ಬೆಂಬಲಿಗರು

ಭಾನುವಾರ, ಏಪ್ರಿಲ್ 4, 2021

ಕಣ್ಮರೆಯಾಗುತ್ತಿರುವ ಖಾಸಗಿ ಬಸ್ ಏಜೆಂಟರು

 ಕಣ್ಮರೆಯಾಗುತ್ತಿರುವ ಖಾಸಗಿ ಬಸ್ ಏಜೆಂಟರು

 

ವರ್ಷಗಳ ಹಿಂದೆ ಖಾಸಗಿ ಬಸ್ ಮಾತ್ರ ಇದ್ದವು .ಪೇಟೆ ಪಟ್ಟಣಗಲ್ಲಿ ಅವುಗಳಿಗೆ ಏಜೆಂಟ್ಸ್ ಇದ್ದರು . ಒಂದೊಂದು ಕಂಪನಿ ಗೆ  ಒಬ್ಬರೋ ಇಬ್ಬರೋ ಇರುವರು . ಕೆಲವರು ಅರೆಕಾಲಿಕ  ಏಜೆಂಟರು ;ಇನ್ನು ಕೆಲವರು ಪೂರ್ಣ ಕಾಲಿಕರು .ಇವರ ಕೈಯ್ಯಲ್ಲಿ ಒಂದು ಬ್ಯಾಗ್ ,ಪೆನ್  ಮತ್ತು ಒಂದು ಪೀಪಿ .ಕೆಲವರು ಗ್ಯಾಸ್ ಲೈಟ್ ಮೆಂಟ್ಲ್ ಪೆಟ್ಟಿಗೆಯಲ್ಲಿ ಚಿಲ್ಲರೆ ,ಟಿಕೆಟ್ ಪುಸ್ತಕ ಇತ್ಯಾದಿ ಹಿಡಿರುವರು . ವಿಟ್ಲ, ಪುತ್ತೂರು ಮತ್ತು ಮಂಗಳೂರು ಬಸ್ ಸ್ಟಾಂಡ್ ನಲ್ಲಿ ಇವರನ್ನು ನಾನು ಹೆಚ್ಚಾಗಿ ಕಂಡುದು . ದೊಡ್ಡ ಊರಿನ ಸ್ಟಾಂಡ್ ಗಳಲ್ಲಿ  ಹಲವು ಜನ ಏಕ ಕಾಲಕ್ಕೆ ಕೂಗುತ್ತಿದ್ದುದರಿಂದ  ಜೀರುಂಡೆ ಗಳ  ನೆನಪು ಬರುವುದು . 

ಉದಾಹಣೆಗೆ  ವಿಟ್ಲ ಬಸ್ ಸ್ಟಾಂಡ್ ನಲ್ಲಿ ಶಂಕರ ವಿಠ್ಠಲ ಬಸ್ ಬರುವ ಹತ್ತು ನಿಮಿಷ ಮೊದಲೇ  ಏಜೆಂಟ್ ಅವರು ಆಗಮಿಸುವರು . ಕನ್ಯಾನ ಬಾಯಾರು ಕುರ್ಚಿಪಳ್ಳ ,ಕುರ್ಚಿಪಳ್ಳ ಎಂದು ಕೂಗುವರು .ಆ ಕಡೆ ಹೋಗಲು ಕಾಯುತ್ತಿರುವ ಪ್ರಯಾಣಿಕರು ಅಲರ್ಟ್  ಆಗುವರು .ಎಲೆ ಅಡಿಕೆ ಬಾಯಲ್ಲಿ ತುಂಬಿರುವವರು  ಉಗುಳಿ ಬಾಯಿ ಖಾಲಿ ಮಾಡುವರು .ಹೆಂಗಸರು ಸೀರೆ ಸೆರಗು ಸರಿ ಪಡಿಸಿ ಕೊಳ್ಳುವರು . ಚದುರಿ ಹೋದ ಮಕ್ಕಳನ್ನು ಸೇರಿಸುವರು ಮತ್ತು ತಮ್ಮ ಗಂಟು ಮೂಟೆ ಕ್ರೋಡೀಕರಿಸುವರು . 

                    ಏಜೆಂಟರು  ಟಿಕೆಟ್ ಕೊಡಲು ಆರಂಭಿಸುವಾಗ ನಾವೆಲ್ಲಾ ಕಾತುರದಿಂದ ನುಗ್ಗುವೆವು .. 

'ನೀವು ಎಲ್ಲಿಗೆ ?'

"ಬೈರಿಕಟ್ಟೆ "

ಬೈರಿಕಟ್ಟೆಯವರು ಆಮೇಲೆ ಬನ್ನಿ . ಕಮ್ಮಜೆ ,ಬಾಯಾರು ,ಪೈವಳಿಕೆ ಮುಂದೆ ಬನ್ನಿ ಎಂದು ನಮ್ಮನ್ನು ಹಿಂದೆ ತಳ್ಳುವರು . ಅವಮಾನದಿಂದ ನಾವು ಹಿಂದೆ ಸರಿಯುವೆವು . 

ಕಡೆಗೆ  ಜಾಗ ಇದ್ದರೆ  ನಾವು ಹತ್ತುವೆವು . ಡ್ರೈವರ್  ರಾಜ ಗಾಂಭೀರ್ಯ ದಿಂದ ಬಸ್ ಏರಿ  ಪೋಯಿನ್  ಪೋಯಿನ್ ಎಂದು ಹಾರ್ನ್ ಮಾಡುವರು . ತಾನು ಇಶ್ಯೂ ಮಾಡಿದ     ಟಿಕೆಟ್  ವಿವರ ಕಂಡಕ್ಟರ್ ಗೆ  ಏಜೆಂಟ್ ಟ್ರಿಪ್ ಶೀಟ್ ನಲ್ಲಿ ಎಂಟರ್ ಮಾಡಲು ಓದುವರು .

 ' 20 -21 ಕನ್ಯಾನ 1, 22 ಬಾಯಾರು 2 ,23 ಕುರ್ಚಿಪಳ್ಳ ಎರಡೂವರೆ ಹೀಗೆ ಹೋಗುವುದು .ಅಷ್ಟರಲ್ಲಿ  ಕಂಡಕ್ಟರ್ ಅದು ಅರ್ಧ ಏರ್ಯೇ ಎಂದು ವಿಚಾರಣೆ ಮಾಡುವನು .ಏಜೆಂಟ್ ಸ್ವಲ್ಪ ದೂರದ ವರೆಗೆ ಬಸ್ಸಿನಲ್ಲಿಯೇ ಬಂದು ಉಳಿದವರಿಗೆ ಟಿಕೆಟ್ ಇಷ್ಯೂ ಮಾಡಿ , ಇಳಿದು ಆಮೇಲೆ ಪೊಯ್ ರೈಟ್ ಎಂದು ಕೆಳಗೆ ಹಾರುವರು .

ಪುತ್ತೂರಿನಲ್ಲಿ ಅವರ ಸಂಖ್ಯೆ ಇನ್ನೂ ಹೆಚ್ಚು . ಬಿ ಸಿ ರೋಡ್ ,ಮಾಣಿ ,ಮಂಗಳೂರು ;

ಉಪ್ಪಿನಂಗಡಿ ಧರ್ಮಸ್ಥಳ ; ವಿಟ್ಲ , ಅಡ್ಕಸ್ಥಳ ,ಪೆರ್ಲಾ ,ಬಡಿಯಡ್ಕ ,ಕಾಸರಗೋಡ್;

ಪಾಣಾಜೆ ,ಪಾಣಾಜೆ ; ಕಾಣಿಯೂರು ಪಂಜ ಸುಬ್ರಹ್ಮಣ್ಯ  ಹೀಗೆ ಲಯ ಬದ್ದವಾಗಿ ಕೂಗುವ  ಏಜೆಂಟರು ,ಅವರೊಡನೆ ತನಿ ಆವರ್ತನಕ್ಕೆ  ಆರೆಂಜ್ ಚಿತ್ತುಪ್ಪುಳಿ ,ಐಸ್ ಕ್ಯಾಂಡಿ ,ದೂಡ್ ಕ್ಯಾಂಡಿ ಮತ್ತು ನವಭಾರತ ಪ್ರಜಾವಾಣಿ ,ಡೆಕ್ಕನ್ ಹೆರಾಲ್ಡ್  .

ಎಲ್ಲಿ ಹೋದರು ಏಜೆಂಟ ರೆಂಬ ಗತಕಾಲ ಸಹೋದರರು ಪೊಯ್ ರೈಟ್ ಎಂದು ?


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ