ಬೆಂಬಲಿಗರು

ಶುಕ್ರವಾರ, ಜುಲೈ 30, 2021

ಶಂಕರ ವಿಠಲ್ ಬಸ್

                                     

                        

ಶಂಕರ ವಿಠ್ಠಲ ಬಸ್  

 Mangalore City on Twitter: "Once upon on a time in Puttur... 🚌… "

 

                                   

                  

                    ನಮ್ಮ ಊರಿನಲ್ಲಿ  ಸಂಚಾರಕ್ಕೆ ಹಿಂದೆ ಇದ್ದ ಬಸ್ ಗಳಲ್ಲಿ  ಶಂಕರ ವಿಠಲ್ ಕಂಪನಿಯ ದ್ದೇ  ಅಧಿಕ .ಕನ್ಯಾನ ಉಪ್ಪಳ ಮಾರ್ಗದಲ್ಲಿ ಅವು ಮಾತ್ರ ಇದ್ದು ಆನೆಕಲ್ಲು ಕಡೆಗೆ ಕೆ ಬಿ ಟಿ (ಕುಮಾರನ ಬಸ್ ) ಮತ್ತು ಸಿ ಪಿ ಸಿ ಬಸ್ (ರಾಂಪಣ್ಣನ ಬಸ್ )ಗಳು ಇದ್ದವು . ಸಿಲ್ವರ್ ಕಲರ್ ಅನಾಕರ್ಷಕ ,ಉದ್ದ ಕಡಿಮೆ (ತಿರುಗಾಸುಗಳು ಇದ್ದ ಕಾರಣ ಇರಬೇಕು ). 

ಮುಂಜಾನೆ ನಾಲ್ಕು ಗಂಟೆಗೆ ಮೊದಲ ಬಸ್ ಕನ್ಯಾನದಿಂದ ಹೊರಟು ಬಾಯಾರು ಪೈವಳಿಕೆ ಮಾರ್ಗದಿಂದ ಉಪ್ಪಳ ರೈಲು ನಿಲ್ದಾಣಕ್ಕೆ ಹೋಗಿ ,ಅಲ್ಲಿಂದ ಬಂದ್ಯೋಡು ಮಾರ್ಗವಾಗಿ ಪೆರ್ಮುದೆ ಗೆ ಹೋಗುವುದು . ಬೇಸಗೆಯಲ್ಲಿ ಧರ್ಮತಡ್ಕ ವರೆಗೆ ಮುಂದುವರಿಯುವುದು . ನಮ್ಮ ತಂದೆಯ ಅಜ್ಜನ ಮನೆ ಚೆಕ್ಕೆಮನೆ . ಅಲ್ಲಿಯ  ಕಾರ್ಯಕ್ರಮಗಳಿಗೆ ನಾವು ಎರಡೂವರೆ ಗಂಟೆಗೆಲ್ಲಾ ಎದ್ದು ಕನ್ಯಾನಕ್ಕೆ ನಡೆದು ಬಸ್ ಹಿಡಿಯುತ್ತಿದ್ದೆವು .ಅದು ತಪ್ಪಿದರೆ ಮುಂದಿನ ಬಸ್ಸಿನಲ್ಲಿ ಬಾಯಾರು ಪದವಿನಲ್ಲಿ ಇಳಿದು ಗುಂಪೆ ಗುಡ್ಡೆ ಮೂಲಕ ನಾಲ್ಕೈದು ಮೈಲು ನಡೆಯ ಬೇಕು .ಹಾಗೆ ಮಾಡಿದ್ದೂ ಇದೆ . ಈ ಬಸ್ಸಿನ ಡ್ರೈವರ್ ಗೋಪಾಲ ಣ್ಣ .ಆದುದರಿಂದ ಗೋಪಾಲನ ಬಸ್ .ಅವರ ಮನೆ ಕನ್ಯಾನ ದಲ್ಲಿ ಇದ್ದು ಮಕ್ಕಳು  ಶಾಲೆಗೆ  ಬರುತ್ತಿದ್ದರು . ಈ ಬಸ್ ಮರಳಿ ಕನ್ಯಾನ ಮೂಲಕ ವಿಟ್ಲಕ್ಕೆ ಹೋಗಿ ಹಿಂತಿರುಗಿ ಉಪ್ಪಳಕ್ಕೆ ಹೋಗಿ ಕನ್ಯಾನಕ್ಕೆ ಮರಳುವುದು .. 

             ಇನ್ನೊಂದು ಮಹಾಬಲ ಶೆಟ್ಟಿ ಬಸ್ .ಬೆಳಿಗ್ಗೆ ಉಪ್ಪಳದಿಂದ ಕನ್ಯಾನ ವಿಟ್ಲ ಮೂಲಕ ಪುತ್ತೂರಿಗೆ ಬಂದು ಅಲ್ಲಿಂದ ಮಂಗಳೂರಿಗೆ ಹೋಗವುದು . ಅಲ್ಲಿಂದ ರಿಟರ್ನ್ ಟ್ರಿಪ್ ಅದೇ ಮಾರ್ಗದಲ್ಲಿ . ಅದರಲ್ಲಿ ಹೊಳ್ಳರೆಂಬ ಕಂಡಕ್ಟರ್ ಇದ್ದರು .ಕಾಕಿ ಅಂಗಿ ಚಡ್ಡಿ ಹಾಕುವರು .ಅವರ ಭಾವ ರಾಮ ರಾವ್  ಪ್ರಾಥಮಿಕ ಶಾಲೆಯ ಅಧ್ಯಾಪಕರು . 

ಮುಂಜಾನೆ ಪುತ್ತೂರಿನಿಂದ ಆರು ಗಂಟಿಗೆ ಹೊರಟು ಉಪ್ಪಳಕ್ಕೆ ಹೋಗಿ ಮಧ್ಯಾಹ್ನ ಪುತ್ತೂರಿಗೆ ಮರಳುವ ಬಸ್ ಪೀರ್ ಸಾಹೇಬರದ್ದು . ಇದರಲ್ಲಿ ಪುತ್ತೂರು ಪೇಟೆಗೆ ಬೇಕಾದ ಮೀನು ಕೂಡಾ ಸರಬರಾಜು ಆಗುತ್ತಿತ್ತು .ಕೆದ್ಲಾಯ ಎಂಬ ಕಂಡಕ್ಟರ್ ಇದ್ದರು . ಪೀರ್ ಸಾಹೇಬರು ನಮಗೆ ಹೆಚ್ಚು ಪರಿಚಿತರು ..ಪುತ್ತೂರು ನಗರ ಸಮೀಪ ಅವರ ಮನೆ ಇತ್ತು . ಮಧ್ಯಾಹ್ನ ಅವರ ಬುತ್ತಿ ಅಲ್ಲಿಂದ ತಂದು ಕೊಡುವರು . ನಮ್ಮ ಅಣ್ಣ ಪುತ್ತೂರು ಪಾಪ್ಯುಲರ್ ನ್ಯೂಸ್ ಏಜೆನ್ಸಿ ಯಿಂದ ಟೈಮ್ಸ್ ಒಫ್ ಇಂಡಿಯಾ ಪೇಪರ್ ಇವರ ಮೂಲಕ ತರಿಸುತ್ತಿದ್ದು ನಾವು ಬಸ್ಸಿಗೆ ಕಾದು ತೆಗೆದು ಕೊಳ್ಳುವೆವು .ಇದೇ ರೀತಿ ಹಳ್ಳಿ ಯಲ್ಲಿ ಹಲವರು  ಔಷಧಿ ಇತ್ಯಾದಿ ತರಿಸಿಕೊಳ್ಳುವರು . ನಮ್ಮ ಮನೆಗೆ ಉಪ್ಪಳದಿಂದ ಎರಡು ಒಳ್ಳೆಯ ನಾಯಿ ಮರಿಗಳನ್ನು ಕೂಡಾ ತಂದು ಕೊಟ್ಟಿದ್ದರು . ನಾವು ಪುತ್ತೂರು ,ವಿಟ್ಲ  ಜಾತ್ರಗೆ ಬಂದರೆ ಇದೇ  ಬಸ್ ನಲ್ಲಿ ಮರಳುವುದು . 

  ಈ ಬಸ್ ಗಳ  ಟಿಕೆಟ್ ಚೆಕಿಂಗ್ ಇನ್ಸ್ಪೆಕ್ಟರ್ ವಾಸುದೇವ ಕಿಣಿಯವರ ಬಗ್ಗೆ ಹಿಂದೆ ಬರೆದಿದ್ದೆನು .. ಬಸ್ ಗಳು ಯಾವಾಗಲೂ ತುಂಬಿ ತುಳುಕುತ್ತಿದ್ದವು . ಹೇಗಾದರೂ ಹತ್ತಿ ಬಿಟ್ಟರೂ ದಾರಿ ಮಧ್ಯೆ ಇಳಿಯುವುದು ತುಂಬಾ ತ್ರಾಸದಾಯಕ ಆಗಿರುತ್ತಿತ್ತು . 

 ಪುತ್ತೂರಿನಿಂದ ಪಾಣಾಜೆಗೂ ಇದೇ ಕಂಪನಿಯ ಬಸ್ ಗಳು ಇದ್ದುವು .ಶಂಕರ ಭಟ್ ಮತ್ತು ವಿಠಲ್ ಭಟ್ ಎಂಬವರು ೧೯೨೯ ರಲ್ಲಿ ಆರಂಭಿಸಿದ ಈ  ಕಂಪನಿಯನ್ನು ಮೂರು ವರ್ಷಗಳ ನಂತರ ಆರೂರು ಕುಟುಂಬದವರು ಖರೀದಿಸಿ ನಡೆಸಿದರು . ಒಂದು ಕಾಲಕ್ಕೆ ಎಂಟು ನೂರಕ್ಕಿಂತಲೂ ಅಧಿಕ ಬಸ್ ಗಳನ್ನು ಕಂಪನಿ ಹೊಂದಿತ್ತು ಎಂದು ಅವರ ಬ್ಲಾಗ್ ಹೇಳುತ್ತದೆ .

ಪುತ್ತೂರಿನಿಂದ ಬೆಂಗಳೂರಿಗೆ ರಾತ್ರಿ  ಮೊದಲ ಸುಖಾಸೀನ ಬಸ್ ಕೂಡಾ ಇವರೇ ಆರಂಬಿಸಿದವರು . ಆಮೇಲೆ ಯಾಕೋ ಅದು ನಿಂತು ಹೋಯಿತು . ಮೊಳಹಳ್ಳಿ ಶಿವ ರಾವ್ ವೃತ್ತದ ಬಳಿ ಶಂಕರ ವಿಠಲ್ ಬಸ್ಸಿನ ಗ್ಯಾರೆಜ್ ಇತ್ತು .

     ನಮ್ಮೂರಿನ ಜೀವ ನಾಡಿಗಳಾಗಿದ್ದ ಬಿಳಿ ಬಸ್ ಗಳು ಇಲ್ಲಿ ಇಲ್ಲ.(ನಮ್ಮ ನೆನಪಿನಲ್ಲಿ ಹಸಿರಾಗಿವೆ ) .ಬದಲಿಗೆ ವರ್ಣ ರಂಜಿತ ಗಾಡಿಗಳು ಚಲಿಸುತ್ತಿವೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ