ಬೆಂಬಲಿಗರು

ಶನಿವಾರ, ಮಾರ್ಚ್ 7, 2015

ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ



ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ |
ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತಂ ||
ಕೆಲವಂ ಸಜ್ಜನಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ |
ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೧||

ಕೆಲವನ್ನು ತಿಳಿದವರಿಂದ ಕಲಿತು ,ಕೆಲವನ್ನು ಶಾಸ್ತ್ರಗಳನ್ನು ಕೇಳುತ್ತ ,ಕೆಲವನ್ನು ಮಾಡುವವರನ್ನು ನೋಡಿ,ಮತ್ತೆ ಕೆಲವನ್ನು ಗಮನವಿಟ್ಟು ನೋಡಿ ,ಕೆಲವನ್ನು ಸಜ್ಜನರ ಒಡನಾಟ ದಿಂದ ಅರಿಯಲು ಸಾಮಾನ್ಯ ಮನುಷ್ಯನೂ ಸರ್ವಜ್ಞ ನಾಗುವನು .
ಮೆಡಿಕಲ್ ಪ್ರವೇಶವಂ ಬಲ್ಲಿದರು ಹೊನ್ನ ಪಣದಿಂ ಗೆಲ್ದು ,ಪರೀಕ್ಷಾ ಸಮಯದಲ್ ಕಾಪಿಯಂ ಹೊಡೆದು ,ಮತ್ತೆ ವಿಶ್ವವಿದ್ಯಾಲಯ ( ವಿದ್ಯಾ - ಲಯ ?) ದಲ್ಲಿ ಅಂಕಗಗಳಂ ಕೊಂಡು
ಔಷಧಿ ಕಂಪನಿಗಳ ಪ್ರತಿನಿಧಿಗಳಿಂ ಶಾಸ್ತ್ರ ಕಲಿತು ವೈದ್ಯನಪ್ಪಂ ನರಂ
ಅಕಟಕಟಾ ಶ್ರೀ ಚೆನ್ನ ಸೋಮೇಶ್ವರಾ .
ನನ್ನ ಗುರು ಗಳು ಹೇಳುತ್ತಿದ್ದರು .ಕೆಟ್ಟ ವಿದ್ಯಾರ್ಥಿಗಳಿಲ್ಲ .ಕೆಟ್ಟ ಅಧ್ಯಾಪಕ ರಿರುತ್ತಾರೆ . ಕೆಲವು ವಿದ್ಯಾರ್ಥಿಗಳನ್ನು ನೋಡಿ ನಾನು ಅದ್ಯಾಪಕ ಹುದ್ದೆಗೆ ಅನರ್ಹ ಎಂಬ ನಿರ್ಧಾರಕ್ಕೆ ಬಂದೆನು .
ತರಗತಿಗಳಿಗೆ ಅಧ್ಯಾಪಕರು ಬಂದು ವಿದ್ಯಾರ್ಥಿಗಳಿಗಾಗಿ ಕಾಯ ಬೇಕು . ತಡವಾಗಿ ಮತ್ತು ಕಾರಣವಿಲ್ಲದೆ ಗೈರು ಹಾಜರಾದ ವಿದ್ಯಾರ್ಥಿ ಗಳಿಗೆ ನೂರು ರುಪಾಯಿ ದಂಡ ವಿದಿಸುವುದು ಎಂದು ನಿರ್ದರಿದರು .ಆಗ ತಾಯಂದಿರು ಕಾಲೇಜ್ ಗೆ ಬಂದು ಮುಂಗಡವಾಗಿ ಐದು ಹತ್ತು ಸಾವಿರ ಕಟ್ಟಿ
ನನ್ನ ಮಗನ ಗೈರು ಹಾಜರಿಯನ್ನು ಮನ್ನಿಸಿರಿ ,ಮತ್ತು ಅವನನ್ನು ಬಯ್ಯದಿರಿ ಎಂದು ನಿರ್ದೆಶನ ನೀಡ ತೊಡಗಿದರು .ಕ್ಲಾಸ್ ರೂಮಿನಲ್ಲಿ ಗದ್ದಲ ಎಬ್ಬಿಸುತಿದ್ದ ಮಕ್ಕಳನ್ನು ಉದ್ದೇಶಿಸಿ ಎಲ್ಲರಿಗೂ ಹಾಜರಿ ಕೊಡುತ್ತೇನೆ .ಇಷ್ಟವಿಲ್ಲದವರು ಹೊರ ಹೋಗಿ ಎಂದೊಡನೆ ಹುಡುಗಿಯರೂ ಸೇರಿ ಇಡೀ ತರಗತಿಯೇ ಹುಯಿಲೆಬ್ಬಿಸುತ್ತಾ ವಾಕ್ ಔಟ್ ಮಾಡುತ್ತಿತ್ತು .
ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ. ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ. ದ್ವಾಪರ ಯುಗದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ. ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ. ಗುಹೇಶ್ವರ, ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾ ಬೆಱಗಾದೆನು.
ಇದು ಅಲ್ಲಮನ ವಚನ . ಕಲಿಯುಗದ ಆದಿಯಲ್ಲೇ ಬಡಿದು ಕಲಿಸುವ ಪದ್ಧತಿ ಇತ್ತು .ಈಗ ಗುರು ಶಿಷ್ಯಂಗೆ ವಂದಿಸಿ (ಶಿಷ್ಯಂ ದೇವೋ ಭವ—ಅಲ್ಲಾ ದೆವ್ವೋ ಭವವೋ?) ಪ್ರವಚನ ಆರಂಬಿಸಿದರೆ ಕ್ಷೇಮ ಎಂಬಂತಾಗಿದೆ








ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ