ಬೆಂಬಲಿಗರು

ಭಾನುವಾರ, ಜುಲೈ 11, 2021

ಆದರ್ಶ ಗುರು ತಂದೆ ಮಕ್ಕಳು

                                           

 ಪ್ರಾಥಮಿಕ ಶಾಲೆಯಲ್ಲಿ ಶ್ರೀನಿವಾಸ ರಾವ್ ಎಂಬ ಶಿಕ್ಷಕರು ಇದ್ದರು  .ಕಿರಿಂಚಿ ಮೂಲೆ ರಸ್ತೆ ಬದಿಯಲ್ಲಿ ಇವರ ಮನೆ  .ನಮ್ಮ ಮನೆಯಿಂದ ಹೋಗುವ ದಾರಿಗೆ ತಾಗಿ ಕನ್ಯಾನ ರಸ್ತೆ ಪಕ್ಕ  ಇವರ ತೋಟ ಮತ್ತು ಮನೆ ಇದೆ . ಇವರು ನನಗೆ ತಿಳಿದಂತೆ ತರಬೇತಿ ಹೊಂದಿದ ಶಿಕ್ಷಕರು ಆಗಿರಲಿಲ್ಲ .ಆದರೆ ಆದರ್ಶ ಶಿಕ್ಷಕರಲ್ಲಿ ಇರಬೇಕಾದ ಗುಣ ಮತ್ತು ಜ್ಞಾನ ಇತ್ತು . ನಾಲ್ಕನೇ ತರಗತಿಗೆ ನಮಗೆ ಕ್ಲಾಸ್ ತೆಗೆದು ಕೊಳ್ಳುತ್ತಿದ್ದ ನೆನಪು . ಗಟ್ಟಿಯಾದ ಸ್ವರ . ಶಿಸ್ತಿನ ವ್ಯಕ್ತಿ . ತಪ್ಪಿದರೆ ಕೈಗೆ ಏಟು ತಪ್ಪಿದ್ದಲ್ಲ . ತಮ್ಮ ಮಕ್ಕಳಿಗೂ . 

ಇವರದು ಪ್ರಶ್ನೋತ್ತರ ಪಿರಿಯಡ್ ಎಂದು ಇತ್ತು .ಆಗ  ಉತ್ತರ ಹೇಳಿದವರು ಮೇಲೆ ಮತ್ತು ತಪ್ಪಿದವರು ಕೆಳಗೆ ಹೋಗಬೇಕಿತ್ತು . ಸೀಟಿಂಗ್ ಅರೆಂಜ್ ಮೆಂಟ್ ನಲ್ಲಿ ಮೊದಲ ರಾಂಕ್ ಮತ್ತು ಕಡೆಯ ರಾಂಕ್ ಗೆ ನಿರ್ದಿಷ್ಟ ಜಾಗ ಇದ್ದು  ಉಳಿದವರು ನಡುವೆ .ಒಂದು ದಿನ ಗೈರು ಹಾಜರು ಆದರೆ  ಕೊನೆಯ ಸೀಟ್ ;ಮತ್ತೆ ಪರಿಶ್ರಮದಿಂದ ಮೇಲೆ ಬರಬೇಕು . 

ಅವರ ಅಕ್ಷರ ಬಹಳ ಮುದ್ದು  ,ವಾಕ್ಯಗಳು ಸ್ಪಷ್ಟ . ಸಂಜೆ ಹೊತ್ತು ನಮ್ಮನ್ನೆಲ್ಲಾ ಮರದ ಕೆಳಗೆ ಕೂರಿಸಿ  ಚಂದಮಾಮ ಮತ್ತು ಇತರ ಪುಸ್ತಕಗಳಿಂದ ಕತೆ ಓದಿ ಹೇಳುವರು . 

ಇವರ ತಲೆ ಬೋಳು ,ಇವರ ಮಕ್ಕಳಿಗೂ  ಇದು ಬಂದಿದೆ .ಶ್ರಮ ಜೀವಿ ,ಅವರ ಮನೆಗೆ  ಹೋದರೆ ಏನಾದರೂ ಕೃಷಿ ಸಂಬಂಧ ಕೆಲಸ ಮಾಡುತ್ತಲಿರುವರು . ಹಾಳು ಹರಟೆ ಇವರಿಗೆ ದೂರ . ಶಾಲೆ ಬಿಟ್ಟ ಮೇಲೆ ಅಂಗಡಿಯೊಂದರಲ್ಲಿ ಲೆಕ್ಕ ಬರೆಯುವ ಕೆಲಸವೂ ಮಾಡುತ್ತಿದ್ದ ನೆನಪು . 

ನಮ್ಮ ಮನೆಗೆ  ಕಾನಿಷುಮಾರಿ ಗೆ ಇತ್ಯಾದಿಗಳಿಗೆ ವರ್ಷ ವರ್ಷ ಬರುತ್ತಿದ್ದರು . ನಮ್ಮ ಮನೆಯಲ್ಲಿ ಎಲ್ಲರೂ ಗೌರವದಿಂದ ಕಾಣುತ್ತಿದ್ದರು .. ಒಂದು ಕಾಲಕ್ಕೆ ನಾವು ಎಲ್ಲಾ ಕಡೆಗಳಿಂದ ಪ್ರಹಾರ ಮತ್ತು ಕಷ್ಟ ನಷ್ಟ ಅನುಭವಿಸುತ್ತಿದ್ದಾಗ ನಮ್ಮ ಮನೆಗೆ ಬಂದು ಧೈರ್ಯ ಹೇಳಿದ್ದರು . 

ಇವರ ಪುತ್ರ ಸುರೇಶ ರಾವ್ ನನ್ನ ಒಂದು ವರ್ಷ ಸೀನಿಯರ್ ಮತ್ತು ಬಾಲಕೃಷ್ಣ ಒಂದು ವರ್ಷ ಕೆಳಗೆ ಇದ್ದು ಮಿತ್ರರು . ಸುರೇಶ ಕೋಲ್ ಇಂಡಿಯಾ ದಲ್ಲಿ ಜನರಲ್ ಮ್ಯಾನೇಜರ್ ಮತ್ತು  ಬಾಲಕೃಷ್ಣ  ಬೆಟ್ಟಂಪಾಡಿ ಜೂನಿಯರ್ ಕಾಲೇಜು ಪ್ರಿನ್ಸಿಪಾಲ್ ಆಗಿ ನಿವೃತ್ತರಾದರು .ಅವರ ಮಗಳಂದಿರು ನನ್ನ ಸಹೋದರಿಯರ ಸ್ನೇಹಿತೆಯರು . 

 

ಅವರ ಎರಡನೇ ಮಗ ಶ್ರೀಪತಿ  ರಾವ್ ಹೈ ಸ್ಕೂಲ್ ನಲ್ಲಿ ನಮಗೆ ವಿಜ್ಞಾನ ಅಧ್ಯಾಪಕರು . ಉತ್ಸಾಹಿಗಳು . ತರಗತಿ ಆರಂಭವಾಗುವುದಕ್ಕೆ ಮೊದಲೇ ಬಂದು ಬೋರ್ಡಿನಲ್ಲಿ ಚೆನ್ನಾಗಿ ಬಣ್ಣ ಬಣ್ಣದ ಚಿತ್ರ ಬಿಡಿಸುವರು . ಪ್ರಯೋಗಾಲಯ ವನ್ನು ತೆರೆದು ಬಳಸಲು ಆರಂಭಿಸಿದ್ದು  ಅವರು ಬಂದ ಮೇಲೆಯೇ .ಸಾಧ್ಯವಾದ ಪ್ರಯೋಗ ಎಲ್ಲಾ ಮಾಡಿ ತೋರಿಸುವರು . ನಮ್ಮ ಶಾಲೆಯಲ್ಲಿ ಒಂದು ವಿಜ್ಞಾನ ಸಂಘ ಆರಂಭಿಸಿ  ಕೆ ಅರ ಈ ಸಿ ಯಲ್ಲಿ ಪ್ರೊಫೆಸರ್ ಆಗಿದ್ದ  ಪಾ ದೇವ ರಾವ್  ಅವರಿಂದ ಉದ್ಘಾಟಿಸಿದರು . ಅವರು ಶಾಲೆಗೆ  ಬೈಸಿಕಲ್ ನಲ್ಲಿ ಬರುತ್ತಿದ್ದು ಕೆಲವೊಮ್ಮೆ ನಮ್ಮನ್ನು ಡಬಲ್ ರೈಡ್ ಮಾಡಿ ಕರೆದು ಕೊಂಡು ಹೋದದ್ದು ಇದೆ . ಒಳ್ಳೆಯ ವಿಜ್ಞಾನ ಅಧ್ಯಾಪಕರು ಆಗಿದ್ದ ಅವರು ಮುಂದೆ ಆರ್ಟ್ಸ್ ವಿಷಯ ದಲ್ಲಿ ಎಂಎ  ಮಾಡಿ ಜೂನಿಯರ್ ಕಾಲೇಜು  ಲೆಕ್ಚರರ್ ಆಗಿ ಹೋದದ್ದು ವಿಜ್ಞಾನ ಶಿಕ್ಷಣಕ್ಕೆ ಆದ ನಷ್ಟ .ಅವರೂ ಮುಂದೆ ಜೂನಿಯರ್ ಕಾಲೇಜು ಒಂದರ ಪ್ರಿನ್ಸಿಪಾಲ ಆಗಿ ನಿವೃತ್ತರಾದರು . 

ಈಗ ಪುತ್ತೂರಿನಲ್ಲಿ ನೆಲೆಸಿರುವ ಅವರೂ ಅಲ್ಪ ಸ್ವಲ್ಪ ಗುರು ಸೇವೆ ಮಾಡಲು ಅವಕಾಶ ಕೊಡುವರು . ಹೀಗೆ ತಂದೆ ಮಕ್ಕಳಿಬ್ಬರಿಗೂ ಶಿಷ್ಯನಾಗುವ ಯೋಗ ನನಗೆ ಇತ್ತು . 

                             




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ