ಬೆಂಬಲಿಗರು

ಶನಿವಾರ, ಸೆಪ್ಟೆಂಬರ್ 12, 2020

ಮಳೆಗಾಲದ ಬಗ್ಗೆ ಒಂದು ಪ್ರಬಂಧ

 ಮಳೆಗಾಲ  ಆರಂಭವಾಗುತ್ತಲೇ  ಕೊಡೆ  ಗೊರಬೆಗಳು ಹೊರ ಬರುತ್ತವೆ .ಇಂದಿನ ಕೊಡೆಗಳಂತೆ  ತರಾವಳಿ

ಗೊರಬೆಗಳನ್ನು ಮಾಡುವವರು ಹಳ್ಳಿಯಲ್ಲಿ ಇದ್ದರು.ಅವರಿಗೆ ಹಣವೇ ಆಗಬೇಕಿಲ್ಲ .ಹಲಸಿನ ಬೀಜವೊ 

ನೀರಡಿಕೆಯೋ ಕೊಟ್ಟರೆ ಆದೀತು .ಒಟ್ಟಿನಲ್ಲಿ ಆತ್ಮನಿರ್ಭರ  ಗ್ರಾಮಗಳು ಗೊರಬೆ ಬೆನ್ನು ಮತ್ತು ತಲೆಯ 

ಹಿಂಬಾಗ ಬೆಚ್ಚಗೆ ಇಟ್ಟೀತು.ಮುಂಬಾಗಕ್ಕೆ ವರುಣನ ಅಪ್ಪುಗೆ ಭಾಗ್ಯ .ಗಾಳಿ ಮಳೆಯಲ್ಲಿ ಕೊಡೆಯ ಅವಸ್ಥೆ

 ಇದಕ್ಕಿಂತಲೂ ಕಡೆ .

  ಉಳಿದ ಕಾಲಗಳಲ್ಲಿ ಅಡಿಕೆಯ ಹೊದಿಕೆ ಇದ್ದ ಮನೆಯ ಅಂಗಳ ಮಳೆಯ ಚಳಿಗೆ ಅಡಿಕೆ ಸೋಗೆಯ 

ಮರೆ ಹೋಗುತ್ತದೆ .ಉಳಿದೆಡೆ ಪಾಚಿ ಹಾಸು .ಕಾಲಿಟ್ಟರೆ ಜಾರುವುದು ಅದರ ಮೇಲೆ  ನಡೆದಾಡಲು 

ಅಡಿಕೆ ಮರದ ನೆಲ ಸೇತು .ಅಭ್ಯಾಸ ಇದ್ದವರಿಗೆ ಅದರ ಮೇಲಿನ ನಡಿಗೆ  ಸುಲಭ .ಇಲ್ಲದಿದ್ದವರು 

ಸರ್ಕಸ್ ಹಗ್ಗದ ಮೇಲೆ ನಡೆದಂತೆ ಆಗುವುದು .ವರ್ಷಕಾಲದ   ಉತ್ತರಾರ್ಧ ದಲ್ಲಿ  ಅಂಗಳ ತುಂಬಾ 

ತರಕಾರಿ ಬೆಳೆ.ಮುಳ್ಳು ಸೌತೆ ,ಪಡುವಲ,ಹೀರೆ ,ಬೆಂಡೆ. ಮತ್ತು ಅಲಸಂದೆ.

ನೆಂಟರು ಬರುವುದು ಕಡಿಮೆ .ರಾತ್ರಿ ಕಪ್ಪೆ ಜೀರುಂಡೆಗಳ ಹಿಮ್ಮೇಳದಲ್ಲಿ  ಮಳೆರಾಯನ ಜೋಗುಳಕ್ಕೆ 

ಸುಖ ನಿದ್ರೆ .

ಶಾಲೆಗೆ  ಹೋಗುವ  ಮಕ್ಕಳಿಗೆ  ಕಷ್ಟ  ಆದರೂ ಮಳೆ ಇಷ್ಟ .ಜೋರಾಗಿ ಮಳೆ ಬಂದರೆ ಶಾಲೆಗೆ ರಜೆ .

ಮಾಡಿನಿಂದ ಸುರಿವ ಜಲಧಾರೆಯಲ್ಲಿ ಕೈಕಾಲು,ಬುತ್ತಿಪಾತ್ರೆತೊಳೆಯಬಹುದು.ನೀರುಹುಡುಕಿ ಓಡ ಬೇಕಿಲ್ಲ ,

ಬಾವಿಯಿಂದ ಸೇದ ಬೇಕಿಲ್ಲ .ಶಾಲೆಯ ದಾರಿ ಗುಂಟ  ಹುಲುಸಾಗಿ ಬೆಳೆದಿರುವ ನೀರ ಕಡ್ಡಿ  ಸ್ಲೇಟು 

 ಒರೆಸಲು  ಸುಲಭ ಸಾಧನ .ಕಾಲ ಬೆರಳುಗಳ  ನಡುವೆ ನೀರ ಕಜ್ಜಿ .

 

ಮಳೆಗಾಲದಲ್ಲಿ ಅಜ್ಜ ಅಜ್ಜಿಯರಿಗೆ ಬೇಡಿಕೆ .ಸಮಯ ಹೋಗದಿರುವಾಗ ಕತೆ ಹೇಳಲು ,ತಮ್ಮ 

ಭಂಡಾರದಿಂದ ಹಲಸಿನ ಬೀಜ ,ಹಪ್ಪಳ ಇತ್ಯಾದಿ ಪಿಂಕಿಸಲು.

ಮಳೆಗಾಲಕ್ಕೆ ಬೇಕಾದ ಅಕ್ಕಿ ಬೇಳೆ ಇತ್ಯಾದಿ ಮೊದಲೇ ಶೇಖರಣೆ ಆಗಿರುತ್ತದೆ .ಅದರಂತೆ ಉರುವಲು 

ಸೌದೆ ,ತೆಂಗಿನ ಗರಿ ,.ಮಳೆಗಾಲಕ್ಕೆ ಪೂರ್ವ ತಯಾರಿ ಒಂದು ಹಬ್ಬ .ಕೆಲವೊಮ್ಮೆ  ಸಂಕಟ  ಮತ್ತು 

ಸವಾಲು .

ಶೇಖರ ಮಾಡಿದ ಉಪ್ಪಿನ ಕಾಯಿ ,ಹಲಸಿನ ಹಣ್ಣಿನ ಪೆರಟಿ ,ಮಾವಿನ ಮಾಂಬಳ  ಕಾಪಿಡಲು ಹಾರ 

ಸಾಹಸ .ಬೆಚ್ಚಗೆ  ಮುಚ್ಚಿ ಇಡಬೇಕು .ಆದರೂ ಬರುವುದು  ಕೆಲವೊಮ್ಮೆ  ಫಂಗಸ್ಸಿನ ಗಡ್ಡ ಮೀಸೆ .

ಬಟ್ಟೆ  ಒಣಗಿಸುವುದು ಹರ ಸಾಹಸ .ಬಾಳಂತಿ ಮಗು ಇದ್ದರೆ ಇನ್ನೂ ಕಷ್ಟ .ಬಚ್ಚಲು ಮನೆ  ಮತ್ತು 

ಅಡಿಗೆ  ಮನೆ , ಖಾಲಿ  ಓಲೆ ಮೇಲೆ ,ಬೆಚ್ಚನೆ ಹಂಡೆ ಮೇಲೆ  ಒಣಗಿಸಲ್ಪಟ್ಟ ಬಟ್ಟೆಗಳಿಗೆ ಹೊಗೆಯ ಸೆಂಟ್ .



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ