ಬೆಂಬಲಿಗರು

ಭಾನುವಾರ, ಮಾರ್ಚ್ 1, 2015

ಸೌದಿಯ ಎರಡನೇ ರಾತ್ರಿ

ಸೌದಿಯಲ್ಲಿ ಎರಡನೇ ದಿನ .ಆಶ್ರಯದಾತ ರ  ಮನೆಯಿಂದ ಎದ್ದು  ಟ್ಯಾಕ್ಸಿ ಹಿಡಿದು ಅರೋಗ್ಯ ಇಲಾಖೆಯ  ಮುದಿರಿಯಾ (ಆಫೀಸ್) ಕ್ಕೆ ಹೋಗಿ ರಿಪೋರ್ಟ್ ಮಡಿ ಕೊಂಡೆ .ಅಲ್ಲಿ ಇಂಗ್ಲಿಷ್ ಭಾಷೆ ಬರುವವರು ಕಮ್ಮಿ .ಹೆಚ್ಚಿನವರೂ ಸೌದಿ ಅರಬರು .ಕೆಲವರು ಇಜಿಪ್ತಿಯನ್ನರು ಇದ್ದಾರೆ .ಅವರಿಗೆ ಇಂಗ್ಲಿಷ್ ಬರುವುದು .ಈ ಇಜಿಪ್ತಿಯನ್ನರು ಸುಂದರಾ೦ಗರು .ಅವರಿಗೆ ಹಿಂದಿ ಸಿನೆಮಾ ,ಅಮಿತಾಭ್ ಬಚ್ಚನ್ ಅಂದರೆ ಬಲು ಇಷ್ಟ .ಆದರೆ ಬಹಳ ಮಂದಿ ಅವರನ್ನು ನಯ ವಂಚಕರೆಂದು ಕರೆಯುತ್ತಾರೆ..ಇದು ಎಷ್ಟು ಸುಳ್ಳೋ ನಿಜವೋ ತಿಳಿಯೆ.ಮುದಿರಿಯಾದಲ್ಲಿ ನಮ್ಮ ಪಾಸ್ಪೋರ್ಟ್ ತೆಗೆದು ಇಟ್ಟು ಕೊಂಡು
ನಮಗೆ ಇಕಾಮಾ ಎಂಬ ಕೆಲಸ ಪರವಾನಿಗೆ ಕೊಡುತ್ತಾರೆ .ಈ ದಾಖಲೆ ನಮ್ಮ ಕೈಯ್ಯಲ್ಲಿ ಇರ ಬೇಕು .ಏನು ಆಫೀಸ್ ಬ್ಯಾಂಕ್ ಕೆಲಸ ಇದ್ದರೂ ಈ ದಾಖಲೆ ಕೇಳುವರು .ಸೌದಿಯಲ್ಲಿ ಏನು ಕೆಲಸ ,ಉದ್ಯೋಗ ,ವ್ಯಾಪಾರ ಮಾಡುವುದಿದ್ದರೂ ನಮಗೆ ಒಬ್ಬ
ಸೌದಿ ಉದ್ಯೋಗದಾತ ,ಅಥವಾ ಆಶ್ರಯದಾತ ಬೇಕು .ಅವನಿಗೆ ಕಫೀಲ್ ಎನ್ನುವರು .ನನ್ನ ಕಫೀಲ್ ಸೌದಿ ಸರಕಾರ .ಕೆಲಸಕ್ಕೆ ಹೋದವರ ಪಾಸ್ಪೋರ್ಟ್ ಕಫೀಲ್ ನ ಕೈಯ್ಯಲ್ಲಿ ಇರುತ್ತದೆ .ಅಂದರೆ ನಮ್ಮ ಜುಟ್ಟು ಅವರ ಕೈಯ್ಯಲ್ಲಿ .

                        ಈಗ ನಾನು ತಿಂಗಳು ತಿಂಗಳು ಸಂಬಳ ಬರುವ ವೈಭವೀಕೃತ   ಜೀತದಾಳು.ನಮ್ಮ ದೇಶದಿಂದ ಖಾಸಗಿ  ಹೋದ  ಎಸ್ಟೋ ಮಂದಿ  ತಮ್ಮ ಉದ್ಯೋಗದಾತರ  ಶೋಷಣೆ ತಡೆಯಲಾರದೆ  ತಪ್ಪಿಸಿ ಓಡಿ ಹೋಗುತ್ತಾರೆ .ಆದರೆ ಅವರ ಪಾಸ್ಪೋರ್ಟ್ ಕಫೀಲ್ ಬಾಳಿ ಇರುವುದರಿಂದ ಮರಳಿ ದೇಶಕ್ಕೆ ಬರುವುದು ಅಸಾದ್ಯ .ಅಂತಹವರು  ಸೌದಿಯಲ್ಲಿಯೇ  ದೂರದ  ಊರುಗಳಿಗೆ ಓಡಿ ಹೋಗಿ  ತಮ್ಮ ಮಿತ್ರರ ಸಹಾಯದಿಂದ ಅನದಿಕೃತ ವಾಗಿ  ಬೇರೆ ಕಡೆ ಕೆಲಸ ಮಾಡುತ್ತಾರೆ .ಇವರ  ದೌರ್ಬಲ್ಯ ಅರಿತ  ಆ ಊರಿನ  ಧಣಿಗಳು ಅವರನ್ನು ಮತ್ತೂ ಶೋಷಣೆ ಮಾಡುವರು .ಇಂತಹವರು ಸಿಕ್ಕಿ ಬಿದ್ದರೆ ಜೈಲಿನಲ್ಲಿ  ಕೊಳೆಯುವರು .ಇಲ್ಲದಿದ್ದರೆ ಇವರೇ ಪೊಲೀಸರ ಕೈಗೆ ಬಿದ್ದು ತಾವು ಹಜ್ ಯಾತ್ರೆಗೆ ಬಂದವರು ಹಿಂಡು ಅಂಡಳೆದು  ಬೆಂಡಾಗಿ ಬಸವಳಿದು ನೀವೇ ಶರಣು ಎಂದು ಬಂದೆವು ಎಂದು ತಾವೇ ಬಂದನಕ್ಕೆ ಒಳಗಾಗುವರು .ಇವರನ್ನು ನಮ್ಮ ಎಂಬಸಿ ಯವರು ಎಕ್ಸಿಟ್ ವೀಸಾ ಕೊಟ್ಟು ವಾಪಸ್ಸು ಕಳಿಸುವರು.ಈ ನಾಟಕ ಹಲವು ವರ್ಷಗಳಿಂದ ನಡೆದು ಬಂದಿದೆ.
ಇದಲ್ಲದೆ ಕಾನೂನು ಬದ್ದವಾಗಿ ಕೆಲಸ ಮಾಡಿ  ಕೊನೆಗೆ ಮರಳುವಾಗಲೂ ಉದ್ಯೋಗದಾತ  ಪಾಸ್ಪೋರ್ಟ್ ನ್ನು  ವಿಮಾನ ನಿಲ್ದಾಣದಲ್ಲಿ ಒಳ ಹೊಕ್ಕ ಮೇಲೆ ನಮ್ಮ ಕೈಗೆ ಕೊಡುವನು .ಎಲ್ಲಿಯಾದರೂ ವಾಪಸು ಬಂದರೆ ಎಂಬ ಭಯ !

       ನನ್ನನ್ನ್ನು ಘರಿಯಾ ಬನಿ ಮಲಿಕ್ ಎಂಬ ಕಡೆ ಪೋಸ್ಟ್ ಮಾಡಿದ್ದರು .ಅಲ್ಲಿಯ ಜನ ಒಳ್ಳೆಯವೆಂದು ನನ್ನ ಮಿತ್ರರಿಂದ  ಕೇಳಿದ್ದರಿಂದ ಸಂತೋಷ ಆಯಿತು .ಉಪವಾಸ ಸಮಯ ಅದ್ದರಿಂದ ರಾತ್ರಿ ಉಪವಾಸ ಬಿಟ್ಟ ನಂತರ ಮಿನಿಸ್ಟ್ರಿ ಕಾರ್ ನನ್ನನ್ನು ಅಲ್ಲಿಗೆ ಒಯ್ಯುವುದು ಎಂದು ನಾನಿದ್ದ ಮನೆಯ ವಿಳಾಸ ತಗೆದು ಕೊಂಡು ಕಳುಹಿಸಿದರು .

ತಾಯಿಫ್ ಸುಂದರ ನಗರ ,ತಂಪು ಹವೆ ,ಊರು ತುಂಬಾ ಉದ್ಯಾನ ,ಮರಗಳು .ಮರುಭೂಮಿ ಛಾಯೆ ಇಲ್ಲ .ಇಲ್ಲೇ ರಾಜನ  ಬೇಸಿಗೆ ಅರಮನೆ ಇದೆ .ಇಲ್ಲಿಂದ ಮಕ್ಕಾ ಸಮೀಪ .ಟ್ಯಾಕ್ಸಿ ಸ್ಟಾಂಡ್ ನಲ್ಲಿ  ಮಕ್ಕಾ ಮಕ್ಕಾ ಎಂದು ಪ್ರಯಾಣಿಕರನ್ನು  ಆಕರ್ಷಿಸಲು  ಯತ್ನಿಸುತ್ತಿರುವ ಅರಬ್ಬೀ ಟ್ಯಾಕ್ಸಿ ಚಾಲಕರು .ಅಲ್ಲಿ ಮಕ್ಕಾ ಯಾತ್ರೆಗೆ ಸಿದ್ದರಾಗಿ  ಬರಿ ಮಯ್ಯಲ್ಲಿ ಬಿಳಿ ಶಾಲು ಹೊಡೆದು ನಿಂತಿರುವ ಶ್ವೇತ ವಸನಿ ಯಾತ್ರಿಗಳು .ನೋಡಲು ಕಣ್ಣಿಗೆ ಹಬ್ಬ .

                       ನನ್ನ ವಾಹನದ ಚಾಲಕ ರಾತ್ರಿ ಉಪವಾಸ ಮುಗಿಸಿ ,ಊಟ ಮಾಡಿ ಒಂಬತ್ತು ಗಂಟೆ ಗೆ ನನ್ನನ್ನು ಮತ್ತು ತುರಬಾ ಎಂಬ ನಗರದ ಅಸ್ಪತ್ರೆಗೆ ಪೋಸ್ಟ್ ಆಗಿದ್ದ ತಮಿಳ್ ವೈದ್ಯರನ್ನು ಕೂಡಿಸಿ ಕೊಂಡು ಹೊರಟ.ಅರಬರು ಮೂಲತಃ ಮಾತುಗಾರರು .ನಮ್ಮಲ್ಲಿ ಮಾತುಕತೆಗೆ ಯತ್ನಿಸಿ ವಿಫಲನಾದ .ನಾನು ಅಂದು ಕೊಂಡಿದ್ದೆ ತುರಬಾ ನಗರ  ಘರಿಯಾ ಕ್ಕೆ  ಹೋಗುವ ದಾರಿಯಲ್ಲಿ ಇರಬೇಕು ಎಂದು ,ಆದರೆ ಅದು ಬೇರೇ ದಿಕ್ಕಿನಲ್ಲಿ ೩೫೦ ಕಿ ಮೀ ದೂರ ವಿರುವ ನಗರ , ಮೊದಲು
ಅಲ್ಲಿಗೆ ತೆರಳಿ ಆಮೇಲೆ ೪೦೦ ಕಿ ಮೀ ದೂರದ ಘರಿಯಾ ಪ್ರಯಾಣ .ರಾತ್ರಿ ಹೊತ್ತು ,ಚಳಿಗಾಲ ,ಮರುಭೂಮಿ ರಸ್ತೆ . ಆಗಾಗ್ಗೆ  ನಗರದ  ದೀಪಗಳ ಬೆಳಕು .ನೀವೇ ಊಹಿಸಿ ನನ್ನ ಸ್ತಿತಿ .ಡ್ರೈವರ್ ಗಾಡಿಯನ್ನು ೧೫೦ -೧೮೦ ಕಿಮೀ ವೇಗದಲ್ಲಿ ಓಡಿಸುತ್ತಿದ್ದ .ವೇಗ ಮಿತಿ  ಮೀರಿದೊಡನೆ ಬೀಪ್ ಬರುತ್ತಿತ್ತು .ಸೌದಿಯಲ್ಲಿ ಕೆಲಸ ಮಾಡಿದ  ಮಹಿಳಾ  ವೈದ್ಯೆ ಡಾ  ಕ್ವಂಟಾ ಅಹ್ಮದ ಅವರ
ಇನ್ ದಿ ಲ್ಯಾಂಡ್ ಆಫ್ ಇನ್ವಿಸಿಬಲ್ ವುಮನ್ ಎಂಬ ಪುಸ್ತಕದಲ್ಲಿ  ಅರೇಬಿಯಾದ ಡ್ರೈವರ್ ಗಳ ಬಗ್ಗೆ ಹೀಗೆ ಬರೆದಿದ್ದಾರೆ.'ರಿಯಾದ್ ನಲ್ಲಿ  ವಾಹನ ಚಾಲನೆ ಮಾರಣಾಂತಿಕ .ಕ್ರಿಯಾತ್ಮಕ ಮತ್ತು ಲೈಂಗಿಕ ಹೊರದಾರಿಗಳಿಲ್ಲದ ಪುರುಷ ಹಾರ್ಮೋನ್ ಗಳಿಂದ ತುಂಬಿ ತುಳುಕುತ್ತಿರುವ ಅಲ್ಲಿಯ ಗಂಡಸರಿಗೆ ವಾಹನ ವೇಗೋತ್ಕರ್ಷ ವೇ ಉಳಿದ ದಾರಿ "ನಾನು
ಸೌದಿಯಲ್ಲಿ ಇದ್ದಷ್ಟು ಕಾಲ ಈ ವಾಕ್ಯದ ಸತ್ಯತೆ ಮನ ಗಂಡಿದ್ದೇನೆ .ಅಲ್ಲಿಯ ಯುವಕರು ತಮಗೆ ಆಲ್ ಅರೇಬಿಯ ಲೈಸನ್ಸ್ ಇದೆಯೆಂದು ರೋಡು ಬಿಟ್ಟು ಪಾದಚಾರಿಗಳ  ಕಾಲು ದಾರಿಗಳಲ್ಲೂ ವಾಹನ ಏರಿಸಿ ಚಲಿಸುವರು .ಈಗ ಈ ರೋಗ ನಮ್ಮಲ್ಲೂ ಆರಂಭವಾಗಿದೆ .

ಅಂತೂ ಇಂತೂ ಬೆಳಿಗ್ಗೆ  ೪ ಗಂಟೆಗೆ ನಾನು ಘರಿಯಾ ಆಸ್ಪತ್ರೆ ತಲುಪಿದೆ .ಅಲ್ಲಿ ಡ್ಯೂಟಿ ಯಲ್ಲಿದ್ದ ಸುಡಾನಿ ವೈದ್ಯರು ನನಗೆ ವಿಶ್ರಮಿಸಲು ಒಂದು ಕೊಟಡಿ ಒದಗಿಸಿದರು ,ಹಾಸಿಗೆಗೆ ಮೈ ತಾಕಿದ ಒಡನೆ ನಿದ್ದೆ ಆವರಿಸಿತು

1 ಕಾಮೆಂಟ್‌:

  1. Thanks for the close view in to the way of life in land of sands.
    As far as I am concerned personally I never visited any arabic country.
    It is surprising to note even the Saudi Government also treats Doctors like slaves!

    From,. Vishwa(D.Vishweshwara Bhat)

    ಪ್ರತ್ಯುತ್ತರಅಳಿಸಿ