ಬೆಂಬಲಿಗರು

ಮಂಗಳವಾರ, ಮಾರ್ಚ್ 3, 2015

ಒಂದು ಸೌದಿ ಅರೇಬಿಯಾ ದ ಆಸ್ಪತ್ರೆ ಯ ಕಾರ್ಯ ವೈಖರಿ

ಸೌದಿ ಅರೇಬಿಯ ಶ್ರೀಮಂತ ದೇಶ .ಅಲ್ಲಿಯ ಅರಸರು ಪ್ರಜೆಗಳ ಕ್ಷೇಮಕ್ಕಾಗಿ ಆಸ್ಪತ್ರೆಗಳನ್ನು ಸ್ಥಾಪಿಸಿದ್ದಾರೆ .ದೊಡ್ಡ ದೇಶವಾದ್ದರಿಂದ ಸ್ಥಳೀಯ ಸಿಬ್ಬಂದಿ ಸಾಕಾಗುವುದಿಲ್ಲ ಎಂದು ಭಾರತ  ಪಾಕಿಸ್ತಾನ ಬಾಂಗ್ಲಾದೇಶ ,ಫಿಲ್ಲ್ಲಿ ಪೈನ್ ,ಈಜಿಪ್ಟ್ ,ಸೂಡಾನ್ ,ಸಿರಿಯಾ  ಮತ್ತು ಪಾಶ್ಚಾತ್ಯ ದೇಶಗಳಿಂದ ಸಿಬ್ಬಂದಿ ನೇಮಕ ಮಾಡಿ ಕೊಳ್ಳುತ್ತಾರೆ .ಇಲ್ಲಿ ಒಂದು ವಿಶೇಷ ಇದೆ .ಒಂದೇ ಕೆಲಸಕ್ಕೆ
ಅಮೇರಿಕಾ ಮತ್ತು ಬ್ರಿಟಿಶ್ ನಾಗರಿಕರಿಗೆ ಮತ್ತು ಅಲ್ಲಿಯ ಪದವಿ ಇರುವವರಿಗೆ ಅತೀ ಹೆಚ್ಚು ಸಂಬಳ .ಮತ್ತೆ ಸೌದೀ ನಾಗರಿಕರು ,ಕೊನೆ ಪದರದಲ್ಲಿ ಭಾರತ ಮತ್ತು ಆಫ್ರಿಕಾ ಭೂ ಖಂಡದವರು .ಮೇಲ್ಪದರದ ಸಿಬ್ಬಂದಿ ಮಹಾನಗರಗಳ ದೊಡ್ಡ ಆಸ್ಪತ್ರೆಗಳನ್ನು ಆರಿಸುತ್ತಾರೆ .ನಮಗೆ ಆಯ್ಕೆ ಕಡಿಮೆ
ಬೆಗ್ಗರ್ಸ್ ಕ್ಯಾನ್ನಾಟ್ ಬಿ ಚೂಸೆರ್ಸ್ ಎಂಬಂತೆ ಪಾಲಿಗೆ ಬಂದುದೇ ಪಂಚಾಮೃತ ಎಂದು ಕೊಳ್ಳಬೇಕು.
     ನಾನು ಇದ್ದುದು ಮಧ್ಯಮ ಸ್ತರ ದ ಆಸ್ಪತ್ರೆ .ಇಲ್ಲಿ  ಪಿಸಿಶಿಯನ್ ,ಸರ್ಜನ್ ,ಮಕ್ಕಳ ತಜ್ಞ ಮತ್ತು ಸ್ತ್ರೀರೋಗ ತಜ್ಞರೂ ಮತ್ತು ಸಾಮಾನ್ಯ ಕರ್ತವ್ಯ ವೈದ್ಯರು ಇರುತ್ತಾರೆ.ಆಸ್ಪತ್ರೆಯ ಮುಖ್ಯಾಧಿಕಾರಿ ವೈದ್ಯರಲ್ಲ (ಏಕೆಂದರೆ ಸಾಕಷ್ಟು ಸೌದಿ ವೈದ್ಯರು ಸಣ್ಣ ನಗರಗಳಿಗೆ ಬರುವುದಿಲ್ಲ ).ನಾನಿರುವ ಕಡೆ ಫರ್ಮಸಿಸ್ಟ್ ಒಬ್ಬಾತ ಆ ಹುದ್ದೆ ಯಲ್ಲಿದ್ದ . ಅವನು ಮುಖ್ಯ ಮುದೀರ್ (ಆಫೀಸರ್).ಅವನಿಗೆ ಸಹಾಯಕ್ಕೆ ಕಾಲಿಗೆ ಒಬ್ಬ ಕೈಗೆ ಒಬ್ಬ ಮುದೀರ್ .ಈ ಸೌದಿ ಮುದೀರ್ ಗಳೆಲ್ಲಾ  ನರ್ಸ್ ,ಫರ್ಮಸಿಸ್ಟ್ ,ಓ ಟಿ ತಂತ್ರಜ್ನರೆಂದು ಕೆಲಸಕ್ಕೆ ಸೇರುವರು ,ಆ ಮೇಲೆ ಆಫೀಸ್ ಕೆಲಸಕ್ಕೆ ಹಾಕಿಸಿ ಕೊಂಡು ರೋಗಿಗಳ ಉಪಚಾರ ಹೊರ ದೇಶದಿಂದ ಬಂದಂತ ಸಿಬ್ಬಂದಿಗೆ ಬಿಡುವರು .ಈ ಮುದೀರ್ ಗಳು ಗಂಟೆಗೆ ಒಮ್ಮೆ ಚಹಾ ಹೀರುತ್ತ ಮೊಬೈಲ್ ನಲ್ಲಿ ಸಂಭಾಷಣಾ ನಿರತರಾಗಿ ದ್ದು  ಪರಿಚಯದ  ಅರಬರು ಬಂದಾಗ ಉಭಯ ಕುಶಲೋಪರಿ ಮಾಡುತ್ತಾ  ಸಮಯ ಕಳೆಯುತ್ತಾರೆ .ಇವರ ಕುಶಲೋಪರಿಯೂ ಧೀರ್ಘ ಕಾಲದ್ದು .ಕೆಫಾಲ್ ಹಾಲ್ (ಹೇಗಿದ್ದೀರಿ)ಎಂದು ಐದಾರು ಬಾರಿ ಆಲಿಂಗನ .ಅದಕ್ಕೆ ಕೊಯಿಸ್ ಎಂದು ಪ್ರತ್ಯಾಲಿಂಗನ.ಮತ್ತೆ ಎಲ್ಲಾ ದೇವರ ದಯದಿಂದ ಎಂಬ ಸ್ವಸ್ತಿ .
ನಮ್ಮ ಮುದೀರ್ ಗೆ ಮಸೀದಿಯಲ್ಲ್ಲಿ ಧರ್ಮ ಗುರುವಿನ ಕೆಲಸವೂ ಇತ್ತು .ಇದರ ಜೊತೆ ಓರ್ವ ಧಾರ್ಮಿಕ  ಪೋಲಿಸ್ ಇರುವರು ,ಆಸ್ಪತ್ರೆಯ ಎಲ್ಲಾ ವಿಚಾರಣಾ ಸಮಿತಿಗೂ ಆತ ಮುಖ್ಯಸ್ಥ .
ಒಂದು ದಿನ ಒಂದು ನಾರ ಕೋಟಲೆ (ಸರ್ಪ ಸುತ್ತು –ಹರ್ಪಿಸ್ ಜೊಸ್ಟರ್ )ರೋಗಿ ಬಂದಿದ್ದರು .ನಾನು ರೋಗ ಶಾಸ್ತ್ರದಲ್ಲಿ ಹೇಳಿರುವಂತೆ acyclovir ಮಾತ್ರೆ ೮೦೦ ಮಿ.ಗ್ರಾಂ ದಿನಕ್ಕೆ ೫ ಬಾರಿ ತೆಗೆದು ಕೊಳ್ಳುವಂತೆ ಬರೆದು ಕೊಟ್ಟೆ .ಸ್ವಲ್ಪ ಹೊತ್ತಿನಲ್ಲಿ ಮುಖ್ಯ ಮುದೀರ್ ನನ್ನನ್ನು ಕರೆಸಿದರು .ಇದೇನು ಇಷ್ಟು ಡೋಸ್ ಬರೆದಿದ್ದೀರಿ ,ಮೊದಲಿನವರು ೨೦೦ ಮಿ ಗ್ರಾಂ ಮೂರೂ ಹೊತ್ತು ಬರೆಯುತ್ತಿದ್ದರು ಎಂದು ಕೇಳಿದರು .ಆತ ವೈದ್ಯ ಅಲ್ಲ ಪ್ಹಾರ್ಮಾಸಿಸ್ಟ್ .ಅವನಿಗೆ ವಿವರಿಸಿ ಹೇಳಿದ್ದಲ್ಲದೆ ವೈದ್ಯ ಶಾಸ್ತ್ರದ ಪುಸ್ತಕವನ್ನೂ ತೋರಿಸಿದೆ .ಅವನಿಗೆ ಸಮಾಧಾನ ಆಗಲಿಲ್ಲ .ವಿಷಯ ಏನೆಂದರೆ ಅಲ್ಲಿ ಸರಕಾರೀ ಆಸ್ಪತ್ರೆಗಳ ಔಷಧಿ ಸರಬರಾಜು ನಮ್ಮ ದೇಶಕ್ಕಿಂತ ಉತ್ತಮ ಸ್ಥಿತಿಯಲ್ಲಿ ಇರಲಿಲ್ಲ .ಕೊಟ್ಟಂತೆ ಮಾಡಬೇಕು ಕೊಡ ಬಾರದು ಎಂಬ ಮನೋಭಾವ .

   ನಾನು ಸೌದಿಯಲ್ಲಿ ಇದ್ದಾಗಲೇ ವಿದೇಶಿಯರಿಗೆ ಸರಕಾರೀ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಷೇಧಿಸಿ  ಸುತ್ತೋಲೆ ಹೊರಡಿಸಿದ್ದರು .ದುರದೃಷ್ಟವಶಾತ್ ನಾನು ಇದ್ದ ಉರಿನಲ್ಲಿ ಖಾಸಗಿ ಆಸ್ಪತ್ರೆ ಇರಲಿಲ್ಲ .ನಮ್ಮ ದೇಶದಲ್ಲಿ ಅರ್ಥಿಕ ಅಡಚಣೆ ಇದ್ದರೂ ಸರಕಾರೀ ಆಸ್ಪತ್ರೆಯಲ್ಲಿ ಯಾರು ಬೇಕಾದರೂ ಉಚಿತ ಚಿಕಿತ್ಸೆ ಪಡೆಯ ಬಹುದು .ಅಲ್ಲಿ ಬಡ ಕಾರ್ಮಿಕರೂ ಬೇರೆ ದೇಶದವರಾಗಿದ್ದರೆ ದೇವರೇ ಗತಿ .ಅಲ್ಲಿ ಪ್ರತಿಯೊಬ್ಬ ಪ್ರಜೆಯೂ ಆಸ್ಪತ್ರೆಗೆ ಬರುವಾಗ ತಮ್ಮ ಗುರುತಿನ ಚೀಟಿ ಖಡ್ಡಾಯ ತರಬೇಕು .ನಮ್ಮಲ್ಲಿಯ ಆಧಾರ್ ಕಾರ್ಡ್ ನಂತೆ .ಅದಕ್ಕೆ ಅಲ್ಲಿ ಪತಾಕಾ ಎನ್ನುವರು .ಅದನ್ನು ತಂದರೆ ಮಾತ್ರ ಚಿಕಿತ್ಸೆ .ನಾವು ಬೇರೆ ದೇಶದ ಬಡ ರೋಗಿಗಳು ಬಂದಾಗ ನಾವು ನಮ್ಮ ಹೆಸರಿನಲ್ಲಿ (ನಾವು ಅರೋಗ್ಯ ಇಲಾಖೆಯವರೇ ಆಗಿದ್ದರಿಂದ ನಮಗೆ ಉಚಿತ ಚಿಕಿತ್ಸೆ ಲಭ್ಯವಿತ್ತು) ಔಷಧಿ ತೆಗೆದು ಕೊಡುತ್ತಿದ್ದೆವು .
ಅಲ್ಲಿಯ ಹಳ್ಳಿಯ ಮಂದಿ ಅನಕ್ಷರಸ್ತರು ,ಬದೂಸ್ ಎಂದು ಅವರನ್ನು ಕರೆಯುವರು .ಅವರು ತಮ್ಮ ಓ ಪಿ ಚೀಟಿ ಮರೆತು ಬಂದು ನೀವು ನನಗೆ ಹಳದಿ ಮಾತ್ರೆ ಕೊಟ್ಟಿದ್ದಿರಿ ,ಕೆಂಪು ಮಾತ್ರೆ ಕೊಟ್ಟಿದ್ದಿರಿ ,ದೊಡ್ಡ ಮಾತ್ರೆ ,ಸಣ್ಣ ಮಾತ್ರೆ ಇತ್ಯಾದಿ ಹೇಳುವರು .ಅದಕ್ಕೆ ಪರಿಹಾರ ರೂಪದಲ್ಲಿ ನನ್ನ ಓ ಪಿ ಯಲ್ಲಿ ಇದ್ದ ಮಲಯಾಳಿ ನರ್ಸ್ ಕೆಲವು ಸಾಮಾನ್ಯ ಉಪಯೋಗದಲ್ಲಿ ಇರುವ ಮಾತ್ರೆಗಳನ್ನು ಒಂದು ಕಾರ್ಡ್ ಬೋರ್ಡ್ ಗೆ ಅಂಟಿಸಿ ಇಟ್ಟು ಕೊoಡು ಹಿಂದಿನ ಬಾರಿ ಕೊಟ್ಟ ಮಾತ್ರೆ ಇದುವೇ ಎಂದು ತೋರಿಸಿ ಕೇಳುತ್ತಿದ್ದರು .ನನಗೆ ಇದನ್ನು ಕಂಡು ಕೊಡಲಿಯವನ ಕತೆ ನೆನಪಾಗುತ್ತಿತ್ತು .ಅರೇಬಿಕ್ ಭಾಷೆಯಲ್ಲಿಯೂ ಕನ್ನಡದಲ್ಲಿ ಇರುವಂತೆ ಪ್ರಾದೇಶಿಕ ಪ್ರಭೇದಗಳು ಇವೆ.ಜಗತ್ತಿನ ಎಲ್ಲಾ ದೇಶಗಳಲ್ಲಿ ಇರುವಂತೆ ಸಕ್ಕರೆ ಕಾಯಿಲೆ ,ಬಿ ಪಿ ,ಹೃದಯ ಕಾಯಿಲೆ ಹೊಸ ತಲೆಮಾರಿನ ಜನರಲ್ಲಿ ಜಾಸ್ತಿ .ಅವರ ಜೀವನ ಕ್ರಮವೂ ಅದಕ್ಕೆ ಕಾರಣ.
ಆಸ್ಪತ್ರೆಯ ನರ್ಸಿಂಗ್ ವಿಭಾಗ ದಲ್ಲಿ ಮಲಯಾಳಿಗಳು ಮತ್ತು ಫಿಲ್ಲಿ ಫಿನ್ ದೇಶದವರು ಜಾಸ್ತಿ .ಕ್ಲೀನಿಂಗ್ ವಿಭಾಗದಲ್ಲಿ ಬೆಂಗಾಲಿಗಳು .ಇದು ಗಲ್ಫ್ ನಾದ್ಯಂತ ಇರುವ ವಿಚಾರ .ಬೆಂಗಾಲಿಗಳೆಂದರೆ ಬಾಂಗ್ಲಾದೇಶದಿಂದ ಬಂದವರು .ಇವರು ಅತೀ ತುಳಿತಕ್ಕೆ ಒಳಗಾದವರು . ಬೆಂಗಾಲಿಗಳು ಎಂದರೆ ಕ್ಲೀನರ್ ಗಳು ಎಂಬ ಮನೋಭಾವ ಅರಬ್ಬೀ ಜನರಲ್ಲಿ ಇದೆ .
ಆಸ್ಪತ್ರೆಗೆ ಕೆಲವೊಮ್ಮೆ ಅಪರಾಧ ಮಾಡಿ ಚಡಿಯೇಟು ಶಿಕ್ಷೆಗೆ ಒಳಗಾದವರನ್ನು ನಮ್ಮ ಬಳಿ ಫಿಟ್ನೆಸ್ ಗೆ ಪೋಲಿಸ್ ಕರೆತರುತ್ತಿದ್ದರು .ನಾವು ಫಿಟ್ ಎಂದು ಬರೆದರೆ ಮಾತ್ರ ಅವರಿಗೆ ಬಹಿರಂಗ ಏಟು ಶಿಕ್ಷೆ .ಅರಬ್ ಕೈದಿಗಳು ಯಾವುದೇ ಮುಲಾಜ್ ಇಲ್ಲದೆ ಫಿಟ್ ಎಂದು ಬರೆಯಿರಿ ಎಂದು ಹೇಳುತ್ತಿದ್ದರು .ಅವರಿಗೆ ಮೆಲ್ಲನೇ ಹೊಡೆದ ಶಾಸ್ತ್ರ ಮಾಡುತ್ತಿದ್ದರೋ ಏನೋ ?ನಮ್ಮವರು ಸಿಕ್ಕಿ ಬಿದ್ದರೆ ಗತಿ ಗೋವಿಂದ .

ಬಾಲಂಗೋಚಿ : ಬಿ ಜಿ ಎಲ್ ಸ್ವಾಮಿಯವರು ತಮ್ಮ ಕಾಲೇಜ್ ರಂಗ ಪುಸ್ತಕದಲ್ಲಿ ಎಟೆ೦ಡರ್ ಗಳು ತಮಗೆ ಕ್ಲಾಸ್ ಫೋರ್ ಆಫೀಸರ್ ಎಂದು ಕರೆಯ ಬೇಕು ಎಂದು ಆಫೀಸರ್ ಆಗುವ ಆಸೆಯನ್ನು ಪ್ರಕಟಿಸಿದ ವಿಚಾರ ರಸವತ್ತಾಗಿ ಬರೆದಿದ್ದಾರೆ .ಹಾಗೆಯೇ ಸೌದಿಯಲ್ಲಿ ಎಲ್ಲ ಅರಬರೂ (ಕೆಲಸವಿಲ್ಲದ )ಆಫೀಸರ್ ಅಥವಾ ಮುದೀರ್ ಆಗಲು ಹವಣಿಸುತ್ತಾರೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ