ಬೆಂಬಲಿಗರು

ಮಂಗಳವಾರ, ಏಪ್ರಿಲ್ 13, 2021

ವೈದ್ಯೇತರ ಸೇವೆ

                          ವೈದ್ಯೇತರ( ಆದರೆ ವೈದ್ಯಕೀಯ) ಸೇವೆ 

ಮೊನ್ನೆ ಆದೂರು (ಕೇರಳ )ನಿಂದ ಒಬ್ಬ ಹುಡುಗ ಹೊಟ್ಟೆ ನೋವು ವಾಂತಿ ಎಂದು ಬಂದಿದ್ದ . ಪರೀಕ್ಷೆ ಮಾಡಿ ನೋಡುವಾಗ ಅವನಿಗೆ ಡೆಂಗ್ಯು ಕಾಯಿಲೆ ಇತ್ತು .ಕೆಲವೊಮ್ಮೆ ಜ್ವರ  ಇಲ್ಲದೆ ಮೈ ಕೈ ನೋವು ,ಹೊಟ್ಟೆ ನೋವು (ವಾಂತಿ ಸಹಿತ ಅಥವಾ ರಹಿತ ) ಡೆಂಗ್ಯು ಕಾಯಿಲೆಯಲ್ಲಿ ಇರುವುದುಂಟು . ಅವನಿಗೆ ಡೆಂಗ್ಯು ಇದೆಯೆಂದು ಗೊತ್ತಾದ ಮೇಲೆ ಅವನ ಮನೆ ಮತ್ತು ಪಕ್ಕದ ಮನೆಯ ಇಬ್ಬರು ಮಕ್ಕಳನ್ನು ಜ್ವರ ಇದ್ದ ಕಾರಣ ಕರೆದು ಕೊಂಡು ಬಂದರು .ಅವರಿಗೂ ಅದೇ ಕಾಯಿಲೆ ಇತ್ತು .ರಿಪೋರ್ಟ್ ಸಿಗುವಾಗ ಸಂಜೆ ಮೂರೂವರೆ .ಮಕ್ಕಳಲ್ಲಿ  ಸ್ವಲ್ಪ ನಿತ್ರಾಣ ಇದ್ದ ಕಾರಣ ಅವರಿಗೆ ಒಂದು ಗ್ಲುಕೋಸ್ ಡ್ರಿಪ್ ಹಾಕಿಸಿ ಹೋಗುವ ಆಸೆ .ಸಂಜೆ ಐದು ಗಂಟೆಗೆ ಅವರಿಗೆ ಇರುವ ಕೊನೇ ಬಸ್ ;ಅದು ಕುಂಟಾರಿಗೆ ಹೋಗುವುದು .ತಪ್ಪಿದರೆ  ಸ್ಪೆಷಲ್ ವಾಹನ ಮಾಡಿ ಹೋಗಬೇಕು . ಅವರ ಡ್ರಿಪ್ ಮುಗಿದಾಗ ನಾಲ್ಕು ಐವತ್ತು ,ಇನ್ನೂ ಬಿಲ್ ಕಟ್ಟಬೇಕು ,ಫಾರ್ಮೆಸಿ ಯಿಂದ ಔಷಧಿ ಕೊಂಡು ಅಲ್ಲಿಯ ಬಿಲ್ ಪಾವತಿ ಮಾಡಬೇಕು . ಬಿಲ್ ಕೌಂಟರ್ ಮತ್ತು ಫಾರ್ಮೆಸಿ ಯಲ್ಲಿ ರಶ್ ಇರುತ್ತದೆ .ಇವರ ಅವಸರ ಅವರಿಗೆ ತಿಳಿಯದು .ಅದಕ್ಕೆ ನಾನೇ ಅವರ ಹಿಂದೆ ಹೋಗಿ ಅವರ ಪಾವತಿ ಎಲ್ಲಾ ಮಾಡಿಸಿ ,ಔಷಧಿ ಕಟ್ಟು ಸ್ವತಃ ತಂದು ,ಒಂದು ಆಟೋ ತರಿಸಿ ಅವರನ್ನು ಅದರಲ್ಲಿ ತಳ್ಳಿ ,ಕಳುಹಿಸಿದೆ .ಬಸ್ ಸ್ಟಾಂಡ್ ತಲುಪುವಾಗ ಬಸ್ ಹೊರಡಲು ತಯಾರಾಗಿತ್ತಂತೆ. ಇದು ನಮ್ಮ ವೈದ್ಯೇತರ ಕೆಲಸ . ಮರುದಿನ ಅವರ ಪೈಕಿ ಬಂದವರು ನನಗೆ ಧನ್ಯವಾದ ಹೇಳಿದರು . ಹಳ್ಳಿಯ ಮುಗ್ದ ಜನ .

                   ಇನ್ನೊಮ್ಮೆ ಪೆರುವಾಯಿ ಒಬ್ಬ ಸಹೋದರಿ  ಪಾಂಕ್ರಿಯಸ್ ತೊಂದರೆಗೆ ದಾಖಲಾಗಿದ್ದರು .ಅವರನ್ನು ಎರಡು ದಿನ ಉಪವಾಸ ಇಟ್ಟು ಚೇತರಿಸಿ ಕೊಂಡ ಮೇಲೆ ,ನಾಳೆಯಿಂದ ಬರೀ ಗಂಜಿ ತೆಗೆದು ಕೊಳ್ಳಿರಿ ಎಂದೆ.ಮರುದಿನ  ಮಧ್ಯಾಹ್ನ ಅವರಿಗೆ ಭೇದಿ ಶುರು ಆಯಿತು .ವಿಚಾರಿಸಿದಾಗ ಅವರು ಬೆಳಿಗ್ಗೆ ಗಂಜಿ ಸಿಕ್ಕದು ಎಂದು ಮುಂಚಿನ ದಿನವೇ  ಹೊಟೇಲ್ ನಿಂದ ಗಂಜಿ ತರಿಸಿ ಇಟ್ಟು ಅದನ್ನು ಕುಡಿದಿದ್ದರು .ಹೊಟೇಲ್ ನಲ್ಲಿ  ಅದು ಮಧ್ಯಾಹ್ನ ಮಾಡಿದ್ದು ಇರ ಬಹುದು .ಮತ್ತೆ ಅವರಿಗೆ ಯೋಗ್ಯ ಚಿಕಿತ್ಸೆ ಸಲಹೆ ಮಾಡಿ ಮರುದಿನ ಮುಂಜಾನೆ ಆಸ್ಪತ್ರೆಗೆ ಬರುವಾಗ ನಾನೇ ಮನೆಯಲ್ಲಿ ಗಂಜಿ ಮಾಡಿಸಿ ತಂದು ಕೊಟ್ಟೆನು ,(ನನ್ನ ಮನೆಯವರು ಸಂತೋಷ ದಿಂದ ಮಾಡಿ ಕೊಟ್ಟರು) .ಗುಣ ಮುಖರಾಗಿ ಮನೆಗೆ ಹೋದರು.

ಆಸ್ಪತ್ರೆಯಲ್ಲಿ  ರೋಗಿಗಳ ಪರೀಕ್ಷೆ ಮಾಡಿ ಔಷಧಿ ಕೊಡುವುದಲ್ಲದೆ ಅವರನ್ನು ತಳ್ಳು ಗಾಲಿಯಲ್ಲಿ ಕೂರಿಸುವುದು (ಮತ್ತು ಕೆಲವೊಮ್ಮೆ ತಳ್ಳುವುದು ),ಶ್ಟ್ರೆಚರ್ ನಿಂದ ಹಾಸಿಗೆಗೆ  ಸ್ಥಳಾನಂತರಿಸುವುದು ಇತ್ಯಾದಿ ಕೆಲಸವೂ ನಾವು ಮಾಡ ಬೇಕಾಗುವುದು  ಮತ್ತು ಮಾಡುತ್ತೇವೆ . ರೋಗಿಯ ವಾಂತಿ ,ಮಲ ,ಮೂತ್ರ ತೆಗೆಯುವುದು ,ಮೃತರಾಗಿ ಬಂದ ಮತ್ತು ಆಸ್ಪತ್ರೆಯಲ್ಲಿ ಮೃತರಾದವರ ಶವ ಸಾಗಣೆಯಲ್ಲಿ ಕೂಡಾ ನಾವು ಸೇರುತ್ತೇವೆ . ಇದು ಎಲ್ಲಾ ವೈದ್ಯೇತರ ಮಾನವೀಯ ಸೇವೆ .

ಬಾಲಂಗೋಚಿ ; ಆಸ್ಪತ್ರೆ ಆರಂಭವಾದಾಗ ಬಹಳ ಮಂದಿಗೆ ನನ್ನ ಪರಿಚಯ ಇರಲಿಲ್ಲ ,ಮತ್ತು ನನಗೂ ಬಿಡುವು ಇರುತ್ತಿದ್ದು ,ನಾನು ಇಂತಹ ಕೆಲಸದಲ್ಲಿ ಹೆಚ್ಕು ಹೆಚ್ಚಾಗಿ ತೊಡಗಿಸಿ ಕೊಳ್ಳುತ್ತಿದ್ದಿದುರಿಂದ ಕೆಲವರು ನನ್ನನ್ನು ವಾರ್ಡ್ ಬಾಯ್ ಎಂದು ತಿಳಿದಿದ್ದರು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ