋಡಲು ಜನ ಸಾಮಾನ್ಯನಂತೆ . ಉಡುಗೆ ತೊಡುಗೆಗಳಲ್ಲಿ ಅವರಿಗೆ ಹೆಚ್ಚು ಗಮನ ಇಲ್ಲ . ಕಾಲೇಜಿಗೆ ಬರುವಾಗ ಒಂದು ದೊಡ್ಡ ಬ್ರೀಫ್ ಕೇಸ್ ಕೈಯಲ್ಲಿ .ದೊಡ್ಡ ದೊಡ್ಡ ಹೆಜ್ಜೆ ಹಾಕಿ ನಡೆಯುವರು . ಆದರೆ ಇವರ ಹಾಗೆ ತಾನು ಸೇರಿದ ಸಂಸ್ಥೆಗೆ ಮತ್ತು ತಮ್ಮ ಉದ್ಯೋಗಕ್ಕೆ ತಮ್ಮನ್ನು ತಾವು ನೂರಕ್ಕೆ ನೂರು ಸಮರ್ಪಿಸಿ ಕೊಂಡವರು ಬಹಳ ಕಡಿಮೆ . ಓ ಪಿ ಡಿ  ಪಿ ಜಿ ಸೆಮಿನಾರ್ ಇಲ್ಲದ ದಿನ ಬೆಳಿಗ್ಗೆ ಎಂಟು ಎಂಟು ವರೆಗೆಲ್ಲಾ  ವಾರ್ಡ್ ರೌಂಡ್ಸ್ ,ಪ್ರತಿಯೊಂದು ರೋಗಿಯನ್ನೂ ವಿವರವಾಗಿ ನೋಡುವರು .ಎಲ್ಲಾ ಮುಗಿಯುವಾಗ ಹತ್ತೂವರೆ ಗಂಟೆ ,ಆಮೇಲೆ ಎಲ್ಲರೂ ಸೇರಿ ಒಂದು ಕಾಫಿ (ಹಣ ಅವರೇ ಕೊಡುವರು  ). ಅಲ್ಲಿಂದ ಅವರ ಆಫೀಸ್ ಗೆ . ಅಲ್ಲಿ ಎಲ್ಲಾ ಯೂನಿಟ್ ಗಳ ಕೆಲಸಗಳ ಪರಿಶೀಲನೆ .ಇದರಲ್ಲಿ ಮಕ್ಕಳ ಹಾಜರಿ ,ಆಂತರಿಕ ಪರೀಕ್ಷೆಗಳು ,ವಿಶ್ವವಿದ್ಯಾಲಯ ಪರೀಕ್ಷೆ ಇತ್ಯಾದಿ ಹಲವು ಕೆಲಸಗಳು  . ಮಧ್ಯಾಹ್ನ ಮೇಲೆ ವಿದ್ಯಾರ್ಥಿಗಳ ಸೆಮಿನಾರ್ ,ಆಮೇಲೆ ಪುನಃ ವಾರ್ಡ್ ರೌಂಡ್ಸ್ ಮಾಡುವರು . ಇವುಗಳಿಗೆ ಎಲ್ಲಾ ಕಳ ಶವಿಟ್ಟಂತೆ ಇಂಡಿಯನ್ ಮೆಡಿಕಲ್ ಕೌನ್ಸಿಲ್ ನ  ವರ್ಷ ವರ್ಷದ ಇನ್ಸ್ಪೆಕ್ಷನ್ ಗೆ ದಾಖಲೆಗಳ ತಯಾರಿ . ಮಾಡುವವರಿಗೆ ಎಷ್ಟು ಮಾಡಿದರೂ ಮುಗಿಯದ ಕೆಲಸ . 

ಇವು ಸಾಲದೆಂಬಂತೆ  ಕೆಲ ಸಂಸ್ಥೆಗಳ ಎಥಿಕಲ್ ಸಮಿತಿ ಯಲ್ಲಿ ಇವರು ಇದ್ದು ,ಅದರ ಸುಪರ್ದಿಯಲ್ಲಿ ನಡೆಯುವ  ಸಂಶೋಧನೆ ,ಹೊಸ ಔಷಧಿಗಳ ಟ್ರಯಲ್  ಇವುಗಳ ವರದಿಗಳ ಪರಿಶೀಲನೆ ಕೂಡಾ ಮಾಡಿಬೇಕಿದ್ದು ತಮ್ಮ ಮನೆಯಲ್ಲಿ ಇವುಗಳ ಮತ್ತು ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಒಳಗೆ ಮುಳುಗಿರುವ ಇವರ ದರ್ಶನ ಹಲವು ಸಾರಿ ಆದದ್ದಿದೆ .

ಹೀಗೆ ಬರೀ  ಕಠಿಣ ಶ್ರಮದಿಂದ ಒಂದೊಂದೇ ಹಂತ ಮೇಲಕ್ಕೆ ಏರಿ ಕಾಲೇಜಿನ ಡೀನ್ ಆದವರು ಇವರು. ಇಲ್ಲಿ ಇವರ ಪ್ರತಿಭೆ ಮತ್ತು ಕಾರ್ಯ ವಿಧಾನ ಗುರುತಿಸಿದ ಆಡಳಿತ ಮಂಡಲಿಯನ್ನೂ ಕೊಂಡಾಡ ಬೇಕು . ಡಾ ಪ್ರಕಾಶ್ ಅವರಲ್ಲಿ ನಾನು ಬುದ್ದಿಮತ್ತೆಗಿಂತಲೂ ಹೆಚ್ಚು ಕಂಡುದು ಪ್ರಾಮಾಣಿಕತೆ ,ತಮ್ಮ ವಿದ್ಯಾರ್ಥಿಗಳಿಂದಲೂ ಅದನ್ನು ನಿರೀಕ್ಷಿಸುತ್ತಿದ್ದು ಅದರಲ್ಲಿ ಯಾವ ರಾಜಿಯೂ ಇಲ್ಲ  . ಉದಾಹಣೆಗೆ ರೌಂಡ್ಸ್ ನಲ್ಲಿ ಒಂದು ರೋಗಿಯ ಬಗ್ಗೆ ಇಂಟರ್ನ್ ಅಥವಾ ಪಿ ಜಿ ಕೇಸ್ ಪ್ರೆಸಂಟ್ ಮಾಡಿದಾಗ ತಾವೇ ಪರಿಶೀಲನೆ ಮಾಡಿ ದೃಢ ಪಡಿಸಿ  ಕೊಳ್ಳುವರು . ಸಂಶಯ ಬಂದರೆ ನೀನು ಎಡದ  ಎದೆ ಭಾಗದ ಹಿಂದೆ ಸರಿಯಾಗಿ ಪರೀಕ್ಷೆ ಮಾಡಿದಂತೆ ಇಲ್ಲ ಇಲ್ಲಾ ಇತ್ಯಾದಿ ಎತ್ತಿ ತೋರುವರು . ರೋಗಿಯ ತಪಾಸಣಾ ಪರೀಕ್ಷೆಗಳು ವಿಳಂಬವಾದರೆ ಕ್ಷಮಿಸರು . "ನಾನು ಸ್ವತಹ ಹೋಗಿ ಮಾಡಿಸಿಕೊಂಡು ಬರಬೇಕೆಂದು ನಿರೀಕ್ಷಿಸುತ್ತೀಯಾ "ಎಂದು ಗದರುವರು .  ಇಂತಹುದರಲ್ಲಿ ಯಾವುದೇ ಕ್ಷಮೆ ಅಥವಾ ಮುಲಾಜು ಇಲ್ಲ . ಇಲ್ಲಿ ನಮ್ಮದು ಒಂದು ಒಂದು ಹಿತವಾದ ಸಂಯೋಗ ಇತ್ತು . ಪ್ರಕಾಶ್ ಅವರು ಕಾರ್ಯ ಲೋಪ ಎತ್ತಿ ತೋರಿ ಸಿಟ್ಟಿನಿಂದ ತರಾಟೆಗೆ ತೆಗೆದುಕೊಳ್ಳುವರು ,ನಾನು ಒಂದು ಹಂತದಲ್ಲಿ ಸಮಾಧಾನ ಮಾಡಿ  ಸರಿ ಮಾಡುವರು ಸರ್ ಎಂದು ಎಂದು ವಿಷಯ ಬದಲಿಸುವೆನು . ಒಂದು ಸಲ ಮಾತ್ರ ಒಬ್ಬಳು ಇಂಟರ್ನ್  ಯಾವುದೊ ಒಂದು ಒಪ್ಪಿಸಿದ ಕೆಲಸ ಮಾಡಿರದ ಸಂಧರ್ಭ ,ಪ್ರಕಾಶ್ ಎಂದಿನಂತೆ ಟೇಕಿಂಗ್ ಟು ಟಾಸ್ಕ್ ,ಹುಡುಗಿ ನನ್ನ ಮುಖ ನೋಡಿದಳು ,ನನಗೂ ಈ ವಿಷಯ ಸ್ವಲ್ಪ ಅಕ್ಷಮ್ಯ ಎಂದು ತೋರಿದ್ದುದರಿಂದ  ಸುಮ್ಮನಿದ್ದೆ . ನೀರಿಕ್ಷಿಸಿದ್ದ  ಬೆಂಬಲ ಸಿಗದ ಕಾರಣ ಆಕೆ ಗೊಳೋ ಎಂದು ಅತ್ತಳು .ರೌಂಡ್ಸ್ ನಲ್ಲಿ ವಿದ್ಯಾರ್ಥಿ ,ಇಂಟರ್ನ್ ಉತ್ತರ ಹೇಳಲು ಚಡಪಡಿ ಸಿದಾಗ ಯಾವ ಫೂಲ್ ನಿನಗೆ ಈ ವಿಷಯ ಪಾಠ ಮಾಡಿದ್ದು ಎಂದು ಕೇಳುವರು.(ತಾವೇ ಅದನ್ನು ಮಾಡಿದ್ದು ಎಂದು ಗೊತ್ತಿದ್ದರೂ) .ಶಿಷ್ಯ ಅದಕ್ಕೆ ಏನು ಉತ್ತರ ಕೊಟ್ಟಾನು ? . ನಮ್ಮ ವಿದ್ಯಾರ್ಥಿಯೊಬ್ಬ ಕೊಚಿನ್ ನ ಮೆಡಿಕಲ್ ಕಾಲೇಜ್ ಒಂದರಲ್ಲಿ ಅಧ್ಯಾಪಕನಾಗಿ ಕೆಲಸ ಮಾಡುತ್ತ ಇರುವ ಓರ್ವ ಡಾಕ್ಟರ್ ಮೊನ್ನೆ ಸಾರ್ ನಾನು ನಿಮ್ಮ ವಿದ್ಯಾರ್ಥಿ ಡಾ ಪ್ರಕಾಶ್ ಅವರ ಕೋಪದ ತಾಪದಿಂದ ನಮ್ಮನು ರಕ್ಷಿಸುತ್ತಿದ್ದಿರಿ ಎಂದು ಸಂದೇಶ ಕಳುಹಿಸಿದಾಗ ನಗು ಬಂದು ಇವೆಲ್ಲಾ ನೆನಪಾದವು . 

ಸಹಜವಾಗಿ ಇವರ ಒ ಪಿ ಡಿಯಲ್ಲಿ ಬಹಳ ರಶ್ .ಎಲ್ಲಾ ರೋಗಿಗಳನ್ನೂ ಕ್ರಮಪ್ರಕಾರ ರೋಗದ ಇತಿಹಾಸ ಕೇಳಿ , ಶಾಸ್ತ್ರೀಯವಾಗಿ ಪರೀಕ್ಷಿಸುವರು ,ಯಾವುದೇ ಅವಸರ ಅಥವಾ ಪರಕ್ಕೆಸಂದಾಯ ಕ್ಕೆ ಆಸ್ಪದವಿಲ್ಲ . ಎಲ್ಲಂಕಿಂತಲೂ ಮಿಗಿಲಾಗಿ ತಮ್ಮ ಸುಂದರ ವಾದ ಅಕ್ಷರದಲ್ಲಿ ದಾಖಲೀಕರಣ. ಇವರು ಬರೆದ ಕೇಸ್ ಶೀಟ್ಸ್ ನೋಟ್ಸ್ ಓಡುವುದೇ ಸಂಭ್ರಮ .

ಒಂದು ದೊಗಳೆ ಏಪ್ರಾನ್ ಅದರಲ್ಲಿ ಒಂದು ಪಾಕೆಟ್ ನಲ್ಲಿ ನರ ಪರೀಕ್ಷೆ ಮಾಡುವ ನೀ ಹ್ಯಾಮ್ಮರ್ , ಇನ್ನೊಂದರಲ್ಲಿ ಕಣ್ಣು ಪರೀಕ್ಷೆ ಮಾಡುವ ಒಪ್ತಾಲ್ಮೊಸ್ಕೋಪ್ ಇದು ಡಾ ಪ್ರಕಾಶ್ ಅವರ ಸದಾ ಸಂಗಾತಿ . ವಿದ್ಯಾರ್ಥಿಗಳು ಥಿಯರಿ ಮತ್ತು ಪ್ರಾಕ್ಟಿಕಲ್ ಎರಡಕ್ಕೂ ಹಾಜರು ಇರಬೇಕು . ತಪ್ಪಿಸಿದರೆ ಮೊದಲು ಎಚ್ಚರಿಕೆ ,ಆಮೇಲೆ ಹೆತ್ತವರಿಗೆ ಬುಲಾವ್ ಹೋಗುವದು . ಹಲವು ಹಿರಿಯರು ಅಸಮಾಧಾನದಿಂದ ಬಂದವರು ಇವರ ನೈಜ ಕಾಳಜಿ ನೋಡಿ ಸಂತೋಷದಿಂದ ಮರಳುವರು . 

ಹೀಗೆ ಇದನ್ನೆಲ್ಲಾ ಓದಿ ಇವರು ಕಠಿಣ ಹೃದಯಿಗಳು ,ಕಣ್ಣಿನಲ್ಲಿ ನೆತ್ತರು ಇಲ್ಲದವರು ಎಂದು ನೀವು ನಿರ್ಧಾರಕ್ಕೆ ಬಂದಿದ್ದರೆ ತಪ್ಪು . ವಿದ್ಯಾರ್ಥಿಗಳು ಎಂದರೆ ಜೀವ .ಪ್ರತಿಯೊಬ್ಬ ವಿದ್ಯಾರ್ಥಿಯ ಹೆಸರು ಊರು ವಿವರ ಅವರಿಗೆ ಗೊತ್ತು . ಅವರಿಗೆ ಕಾಯಿಲೆ ಬಂದರೆ ಇವರೇ ಬೇಕು ಮತ್ತು ಬಹಳ ಕಾಳಜಿಯಿಂದ ನೋಡಿಕೊಳ್ಳುವರು . ಆದರೆ ಪ್ರೀತಿಯ ತೋರಿಕೆ ಇಲ್ಲ ಮತ್ತು ಯಾರೇ ಆಗಲಿ ತಪ್ಪು ಮತ್ತು ಲೋಪ ಆದರೆ  ಕಡ್ಡಿ ಮುರಿದಂತೆ ಹೇಳುವರು .. ಇವರ ಗರಡಿಯಲ್ಲಿ  ತಯಾರಾದ ತರುಣ ವೈದ್ಯರು ಆತ್ಮ ವಿಶ್ವಾಸ ದಿಂದ ಕೆಲಸ ಮಾಡುವರು ಮತ್ತು ಸದಾ ಇವರ ನೆನಪು ಮಾಡಿಕೊಳ್ಳುವರು . 

ಮುಂಜಾನೆ ಕಾಲೇಜ್ ವ್ಯಾನ್ ನಲ್ಲಿ ನಾನು ಅವರೂ ಜತೆಯಾಗಿ ಲೋಕಾಭಿರಾಮ ಮಾತನಾಡಿಕೊಂಡು ಹೋಗುತ್ತಿದ್ದೆವು .  ಮೊಬೈಲ್ ಫೋನ್  ಬಂದರೂ ಹಲವು ಕಾಲ  ತಾವು ಅವಶ್ಯಕತೆ ಇಲ್ಲಾ ಎಂದು ಕೊಂಡಿರಲಿಲ್ಲ. .ಕೊನೆಗೆ ನಾನು ಬಿ ಎಸ್ ಎನ್ ಎಲ್ ಸಿಮ್ ಕೊಳ್ಳುವಾಗ ಒಂದಕ್ಕೆ ಒಂದು ಫ್ರೀ ಎಂದು ಸಿಕ್ಕಿದ್ದನ್ನು ಅವರಿಗೆ ಕೊಟ್ಟು ಫೋನ್ ಕೊಳ್ಳುವಂತೆ ಒತ್ತಾಯಿಸಿದೆ .ಅನಾವಶ್ಯಕ ಆಡಂಬರ ಅವರಿಗೆ ಇಷ್ಟವಲ್ಲ.

ನಾನು ಮನಸಿಲ್ಲದ ಮನಸಿನಿಂದ ಕಾಲೇಜು ಬಿಟ್ಟು ಪುತ್ತೂರಿಗೆ ಬಂದರೂ ಅವರೊಡನೆ ಕಳೆದ ದಿನಗಳ ನೆನಪು ಚೇತೋಹಾರಿ .ಅವರ ಬಳಿ ಒಂದು ಸ್ಕೂಟರ್ ಇದೆ ,ನಾನು ಅದರ ಹಿಂದೆ ಕುಳಿತುಕೊಂಡು ವಿದ್ಯಾರ್ಥಿಗಳ ಮದುವೆ ಸಮಾರಂಭ ಇತ್ಯಾದಿಗಳಿಗೆ ಜತೆಯಾಗಿ ಹೋಗಿದ್ದೇವೆ . ಅವರ ಕುಟುಂಬ ನಮಗೆ ಫ್ಯಾಮಿಲಿ ಫ್ರೆಂಡ್ಸ್ . ಮಂಗಳೂರಿನಲ್ಲಿ ಮತ್ತು ಪುತ್ತೂರಿನಲ್ಲಿ ನನ್ನ ಮನೆಗೆ  ಸಕುಟುಂಬ ಬಂದಿದ್ದಾರೆ . ಅವರ ಅಮ್ಮ ಮತ್ತು ಶ್ರೀಮತಿಯವರು ಸದಾ ಹಸನ್ಮುಖಿಗಳು . ಯಾವುದೇ ಮುನ್ಸೂಚನೆಯಿಲ್ಲದೆ ಅವರಲ್ಲಿಗೆ ಹೋಗಿ ಆತಿಥ್ಯ ಸ್ವೀಕರಿಸಿದ್ದೇನೆ.                        ಅವರು ಮತ್ತು ಕುಟುಂಬ ಆರೋಗ್ಯ ಸುಖ   ಶಾಂತಿ ನೆಮ್ಮದಿ ಯಿಂದ ಇರಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ