ಬೆಂಬಲಿಗರು

ಭಾನುವಾರ, ಏಪ್ರಿಲ್ 4, 2021

ವಿಟ್ಲದ ಬಲ್ಲಾಳರು ಮತ್ತು ಪುತ್ತೂರಿನ ಸಾಹೇಬರು

     ವಿಟ್ಲದ ಬಲ್ಲಾಳರು ಮತ್ತು ಪುತ್ತೂರಿನ ಸಾಹೇಬರು 

ವಿಟ್ಲ ಬಸ್ ಸ್ಟಾಂಡ್ ನಲ್ಲಿ  ಬಲ್ಲಾಳ (ಅವರ ಹೆಸರು ತಿಳಿಯದು )ರೆಂಬವರು ಇದ್ದರು.ಅವರಿಗೆ ಒಂದು ಕಾಲು ಸ್ವಲ್ಪ ಊನ . ಕಾಲು ಎಳೆಯುತ್ತಾ ನಡೆಯುತ್ತಿದ್ದರು . ಮುಂಜಾನೆ  ನಿಲ್ದಾಣ ಪರಿಸರ ದಲ್ಲಿ   ವೃತ್ತ ಪತ್ರಿಕೆ ಮಾರುವರು .ನವ ಭಾರತ (ಮತ್ತೆ ಉದಯವಾಣಿ ),ಪ್ರಜಾವಾಣಿ ,ಸಂಯುಕ್ತ ಕರ್ನಾಟಕ ,ಡೆಕ್ಕನ್ ಹೆರಾಲ್ಡ್ ಎಂದು ರಾಗ ಬದ್ದವಾಗಿ ಕೂಗಿ ಕೊಂಡು ಬರುವರು . ಹಳ್ಳಿಯವರು ಬಂದರೆ ನವಭಾರತ ಅಥವಾ ಉದಯವಾಣಿ ಮುಂದೆ ಬರುವುದು .ಪೇಟೆ ಯ  ಪ್ಯಾಂಟ್ ಷರ್ಟ್ ನವರು ಬಂದರೆ ಇಂಗ್ಲಿಷ್ ಪತ್ರಿಕೆ ಚಾಚುವರು.

ಹನ್ನೊಂದು ಗಂಟೆ ಸುಮಾರಿಗೆ  ಕಿತ್ತಳೆ ಹಣ್ಣು ,ಮುಸುಂಬಿ ವ್ಯಾಪಾರ . ಲಾಟರೀ ಟಿಕೆಟ್ ಮಾರಾಟ ಕೂಡ ಮಾಡುವರು .

ಸುತ್ತು ಮುತ್ತಲಿನ ಬಹಳಷ್ಟು ಹಳ್ಳಿಯವರು ಅವರಿಗೆ ಪರಿಚಿತ . ನನ್ನನ್ನು ಕಂಡೊಡನೆ ಮಂಜೇಶ್ವರ ಬಸ್ ಬರೆಕ್ಕಷ್ಟೆ  ಅಣ್ಣಾ ಎಂದು ಹವ್ಯಕ ಭಾಷೆಯಲ್ಲಿ ಸೂಚನೆ ಕೊಡುವರು .ಇನ್ನು ಬಹಳ ಮಂದಿಗೆ ಅವರು ಸಂದೇಶ ವಾಹಕರು . ಈರ್ನ ಅಮ್ಮೇರು ನಾಯ್ಕೇರ್ನ ಅಂಗಡಿಗು ಪೋತೇರು.ಈರು ಮೂಳು ಕಾಪೋಡಿಗೆ ಎಂದು ಮಂಗಳೂರಿನಿಂದ ಬಂದಿಳಿದ  ಹುಡುಗನಿಗೆ ತಿಳಿಸುವರು .

ಅವರ ಸದ್ದಿಲ್ಲದ  ಜನ ಸೇವೆ ಯಾವಾಗಲೂ ಕಣ್ಮುಂದೆ ಬರುವುದು .

  ಇನ್ನೊಬ್ಬರು  ಪುತ್ತೂರಿನ ಹಳೇ ಬಸ್ ಸ್ಟಾಂಡ್ ನಲ್ಲಿ  ಹಣ್ಣು ,ಪೇಪರ್ ಮಾರುತ್ತಿದ್ದ ಸಾಹೇಬರು . ಮೊನ್ನೆ ಆಸ್ಪತ್ರೆಗೆ ಹೋಗುವಾಗ ಅರುಣಾ ಥಿಯೇಟರ್ ಬಳಿ ಅವರನ್ನು ಹೋಲುವ ಒಬ್ಬರು ವೃದ್ಧರನ್ನು ಕಂಡೆ . ಆದರೆ ವಾಹನ ದಟ್ಟಣೆ ಇದ್ದುದರಿಂದ ಅವರನ್ನು ವಿಚಾರಿಸಲು ಆಗಲಿಲ್ಲ . ಅವರೂ ನಮ್ಮಂತಹ ಹಳ್ಳಿಯವರಿಗೆ  ಮಾಹಿತಿ  ಕೊಡುವ  ಉಪಕಾರಿ . ದ್ರಾಕ್ಷಿ ದ್ರಾಕ್ಷಿ ,ಕಿತ್ತಳೆ ಹಣ್ಣು ಎಂದು ಬಸ್ ಸ್ಟಾಂಡ್ ಸುತ್ತುತ್ತ , ಆಗೊಮ್ಮೆ ಈಗೊಮ್ಮೆ ತಮ್ಮ ಸರಂಜಾಮು ಇದ್ದ ಜಾಗಕ್ಕೆ ಬರುತ್ತಾ ಇರುತ್ತಿದ್ದರು . ಹಳ್ಳಿಯವರು  ಉಬಾರುಗು ಬಸ್ ಏಪಣ್ಣ ,ಪಾಣಾಜೆ ಬಸ್ ಪೊಂಡಾ ಎಂದು ಅವರನ್ನು ವಿಚಾರಿಸುವರು .ಎಲ್ಲರಿಗೂ ಬೇಸರಿಸದೇ ಉತ್ತರಿಸುವರು .                                 ಹಳೇ ಬಸ್ ಸ್ಟಾಂಡ್ ,ಹೊಳ್ಳರ ಪೇಪರ್ ಅಂಗಡಿ ,ಎದುರಿನ ಹೂವಿನ ಮಾರುಕಟ್ಟೆ ,ಅಲ್ಲಿ ಏಕ ಕಾಲಕ್ಕೆ ಹೂ ಕಟ್ಟುತ್ತಲೂ ,ಮಾರುತ್ತಲೂ ಇದ್ದ (ಬಹುತೇಕ ಕ್ರಿಶ್ಚಿಯನ್ )ಸಹೋದರಿಯರು .ಉಪ್ಪಳದಿಂದ ಬುಟ್ಟಿಯಲ್ಲಿ ಮೀನು ತಂದು ಮಾರುತ್ತಿದ್ದ ಮತ್ಸ್ಯ ಗಂಧಿಯರು ,ಪಕ್ಕದಲ್ಲಿ ನಿಲ್ಲಿಸಿದ   ಬಡೆಕ್ಕಿಲ ಶಿವರಾಮ ಭಟ್ ಡಾಕ್ಟರ ಜೀಪ್ ಎಲ್ಲಾ ಈ ಸಾಹೇಬರ ನೆನಪಿನ ಜತೆ ಸಾಲಾಗಿ ಬರುತ್ತಿದೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ