ಬೆಂಬಲಿಗರು

ಶುಕ್ರವಾರ, ಜುಲೈ 23, 2021

ಸಿದ್ದಿ ಅಪ್ಪಚ್ಚಿ






                      ಸಿದ್ಧಿ ಅಪ್ಪಚ್ಚಿ 

                   


 ನನ್ನ ಅಜ್ಜ ಮಹಾಬಲ ಭಟ್ .ಅವರ ಅಣ್ಣ ನರಸಿಂಹ ಭಟ್ . ಸಂಪಾಜೆ ಬಳಿ ಲೈನ್ ಕಜೆ  ಯಲ್ಲಿ  ಅಸ್ತಿ ಇದ್ದು ಅದರ ಉಸ್ತುವಾರಿ ಹೊತ್ತಿದ್ದರು . ಸಾಹಸಿಗಳು ,ಒಳ್ಳೆಯ ಬೇಟೆಗಾರರು ಆಗಿದ್ದರು . ಅವರ ಮಗ ಸಿದ್ದಿ ಗಣಪತಿ ಭಟ್ .ನಮಗೆಲ್ಲಾ ಸಿದ್ಧಿ ಅಪ್ಪಚ್ಚಿ . ನಮ್ಮ ಮನೆಯಲ್ಲಿ ಏನು ಸಮಾರಂಭ ಇದ್ದರೂ ಅಷ್ಟು ದೂರದಿಂದ ದಿನ ಮುಂದಾಗಿ ಬರುವರು . ಬಗಲಲ್ಲಿ ಒಂದು ಖಾಕಿ  ಚೀಲ ;ಗಟ್ಟಿಯಾಗಿ ಮಾತನಾಡುತ್ತಲೇ ಅಂಗಳ ವೇರುವರು . 

  ಬಾಲ್ಯದಲ್ಲಿ  ಬಹಳ ಬವಣೆ ಅನುಭವಿಸಿದವರು ; ಪ್ರಾಥಮಿಕ ಶಿಕ್ಷಣ ಮಡಿಕೇರಿಯಲ್ಲಿ  ; ಪುಣ್ಯವಂತರ ಮನೆಯಲ್ಲಿ   ವಾರಾನ್ನ .ಪ್ರೌಢ ಶಿಕ್ಷಣ ಮಂಗಳೂರು ಕೆನರಾ ಹೈ ಸ್ಕೂಲ್ ನಲ್ಲಿ . ಕಲಿಯುವಿಕೆಯಲ್ಲಿ ಗಟ್ಟಿಗರೇ ಇರ ಬೇಕು . ಮಕ್ಕಳಾದ ನಮ್ಮನ್ನು ಕಂಡೊಡನೆ ಆರ್ಕಿಮಿಡಿಸ್ ಥಿಯೋರಂ ಕೇಳುವರು .ಆಮೇಲೆ ಅವರೇ' Body immersed in a fluid is subjected to an upwards force equal to the weight of the displaced fluid.'ಎಂದು ಒಂದೇ ಉಸಿರಿಗೆ ಹೇಳಿ ಹೇ ಹೇ ಎಂದು ನಗೆಯಾಡುವರು .ಕೆಲವು ಪದ್ಯಗಳು ಕೂಡಾ ಬಾಯಿ ಪಾಠ ಬರುತ್ತಿತ್ತು .. 

                   ತಂದೆಯವರ ನಂತರ ಲೈನ್ ಕೆಜೆ ಯಲ್ಲಿ ಕೃಷಿಯಲ್ಲಿ ತೊಡಗಿಸಿ ಕೊಂಡರು . ಇವರು ದೊಡ್ದ ಪುಸ್ತಕ ಪ್ರಿಯರು .ಕಾಡಿನಲ್ಲಿ ಇರುವ ಮನೆಯಲ್ಲಿ ಹಲವು ಕಪಾಟುಗಳಲ್ಲಿ ಪುಸ್ತಕಗಳು . ವಿವಿಧ ಶಬ್ದ ಕೋಶಗಳು ,ಜ್ಯೋತಿಷ್ಯ ಸಂಬಂಧಿ ಕೃತಿಗಳು  ಮತ್ತು ವಿಶ್ವ ಕೋಶಗಳು  ಹೆಚ್ಚು . ಪೇಟೆಗೆ ಹೋದಾಗ ಪುಸ್ತಕ ಅಂಗಡಿಗಳಿಗೆ ಧಾಳಿ ಇಡುವರು . ಯಾರಾದರೂ ಹೊಸ ಗಾದೆ ,ಒಗಟು ಅಥವಾ ಚುಟುಕು ಹೇಳಿದರೆ ,'ಸ್ವಲ್ಪ ತಡೆಯಿರಿ ಬರೆದು ಕೊಳ್ಳುತ್ತೇನೆ ,ಎಂದು ತಮ್ಮ ಚೀಲದಿಂದ ಒಂದು ಪುಸ್ತಕ ತೆಗೆದು ಬರೆದು ಕೊಳ್ಳುವರು . ನಮ್ಮ ಅಜ್ಜನ ತಂದೆ ಕವಿ ಗಣಪ್ಪಜ್ಜ ಎಂದು ಪ್ರಸಿದ್ಧರಾಗಿದ್ದ ಅಂಗ್ರಿ ಗಣಪತಿ ಭಟ್ ಅವರ ಹಲವು ಕವಿತೆಗಳನ್ನು ಸಂಗ್ರಹ ಮಾಡಿಕೊಂಡಿದ್ದರು . ಅಜ್ಜನ 'ಪರಡೆ ಪರಡೆ ಕಳಿ ಪರಡೆ ಪರಡೆ ಪನ್ಪುನಕ್ಳೇನು ನೆರಡೇ "ತುಳು ಪದ್ಯ  ಗಟ್ಟಿಯಾಗಿ ಹೇಳುವರು . ಬಸ್ ಸ್ಟಾಂಡ್ ನಲ್ಲಿ 'ಸುಳ್ಯ ಸುಳ್ಯ ಎಂದು ಕೂಗುವಾಗ ಮಣಿಪ್ಪಂದೆ ಕುಳ್ಯ 'ಎಂದು ತಮಾಷೆ ಮಾಡಿದೆ ಎಂದು ಹೇಳಿ ನಗುವರು . ತಮ್ಮ ನಾಲಿಗೆಯನ್ನು ತಾವೇ ನುಂಗಿ ತೋರಿಸಿ ಮಕ್ಕಳನ್ನು ಕೌತುಕ ಪಡಿಸುವರು . 

ಒಂದು ಬಾರಿ ಪುಸ್ತಕ ಇಡಲು ಗೋಡ್ರೇಜ್ ಕಪಾಟು ಕೊಳ್ಳಲು ಮಂಗಳೂರಿನ ಶೋ ರೂಮಿಗೆ ಹೋಗಿ ಅಲ್ಲಿರುವ ಕಪಾಟುಗಳ ಬೆಲೆ ವಿಚಾರಿಸಲು ಇವನರೋ ಹಳ್ಳಿಯವನು ಟೈಮ್ ಪಾಸ್ ಗಿರಾಕಿ ಎಂದು ಉಡಾಫೆಯಿಂದ ನಿಮಗೆ ಎಲ್ಲಾ ಕಪಾಟುಗಳ ಬೆಲೆ ಯಾಕೆ ಎಂದು ಕೇಳಲು ಕುಪಿತರಾದ ಸಿದ್ದಿ ಅಪ್ಪಚ್ಚಿ  ಸ್ಥಳದಲ್ಲಿಯೇ ಅಲ್ಲಿದ್ದ ಆರೂ ಕಪಾಟುಗಳನ್ನು ಕ್ಯಾಷ್ ಕೊಟ್ಟು ಖರೀದಿಸಿದರು .

ನಮ್ಮ ಮೂಲ ಕುಟುಂಬದ ಮೇಲೆ ತುಂಬಾ ಅಭಿಮಾನ . ತಪ್ಪದೇ ಕಾರ್ಯಕ್ರಮಗಳಿಗೆ ಹೋಗುವರು . ಮೊದಲು ಅವರ ಬಳಿ ಒಂದು ಜೀಪ್ ಇತ್ತು . ಆಮೇಲೆ ಬಸ್ಸಿನಲ್ಲಿಯೇ ಪಯಣ . ಬಸ್ ಡ್ರೈವರ್ ಕಂಡಕ್ಟರ್ ಎಲ್ಲರಿಗೂ ಇವರು ಪರಿಚಿತ . ವರ್ಷಗಳ ಹಿಂದೆ ಮಳೆಗೆ ಭೂಕುಸಿತ ಉಂಟಾದಾಗ ಇವರ ಕಿರಿಯ ಪುತ್ರ ಕಟ್ಟಿಸಿದ್ದ ಹೊಸ ಮನೆಯೊಂದು ಶಿಥಿಲ ವಾದರೂ ಮೂಲ ಮನೆ ಗಟ್ಟಿಯಾಗಿ ಇತ್ತು .

ಸಿದ್ದಿ ಅಪ್ಪಚ್ಚಿ ತೀರಿ  ಕೊಂಡು ದಶಕಗಳೇ ಕಳೆದಿವೆ ,ಆದರೆ ಅವರ ಮುಗ್ದ ನಗು ,ಬಿಳಿ ಅಂಗಿ ,ಖಾಕಿ  ಚೀಲ ಈಗಲೂ ಕಣ್ಣು ಮುಂದೆ ಇವೆ . 


 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ