ಬೆಂಬಲಿಗರು

ಮಂಗಳವಾರ, ಏಪ್ರಿಲ್ 30, 2013

ಇನ್ಸ್ಪೆಕ್ಷನ್ ಎಂಬ ಪ್ರಹಸನವು

  ನಮ್ಮ  ದೇಶದಲ್ಲಿ  ಕೆಲಸ ಮಾಡುವವರಿಗಿಂತ  ಮೇಲ್ವಿಚಾರಕರು ಅಧಿಕ ,ನಮ್ಮ ದೇಶದಲ್ಲಿ ಇರುವಷ್ಟು ಸೂಪರ್ ವೈಸರ್ಗಳು
ಬೇರೆಲ್ಲೂ  ಕಾಣ ಸಿಗಲಾರರು.ಅದರಂತೆ ಇನ್ಸ್ಪೆಕ್ಟರುಗಳು.ಈ ಇನ್ಸ್ಪೆಕ್ಷನ್   ಮಕ್ಕಳಿದ್ದಾಗ ಶಾಲೆಗಳಲ್ಲಿ ನೋಡುತ್ತೇವೆ. ಶಾಲೆಗೆ
ಇನ್ಸ್ಪೆಕ್ಟರ್ ಬರುವ ದಿನ ವಿಶೇಷ ಒಪ್ಪ ಓರಣ , ಕುರ್ಚಿ ಬಿಟ್ಟು ಏಳದ ಅಧ್ಯಾಪಕರೂ ಅಂದು ಅತ್ತಿತ್ತ ಓಡಾಡುತ್ತ ,ಬೋರ್ಡ್ ನಲ್ಲಿ  ಚಿತ್ರ ಬರೆಯುತ್ತ ಪಾಠ ಮಾಡುತ್ತಾರೆ. ತರಗತಿಯಲ್ಲಿ ಜಾಣರಾದ ಮಕ್ಕಳನ್ನು ಮುಂದಿನ ಬೆಂಚಿನಲ್ಲಿ ಕುಳ್ಳಿರಿಸಿ  ಇನ್ಸ್ಪೆಕ್ಟರ್ ಅವರ ಪ್ರಶ್ನೆಗಳು ಅವರಿಗೆ ಬೀಳುವಂತೆ ಯತ್ನಿಸುತ್ತಾರೆ. ಇನ್ಸ್ಪೆಕ್ಟರ್  ಕೇಳಿದರೆ  ಹೀಗೆ  ಹೇಳ ಬೇಕು ಎಂದು ರಿಹರ್ಸಲ್ ನಡೆಯುವುದೂ ಉಂಟು. ಇದು  ನಾಟಕೀಯ ವಾಗಿ  ಕಂಡರೂ  ವಿದ್ಯಾರ್ಥಿಗಳು ಅಧ್ಯಾಪಕರಿಗೆ ತೊಂದರೆ ಆಗದಿರಲಿ ಎಂದು ಪ್ರಾರ್ಥಿಸುತ್ತಾರೆ.
ನಾನು ರೈಲ್ವೆಯ ವೈದ್ಯಕೀಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ರೈಲ್ವೆಯಲ್ಲಿ ಇರುವಷ್ಟು ಇನ್ಸ್ಪೆಕ್ಟರುಗಳು ಬೇರೆಲ್ಲೂ
ಇರರು.ರೈಲ್ವೆಯಲ್ಲಿ  ಜನರಲ್ ಮೇನೇಜರ್  ಇನ್ಸ್ಪೆಕ್ಸನ್ ಎಂದರೆ ಭಾರಿ  ದೊಡ್ಡದು ,ತಿಂಗಳು ಮೊದಲೇ ತಯಾರಿ ನಡೆಯುತ್ತದೆ.ಸುಣ್ಣ ಬಣ್ಣ ,ಕಸಗುಡಿಸುವಿಕೆ ಇತ್ಯಾದಿ ಜೋರಾಗಿ ನಡೆಯುತ್ತವೆ. ಜನರಲ್ ಮೇನೇಜರ್ ಎಂದರೆ  ಮೈಸೂರ್ ಮಹಾರಾಜರ ಮರ್ಜಿಗೆ ಸಮ. ಅವರ ಪ್ರಯಾಣಕ್ಕೆ  ಒಂದು ವಿಶೇಷ ಬೋಗಿ  ಇರುತ್ತದೆ,ಇದರಲ್ಲಿ  ಡ್ರಾಯಿಂಗ್  ರೂಮ್ ,ಅಡಿಗೆ ಕೋಣೆ  ಮತ್ತು ಬೆಡ್ ರೂಮ್ ಟಾಯ್ಲೆಟ್ ಇವೆ.ಇನ್ಸ್ಪೆಕ್ಷನ್ಗೆ  ಅವರ ಪಟಾಲಂ  ನಲ್ಲಿ  ೫೦ರಿಂದ ನೂರು ಜನ ಇರುತ್ತಾರೆ. ಪ್ರತ್ಯೇಕ ಟ್ರೈನ್ ; ಇನ್ಸ್ಪೆಕ್ಷನ್ ಸ್ಪೆಷಲ್ ಎಂದು ಹೆಸರು .ಆ ದಿನ ಎಲ್ಲ  ಸ್ಟೇಶನ್ ನ ಎಲ್ಲಾ ನಳ್ಳಿಗಳಲ್ಲಿ  ನೀರು ಬರುತ್ತದೆ.ಯಾವತ್ತೂ ಬೀಗ ಹಾಕಿರುತ್ತಿದ್ದ  ಸಾರ್ವಜನಿಕ  ಶೌಚಾಲಯಗಳು ಗಮ ಗಮಿಸುತ್ತ ತೆರೆದಿರುತ್ತವೆ. ಆ ಸೆಕ್ಷನ್ ನ ರೈಲುಗಳು ಸಮಯಕ್ಕೆ ಸರಿಯಾಗಿ ಬರುತ್ತವೆ , ಸಾಹೇಬರು ವೀಕ್ಷಣೆ ಗೆ  ಹೊರಟಾಗ ತಮ್ಮ ತಮ್ಮ ತಯಾರಿಗೆ ಅನುಗುಣವಾಗಿ  ಬೇರೆ ವಿಭಾಗ ದ  ಅಧಿಕಾರಿಗಳು ಅವರ ದೃಷ್ಟಿ ತಮ್ಮತ್ತ  ಹಾಯಲಿ ಅಥವಾ ಹಾಯದಿರಲಿ ಎಂದು  ದೇವರಲ್ಲಿ ಪ್ರಾರ್ಥಿಸುತ್ತಾರೆ.ಸಾಹೇಬರು ಎಲ್ಲೋ ಒಂದು ಕಡೆ ನಿಂತು ತಮಗೆ ಇಷ್ಟ ತೋರಿದವರಿಗೆ  ಸ್ಥಳದಲ್ಲಿ ಬಹುಮಾನ ಘೋಷಿಸುತ್ತಾರೆ. ಜನರಲ್ ಮೇನೇಜರ್ ಒಂದಿಗೆ ಅವರ ಪಿ ಎ, ಡಿ ಅರ ಎಂ ,,ಸಿ ಓ ಎಸ್, ಸಿ ಸಿ ಎಸ್,.ಸಿ.ಇ., ಸಿ ಅರ ಪಿ ಎಸ್  ಕಮಾಂಡೆಂಟ್.ಸಿ ಓ ಎಸ್,.ಸಿ ಇ ಇ , ಸಿ ಎಸ್ ಟಿ ಇ , ಸಿ ಎಂಓ ಇತ್ಯಾದಿ  ಹಿರಿಯ ಅಧಿಕಾರಿಗಳು ಮತ್ತವರ   ಕೆಳ ಅದಿಕಾರಿಗಳ  ಹಿಂಡು ಇರುತ್ತದೆ. ದೊಡ್ಡ  ಸಾಹೇಬರು  ದಾರಿಯಲ್ಲಿ ಏನಾದರೂ ಕೊರತೆ ಯಿದೆಯೇ ಎಂದು ಕೇಳಿದಾಗ  ಎಲ್ಲರೂ  ಇಲ್ಲ  ಎಲ್ಲವೂ ಖಾವಂದರ  ದಯೆಯಿಂದ ಸುಸೂತ್ರವಾಗಿದೆ ಎಂದು ಒಕ್ಕೊರಲಿನಿಂದ ನುಡಿಯುತ್ತಾರೆ.ಯಾರಾದರೂ ಅಧಿಕ  ಪ್ರಸಂಗಿ ಸತ್ಯ ನುಡಿದರೆ ನೀರಿಲ್ಲದ ಜಾಗಕ್ಕೆ ಎತ್ತ೦ಗಡಿಯಾದೀತು.ಇದೆ ತರಹ  ಇನ್ಸ್ಪೆಕ್ಷನ್  ಮಂತ್ರಿ ಗಳೂ ನಮ್ಮ ನಾಡಿನಲ್ಲಿ ನಡೆಸುತ್ತಾರೆ.ಅವರ ಎದುರು ಯಾರೂ  ನಿಜವನ್ನು ಬಹಿರಂಗವಾಗಿ  ನಿವೇದಿಸುವ ವಾತಾವರಣವೇ ಇರುವುದಿಲ್ಲ.ಭಟ್ಟಂಗಿಗಳು ಅವರನ್ನು ಸುತ್ತುವರಿದಿರುತ್ತಾರೆ.ನೈಜ ಚಿತ್ರಣ ಅವರಿಗೆ ಗೊತ್ತಿರುತ್ತದೆ. ಆದರೆ ಅವರಿಗೆ  ಯಥಾರ್ಥದಲ್ಲಿ  ಅದನ್ನು ನೋಡುವುದು ಬೇಕಾಗಿರುವುದಿಲ್ಲ.
ಬಹಳಷ್ಟು  ಅಧಿಕಾರಿಗಳು  ಮದುವೆ ಮುಂಜಿ ದೇವಸ್ಥಾನ ಸಂದರ್ಶನಗಳನ್ನು  ಇನ್ಸ್ಪೆಕ್ಷನ್ ಟೂರ್ ಆಗಿ ಮಾರ್ಪಡಿಸಿ

ಸ್ವಕಾರ್ಯಕ್ಕೆ ಭತ್ತೆ ಪಡೆಯುತ್ತಾರೆ.ಇಂತಹ ದೈವ ದರ್ಶನ ದೇವರಿಗೆ ಹಿತವೇ?

ಮೆಡಿಕಲ್ ಕಾಲೇಜುಗಳಲ್ಲಿ  ಮೆಡಿಕಲ್ ಕೌನ್ಸಿಲ್ ನವರ  ಇನ್ಸ್ಪೆಕ್ಸನ್ ಪ್ರಹಸನ ಇರುತ್ತದೆ.ಆ ದಿನ  ಕೂಲೆಜಿನಲ್ಲಿ(ಒಂದು ದಿನದ
ಮಟ್ಟಿಗೆ ) ಹೊಸ ಪ್ರೊಫೆಸ್ಸರ್ ಗಳು ,,ಉಪಾನ್ಯಾಸಕರು  ,ಹೆಚ್ಚೇಕೆ  ವಾರ್ಡ್ ಗಳಲ್ಲಿ  ಬಾಡಿಗೆ ರೋಗಿಗಳೂ ತುಂಬಿ
ಕೊಳ್ಳುತ್ತಾರೆ.ಮಾರನೆ ದಿನ ಅಲ್ಲಿ ಹೋದರೆ ಎಲ್ಲಾ ಖಾಲಿ .ಇದು ಇನ್ಸ್ಪೆಕ್ಷನ್ ಮಾಡುವವರಿಗೂ  ಮಾಡಿಸಿ ಕೊಳ್ಳುವವರಿಗೂ ಗೊತ್ತಿರುತ್ತದೆ.ಆದರೂ ಇನ್ಸ್ಪೆಕ್ಷನ್ ಎಂಬ ಪ್ರಹಸನ ನಡೆಯಲೇ ಬೇಕಲ್ಲ.

ಈ  ಇನ್ಸ್ಪೆಕ್ತರುಗಳೂ ಹಾಗೆ. ಕಾನೂನು ಸರಿಯಾಗಿ ಪಾಲಿಸುವವರನ್ನು ಕಂಡರೆ ಅವರಿಗೆ ಎಲ್ಲಿಲ್ಲದ ಕೋಪ.ಏಕೆಂದರೆ  ತಾವು
ಕಾಣಿಕೆ ಕೇಳಲು  ಒಳ್ಳೆಯ ಕಾರಣಕ್ಕೆ ತಡಕಾದಬೇಕಲ್ಲವೇ? ಕಾನೂನು ಕಟ್ಟಳೆ ಮೀರಿ ಹಲ್ಲು ಗಿಂಜುತ್ತ ಬರುವವರು ಅವರಿಗೆ
ಆಪ್ಯಾಯಮಾನ   ಕಾರಣ  ಗೊತ್ತಲ್ಲ ?





                                                              
                                  
                            

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ