ಬೆಂಬಲಿಗರು

ಬುಧವಾರ, ಏಪ್ರಿಲ್ 3, 2013

ಪಂಜೆ ಮಂಗೇಶರಾಯರು

೨೦ ನೆ ಶತಮಾನದಲ್ಲಿ ಎಲ್ಲ ಅಡೆತಡೆಗಳ ನಡುವೆಯೂ ಸಮೃದ್ದ ಹಾಗೂ ವೈವಿಧ್ಯ ಮಯ ಸಾಹಿತ್ಯ ಸೃಷ್ಟಿ ಮಾಡಿದವರು
ಪಂಜೆಯವರು.ಬಾಲಸಾಹಿತ್ಯ ಸಣ್ಣ ಕತೆ ಕವಿತೆ ಲಲಿತ ಪ್ರಬಂಧ ಸಂಶೋಧನಾ ಸಾಹಿತ್ಯ ಎಲ್ಲ ವಿಭಾಗಗಳಲ್ಲಿ ಕೈಯಾಡಿಸಿದವರು.ಕನ್ನಡದಲ್ಲಿ ಸಣ್ಣ ಕಥೆಗಳ ಜನಕ ಎಂಬ ಕೀರ್ತಿಯೂ ಅವರಿಗಿದೆ.ಈ ವಿಚಾರದಲ್ಲಿ ತಮಗೂ ಪಂಜೆಯವರಿಗೂ ಆದ ಸಂಭಾಷಣೆಯನ್ನು ಮಾಸ್ತಿಯವರು ಒಂದು ಕಡೆ ಹೇಳಿದ್ದಾರೆ.ಕವಿಶಿಷ್ಯ ಎಂಬ ಕಾವ್ಯನಾಮ ಇಟ್ಟುಕೊಂಡುದು ಅವರಲ್ಲಿದ್ದ ವಿನಯದ ದ್ಯೋತಕ.
 
ರಾಷ್ಟ್ರಕವಿ ಕುವೆಂಪು ಪಂಜೆಯವರ ಬಗ್ಗೆ ಬರೆದ  ಕವನ  ಹೀಗಿದೆ
 
ಹಾಲು ಸಕ್ಕರೆ ಸೇರಿ ನೀವಾದಿರಾಚಾರ್ಯ
ನಡೆಯ ಮಡಿಯಲಿ ನುಡಿಯ ಸವಿಯಲ್ಲಿ ,ನಿಮ್ಮ ಬಗೆ
ಹಸುಳೆ ನಗೆ;ನಿಮ್ಮ ಕೆಳೆಯೊಲುಮೆ ಹಗೆತನಕೆ ಹಗೆ
ಕಪ್ಪುರಕೆ ಕಿಡಿ ಮತ್ತೆ ಸತ್ಯಕ್ಕೆ ಸೌಂದರ್ಯ
ಸಂಗಮಿಸಿದಂತೆ ರಂಜಿಸಿದೆ ಜೀವನ ಸೂರ್ಯ
ನಿಮ್ಮದೆಮ್ಮೆಯ ನುಡಿಯ ಗುಡಿಗೆ ಮಂಗಳ ಕಾಂತಿ
ಮತ್ತೆ ರಸಕಾರ್ಯಗಳಿಗುಪಮೆ ;ವೀಣಾತೂರ್ಯ!
ಕಚ್ಚಿದರೆ ಕಬ್ಬಾಗಿ ,ಹಿಂಡಿದರೆ ಜೇನಾಗಿ
ನಿಮ್ಮುತ್ತಮಿಕೆಯ ಮೆರೆದಿರಯ್ಯ;ಚಪ್ಪಾಳೆ
ಮುಗುದಾರವನಿಕ್ಕಿ ನಡೆಯಿಸಿದರದು  ಬಾಳೆ
ಹಿರಿಯ ಸಿರಿಚೇತನಕೆ ಕೀರ್ತಿಲೋಭಕೆ ಬಾಗಿ
ಬಾಲ್ಬಂಡಿ ನೊಗಕೆ ಹೆಗಲಿತ್ತವರು ನೀವಲ್ಲ
ತೇರ್ಮಿಣಿಯ ಸೆಳೆದಿರಲ್ಲದೆ ಮತ್ತೆ ಮಣಿದಿಲ್ಲ.
 
೧೯೭೪ರಲ್ಲಿ ಪಂಜೆ ಶತಮಾನೋತ್ಸವ ಮಂಗಳೂರಿನಲ್ಲಿ ವಿಜೃಂಭಣೆ ಯಿಂದ ನಡೆಯಿತು.ಏರ್ಯ ಲಕ್ಷ್ಮಿನಾರಾಯಣ ಆಳ್ವ ,ಎಸ ವಿ ಪರಮೇಶ್ವರ ಭಟ್ಟ,ಕೀಕಾನ ರಾಮಚಂದ್ರ ರ ಹಿರಿತನದಲ್ಲಿ ಕನ್ನಡ ಸಾಹಿತ್ಯ ದಿಗ್ಗಜಗಳಾದ ಮಾಸ್ತಿ.ವಿ.ಸೀ.ರಾಜರತ್ನಂ ,ನಾಗೇ ಗೌಡ ಮುಂತಾದವರು ಉತ್ಸಾಹ ದಿಂದ ಪಾಲ್ಗೊಂಡಿದ್ದರು.ಪಂಜೆಯವರ ಸಮಗ್ರ ಬರಹ ಗಳ ಮೂರು ಸಂಪುಟಗಳಗಳನ್ನ್ನೂ ತೆಂಕಣಗಾಳಿ ಎಂಬ ಸ್ಮರಣ ಸಂಚಿಕೆ ಹೊರ ತಂದಿದ್ದರು.ಪಂಜೆ ಸಾಹಿತ್ಯದ ಬಗ್ಗೆ ವಿಚಾರ ಸಂಕಿರಣಗಳು ಇದ್ದವು. ನಾಗರ ಹಾವೇ ಪದ್ಯವನ್ನು ಆಗ ಆಳುತ್ತಿದ್ದ ಬ್ರಿಟಿಷರನ್ನು ಉದ್ದೇಶಿಸಿ ಬರೆದಿರಬಹುದೆಂದು ಒಬ್ಬರು (ಸ್ವಲ್ಪ ಉತ್ಪೇಕ್ಷೆ ಎನಿಸುತ್ತದೆ.) ಅಭಿಪ್ರಾಯ ಮಂಡಿಸಿದ್ದರು. ಅವರ ಮಗ  ರಾಮ ರಾಯರು ಈ
ಹಾಡನ್ನು ಅಭಿನಯ ಪೂರ್ವಕ ಪ್ರಸ್ತುತ ಪಡಿಸಿದ್ದು ಮನ ಮುಟ್ಟುವಂತಿತ್ತು.
 
ಅವರ ಅಡಿನಾ ಮರಿ ಕವನ
 
ಆಡಿನಾ ಮರೀ ,ಆಡ ಬಾರಲೆ!
ಒಡ ಬೇಡಲೆ ನೋಡಿ ನನ್ನನು!
ಅರಳಿ ಎಲೆಯನೂ ,ಹಲಸಿನೆಲೆಯನೂ,
ಹುರುಳಿ ಕಡಲೆಯಾ,ಕಲಸಿ ಕೊಡುವೆನು .
ಮಾತನಾಡದೇ ,ನನ್ನ ನೋಡದೆ ,
ಏತಕ್ಹೋಗುವೆ ಆಡಿನಾ ಮರಿ.

ಪಾಣಿಪತದ ಮೂರನೆಯಾ ಯುಧ್ಧ ಎಂಬ ಯಕ್ಷಗಾನ ಪ್ರಸಂಗದ ಕೊನೆಯ ನಾಲ್ಕು ಪ್ಯಾರಾಗಳು ಹೀಗಿವೆ
ನೆತ್ತರ ಮೂಲಕ ಧರ್ಮವನು-ಹಾ
ಬಿತ್ತರಿಸುವ ದುಷ್ಕರ್ಮವನು
ಎತ್ತಲು ಮುಂದಕೆ ಸಲ್ಲದು ಎಂಬೀ
ಉತ್ತಮ ಬೋಧವ ತಂದವಗೆ-

ಬಲವಂತರು ತಮ್ಮಯ ಬಲದೆ ದು
ರ್ಬಲರನು ಕಾಳಗದಲಿ ಕೊಲದೆ,
ಒಲಿದವರಾತ್ಮೊನ್ನತಿಯನು ಗಳಿ
ಸಲು ಬೇಕೆನ್ನುತ ಸಾರುವಗೆ-
ಹಿಂದು,ಮುಸಲ್ಮಾನ ,ಸುನ್ನಿ,ಶೇಕ್,ಜೈನ,
ಬಂದ ಫಾರಸಿ ,ಕ್ರಿಶ್ಚನ,ಸೀಖ್,
ಇಂದಾ ಭಾರತ ವರ್ಷದ ನಡೆಯಲಿ
ಒಂದಾಗಿರಿಸುವ ಮಹಿಮನಿಗೆ
ಸನ್ನುತ ಜನತೆ ಪ್ರಮುಖವೆಂದು-ರಾ
ಷ್ಟೋನ್ನತಿಯೇ ಇಹಸುಖವೆಂದು ,
ಇನ್ನೀ ಮಂತ್ರವನೆಲ್ಲರು ಪಠಿಸಲಿ
ಎನ್ನುತ ಉಪದೇಶಿಸಿದವಗೆ-
ಅವರ ತೆಂಕಣ ಗಾಳಿ ,ಹುತ್ತರಿ ಹಾಡು ಬಹಳ ಜನಪ್ರಿಯ .ಹುತ್ತರಿ ಹಾಡಂತೂ ಕೊಡಗರ ನಾಡ ಗೀತೆಯೆಂದೆ ಹೇಳಬಹುದು. 
ಪಂಜೆಯವರ ಹಾಸ್ಯ ಪ್ರಜ್ಞೆ 

ಅವರ ಹಾಸ್ಯ ಪ್ರಜ್ಞೆ ಪ್ರಸಿದ್ಧವಾದುದುದು.ಅವರ ಪ್ರಬಂಧ ಮತ್ತು ಕಥೆಗಳಲ್ಲಿ ತಿಳಿ ಹಾಸ್ಯದ ಮೆರುಗು ಕಾಣ ಬಹುದು.ಡಿ ವಿ ಜಿ ಯವರು ಈ ಮಗ್ಗುಲನ್ನು ಚೆನ್ನಾಗಿ ಚಿತ್ರಿಸಿದ್ದಾರೆ."ಒಮ್ಮೆ ಕೆಲಸದ ಮೇಲೆ ಮೈಸೂರಿಗೆ ಹೋಗಿದ್ದ  ಪಂಜೆಯವರನ್ನು ಪರಿಚಯದವರು ಒಬ್ಬರು  ಏನು ಬರೋಣವಾಯಿತು ಎಂದು ಕೇಳಿದ್ದಕ್ಕೆ ಪಂಜೆಯವರು ಒಂದು ಚೇಂಜಿಗೆ ಎನ್ನುತಾರೆ .ಅದಕ್ಕೆ ಅವರು ಶ್ರೀಮತಿಯವರನ್ನು ಕರಕೊಂಡು ಬರಲಿಲ್ಲವೇ ಎಂದು ವಿಚಾರಿಸುತ್ತಾರೆ.  ಇಲ್ಲ ನಾನು ಹೇಳಲಿಲ್ಲವೇ ಬಂದದ್ದು ಚೇ೦ಜಿಗಾಗಿ  ಎನ್ನುತ್ತಾರೆ ಪಂಜೆ.
ಇನ್ನೊಮ್ಮೆ ಬಾಲ ಸಾಹಿತ್ಯ ವಟಾರದಲ್ಲಿ ಉಲ್ಲಾಳ ಮಂಗೇಶ ರಾಯರು,ಉಗ್ರಾಣ ಮಂಗೇಶ ರಾಯರು ಮತ್ತು ತನ್ನನ್ನು ತೋರಿಸುತ್ತಾ ನೋಡಿ ಎಷ್ಟು ಮಂಗಗಳು ,ಇದರಿಂದಲೇ ಮಂಗಳೂರು ಎಂಬ ಹೆಸರು ಎಂದು ನಗೆಯಾಡುತ್ತಾರೆ.
ಇನ್ನೊಮ್ಮೆ ವಿದ್ವಾನ್ ಮುಳಿಯ ತಿಮ್ಮಪ್ಪಯ್ಯನವರನ್ನು ಪರಿಚಯಿಸುತ್ತಾ ಇವರೇ ಮುಳಿಯ ತಿಮ್ಮಪ್ಪಯ್ಯ ಮುಳಿಯದ ತಿಮ್ಮಪ್ಪಯ ಎಂದರು."

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ