ಬೆಂಬಲಿಗರು

ಶುಕ್ರವಾರ, ಜುಲೈ 9, 2021

ಕ್ಷೇಮಾ ಗೆಳೆಯರು

      

 KS Hegde Medical Academy (KSHEMA) Mangalore: Admission 2021, Courses, Fee,  Cutoff, Ranking, Placements & Scholarship

 

 

 

  ಕ್ಷೇಮಾ(ಕೆ ಎಸ ಮೆಡಿಕಲ್ ಅಕಾಡೆಮಿ ) ಕೆಲ ಗೆಳೆಯರು 

 

 

ಕ್ಷೇಮಾ ದಲ್ಲಿ ನನ್ನ ಮೊದಲ ಅಧ್ಯಾಯದಲ್ಲಿ ಹಲವು ಗೆಳೆಯರು ಆದರು .ನನಗಿಂತ ಪ್ರಾಯದಲ್ಲಿ ಕಿರಿಯರೇ ಹೆಚ್ಚು . ನಾನು ಮೆಡಿಸಿನ್ ವಿಭಾಗದಲ್ಲಿ ಇದ್ದ ಕಾರಣ ವಾರದಲ್ಲಿ ಕನಿಷ್ಠ ಮೂರು ದಿನ ಕಾಲ್ ಡ್ಯೂಟಿ ಇರುತ್ತಿತ್ತು  . ನಾನು ಆ ದಿನಗಳಲ್ಲಿ ಆಸ್ಪತ್ರೆಯಲ್ಲಿಯೇ ನಿಲ್ಲುವೆನು . ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿ ಡ್ಯೂಟಿ ರೂಮ್ .ಅಲ್ಲಿಂದ ಐ ಸಿ ಯು ವಿಗೆ ಒಂದೂವರೆ ಫರ್ಲಾಂಗ್ ಇರಬಹುದು . ಐ ಸಿ ಯು  ಓ ಪಿ ಡಿ ಬ್ಲಾಕ್ ನ ಒಂದನೇ ಮಹಡಿಯಲ್ಲಿ ,ಕ್ಯಾಶುಯಾಲಿಟಿ ಗ್ರೌಂಡ್ ಫ್ಲೋರ್ ನಲ್ಲಿ . ಹೆಚ್ಚಾಗಿ ಕಾಲ್ ಬರುವದು ಈ ಎರಡು ಕಡೆಯಿಂದ . 

ಕ್ಯಾಶುಯಾಲಿಟಿ ಯಲ್ಲಿ ಗೌತಮ್ ಶೆಟ್ಟಿ   ,ಸುಭೋದ್ ಕುಮಾರ್ ರೈ ಮತ್ತು ಕಿಶನ್ ಆಳ್ವಾ ಎಂಬ ಉತ್ಸಾಹಿ  ಯುವಕರು ಇದ್ದರು .ಕಲಿಯುವ ಆಸಕ್ತಿ ಇತ್ತು .ಹಿರಿಯವರು ಎಂದು ಆದಷ್ಟು ರಾತ್ರಿ ನನಗೆ ತೊಂದರೆ ಕೊಡದೇ  ಇರುವುದಕ್ಕೆ ಶ್ರಮಿಸುವರು .ಸುಭೋದ್ ಮುಂದೆ ಅಡ್ಯನಡ್ಕ ಪಿ ಎಚ್ ಸಿ ಯಲ್ಲಿ ಜನಾನುರಾಗಿ ವೈದ್ಯರಾಗಿದ್ದು ಈಗ ಹಾಸನ ಮೆಡಿಕಲ್ ಕಾಲೇಜು ನಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಲಿರುವರು

 ಆಗಷ್ಟೇ ಕಾಲೇಜು ಆರಂಭ ವಾದುದರಿಂದ ಪಿ ಜಿ ಮತ್ತು ಹೌಸ್ ಸರ್ಜನ್ಸ್ ಗಳ  ಸಹಾಯ ನಮಗೆ ಇರಲಿಲ್ಲ .ನೇರವಾಗಿ ನಾವೇ ರೋಗಿಯ ಪರೀಕ್ಷೆ ,ಕೇಸ್ ಶೀಟ್ ,ಡಿಸ್ಚಾರ್ಜ್ ಸಮ್ಮರಿ ಬರೆಯುವುದು ಇತ್ಯಾದಿ ಮಾಡುವುದಲ್ಲದೆ  ಕರೆಗಳನ್ನು ಅಟೆಂಡ್ ಮಾಡುವದು ಇತ್ಯಾದಿ ಮಾಡುವ ಅನಿವಾರ್ಯತೆ ಇತ್ತು .ಸಹಾಯಕ್ಕೆ ಕೆಲವೊಮ್ಮೆ ರೆಸಿಡೆಂಟ್ ವೈದ್ಯರು ಇರುತ್ತಿದ್ದರು .ಇವರ ಪೈಕಿ ಡಾ ವಿಜಯ ಶೆಟ್ಟಿ ,ಡಾ ಯಶವ೦ತ   ರಾವ್  ಮತ್ತು ಡಾ ಪ್ರಜ್ಞಾ ಉತ್ಸಾಹಿಗಳು , ವಿಧೇಯರೂ ,ಪ್ರಾಮಾಣಿಕರೂ ಆಗಿದ್ದು ಕಲಿಯುವ ಆಸಕ್ತಿ ಇದ್ದು ನನಗೆ ಅವರ ಸಂಗ  ಅಪ್ಯಾಯ ಮಾನವಾಗಿತ್ತು . 

 

ಇನ್ನು  ಅರಿವಳಿಕೆ ವಿಭಾಗದ ಡಾ ಆನಂದ ಬಂಗೇರ ,ಗೈನಕೊಕೊಲೋಜಿ ಯ ಯೋಗೀಶ್ ಬಂಗೇರ  ,ಮೂಳೆ  ತಜ್ಞ ಮೋನಪ್ಪ ನಾಯ್ಕ್ ಮತ್ತು ಸರ್ಜರಿ ವಿಭಾಗದಲ್ಲಿ ಮನೋಹರ ಪೈ  ರಾತ್ರಿ ಪಾಳಿಯಲ್ಲಿ ಒಳ್ಳೆಯ ಕಂಪನಿ . ಹಿಂದೆ ಬರೆದಂತೆ ನನ್ನ ವಿಷಯ ಅಲ್ಲದಿದ್ದರೂ ಸಿಸೇರಿಯನ್ ಆಪರೇಷನ್ ಗೆ  ಯೋಗೀಶ್ ಬಂಗೇರ ಅವರಿಗೆ ಅಸಿಸ್ಟ್ ಮಾಡಿದ್ದೆ . ಆ ದಿನಗಳಲ್ಲಿ  ನಮ್ಮ ಸಂಬಳ  ಹೇಳುವಷ್ಟು ಇರಲಿಲ್ಲ ,ಆದರೆ ನಮ್ಮೊಳಗೆ  ಅನ್ಯೋನ್ಯತೆ ಇತ್ತು ,ನಾನು ಎರಡನೇ ಬಾರಿಗೆ ಇದೇ ಸಂಸ್ಥೆ ಸೇರಿದಾಗ ಸಂಬಳ ಸಾರಿಗೆ ಬಹಳ ಸುಧಾರಿಸಿದ್ದವು  , ದೊಡ್ಡ ದೊಡ್ಡ ಕಾರುಗಳ ಸಂಖ್ಯೆ ಹೆಚ್ಚಿತ್ತು .ಆದರೆ ಪರಸ್ಪರ ಪ್ರೀತಿ ಮತ್ತು ಆತ್ಮೀಯತೆ ಬಹಳ ಕಡಿಮೆಯಾಗಿತ್ತು . 

ನಮ್ಮದೇ ಡಿಪಾರ್ಟ್ಮೆಂಟ್ ನಲ್ಲಿ ಡಾ ವಿಷ್ಣು ಶರ್ಮ ,ಇವರು ಶ್ವಾಸ ಕೋಶ ಸಂಬಂಧಿ ರೋಗಗಳ ತಜ್ಞರು  ಆದರೂ ನಮ್ಮೊಡನೆ ವೈದ್ಯಕೀಯ ವಿಭಾಗದ ಕಾಲ್ ಡ್ಯೂಟಿ ಮಾಡುತ್ತಿದ್ದರು . ಸರಳ ವ್ಯಕ್ತಿ ಮತ್ತು ತಮ್ಮ ವಿಭಾಗದಲ್ಲಿ ನುರಿತವರು .

ಮೆಡಿಕಲ್ ಕಾಲೇಜ್ ನಲ್ಲಿ ಕ್ಲಿನಿಕಲ್ ಮತ್ತು  ಪ್ರಿ ಕ್ಲಿನಿಕಲ್ ಎಂಬ ತೆಳು ಗೋಡೆ .ಎರಡೂ ಒಂದಕ್ಕೆ ಒಂದು ಪೂರಕ . ಅವರ ನಡುವೆ ಒಂದು ಸೇತು ಏರ್ಪಡಿಸಲು ಜಾಯಿಂಟ್ ಸೆಮಿನಾರ್ ಆರಂಬಿಸುವ ಪ್ರಯತ್ನ ಮಾಡಿದೆನು . ಅದರ ಅಂಗವಾಗಿ ಸಕ್ಕರೆ ಕಾಯಿಲೆ ಮತ್ತು ಕೊಂಪ್ಲಿಕೇಷನ್ಸ್ ಎಂಬುದರ ಬಗ್ಗೆ ಒಂದು ವಿಚಾರ ಸಂಕಿರಣ ದಲ್ಲಿ ಡಾ ಸುಕನ್ಯಾ ಶೆಟ್ಟಿ (ಬಯೋ ಕೆಮಿಸ್ಟ್ರಿ )ಮತ್ತು ನಮ್ಮ ವಿಭಾಗದ ಅಧ್ಯಾಪಕರು ಭಾಗವಹಿಸಿದ ನೆನಪು .

ಡ್ಯೂಟಿ ದಿನಗಳಲ್ಲಿ ನಮಗೆ ಸಮಯ ಬೇಕಾದಷ್ಟು ಸಿಗುತ್ತಿದ್ದು  ಕಾಲೇಜ್ ಲೈಬ್ರರಿ ಗೆ ಹೋಗಿ ಅಧ್ಯಯನ ಮಾಡುತ್ತಿದ್ದೆನು .ಹೊಸ ಕಾಲೇಜ್ ,ಲೈಬ್ರರಿಯನ್ ಸುಪ್ರಿಯಾ ಶೆಟ್ಟಿ ಉತ್ಸಾಹಿಗಳು .ಅವರಿಗೆ ವೈದ್ಯಕೀಯ ಪುಸ್ತಕಗಳನ್ನು ವರ್ಗೀಕರಿಸಿ ಇಡಲು  ಸಹಾಯ ಮಾಡುತ್ತಿದ್ದೆನು . ನಮ್ಮ ಸಬ್ಜೆಕ್ಟ್ ಗಳು ಅವರಿಗೆ ಹೊಸತು ಆದುದರಿಂದ  ಸಹಜ ಪುಸ್ತಕ ಪ್ರೇಮಿ ಆದ ನಾನು  ಸಂತೋಷದಿಂದ ಮಾಡಿದ ಕಾರ್ಯ . 

ಹಗಲೂ ರಾತ್ರಿಯೂ ಡ್ಯೂಟಿ ಮಾಡುತ್ತಲಿದ್ದುದರಿಂದ ಸೆಕ್ಯೂರಿಟಿ ಯವರಿಂದ ಹಿಡಿದು ಡ್ರೈವರ್ ,ನರ್ಸ್ ,ಆಯಾ ,ವಾರ್ಡ್ ಬಾಯ್ ,ಕ್ಯಾಂಟೀನ್ ಹುಡುಗರು ಎಲ್ಲರೂ ನಮಗೆ ಬೇಗ ಪರಿಚಿತರಾಗಿ ಬಿಡುತ್ತಿದ್ದರು . ಈಗಲೂ ಕಂಡರೆ ನನ್ನನ್ನು ಗುರುತು ಹಿಡಿಯುವರು .    

                      ಈ ಕಾಲೇಜ್ ನಿಟ್ಟೆ ವಿದ್ಯಾ ಸಂಸ್ಥೆ ಯವರು ನಡೆಸುತ್ತಿದ್ದು ಹಿರಿಯರಾದ ವಿನಯ ಹೆಗ್ಡೆಯವರು ಕೆಲವೊಮ್ಮೆ  ಬರುತ್ತಿದ್ದರು .ಆದರೆ ತಮ್ಮ ಉಪಸ್ಥಿತಿಯು ಕಾರ್ಯ ನಿರತ ವೈದ್ಯರನ್ನು ವಿಚಲಿತ ಮಾಡದಂತೆ ಕಾಳಜಿ ವಹಿಸುತ್ತಿದ್ದರು .ಅವರ ಬಗ್ಗೆ ಒಂದು ವಿಚಾರ ಉಲ್ಲೇಖಿತ್ತೇನೆ .ಮಂಗಳೂರು ವಿಶ್ವ ವಿದ್ಯಾಲಯ ಅವರಿಗೆ ಗೌರವ್ ಡಾಕ್ಟರೇಟ್ ಕೊಟ್ಟು ಗೌರವಿಸಿತು .ಈ ಸಂದರ್ಭ ಕಾಲೇಜಿನ ಎಲ್ಲಾ ವಿಭಾಗಗಳಿಗೆ ಒಂದು ಪತ್ರ ಬರೆದು ತಮ್ಮನ್ನು ಇನ್ನು ಮುಂದೆಯೂ   ದಯವಿಟ್ಟು ಎಲ್ಲರೂ ಮಿಸ್ಟರ್ ವಿನಯ ಹೆಗ್ಡೆ ಎಂದೇ ಸಂಬೋಧಿಸುವದು ಮತ್ತು ಡಾಕ್ಟರ್ ಉಪಾಧಿ ಸೇರಿಸದೇ  ಇರುವುದು ಎಂದು ಕೇಳಿಕೊಂಡಿದ್ದರು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ