ಬೆಂಬಲಿಗರು

ಮಂಗಳವಾರ, ಏಪ್ರಿಲ್ 20, 2021

ಡಾ ವಸಂತ ಕುಮಾರ್ ರಾವ್

  ಡಾ ವಸಂತ ಕುಮಾರ ರಾವ್ 

                             



ಡಾ ವಸಂತ ಕುಮಾರ ರಾವ್ ಒಂದು ಅಪರೂಪದ ವೈದ್ಯರು ಮತ್ತು ವ್ಯಕ್ತಿ . ಇವರು ಮೊದಲು  ಆಯುರ್ವೇದ  ಪದವಿ ಬಿ ಎಸ್ ಎ ಎಂ ಮಾಡಿ ಆಮೇಲೆ ಎಂ ಬಿ ಬಿ ಎಸ ಮಾಡಿದರು . ಎರಡೂ  ಮೆರಿಟ್ ಸೀಟ್ . ಜೀವನ ದ  ಕೊನೇ  ದಶಕದಲ್ಲಿ ಹೋಮಿಯೋಪಥಿ  ಸ್ವತಃ ಕಲಿತು ಪ್ರಾಕ್ಟೀಸ್ ಮಾಡುತ್ತಿದ್ದರು .ಅವರು ಬೆಂಗಳೂರಿನಲ್ಲಿ  ವೃತ್ತಿ ಆರಂಭಿಸಿ ಜನಪ್ರಿಯ ರಾಗಿದ್ದರಲ್ಲದೆ ಸ್ವಂತ ಮನೆಯನ್ನೂ  ಕಟ್ಟಿಸಿಕೊಂಡಿದ್ದರು . 

ಇವರ ಮೂಲ ಸುಳ್ಯ ತಾಲೂಕಿನ ಪಂಜ ಸಮೀಪ  .ಶಿವಳ್ಳಿ ಬ್ರಾಹ್ಮಣರು ,ಮನೆಯಲ್ಲಿ ತುಳು ಭಾಷೆ .ಆದರೆ ಗ್ರಾಮೀಣ ತುಳು ,ಹವ್ಯಕ ಭಾಷೆ ,ಮಲಯಾಳ ,ಬೆಂಗಳೂರು ಕನ್ನಡ ಲೀಲಾಜಾಲ ವಾಗಿ  ಮಾತನಾದ ಬಲ್ಲರು . ಆಯಾ ಭಾಷೆಯವರು ಅವರನ್ನು ತಮ್ಮವರೆಂದೇ  ತಿಳಿಯ ಬೇಕು . ಇವರು ಯಾವ ವೈದ್ಯಕೀಯ ಪದ್ಧತಿ ಪ್ರಾಕ್ಟೀಸ್ ಮಾಡುವಾಗಲೂ ಅವರಿಗೆ ರೋಗಿಗಳು ಮುತ್ತು ತ್ತಿದ್ದರು . ಅವರ ಸಂಹವನ ಕಲೆ ,ಮಾನವೀಯತೆ ಮತ್ತು ಸರಳತೆ ಅದಕ್ಕೆ ಮುಖ್ಯ ಕಾರಣ . ಪದವಿಯೊಂದೇ ವೈದ್ಯರಿಗೆ ಸಾಲದು ಎಂಬುದಕ್ಕೆ ಸಾಕ್ಷಿ . 

ದುರದೃಷ್ಟ ಎಂಬಂತೆ ಆವರಿಗೆ ಪಾಲಿ ಅರ್ಟಿರೈಟಿಸ್ ನೋಡೋಸ ಎಂಬ  ಸ್ವಯಂ ನಿರೋಧಕ ಕಾಯಿಲೆ ಬಂತು .ಇದರಲ್ಲಿ ಅಂಗಾಂಗಗಳ ಮುಖ್ಯವಾಗಿ ಮೂತ್ರಪಿಂಡಗಳ  ರಕ್ತ ಸಂಚಾರ ವ್ಯತ್ಯಯ ಆಗುವುದು . ಬೆಂಗಳೂರಿನಲ್ಲಿ ಚಳಿಗೆ ತುಂಬಾ ತೊಂದರೆ ಆಗುವುದು ಎಂದು ಮಂಗಳೂರಿಗೆ ತಮ್ಮ ಕಾರ್ಯ ಕ್ಷೇತ್ರ ಬದಲಿಸಿದರು .ಇಲ್ಲಿಯ ವೆನ್ಲಾಕ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು . ಇವರು ಬೆಂಗಳೂರಿನಲ್ಲಿ ಇದ್ದಾಗಲೇ ನನಗೆ ಮಿತ್ರರ ಮೂಲಕ ಅವರ ಪರಿಚಯ ಆಗಿತ್ತು . ಆದರೆ ಸುಮಾರು ಹತ್ತು ವರ್ಷ ಅವರ ಸಂಪರ್ಕ ಇರಲಿಲ್ಲ . 

ನಾನು ಮಂಗಳೂರು ರೈಲ್ವೆ ಅರೋಗ್ಯ ಕೇಂದ್ರದಲ್ಲಿ (೧೯೯೦-೯೨)ವೈದ್ಯಾಧಿಕಾರಿ ಯಾಗಿದ್ದು ಕೆಲವು ರೋಗಿಗಳನ್ನು ವೆನ್ ಲೋಕ್ ಆಸ್ಪತ್ರೆಗೆ ಕಳುಹಿಸುತ್ತಿದ್ದೆ .ನನ್ನ ಅಕ್ಷರ ಮತ್ತು ಹೆಸರು ನೋಡಿ ಈ ಹಿರಿಯ ಮಿತ್ರರು ನನ್ನ ಬಿಡಾರಕ್ಕೇ ಬಂದು "ಎಂತ ಮಾರಾಯ ನೀನು ಇಲ್ಲಿಯೇ ಇದ್ದೆಯಾ "ಎಂದು ಹವ್ಯಕ ಭಾಷೆಯಲ್ಲಿ ಮಾತನಾಡಿ ,ನಮ್ಮಲ್ಲಿ ಊಟ ಮಾಡಿ ಹೋದರು .ಅಲ್ಲದೆ ನನ್ನನ್ನು  ಮತ್ತು ಮನೆಯವರನ್ನು ಒಂದು ಭಾನುವಾರ ಅವರಲ್ಲಿಗೆ ಊಟಕ್ಕೆ ಕರೆದರು . ನಾವು ಅಲ್ಲಿಗೆ ಹೋದ ದಿನ ಅವರ ಶ್ರೀಮತಿಯವರಿಗೆ ಜ್ವರ ದಿಂದ ಮಲಗಿದ್ದರು .ಡಾಕ್ಟರರರೇ  ನಮಗೆ ಬಡಿಸಿ ಉಪಚಾರ ಮಾಡಿದರು . 

ಇದು ಆಗಿ ನಾನು ಉನ್ನತ ವ್ಯಾಸಂಗಕ್ಕೆ ಚೆನ್ನೈ ಗೆ ತೆರಳಿ  ಹಲವು ವರ್ಷಗಳ ನಂತರ ಮಂಗಳೂರಿನ ದೇರಳಕಟ್ಟೆ ಯಲ್ಲಿ  ಕೆ ಎಸ ಮೆಡಿಕಲ್ ಕಾಲೇಜು ನಲ್ಲಿ  ಅಧ್ಯಾಪಕನಾಗಿ ಸೇರಿ ಪುನಃ ಮಂಗಳೂರಿಗೆ ಬಂದೆ . ಅಷ್ಟರಲ್ಲಿ ಅವರಿಗೆ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಆಗಿದ್ದು ,ಸರಕಾರಿ ಸೇವೆ ಬಿಟ್ಟು ಗುರುಪುರ ಕೈಕಂಬದಲ್ಲಿ ಮನೆ ಕಟ್ಟಿ ,ಪ್ರಾಕ್ಟೀಸ್ ಆರಂಭಿಸಿದ್ದರು .ಅವರ ಮೂಲ ಕಾಯಿಲೆಯ  ಕೆಲವು ತೊಂದರೆಗಳಿಗೆ ಹೋಮಿಯೋಪಥಿಯಲ್ಲಿ  ಗುಣ ಕಂಡಿತು ಎಂದು ಆ ಪದ್ದತಿ ಯನ್ನು ಅಧ್ಯಯನ ಮಾಡಿ ಪ್ರಾಕ್ಟೀಸ್ ಮಾಡುತ್ತಿದ್ದರು .ನಮ್ಮ ಕಾಲೇಜ್ ಆಸ್ಪತ್ರೆಗೆ ಹಲವು ರೋಗಿಗಳನ್ನು ಕಳುಹಿಸುತ್ತಿದ್ದರಲ್ಲದೆ  ಅವರ ಯೋಗ ಕ್ಷೇಮ ವಿಚಾರಿಸಲು ತಾವೇ ಬರುವರು . 

  ನಾಡಿನ ಹೆಸರಾಂತ ವೈದ್ಯ ಸಾಹಿತಿ ಡಾ ನಾ ಮೊಗಸಾಲೆ ಪಕ್ಕದ ಕಾಂತಾವರದಲ್ಲಿ ನೆಲೆಸಿದ್ದು  ಇವರಿಗೆ ಮಿತ್ರರು .ಮೊಗಸಾಲೆ ಮತ್ತು ನಾನು ಕನ್ಯಾನ ದಲ್ಲಿ ಒಂದೇ ಶಾಲೆಯಲ್ಲಿ ಓದಿದವರು . ಆದರೂ ಅವರು ತುಂಬಾ ಹಿರಿಯರಾದುದರಿಂದ ನನಗೆ ಅವರ ಪರಿಚಯ ಇರಲಿಲ್ಲ . ಇಂತಿರಲು ಅವರು ಆರೋಗ್ಯದ ಬಗ್ಗೆ ಒಂದು ಪುಸ್ತಕ ಬರೆದು ಅದನ್ನು ಯಥೋಚಿತವಾಗಿ ಬಿಡುಗಡೆ ಮಾಡಲು ವಸಂತ ಕುಮಾರ್ ರಾವ್ ಅವರನ್ನು ಕೇಳಿಕೊಳ್ಳಲು ಅವರು ನನ್ನನ್ನು ಪ್ರೀತಿಯಿಂದ ಸೂಚಿಸಿದರು .ವಸಂತಕುಮಾರ್ ಅವರ ಕೈಕಂಬ ಮನೆಯ ವಿಶಾಲ ಸುಂದರ ವಾತಾವರಣದಲ್ಲಿ ನಡೆದ ಕಾರ್ಯಕ್ರಮ ಚೆನ್ನಾಗಿ ನಡೆದು ನನ್ನ ಮನದಲ್ಲಿ ಇನ್ನೂ ಹಸಿರಾಗಿದೆ . ಶ್ರೀಮಾನ್ ಶ್ರೀನಿವಾಸ ಜೋಕಟ್ಟೆ (ಸ್ವತಃ ಬರಹಗಾರರು )ಕಾರ್ಯಕ್ರಮ ನಿರೂಪಣೆ ಮಾಡಿದ  ಕಾರ್ಯಕ್ರಮದಲ್ಲಿ ನಾನು ಅತ್ಯಂತ ಆದರಿಸುವ ಬೋಳಂತಕೋಡಿ ಈಶ್ವರ ಭಟ್ ಕೂಡಾ ಮುಖ್ಯಅತಿಥಿ ಆಗಿದ್ದುದು ಸಂತೋಷ . ಅವರು ನನ್ನನ್ನು ಮೊದಲೇ ಬಲ್ಲವರು ,ಆಮಂತ್ರಣ ಪತ್ರಿಕೆಯಲ್ಲಿ  ಎ  ಪಿ ಭಟ್ ಎಂಬುದನ್ನು ನೋಡಿ ಯಾರೋ ಎಂದು ತಿಳಿದುಕೊಂಡಿದ್ದರಂತೆ . ನನ್ನನ್ನು  ನೋಡಿ ಸಲುಗೆಯಲ್ಲಿ ನೀನಾ ಮಾರಾಯ ಎಂದರು .ಅವರ ಪ್ರೀತಿ ನನಗೆ ಆಶೀರ್ವಾದ .. ಇದೇ ಸಮಾರಂಭದಲ್ಲಿ ಸಹೃದಯಿ ಲೇಖಕ ಜನಾರ್ಧನ ಭಟ್ ಅವರ ಪರಿಚಯವೂ ಆಯಿತು . ನಾ ಮೊಗಸಾಲೆ ನನ್ನನ್ನು ಓರ್ವ ತಮ್ಮನಂತೆ ಕಂಡು ಪ್ರೋತ್ಸಾಹಿಸಿದ್ದಾರೆ ,ಕಾಂತವರದ ಕೆಲವು ಕಾರ್ಯಕ್ರಮಗಳಿಗೆ ನಾನು ಹೋಗಿದ್ದೇನೆ .

ಮುಂದೆ ಹಲವು ಭಾರಿ ನಮ್ಮ ಭೇಟಿ ಆಗಿದೆ .ಅವರೂ  ಅವರ ಶ್ರೀಮತಿಯವರೂ ನಮ್ಮನ್ನು ಮನೆಯವರಂತೆ ಕಂಡಿದ್ದಾರೆ . 

ಆದರೆ ಅವರ ಅರೋಗ್ಯ ಕ್ಷೀಣಿಸುತ್ತಾ ಹೋಗಿ ಕೆಲವು ವರ್ಕ್ ವರುಷ ಗಳಲ್ಲಿ  ನಮ್ಮನ್ನು ಬಿಟ್ಟು ಹೋದರು .ಅವರ ಒಬ್ಬ ಮಗ  ಇಂಜಿನಿಯರ್ ಮತ್ತು ಇನ್ನೊಬ್ಬ ಸರ್ಜನ್ ಆಗಿದ್ದಾರೆ . 

ಜೀವನದುದ್ದಕ್ಕೂ  ನೋವು ಅನುಭವಿಸಿ ,ಅದನ್ನು ಸ್ವಲ್ಪವೂ ತೋರಿಸಿ ಕೊಳ್ಳದೆ ,ಸದಾ ನಗು ನಗುತಾ ಬಾಳಿ ,ಜನರ ಸೇವೆ ಮಾಡಿ ಕಣ್ಮರೆಯಾದ ಅವರು ನನಗೆ ನಿಜವಾದ ಯೋಗಿಯಂತೆ ಕಾಣುತ್ತಾರೆ .ಅವರ ಬಗ್ಗೆ ಕಾಂತಾವರ ಕನ್ನಡ ಸಂಘದವರು ಒಂದು ಪುಸ್ತಕ ಪ್ರಕಟಿಸಿದ್ದು ನನ್ನ ಬಂಧು ವೈದ್ಯರಾದ ವಿಶ್ವೇಶ್ವರ ಭಟ್ ಸಂಪಾದಿಸಿದ್ದಾರೆ .

 

 

 

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ